ಪದ್ಯ ೨೬: ಅರ್ಜುನನನ್ನು ಕಲ್ಲುಮನಸ್ಸಿನವನೆಂದು ಉತ್ತರನು ಏಕೆ ಹೇಳಿದ?

ವಳಿತವನು ವಾರುವವ ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿಕೊಡುವೆನು ರಾಜಭವನದಲಿ
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ (ವಿರಾಟ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಿನಗೆ ಭೂಮಿ, ಕುದುರೆಗಳು, ಮುತ್ತಿನ ಆಭರಣಗಳು, ತರುಣಿಯರು ಏನು ಬೇಕಾದರೂ ಕೇಳು, ಅರಮನೆಗೆ ಹೋಗಿದ ತಕ್ಷಣ ನಾನು ಕೊಡಿಸುತ್ತೇನೆ, ಎಲೈ ಬೃಹನ್ನಳೆ ನಮ್ಮಪ್ಪನು ನಿನ್ನನ್ನು ಸಾಕಿ ಸಲಹಿದುದಕ್ಕೆ ಪ್ರತಿಯಾಗಿ ಒಂದು ಕೈ ತೋರಿಸಿಬಿಟ್ಟೆ, ನಿನ್ನ ಮನಸ್ಸು ಕಲ್ಲು ಎಂದು ಉತ್ತರನು ಹೇಳಲು, ಅರ್ಜುನನು ಪ್ರತಿಯಾಗಿ ಹೀಗೆ ಹೇಳಿದ.

ಅರ್ಥ:
ವಳಿತ: ಮಂಡಲ ಪ್ರದೇಶ; ವಾರುವ: ಕುದುರೆ; ಮುಕ್ತ: ಮಾಣಿಕ್ಯ, ಮಣಿ; ಆವಳಿ: ಸಾಲು; ಅಲಂಕಾರ: ಒಡವೆ, ಭೂಷಣಪ್ರಾಯ; ರಥ: ಬಂಡಿ; ಲಲನೆ: ಹೆಣ್ಣು; ಈಸು: ಕೊಡಿಸು; ರಾಜಭವನ: ಅರಮನೆ; ಬೊಪ್ಪ: ತಂದೆ; ಸಲಹು: ರಕ್ಷಿಸು; ಕೈ: ಹಸ್ತ; ತೋರು: ಪ್ರದರ್ಶಿಸು; ಕಲು: ಕಲ್ಲು, ಗಟ್ಟಿ; ಮನ: ಮನಸ್ಸು;

ಪದವಿಂಗಡಣೆ:
ವಳಿತವನು +ವಾರುವವ +ಮುಕ್ತಾ
ವಳಿ+ಅಲಂಕಾರವನು +ರಥವನು
ಲಲನೆಯರ+ ನಾನ್+ಈಸಿ+ಕೊಡುವೆನು +ರಾಜಭವನದಲಿ
ಎಲೆ+ ಬೃಹನ್ನಳೆ +ನಮ್ಮ +ಬೊಪ್ಪನು
ಸಲಹಿದಕೆ+ ಕೈಯೊಡನೆ +ತೋರಿದೆ
ಕಲುಮನವಲಾ+ ನಿನ್ನದ್+ಎಂದಡೆ +ಪಾರ್ಥನ್+ಇಂತೆಂದ

ಅಚ್ಚರಿ:
(೧) ಅರ್ಜುನನನ್ನು ಹಂಗಿಸುವ ಪರಿ – ಕೈಯೊಡನೆ ತೋರಿದೆ ಕಲುಮನವಲಾ ನಿನ್ನದೆಂದಡೆ