ಪದ್ಯ ೨೮: ಎಷ್ಟು ಸೈನಿಕರು ಯುದ್ಧಕ್ಕೆ ಮುನ್ನುಗ್ಗಿದರು?

ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ (ಗದಾ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಂದೇ ಬಾರಿಗೆ ನಾಲ್ಕು ಸಾವಿರ ರಥಗಳು ಮೂಮ್ದಾದವು, ಮೂರುಸಾವಿರ ರಾಜಪುತ್ರರು ಮುತ್ತಿಗೆ ಹಾಕಿದರು. ಒಂದು ಸಾವಿರ ಜೋದರು ಬಾಣಗಳನ್ನು ಬಿಡುತ್ತಾ ಮುನ್ನುಗ್ಗಿದರು. ಒಂದು ಸಾವಿರ ಮತ್ತ ಆನೆಗಳು ಬೊಬ್ಬೆಯಿಡುತ್ತಾ ರಭಸದಿಂದ ಮುನ್ನುಗ್ಗಿತು. ಒಂದು ಲಕ್ಷ ಕಾಲಾಳುಗಳು ಯುದ್ಧಕ್ಕೆ ಮುಗಿಬಿದ್ದರು.

ಅರ್ಥ:
ನೂಕು: ತಳ್ಳು; ವಾಘೆ: ಲಗಾಮು; ಹಯ: ಕುದುರೆ; ಸಾವಿರ: ಸಹಸ್ರ; ರಥ: ಬಂಡಿ; ಜೋಡಿ: ಜೊತೆ; ಜೋಕೆ: ಎಚ್ಚರಿಕೆ, ಜಾಗರೂಕತೆ; ಕವಿ: ಆವರಿಸು; ಪುತ್ರ: ಕುಮಾರ; ತೋಕು: ಎಸೆ, ಬಾಣವನ್ನು ಪ್ರಯೋಗಿಸು; ಅಂಬು: ಬಾಣ; ಜೋದರು: ಆನೆ ಮೇಲೆ ಕೂತು ಹೋರಾಟ ಮಾಡುವವ; ಒಗ್ಗು: ಗುಂಪು, ಸಮೂಹ; ಔಕು: ಒತ್ತು, ಹಿಚುಕು; ಮದ: ಮತ್ತು, ಅಮಲು; ಇಭ: ಆನೆ; ಅನೀಕ: ಗುಂಪು; ಬೊಬ್ಬೆ: ಗರ್ಜಿಸು; ಲಳಿ: ರಭಸ, ಆವೇಶ; ಲಕ್ಕ: ಲಕ್ಷ; ಪಾಯದಳ: ಸೈನಿಕ;

ಪದವಿಂಗಡಣೆ:
ನೂಕಿತ್+ಒಂದೇ +ವಾಘೆಯಲಿ +ಹಯ
ನಾಕು +ಸಾವಿರ +ರಥದ +ಜೋಡಿಯ
ಜೋಕೆ +ಕವಿದುದು +ಮೂರು+ ಸಾವಿರ+ ರಾಜ+ಪುತ್ರರಲಿ
ತೋಕುವಂಬಿನ +ಜೋದರ್+ಒಗ್ಗಿನೊಳ್
ಔಕಿದವು +ಸಾವಿರ +ಮದ+ಇಭಾ
ನೀಕ +ಬೊಬ್ಬೆಯ +ಲಳಿಯಲ್+ಔಕಿತು +ಲಕ್ಕ+ ಪಾಯದಳ

ಪದ್ಯ ೬: ಸೈನ್ಯದ ನಷ್ಟದ ಪ್ರಮಾಣವೆಂತಹುದು?

ಅಳಿದವೈ ನೂರಾನೆ ಮಗ್ಗುಲ
ನೆಲಕೆ ಕೀಲಿಸಿ ಪಾದಿಗೈದವು
ಬಲುಗುದುರೆ ಹದಿನೈದುಸಾವಿರವೇಳುನೂರು ರಥ
ಮಲಗಿದವು ಕಾಲಾಳು ಲೆಕ್ಕದ
ಕಲೆಯ ತೊಡಸಿತು ರಾಜಪುತ್ರರು
ಹಲಬರವರಲಿ ಹೊಯ್ದು ಹೊಕ್ಕರು ಸುರರ ಪಟ್ಟಣವ (ದ್ರೋಣ ಪರ್ವ, ೧೮ ಸಂಧಿ, ೬ ಪದ್ಯ)

ತಾತ್ಪರ್ಯ:
ಐದುನೂರು ಆನೆಗಳು, ಹದಿನೈದು ಸಾವಿರ ಕುದುರೆಗಳು, ಏಳು ನೂರು ರಥಗಳು ನೆಲಕ್ಕೆ ಬಿದ್ದವು. ಕಾಲಾಳುಗಳೆಷ್ಟು ಎಂಬುದು ಎಣಿಕೆಯ ಕಲೆಯನ್ನೇ ವಿಫಲವೆನ್ನಿಸಿತು. ಅನೇಕ ರಾಜಪುತ್ರರು ಹೋರಾಡಿ ಸ್ವರ್ಗವನ್ನು ಸೇರಿದರು.

ಅರ್ಥ:
ಅಳಿ: ನಾಶ; ಆನೆ: ಕರಿ; ಮಗ್ಗುಲ: ಪಕ್ಕ, ಪಾರ್ಶ್ವ; ನೆಲ: ಭೂಮಿ; ಕೀಲಿಸು: ಜೋಡಿಸು; ಪಾಡಿಗೈ: ಪಾಳಯಕ್ಕೆ ಹೋಗು; ಕುದುರೆ: ಅಶ್ವ; ಸಾವಿರ: ಸಹಸ್ರ; ರಥ: ಬಂಡಿ; ಮಲಗು: ನಿದ್ರಿಸು; ಕಾಲಾಳು: ಸೈನಿಕ; ಲೆಕ್ಕ: ಎಣಿಕೆ; ಕಲೆ: ಗುರುತು; ತೊಡಹು: ಸೇರಿಕೆ; ಪುತ್ರ: ಸುತ; ಹಲಬ: ಹಲವಾರು; ಹೊಯ್ದು: ಹೊಡೆ; ಹೊಕ್ಕು: ಸೇರು; ಸುರ: ಅಮರ; ಪಟ್ಟಣ: ಊರು;

ಪದವಿಂಗಡಣೆ:
ಅಳಿದವೈ +ನೂರಾನೆ +ಮಗ್ಗುಲ
ನೆಲಕೆ +ಕೀಲಿಸಿ +ಪಾಡಿಗೈದವು
ಬಲು+ಕುದುರೆ +ಹದಿನೈದು+ಸಾವಿರವ್+ಏಳುನೂರು +ರಥ
ಮಲಗಿದವು +ಕಾಲಾಳು +ಲೆಕ್ಕದ
ಕಲೆಯ +ತೊಡಸಿತು +ರಾಜಪುತ್ರರು
ಹಲಬರ್+ಅವರಲಿ +ಹೊಯ್ದು +ಹೊಕ್ಕರು +ಸುರರ +ಪಟ್ಟಣವ

ಅಚ್ಚರಿ:
(೧) ಸತ್ತರು ಎಂದು ಹೇಳಲು – ರಾಜಪುತ್ರರು ಹಲಬರವರಲಿ ಹೊಯ್ದು ಹೊಕ್ಕರು ಸುರರ ಪಟ್ಟಣವ

ಪದ್ಯ ೩೯: ದ್ರೋಣನನ್ನು ಎದುರಿಸಲು ಯಾರು ಬಂದರು?

ದೊರೆಯಳಿದನೇ ಸ್ವಾಮಿದ್ರೋಹರು
ತಿರುಗಿಯೆನೆ ಪಾಂಚಾಲರಲಿ ಹ
ನ್ನೆರಡು ಸಾವಿರ ರಾಜಪುತ್ರರು ಜರೆದು ಜೋಡಿಸಿತು
ಹರಿಬವೆಮ್ಮದು ಸಾರಿ ನೀವೆಂ
ದರಸುಮಕ್ಕಳ ನಿಲಿಸಿ ಬಿಲುಗೊಂ
ಡುರವಣಿಸಿ ತಡೆದನು ವಿರಾಟನು ಕಲಶಸಂಭವನ (ದ್ರೋಣ ಪರ್ವ, ೧೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ನಿಮ್ಮ ದೊರೆ ಸತ್ತನೇ, ಸ್ವಾಮಿ ದ್ರೋಹಿಗಳು ಯುದ್ಧಕ್ಕೆ ಬನ್ನಿ, ಎಂದು ದ್ರೋಣನು ಗರ್ಜಿಸಲು, ಹನ್ನೆರಡು ಸಾವಿರಜನ ರಾಜಪುತ್ರರು ಒಟ್ಟಾಗಿ ನಿಂತರು. ಆಗ ವಿರಾಟನು ದ್ರುಪದನ ಸೇಡನ್ನು ತೀರಿಸಿಕೊಳ್ಳುವುದು ನಮ್ಮ ಕರ್ತವ್ಯ, ನೀವು ಆಚೆ ಹೋಗಿರಿ ಎಂದು ದ್ರೋಣನನ್ನು ಇದಿರಿಸಿದನು.

ಅರ್ಥ:
ದೊರೆ: ರಾಜ; ಅಳಿ: ಸಾವು; ಸ್ವಾಮಿ: ಒಡೆಯ; ದ್ರೋಹ: ಮೋಸ; ತಿರುಗು: ಮರಳು; ಸಾವಿರ: ಸಹಸ್ರ; ಪುತ್ರ: ಮಕ್ಕಳು; ಜರೆ: ಬಯ್ಯು; ಜೋಡಿಸು: ಕೂಡಿಸು; ಹರಿಬ: ಕೆಲಸ, ಕಾರ್ಯ; ಸಾರು: ಹರಡು; ಅರಸು: ರಾಜ; ನಿಲಿಸು: ನಿಲ್ಲು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ತಡೆ: ನಿಲ್ಲಿಸು; ಕಲಶ: ಕುಂಭ; ಸಂಭವ: ಹುಟ್ಟು;

ಪದವಿಂಗಡಣೆ:
ದೊರೆ+ಅಳಿದನೇ +ಸ್ವಾಮಿ+ದ್ರೋಹರು
ತಿರುಗಿ+ಎನೆ+ ಪಾಂಚಾಲರಲಿ +ಹ
ನ್ನೆರಡು +ಸಾವಿರ +ರಾಜಪುತ್ರರು +ಜರೆದು +ಜೋಡಿಸಿತು
ಹರಿಬವ್+ಎಮ್ಮದು +ಸಾರಿ +ನೀವೆಂದ್
ಅರಸು+ಮಕ್ಕಳ +ನಿಲಿಸಿ +ಬಿಲುಗೊಂಡ್
ಉರವಣಿಸಿ +ತಡೆದನು +ವಿರಾಟನು +ಕಲಶಸಂಭವನ

ಅಚ್ಚರಿ:
(೧) ದೊರೆ, ಸ್ವಾಮಿ, ಅರಸು – ಸಾಮ್ಯಾರ್ಥ ಪದಗಳು

ಪದ್ಯ ೧೭: ದ್ರೋಣನು ಎಂಥಹವರನ್ನು ಯುದ್ಧಕ್ಕೆ ಕಳುಹಿಸಿದನು?

ಘಾಯವಡೆದಾನೆಗಳ ಕೈ ಮೈ
ನೋಯೆ ಕಾದಿದ ರಾಜಪುತ್ರರ
ನಾಯುಧದ ಮಳೆಗಳಲಿ ನನೆದ ಜವಾಯ್ಲ ತೇಜಿಗಳ
ಹಾಯಿದುರೆ ಸೊಪ್ಪಾದ ಶಕಟ ನಿ
ಕಾಯವನು ಪೂರಾಯದೇರಿನ
ನಾಯಕರ ಕರೆಕರೆದು ಬವರಕೆ ಕಳುಹಿದನು ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆ ಕುರವನಿಗೆ ಹೇಳಿ, ದ್ರೋಣನು ಗಾಯಗೊಂಡ ಆನೆಗಳು, ಕೈ ಮೈ ನೋವಾದ ರಾಜಪುತ್ರರು, ಆಯುಧದ ಮಳೆಯಲ್ಲಿ ನೆನೆದ ವೇಗದ ಕುದುರೆಗಳು, ಹಗಲೆಲ್ಲಾ ಚಲಿಸಿ ಆಯಾಸಗೊಂಡ ರಥಗಳನ್ನು ಪೂರ್ತಿಗಾಯಗೊಂಡ ಸೇನಾ ನಾಯಕರನ್ನು ಕರೆಕರೆದು ಯುದ್ಧಕ್ಕೆ ಕಳುಹಿಸಿದನು.

ಅರ್ಥ:
ಘಾಯ: ಪೆಟ್ಟು; ಆನೆ: ಗಜ; ಕೈ: ಹಸ್ತ; ಮೈ: ತನು; ನೋವು: ಬೇನೆ, ಶೂಲೆ; ಕಾದು: ಹೋರಾಡು; ಪುತ್ರ: ಮಕ್ಕಳು; ಆಯುಧ: ಶಸ್ತ್ರ; ಮಳೆ: ವರ್ಷ; ನನೆ: ತೋಯು; ಜವಾಯ್ಲ: ವೇಗ; ತೇಜಿ: ಕುದುರೆ; ಹಾಯಿಸು: ಸೇರಿಸು, ಓಡಿಸು; ಸೊಪ್ಪಾದ: ಸೊರಗು; ಶಕಟ: ರಥ, ಬಂಡಿ; ನಿಕಾಯ: ಗುಂಪು; ಪೂರಾಯ: ಪರಿಪೂರ್ಣ; ತೇರು: ಬಂಡಿ; ನಾಯಕ: ಒಡೆಯ; ಕರೆ: ಬರೆಮಾಡು; ಬವರ: ಯುದ್ಧ; ಕಳುಹಿಸು: ತೆರಳು;

ಪದವಿಂಗಡಣೆ:
ಘಾಯವಡೆದ್+ಆನೆಗಳ +ಕೈ +ಮೈ
ನೋಯೆ +ಕಾದಿದ +ರಾಜಪುತ್ರರನ್
ಆಯುಧದ +ಮಳೆಗಳಲಿ +ನನೆದ +ಜವಾಯ್ಲ +ತೇಜಿಗಳ
ಹಾಯಿದುರೆ +ಸೊಪ್ಪಾದ +ಶಕಟ +ನಿ
ಕಾಯವನು +ಪೂರಾಯ+ತೇರಿನ
ನಾಯಕರ+ ಕರೆಕರೆದು +ಬವರಕೆ +ಕಳುಹಿದನು +ದ್ರೋಣ

ಅಚ್ಚರಿ:
(೧) ಶಕ್ತಿಯಿಲ್ಲದವರು ಎಂದು ಬಣ್ಣಿಸಲು – ಘಾಯವಡೆದ, ಕೈ ಮೈ ನೋಯೆ, ಆಯುಧದ ಮಳೆಗಳಲಿ ನನೆದ, ಸೊಪ್ಪಾದ

ಪದ್ಯ ೮೦: ದುರ್ಯೋಧನನು ತನ್ನ ಮಕ್ಕಳ ಸಾವನ್ನು ನೋಡಿ ಏನೆಂದನು?

ಇಕ್ಕಿದಿರಲಾ ರಾಜಪುತ್ರರ
ನಕ್ಕಟಕಟಾ ಸ್ವಾಮಿದ್ರೋಹರು
ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು
ಹಕ್ಕಲಾದುದು ನಮ್ಮ ಬಲ ಶಿಶು
ಸಿಕ್ಕನಿನ್ನೂ ಪಾಂಡವರ ಪು
ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ (ದ್ರೋಣ ಪರ್ವ, ೫ ಸಂಧಿ, ೮೦ ಪದ್ಯ)

ತಾತ್ಪರ್ಯ:
ತನ್ನ ಪುತ್ರರು ಸತ್ತುದನ್ನು ನೋಡಿದ ಕೌರವನು, ಅಯ್ಯಯ್ಯೋ ಸ್ವಾಮಿದ್ರೋಹಿಗಳಾದ ನೀವೆಲ್ಲರೂ ರಾಜಪುತ್ರರನ್ನು ಸಾಯಲು ಬಿಟ್ಟಿರಿ, ದ್ರೋಣನೇ ಮೊದಲಾದ ನಾಯಕರು ಯಾವ ಮನೆಯನ್ನು ಹೊಕ್ಕರೂ ಅದು ಹಾಳಾಗುತ್ತದೆ, ನಮ್ಮ ಸೈನ್ಯವು ಕೊಯಿಲಾಗಿ ಚೆದುರಿಹೋಯಿತು. ಆ ಬಾಲಕನು ಇನ್ನೂ ಸಿಕ್ಕಲಿಲ್ಲ. ಪಾಂಡವರ ಪುಣ್ಯಕ್ಕೆ ಸರಿಯೇ ಇಲ್ಲ ಎಂದು ಗರ್ಜಿಸಿದ.

ಅರ್ಥ:
ಇಕ್ಕು: ಇರಿಸು, ಇಡು; ರಾಜಪುತ್ರ: ಅರಸನ ಮಕ್ಕಳು; ಅಕಟಕಟಾ: ಅಯ್ಯಯ್ಯೋ; ಸ್ವಾಮಿ: ಒಡೆಯ; ದ್ರೋಹ: ಮೋಸ; ಹೊಕ್ಕು: ಸೇರು; ಮನೆ: ಆಲಯ; ಹಾಳು: ನಾಶ; ನಾಯಕ: ಒಡೆಯ; ಹಕ್ಕಲು: ಒಣಗಿದ್ದು, ಪಾಳುಭೂಮಿ; ಬಲ: ಶಕ್ತಿ, ಸೈನ್ಯ; ಶಿಶು: ಚಿಕ್ಕವ; ಪುಣ್ಯ: ಶುಭ, ಸದಾಚಾರ; ಸರಿ: ಸಮಾನ; ಗರ್ಜಿಸು: ಕೂಗು;

ಪದವಿಂಗಡಣೆ:
ಇಕ್ಕಿದಿರಲ್+ಆ+ ರಾಜಪುತ್ರರನ್
ಅಕ್ಕಟಕಟಾ +ಸ್ವಾಮಿದ್ರೋಹರು
ಹೊಕ್ಕಮನೆ+ ಹಾಳಹುದಲಾ +ದ್ರೋಣಾದಿ +ನಾಯಕರು
ಹಕ್ಕಲಾದುದು +ನಮ್ಮ +ಬಲ +ಶಿಶು
ಸಿಕ್ಕನಿನ್ನೂ +ಪಾಂಡವರ +ಪು
ಣ್ಯಕ್ಕೆ +ಸರಿಯಿಲ್ಲೆನುತ +ಕೌರವರಾಯ +ಗರ್ಜಿಸಿದ

ಅಚ್ಚರಿ:
(೧) ದ್ರೋಣಾದಿಯರನ್ನು ಬಯ್ಯುವ ಪರಿ – ಸ್ವಾಮಿದ್ರೋಹರು ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು

ಪದ್ಯ ೭೯: ಸತ್ತ ಕೌರವರು ಹೇಗೆ ಕಂಡರು?

ತಳಿತ ಚೂತದ ಸಸಿಗಳವನಿಗೆ
ಮಲಗುವಂತಿರೆ ರಾಜಪುತ್ರರು
ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ
ಬಳಿರಕುತದಲಿ ನನೆದ ಸೀರೆಯ
ತಳಿತ ಖಂಡದ ಬಿಗಿದ ಹುಬ್ಬಿನ
ದಳಿತ ದಂಷ್ಟ್ರಾನನದಲೆಸೆದನು ಸಾಲಶಯನದಲಿ (ದ್ರೋಣ ಪರ್ವ, ೫ ಸಂಧಿ, ೭೯ ಪದ್ಯ)

ತಾತ್ಪರ್ಯ:
ಕೌರವ ರಾಜಪುತ್ರರು ಹೊಳೆಯುವ ಪದಕಗಳು, ತಲೆದಿಂಬಾದ ತೋಳುಗಳು, ರಕ್ತದಿಂದ ನೆನೆದ ವಸ್ತ್ರಗಳು, ಕೆಂಪಾದ ಮಾಂಸಖಂಡಗಳು, ಬಿಗಿದ ಹುಬ್ಬುಗಳು, ಕಚ್ಚಿದ ಹಲ್ಲುಗಳೊಡನೆ ಚಿಗುರಿದ ಮಾವಿನ ಸಸಿಗಳು ಭೂಮಿಯಲ್ಲಿ ಬೀಳುವಂತೆ ಸಾಲಾಗಿ ಸತ್ತು ಬಿದ್ದಿದ್ದರು.

ಅರ್ಥ:
ತಳಿತ: ಚಿಗುರಿದ; ಚೂತ; ಮಾವು; ಸಸಿ: ಚಿಕ್ಕ ಗಿಡ; ಅವನಿ: ಭೂಮಿ; ಮಲಗು: ನಿದ್ದೆಮಾಡು; ರಾಜಪುತ್ರ: ಅರಸನ ಮಕ್ಕಳು; ಹೊಳೆ: ಪ್ರಕಾಶ; ಪದಕ: ಹುದ್ದೆಯ ಗುರುತಾಗಿ ಧರಿಸುವ ಲಾಂಛನ; ಕೊರಳು: ಕುತ್ತಿಗೆ; ತಲೆ: ಶಿರ; ಇಂಬು: ಎಡೆ, ಆಶ್ರಯ, ಒರಗು; ತೋಳು: ಬಾಹು; ಬಳಿ: ಹತ್ತಿರ; ರಕುತ: ನೆತ್ತರು; ನನೆ: ತೋಯ್ದು; ಸೀರೆ: ಬಟ್ಟೆ; ಖಂಡ: ತುಂಡು, ಚೂರು; ಬಿಗಿ: ಭದ್ರವಾಗಿರುವುದು; ಹುಬ್ಬು: ಕಣ್ಣಿನ ಮೇಲಿನ ಕೂದಲು; ದಂಷ್ಟ್ರ: ಕೋರೆಹಲ್ಲು, ದಾಡೆ; ಎಸೆ: ಬಾಣ ಪ್ರಯೋಗ ಮಾದು; ಸಾಲು: ಪಂಕ್ತಿ, ಓಲಿ; ಶಯನ: ನಿದ್ರೆ; ಸಾಲ: ಒಂದು ಬಗೆಯ ಮರ;

ಪದವಿಂಗಡಣೆ:
ತಳಿತ +ಚೂತದ +ಸಸಿಗಳ್+ಅವನಿಗೆ
ಮಲಗುವಂತಿರೆ+ ರಾಜಪುತ್ರರು
ಹೊಳೆವ+ ಪದಕದ +ಕೊರಳ +ತಲೆಗಿಂಬಾದ +ತೋಳುಗಳ
ಬಳಿ+ರಕುತದಲಿ +ನನೆದ +ಸೀರೆಯ
ತಳಿತ +ಖಂಡದ +ಬಿಗಿದ +ಹುಬ್ಬಿನ
ದಳಿತ +ದಂಷ್ಟ್ರ+ಆನನದಲ್+ಎಸೆದನು +ಸಾಲ+ಶಯನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಳಿತ ಚೂತದ ಸಸಿಗಳವನಿಗೆ ಮಲಗುವಂತಿರೆ

ಪದ್ಯ ೧೪: ಕರ್ಣನು ಹೇಗೆ ಓಲಗಕ್ಕೆ ಆಗಮಿಸಿದನು?

ತೊಡರ ಝಣಝಣ ರವದ ಹೆಗಲಲಿ
ಜದಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ (ದ್ರೋಣ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕಾಲುಗಡಗಗಳು ಝಣ ಝಣ ಶಬ್ದಮಾಡುತ್ತಿರಲು, ಕೊಬ್ಬಿದ ಹೆಗಲ ಮೇಲೆ ಉಬ್ಬಣವನ್ನು ಹೊತ್ತು, ರತ್ನ ಹಾರಗಳು ಕೊರಳಲ್ಲಿರಲು, ವೀರರಾಜಪುತ್ರರನೇಕರ ಗುಂಪಿನ ನಡುವೆ ತನ್ನ ದೇಹಕ್ಕೆ ಹಚ್ಚಿದ ಸುಗಂಧವು ಎಲ್ಲೆಡೆ ಹರಡುತ್ತಿರಲು ಕರ್ಣನು ಓಲಗಕ್ಕೆ ಬಂದನು.

ಅರ್ಥ:
ತೊಡರು: ಆಭರಣ, ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಝಣ: ಶಬ್ದವನ್ನು ಸೂಚಿಸುವ ಪದ; ರವ: ಶಬ್ದ; ಹೆಗಲು: ಭುಜ; ಜಡಿ: ಕೂಗು, ಧ್ವನಿಮಾಡು; ಹಿರಿ: ದೊಡ್ಡ; ಉಬ್ಬಣ: ಲಾಳವಿಂಡಿಗೆ, ಚೂಪಾದ ಆಯುಧ; ಹೆಚ್ಚು: ಅಧಿಕ; ಮುಡುಹು: ಹೆಗಲು, ಭುಜಾಗ್ರ; ಮಿಗೆ: ಅಧಿಕವಾಗಿ; ಹೊಳೆ: ಪ್ರಕಾಶ; ಹೀರಾವಳಿ: ವಜ್ರದ ಹಾರ; ಕೊರಳು: ಕಂಠ; ಮನ: ಮನಸ್ಸು; ಕಲಿ: ಶೂರ; ಪುತ್ರ: ಮಗ; ನದುವೆ: ಮಧ್ಯೆ; ಪರಿಮಳ: ಸುಗಂಧ; ದೆಸೆ: ದಿಕ್ಕು; ಕಂಪು: ಸುವಾಸನೆ; ಭಾರವಣೆ: ಗೌರವ; ಬಂದು: ಆಗಮಿಸು; ಓಲಗ: ದರ್ಬಾರು;

ಪದವಿಂಗಡಣೆ:
ತೊಡರ +ಝಣಝಣ +ರವದ +ಹೆಗಲಲಿ
ಜಡಿವ +ಹಿರಿ+ಉಬ್ಬಣದ +ಹೆಚ್ಚಿದ
ಮುಡುಹುಗಳ+ ಮಿಗೆ +ಹೊಳೆವ +ಹೀರಾವಳಿಯ +ಕೊರಳುಗಳ
ಕಡುಮನದ +ಕಲಿ +ರಾಜಪುತ್ರರ
ನಡುವೆ +ಮೈ+ಪರಿಮಳದಿ +ದೆಸೆ+ ಕಂ
ಪಿಡಲು +ಭಾರವಣೆಯಲಿ+ ಬಂದನು +ಕರ್ಣನ್+ಓಲಗಕೆ

ಅಚ್ಚರಿ:
(೧) ಕರ್ಣನು ಧರಿಸಿದ ಆಭರಣ – ತೊಡರು, ಹೀರಾವಳಿ;
(೨) ಕರ್ಣನು ಬಂದ ಪರಿ – ಕಡುಮನದ ಕಲಿ ರಾಜಪುತ್ರರ ನಡುವೆ ಮೈಪರಿಮಳದಿ ದೆಸೆ ಕಂಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ

ಪದ್ಯ ೩೦: ಉತ್ತರನೇಕೆ ಸಾರಥಿಯಾಗಲು ಒಪ್ಪಲಿಲ್ಲ?

ಎನ್ನವಂದಿಗ ರಾಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ನಿಯರ ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇ ಈ
ಗನ್ನಗತಕವ ನಾನು ಬಲ್ಲೆನು ಬಿಟ್ಟು ಕಳುಹೆಂದ (ವಿರಾಟ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ನನ್ನಂತಹ ರಾಜಪುತ್ರನಿಗೇ ಈ ಸೈನ್ಯವನ್ನು ಮುಖವೆತ್ತಿ ನೋಡಲಾಗುತ್ತಿಲ್ಲ, ಅದರಲ್ಲಿ ನೀನು ನನ್ನನ್ನು ಸಾರಥಿಯಾಗಿ ಮಾಡಿಕೊಂಡು ಯುದ್ಧವನ್ನು ಮಾಡಿ ಗೆಲ್ಲುವೆಯಾ? ಲೋಕದ ಜನ ಕಂಡವರಲ್ಲಿ ತಪ್ಪೆಣಿಸುತ್ತಾರೆ, ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದಿಲ್ಲ, ನಿನ್ನ ಮೋಸ ನನಗೆ ಗೊತ್ತು, ನನ್ನನ್ನು ಬಿಟ್ಟು ಬಿಡು ಎಂದು ಉತ್ತರನು ಕೇಳಿದನು.

ಅರ್ಥ:
ರಾಜಪುತ್ರ: ರಾಜಕುಮಾರ; ಮೊಗಸು: ತೊಡಗುವಿಕೆ; ಸಾರಥಿ: ಸೂತ; ಬಲ: ಸೈನ್ಯ; ಜಯಿಸು: ಗೆಲ್ಲು; ಅನ್ನಿಗ: ಅನ್ನ ಬೇರೆಯ; ಮನ: ಮನಸ್ಸು; ಕಾಂಬು: ನೋಡು; ಗನ್ನಗತಕ: ಮೋಸ, ವಂಚನೆ; ಬಲ್ಲೆ: ತಿಳಿದಿರುವೆ; ಬಿಟ್ಟು: ತೊರೆ; ಕಳುಹು: ಕಳಿಸು, ಬೀಳ್ಕೊಡು;

ಪದವಿಂಗಡಣೆ:
ಎನ್ನವಂದಿಗ +ರಾಜಪುತ್ರರಿಗ್
ಇನ್ನು +ಮೊಗಸಲು +ಬಾರದಿದೆ+ ನೀನ್
ಎನ್ನ +ಸಾರಥಿ+ ಮಾಡಿಕೊಂಡ್+ಈ+ ಬಲವ+ ಜಯಿಸುವೆಯ
ಅನ್ನಿಯರ +ಮನಗಾಂಬರಲ್ಲದೆ
ತನ್ನ +ತಾ +ಮನಗಾಂಬರೇ+ ಈ
ಗನ್ನಗತಕವ+ ನಾನು+ ಬಲ್ಲೆನು+ ಬಿಟ್ಟು +ಕಳುಹೆಂದ

ಅಚ್ಚರಿ:
(೧) ಮೋಸಕ್ಕೆ ಗನ್ನಗತಕ ಪದದ ಬಳಕೆ
(೨) ಉತ್ತರನ ನುಡಿ – ಅನ್ನಿಯರ ಮನಗಾಂಬರಲ್ಲದೆ ತನ್ನ ತಾ ಮನಗಾಂಬರೇ