ಪದ್ಯ ೫೪: ಧರ್ಮಜನ ಕೈಚಳಕವು ಹೇಗೆ ತೋರಿತು?

ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ (ಶಲ್ಯ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶಲ್ಯನ ರಥವು ಪುಡಿಪುಡಿಯಾಯಿತು. ರಥಕ್ಕೆ ಕಟ್ಟಿದ ಕುದುರೆಗಳು ಅಲ್ಲಿ ಕಾಣಿಸುತ್ತಿಲ್ಲ. ಶಲ್ಯನ ಸಾರಥಿಯ ತಲೆಯು ನೆಲದ ಮೇಲೆ ಬಿದ್ದ ಮಿದುಳಿನ ಜೋಂಡಿನಲ್ಲಿ ಕಾಣದಂತಾಯಿತು. ಧರ್ಮಜನು ಗರ್ಜಿಸಿ ಬೊಬ್ಬಿರಿದು ಬಾಣಗಳನ್ನು ಬಿಡಲು, ಶಲ್ಯನ ಮೇಲೆ ಬಾಣಗಳು ಮುತ್ತಿ ನಟ್ಟವು. ಧರ್ಮಜನ ಕೈಚಳಕ ಅಧಿಕವಾಯಿತು.

ಅರ್ಥ:
ತೇರು: ಬಂಡಿ; ಹುಡಿ: ಪುಡಿ; ಹೂಡು: ನೊಗಹೇರು; ವಾರುವ: ಕುದುರೆ; ಕಾಣು: ತೋರು; ಸಾರಥಿ: ಸೂತ; ತಲೆ: ಶಿರ; ನೆಲ: ಭೂಮಿ; ಅದ್ದು: ಮುಳುಗು; ಮಿದುಳು: ಮಸ್ತಿಷ್ಕ; ಜೋಂಡು: ಜೊತೆ; ಬೊಬ್ಬಿರಿ: ಗರ್ಜಿಸು; ಅರಸ: ರಾಜ; ಎಸಲು: ಬಾಣ ಪ್ರಯೋಗ ಮಾಡು; ಉಬ್ಬಾರ: ಅತಿಶಯ; ಕಣೆ: ಬಾಣ; ಅಡಸು: ಬಿಗಿಯಾಗಿ ಒತ್ತು, ಮುತ್ತು; ಕೈವಾರ: ಸಾಮರ್ಥ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಚಪಳ: ಚಂಚಲ;

ಪದವಿಂಗಡಣೆ:
ತೇರು +ಹುಡಿಹುಡಿಯಾಯ್ತು +ಹೂಡಿದ
ವಾರುವಂಗಳನ್+ಅಲ್ಲಿ +ಕಾಣೆನು
ಸಾರಥಿಯ +ತಲೆ +ನೆಲದೊಳ್+ಅದ್ದುದು +ಮಿದುಳ +ಜೊಂಡಿನಲಿ
ಆರಿ +ಬೊಬ್ಬಿರಿದ್+ಅರಸನ್+ಎಸಲ್
ಉಬ್ಬಾರದಲಿ+ ಕಣೆ+ಅಡಸಿದವು +ಕೈ
ವಾರವೇಕೆ+ ಛಡಾಳಿಸಿತು+ ಚಪಳತೆ +ಯುಧಿಷ್ಠಿರನ

ಅಚ್ಚರಿ:
(೧) ಧರ್ಮಜನ ಬಾಣ ಪ್ರಯೋಗದ ರೀತಿ – ಆರಿ ಬೊಬ್ಬಿರಿದರಸನೆಸಲುಬ್ಬಾರದಲಿ ಕಣೆಯಡಸಿದವು

ಪದ್ಯ ೪೧: ಪಾಂಡವರು ಯುದ್ಧಕ್ಕೆ ಹೇಗೆ ತಯಾರಾದರು?

ಹಿಂಗಿದುದು ಭಯ ಕಂಠದ ಸುಸ
ರ್ವಾಂಗದಲಿ ಪಸರಿಸಿತು ಕಾಳೆಗ
ದಂಘವಣೆ ಹೊಗರೇರಿದುದು ವಿಕ್ರಮ ಛಡಾಳಿಸಿತು
ಹೊಂಗಿದರು ಹೊಂಪುಳಿಯ ಪುಳಕದ
ಮುಂಗುಡಿಯ ರೊಮಾಂಚನದ ರಣ
ರಂಗ ಧೀರರು ತರುಬಿ ನಿಮ್ದರು ಮತ್ತೆ ಕಾಳೆಗವ (ದ್ರೋಣ ಪರ್ವ, ೧೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದ ಭೀತಿ ಮಾಯವಾಗಿ, ಯುದ್ಧಾತುರಕೆ ಸೈನ್ಯದ ಸರ್ವಾಂಗಗಳಲ್ಲೂ ಬಂದು ಸೇರಿತು. ಅವರ ಪರಾಕ್ರಮ ಅಧಿಕವಾಯಿತು. ಅವರೆಲ್ಲರೂ ಉತ್ಸಾಹಿಸಿದರು. ಅವರೆಲ್ಲರೂ ರೋಮಾಂಚನಗೊಂಡರು. ವಿರೋಧಿಗಳನ್ನು ತಡೆದು ನಿಲ್ಲಿಸಿ ಯುದ್ಧಕ್ಕಾರಂಭಿಸಿದರು.

ಅರ್ಥ:
ಹಿಂಗು: ಬತ್ತುಹೋಗು, ಕಡಿಮೆಯಾಗು; ಭಯ: ಅಂಜಿಕೆ; ಕಂಠ: ಕೊರಳು, ಧ್ವನಿ; ಸರ್ವಾಂಗ: ಎಲ್ಲಾ ಅಂಗಗಳು; ಪಸರಿಸು: ಹರಡು; ಕಾಳೆಗ: ಯುದ್ಧ; ಅಂಘವಣೆ: ರೀತಿ, ಬಯಕೆ; ಹೊಗರು: ಕಾಂತಿ, ಪ್ರಕಾಶ; ಏರು: ಹೆಚ್ಚಾಗು; ವಿಕ್ರಮ: ಪರಾಕ್ರಮ, ಶೌರ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಹೊಂಗು: ಉತ್ಸಾಹ, ಹುರುಪು; ಹೊಂಪುಳಿ: ಹೆಚ್ಚಳ, ಆಧಿಕ್ಯ; ಪುಳಕ: ರೋಮಾಂಚನ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ರಣರಂಗ: ಯುದ್ಧ; ಧೀರ: ಶೂರ; ತರುಬು: ತಡೆ, ನಿಲ್ಲಿಸು; ನಿಂದು: ನಿಲ್ಲು; ಕಾಳೆಗ: ಯುದ್ಧ;

ಪದವಿಂಗಡಣೆ:
ಹಿಂಗಿದುದು +ಭಯ +ಕಂಠದ+ ಸುಸ
ರ್ವಾಂಗದಲಿ +ಪಸರಿಸಿತು+ ಕಾಳೆಗದ್
ಅಂಘವಣೆ +ಹೊಗರ್+ಏರಿದುದು +ವಿಕ್ರಮ +ಛಡಾಳಿಸಿತು
ಹೊಂಗಿದರು +ಹೊಂಪುಳಿಯ +ಪುಳಕದ
ಮುಂಗುಡಿಯ +ರೋಮಾಂಚನದ +ರಣ
ರಂಗ +ಧೀರರು +ತರುಬಿ + ನಿಂದರು+ ಮತ್ತೆ +ಕಾಳೆಗವ

ಅಚ್ಚರಿ:
(೧) ಪುಳಕ, ರೋಮಾಂಚನ – ಸಮಾನಾರ್ಥಕ ಪದ
(೨) ಪಾಂಡವರ ಸಿದ್ಧತೆ – ಹಿಂಗಿದುದು ಭಯ ಕಂಠದ ಸುಸರ್ವಾಂಗದಲಿ ಪಸರಿಸಿತು

ಪದ್ಯ ೬೧: ಅಭಿಮನ್ಯುವಿನ ಬಾಣಗಳು ಶತ್ರುಸೈನ್ಯವನ್ನು ಹೇಗೆ ನಾಶಮಾಡಿದವು?

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ
ನಿಟಿಲನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದರಿಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ (ದ್ರೋಣ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ತುಪ್ಪದ ಆಹುತಿಯಿಮ್ದ ಹೆಚ್ಚುವ ಹೋಮಾಗ್ನಿಯಂತೆ ಅಭಿಮನ್ಯುವಿನ ಪರಾಕ್ರಮ ವರ್ಧಿಸಿತು. ಶಿವನ ಹಣೆಯ ನೇತ್ರದ ಅಗ್ನಿ ಛಟಛಟಿಸುವಂತೆ, ಶತ್ರು ಸೈನ್ಯವೆಂಬ ಕಾಡನ್ನು ಅಭಿಮನ್ಯುವಿನ ಬಾಣಗಳು ನಾಶಮಾಡಿದವು.

ಅರ್ಥ:
ಭಟ: ಸೈನಿಕ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಘೃತ: ತುಪ್ಪ, ಆಜ್ಯ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಘಟಿಸು: ಸಂಭವಿಸು; ಅಗ್ನಿ: ಬೆಂಕಿ; ರಣ: ಯುದ್ಧ; ಚೌಪಟ: ನಾಲ್ಕು ಪಟ್ಟು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಹೊಕ್ಕು: ಸೇರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ; ನಿಟಿಲ: ಹಣೆ, ಫಾಲ; ನೇತ್ರ: ಕಣ್ಣು; ಕೋಪ: ಕ್ರೋಧ; ಶಿಖಿ: ಬೆಂಕಿ; ಲಟಕಟ: ಉದ್ರೇಕಗೊಳ್ಳು; ಹೆಚ್ಚು: ಅಧಿಕ; ಅಟವಿ: ಕಾಡು; ಸವರಿಸು: ನಾಶಮಾದು; ಕುಮಾರ: ಮಗ; ಶರ: ಬಾಣ; ಜಾಲ: ಸಮೂಹ;

ಪದವಿಂಗಡಣೆ:
ಭಟ +ಛಡಾಳಿಸಿದನು +ಘೃತ+ಆಹುತಿ
ಘಟಿಸಿದ್+ಅಗ್ನಿಯವೋಲು +ರಣ +ಚೌ
ಪಟ +ಚತುರ್ಬಲದೊಳಗೆ +ಹೊಕ್ಕನು +ಸಿಂಹನಾದದಲಿ
ನಿಟಿಲನೇತ್ರನ +ಕೋಪ+ಶಿಖಿ +ಲಟ
ಕಟಿಸುವಂತಿರೆ+ ಹೆಚ್ಚಿದ್+ಅರಿ+ಬಲದ್
ಅಟವಿಯನು +ಸವರಿದುದು +ಪಾರ್ಥಕುಮಾರ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಟ ಛಡಾಳಿಸಿದನು ಘೃತಾಹುತಿ ಘಟಿಸಿದಗ್ನಿಯವೋಲು; ನಿಟಿಲನೇತ್ರನ ಕೋಪಶಿಖಿ ಲಟಕಟಿಸುವಂತಿರೆ

ಪದ್ಯ ೪೦: ಅಭಿಮನ್ಯುವನ್ನು ಸೈನ್ಯವು ಹೇಗೆ ಮುತ್ತಿತು?

ತಳಿತುದೆಡಬಲವಂಕದಲಿ ಹೆ
ಬ್ಬಲ ಛಡಾಳಿಸಿ ಮೊರೆವ ಭೇರಿಯ
ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ
ಹಳವಿಗೆಯ ಸೀಗುರಿಯ ಚಮರಾ
ವಳಿಯ ವಿಮಳಚ್ಛತ್ರ ಪಙ್ತೆಯ
ವಳಯದಲಿ ನಭ ಮುಳುಗೆ ಮುತ್ತಿತು ಸೇನೆ ರಿಪುಭಟನ (ದ್ರೋಣ ಪರ್ವ, ೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ದುಶ್ಯಾಸನ ಎಡಬಲಗಳಲ್ಲಿ ದೊಡ್ಡಸೈನ್ಯ ಸೇರಿತು. ಭೇರಿಯ ಧ್ವನಿಯಿಂದ ಬ್ರಹ್ಮಾಂಡವು ತುಂಬಿತು. ಧ್ವಜ, ಛತ್ರ, ಚಾಮರಗಳಿಂದ ಆಕಾಶವೇ ತುಂಬಿತು. ಸೈನ್ಯವು ಶತ್ರು ವೀರರನ್ನು ಮುತ್ತಿತು.

ಅರ್ಥ:
ತಳಿತ: ಚಿಗುರಿದ; ಎಡಬಲ: ಅಕ್ಕಪಕ್ಕ; ಅಂಕ: ಕಾಳಗ; ಹೆಬ್ಬಲ: ದೊಡ್ಡದಾದ ಶಕ್ತಿ, ಬಲ; ಛಡಾಳಿಸು: ಹೆಚ್ಚಾಗು; ಮೊರೆ: ಧ್ವನಿ ಮಾಡು, ಝೇಂಕರಿಸು; ಭೇರಿ: ನಗಾರಿ, ದುಂದುಭಿ; ಧ್ವನಿ: ಶಬ್ದ; ಕೂಡೆ: ಜೊತೆಯಾಗು; ಜಡಿ: ಬೆದರಿಕೆ, ಹೆದರಿಕೆ; ಕಮಲಜಾಂಡ: ಬ್ರಹ್ಮಾಂಡ; ಘಟ: ಸೇರಿಕೆ, ಕೂಡಿಕೆ; ಹಳವಿಗೆ: ಬಾವುಟ; ಸೀಗುರಿ: ಚಾಮರ; ಆವಳಿ: ಸಾಲು; ವಿಮಳ: ನಿರ್ಮಲ; ಛತ್ರ: ಕೊಡೆ; ಪಙ್ತಿ: ಸಾಲು; ವಳಯ: ಅಂಗಳ, ಆವರಣ; ನಭ: ಆಗಸ; ಮುಳುಗು: ನೀರಿನಲ್ಲಿ ಮೀಯು; ಮುತ್ತು: ಆವರಿಸು; ರಿಪು: ವೈರಿ; ಭಟ: ಸೈನಿಕ;

ಪದವಿಂಗಡಣೆ:
ತಳಿತುದ್+ಎಡಬಲವ್+ಅಂಕದಲಿ +ಹೆ
ಬ್ಬಲ +ಛಡಾಳಿಸಿ +ಮೊರೆವ +ಭೇರಿಯ
ಘುಳುಘುಳು +ಧ್ವನಿ +ಕೂಡೆ+ ಜಡಿದುದು +ಕಮಲಜಾಂಡಘಟ
ಹಳವಿಗೆಯ +ಸೀಗುರಿಯ +ಚಮರಾ
ವಳಿಯ +ವಿಮಳಚ್ಛತ್ರ +ಪಙ್ತೆಯ
ವಳಯದಲಿ+ ನಭ+ ಮುಳುಗೆ +ಮುತ್ತಿತು +ಸೇನೆ +ರಿಪುಭಟನ

ಅಚ್ಚರಿ:
(೧) ಆಕಾಶವು ಕಾಣದ ಕಾರಣ – ಹಳವಿಗೆಯ ಸೀಗುರಿಯ ಚಮರಾವಳಿಯ ವಿಮಳಚ್ಛತ್ರ ಪಙ್ತೆಯ
ವಳಯದಲಿ ನಭ ಮುಳುಗೆ

ಪದ್ಯ ೩: ದ್ರೋಣನು ಎಷ್ಟು ದಿನ ಸೇನಾಧಿಪತಿಯಾಗಿದ್ದ?

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರ ರನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ (ದ್ರೋಣ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣನು ಐದು ದಿವಸಗಳ ಕಾಲ ಯುದ್ಧಮಾಡಿ, ಶತ್ರು ಸೈನ್ಯವನ್ನು ಹೊಡೆದು ಕುಟ್ಟಿ, ವೈರಿರಾಜರನ್ನು ಸಂಹರಿಸಿ ತನ್ನ ಭುಜಬಲವನ್ನು ಮೆರೆದನು. ಆಯುಧದಾರಿಗಳ ಗುರುವಾದ ದ್ರೋಣನು ಆ ಬಳಿಕ ಅಮರಾವತಿಗೆ ಪ್ರಯಾಣ ಮಾಡಿದನು ಎಂದು ಸಂಜಯನು ಹೇಳಲು ಧೃತರಾಷ್ಟ್ರನ ಹೊಟ್ಟೆಯಲ್ಲಿ ಉರಿಬಿದ್ದಿತು.

ಅರ್ಥ:
ದಿವಸ: ದಿನ; ಅಹಿತ: ವೈರಿ; ಬಲ: ಸೈನ್ಯ; ಹೊಯ್ದು: ಹೋರಾಡು; ಹೊಡೆ: ಏಟು; ಕುಟ್ಟು: ಅಪ್ಪಳಿಸು; ರಿಪು: ವೈರಿ; ಐದು: ಬಂದುಸೇರು; ದೊರೆ: ರಾಜ; ಇರಿ: ಚುಚ್ಚು; ಮೆರೆ: ಹೊಳೆ; ಭುಜ: ಬಾಹು; ಮಹೋನ್ನತಿ: ಅತಿಶಯ, ಹೆಚ್ಚುಗಾರಿಗೆ; ಕೈದು: ಆಯುಧ; ಗುರು: ಆಚಾರ್ಯ; ಛಡಾಳಿಸು: ಪ್ರಜ್ವಲಿಸು, ಥಳಥಳಿಸು; ಮೈ: ತನು; ತೆಗೆ: ಹೊರತಉ; ನಿರ್ಜರ: ದೇವತೆ; ನಗರ: ಊರು; ಹಾಯ್ದು: ಹಾರು, ಉರಿ: ಬೆಂಕಿ; ಜಠರ: ಹೊಟ್ಟೆ; ಮೋಹರ: ಸೈನ್ಯ, ಯುದ್ಧ; ಅವನಿಪ: ರಾಜ;

ಪದವಿಂಗಡಣೆ:
ಐದು +ದಿವಸದೊಳ್+ಅಹಿತ +ಬಲವನು
ಹೊಯ್ದು +ಹೊಡೆ+ಕುಟ್ಟಾಡಿ +ರಿಪುಗಳೊಳ್
ಐದೆ+ ದೊರೆಗಳನ್+ಇರಿದು +ಮೆರೆದನು +ಭುಜ+ಮಹೋನ್ನತಿಯ
ಕೈದುಕಾರರ+ ಗುರು +ಛಡಾಳಿಸಿ
ಮೈದೆಗೆದು +ನಿರ್ಜರರ+ನಗರಿಗೆ
ಹಾಯ್ದನ್+ಎನಲ್+ಉರಿ+ ಜಠರದಲಿ+ ಮೋಹರಿಸಿತ್+ಅವನಿಪನ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕೈದುಕಾರರ ಗುರು ಛಡಾಳಿಸಿಮೈದೆಗೆದು ನಿರ್ಜರರ ನಗರಿಗೆಹಾಯ್ದನ್
(೨) ಐದು, ಹೊಯ್ದು, ಕೈದು – ಪ್ರಾಸ ಪದಗಳು

ಪದ್ಯ ೧೨: ಕರ್ಣನು ಯಾರನ್ನು ಬರಹೇಳಲು ಗರ್ಜಿಸಿದನು?

ಹೇಳಲರಿಯೆನು ವಿಕ್ರಮಾಗ್ನಿ ಛ
ಡಾಳಿಸಿದುದಡಿಅಡಿಗೆ ಸೇನಾ
ಜಾಳವನು ಬೇಳಿದನು ಕೂರಂಬುಗಳ ಕೊಂಡದಲಿ
ಆಲಿಗಳು ಸವಿನೋಡಲಿಂದಿನ
ಕಾಳೆಗವ ಬರಹೇಳು ಕುರುಭೂ
ಪಾಲಕನ ಬರಹೇಳು ಬರಹೇಳೆನುತ ಬೊಬ್ಬಿರಿದ (ಕರ್ಣ ಪರ್ವ, ೨೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕರ್ಣನ ವಿಕ್ರಮಾಗ್ನಿಯ ಉರಿಯು ಮೇಲೆದ್ದಿತು, ಇದನ್ನು ನಾನು ಹೇಗೆ ವರ್ಣಿಸಲಿ ಎಂದು ಸಂಜಯನು ಹೇಳುತ್ತಾ, ಕರ್ಣನು ತನ್ನ ಕೂರಂಬುಗಳ ಕುಂಡದಲ್ಲಿ ಶತ್ರು ಸೈನ್ಯವೆಂಬ ಆಹುತಿಯನ್ನು ಕೊಟ್ಟನು. ಇಂದಿನ ಯುದ್ಧವನ್ನು ಕೌರರಾಯನ ಕಣ್ಣುಗಳು ನೋಡಿ ಸವಿಯಲಿ, ದೊರೆಯನ್ನು ಬರಹೇಳಿ ಬರಹೇಳಿ ಎಂದು ಗರ್ಜಿಸಿದನು.

ಅರ್ಥ:
ಹೇಳು: ತಿಳಿಸು; ಅರಿ: ತಿಳಿ; ವಿಕ್ರಮ: ಪರಾಕ್ರಮ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಸೇನ: ಸೈನ್ಯ; ಜಾಳ: ಗುಂಪು, ಬಲೆ; ಬೇಳು: ಮರುಳು, ದಡ್ಡತನ, ಕಕ್ಕಾಬಿಕ್ಕಿ; ಕೂರಂಬು: ಹರಿತವಾದ ಬಾಣ; ಕೊಂಡ: ಅಗ್ನಿಕುಂಡ, ಹೊಂಡ; ಆಲಿ: ಕಣ್ಣು; ಸವಿ: ರುಚಿ ನೋಡು; ನೋಡು: ವೀಕ್ಷಿಸು; ಕಾಳೆಗ: ಯುದ್ಧ; ಬರಹೇಳು: ಆಗಮಿಸು; ಭೂಪಾಲಕ: ರಾಜ; ಭೂ: ಭೂಮಿ; ಪಾಲಕ: ಒಡೆಯ; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಹೇಳಲ್+ಅರಿಯೆನು +ವಿಕ್ರಮಾಗ್ನಿ +ಛ
ಡಾಳಿಸಿದುದ್+ಅಡಿಗಡಿಗೆ +ಸೇನಾ
ಜಾಳವನು +ಬೇಳಿದನು +ಕೂರಂಬುಗಳ +ಕೊಂಡದಲಿ
ಆಲಿಗಳು +ಸವಿನೋಡಲ್+ಇಂದಿನ
ಕಾಳೆಗವ+ ಬರಹೇಳು +ಕುರು+ಭೂ
ಪಾಲಕನ +ಬರಹೇಳು+ ಬರಹೇಳೆನುತ+ ಬೊಬ್ಬಿರಿದ

ಅಚ್ಚರಿ:
(೧) ಕರ್ಣನ ಪರಾಕ್ರಮ – ಸೇನಾ ಜಾಳವನು ಬೇಳಿದನು ಕೂರಂಬುಗಳ ಕೊಂಡದಲಿ
(೨) ಕರ್ಣನ ಸಂತೋಷ – ಆಲಿಗಳು ಸವಿನೋಡಲಿಂದಿನ ಕಾಳೆಗವ ಬರಹೇಳು ಕುರುಭೂ
ಪಾಲಕನ ಬರಹೇಳು

ಪದ್ಯ ೫೧: ಯುದ್ಧದ ಆರಂಭ ಹೇಗಾಯಿತು?

ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದುದು ಪರಬಲವ (ವಿರಾಟ ಪರ್ವ, ೫ ಸಂಧಿ, ೫೧ ಪದ್ಯ)

ತಾತ್ಪರ್ಯ:
ತಮ್ಮಟೆ ಬಡಿಯುತ್ತಾ ಕಾಲು ತುಳಿತಕ್ಕೆ ಕೆಂಧೂಳಿ ಮೇಲೇಳಿತು. ವಿರಾಟನ ಸೈನ್ಯವು ಬಂದುದನ್ನು ನೋಡಿದ ತ್ರಿಗರ್ತ ಸೈನ್ಯದವರು ಗೋವುಗಳನ್ನು ತಮ್ಮ ಹಿಂದೆ ನಿಲ್ಲಿಸಿ ಕದನವನ್ನು ಆರಂಭಿಸಿದರು. ಕಹಳೆಗಳ ಮೊಳಗಿನಿಂದ ದಿಕ್ಕಿನ ಮೂಲೆ ಬಿರಿದು ಹೋಗುವಂತಿರಲು ವಿರಾಟನ ಸೈನ್ಯವು ಶತ್ರುಗಳೊಡನೆ ಹೋರಾಡಿತು.

ಅರ್ಥ:
ತೂಳು: ಆವೇಶ, ಉನ್ಮಾದ; ತೂಳುವರೆ: ಒಂದು ಬಗೆಯ ತಮಟೆ; ಲಗ್ಗೆ:ಮುತ್ತಿಗೆ, ಆಕ್ರಮಣ; ಕೆಂಧೂಳು: ಕೆಂಪಾದ ಧೂಳು; ಮಸಗು:ಹರಡು; ಭೂಪತಿ: ರಾಜ; ಆಳು: ಸೈನ್ಯ; ಕವಿ:ಮುಸುಕು, ದಟ್ಟವಾಗು; ಕಂಡು: ನೋಡಿ; ಸೈರಿಸಿ: ಸಹಿಸು; ತುರು: ಗೋವು; ಹಿಂದಿಕ್ಕು: ಹಿಂಬದಿ ಸೇರಿಸು; ಕಾಳಗ: ಯುದ್ಧ; ಕೊಟ್ಟು: ನೀದು; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಸೂಳವಿಸು: ಧ್ವನಿಮಾಡು; ನಿಸ್ಸಾಳ:ಒಂದು ಬಗೆಯ ಚರ್ಮವಾದ್ಯ; ದಿಕ್ಕು: ದಿಶೆ; ಮೂಲೆ: ಕೊನೆ; ಬಿರಿ:ಬಿರುಕು, ಸೀಳು; ಬಲ: ಸೈನ್ಯ, ದಳ; ಹಳಚು:ತಾಗು, ಬಡಿ; ಪರಬಲ:ಶತ್ರುಸೈನ್ಯ;

ಪದವಿಂಗಡಣೆ:
ತೂಳುವರೆಗಳ +ಲಗ್ಗೆಯಲಿ +ಕೆಂ
ಧೂಳು +ಮಸಗಿ +ವಿರಾಟ +ಭೂಪತಿ
ಯಾಳು +ಕವಿತರೆ +ಕಂಡು +ಸೈರಿಸಿ +ತುರುವ +ಹಿಂದಿಕ್ಕಿ
ಕಾಳಗವ +ಕೊಟ್ಟರು +ಛಡಾಳಿಸಿ
ಸೂಳವಿಸಿ +ನಿಸ್ಸಾಳ +ದಿಕ್ಕಿನ
ಮೂಲೆ +ಬಿರಿಯೆ +ವಿರಾಟಬಲ+ ಹಳಚಿದುದು +ಪರಬಲವ

ಅಚ್ಚರಿ:
(೧) ವಿರಾಟಬಲ, ಪರಬಲ; ಛಡಾಳಿಸಿ, ಸೂಳವಿಸಿ – ಬಲ ಪದದ ಬಳಕೆ

ಪದ್ಯ ೩೮: ರಾಜಸೂಯಯಾಗವು ಹೇಗೆ ನಡೆಯಿತು?

ಏಳುದಿನ ಪರಿಯಂತ ಗಳಿಗೆಗೆ
ಮೇಲೆ ಮೇಲಧ್ವರದ ಲಕ್ಷ್ಮಿ ಛ
ಡಾಳಿಸಿತು ಜಾಳಿಸಿ ಚತುರ್ದಶ ಲೋಕ ಚೇತನವ
ಕೇಳಿದೈ ಜನಮೇಜಯ ಕ್ಷಿತಿ
ಪಾಲ ಸುರಲೋಕದಲಿ ಪಾಂಡು ವಿ
ನೋಲಗಕೆ ಬಹ ಬಣಗು ಸುರರಿಗೆ ಸಮಯವಿಲ್ಲೆಂದ (ಸಭಾ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಏಳು ದಿನಗಳು ಎಡಬಿಡದೆ ರಾಜಸೂಯಯಾಗದಲಕ್ಷ್ಮಿಯ ಮಹಿಮೆಯು ಹೆಚ್ಚುತ್ತಾ ಚಲಿಸಿ ಹದಿನಾಲ್ಕುಲೋಕಗಳ ಚೇತನವನ್ನು ವ್ಯಾಪಿಸಿತು. ರಾಜ ಜನಮೇಜಯ್ ಕೇಳು, ಪಾಂಡುಮಹಾರಾಜನು ಇಂದ್ರಲೋಕಕ್ಕೆ ಬಂದನು, ಅವನನ್ನು ಕಾಣಲು ತವಕಿಸುವ ದೇವತೆಗಳಿಗೆ ಸಮಯಾಕಾಶವು ದೊರೆಯುತ್ತಿರಲಿಲ್ಲ.

ಅರ್ಥ:
ದಿನ: ದಿವಸ; ಪರಿಯಂತ: ಸದಾ, ಯಾವಾಗಲು; ಗಳಿಗೆ: ಕಾಲ; ಅಧ್ವರ: ಯಜ್ಞ; ಲಕ್ಷ್ಮಿ: ಐಶ್ವರ್ಯ; ಛಡಾಳಿಸು:ಅಧಿಕವಾಗು, ಪ್ರಜ್ವಲಿಸು; ಜಾಳಿಸು: ಚಲಿಸು, ಅಲುಗು; ಲೋಕ: ಜಗತ್ತು; ಚೇತನ: ಮನಸ್ಸು, ಬುದ್ಧಿ; ಕೇಳು: ಆಲಿಸು; ಕ್ಷಿತಿಪಾಲ: ರಾಜ; ಸುರಲೋಕ: ಸ್ವರ್ಗ; ಓಲಗ: ದರ್ಬಾರು; ಬಣಗು: ಗುಂಪು; ಸುರ: ದೇವತೆ; ಸಮಯ: ಕಾಲ;

ಪದವಿಂಗಡಣೆ:
ಏಳುದಿನ+ ಪರಿಯಂತ +ಗಳಿಗೆಗೆ
ಮೇಲೆ +ಮೇಲ್+ಅಧ್ವರದ+ ಲಕ್ಷ್ಮಿ +ಛ
ಡಾಳಿಸಿತು +ಜಾಳಿಸಿ +ಚತುರ್ದಶ +ಲೋಕ +ಚೇತನವ
ಕೇಳಿದೈ+ ಜನಮೇಜಯ +ಕ್ಷಿತಿ
ಪಾಲ +ಸುರಲೋಕದಲಿ+ ಪಾಂಡುವಿನ್
ಓಲಗಕೆ +ಬಹ +ಬಣಗು+ ಸುರರಿಗೆ+ ಸಮಯವಿಲ್ಲೆಂದ

ಅಚ್ಚರಿ:
(೧) ಮೇಲೆ, ಮೇಲ್ – ಪದದ ಬಳಕೆ – ೨ನೇ ಸಾಲು
(೨) ಛಡಾಳಿಸಿ, ಜಾಳಿಸಿ – ಪ್ರಾಸ ಪದ