ಪದ್ಯ ೪೬: ಧರ್ಮಜನೇಕೆ ನಿಟ್ಟುಸಿರು ಬಿಟ್ಟನು?

ಹರಿದು ದೂತರು ನೃಪನ ಕಾಣದೆ
ಮರಳಿದರು ಯಮಸೂನು ದುಗುಡದ
ಭರದ ಭಾರವಣೆಯಲಿ ಹೊಕ್ಕನು ತನ್ನ ಪಾಳೆಯವ
ಕುರುನೃಪತಿ ತಪ್ಪಿದನು ಭೀಷ್ಮಾ
ದ್ಯರ ವಿಜಯ ವ್ಯಥೆಯಾಯ್ತು ಹಸ್ತಿನ
ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ (ಗದಾ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ದೂತರು ಕೌರವನನ್ನು ಕಾಣದೆ ಹಿಂದಿರುಗಿದರು. ಭೀಷ್ಮಾದಿಗಳನ್ನು ಗೆದ್ದರೂ ಕೊನೆಗೆ ಈ ವ್ಯಥೆ ಸಂಭವಿಸಿತು. ಹಸ್ತಿನಪುರದ ಐಶ್ವರ್ಯ ಲಕ್ಷ್ಮಿಯು ನನ್ನಿಂದ ತಪ್ಪಿಸಿಕೊಂಡಳು ಎಂದು ಧರ್ಮಜನು ನಿಟ್ಟುಸಿರು ಬಿಟ್ಟನು.

ಅರ್ಥ:
ಹರಿ: ಹರಡು; ದೂತ: ಸೇವಕ; ನೃಪ: ರಾಜ; ಕಾಣು: ತೋರು; ಮರಳು: ಹಿಂದಿರುಗು; ಸೂನು: ಮಗ; ದುಗುಡ: ದುಃಖ; ಭರ: ಹೊರೆ; ಭಾರವಣೆ: ಘನತೆ, ಗೌರವ; ಹೊಕ್ಕು: ಸೇರು; ಪಾಳೆಯ: ಬಿಡಾರ; ನೃಪತಿ: ರಾಜ; ತಪ್ಪು: ಸರಿಯಲ್ಲದ; ಆದಿ: ಮುಂತಾದ; ವಿಜಯ: ಗೆಲುವು; ವ್ಯಥೆ: ನೋವು, ಯಾತನೆ; ಸಿರಿ: ಐಶ್ವರ್ಯ; ಜಾರು: ಬೀಳು; ಅರಸ: ರಾಜ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ಹರಿದು +ದೂತರು +ನೃಪನ +ಕಾಣದೆ
ಮರಳಿದರು +ಯಮಸೂನು +ದುಗುಡದ
ಭರದ+ ಭಾರವಣೆಯಲಿ +ಹೊಕ್ಕನು +ತನ್ನ +ಪಾಳೆಯವ
ಕುರುನೃಪತಿ +ತಪ್ಪಿದನು +ಭೀಷ್ಮಾ
ದ್ಯರ +ವಿಜಯ +ವ್ಯಥೆಯಾಯ್ತು +ಹಸ್ತಿನ
ಪುರದ +ಸಿರಿ+ ಜಾರಿದಳು +ತನಗೆಂದ್+ಅರಸ +ಬಿಸುಸುಯ್ದ

ಅಚ್ಚರಿ:
(೧) ರಾಜ್ಯತಪ್ಪಿತು ಎಂದು ಹೇಳುವ ಪರಿ – ಹಸ್ತಿನಪುರದ ಸಿರಿ ಜಾರಿದಳು

ಪದ್ಯ ೧೪: ಕರ್ಣನು ಹೇಗೆ ಓಲಗಕ್ಕೆ ಆಗಮಿಸಿದನು?

ತೊಡರ ಝಣಝಣ ರವದ ಹೆಗಲಲಿ
ಜದಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ (ದ್ರೋಣ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕಾಲುಗಡಗಗಳು ಝಣ ಝಣ ಶಬ್ದಮಾಡುತ್ತಿರಲು, ಕೊಬ್ಬಿದ ಹೆಗಲ ಮೇಲೆ ಉಬ್ಬಣವನ್ನು ಹೊತ್ತು, ರತ್ನ ಹಾರಗಳು ಕೊರಳಲ್ಲಿರಲು, ವೀರರಾಜಪುತ್ರರನೇಕರ ಗುಂಪಿನ ನಡುವೆ ತನ್ನ ದೇಹಕ್ಕೆ ಹಚ್ಚಿದ ಸುಗಂಧವು ಎಲ್ಲೆಡೆ ಹರಡುತ್ತಿರಲು ಕರ್ಣನು ಓಲಗಕ್ಕೆ ಬಂದನು.

ಅರ್ಥ:
ತೊಡರು: ಆಭರಣ, ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಝಣ: ಶಬ್ದವನ್ನು ಸೂಚಿಸುವ ಪದ; ರವ: ಶಬ್ದ; ಹೆಗಲು: ಭುಜ; ಜಡಿ: ಕೂಗು, ಧ್ವನಿಮಾಡು; ಹಿರಿ: ದೊಡ್ಡ; ಉಬ್ಬಣ: ಲಾಳವಿಂಡಿಗೆ, ಚೂಪಾದ ಆಯುಧ; ಹೆಚ್ಚು: ಅಧಿಕ; ಮುಡುಹು: ಹೆಗಲು, ಭುಜಾಗ್ರ; ಮಿಗೆ: ಅಧಿಕವಾಗಿ; ಹೊಳೆ: ಪ್ರಕಾಶ; ಹೀರಾವಳಿ: ವಜ್ರದ ಹಾರ; ಕೊರಳು: ಕಂಠ; ಮನ: ಮನಸ್ಸು; ಕಲಿ: ಶೂರ; ಪುತ್ರ: ಮಗ; ನದುವೆ: ಮಧ್ಯೆ; ಪರಿಮಳ: ಸುಗಂಧ; ದೆಸೆ: ದಿಕ್ಕು; ಕಂಪು: ಸುವಾಸನೆ; ಭಾರವಣೆ: ಗೌರವ; ಬಂದು: ಆಗಮಿಸು; ಓಲಗ: ದರ್ಬಾರು;

ಪದವಿಂಗಡಣೆ:
ತೊಡರ +ಝಣಝಣ +ರವದ +ಹೆಗಲಲಿ
ಜಡಿವ +ಹಿರಿ+ಉಬ್ಬಣದ +ಹೆಚ್ಚಿದ
ಮುಡುಹುಗಳ+ ಮಿಗೆ +ಹೊಳೆವ +ಹೀರಾವಳಿಯ +ಕೊರಳುಗಳ
ಕಡುಮನದ +ಕಲಿ +ರಾಜಪುತ್ರರ
ನಡುವೆ +ಮೈ+ಪರಿಮಳದಿ +ದೆಸೆ+ ಕಂ
ಪಿಡಲು +ಭಾರವಣೆಯಲಿ+ ಬಂದನು +ಕರ್ಣನ್+ಓಲಗಕೆ

ಅಚ್ಚರಿ:
(೧) ಕರ್ಣನು ಧರಿಸಿದ ಆಭರಣ – ತೊಡರು, ಹೀರಾವಳಿ;
(೨) ಕರ್ಣನು ಬಂದ ಪರಿ – ಕಡುಮನದ ಕಲಿ ರಾಜಪುತ್ರರ ನಡುವೆ ಮೈಪರಿಮಳದಿ ದೆಸೆ ಕಂಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ

ಪದ್ಯ ೧೩: ಅಶ್ವತ್ಥಾಮನು ಕರ್ಣನನ್ನು ಹೇಗೆ ಹಂಗಿಸಿದನು?

ಖತಿಯಲಶ್ವತ್ಥಾಮನೀ ರವಿ
ಸುತನ ಜರೆದನು ಗಾಯವಡೆದೈ
ಪ್ರತಿಭಟನ ಭಾರವಣೆ ಲೇಸೈ ಕರ್ಣ ನೀನರಿದೈ
ಅತಿಬಲನು ನೀನಹಿತಬಲ ವನ
ಹುತವಹನು ನೀನಿರಲು ಕುರುಭೂ
ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ (ವಿರಾಟ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಕೋಪದಿಂದ ಕರ್ಣನನ್ನು ಮೂದಲಿಸಿದನು. ಗಾಯಗೊಂಡೆಯಲ್ಲವೇ, ಶತ್ರುವಿನ ಪರಾಕ್ರಮವು ಎಂತಹುದೆಂದು ನಿನಗೆ ಗೊತ್ತಾಯಿತೇ? ನೀನು ಮ್ಹಾಬಲಶಾಲಿ? ಶತ್ರು ಸೈನ್ಯ ಕಾನನಕ್ಕೆ ಕಾಳ್ಗಿಚ್ಚಿನಂತಿರುವವನು; ಅಲ್ಲವೇ? ನೀನಿದ್ದೂ ನಮ್ಮ ಸೈನ್ಯವು ನುಗ್ಗಾಗಿ ಹೋಯಿತು. ಹೀಗಾಗಲು ಬಿಟ್ಟ ನೀನು ನಿಷ್ಕರುಣಿ ಎಂದನು.

ಅರ್ಥ:
ಖತಿ: ಕೋಪ, ದುಃಖ; ರವಿ: ಸೂರ್ಯ; ಸುತ: ಮಗ; ಜರೆ: ಬಯ್ಯು; ಗಾಯ: ಪೆಟ್ಟು; ಪ್ರತಿಭಟನ: ಎದುರಿಸುವಿಕೆ; ಭಾರವಣೆ: ಘನತೆ, ಗೌರವ; ಲೇಸು: ಒಳಿತು; ಅರಿ: ತಿಳಿ; ಅತಿಬಲ: ಶೂರ; ಅಹಿತ: ವೈರಿ; ಬಲ: ಸೈನ್ಯ; ವನ: ಕಾದು; ಹುತವಹ: ಅಗ್ನಿ; ಭೂಪತಿ: ರಾಜ; ಬಲ: ಸೈನ್ಯ; ನುಗ್ಗು: ತಳ್ಳು; ನಿಷ್ಕರುಣಿ: ದಯೆಯಿಲ್ಲದ;

ಪದವಿಂಗಡಣೆ:
ಖತಿಯಲ್+ಅಶ್ವತ್ಥಾಮನ್+ಈ+ ರವಿ
ಸುತನ +ಜರೆದನು +ಗಾಯವಡೆದೈ
ಪ್ರತಿಭಟನ +ಭಾರವಣೆ+ ಲೇಸೈ +ಕರ್ಣ +ನೀನರಿದೈ
ಅತಿಬಲನು+ ನೀನ್+ಅಹಿತಬಲ +ವನ
ಹುತವಹನು +ನೀನಿರಲು +ಕುರು+ಭೂ
ಪತಿಯ+ ಬಲ +ನುಗ್ಗಾಯ್ತಲಾ +ನಿಷ್ಕರುಣಿ +ನೀನೆಂದ

ಅಚ್ಚರಿ:
(೧) ಕರ್ಣನನ್ನು ಹಂಗಿಸುವ ಪರಿ – ಅತಿಬಲನು ನೀನಹಿತಬಲ ವನಹುತವಹನು ನೀನಿರಲು ಕುರುಭೂ
ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ

ಪದ್ಯ ೫೨: ಅರ್ಜುನನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ರಥಾಗ್ರದಲಿ
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣೆ ಮಿಗೆ ಧನುವ ಕೊಂಡನು ತಿರುವನೇರಿಸಿದ (ವಿರಾಟ ಪರ್ವ, ೭ ಸಂಧಿ, ೫೨ ಪದ್ಯ)

ತಾತ್ಪರ್ಯ:
ತನ್ನ ದಿವ್ಯ ರಥವನ್ನು ತೆಗೆದು ಅದಕ್ಕೆ ದಿವ್ಯಾಸ್ತ್ರಗಳನ್ನು ಹೂಡಿದನು. ಹನುಮಂತನನ್ನು ಸ್ಮರಿಸಲು ಅವನು ಬಂದು ಧ್ವಜಾಗ್ರದಲ್ಲಿ ನೆಲೆಸಿದನು. ಶಿರಸ್ತ್ರಾಣ, ವಜ್ರಕವಚ, ಪಾದರಕ್ಷೆಗಳನ್ನು ಧರಿಸಿ ಗಾಂಡಿವವನ್ನು ತೆಗೆದು ಅದಕ್ಕೆ ಹೆದೆಯನ್ನು ಕಟ್ಟಿದನು.

ಅರ್ಥ:
ತೇರು: ಬಂಡಿ; ತೆಗೆ: ಹೊರತರು; ಮುನ್ನಿನ: ಮುಂದಿನ; ವಾರುವ: ಕುದುರೆ; ಹೂಡು: ಕಟ್ಟು; ಕಪಿವೀರ: ಆಂಜನೇಯ; ನೆನೆ: ಜ್ಞಾಪಿಸಿಕೋ, ಪ್ರಾರ್ಥಿಸು; ಮಂಡಿಸು: ಕುಳಿತುಕೊಳ್ಳು, ಕೂಡು; ಅಗ್ರ: ತುದಿ; ಚಾರು: ಸುಂದರ; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಜೋಡು: ಜೊತೆ; ಕುಲಿಶ: ವಜ್ರಾಯುಧ; ಸಾರ: ಸತ್ವ; ಕವಚ: ಹೊದಿಕೆ; ಬಿಗಿ: ಭದ್ರವಾಗಿ; ಬೊಬ್ಬೆ: ಕಿರುಚು; ಭಾರವಣೆ: ಗೌರವ; ಮಿಗೆ: ಅಧಿಕ; ಧನು: ಚಾಪ, ಬಿಲ್ಲು; ತಿರುವ: ಬಿಲ್ಲಿನ ಹಗ್ಗ, ಹೆದೆ;

ಪದವಿಂಗಡಣೆ:
ತೇರ +ತೆಗೆದನು +ತನ್ನ +ಮುನ್ನಿನ
ವಾರುವಂಗಳ +ಹೂಡಿದನು +ಕಪಿ
ವೀರ +ನೆನೆಯಲು +ಬಂದು +ಮಂಡಿಸಿದನು +ರಥಾಗ್ರದಲಿ
ಚಾರು +ಸೀಸಕ +ಜೋಡು +ಕುಲಿಶದ
ಸಾರ +ಕವಚವ+ ಬಿಗಿದು +ಬೊಬ್ಬೆಯ
ಭಾರವಣೆ +ಮಿಗೆ +ಧನುವ +ಕೊಂಡನು +ತಿರುವನೇರಿಸಿದ

ಅಚ್ಚರಿ:
(೧) ತ ಕಾರದ, ಬ ಕಾರದ ತ್ರಿವಳಿ ಪದ – ತೇರ ತೆಗೆದನು ತನ್ನ; ಬಿಗಿದು ಬೊಬ್ಬೆಯ ಭಾರವಣೆ

ಪದ್ಯ ೩: ಸುಗಂಧವು ಹೇಗೆ ಮುನಿಜನರನ್ನು ಮೋಹಿಸಿತು?

ಸರಸ ಸೌಗಂಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
ಮೊರೆದೊಗುವ ಮರಿದುಂಬಿಗಳ ಮೋ
ಹರದ ಮೋಡಾ ಮೋಡಿಯಲಿಡಾ
ವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ (ಅರಣ್ಯ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಚೆಲುವಾದ ಸೌಗಂಧಿಕ ಪುಷ್ಪದ ಪರಿಮಳವು, ಅದು ಬೆಳೆದ ಸರೋವರದ ತೆರೆಗಳಿಂದೆದ್ದ ನೀರಿನ ತುಂತುರಿನಿಂದಲೂ, ಸದ್ದು ಮಾಡುವ ದುಂಬಿಗಳ ಹಿಂಡುಗಳಿಂದಲೂ ಆಶ್ಚರ್ಯಕರವಾಗಿ ಸಕಲ ಮುನಿಗಳ ಇಂದ್ರಿಯಗಳನ್ನು ಮೋಹಿಸಿತು.

ಅರ್ಥ:
ಸರಸ: ಚೆಲ್ಲಾಟ, ವಿನೋದ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪರಿಮಳ: ಸುಗಂಧ; ಭರ:ಭಾರ, ಹೆಚ್ಚಳ; ಭಾರವಣೆ: ಘನತೆ, ಗೌರವ; ಉರುಬು: ರಭಸ, ವೇಗ; ತಿಳಿ: ನಿರ್ಮಲ, ಶುದ್ಧ; ಎರೆ: ಸುರಿ; ತಿವಿಗುಳಿ: ತಿವಿತ, ಚುಚ್ಚು; ತುಂತುರು: ಸಣ್ಣ ಸಣ್ಣ ಹನಿ; ತುಷಾರ: ಹಿಮ, ಮಂಜು; ಮೊರೆ:ದುಂಬಿಯ ಧ್ವನಿ, ಝೇಂಕಾರ; ಮರಿ: ಚಿಕ್ಕ; ದುಂಬಿ: ಭ್ರಮರ; ಮೋಹರ: ದಂಡು, ಸೈನ್ಯ; ಮೋಡಾಮೋಡಿ: ಆಶ್ಚರ್ಯಕರ; ಆವರಿಸು: ಸುತ್ತು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಸಕಲ: ಎಲ್ಲಾ; ಮುನಿಜನ: ಋಷಿಗಳ ಗುಂಪು; ಒಂದು: ಕೂಡು;

ಪದವಿಂಗಡಣೆ:
ಸರಸ +ಸೌಗಂಧಿಕದ +ಪರಿಮಳ
ಭರದ +ಭಾರವಣೆಯಲಿ +ತಿಳಿಗೊಳನ್
ಉರುಬುದ್+ಎರೆಗಳ +ತಿವಿಗುಳಿನ +ತುಂತುರು +ತುಷಾರದಲಿ
ಮೊರೆದೊಗುವ +ಮರಿದುಂಬಿಗಳ+ ಮೋ
ಹರದ +ಮೋಡಾಮೋಡಿಯಲಿಡ್+
ಆವರಿಸಿತೈದ್+ಇಂದ್ರಿಯದಲ್+ಒಂದಿರೆ+ ಸಕಲ+ ಮುನಿಜನವ

ಅಚ್ಚರಿ:
(೧) ತ ಕಾರದ ಸಾಲು ಪದ – ತಿಳಿಗೊಳನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
(೨) ಮ ಕಾರದ ಸಾಲು ಪದ – ಮೊರೆದೊಗುವ ಮರಿದುಂಬಿಗಳ ಮೋಹರದ ಮೋಡಾ ಮೋಡಿಯಲಿಡಾವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ

ಪದ್ಯ ೨೦: ಕೃಷ್ಣನು ದ್ರೌಪದಿಗೆ ಹೇಗೆ ಅಭಯವನ್ನಿತ್ತನು?

ಐಸಲೇ ದುರ್ಯೋಧನಾದಿಗ
ಳೇಸರವದಿರು ಭೀಮ ಪಾರ್ಥರ
ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ
ದೂಸಕನ ರಕ್ತದಲಿ ನಿನ್ನಯ
ಕೇಶವನು ಕಟ್ಟಿಸುವೆ ನಿನ್ನಯ
ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ (ಅರಣ್ಯ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಸಂತೈಸುತ್ತಾ, ನಿನ್ನ ಮಾತು ಸಮಂಜಸವಾಗಿದೆ, ಅಷ್ಟೇ ತಾನೆ, ಭೀಮಾರ್ಜುನರ ಪರಾಕ್ರಮಕ್ಕೆ ದೇವತೆಗಳ ಪರಾಕ್ರಮವು ಸಾಟಿಯಲ್ಲ. ದುಷ್ಟನಾದ ದುಶ್ಯಾಸನನ ರಕ್ತವನ್ನು ಹಚ್ಚಿ ನಿನ್ನ ಕೂದಲಿನ ಮುಡಿಯನ್ನು ಕಟ್ಟಿಸುತ್ತೇನೆ. ನಿನ್ನ ಪ್ರತಿಜ್ಞೆಯೇ ನನ್ನದು. ಯಾವುದಕ್ಕೂ ಅವಸರ ಪಡಬೇಡ ಎಂದು ಸಮಾಧಾನ ಪಡಿಸಿದನು.

ಅರ್ಥ:
ಐಸಲೇ: ಅಲ್ಲವೇ; ಆದಿ: ಮುಂತಾದ; ಏಸರ: ಎಷ್ಟರ; ಬೀಸರ: ನಾಶ, ಹಾಳು; ಬಲುಗೈ: ಪರಾಕ್ರಮ; ಬರ್ಹಿ: ನವಿಲು, ಬೆಂಕಿ; ಮುಖ: ಆನನ; ಭಾರವಣೆ: ಘನತೆ, ಗೌರವ; ದೂಸಕ: ದುಷ್ಟ; ರಕ್ತ: ನೆತ್ತರು; ಕೇಶ: ಕೂದಲು; ಕಟ್ಟಿಸು: ಬಂಧಿಸು; ಭಾಷೆ: ಮಾತು; ತಾಯೆ: ಮಾತೆ ತವಕ: ಆತುರ, ಕಾತುರ; ಅದಿರು: ನಡುಕ;

ಪದವಿಂಗಡಣೆ:
ಐಸಲೇ +ದುರ್ಯೋಧನ್+ಆದಿಗಳ್
ಏಸರವ್+ಅದಿರು+ ಭೀಮ +ಪಾರ್ಥರ
ಬೀಸರಕೆ +ಬಲುಗೈಯೆ+ ಬರ್ಹಿರ್ಮುಖರ+ ಭಾರವಣೆ
ದೂಸಕನ+ ರಕ್ತದಲಿ+ ನಿನ್ನಯ
ಕೇಶವನು+ ಕಟ್ಟಿಸುವೆ +ನಿನ್ನಯ
ಭಾಷೆ +ತನ್ನದು +ತಾಯೆ +ತವಕಿಸಬೇಡ+ ನೀನೆಂದ

ಅಚ್ಚರಿ:
(೧) ಅಭಯವನ್ನು ನೀಡುವ ಪರಿ – ದೂಸಕನ ರಕ್ತದಲಿ ನಿನ್ನಯ ಕೇಶವನು ಕಟ್ಟಿಸುವೆ ನಿನ್ನಯ
ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ
(೨) ತ ಕಾರದ ತ್ರಿವಳಿ ಪದ – ತನ್ನದು ತಾಯೆ ತವಕಿಸಬೇಡ
(೩) ಬ ಕಾರದ ಸಾಲು ಪದ – ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ

ಪದ್ಯ ೨೫: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೨?

ಕೌರವನ ಮೇಲಿಲ್ಲದಗ್ಗದ
ವೈರವೀತನಮೇಲೆ ನಮಗಪ
ಕಾರಿಯೀತನು ಮರಣದನುಸಂಧಾನವಿನ್ನೆಬರ
ವೈರವುಪಶುಮಿಸಿತು ಯುಧಿಷ್ಠಿರ
ವೀರನಿಂದಿಮ್ಮಡಿಯ ನೇಹದ
ಭಾರವಣೆ ತೋರುವುದಿದೇನೈ ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಮೇಲಿರುವ ವೈರತ್ವಕ್ಕಿಂತ ಕರ್ಣನ ಮೇಲೆ ಹೆಚ್ಚಿನ ಹಗೆತನವಿತ್ತು, ನಮಗೆ ಅಪಕಾರವನ್ನು ಎಸಗಿದವನನ್ನು ಈ ಕ್ಷಣದವರೆಗೂ ಕೊಲ್ಲಬೇಕೆಂದು ಮನ ತವಕಿಸುತ್ತಿತ್ತು, ಆದರೀಗ ವೈರತ್ವದ ಭಾವವು ಶಾಂತವಾಗಿದೆ, ಧರ್ಮಜನ ಮೇಲಿರುವ ಪ್ರೀತಿಯ ಎರಡರಷ್ಟು ಪ್ರೀತಿ ಇವನ ಮೇಲೆ ಹುಟ್ಟಿದೆ, ಕೃಷ್ಣ ಕರ್ಣನು ಯಾರೆಂದು ದಯವಿಟ್ಟು ಹೇಳು ಎಂದು ಅರ್ಜುನನು ಗೋಗರೆದನು.

ಅರ್ಥ:
ಅಗ್ಗ: ಹೆಚ್ಚು; ವೈರ: ಹಗೆ, ಶತ್ರು; ಅಪಕಾರ: ಕೆಟ್ಟದ್ದು; ಮರಣ: ಸಾವು; ಅನುಸಂಧಾನ: ಪರಿಶೀಲನೆ; ಉಪಶಮನ: ಶಾಂತವಾಗುವುದು; ವೀರ: ಶೂರ; ಇಮ್ಮಡಿ: ಎರಡು ಪಟ್ಟು; ನೇಹ: ಗೆಳೆತನ, ಸ್ನೇಹ; ಭಾರವಣೆ: ಘನತೆ, ಗೌರವ; ತೋರು: ಗೋಚರಿಸು;

ಪದವಿಂಗಡಣೆ:
ಕೌರವನ +ಮೇಲಿಲ್ಲದ್+ಅಗ್ಗದ
ವೈರವ್+ಈತನಮೇಲೆ +ನಮಗ್+ಅಪ
ಕಾರಿ+ಈತನು +ಮರಣದ್+ಅನುಸಂಧಾನವ್+ಇನ್ನೆಬರ
ವೈರವ್+ಉಪಶುಮಿಸಿತು+ ಯುಧಿಷ್ಠಿರ
ವೀರನಿಂದ್+ಇಮ್ಮಡಿಯ +ನೇಹದ
ಭಾರವಣೆ+ ತೋರುವುದ್+ಇದೇನೈ +ಕರ್ಣನಾರೆಂದ

ಅಚ್ಚರಿ:
(೧) ಅರ್ಜುನನಿಗೆ ಕರ್ಣನ ಮೇಲೆ ಪ್ರೀತಿಯುಕ್ಕಿತು ಎಂದು ಹೇಳಲು – ವೈರವುಪಶುಮಿಸಿತು ಯುಧಿಷ್ಠಿರವೀರನಿಂದಿಮ್ಮಡಿಯ ನೇಹದ ಭಾರವಣೆ ತೋರುವುದ್

ಪದ್ಯ ೯೭: ನಾರದರ ಯಜ್ಞದ ಮಾತು ಯುಧಿಷ್ಠಿರನನ್ನು ಹೇಗೆ ಆವರಿಸಿತು?

ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯ ಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಣದ
ನೆನಹು ಭಾರವಣೆಯಲಿ ಬಿದ್ದುದ್ದು ಧರ್ಮನಂದನನ (ಸಭಾ ಪರ್ವ, ೧ ಸಂಧಿ, ೯೭ ಪದ್ಯ)

ತಾತ್ಪರ್ಯ:
ಧರ್ಮರಾಯನ ಮನಸ್ಸಿನಲ್ಲಾದ ಭಾವನೆಯನ್ನು ಕುಮಾರವ್ಯಾಸರು ಸೊಗಸಾಗಿ ಚಿತ್ರಿಸಿದ್ದಾರೆ. ನಾರದರು ರಾಜಸೂಯದ ಮಹಿಮೆಯನ್ನು ಯುಧಿಷ್ಠಿರನಿಗೆ ತಿಳಿಸಿದ ಮೇಲೆ, ಧರ್ಮರಾಯನು ಅದನ್ನೇ ಯೋಚಿಸ ತೊಡಗಿದನು, ನಾರದರ ಮಾತಿನ ಬಲೆಗೆ ಧರ್ಮರಾಯನ ಚೈತನ್ಯವೆಂಬ ಮೃಗವು ಸಿಲುಕಿತು, ಆತನ ಮಾತಿನ ಮಳೆಯಲ್ಲಿ ಧರ್ಮರಾಯನ ಜ್ಞಾನೇಂದ್ರಿಯಗಳು ನೆನದವು, ಮನದಾಳದಲ್ಲಿ ಈ ರಾಜಸೂಯ ಯಾಗವನ್ನು ಮಾಡಬೇಕೆಂಬ ಚಿಗುರು ಮೊಳೆಯಿತು, ಅವನ ನಾಲಿಗೆ ಕೊನೆಯಲ್ಲಿ ಆ ಚಿಗುರಿನ ಎರಡು ಎಲೆಗಳು ಹೊರಹೊಮ್ಮಿದವು (ಈತನು ಇದನ್ನು ನುಡಿಯಬೇಕೆಂದು ಸೂಚಿಸುವ ಹಾಗೆ), ಈ ಮಹಾಶ್ರೇಷ್ಠವಾದ ಯಜ್ಞದ ಆಲೋಚನೆಯಲ್ಲಿ ಅವನ ಮನಸ್ಸು ನಿಂತಿತು.

ಅರ್ಥ:
ಮುನಿ: ಋಷಿ; ಮಾತು: ವಾಕ್; ಬಲೆ: ಜಾಲ; ಸಿಲುಕು: ಬಂಧನಕ್ಕೊಳಗಾಗು; ಜನಪತಿ: ರಾಜ; ಚೈತನ್ಯ:ಪ್ರಜ್ಞೆ, ಶಕ್ತಿ; ಮೃಗ: ಪಶು; ವಚ: ಮಾತು; ವರುಷ: ಮಳೆ; ನೆನೆ: ತೋಯು, ಒದ್ದೆಯಾಗು; ಕರಣ:ಕಿವಿ, ಜ್ಞಾನೇಂದ್ರಿಯ; ಕರಣವೃತ್ತಿ: ಇಂದ್ರಿಯ ವ್ಯಾಪಾರ; ಮನ: ಮನಸ್ಸು; ಅಂಕುರ:ಮೊಳಕೆ, ಚಿಗುರು;ನಾಲಿಗೆ: ಜಿಹ್ವ; ಕೊನೆ: ತುದಿ; ಎರಡು: ಇಬ್ಬಾಗ; ಯಜ್ಞ: ಕ್ರತು; ನೆನಹು: ನೆನಪು; ಭಾರವಣೆ: ಘನತೆ, ಗೌರವ; ಬಿದ್ದು: ಕೆಳಕ್ಕೆ ಬೀಳು; ನಂದನ: ಕುಮಾರ;

ಪದವಿಂಗಡಣೆ:
ಮುನಿಯ +ಮಾತಿನ +ಬಲೆಗೆ+ ಸಿಲುಕಿತು
ಜನಪತಿಯ +ಚೈತನ್ಯ +ಮೃಗವ್
ಈತನ +ವಚೋ +ವರುಷದಲಿ+ ನೆನೆದವು+ ಕರಣ+ವೃತ್ತಿಗಳು
ಮನದಲ್+ಅಂಕುರವಾಯ್ತು +ನಾಲಿಗೆ
ಗೊನೆಯಲ್+ಎರಡ್+ಎಲೆಯಾಯ್ತು +ಯಜ್ಣದ
ನೆನಹು +ಭಾರವಣೆಯಲಿ+ ಬಿದ್ದುದ್ದು +ಧರ್ಮನಂದನನ

ಅಚ್ಚರಿ:
(೧) ಒಂದು ಆಲೋಚನೆಯು ಹೇಗೆ ಆವರಿಸಿಕೊಳ್ಳುತ್ತದೆ ಎಂದು ಕವಿ ವಿವರಿಸಿದ್ದಾರೆ, ಧರ್ಮರಾಯನ ತಿಳುವಳಿಕೆಯನ್ನು ಮೃಗಕ್ಕೆ ಹೋಲಿಸಿ, ಹೇಗೆ ಮೃಗವು ಬಲೆಗೆ ಸಿಲುಕುವುದೋ ಅದೇ ರೀತಿ ಧರ್ಮರಾಯನ ಚೈತನ್ಯವೆಂಬ ಮೃಗವು ನಾರದರ ಮಾತಿನ ಬಲೆಗೆ ಸಿಲುಕಿತು
(೨) ಯಾವ ರೀತಿ ಮಳೆಯಲ್ಲಿ ನೆನೆದರೆ ಸಂಪೂರ್ಣ ಒದ್ದೆ ಯಾಗುವುದೋ ಅದೇ ರೀತಿ, ನಾರದರ ಮಾತಿನ ಮಳೆಯಲ್ಲಿ ಧರ್ಮರಾಯನ ಸರ್ವ ಇಂದ್ರಿಯಗಳು ನೆನೆದವು
(೩) ಗಿಡವು ಚಿಗುರೊಡೆದು ಎರಡು ಎಲೆಗಳು ಬರುವಹಾಗೆ, ಧರ್ಮರಾಯನ ಮನಸ್ಸಿನಲ್ಲಿ ಈ ರಾಜಸೂಯ ಯಾಗ ಮಾಡಬೇಕೆಂಬ ಬೀಜವು ಗಟ್ಟಿಯಾಗಿ ನೆಲಸಿ ಚಿಗುರೊಡೆದು ಅವನ ನಾಲಿಗೆಯಲ್ಲಿ ಎರಡು ಎಲೆಯಾಗಿ ಹೊರಹೊಮ್ಮಿತು ಮತ್ತು
ಧರ್ಮರಾಯನು ಸಂಪೂರ್ಣವಾಗಿ ಈ ನೆನಪಿನಲ್ಲಿ ಬಿದ್ದನು ಎಂದು ವಿವರಿಸುತ್ತಾರೆ
(೫) ಜೋಡಿ ಪದಗಳು – ಮುನಿಯ ಮಾತಿನ, ವಚೋ ವರುಷ;