ಪದ್ಯ ೧೧: ಪಾಂಡುರಾಜರನ್ನು ಯಾರು ಬೇಟೆಗೆ ಕರೆದರು?

ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯ ಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡುನೃಪಾಲಕನೋಲಗಕೆ (ಆದಿ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಾಂಧಾರಿಯು ಮಂತ್ರಪಿಂಡವನ್ನು ಸೇವಿಸಿ, ಗರ್ಭವತಿಯಾದಳು. ವೇದವ್ಯಾಸರು ಆಶ್ರಮಕ್ಕೆ ಹಿಂದಿರುಗಿದರು. ಹೀಗೆ ರಾಜನ ಅಭ್ಯುದಯವಾಗುತ್ತಿರಲು, ರಾಜ ಜನಮೇಜಯ ಕೇಳು, ಬೇಟೆಗಾರರು ಪಾಂಡುರಾಜನ ಓಲಗಕ್ಕೆ ಬಂದು, ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಬೇಟೆಗೆ ಬರಬೇಕೆಂದು ಕರೆದರು.

ಅರ್ಥ:
ಧರಿಸು: ಹೊರು; ಗರ್ಭ: ಹೊಟ್ಟೆ; ಉತ್ಕರ: ರಾಶಿ, ಸಮೂಹ; ಆಶ್ರಮ: ಕುಟೀರ; ಮುನಿ: ಋಷಿ; ತಿರುಗು: ಹಿಂತಿರುಗು, ಹೊರಡು; ದಿನ: ವಾರ; ಉಬ್ಬು: ಹೆಚ್ಚಾಗು; ರಾಯ: ರಾಜ; ಅಭ್ಯುದಯ: ಏಳಿಗೆ; ಅರಸ: ರಾಜ; ಕೇಳು: ಆಲಿಸು; ಬೇಂಟೆಗಾರ: ಬೇಡ; ಕರೆ: ಕೂಗು; ಬಂದು: ಆಗಮಿಸು; ಮೃಗ: ಪ್ರಾಣಿ; ನಿಕಾಯ: ವಾಸಸ್ಥಳ; ನೆರವಿ: ಗುಂಪು, ಸಮೂಹ; ನೆಲೆ: ವಾಸಸ್ಥಳ; ನೃಪಾಲ: ರಾಜ; ಓಲಗ: ದರಬಾರು;

ಪದವಿಂಗಡಣೆ:
ಧರಿಸಿದಳು +ಗಾಂಧಾರಿ +ಗರ್ಭೋ
ತ್ಕರವನ್+ಇತ್ತ+ ನಿಜಾಶ್ರಮಕೆ +ಮುನಿ
ತಿರುಗಿದನು +ದಿನದಿನದೊಳ್+ಉಬ್ಬಿತು +ರಾಯನ್+ಅಭ್ಯುದಯ
ಅರಸ+ ಕೇಳೈ +ಬೇಂಟೆಗಾರರು
ಕರೆಯ +ಬಂದರು +ಮೃಗ+ನಿಕಾಯದ
ನೆರವಿಗಳ +ನೆಲೆಗೊಳಿಸಿ +ಪಾಂಡು+ನೃಪಾಲಕನ್+ಓಲಗಕೆ

ಅಚ್ಚರಿ:
(೧) ರಾಯ, ಅರಸ – ಸಮಾನಾರ್ಥಕ ಪದ

ಪದ್ಯ ೧೧: ಸೈನ್ಯವು ಹೇಗೆ ಯುದ್ಧಕ್ಕೆ ಬಂತು?

ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ
ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ (ಶಲ್ಯ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅವರ ಸೈನ್ಯವು ಹೋರಾಡಲು ಮುಂದೆ ಬಂತು. ಸೈನ್ಯದ ಮೂಂದೆ ವಂದಿಮಾಗಹರು, ಅವರನ್ನು ಕಾಪಾಡಲು ಹಿಮ್ದೆ ಬಿಲ್ಲಾಳುಗಳು, ಅವರ ಹಿಂದೆ ಸಬಳಗಳನ್ನು ಹಿಡಿದವರು, ಅವರ ಹಿಂದೆ ರಾವುತರು, ಅವರ ಹಿಂದೆ ಆನೆಗಳು ಮಣಿರಥಗಳನ್ನೇರಿದ ರಥಿಕರು ಗುಂಪಾಗಿ ಬಂದರು.

ಅರ್ಥ:
ಮೋಹರ: ಯುದ್ಧ; ಬಲ: ಶಕ್ತಿ; ಔಘ: ಗುಂಪು, ಸಮೂಹ; ಮುಂದೆ: ಎದುರು; ಪಾಠಕ: ಭಟ್ಟಂಗಿ, ಹೊಗಳುಭಟ್ಟ; ಕಾಹು: ಸಂರಕ್ಷಣೆ; ಬಿಲ್ಲಾಳ: ಬಿಲ್ಲುಗಾರ; ಸುಯ್ದಾನ: ರಕ್ಷಣೆ, ಕಾಪು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಹಿಂದೆ: ಹಿಂಭಾಗ; ತುರಗ: ಅಶ್ವ; ಸಮೂಹ: ಗುಂಪು; ಗಜಘಟೆ: ಆನೆಗಳ ಗುಂಪು; ಗಜ: ಆನೆ; ಬಳಿ: ಹತ್ತಿರ; ಸಂದಣೆ: ಗುಂಪು; ರಾಯ: ರಾಜ; ದಳ: ಸೈನ್ಯ; ಮಣಿರಥ: ರತ್ನದಿಂದ ಕೂಡಿದ ಬಂಡಿ; ನಿಕಾಯ: ಗುಂಪು;

ಪದವಿಂಗಡಣೆ:
ಬಂದುದ್+ಆ+ ಮೋಹರ +ಬಲೌಘದ
ಮುಂದೆ +ಪಾಠಕರ್+ಅವರ+ ಕಾಹಿಗೆ
ಹಿಂದೆ +ಬಿಲ್ಲಾಳ್+ಅವರ+ ಸುಯ್ದಾನದಲಿ +ಸಬಳಿಗರು
ಹಿಂದೆ +ತುರಗ +ಸಮೂಹವ್+ಅಲ್ಲಿಂ
ಹಿಂದೆ+ ಗಜಘಟೆ+ ಗಜದ +ಬಳಿಯಲಿ
ಸಂದಣಿಸಿದುದು +ರಾಯದಳ+ ಮಣಿರಥ +ನಿಕಾಯದಲಿ

ಅಚ್ಚರಿ:
(೧) ಔಘ, ನಿಕಾಯ, ಸಮೂಹ, ಘಟೆ, ಸಂದಣೆ – ಸಮಾನಾರ್ಥಕ ಪದ
(೨) ಪಾಠಕ, ಬಿಲ್ಲಾಳು, ಸಬಳಿಗ, ತುರಗ ಸಮೂಹ, ಗಜಘಟೆ, ರಾಯದಳ – ಸೈನ್ಯದಲ್ಲಿದ್ದ ಗುಂಪುಗಳು
(೩) ಹಿಂದೆ, ಮುಂದೆ – ವಿರುದ್ಧ ಪದ

ಪದ್ಯ ೧೭: ದ್ರೋಣನು ಎಂಥಹವರನ್ನು ಯುದ್ಧಕ್ಕೆ ಕಳುಹಿಸಿದನು?

ಘಾಯವಡೆದಾನೆಗಳ ಕೈ ಮೈ
ನೋಯೆ ಕಾದಿದ ರಾಜಪುತ್ರರ
ನಾಯುಧದ ಮಳೆಗಳಲಿ ನನೆದ ಜವಾಯ್ಲ ತೇಜಿಗಳ
ಹಾಯಿದುರೆ ಸೊಪ್ಪಾದ ಶಕಟ ನಿ
ಕಾಯವನು ಪೂರಾಯದೇರಿನ
ನಾಯಕರ ಕರೆಕರೆದು ಬವರಕೆ ಕಳುಹಿದನು ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆ ಕುರವನಿಗೆ ಹೇಳಿ, ದ್ರೋಣನು ಗಾಯಗೊಂಡ ಆನೆಗಳು, ಕೈ ಮೈ ನೋವಾದ ರಾಜಪುತ್ರರು, ಆಯುಧದ ಮಳೆಯಲ್ಲಿ ನೆನೆದ ವೇಗದ ಕುದುರೆಗಳು, ಹಗಲೆಲ್ಲಾ ಚಲಿಸಿ ಆಯಾಸಗೊಂಡ ರಥಗಳನ್ನು ಪೂರ್ತಿಗಾಯಗೊಂಡ ಸೇನಾ ನಾಯಕರನ್ನು ಕರೆಕರೆದು ಯುದ್ಧಕ್ಕೆ ಕಳುಹಿಸಿದನು.

ಅರ್ಥ:
ಘಾಯ: ಪೆಟ್ಟು; ಆನೆ: ಗಜ; ಕೈ: ಹಸ್ತ; ಮೈ: ತನು; ನೋವು: ಬೇನೆ, ಶೂಲೆ; ಕಾದು: ಹೋರಾಡು; ಪುತ್ರ: ಮಕ್ಕಳು; ಆಯುಧ: ಶಸ್ತ್ರ; ಮಳೆ: ವರ್ಷ; ನನೆ: ತೋಯು; ಜವಾಯ್ಲ: ವೇಗ; ತೇಜಿ: ಕುದುರೆ; ಹಾಯಿಸು: ಸೇರಿಸು, ಓಡಿಸು; ಸೊಪ್ಪಾದ: ಸೊರಗು; ಶಕಟ: ರಥ, ಬಂಡಿ; ನಿಕಾಯ: ಗುಂಪು; ಪೂರಾಯ: ಪರಿಪೂರ್ಣ; ತೇರು: ಬಂಡಿ; ನಾಯಕ: ಒಡೆಯ; ಕರೆ: ಬರೆಮಾಡು; ಬವರ: ಯುದ್ಧ; ಕಳುಹಿಸು: ತೆರಳು;

ಪದವಿಂಗಡಣೆ:
ಘಾಯವಡೆದ್+ಆನೆಗಳ +ಕೈ +ಮೈ
ನೋಯೆ +ಕಾದಿದ +ರಾಜಪುತ್ರರನ್
ಆಯುಧದ +ಮಳೆಗಳಲಿ +ನನೆದ +ಜವಾಯ್ಲ +ತೇಜಿಗಳ
ಹಾಯಿದುರೆ +ಸೊಪ್ಪಾದ +ಶಕಟ +ನಿ
ಕಾಯವನು +ಪೂರಾಯ+ತೇರಿನ
ನಾಯಕರ+ ಕರೆಕರೆದು +ಬವರಕೆ +ಕಳುಹಿದನು +ದ್ರೋಣ

ಅಚ್ಚರಿ:
(೧) ಶಕ್ತಿಯಿಲ್ಲದವರು ಎಂದು ಬಣ್ಣಿಸಲು – ಘಾಯವಡೆದ, ಕೈ ಮೈ ನೋಯೆ, ಆಯುಧದ ಮಳೆಗಳಲಿ ನನೆದ, ಸೊಪ್ಪಾದ

ಪದ್ಯ ೨೭: ಕೃಷ್ಣನು ಅರ್ಜುನನನ್ನು ಹೇಗೆ ಉತ್ತೇಜಿಸಿದನು -೨?

ಎಲೆ ಧನಂಜಯ ಹಗೆಯ ಹೆಚ್ಚಿದ
ಹಳುವವಿದೆಲಾ ವಜ್ರಿಸುತ ನಿ
ನ್ನಳವಿಯಲಿ ತರುಬಿದೆ ಸುಯೋಧನಸೈನ್ಯ ಗಿರಿನಿಕರ
ಎಲೆ ಸಮೀರಜನನುಜ ರಿಪುಬಲ
ವಿಲಯ ಮೇಘ ನಿಕಾಯವಿದೆ ಭುಜ
ಬಲವ ತೋರೈ ತಂದೆ ನೋಡುವೆನೆಂದನಸುರಾರಿ (ಭೀಷ್ಮ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೆ ಧನಂಜಯ, ಶತ್ರುಸೈನ್ಯವು ಹೆಗ್ಗಾಡಿನಂತಿದೆ, ಸೈನ್ಯ ಪರ್ವತವೆದುರಿಗಿದೆ, ನೀನು ಇಂದ್ರಪುತ್ರ, ವಜ್ರಾಯುಧದಿಂದ ಪರ್ವತಗಳನ್ನು ಖಂಡಿಸುವ ಶಕ್ತಿಯಿದೆ, ಎಲೆ ವಾಯುಪುತ್ರನ ತಮ್ಮನೇ, ನಿನ್ನೆದುರಿನಲ್ಲಿ ವೈರಸೈನ್ಯವೆಂಬ ಪ್ರಳಯ ಮೇಘವಿದೆ, ನಿನ್ನ ಭುಜಬಲವನ್ನು ತೋರಿಸು, ಎಂದು ಶ್ರೀಕೃಷ್ಣನು ಅರ್ಜುನನನ್ನು ಉತ್ತೇಜಿಸಿದನು.

ಅರ್ಥ:
ಹಗೆ: ವೈರತ್ವ; ಹೆಚ್ಚು: ಅಧಿಕ; ಹಳುವ: ಕಾಡು; ವಜ್ರ: ಗಟ್ಟಿಯಾದ; ಸುತ: ಮಗ; ವಜ್ರಿ: ಇಂದ್ರ; ಅಳವಿ: ಶಕ್ತಿ, ಯುದ್ಧ; ತರುಬು: ತಡೆ, ನಿಲ್ಲಿಸು; ಸೈನ್ಯ: ಸೇನೆ; ಗಿರಿ: ಬೆಟ್ಟ; ನಿಕರ: ಗುಂಪು; ಸಮೀರ: ವಾಯು; ಅನುಜ: ತಮ್ಮ; ರಿಪು:ವೈರಿ ಬಲ: ಶಕ್ತಿ, ಸೈನ್ಯ; ವಿಲಯ: ನಾಶ, ಪ್ರಳಯ; ಮೇಘ: ಮೋಡ; ನಿಕಾಯ: ಗುಂಪು; ಭುಜಬಲ: ಬಾಹುಬಲ; ತೋರು: ವೀಕ್ಷಿಸು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಎಲೆ+ ಧನಂಜಯ +ಹಗೆಯ +ಹೆಚ್ಚಿದ
ಹಳುವವಿದೆಲಾ +ವಜ್ರಿ+ಸುತ +ನಿನ್ನ್
ಅಳವಿಯಲಿ +ತರುಬಿದೆ+ ಸುಯೋಧನ+ಸೈನ್ಯ +ಗಿರಿ+ನಿಕರ
ಎಲೆ+ ಸಮೀರಜನ್+ಅನುಜ +ರಿಪು+ಬಲ
ವಿಲಯ +ಮೇಘ +ನಿಕಾಯವಿದೆ+ ಭುಜ
ಬಲವ +ತೋರೈ +ತಂದೆ +ನೋಡುವೆನೆಂದನ್+ಅಸುರಾರಿ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ವಜ್ರಿಸುತ, ಸಮೀರಜನನುಜ
(೨) ಉಪಮಾನಗಳು – ಹಗೆಯ ಹೆಚ್ಚಿದ ಹಳುವ, ಸುಯೋದನ ಸೈನ್ಯ ಗಿರಿನಿಕರ, ರಿಪುಬಲ ವಿಲಯ ಮೇಘ ನಿಕಾಯ;

ಪದ್ಯ ೨೯: ದುರ್ಯೋಧನನು ಯಾವುದರ ತಯಾರಿ ಮಾಡಿದನು?

ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸತ್ಕರ್ಮವನು ವಿ
ಸ್ತರಿಸಿದನು ಚಾವಡಿಗೆ ಬಂದನು ಹರುಷದುಬ್ಬಿನಲಿ
ಚರರನಟ್ಟಿದನಖಿಳ ಧರಣೀ
ಶ್ವರ ನಿಕಾಯಕೆ ಸಕಲ ಸುಭಟರ
ಬರಿಸಿದನು ತರಿಸಿದನು ಪಟ್ಟಕೆ ಬೇಹವಸ್ತುಗಳ (ಭೀಷ್ಮ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೌರವನು ಎದ್ದು, ರಾಜರು ಮಾಡಬೇಕಾದ ಸತ್ಕರ್ಮಗಳನ್ನು ಮಾಡಿ, ಓಲಗದ ಚಾವಡಿಗೆ ಬಂದು, ಸಮಸ್ತರಾಜರ ಬಳಿಗೂ ದೂತರನ್ನು ಕಳಿಸಿ ಅವರನ್ನು ಬರಮಾಡಿಕೊಂಡನು. ಸೇನಾಧಿಪತ್ಯದ ಪಟ್ಟಕಟ್ಟಲು ಅವಶ್ಯಕವಾದ ವಸ್ತುಗಳನ್ನು ತರಿಸಿದನು.

ಅರ್ಥ:
ಅರಸ: ರಾಜ; ಉಪ್ಪವಡಿಸು: ಮೇಲೇಳು; ಅವನೀಶ್ವರ: ರಾಜ; ವಿಹಿತ: ಯೋಗ್ಯ; ಸತ್ಕರ್ಮ: ಒಳ್ಳೆಯ ಕೆಲಸ; ವಿಸ್ತರಿಸು: ಹರಡು; ಚಾವಡಿ: ಓಲಗಶಾಲೆ, ಸಭಾಸ್ಥಾನ; ಬಂದು: ಆಗಮಿಸು; ಹರುಷ: ಸಂತಸ; ಉಬ್ಬು: ಅಧಿಕ; ಚರರು: ದೂತರು; ಅಟ್ಟು: ಕಳಿಸು; ಧರಣೀಶ್ವರ: ರಾಜ; ನಿಕಾಯ: ಗುಂಪು; ಸಕಲ: ಎಲ್ಲಾ; ಸುಭಟ: ಪರಾಕ್ರಮಿ; ಬರಿಸು: ಕರೆ, ಬರಹೇಳು; ತರಿಸು: ಕೊಂಡು ಬಾ; ಪಟ್ಟ: ಸ್ಥಾನ, ಗೌರವ; ಬೇಹ: ಬೇಕಾದ; ವಸ್ತು: ಸಾಮಗ್ರಿ;

ಪದವಿಂಗಡಣೆ:
ಅರಸನ್+ಉಪ್ಪವಡಿಸಿದನ್+ಅವನೀ
ಶ್ವರ +ವಿಹಿತ +ಸತ್ಕರ್ಮವನು +ವಿ
ಸ್ತರಿಸಿದನು +ಚಾವಡಿಗೆ +ಬಂದನು +ಹರುಷದುಬ್ಬಿನಲಿ
ಚರರನ್+ಅಟ್ಟಿದನ್+ಅಖಿಳ +ಧರಣೀ
ಶ್ವರ +ನಿಕಾಯಕೆ +ಸಕಲ +ಸುಭಟರ
ಬರಿಸಿದನು +ತರಿಸಿದನು +ಪಟ್ಟಕೆ +ಬೇಹ+ವಸ್ತುಗಳ

ಅಚ್ಚರಿ:
(೧) ಅವನೀಶ್ವರ, ಧರಣೀಶ್ವರ – ಸಮನಾರ್ಥಕ ಪದ
(೨) ಬರಿಸಿದನು, ತರಿಸಿದನು – ಪ್ರಾಸ ಪದಗಳು

ಪದ್ಯ ೨: ಕುರುಸೇನೆ ಹೇಗೆ ಕಂಡಿತು?

ಕರಿಘಟಾವಳಿಯೊಡ್ಡುಗಲ್ಲಿನ
ತುರಗನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ
ನರನಿಕಾಯದ ಜಲಚರೌಘದ
ತರದ ವಾದ್ಯ ಧ್ವನಿಯ ರವದು
ಬ್ಬರದಲಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ (ವಿರಾಟ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಉತ್ತರನಿಗೆ ಮಹಾಸಮುದ್ರದಂತೆ ಕಂಡಿತು. ಆನೆಗಳೇ ಒಡ್ಡುಗಲ್ಲುಗಳು, ಕುದುರೆಗಳ ಸಾಲೇ ತೆರೆಗಳು, ರಥಗಳ ಚಲನೆಯಿಂದ ಕಾಣಿಸುವ ಸುಳಿ, ಶ್ವೇತಚ್ಛತ್ರಗಳ ನೊರೆ, ಕಾಲಾಳುಗಳೇ ಜಲಚರಗಳು, ವಾದ್ಯ ಧ್ವನಿಯೇ ಸಮುದ್ರದದ ಮೊರೆತ.

ಅರ್ಥ:
ಕರಿ: ಆನೆ; ಕರಿಘಟಾವಳಿ: ಆನೆಯ ಸಮೂಹ; ತುರಗ: ಕುದುರೆ; ನಿಕರ: ಗುಂಪು; ತೆರೆ: ಅಲೆ; ತೇರು: ರಥ, ಬಂಡಿ; ಹೊರಳು: ತಿರುವು, ಉರುಳು; ಸುಳಿ:ಗುಂಡಾಗಿ ಸುತ್ತು, ಚಕ್ರಾಕಾರವಾಗಿ ತಿರುಗು; ಆತಪತ್ರ: ಕೊಡೆ, ಛತ್ರಿ; ಬಹಳ: ತುಂಬ; ನರ: ಮನುಷ್ಯ; ನಿಕಾಯ: ಗುಂಪು; ಜಲ: ನೀರು; ಜಲಚರ: ನೀರಿನಲ್ಲಿರುವ ಜೀವಿಗಳು; ಔಘ: ಗುಂಪು; ವಾದ್ಯ: ಸಂಗೀತದ ಸಾಧನ; ಧ್ವನಿ: ಶಬ್ದ; ರವ: ಧ್ವನಿ, ಶಬ್ದ; ಉಬ್ಬರ: ಅತಿಶಯ; ಬಹಳ: ತುಂಬ; ಜಲನಿಧಿ: ಸಾಗರ; ಸೇನೆ: ಸೈನ್ಯ; ಬುದ್ಬುದ: ನೀರಿನ ಮೇಲಣ ಗುಳ್ಳೆ, ಬೊಬ್ಬುಳಿ; ಒಡ್ಡು: ಸಮೂಹ;

ಪದವಿಂಗಡಣೆ:
ಕರಿಘಟಾವಳಿ+ಒಡ್ಡು+ಕಲ್ಲಿನ
ತುರಗ+ನಿಕರದ+ ತೆರೆಯ +ತೇರಿನ
ಹೊರಳಿಗಳ+ ಸುಳಿ+ಆತಪತ್ರದ+ ಬಹಳ+ ಬುದ್ಬುದದ
ನರ+ನಿಕಾಯದ +ಜಲಚರ+ಔಘದ
ತರದ +ವಾದ್ಯ +ಧ್ವನಿಯ +ರವದ್
ಉಬ್ಬರದಲ್+ಇದ್ದುದು +ಬಹಳ +ಜಲನಿಧಿಯಂತೆ +ಕುರುಸೇನೆ

ಅಚ್ಚರಿ:
(೧) ಕೌರವ ಸೇನೆಯನ್ನು ಸಮುದ್ರಕ್ಕೆ ಹೋಲಿಸುವ ಪರಿ
(೨) ಘಟಾವಳಿ, ನಿಕರ, ನಿಕಾಯ, ಔಘ; ಧ್ವನಿ, ರವ, ಒಡ್ಡು – ಸಮನಾರ್ಥಕ ಪದಗಳು
(೩) ತ ಕಾರದ ತ್ರಿವಳಿ ಪದ – ತುರಗನಿಕರದ ತೆರೆಯ ತೇರಿನ

ಪದ್ಯ ೩೦: ಯುವತಿಯರು ಹೇಗೆ ಪ್ರಯಾಣ ಪ್ರಾರಂಭಿಸಿದರು?

ಸವಡಿಯಾನೆಯ ಮೇಲೆ ಗಣಿಕಾ
ನಿವಹ ದಂಡಿಗೆಗಳಲಿ ಕೆಲಬರು
ಯುವತಿಯರು ಕೆಲರಶ್ವಚಯದಲಿ ರಥನಿಕಾಯದಲಿ
ಯುವತಿಮಯವೋ ಸೃಷ್ಟಿ ಗಣಿಕಾ
ಯುವತಿಯರ ನೆಲನೀದುದೋ ದಿಗು
ವಿವರ ಕರೆದುದೊ ಕಾಂತೆಯರನೆನೆ ಕವಿದುದಗಲದಲಿ (ಅರಣ್ಯ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಜೋಡಿ ಆನೆಗಳ ಮೇಲೆ, ಪಲ್ಲಕ್ಕಿಗಳಲ್ಲಿ, ಕುದುರೆಗಳ ಮೇಲೆ, ರಥಗಲಲ್ಲಿ, ಗಣಿಕಾಯುವತಿಯರು ಹೋಗುತ್ತಿದ್ದರೆ, ಸೃಷ್ಟಿಯಲ್ಲಿರುವುದು ಬರೀ ಯುವತಿಯರೋ, ನೆಲವು ಇಷ್ಟು ಜನ ಯುವತಿಯರನ್ನು ಸೃಜಿಸಿತೋ ಅಥವಾ ದಿಕ್ಕುಗಳು ಇವರನ್ನು ಕರೆದುಕೊಂಡು ಬಂದವೋ ಎನ್ನುವ ಹಾಗೆ ಕಾಣುತ್ತಿತ್ತು.

ಅರ್ಥ:
ಸವಡಿ: ಜೊತೆ, ಜೋಡಿ; ಆನೆ: ಗಜ; ಗಣಿಕ: ವೇಶ್ಯೆ; ನಿವಹ: ಗುಂಪು; ದಂಡಿಗೆ: ಪಲ್ಲಕ್ಕಿ; ಕೆಲಬರು: ಕೆಲವರು; ಯುವತಿ: ಹೆಣ್ಣು; ಅಶ್ವ: ಕುದುರೆ; ಚಯ: ಸಮೂಹ, ರಾಶಿ; ರಥ: ಬಂಡಿ; ನಿಕಾಯ: ಗುಂಪು; ಮಯ: ತುಂಬಿರುವುದು; ಸೃಷ್ಟಿ: ಉತ್ಪತ್ತಿ, ಹುಟ್ಟು; ನೆಲ:ಭೂಮಿ; ದಿಗು: ದಿಕ್ಕು; ವಿವರ: ವಿಸ್ತಾರ, ಹರಹು; ಕರೆದು: ಬರೆಮಾಡು; ಕಾಂತೆ: ಹೆಣ್ಣು; ಕವಿ: ಆವರಿಸು; ಅಗಲ: ವಿಸ್ತಾರ;

ಪದವಿಂಗಡಣೆ:
ಸವಡಿ+ಆನೆಯ +ಮೇಲೆ +ಗಣಿಕಾ
ನಿವಹ +ದಂಡಿಗೆಗಳಲಿ+ ಕೆಲಬರು
ಯುವತಿಯರು +ಕೆಲರ್+ಅಶ್ವ+ಚಯದಲಿ +ರಥ+ನಿಕಾಯದಲಿ
ಯುವತಿಮಯವೋ +ಸೃಷ್ಟಿ +ಗಣಿಕಾ
ಯುವತಿಯರ +ನೆಲನೀದುದೋ +ದಿಗು
ವಿವರ +ಕರೆದುದೊ +ಕಾಂತೆಯರನ್+ಎನೆ +ಕವಿದುದ್+ಅಗಲದಲಿ

ಅಚ್ಚರಿ:
(೧) ೩ ಸಾಲುಗಳಲ್ಲಿ ಯುವತಿ ಮೊದಲ ಪದವಾಗಿರುವುದು
(೨) ಗಣಿಕಾ – ೧, ೪ ಸಾಲಿನ ಕೊನೆ ಪದ
(೩) ಚಯ, ನಿಕಾಯ, ನಿವಹ; ಕಾಂತೆ, ಯುವತಿ – ಸಮನಾರ್ಥಕ ಪದ

ಪದ್ಯ ೧೪: ಭೀಮನು ವಿಸ್ಮಯಗೊಳ್ಳಲು ಕಾರಣವೇನು?

ಮುಂದೆ ಕಂಡನು ದೂರದಲ್ಲಿಹ
ನಂದನದ ಮೆಳೆ ತರುನಿಕಾಯದ
ಸಂದಣಿಯ ಪೂಗೊಂಚಲಿನ ಪಲ್ಲವ ನಿಕಾಯದಲಿ
ಗೊಂದಣದ ತರು ಮಧ್ಯದಲ್ಲಿಯ
ದೊಂದು ಜಂಬೂವೃಕ್ಷಮೆರೆದಿರೆ
ನಿಂದು ನೋಡಿದ ಭೀಮ ವಿಸ್ಮಯಗೊಂಡನಾಕ್ಷಣಕೆ (ಅರಣ್ಯ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ಬೇಟೆಯಾಡಿದ ನಂತರ ಎಲ್ಲಾ ಕಡೆಯು ನೋಡುತ್ತಿರುವಾಗ ಅವನು ದೂರದಲ್ಲಿ ತೋಟವನ್ನು ಕಂಡನು. ಮರ ಪೊದೆಗಳಿಂದ ಕೂಡಿದ ಈ ತೋಟದಲ್ಲಿ ಹೂಗೊಂಚಲು, ಮರದ ಚಿಗುರನ್ನು ನೋಡಿದನು. ಆ ಮರಗಳ ಗುಂಪಿನ ನಡುವೆ ಒಂದು ದೊಡ್ಡ ನೇರಳೆಯ ಮರವನ್ನು ನೋಡಿ ಆಶ್ಚರ್ಯಪಟ್ಟನು.

ಅರ್ಥ:
ಮುಂದೆ: ನಂತರ, ಎದುರು; ಕಂಡು: ನೋಡು; ದೂರ: ಬಹಳ ಅಂತರ; ನಂದನ: ತೋಟ; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು, ಪೊದರು; ತರು: ಮರ; ನಿಕಾಯ: ಗುಂಪು; ಸಂದಣಿ: ನಿಬಿಡತೆ, ಸಾಂದ್ರತೆ; ಪೂ: ಹೂವು; ಗೊಂಚಲು: ಗುಂಪು; ಪಲ್ಲವ: ಚಿಗುರು; ಗೊಂದಣ: ಗುಂಪು, ಹಿಂಡು; ಮಧ್ಯ: ನಡುವೆ; ಜಂಬೂ: ನೇರಳೆ; ವೃಕ್ಷ: ಮರ; ಮೆರೆ: ಶೋಭಿಸು; ನಿಂದು: ನಿಲ್ಲು; ನೋಡು: ವೀಕ್ಷಿಸು; ವಿಸ್ಮಯ: ಆಶ್ಚರ್ಯ; ಕ್ಷಣ: ಸಮಯ;

ಪದವಿಂಗಡಣೆ:
ಮುಂದೆ +ಕಂಡನು +ದೂರದಲ್ಲಿಹ
ನಂದನದ +ಮೆಳೆ +ತರು+ನಿಕಾಯದ
ಸಂದಣಿಯ +ಪೂ+ಗೊಂಚಲಿನ +ಪಲ್ಲವ +ನಿಕಾಯದಲಿ
ಗೊಂದಣದ+ ತರು+ ಮಧ್ಯದಲ್ಲಿಯದ್
ಒಂದು+ ಜಂಬೂ+ವೃಕ್ಷ+ಮೆರೆದಿರೆ
ನಿಂದು+ ನೋಡಿದ+ ಭೀಮ +ವಿಸ್ಮಯಗೊಂಡನ್+ಆ+ಕ್ಷಣಕೆ

ಅಚ್ಚರಿ:
(೧) ನಿಕಾಯ, ಗೊಂದಣ, ಮೆಳೆ; ಕಂಡು, ನೋಡು – ಸಮನಾರ್ಥಕ ಪದ

ಪದ್ಯ ೬೪: ಧರ್ಮರಾಯನು ಜೂಜಿನ ಜಾಲದಲ್ಲಿ ಸಿಲುಕಿ ಯಾವುದನ್ನು ಪಣಕ್ಕೆ ಇಟ್ಟನು?

ಅಗಣಿತದ ಧನವುಂಟು ಹಾಸಂ
ಗಿಗಳ ಹಾಯಿಕು ಸೋತ ವಸ್ತುವ
ತೆಗೆವನೀಗಳೆ ಶಕುನಿ ನೋಡಾ ತನ್ನ ಕೌಶಲವ
ದುಗುಣ ಹಲಗೆಗೆ ಹತ್ತುಮಡಿ ರೇ
ಖೆಗೆ ಗಜಾಶ್ವನಿಕಾಯ ರಥವಾ
ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ (ಸಭಾ ಪರ್ವ, ೧೪ ಸಂಧಿ, ೬೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಜೂಜಿನ ಜಾಲದಲ್ಲಿ ಸಂಪೂರ್ಣವಾಗಿ ಬಿದ್ದನು, ನನ್ನ ಬಳಿ ಲೆಕ್ಕವಿಲ್ಲದಷ್ಟು ಹಣವಿದೆ, ದಾಳವನ್ನು ಹಾಕು, ನಾನು ಈ ವರೆಗೆ ಸೋತದ್ದೆಲ್ಲವನ್ನೂ ಮತ್ತೆ ಗಳಿಸುತ್ತೇನೆ ಶಕುನಿ, ನನ್ನ ಚಮತ್ಕಾರವನ್ನು ನೋಡು. ಒಂದು ಹಲಗೆಗೆ ಒಡ್ಡಿದ ಎರಡಷ್ಟು ಮುಂದಿನ ಹಲಗೆಗೆ ಒಡ್ಡುತ್ತೇನೆ ಎಂದು ಹೇಳಿ ನನ್ನ ಸಮಸ್ತ ಚತುರಂಗ ಸೈನ್ಯವೂ ಇದೆ ಎಂದು ಯುಧಿಷ್ಠಿರನು ಶಕುನಿಗೆ ಹೇಳಿದನು.

ಅರ್ಥ:
ಅಗಣಿತ: ಲೆಕ್ಕವಿಲ್ಲದಷ್ಟು; ಧನ: ಹಣ; ಹಾಸಂಗಿ:ಜೂಜಿನ ದಾಳ, ಲೆತ್ತ; ಹಾಯಿಕು: ಹಾಕು; ಸೋಲು: ಪರಾಭವ; ವಸ್ತು: ಸಾಮಗ್ರಿ; ತೆಗೆ: ಹೊರತರು; ಕೌಶಲ: ಚಾಣಾಕ್ಷತೆ; ದುಗುಣ: ಎರಡು ಪಟ್ಟು, ಇಮ್ಮಡಿ; ಹಲಗೆ: ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು; ಹತ್ತು: ದಶ; ಮಡಿ: ಪಟ್ಟು; ರೇಖೆ: ಸಾಲು, ಗೆರೆ; ಗಜ: ಆನೆ; ಅಶ್ವ: ಕುದುರೆ; ನಿಕಾಯ: ಗುಂಪು; ರಥ: ಬಂಡಿ; ವಾಜಿ: ಕುದುರೆ; ಸಹಿತ: ಜೊತೆ; ಸಕಲ: ಎಲ್ಲಾ; ಸೈನಿಕ: ಸೈನ್ಯ; ಭೂಪ: ರಾಜ;

ಪದವಿಂಗಡಣೆ:
ಅಗಣಿತದ+ ಧನವುಂಟು +ಹಾಸಂ
ಗಿಗಳ +ಹಾಯಿಕು +ಸೋತ +ವಸ್ತುವ
ತೆಗೆವನ್+ಈಗಳೆ +ಶಕುನಿ +ನೋಡಾ +ತನ್ನ+ ಕೌಶಲವ
ದುಗುಣ +ಹಲಗೆಗೆ +ಹತ್ತುಮಡಿ +ರೇ
ಖೆಗೆ +ಗಜ+ಅಶ್ವ+ನಿಕಾಯ +ರಥವಾ
ಜಿಗಳು +ಸಹಿತಿದೆ +ಸಕಲ +ಸೈನಿಕವೆಂದನಾ +ಭೂಪ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಹಿತಿದೆ ಸಕಲ ಸೈನಿಕವೆಂದನಾ
(೨) ಯುಧಿಷ್ಠಿರನು ಜೂಜಿನಲ್ಲಿ ಜಾರಿದನೆಂದು ತಿಳಿಸುವ ಪರಿ – ದುಗುಣ ಹಲಗೆಗೆ ಹತ್ತುಮಡಿ ರೇ
ಖೆಗೆ

ಪದ್ಯ ೫೭: ಕೃಷ್ಣನು ರಥದಿಂದ ಹೇಗೆ ಇಳಿದನು?

ಎಂದು ಗಂಗಾನಂದನನು ನಲ
ವಿಂದ ಕೈಗೊಡೆ ಸುರಗಿರಿಯ ತುದಿ
ಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
ಅಂದು ನೀಲಾಚಲ ನಿಕಾಯದ
ಸೌಂದರಾಂಗದ ಕೌಸ್ತುಭ ಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ (ಉದ್ಯೋಗ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎಲ್ಲರೂ ಕೃಷ್ಣನಿಗೆ ಎರಗಿದ ನಂತರ ಭೀಷ್ಮರು ಕೃಷ್ಣನನ್ನು ರಥದಿಂದ ಇಳಿಸಲು ತಮ್ಮ ಹಸ್ತವನ್ನು ಚಾಚಲು, ಮೇರುಪರ್ವತದ ತುದಿಯಿಂದ ಚಿಕ್ಕ ಮಿಂಚುಗಳು ಭೂಮಿಗೆ ಬರುವಂತೆ ಅಂದು ನೀಲವರ್ಣದ ಸುಂದರಾಂಗ ಕೃಷ್ಣನ ಧರಿಸಿದ ಕೌಸ್ತುಭಮಣಿಯ ಪ್ರಭೆಯು ಪ್ರಜ್ವಲಿಸಿ ಚಿನ್ನದ ರಥದಿಂದ ಕೃಷ್ಣನು ಇಳಿದನು.

ಅರ್ಥ:
ಗಂಗಾನಂದನ: ಭೀಷ್ಮ; ನಂದನ: ಮಗ; ನಲವು: ಸಂತೋಷ; ಕೈ: ಕರ, ಹಸ್ತ; ಕೊಡು: ನೀಡು; ಸುರ: ದೇವ; ಗಿರಿ: ಬೆಟ್ಟ; ತುದಿ: ಅಗ್ರಭಾಗ; ಮಿಂಚು: ಹೊಳಪು, ಕಾಂತಿ; ಮರಿ: ಚಿಕ್ಕ; ಮುಗಿಲು: ಆಗಸ; ಇಳಿ: ಕೆಳಗೆ ಬಾ; ಭೂತಳ: ಭೂಮಿ; ಅಚಲ: ಬೆಟ್ಟ; ನಿಕಾಯ: ದೇಹ, ಶರೀರ; ಸೌಂದರ: ಚೆಲುವು; ಅಂಗ: ಭಾಗ; ಕೌಸ್ತುಭ: ವಿಷ್ಣುವಿನ ಎದೆಯನ್ನು ಅಲಂಕರಿಸಿರುವ ಒಂದು ರತ್ನ; ಪ್ರಭೆ: ಕಾಂತಿ; ಕಾಂಚನ: ಚಿನ್ನ; ರಥ: ಬಂಡಿ; ದಾನವ: ರಾಕ್ಷಸ; ಅರಾತಿ: ಶತ್ರು; ಸುರಗಿರಿ: ಮೇರುಪರ್ವತ;

ಪದವಿಂಗಡಣೆ:
ಎಂದು +ಗಂಗಾ+ನಂದನನು +ನಲ
ವಿಂದ +ಕೈಗೊಡೆ +ಸುರಗಿರಿಯ +ತುದಿ
ಯಿಂದ +ಮರಿಮಿಂಚುಗಳ+ ಮುಗಿಲ್+ಇಳಿವಂತೆ+ ಭೂತಳಕೆ
ಅಂದು +ನೀಲ+ಅಚಲ+ ನಿಕಾಯದ
ಸೌಂದರಾಂಗದ+ ಕೌಸ್ತುಭ+ ಪ್ರಭೆ
ಯಿಂದ+ ಕಾಂಚನ +ರಥವನ್+ಇಳಿದನು+ ದಾನವ+ಅರಾತಿ

ಅಚ್ಚರಿ:
(೧) ಉಪಮಾನದ ಬಳಕೆ – ಸುರಗಿರಿಯ ತುದಿಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
(೨) ಕೃಷ್ಣನ ವರ್ಣನೆ – ನೀಲಾಚಲ ನಿಕಾಯದ ಸೌಂದರಾಂಗದ ಕೌಸ್ತುಭ ಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ