ಪದ್ಯ ೫೪: ಧರ್ಮಜನ ಕೈಚಳಕವು ಹೇಗೆ ತೋರಿತು?

ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ (ಶಲ್ಯ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶಲ್ಯನ ರಥವು ಪುಡಿಪುಡಿಯಾಯಿತು. ರಥಕ್ಕೆ ಕಟ್ಟಿದ ಕುದುರೆಗಳು ಅಲ್ಲಿ ಕಾಣಿಸುತ್ತಿಲ್ಲ. ಶಲ್ಯನ ಸಾರಥಿಯ ತಲೆಯು ನೆಲದ ಮೇಲೆ ಬಿದ್ದ ಮಿದುಳಿನ ಜೋಂಡಿನಲ್ಲಿ ಕಾಣದಂತಾಯಿತು. ಧರ್ಮಜನು ಗರ್ಜಿಸಿ ಬೊಬ್ಬಿರಿದು ಬಾಣಗಳನ್ನು ಬಿಡಲು, ಶಲ್ಯನ ಮೇಲೆ ಬಾಣಗಳು ಮುತ್ತಿ ನಟ್ಟವು. ಧರ್ಮಜನ ಕೈಚಳಕ ಅಧಿಕವಾಯಿತು.

ಅರ್ಥ:
ತೇರು: ಬಂಡಿ; ಹುಡಿ: ಪುಡಿ; ಹೂಡು: ನೊಗಹೇರು; ವಾರುವ: ಕುದುರೆ; ಕಾಣು: ತೋರು; ಸಾರಥಿ: ಸೂತ; ತಲೆ: ಶಿರ; ನೆಲ: ಭೂಮಿ; ಅದ್ದು: ಮುಳುಗು; ಮಿದುಳು: ಮಸ್ತಿಷ್ಕ; ಜೋಂಡು: ಜೊತೆ; ಬೊಬ್ಬಿರಿ: ಗರ್ಜಿಸು; ಅರಸ: ರಾಜ; ಎಸಲು: ಬಾಣ ಪ್ರಯೋಗ ಮಾಡು; ಉಬ್ಬಾರ: ಅತಿಶಯ; ಕಣೆ: ಬಾಣ; ಅಡಸು: ಬಿಗಿಯಾಗಿ ಒತ್ತು, ಮುತ್ತು; ಕೈವಾರ: ಸಾಮರ್ಥ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಚಪಳ: ಚಂಚಲ;

ಪದವಿಂಗಡಣೆ:
ತೇರು +ಹುಡಿಹುಡಿಯಾಯ್ತು +ಹೂಡಿದ
ವಾರುವಂಗಳನ್+ಅಲ್ಲಿ +ಕಾಣೆನು
ಸಾರಥಿಯ +ತಲೆ +ನೆಲದೊಳ್+ಅದ್ದುದು +ಮಿದುಳ +ಜೊಂಡಿನಲಿ
ಆರಿ +ಬೊಬ್ಬಿರಿದ್+ಅರಸನ್+ಎಸಲ್
ಉಬ್ಬಾರದಲಿ+ ಕಣೆ+ಅಡಸಿದವು +ಕೈ
ವಾರವೇಕೆ+ ಛಡಾಳಿಸಿತು+ ಚಪಳತೆ +ಯುಧಿಷ್ಠಿರನ

ಅಚ್ಚರಿ:
(೧) ಧರ್ಮಜನ ಬಾಣ ಪ್ರಯೋಗದ ರೀತಿ – ಆರಿ ಬೊಬ್ಬಿರಿದರಸನೆಸಲುಬ್ಬಾರದಲಿ ಕಣೆಯಡಸಿದವು

ಪದ್ಯ ೧೦: ದೇವತೆಗಳು ಹೇಗೆ ಅಭಿಮನ್ಯುವನ್ನು ಪ್ರಶಂಶಿಸಿದರು?

ಕಾರಗಲಿಸಿದನಮಮ ರಾಜ ಕು
ಮಾರ ಕಂಠೀರವನು ರಿಪು ಪರಿ
ವಾರವನು ನಡೆಗೊಳಿಸಿದನು ಯಮರಾಜನಾಲಯಕೆ
ಮಾರಿ ಮೊಗವಡದೆರೆದಳೋ ಕೈ
ವಾರವೋ ತರುವಲಿಗಿದೆತ್ತಣ
ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ (ದ್ರೋಣ ಪರ್ವ, ೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ರಾಜಕುಮಾರ ಕಂಠೀರವನಾದ ಅಭಿಮನ್ಯುವು ಕೌರವ ಸೈನ್ಯದವರಿಗೆ ರಕ್ತಕಾರವುದನ್ನು ಕಲಿಸಿದನು. ಯಮರಾಜನ ಮನೆಗೆ ಶತ್ರುಗಳು ಹೋಗುವಂತೆ ಮಾಡಿದನು. ಇದೇನು ಅಭಿಮನ್ಯುವಿನ ಕೈಚಳಕವೋ ಅಥವಾ ಮಾರಿಯು ಬಾಯನ್ನು ಅಡ್ಡವಾಗಿ ತೆಗೆದು ನುಂಗುತ್ತಿರುವಳೋ ಈ ಮಗುವಿಗೆ ಎಂತಹ ಶೌರ್ಯ ಎಂದು ದೇವತೆಗಳು ಹೊಗಳಿದರು.

ಅರ್ಥ:
ಕಾರು: ಮಳೆಗಾಲ; ಅಮಮ: ಆಶ್ಚರ್ಯ; ಕುಮಾರ: ಹುಡುಗ; ಕಂಠೀರವ: ಸಿಂಹ; ರಿಪು: ವೈರಿ; ಪರಿವಾರ: ಬಂಧು; ನಡೆ: ಚಲಿಸು; ಯಮ: ಜವ; ರಾಜ: ಅರಸ; ಆಲಯ: ಮನೆ; ಮಾರಿ: ಕ್ಷುದ್ರ ದೇವತೆ; ಮೊಗ: ಮುಖ; ಕೈವಾರ: ಸಾಮರ್ಥ್ಯ, ಬಾಹುಬಲ; ವೀರ: ಶೌರ್ಯ; ಶಿವ: ಶಂಕರ; ಬೆರಗು: ವಿಸ್ಮಯ, ಸೋಜಿಗ; ಸುರಕಟಕ: ಸುರರ ಗುಂಪು;

ಪದವಿಂಗಡಣೆ:
ಕಾರಗಲಿಸಿದನ್+ಅಮಮ +ರಾಜ +ಕು
ಮಾರ +ಕಂಠೀರವನು+ ರಿಪು +ಪರಿ
ವಾರವನು +ನಡೆಗೊಳಿಸಿದನು +ಯಮರಾಜನ್+ಆಲಯಕೆ
ಮಾರಿ +ಮೊಗವಡದ್+ಎರೆದಳೋ +ಕೈ
ವಾರವೋ +ತರುವಲಿಗಿದ್+ಎತ್ತಣ
ವೀರವೋ +ಶಿವ +ಎನುತ +ಬೆರಗಾಯಿತ್ತು +ಸುರಕಟಕ

ಅಚ್ಚರಿ:
(೧) ಮೆಚ್ಚುಗೆಯ ನುಡಿ – ತರುವಲಿಗಿದೆತ್ತಣ ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ
(೨) ಕೈವಾರವೋ, ವೀರವೋ – ಪ್ರಾಸ ಪದ

ಪದ್ಯ ೫೩: ಅರ್ಜುನನು ಸೈನಿಕರನ್ನು ಹೇಗೆ ಮೂದಲಿಸಿದನು?

ತೀರಿತಡವಿಯ ಕಡಿತ ಗಿರಿಗಳ
ಹೋರಟೆಗೆ ಹೊಗಬೇಕು ಸೇನೆಗೆ
ಪಾರುಖಾಣೆಯ ಕೊಟ್ಟೆವಾಗಳೆ ಗುರುಸುತಾದಿಗಳ
ಭಾರಣೆಗೆ ಕೊಡಬೇಕು ಸಮಯವ
ನಾರುಭಟೆಯಲಿ ಮಲೆವುದೈ ಕೈ
ವಾರವೇಕೀ ಕಾಯದಲಿ ಕಕ್ಕುಲಿತೆ ಬೇಡೆಂದ (ಭೀಷ್ಮ ಪರ್ವ, ೮ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅರ್ಜುನನು ಸೈನ್ಯದ ಅಡವಿಯ ಕಡಿತವನ್ನು ಮುಗಿಸಿದನು. ಇನ್ನೂ ಬೆಟ್ಟಗಳೊಡನೆ ಹೋರಾಟವಾಗಬೇಕಾಗಿದೆ, ಅಶ್ವತ್ಥಾಮಾದಿಗಳಿಗೆ ಬಹುಮಾನವನ್ನು ಆಗಲೇ ಕೊಟ್ಟಿದ್ದಾಗಿದೆ, ಅವರು ಬರಲು ಸಮಯವನ್ನು ಕೊಡಬೇಕು, ರಿಪುವೀರರೇ ಪರಾಕ್ರಮದಿಮ್ದ ಕಾದಲು ಬನ್ನಿ, ಮನುಷ್ಯ ಶರೀರಕ್ಕೆ ಅಷ್ಟು ಹೆಚ್ಚಿನ ಮಾನ್ಯತೆ ಕೊಡಬೇಡಿ, ಮೈಗೆ ಏನಾಗುವುದೋ ಎಂಬ ಕಕ್ಕುಲಾತಿ ಬೇಡ ಎಂದು ಮೂದಲಿಸಿದನು.

ಅರ್ಥ:
ತೀರು: ಅಂತ್ಯ, ಮುಕ್ತಾಯ; ಅಡವಿ: ಕಾಡು; ಕಡಿತ: ಸೀಳು; ಗಿರಿ: ಬೆಟ್ಟ; ಹೋರಟೆ: ಕಾಳಗ, ಯುದ್ಧ; ಹೊಗು: ಒಳಸೇರು; ಸೇನೆ: ಸೈನ್ಯ; ಪಾರುಖಾಣೆ: ಬಹು ಮಾನ, ಉಡುಗೊರೆ; ಕೊಡು: ನೀಡು; ಸುತ: ಮಗ; ಭಾರಣೆ: ಮಹಿಮೆ, ಗೌರವ; ಕೊಡು: ನೀಡು; ಸಮಯ: ಕಾಲ; ಆರುಭಟೆ: ಗರ್ಜನೆ, ಆರ್ಭಟ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಕಾಯ: ಕೆಲಸ; ಕೈವಾರ: ಕೈಚಳಕ; ಕಕ್ಕುಲಿತೆ: ಚಿಂತೆ;

ಪದವಿಂಗಡಣೆ:
ತೀರಿತ್+ಅಡವಿಯ +ಕಡಿತ +ಗಿರಿಗಳ
ಹೋರಟೆಗೆ +ಹೊಗಬೇಕು +ಸೇನೆಗೆ
ಪಾರುಖಾಣೆಯ +ಕೊಟ್ಟೆವಾಗಳೆ +ಗುರುಸುತಾದಿಗಳ
ಭಾರಣೆಗೆ +ಕೊಡಬೇಕು +ಸಮಯವನ್
ಆರುಭಟೆಯಲಿ +ಮಲೆವುದೈ +ಕೈ
ವಾರವೇಕೀ +ಕಾಯದಲಿ +ಕಕ್ಕುಲಿತೆ+ ಬೇಡೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೈವಾರವೇಕೀ ಕಾಯದಲಿ ಕಕ್ಕುಲಿತೆ
(೨) ಹೋಲಿಸುವ ಪರಿ – ತೀರಿತಡವಿಯ ಕಡಿತ ಗಿರಿಗಳ ಹೋರಟೆಗೆ ಹೊಗಬೇಕು

ಪದ್ಯ ೪೪: ಅರ್ಜುನನನ್ನು ಯಾರು ತಡೆಯಲು ಮುಂದೆ ಬಂದರು?

ತೀರವರ್ಜುನನಂಬು ರಣದಲಿ
ತೀರಿದವು ಗುರುಸುತನ ಶರ ಕೈ
ವಾರವೇ ಕೈಗುಂದಿ ನಿಂದನು ದ್ರೋಣನಂದನನು
ಮೇರು ಮೊಗದಿರುಹಿತ್ತಲಾ ರಣ
ಧೀರನಶ್ವತ್ಥಾಮ ಸೋತನು
ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ (ವಿರಾಟ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಬಾಣಗಲು ಮುಗಿದು ಹೋದವು. ಅರ್ಜುನನ ಬಾಣಗಳು ಮುಗಿಯಲಿಲ್ಲ, ಆಗ ಅಶ್ವತ್ಥಾಮನ ಕೈ ಕೆಳಗಾಯಿತು. ಇದನ್ನು ನೋಡಿದ ಕೃಪನು ಇದೇನಾಶ್ಚರ್ಯ, ಮೇರು ಪರ್ವತ ಮುಖತಿರುಗಿಸಿ ನಿಂತಂತೆ ಅಶ್ವತ್ಥಾಮನು ಸೋತು ಹೋದನು. ದಾರಿ ಬಿಡಿ ಎನ್ನುತ್ತಾ ಅತಿಶಯ ವೇಗದಿಮ್ದ ಮುಂದಕ್ಕೆ ಬಂದು ಅರ್ಜುನನನ್ನು ತಡೆದನು.

ಅರ್ಥ:
ತೀರು: ಮುಕ್ತಾಯ; ಅಂಬು: ಬಾಣ; ರಣ: ಯುದ್ಧ; ಸುತ: ಮಗ; ಗುರು: ಆಚಾರ್ಯ; ಶರ: ಬಾಣ; ಕೈವಾರ: ಸಾಮರ್ಥ್ಯ, ಬಾಹುಬಲ; ಕೈಗುಂದು: ಕೈಯ ಶಕ್ತಿ ಕುಂದಿಹೋಗು; ನಿಂದು: ನಿಲ್ಲು; ನಂದನ: ಮಗ; ಮೇರು: ಹೆಚ್ಚು; ಮೊಗ: ಮುಖ; ತಿರುಹು: ತಿರುಗು; ರಣ: ಯುದ್ಧ; ಧೀರ: ಧೈರ್ಯ; ಸೋತು: ಸೋಲು, ಪರಾಭವ; ಸಾರು: ಪ್ರಕಟಿಸು, ಘೋಷಿಸು; ಉರುಬು:ಮೇಲೆ ಬೀಳು; ತರುಬು: ತಡೆ, ನಿಲ್ಲಿಸು;

ಪದವಿಂಗಡಣೆ:
ತೀರವ್+ಅರ್ಜುನನ್+ಅಂಬು +ರಣದಲಿ
ತೀರಿದವು +ಗುರುಸುತನ +ಶರ+ ಕೈ
ವಾರವೇ +ಕೈಗುಂದಿ +ನಿಂದನು +ದ್ರೋಣ+ನಂದನನು
ಮೇರು +ಮೊಗದಿರುಹಿತ್ತಲಾ+ ರಣ
ಧೀರನ್+ಅಶ್ವತ್ಥಾಮ +ಸೋತನು
ಸಾರೆನುತ+ ಕೃಪನ್+ಉರುಬಿದನು +ತರುಬಿದನು +ಫಲುಗುಣನ

ಅಚ್ಚರಿ:
(೧) ಉರುಬಿದನು, ತರುಬಿದನು – ಪ್ರಾಸ ಪದಗಳು
(೨) ಸುತ, ನಂದನ – ಸಮನಾರ್ಥಕ ಪದ
(೩) ಅಶ್ವತ್ಥಾಮ ಸೋತನು ಎಂದು ಹೇಳುವ ಪರಿ – ಕೈವಾರವೇ ಕೈಗುಂದಿ ನಿಂದನು

ಪದ್ಯ ೧೦೨: ದುರ್ಯೋಧನನು ದುಶ್ಯಾಸನನಿಗೆ ಯಾವ ಆದೇಶವನಿತ್ತನು?

ಹಾರ ಪದಕ ಕಿರೀಟ ಮಣಿ ಕೇ
ಯೂರ ಕರ್ಣಾಭರನವೆಂಬಿವು
ಭಾರವಲ್ಲಾ ತೆಗೆಯ ಹೇಳ್ ದಾಕ್ಷಿಣ್ಯವೇನಿದಕೆ
ನಾರಿಗೀ ವಸ್ತ್ರಾಭರಣ ಶೃಂ
ಗಾರವೇಕಿನ್ನಿವನು ತೆಗೆ ಕೈ
ವಾರವಿದಕೇಕೆಂದು ಧುಶ್ಯಾಸನಗೆ ನೇಮಿಸಿದ (ಸಭಾ ಪರ್ವ, ೧೫ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಪಾಂಡವರ ಆಭರಣವನ್ನು ನೋಡಿ ಇವರು ಧರಿಸಿದ ಹಾರ, ಪದಕ, ಕಿರೀಟ, ಮಣಿಖಚಿತವಾದ ತೋಳುಬಂದಿ, ಓಲೆ, ಇವು ಈ ದಾಸರಿಗೆ ಭಾರವಲ್ಲವೇ? ಅವನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕೆಂದು ಹೇಳು, ದ್ರೌಪದಿಗೇಕೆ ವಸ್ತ್ರ, ಆಭರಣಗಳ ಶೃಂಗಾರ? ಇದಕ್ಕೇಕೆ ಅಭಿಮಾನ, ತೆಗೆದುಹಾಕೆಂದು ಹೇಳು ಎಂದು ದುಶ್ಯಾಸನನಿಗೆ ಆದೇಶಿಸಿದನು.

ಅರ್ಥ:
ಹಾರ: ಮಾಲೆ; ಪದಕ: ಬಿಲ್ಲೆ; ಕಿರೀಟ: ಮುಕುಟ; ಮಣಿ: ರತ್ನ; ಕೇಯೂರ: ತೋಳುಬಂದಿ; ಕರ್ಣ: ಕಿವಿ; ಆಭರಣ: ಒಡವೆ; ಭಾರ: ಹೊರೆ; ತೆಗೆ: ಈಚೆಗೆ ತರು, ಹೊರತರು; ಹೇಳು: ತಿಳಿಸು; ದಾಕ್ಷಿಣ್ಯ: ಸಂಕೋಚ, ಅನುಕಂಪ; ನಾರಿ: ಹೆಣ್ಣು; ವಸ್ತ್ರ: ಬಟ್ಟೆ; ಶೃಂಗಾರ: ಅಲಂಕಾರ, ಭೂಷಣ; ಕೈವಾರ: ಕೊಂಡಾಟ, ಹೊಗಳಿಕೆ; ನೇಮಿಸು: ಆದೇಶಿಸು;

ಪದವಿಂಗಡಣೆ:
ಹಾರ +ಪದಕ+ ಕಿರೀಟ +ಮಣಿ +ಕೇ
ಯೂರ +ಕರ್ಣಾಭರಣವೆಂಬಿವು
ಭಾರವಲ್ಲಾ+ ತೆಗೆಯ +ಹೇಳ್ +ದಾಕ್ಷಿಣ್ಯವೇನ್+ಇದಕೆ
ನಾರಿಗ್+ಈ+ ವಸ್ತ್ರಾಭರಣ +ಶೃಂ
ಗಾರವೇಕಿನ್+ಇವನು +ತೆಗೆ +ಕೈ
ವಾರವಿದಕ್+ಏಕೆಂದು +ದುಶ್ಯಾಸನಗೆ +ನೇಮಿಸಿದ

ಅಚ್ಚರಿ:
(೧) ಆಭರಣಗಳ ಹೆಸರು – ಹಾರ, ಪದಕ, ಕಿರೀಟ, ಕೇಯೂರ, ಕರ್ಣಾಭರಣ, ಕೈವಾರ

ಪದ್ಯ ೯೯: ವಿಕರ್ಣನಿಗೆ ಕರ್ಣನು ಹೇಗೆ ಉತ್ತರಿಸಿದನು?

ಫಡ ವಿಕಾರವೆ ನಮ್ಮೊಡನೆ ಬಾ
ಯ್ಬಡಿಕತನವೇ ಕುರು ಮಹೀಪತಿ
ಯೊಡನೆ ಹುಟ್ಟಿದೆಯಾದ ಕಾರಣ ಬಿಟ್ಟೆವೀಸರಲಿ
ನುಡಿದರೇ ಭೀಷ್ಮಾದಿಗಳು ನೀ
ನೊಡಬಡಿಸಲೆಂತರಿವೆ ಧರ್ಮದ
ಕಡೆ ಮೊದಲ ಕೈವಾರ ನಿನಗೇಕೆಂದನಾ ಕರ್ಣ (ಸಭಾ ಪರ್ವ, ೧೫ ಸಂಧಿ, ೯೯ ಪದ್ಯ)

ತಾತ್ಪರ್ಯ:
ಎಲೈ ಫಡ ವಿಕರ್ಣ, ನಮ್ಮ ಹತ್ತಿರ ನೀನು ಈ ರೀತಿ ಸಲ್ಲದ ಮಾತಾಡುವುದೇ? ಅರ್ಥವಿಲ್ಲದ ಬಾಯಿಬಡುಕನಂತೆ ಮಾತಾಡುತ್ತಿರುವೆಯಲ್ಲಾ? ಕೌರವನ ತಮ್ಮನೆಂಬ ಕಾರಣದಿಂದ ಸುಮ್ಮನೆ ಬಿಟ್ಟಿದ್ದೇನೆ, ಭೀಷ್ಮನೇ ಮೊದಲಾದ ಹಿರಿಯರು ಒಂದು ಮಾತನ್ನಾದರೂ ಆಡಿದರೇ? ಧರ್ಮದ ಕೊನೆ ಮೊದಲುಗಳನ್ನು ತಿಳಿದು ಒಂದು ನಿರ್ಣಯಕ್ಕೆ ಬರಲು ನಿನಗೆ ಸಾಧ್ಯವೇ? ಸುಮ್ಮನಿರು ಎಂದು ಕರ್ಣನು ವಿಕರ್ಣನನ್ನು ಜರೆದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ವಿಕಾರ:ಮಾರ್ಪಾಟು; ಬಾಯ್ಬಡಿಕತನ: ಅರ್ಥವಿಲ್ಲದೆ ಮಾತಾಡುವವ; ಮಹೀಪತಿ: ರಾಜ; ಯೊಡನೆ: ಜೊತೆ; ಹುಟ್ಟು: ಜನಿಸು; ಕಾರಣ: ನಿಮಿತ್ತ; ಬೆಟ್ಟೆ: ಕ್ಷಮಿಸು, ಬಿಡು; ನುಡಿ: ಮಾತು; ಒಡಬಡಿಸು: ಒಪ್ಪಿಸು; ಅರಿ: ತಿಳಿ; ಧರ್ಮ: ಧಾರಣೆ ಮಾಡಿದುದು, ನಿಯಮ; ಕಡೆ: ಕೊನೆ; ಮೊದಲು: ಆದಿ; ಕೈವಾರ: ಹೊಗಳಿಕೆ;

ಪದವಿಂಗಡಣೆ:
ಫಡ +ವಿಕಾರವೆ+ ನಮ್ಮೊಡನೆ +ಬಾ
ಯ್ಬಡಿಕತನವೇ +ಕುರು +ಮಹೀಪತಿ
ಯೊಡನೆ +ಹುಟ್ಟಿದೆಯಾದ+ ಕಾರಣ+ ಬಿಟ್ಟೆವೀಸರಲಿ
ನುಡಿದರೇ+ ಭೀಷ್ಮಾದಿಗಳು+ ನೀನ್
ಒಡಬಡಿಸಲೆಂತ್+ಅರಿವೆ+ ಧರ್ಮದ
ಕಡೆ+ ಮೊದಲ+ ಕೈವಾರ +ನಿನಗೇಕೆಂದನಾ+ ಕರ್ಣ

ಅಚ್ಚರಿ:
(೧) ವಿಕರ್ಣನನ್ನು ಬಯ್ಯುವ ಪರಿ – ಫಡ, ನೀನೊಡಬಡಿಸಲೆಂತರಿವೆ

ಪದ್ಯ ೪೦: ಅರ್ಜುನನಿಗೆ ಯುಧಿಷ್ಠಿರನು ಹೇಗೆ ಉತ್ತರಿಸಿದನು?

ಉಂಟು ಫಲಗುಣ ನಿನ್ನ ಹೋಲಿಸ
ಲುಂಟೆ ಸುಭಟರು ದೇವ ದೈತ್ಯರೊ
ಳೆಂಟು ಮಡಿ ನಾವರಿಯೆವೇ ಕೈವಾರವೇನದಕೆ
ಕಂಟಣಿಸದಿರು ಕೃಷ್ಣ ನಿಕ್ಕಿದ
ಗಂಟನಲಿ ಸಿಲುಕದಿರು ತನ್ನಯ
ಗಂಟಲಿದೆ ಶಸ್ತ್ರೌಘವಿದೆ ನೀ ಬೇಗ ಮಾಡೆಂದ (ಕರ್ಣ ಪರ್ವ, ೧೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನನ್ನು ಹೊಗಳುವುದನ್ನು ನೋಡಿದ ಧರ್ಮರಾಯನು, ಅರ್ಜುನ ದೇವತೆಗಳಲ್ಲಾಗಲಿ, ದಾನವರಲ್ಲಾಗಲಿ ನಿನ್ನ ಹೋಲಿಕೆಗೆ ಬರುವ ವೀರರು ಯಾರಿದ್ದಾರೆ? ನಿನ್ನ ಮಾತು ನಿಜ ಅರ್ಜುನ, ಅದೇನೂ ಹೊಗಳಿಕೆಯಲ್ಲ ಅದು ವಾಸ್ತವ ಸಂಗತಿಯೇ ಆಗಿದೆ. ಕೃಷ್ಣನು ಹಾಕಿರುವ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳದೆ, ಹೇಸದೆ ಒಂದು ಕೆಲಸ ಮಾಡು, ಇದೋ ನನ್ನ ಗಂಟಲು, ಈ ಶಸ್ತ್ರಗಳನ್ನು ತೆಗೆದುಕೋ, ಬೇಗ ನನ್ನ ಕುತ್ತಿಗೆಯನ್ನು ಕಡಿದು ಹಾಕು ಎಂದು ಧರ್ಮರಾಯನು ಅರ್ಜುನನಿಗೆ ಹೇಳಿದನು.

ಅರ್ಥ:
ಉಂಟು: ಇದೆ; ಹೋಲಿಸು: ತುಲನೆಮಾಡು; ಸುಭಟ: ಒಳ್ಳೆಯ ಸೈನಿಕ; ದೇವ: ಅಮರರು; ದೈತ್ಯ: ರಾಕ್ಷಸ; ಮಡಿ: ಬಾರಿ, ಪಟ್ಟು; ಅರಿ: ತಿಳಿ; ಕೈವಾರ: ಕೊಂಡಾಟ, ಹೊಗಳಿಕೆ; ಕಂಟಣಿಸದಿರು: ಕುಗ್ಗಬೇಡ, ಗೋಳಾಡಬೇಡ; ಇಕ್ಕಿದ: ಕೊಟ್ಟ; ಗಂಟಲು: ಕಂಠ; ಸಿಲುಕು: ಬಂಧನಕ್ಕೊಳಗಾದುದು; ಶಸ್ತ್ರ: ಆಯುಧ; ಔಘ: ಗುಂಪು, ಸಮೂಹ; ಬೇಗ: ತ್ವರೆ, ಶೀಘ್ರ;

ಪದವಿಂಗಡಣೆ:
ಉಂಟು+ ಫಲಗುಣ+ ನಿನ್ನ +ಹೋಲಿಸಲ್
ಉಂಟೆ +ಸುಭಟರು +ದೇವ +ದೈತ್ಯರೊಳ್
ಎಂಟು +ಮಡಿ +ನಾವರಿಯೆವೇ+ ಕೈವಾರವೇನ್+ಅದಕೆ
ಕಂಟಣಿಸದಿರು +ಕೃಷ್ಣನ್ +ಇಕ್ಕಿದ
ಗಂಟನಲಿ+ ಸಿಲುಕದಿರು+ ತನ್ನಯ
ಗಂಟಲಿದೆ +ಶಸ್ತ್ರೌಘವಿದೆ+ ನೀ +ಬೇಗ+ ಮಾಡೆಂದ

ಅಚ್ಚರಿ:
(೧) ಇಕ್ಕಿದ, ಎಂಟು ಮಡಿ – ಆಡು ಭಾಷೆಯ ಪ್ರಯೊಗ