ಪದ್ಯ ೨೯: ಶಂತನು ಭೀಷ್ಮನಿಗೆ ಯಾವ ವರವನ್ನಿತ್ತನು?

ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವು ನಿನ್ನಿಚ್ಛೆ ಹೋಗೆಂದ (ಆದಿ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಷ್ಮನು ಪಲ್ಲಕ್ಕಿಯನ್ನು ತರಿಸಿ, ಕೋಲನ್ನು ಹಿಡಿದ ವಂದಿಮಾಗಧರು ಹೊಗಳುತಿರಲು, ಯೋಜನಗಂಧಿಯನ್ನು ಕರೆದುಕೊಂಡು ಬಂದು ಶಂತನುವಿನೊಡನೆ ಮದುವೆ ಮಾಡಿಸಿದನು. ಭೀಷ್ಮನು ಮಾಡಿದ ಪ್ರತಿಜ್ಞೆಯನ್ನು ಕೇಳಿದ ಶಂತನು ಅವನಿಗೆ ನಿನ್ನಿಚ್ಛೆ ಬಂದಾಗ ಮರಣ ಬರಲಿ ಎಂಬ ವರವನ್ನು ಕೊಟ್ಟನು.

ಅರ್ಥ:
ತರಿಸು: ಬರೆಮಾಡು; ದಂಡಿ: ಕೋಲು; ದಂಡಿಗೆ: ಪಲ್ಲಕ್ಕಿ; ಚರ: ಸೇವಕ; ಉಗ್ಗಡಣೆ: ಕೂಗು; ಸರಸಿರುಹಮುಖಿ: ಕಮಲದಂತ ಮುಖವುಳ್ಳವಳು, ಸುಂದರಿ, ಹೆಣ್ಣು; ಮದುವೆ: ವಿವಾಹ; ಪಿತ: ತಮ್ದೆ; ಉರವಣಿಸು: ಉತ್ಸಾಹ, ಆತುರಿಸು; ಮಗ: ಪುತ್ರ; ನುಡಿ: ಮಾತಾಡು; ಭಾಷೆ: ನುಡಿ; ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ವರ: ಅನುಗ್ರಹ, ಕೊಡುಗೆ; ಮರಣ: ಸಾವು; ಇಚ್ಛೆ: ಆಸೆ; ಹೋಗು: ತೆರಳು;

ಪದವಿಂಗಡಣೆ:
ತರಿಸಿದನು+ ದಂಡಿಗೆಯ +ದಂಡಿಯ
ಚರರ +ನೆಲನ್+ಉಗ್ಗಡಣೆಯಲಿ +ಸರ
ಸಿರುಹಮುಖಿಯನು +ತಂದು+ ಮದುವೆಯ +ಮಾಡಿದನು +ಪಿತಗೆ
ಉರವಣಿಸಿ +ಮಗ +ನುಡಿದ +ಭಾಷೆಯನ್
ಅರಸ +ಕೇಳಿದು +ಬಳಿಕ +ಭೀಷ್ಮಗೆ
ವರವನಿತ್ತನು+ ಮರಣವು +ನಿನ್ನಿಚ್ಛೆ+ ಹೋಗೆಂದ

ಅಚ್ಚರಿ:
(೧) ದಂಡಿ ಪದದ ಬಳಕೆ – ದಂಡಿಗೆಯ ದಂಡಿಯ ಚರರ
(೨) ಯೋಜನಗಂಧಿಯನ್ನು ಕರೆದ ಪರಿ – ಸರಸಿರುಹಮುಖಿ

ಪದ್ಯ ೨೦: ಧೃತರಾಷ್ಟ್ರನು ಯಾರ ತಲೆಯನ್ನು ನೇವರಿಸಿದನು?

ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ (ಗದಾ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನರಮನೆಯನ್ನು ಹೊಕ್ಕು, ಸ್ತ್ರೀಯರನ್ನು ಪಲ್ಲಕ್ಕಿಗಳಲ್ಲಿ ಅವರವರ ಮನೆಗೆ ಕಳುಹಿಸಿದನು. ಧೃತರಾಷ್ಟ್ರನು ಬಂದವರಾರು ಎಂದು ಉತ್ಸಾಹದಿಂದ ಕೇಳಲು ಸಂಜಯನು ಒಡೆಯಾ ನಾನು ಎಂದು ಹೇಳಲು, ಧೃತರಾಷ್ಟ್ರನು ಉತ್ಸಾಹದಿಂದ ಅಪ್ಪಾ ಸಂಜಯ ಬಾ ಬಾ ಎಂದು ಆತನ ತಲೆಯನ್ನು ನೇವರಿಸಿದನು.

ಅರ್ಥ:
ಬಂದು: ಆಗಮಿಸು; ಅಂಧ: ಕುರುಡ; ನೃಪ: ರಾಜ; ಮಂದಿರ: ಆಲಯ; ಹೊಕ್ಕು: ಸೇರು; ಅಖಿಳ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ಕಳುಹಿದ: ತೆರಳು, ಹೊರಗಡೆ ಅಟ್ಟು; ದಂಡಿಗೆ: ಪಲ್ಲಕ್ಕಿ; ಮನೆ: ಆಲಯ, ಗೃಹ; ಜೀಯ: ಒಡೆಯ; ಉತ್ಸಾಹ: ಸಂಭ್ರಮ; ತಡವು: ನೇವರಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ಬಂದು +ಸಂಜಯನ್+ಅಂಧ+ನೃಪತಿಯ
ಮಂದಿರವ+ ಹೊಕ್ಕ್+ಅಖಿಳ +ನಾರೀ
ವೃಂದವನು +ಕಳುಹಿದನು +ದಂಡಿಗೆಗಳಲಿ+ ಮನೆಮನೆಗೆ
ಬಂದರಾರ್+ಎನೆ +ಸಂಜಯನು +ಜೀಯ್
ಎಂದಡ್+ಉತ್ಸಾಹದಲಿ +ಬಂದೈ
ತಂದೆ +ಸಂಜಯ +ಬಾಯೆನುತ +ತಡವಿದನು +ಬೋಳೈಸಿ

ಅಚ್ಚರಿ:
(೧) ಧೃತರಾಷ್ಟ್ರನನ್ನು ಕರೆದ ಪರಿ – ಅಂಧ ನೃಪತಿ, ಜೀಯ
(೨) ಅಕ್ಕರೆಯನ್ನು ತೋರುವ ಪರಿ – ಬಾಯೆನುತ ತಡವಿದನು ಬೋಳೈಸಿ

ಪದ್ಯ ೧೮: ಪಾಳೆಯದ ಐಶ್ವರ್ಯವು ಯಾವುದನ್ನು ಮೀರಿಸುವಂತಿತ್ತು?

ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ (ಗದಾ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಪಾಳೆಯಕ್ಕೂ ಹಸ್ತಿನಾವತಿಯ ಮಹಾದ್ವಾರಕ್ಕೂ ಪಲ್ಲಕ್ಕಿ ಬಂಡಿ, ಹೊರೆಯೆತ್ತುಗಳು, ಕಂಬಿಗಳು ಸಂದಣಿಸಿದವು. ಏನು ಹೇಳಲಿ ರಾಜ ಜನಮೇಜಯ, ರತ್ನಾಕರವಾದ ಸಮುದ್ರದ ವೈಭವವನ್ನು ಮಿರಿಸುವ ಪಾಳೆಯದ ಐಶ್ವರ್ಯವು ಶೂನ್ಯವಾದ ಅರಮನೆಗೆ ಹೋಯಿತು.

ಅರ್ಥ:
ಪಾಳೆಯ: ಬಿಡಾರ; ಗಜಪುರ: ಹಸ್ತಿನಾಪುರ; ಅಂಕ: ಸ್ಪರ್ಧೆ, ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ಕೀಲಿಸು: ಜೋಡಿಸು; ದಂಡಿಗೆ: ಪಲ್ಲಕ್ಕಿ; ಸಂದಣಿ: ಗುಂಪು; ಸರಕು: ಸಾಮಾನು; ಬಂಡಿ: ರಥ; ತಲೆ: ಶಿರ; ಕಂಬಿ: ಲೋಹದ ತಂತಿ; ಹೇಳು: ತಿಳಿಸು; ಸಮುದ್ರ: ಸಾಗರ; ವಿಭವ: ಸಿರಿ, ಸಂಪತ್ತು; ಏಳು: ಹತ್ತು; ಸಿರಿ: ಐಶ್ವರ್ಯ; ಶೂನ್ಯ: ಬರಿದಾದುದು; ಆಲಯ: ಮನೆ; ಜೋಡಿಸು: ಕೂಡಿಸು; ಕ್ಷಿತಿಪ: ರಾಜ;

ಪದವಿಂಗಡಣೆ:
ಪಾಳೆಯಕೆ +ಗಜಪುರದವ್ +ಅಂಕಕೆ
ಕೀಲಿಸಿತು +ದಂಡಿಗೆಯ +ಸಂದಣಿ
ಮೇಲು+ಸರಕಿನ +ಬಂಡಿ +ತಲೆವೊರೆಯೆತ್ತು +ಕಂಬಿಗಳ
ಹೇಳಲೇನು +ಸಮುದ್ರ +ವಿಭವವನ್
ಏಳಿಸುವ +ಪಾಳೆಯದ +ಸಿರಿ +ಶೂ
ನ್ಯಾಲಯಕೆ +ಜೋಡಿಸಿತಲೈ +ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ರೂಪಕದ ಪ್ರಯೋಗ – ಸಮುದ್ರ ವಿಭವವನೇಳಿಸುವ ಪಾಳೆಯದ ಸಿರಿ ಶೂನ್ಯಾಲಯಕೆ ಜೋಡಿಸಿತಲೈ

ಪದ್ಯ ೩೬: ಭಾನುಮತಿಗೆ ಯಾವ ಸಂದೇಶವನ್ನು ನೀಡಲು ದುರ್ಯೋಧನನು ಹೇಳಿದನು?

ತೆಗಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ (ಗದಾ ಪರ್ವ, ೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಮ್ಮ ಪಾಳೆಯವನ್ನು ತೆರವು ಮಾಡಿಸಿ ಹಸ್ತಿನಾಪುರಕ್ಕೆ ಕಳುಹಿಸು. ದುಶ್ಯಾಸನ ಕರ್ಣರ ರಾಣೀವಾಸವನ್ನು ಊರಿಗೆ ಕಳಿಸು. ಪಾಂಡವರ ವಿಜಯ ವಾರ್ತೆಯನ್ನು ಹಬಿಸಬೇಡ. ಭಾನುಮತಿಯು ನಂಬುವಂತೆ ಮಾತಾಡಿ ಸಮಾಧಾನ ಪಡಿಸು ಎಂದು ದುರ್ಯೋಧನನು ಹೇಳಿದನು.

ಅರ್ಥ:
ತೆಗಸು: ಹೊರತರು; ಪಾಳೆಯ: ಬೀಡು, ಶಿಬಿರ; ಗಜ: ಆನೆ; ನಗರ: ಊರು; ಐದು: ಹೋಗಿಸೇರು; ರಾಣಿ: ಅರಸಿ; ದಂಡಿಗೆ: ಮೇನಾ, ಪಲ್ಲಕ್ಕಿ; ಕಳುಹಿಸು: ತೆರಳು; ಸೂತಸುತ: ಕರ್ಣ; ಸೂತ: ಸಾರಥಿ; ಸುತ: ಮಗ; ಆದಿ: ಮೊದಲಾದ; ಹಗೆ: ವೈರಿ, ಶತ್ರು; ವಿಜಯ: ಗೆಲುವು; ಹರಹು: ವಿಸ್ತಾರ, ವೈಶಾಲ್ಯ; ನಂಬು: ವಿಶ್ವಾಸವಿಡು; ನುಡಿ: ಮಾತು; ಬಗೆ: ಎಣಿಸು; ಸಂತೈಸು: ಸಾಂತ್ವನಗೊಳಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ತೆಗಸು +ಪಾಳೆಯವೆಲ್ಲವನು +ಗಜ
ನಗರಿಗ್+ಐದಿಸು +ರಾಣಿಯರ +ದಂ
ಡಿಗೆಯ +ಕಳುಹಿಸು +ಸೂತಸುತ +ದುಶ್ಯಾಸನಾದಿಗಳ
ಹಗೆಯ +ವಿಜಯವ +ಹರಹದಿರು +ನಂ
ಬುಗೆಯ +ನುಡಿಯಲಿ +ಭಾನುಮತಿಯರ
ಬಗೆಯ +ಸಂತೈಸೆಂದು+ ಬೋಳೈಸಿದನು +ಸಂಜಯನ

ಅಚ್ಚರಿ:
(೧) ಹಗೆ, ನಂಬುಗೆ, ಬಗೆ, ದಂಡಿಗೆ – ಪ್ರಾಸ ಪದಗಳು
(೨) ಸಂತೈಸು, ಬೋಳೈಸು – ಸಮಾನಾರ್ಥಕ ಪದ

ಪದ್ಯ ೨೫: ಭಾನುಮತಿ ಏಕೆ ಸುಮ್ಮನಿದ್ದಳು?

ಸಾಕು ಸಾಕೀ ಮಾತಿನಲಿ ಜಗ
ದೇಕ ರಾಜ್ಯದ ಪಟ್ಟವಾಯ್ತವಿ
ವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ
ಮೂಕಭಾವದ ದೀಕ್ಷೆ ತನಗೆಂ
ದಾ ಕಮಲಮುಖಿಯಿದ್ದಳಿತ್ತಲು
ನೂಕಿದವು ದಂಡಿಗೆಗಳರಮನೆಯಿಂದ ಸಂದಣಿಸಿ (ಅರಣ್ಯ ಪರ್ವ, ೨೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿ, ಸಾಕು ಸಾಕು ನೀವಾಡಿದ ಮಾತಿನಿಂದ ನನಗೆ ಏಕಚಕ್ರಾಧಿಪತ್ಯ ದೊರೆತಂತಾಯಿತು, ಅವಿವೇಕಿಗಳಿಗೆ ಅಧಿದೈವತೆಯಾದ ನನಗೆ ಇದೇನು ಹೆಚ್ಚಿನದಲ್ಲ. ಇನ್ನು ನಾನು ಮೂಕತನದ ಪಟ್ಟ ಕಟ್ಟಿಕೊಂಡಿರುತ್ತೇನೆ, ಎಂದು ಚಿಂತಿಸಿ ಭಾನುಮತಿಯು ಸುಮ್ಮನಿದ್ದಳು. ಇತ್ತ ಅರಮನೆಯಿಂದ ಕೌರವನಿದ್ದ ಬಳಿಗೆ ಪಲ್ಲಕ್ಕಿಗಳು ಬಂದವು.

ಅರ್ಥ:
ಸಾಕು: ನಿಲ್ಲಿಸು, ತಡೆ; ಮಾತು: ನುಡಿ; ಜಗ: ಪ್ರಪಂಚ; ರಾಜ್ಯ: ರಾಷ್ಟ್ರ; ಪಟ್ಟ: ಸಿಂಹಾಸನ ಗದ್ದುಗೆ, ಕಿರೀಟ; ಅವಿವೇಕ: ಒಳಿತನ್ನು ತಿಳಿಯಲಾರದವ; ಅಧಿದೈವ: ಮೂಲ ದೈವ; ಈಸು: ಇಷ್ಟು; ಹಿರಿದು: ಹೆಚ್ಚಿನದು; ಮೂಕ: ಮಾತನಾಡದ ಸ್ಥಿತಿ; ದೀಕ್ಷೆ: ನಿಯಮ; ಕಮಲಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು (ದ್ರೌಪದಿ); ನೂಕು: ತಳ್ಳು; ದಂಡಿಗೆ: ಪಲ್ಲಕ್ಕಿ; ಅರಮನೆ: ರಾಜರ ವಾಸಸ್ಥಾನ; ಸಂದಣಿ: ಗುಂಪು;

ಪದವಿಂಗಡಣೆ:
ಸಾಕು +ಸಾಕ್+ಈ +ಮಾತಿನಲಿ +ಜಗ
ದೇಕ +ರಾಜ್ಯದ +ಪಟ್ಟವಾಯ್ತ್+ಅವಿ
ವೇಕಿಗಳಿಗ್+ಅಧಿದೈವ +ತಾನ್+ಎನಗ್+ಈಸು +ಹಿರಿದಲ್ಲ
ಮೂಕಭಾವದ +ದೀಕ್ಷೆ +ತನಗೆಂದ್
ಆ+ ಕಮಲಮುಖಿ+ಇದ್ದಳ್+ಇತ್ತಲು
ನೂಕಿದವು +ದಂಡಿಗೆಗಳ್+ಅರಮನೆಯಿಂದ +ಸಂದಣಿಸಿ

ಅಚ್ಚರಿ:
(೧) ಭಾನುಮತಿ ತನ್ನನ್ನ ಹಂಗಿಸಿದ ಪರಿ – ಅವಿವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ

ಪದ್ಯ ೩೦: ಯುವತಿಯರು ಹೇಗೆ ಪ್ರಯಾಣ ಪ್ರಾರಂಭಿಸಿದರು?

ಸವಡಿಯಾನೆಯ ಮೇಲೆ ಗಣಿಕಾ
ನಿವಹ ದಂಡಿಗೆಗಳಲಿ ಕೆಲಬರು
ಯುವತಿಯರು ಕೆಲರಶ್ವಚಯದಲಿ ರಥನಿಕಾಯದಲಿ
ಯುವತಿಮಯವೋ ಸೃಷ್ಟಿ ಗಣಿಕಾ
ಯುವತಿಯರ ನೆಲನೀದುದೋ ದಿಗು
ವಿವರ ಕರೆದುದೊ ಕಾಂತೆಯರನೆನೆ ಕವಿದುದಗಲದಲಿ (ಅರಣ್ಯ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಜೋಡಿ ಆನೆಗಳ ಮೇಲೆ, ಪಲ್ಲಕ್ಕಿಗಳಲ್ಲಿ, ಕುದುರೆಗಳ ಮೇಲೆ, ರಥಗಲಲ್ಲಿ, ಗಣಿಕಾಯುವತಿಯರು ಹೋಗುತ್ತಿದ್ದರೆ, ಸೃಷ್ಟಿಯಲ್ಲಿರುವುದು ಬರೀ ಯುವತಿಯರೋ, ನೆಲವು ಇಷ್ಟು ಜನ ಯುವತಿಯರನ್ನು ಸೃಜಿಸಿತೋ ಅಥವಾ ದಿಕ್ಕುಗಳು ಇವರನ್ನು ಕರೆದುಕೊಂಡು ಬಂದವೋ ಎನ್ನುವ ಹಾಗೆ ಕಾಣುತ್ತಿತ್ತು.

ಅರ್ಥ:
ಸವಡಿ: ಜೊತೆ, ಜೋಡಿ; ಆನೆ: ಗಜ; ಗಣಿಕ: ವೇಶ್ಯೆ; ನಿವಹ: ಗುಂಪು; ದಂಡಿಗೆ: ಪಲ್ಲಕ್ಕಿ; ಕೆಲಬರು: ಕೆಲವರು; ಯುವತಿ: ಹೆಣ್ಣು; ಅಶ್ವ: ಕುದುರೆ; ಚಯ: ಸಮೂಹ, ರಾಶಿ; ರಥ: ಬಂಡಿ; ನಿಕಾಯ: ಗುಂಪು; ಮಯ: ತುಂಬಿರುವುದು; ಸೃಷ್ಟಿ: ಉತ್ಪತ್ತಿ, ಹುಟ್ಟು; ನೆಲ:ಭೂಮಿ; ದಿಗು: ದಿಕ್ಕು; ವಿವರ: ವಿಸ್ತಾರ, ಹರಹು; ಕರೆದು: ಬರೆಮಾಡು; ಕಾಂತೆ: ಹೆಣ್ಣು; ಕವಿ: ಆವರಿಸು; ಅಗಲ: ವಿಸ್ತಾರ;

ಪದವಿಂಗಡಣೆ:
ಸವಡಿ+ಆನೆಯ +ಮೇಲೆ +ಗಣಿಕಾ
ನಿವಹ +ದಂಡಿಗೆಗಳಲಿ+ ಕೆಲಬರು
ಯುವತಿಯರು +ಕೆಲರ್+ಅಶ್ವ+ಚಯದಲಿ +ರಥ+ನಿಕಾಯದಲಿ
ಯುವತಿಮಯವೋ +ಸೃಷ್ಟಿ +ಗಣಿಕಾ
ಯುವತಿಯರ +ನೆಲನೀದುದೋ +ದಿಗು
ವಿವರ +ಕರೆದುದೊ +ಕಾಂತೆಯರನ್+ಎನೆ +ಕವಿದುದ್+ಅಗಲದಲಿ

ಅಚ್ಚರಿ:
(೧) ೩ ಸಾಲುಗಳಲ್ಲಿ ಯುವತಿ ಮೊದಲ ಪದವಾಗಿರುವುದು
(೨) ಗಣಿಕಾ – ೧, ೪ ಸಾಲಿನ ಕೊನೆ ಪದ
(೩) ಚಯ, ನಿಕಾಯ, ನಿವಹ; ಕಾಂತೆ, ಯುವತಿ – ಸಮನಾರ್ಥಕ ಪದ

ಪದ್ಯ ೮: ಕೃಷ್ಣನು ಪಾಂಡವರನ್ನು ಹೇಗೆ ಮನ್ನಿಸಿದನು?

ಇಳಿದು ದಂಡಿಗೆಯಿಂದ ಕರುಣಾ
ಜಲಧಿ ಬಂದನು ಕಾಲುನಡೆಯಲಿ
ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ
ಬಳಿಕ ಭೀಮಾರ್ಜುನರ ಯಮಳರ
ನೊಲಿದುಮನ್ನಿಸಿ ಸತಿಯಲೋಚನ
ಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ (ಅರಣ್ಯ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಪಲ್ಲಕ್ಕಿಯಿಂದಿಳಿದು, ಕಾಲು ನಡೆಯಲ್ಲಿ ಬಂದು, ಇದೇನು ಇಂತಹ ರಭಸ ಎನ್ನುತ್ತಾ ಧರ್ಮಜನನ್ನು ಬಿಗಿದಪ್ಪಿದನು, ಭೀಮಾರ್ಜುನ ನಕುಲ ಸಹದೇವರನ್ನು ಮನ್ನಿಸಿ, ದ್ರೌಪದಿಯ ಕಣ್ಣೀರನ್ನು ತನ್ನ ಉತ್ತರಿಯದಿಂದ ಒರೆಸಿ ಸಂತೈಸಿದನು.

ಅರ್ಥ:
ಇಳಿದು: ಕೆಳಗೆ ಬಂದು; ದಂಡಿಗೆ: ಪಲ್ಲಕ್ಕಿ; ಕರುಣ: ದಯೆ; ಜಲಧಿ: ಸಾಗರ; ಬಂದು: ಆಗಮಿಸು; ಕಾಲುನಡೆ: ಚಲಿಸು, ಮುನ್ನಡೆ; ಸೆಳೆ: ಎಳೆತ, ಸೆಳೆತ; ಬಿಗಿ: ಭದ್ರ, ಗಟ್ಟಿ; ಅಪ್ಪು: ಆಲಿಂಗನ; ಆಸುರ: ರಭಸ; ಬಳಿಕ: ನಂತರ; ಯಮಳ: ಅಶ್ವಿನಿ ದೇವತೆಗಳು, ಅವಳಿ ಮಕ್ಕಳು; ಒಲಿದು: ಪ್ರೀತಿಸು; ಮನ್ನಿಸು: ಗೌರವಿಸು; ಸತಿ: ಗರತಿ; ಲೋಚನ: ಕಣ್ಣು; ಜಲ: ನೀರು; ಸೆರಗು: ಬಟ್ಟೆಯ ಅಂಚು; ಒರಸು: ಸಾರಿಸು, ಅಳಿಸು; ಸಂತೈಸು: ಸಾಂತ್ವನಗೊಳಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ಇಳಿದು +ದಂಡಿಗೆಯಿಂದ +ಕರುಣಾ
ಜಲಧಿ +ಬಂದನು +ಕಾಲುನಡೆಯಲಿ
ಸೆಳೆದು +ಬಿಗಿ+ಅಪ್ಪಿದನ್ +ಇದೇನ್+ಆಸುರವ್+ಇದೇನೆನುತ
ಬಳಿಕ+ ಭೀಮಾರ್ಜುನರ +ಯಮಳರನ್
ಒಲಿದು+ಮನ್ನಿಸಿ +ಸತಿಯ+ಲೋಚನ
ಜಲವ +ಸೆರಗಿನೊಳ್+ಒರಸಿ +ಸಂತೈಸಿದನು +ಬಾಲಕಿಯ

ಅಚ್ಚರಿ:
(೧) ಕೃಷ್ಣನ ಸರಳತೆ – ಕರುಣಾಜಲಧಿ ಬಂದನು ಕಾಲುನಡೆಯಲಿ ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ; ಸತಿಯಲೋಚನಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ

ಪದ್ಯ ೧೩: ಊರ್ವಶಿಯು ಅರ್ಜುನನ ಅರಮನೆಗೆ ಹೇಗೆ ಬಂದಳು?

ಬಂದಳೂರ್ವಶಿ ಬಳ್ಳಿಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾರವದ ಸೊಗ
ಸಿಂದ ಶಬ್ದ ಬ್ರಹ್ಮ ಸೋತುದು ಸೊರಹಲೇನೆಂದ (ಅರಣ್ಯ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬಳ್ಳಿ ಮಿಂಚುಗಳೊಡನೆ ಬರುವ ಚಿಕ್ಕ ಮೋಡದಂತೆ ಊರ್ವಶಿಯು ಪಲ್ಲಕ್ಕಿಯಲ್ಲಿ ಬಂದು ಅರ್ಜುನನ ಅರಮನೆಯ ಮುಂದಿಳಿದಳು. ಅವಳು ಬರುತ್ತಿರಲು ಎಚ್ಚರಿಕೆ, ಪಾದಗಳಿಗೆ ಎಚ್ಚರಿಕೆ ಎನ್ನುವ ಸಖಿಯರ ಕಾಲುಗೆಜ್ಜೆಗಳ ನಾದಕ್ಕೆ ಶಬ್ದಬ್ರಹ್ಮವೇ ಸೋತಿತು, ಕೇವಲ ಮಾತುಗಳಿಂದ ಅದನ್ನು ಹೇಳುವುದು ಹೇಗೆ?

ಅರ್ಥ:
ಬಂದಳು: ಆಗಮಿಸು; ಬಳ್ಳಿ: ಲತೆ; ಮಿಂಚು: ಹೊಳಪು, ಕಾಂತಿ; ಮಂದಿ: ಜನಗಳ ಗುಂಪು; ಮುರಿದು: ಸೀಳು; ಇಳಿ: ಮರಿ: ಚಿಕ್ಕ; ಮುಗಿಲು: ಆಗಸ; ದಂಡಿಗೆ: ಪಲ್ಲಕ್ಕಿ; ರಾಜಭವನ: ಅರಮನೆ; ಮುಂದೆ: ಎದುರು; ಪಾಯವಧಾರು: ಎಚ್ಚರಿಕೆ; ಸತಿ: ಹೆಂಗಸು; ಸಂದಣಿ: ಗುಂಪು; ಸಿಂಜಾರವ: ಬಿಲ್ಲಿನ ಝೇಂಕಾರ; ಸೊಗಸು: ಅಂದ; ಶಬ್ದ: ರವ, ಧ್ವನಿ; ಬ್ರಹ್ಮ: ಅಜ; ಸೋತು: ಪರಾಭವ; ಸೊರಹು: ಅತಿಯಾಗಿ ಮಾತನಾಡುವಿಕೆ;

ಪದವಿಂಗಡಣೆ:
ಬಂದಳ್+ಊರ್ವಶಿ +ಬಳ್ಳಿ+ಮಿಂಚಿನ
ಮಂದಿಯಲಿ +ಮುರಿದಿಳಿವ +ಮರಿ +ಮುಗಿ
ಲಂದದಲಿ+ ದಂಡಿಗೆಯನ್+ಇಳಿದಳು+ ರಾಜಭವನದಲಿ
ಮುಂದೆ +ಪಾಯವಧಾರು+ ಸತಿಯರ
ಸಂದಣಿಯ +ಸಿಂಜಾರವದ+ ಸೊಗ
ಸಿಂದ +ಶಬ್ದ+ ಬ್ರಹ್ಮ +ಸೋತುದು +ಸೊರಹಲೇನೆಂದ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಂದಿಯಲಿ ಮುರಿದಿಳಿವ ಮರಿ ಮುಗಿಲಂದದಲಿ
(೨) ಸ ಕಾರದ ಪದಗಳ ಸಾಲು – ಸತಿಯರ ಸಂದಣಿಯ ಸಿಂಜಾರವದ ಸೊಗಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ

ಪದ್ಯ ೫: ಶ್ರೀಕೃಷ್ಣನು ಪಾಂಡವರನ್ನು ನೋಡಲು ಎಲ್ಲಿಗೆ ಹೊರಟನು?

ಏನನೆಂಬನು ಜೀಯ ಕಡು ದು
ಮ್ಮಾನದಲಿ ಹೊರವಂಟು ಬಂದನು
ದಾನವಾಂತಕನೈದಿದವು ದಂಡಿಗೆಗಳರಸಿಯರ
ಆ ನಿಖಿಳ ನೃಪವರ್ಗ ಯಾದವ
ಸೇನೆ ಕವಿದುದು ಪಾಂಡುಪುತ್ರರ
ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ (ಅರಣ್ಯ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ಏನೆಂದು ಹೇಳಲಿ ರಾಜ ಜನಮೇಜಯ, ಅತೀವ ದುಃಖದಿಂದ ಕೃಷ್ಣನು ನೊಂದು ದ್ವಾರಕೆಯನ್ನು ಬಿಟ್ಟು ಪಾಂಡವರನ್ನು ಭೇಟಿಯಾಗಲು ಹೊರಟನು. ಅವನ ಸುತ್ತ ರಾಣಿವಾಸದವರು ಪಲ್ಲಕ್ಕಿಯಲ್ಲಿ ಜೊತೆಗೂಡಿದರು. ಯಾದವ ರಾಜರು, ಸೈನ್ಯಗಳು ಹಿಂಬಾಲಿಸಿದವು. ಹಲವು ಪಯಣಗಳನ್ನು ಮಾಡಿ ಶ್ರೀಕೃಷ್ಣನು ಪಾಂಡವರಿದ್ದ ಕಾಮ್ಯಕವನವನ್ನು ಸೇರಿದನು.

ಅರ್ಥ:
ಜೀಯ: ಒಡೆಯ; ಕಡು: ಬಹಳ; ದುಮ್ಮಾನ: ದುಃಖ; ಹೊರವಂಟ: ಗಮಿಸು; ಬಂದನು: ಆಗಮಿಸು; ದಾನವಾಂತಕ: ರಾಕ್ಷಸರಿಗೆ ಯಮನಾಗಿರುವವ (ಕೃಷ್ಣ); ಐದು: ಹೋಗಿ ಸೇರು; ದಂಡಿಗೆ: ಪಲ್ಲಕ್ಕಿ; ಅರಸಿ: ರಾಣಿ; ನಿಖಿಳ: ಎಲ್ಲಾ; ನೃಪ: ರಾಜ; ವರ್ಗ: ಗುಂಪು; ಸೇನೆ: ಸೈನ್ಯ; ಕವಿದು: ಮುಸುಕು; ಪುತ್ರ: ಮಕ್ಕಳು; ಕಾನನ: ಅರಣ್ಯ; ಕರುಣೆ: ದಯೆ; ಹೊಕ್ಕು: ಸೇರು; ಹಲವು: ಬಹಳ; ಪಯಣ: ಪ್ರಯಾಣ, ಸಂಚಾರ;

ಪದವಿಂಗಡಣೆ:
ಏನನೆಂಬನು +ಜೀಯ +ಕಡು +ದು
ಮ್ಮಾನದಲಿ +ಹೊರವಂಟು+ ಬಂದನು
ದಾನವಾಂತಕನ್+ಐದಿದವು +ದಂಡಿಗೆಗಳ್+ಅರಸಿಯರ
ಆ +ನಿಖಿಳ +ನೃಪವರ್ಗ +ಯಾದವ
ಸೇನೆ +ಕವಿದುದು +ಪಾಂಡುಪುತ್ರರ
ಕಾನನವ+ ಕರುಣಾಳು +ಹೊಕ್ಕನು +ಹಲವು +ಪಯಣದಲಿ

ಅಚ್ಚರಿ:
(೧) ದಾನವಾಂತಕ, ಕರುಣಾಳು – ಕೃಷ್ಣನನ್ನು ಕರೆದ ಪರಿ

ಪದ್ಯ ೨೭: ಪ್ರಾತಿಕಾಮಿಕನು ಹೇಗೆ ಇಂದ್ರಪ್ರಸ್ಥವನ್ನು ಸೇರಿದನು?

ಇವರ ವಂಚಿಸಿ ರಜನಿ ಮಧ್ಯದೊ
ಳವನ ಕಳುಹಿದೊಡಾತನೈತಂ
ದಿವರ ಪಾಳೆಯದೊಳಗೆ ಹೊಕ್ಕನು ಹಲವು ಪಯಣದಲಿ
ಅವನಿಪತಿ ಮರುದಿವಸ ಬೀಡೆ
ತ್ತುವ ನಿಧಾನವನರಿತು ರಾಯನ
ಭವನಿಕೆಯ ಹೊರಬಾಹೆಯಲಿ ದಂಡಿಗೆಯನವನಿಳಿದ (ಸಭಾ ಪರ್ವ, ೧೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭೀಷ್ಮಾದಿಗಳನ್ನು ವಂಚಿಸಿ, ಪ್ರಾತಿಕಾಮಿಕನನ್ನು ನಡುರಾತ್ರಿಯಲ್ಲಿ ಪಾಂಡವರ ಬಳಿಗೆ ಕಳುಹಿಸಿದನು. ಹಲವು ಪಯಣಗಳಲ್ಲಿ ಇಂದ್ರಪ್ರಸ್ಥಕ್ಕೆ ಹೋಗುವ ದಾರಿಯಲ್ಲಿದ್ದ ಪಾಂಡವರ ಬೀಡನ್ನು ಹೊಕ್ಕನು. ಮರುದಿವಸ ಪಾಂಡವರ ಬೀಡು ಪ್ರಯಾಣವನ್ನಾರಂಭಿಸುವ ಮೊದಲೇ ಯುಧಿಷ್ಠಿರನ ಬೀಡಿನ ಮುಂದೆ ಬಂದಿಳಿದನು.

ಅರ್ಥ:
ವಂಚಿಸು: ಮೋಸಮಾಡು; ರಜನಿ: ಕತ್ತಲೆ, ರಾತ್ರಿ; ಮಧ್ಯ: ನಡುವೆ; ಕಳುಹು: ಬೀಳ್ಕೊಡು; ಪಾಳೆ: ಸೀಮೆ; ಹೊಕ್ಕು: ಸೇರು; ಹಲವು: ಬಹಳ; ಪಯಣ: ಪ್ರಯಾಣ; ಅವನಿಪತಿ: ರಾಜ; ಅವನಿ: ಭೂಮಿ; ಪತಿ: ಒಡೆಯ; ಮರುದಿವಸ: ನಾಳೆ; ಬೀಡು: ಮನೆ, ವಾಸಸ್ಥಳ, ವಸತಿ; ನಿಧಾನ: ವಿಳಂಬ, ಸಾವಕಾಶ; ಅರಿ: ತಿಳಿ; ರಾಯ: ದೊರೆ; ರಾಯಭವನ: ಅರಮನೆ; ಹೊರಬಾಹೆ: ಹೊರಗಡೆ; ದಂಡಿ: ದ್ವಾರಪಾಲಕ; ಐತರು: ಬಾ, ಬಂದು ಸೇರು;

ಪದವಿಂಗಡಣೆ:
ಇವರ +ವಂಚಿಸಿ+ ರಜನಿ+ ಮಧ್ಯದೊಳ್
ಅವನ +ಕಳುಹಿದೊಡ್+ಆತನ್+ಐತಂದ್
ಇವರ+ ಪಾಳೆಯದೊಳಗೆ+ ಹೊಕ್ಕನು+ ಹಲವು+ ಪಯಣದಲಿ
ಅವನಿಪತಿ+ ಮರುದಿವಸ+ ಬೀಡೆ
ತ್ತುವ +ನಿಧಾನವನ್+ಅರಿತು +ರಾಯನ
ಭವನಿಕೆಯ+ ಹೊರಬಾಹೆಯಲಿ+ ದಂಡಿಗೆಯನ್+ಅವನ್+ಇಳಿದ

ಅಚ್ಚರಿ:
(೧) ರಾತ್ರಿಯಲ್ಲಿ ಹೊರಟನು ಎನ್ನುವ ಪರಿ – ರಜನಿ ಮಧ್ಯದೊಳವನ ಕಳುಹಿದೊಡಾತನೈತಂ
ದಿವರ ಪಾಳೆಯದೊಳಗೆ ಹೊಕ್ಕನು