ಪದ್ಯ ೧೯: ಮುನಿಗಳು ಪಾಂಡು ರಾಜನಿಗೆ ಏನು ಹೇಳಿದರು?

ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕಿದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿವ ಮೇಲುಸುರ
ಎತ್ತಿ ಹಾಯ್ಕುವ ಕೊರಳ ಬಿಕ್ಕುಳ
ತೆತ್ತುವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ (ಆದಿ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆಗ ಅವರು ನಾವೇ ಪಾಪಿಗಳೇ? ನೀನೇ ಉತ್ತಮನೇ? ಇದೆಲ್ಲಾ ಏಕೆ ಎನ್ನುತ್ತಾ ತೇಲುಗಣ್ಣು ಮಾಡುತ್ತಾ, ಕ್ಷಣಕ್ಷಣಕ್ಕೂ ಮೇಲುಸಿರು ಬರುತ್ತಿರಲು, ಕತ್ತು ಮೇಲಕ್ಕೆ ಹೋಗುತ್ತಿರಲು, ಬಿಕ್ಕುಳಿಕೆ ಬರುತ್ತಿರಲು ರೋಷಗೊಂಡು ಉರಿಮಾತುಗಳನ್ನು ರಾಜನಿಗೆ ಹೇಳಿದರು.

ಅರ್ಥ:
ಮತ್ತೆ: ಪುನಃ; ಪಾಪಿ: ದುಷ್ಟ; ಉತ್ತಮ: ಶ್ರೇಷ್ಠ; ಸಾಕು: ನಿಲ್ಲು; ಮರಳು: ಹಿಂದಿರುಗು; ಕಂಗಳು: ಕಣ್ಣು; ಅಡಿಗಡಿಗೆ: ಮತ್ತೆ ಮತ್ತೆ; ಉಗಿ: ಹೊರಹಾಕು; ಉಸುರು: ವಾಯು; ಮೇಲುಸುರು: ನಿಟ್ಟುಸಿರು; ಹಾಯ್ಕು: ಇಡು, ಇರಿಸು; ಕೊರಳು: ಕಂಠ; ಬಿಕ್ಕುಳ: ಬಿಕ್ಕುಳಿಕೆ, ನೀರಿಗೆ ಕಾಯುವ ಸ್ಥಿತಿ; ಅಧರ: ತುಟಿ; ರೋಷ: ಕೋಪ; ಹೊಗೆ: ಧೂಮ; ಸುತ್ತು: ಆವರಿಸು; ಉರಿ: ಬೆಂಕಿ; ಸೂಸು: ಹರಡು; ಅವನಿಪ: ರಾಜ;

ಪದವಿಂಗಡಣೆ:
ಮತ್ತೆ +ನಾವೇ +ಪಾಪಿಗಳೆ +ನೀನ್
ಉತ್ತಮನಲಾ + ಸಾಕ್+ಇದೇತಕ್
ಎನುತ್ತ+ ಮರಳುವ +ಕಂಗಳ್+ಅಡಿಗಡಿಗ್+ಉಗಿವ +ಮೇಲ್+ಉಸುರ
ಎತ್ತಿ+ ಹಾಯ್ಕುವ +ಕೊರಳ +ಬಿಕ್ಕುಳ
ತೆತ್ತುವ್+ಅಧರದ +ರೋಷದಲಿ +ಹೊಗೆ
ಸುತ್ತಿದ್+ಉರಿವಾತುಗಳ +ಸೂಸಿದರ್+ ಅವನಿಪನ +ಮೇಲೆ

ಅಚ್ಚರಿ:
(೧) ಕೋಪದ ಲಕ್ಷಣವನ್ನು ವರ್ಣಿಸುವ ಪರಿ – ಮರಳುವ ಕಂಗಳಡಿಗಡಿಗುಗಿವ ಮೇಲುಸುರ ಎತ್ತಿ ಹಾಯ್ಕುವ ಕೊರಳ ಬಿಕ್ಕುಳತೆತ್ತುವಧರದ ರೋಷದಲಿ ಹೊಗೆ ಸುತ್ತಿದುರಿವಾತುಗಳ ಸೂಸಿದರ

ಪದ್ಯ ೬೬: ಗಾಂಧಾರಿಯಲ್ಲಿ ಯಾವ ಝಳವು ಕುಗ್ಗಿತು?

ನನೆದುದಂತಃಕರಣ ಕರುಣಾ
ವಿನುತ ರಸದಲಿ ಖತಿಯ ಝಳ ಝೊ
ಮ್ಮಿನಲಿ ಜಡಿದುದು ಜಾರಿತಗ್ಗದ ಪುತ್ರಶತಶೋಕ
ಜನಪ ಕೇಳೈ ರಾಜಸದ ಸಂ
ಜನಿತ ತಾಮಸಬೀಜಶೇಷದ
ವನಜಮುಖಿ ನೋಡಿದಳು ನಖಪಂಕ್ತಿಗಳನವನಿಪನ (ಗದಾ ಪರ್ವ, ೧೧ ಸಂಧಿ, ೬೬ ಪದ್ಯ)

ತಾತ್ಪರ್ಯ:
ಗಾಂಧಾರಿಯ ಅಂತಃಕರಣವು ನನೆದುಹೋಯಿತು. ಕರುಣಾರಸದಿಂದ ಕೋಪದ ತಾಪ ಕುಗ್ಗಿತು. ರಾಜ ಜನಮೇಜಯ ಕೇಳು, ರಾಜಸಗುಣದಿಂದ ಜನಿಸಿದ ಕೋಪಶೇಷದಿಂದ (ತಾಮಸ ಬೀಜ) ಅವಳು ಧರ್ಮಜನ ಉಗುರುಗಳ ಸಾಲನ್ನು ನೋಡಿದಳು.

ಅರ್ಥ:
ನನೆ: ತೋಯು, ಒದ್ದೆಯಾಗು; ಅಂತಃಕರಣ: ಒಳ ಮನಸ್ಸು; ಕರುಣೆ: ದಯೆ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ರಸ: ಸಾರ; ಖತಿ: ಕೋಪ; ಝಳ: ಪ್ರಕಾಶ; ಜಡಿ: ಅಲ್ಲಾಡು, ನಡುಗು, ಝಳಪಿಸು; ಜಾರು: ಕಡಿಮೆಯಾಗು, ಬೀಳು; ಅಗ್ಗ: ಶ್ರೇಷ್ಠ; ಪುತ್ರ: ಸುತ; ಶತ: ನೂರು; ಶೋಕ: ದುಃಖ; ಜನಪ: ರಾಜ; ಕೇಳು: ಆಲಿಸು; ರಾಜಸ: ಕಾಮ ಕ್ರೋಧಗಳಿಂದ ಕೂಡಿದ ಗುಣ, ರಜೋಗುಣ; ಸಂಜನಿತ: ಹುಟ್ಟಿದ; ತಾಮಸ: ಕತ್ತಲೆ, ಅಂಧಕಾರ; ಬೀಜ: ಮೂಲ, ಕಾರಣ; ವನಜಮುಖಿ: ಕಮಲದಂತ ಮುಖವುಳ್ಳವಳು; ನೋಡು: ವೀಕ್ಷಿಸು; ನಖ: ಉಗುರು; ಪಂಕ್ತಿ: ಸಾಲು; ಅವನಿಪ: ರಾಜ;

ಪದವಿಂಗಡಣೆ:
ನನೆದುದ್+ಅಂತಃಕರಣ +ಕರುಣಾ
ವಿನುತ +ರಸದಲಿ +ಖತಿಯ +ಝಳ +ಝೊ
ಮ್ಮಿನಲಿ +ಜಡಿದುದು +ಜಾರಿತ್+ಅಗ್ಗದ+ ಪುತ್ರ+ಶತ+ಶೋಕ
ಜನಪ +ಕೇಳೈ +ರಾಜಸದ +ಸಂ
ಜನಿತ +ತಾಮಸ+ಬೀಜ+ಶೇಷದ
ವನಜಮುಖಿ +ನೋಡಿದಳು +ನಖ+ಪಂಕ್ತಿಗಳನ್+ಅವನಿಪನ

ಅಚ್ಚರಿ:
(೧) ಗಾಂಧಾರಿಯ ಭಾವವನ್ನು ವಿವರಿಸುವ ಪರಿ – ರಾಜಸದ ಸಂಜನಿತ ತಾಮಸಬೀಜಶೇಷದ
ವನಜಮುಖಿ
(೨) ಜ ಕಾರದ ಸಾಲು ಪದ – ಝಳ ಝೊಮ್ಮಿನಲಿ ಜಡಿದುದು ಜಾರಿತಗ್ಗದ

ಪದ್ಯ ೪೨: ಯಾವ ಸದ್ದು ಆಕಾಶವನ್ನು ವ್ಯಾಪಿಸಿತು?

ಮತ್ತೆ ಹೂವಿನ ಮಳೆಗಳಾತನ
ನೆತ್ತಿಯಲಿ ಸುರಿದವು ಮುರಾಂತಕ
ನತ್ತ ತಿರುಗಿದನವನಿಪತಿ ಕರತಳವ ತಳುಕಿಕ್ಕಿ
ಮುತ್ತಿದರು ಮಾಗಧರು ವಂದಿಗ
ಳೆತ್ತಣದು ನಾನರಿಯೆನರಸ ವಿ
ಯತ್ತಲವನಳ್ಳಿರಿದುದಾ ಸ್ತುತಿಪಾಠಕರ ರಭಸ (ಗದಾ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಮೇಲೆ ಮತ್ತೆ ಹೂ ಮಳೆಗಳು ವರ್ಷಿಸಿದವು. ಶ್ರೀ ಕೃಷ್ಣನು ಧರ್ಮಜನ ಕೈಗೆ ಕೈಗೂಡಿಸಿ ಹೊರಟು ಹೋದನು. ವಂದಿಮಾಗಧರು ಕೌರವನನ್ನು ಹೊಗಳಿದ ಸದ್ದು ಆಕಾಶವನ್ನು ವ್ಯಾಪಿಸಿತು.

ಅರ್ಥ:
ಮತ್ತೆ: ಪುನಃ; ಹೂವು: ಮಲರ್; ಮಳೆ: ವರ್ಷ; ನೆತ್ತಿ: ಶಿರ; ಸುರಿ: ವರ್ಷಿಸು; ಮುರಾಂತಕ: ಕೃಷ್ಣ; ತಿರುಗು: ಸುತ್ತು; ಅವನಿಪತಿ: ರಾಜ; ಕರತಳ: ಹಸ್ತ; ತಳುಕು: ಹೆಣಿಕೆ, ಜೋಡಣೆ; ಮುತ್ತು: ಆವರಿಸು; ವಂದಿ: ಹೊಗಳುಭಟ್ಟ; ಅರಿ: ತಿಳಿ; ಅರಸ: ರಾಜ; ಅಳ್ಳಿರಿ: ನಡುಗಿಸು, ಚುಚ್ಚು; ಸ್ತುತಿಪಾಠಕ: ಹೊಗಳುಭಟ್ಟ; ರಭಸ: ವೇಗ;

ಪದವಿಂಗಡಣೆ:
ಮತ್ತೆ +ಹೂವಿನ +ಮಳೆಗಳ್+ಆತನ
ನೆತ್ತಿಯಲಿ +ಸುರಿದವು +ಮುರಾಂತಕನ್
ಅತ್ತ+ ತಿರುಗಿದನ್+ಅವನಿಪತಿ +ಕರತಳವ +ತಳುಕಿಕ್ಕಿ
ಮುತ್ತಿದರು+ ಮಾಗಧರು +ವಂದಿಗಳ್
ಎತ್ತಣದು+ ನಾನರಿಯೆನ್+ಅರಸ +ವಿ
ಯತ್ತಲವನ್+ಅಳ್ಳಿರಿದುದಾ +ಸ್ತುತಿಪಾಠಕರ +ರಭಸ

ಅಚ್ಚರಿ:
(೧) ಮಾಗಧ, ವಂದಿ, ಸ್ತುತಿಪಾಠಕ – ಸಾಮ್ಯಾರ್ಥ ಪದಗಳು

ಪದ್ಯ ೭: ಕೌರವನು ಎಲ್ಲಿ ಸೇರಿದನೆಂದು ಸಂಜಯನು ತಿಳಿಸಿದನು?

ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ (ಗದಾ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ನನ್ನನ್ನು ಸಂತೈಸುತ್ತಾ ಒಂದು ಸರೋವರದ ತೀರಕ್ಕೆ ಕರೆದುಕೊಂಡು ಹೋಗಿ, ಗದೆಯನ್ನು ಕಂಕುಳಲ್ಲಿ ಇಟ್ಟುಕೊಂಡು, ತಂದೆಗೆ ಈ ವಿಷಯವನ್ನು ಹೇಳು ಎಂದು ನನಗೆ ತಿಳಿಸಿ, ಎಲ್ಲಾ ಕಡೆಯೂ ನೋಡಿ, ನೀರಿನಲ್ಲಿ ಮುಳುಗಿದನು. ಆನಂತರ ನನಗೆ ಮತ್ತೆ ಕಾಣಿಸಲಿಲ್ಲ ಎಂದು ಸಂಜಯನು ಕೃಪ ಅಶ್ವತ್ಥಾಮರಿಗೆ ತಿಳಿಸಿದನು.

ಅರ್ಥ:
ಬಂದು: ಆಗಮಿಸು; ಸಂತ: ಸೌಖ್ಯ, ಕ್ಷೇಮ; ಸರಸಿ: ಸರೋವರ; ತಡಿ: ದಡ; ಅಳವು: ಅಳತೆ, ನೆಲೆ; ನಿಂದು: ನಿಲ್ಲು; ಸಂವರಿಸು: ಸಜ್ಜು ಮಾಡು; ಗದೆ: ಮುದ್ಗರ; ಬಾಹು: ತೋಳು; ಬಾಹುಮೂಲ: ಕಂಕಳು; ತಂದೆ: ಜನಕ; ಅರುಹು: ತಿಳಿಸು, ಹೇಳು; ಹಿಂದೆ: ಭೂತ; ಮುಂದೆ: ಎದುರು; ಎಡಬಲ: ಅಕ್ಕ ಪಕ್ಕ; ನೀರು: ಜಲ; ಹೊಕ್ಕು: ಸೇರು; ಕಾಣೆ: ತೊರಾದಾಗು; ಅವನಿಪನ: ರಾಜ;

ಪದವಿಂಗಡಣೆ:
ಬಂದನ್+ಎನ್ನನು +ಸಂತವಿಡುತಲದ್
ಒಂದು +ಸರಸಿಯ +ತಡಿಯಲ್+ಅಳವಡೆ
ನಿಂದು +ಸಂವರಿಸಿದನು+ ಗದೆಯನು +ಬಾಹುಮೂಲದಲಿ
ತಂದೆಗ್+ಅರುಹೆಂದ್+ಎನಗೆ +ಹೇಳಿದು
ಹಿಂದೆ +ಮುಂದ್+ಎಡ+ಬಲನನಾರೈ
ದಂದವಳಿಯದೆ +ನೀರ+ ಹೊಕ್ಕನು +ಕಾಣೆನ್+ಅವನಿಪನ

ಅಚ್ಚರಿ:
(೧) ಎಲ್ಲಾ ದಿಕ್ಕುಗಳು ಎಂದು ಹೇಳುವ ಪರಿ – ಹಿಂದೆ ಮುಂದೆಡಬಲ
(೨) ಕಂಕಳು ಎಂದು ಹೇಳುವ ಪರಿ – ಬಾಹುಮೂಲ

ಪದ್ಯ ೬೨: ದುರ್ಯೋಧನನೇಕೆ ಭಯಗೊಂಡನು?

ಏನ ಹೇಳುವೆನವನಿಪನ ಮದ
ದಾನೆ ಮುರಿದವು ಭೀಮಸೇನನೊ
ವೈನತೇಯನೊ ಕರಿಗಳೋ ಕಾಳೋರಗನ ದಳವೊ
ಮಾನನಿಧಿ ಮುರಿವಡೆದನೈ ವೈ
ರಾನುಬಂಧದ ಬೇಗುದಿಯ ದು
ಮ್ಮಾನ ದಳವೇರಿದುದು ಹೇರಿತು ಭೀತಿ ಭೂಪತಿಗೆ (ಗದಾ ಪರ್ವ, ೧ ಸಂಧಿ, ೬೨ ಪದ್ಯ)

ತಾತ್ಪರ್ಯ:
ಭೀಮನು ಗರುಡ, ಆನೆಗಳು ಕೃಷ್ಣ ಸರ್ಪಗಳು, ಯಾವಾಗ ಆನೆಗಳು ಮುರಿದುಬಿದ್ದವೋ, ಕೌರವನು ಪರಾಜಿತನಾದನು. ಪಾಂಡವ ವೈರ್ದ ಕುದಿತದ ದುಃಖವು ಹೆಚ್ಚಿ, ಭಯವು ಆವರಿಸಿತು.

ಅರ್ಥ:
ಹೇಳು: ತಿಳಿಸು; ಅವನಿಪ: ರಾಜ; ಮದ: ಅಮಲು; ಆನೆ: ಗಜ; ಮುರಿ: ಸೀಳು; ವೈನತೇಯ: ಗರುಡ; ಕರಿ: ಆನೆ; ಕಾಳೋರಗ: ಕೃಷ್ಣ ಸರ್ಪ; ದಳ: ಸೈನ್ಯ; ಮಾನನಿಧಿ: ಮಾನವನ್ನೇ ಐಶ್ವರ್ಯವಾಗಿಸಿಕೊಂಡವ (ದುರ್ಯೋಧನ); ಮುರಿ: ಸೀಳು; ವೈರ: ಶತ್ರು; ಅನುಬಂಧ: ಸಂಬಂಧ, ವಿಶೇಷ ಪ್ರೀತಿ; ಬೇಗುದಿ: ತೀವ್ರವಾದ ಬೇಗೆ, ಅತ್ಯುಷ್ಣ; ದುಮ್ಮಾನ: ದುಃಖ; ಏರು: ಹೆಚ್ಚಾಗು; ಹೇರು: ಹೊರೆ, ಭಾರ; ಭೂಪತಿ: ರಾಜ;

ಪದವಿಂಗಡಣೆ:
ಏನ +ಹೇಳುವೆನ್+ಅವನಿಪನ+ ಮದ
ದಾನೆ +ಮುರಿದವು +ಭೀಮಸೇನನೊ
ವೈನತೇಯನೊ +ಕರಿಗಳೋ +ಕಾಳೋರಗನ+ ದಳವೊ
ಮಾನನಿಧಿ+ ಮುರಿವಡೆದನೈ +ವೈರ
ಅನುಬಂಧದ +ಬೇಗುದಿಯ+ ದು
ಮ್ಮಾನ +ದಳವೇರಿದುದು +ಹೇರಿತು +ಭೀತಿ +ಭೂಪತಿಗೆ

ಅಚ್ಚರಿ:
(೧) ಹೋಲಿಸುವ ಪರಿ – ಭೀಮಸೇನನೊ ವೈನತೇಯನೊ ಕರಿಗಳೋ ಕಾಳೋರಗನ ದಳವೊ

ಪದ್ಯ ೫೬: ಭೀಮನು ಆನೆಗಳನ್ನು ಹೇಗೆ ಹೊಯ್ದನು?

ಅವನಿಪನ ಹಿಂದಿಕ್ಕಿ ಗಜಯೂ
ಥವ ವಿಭಾಡಿಸಿ ಹಿಂಡ ಕೆದರಿದ
ನವಗಡಿಸಿದನು ಹಾರಲೂದಿದನೊದೆದು ಬೊಬ್ಬಿರಿದ
ತಿವಿದನಣಸಿನಲೂರಿ ಮೊನೆಯಲಿ
ಸವಡಿಯಾನೆಯನೆತ್ತಿದನು ಬಲ
ಬವರಿಯೆಡಬವರಿಯಲಿ ತಡೆಗಾಲ್ವೊಯ್ದನಾ ಭೀಮ (ಗದಾ ಪರ್ವ, ೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಭೀಮನು ಧರ್ಮಜನನ್ನು ಹಿಂದಕ್ಕಿಟ್ಟು ಗಜಸೈನ್ಯವನ್ನು ಅದು ಚೆದುರಿ ಹೋಗುವಂತೆ ಬಡಿದನು. ಆನೆಗಳನ್ನು ಹಾರಿಹೋಗುವಂತೆ ಮಾಡಿ ಹೊಡೆದು ಬೊಬ್ಬಿರಿದನು. ಅವನ್ನು ಅಣಸಿನಿಂದ ತಿವಿದು, ಗದೆಯ ಮೊನೆಯಿಂದ ಎರಡೆರಡು ಆನೆಗಳನ್ನೆತ್ತಿ ಎಸೆದನು. ಎಡಬಲದ ಬವರಿಯಲ್ಲಿ ತಡೆಗಾಲು ಕೊಟ್ಟು ಹೊಡೆದನು.

ಅರ್ಥ:
ಅವನಿಪ: ರಾಜ; ಹಿಂದಿಕ್ಕು: ಹಿಂದೆ ಸರಿಸು; ಗಜ: ಆನೆ; ಯೂಥ: ಗುಂಪು, ಹಿಂಡು; ವಿಭಾಡಿಸು: ನಾಶಮಾಡು; ಹಿಂಡ: ಗುಂಪು; ಕೆದರು: ಹರಡು; ಅವಗಡಿಸು: ಕಡೆಗಣಿಸು; ಹಾರು: ಲಂಘಿಸು; ಊದು: ಕೂಗು; ಒದೆ: ತಳ್ಳು, ನೂಕು; ಬೊಬ್ಬಿರಿ: ಗರ್ಜಿಸು; ತಿವಿ: ಚುಚ್ಚು; ಅಣಸು: ಆನೆಯ ದಂತಕ್ಕೆ ಅಳವಡಿಸುವ ಲೋಹದ ಕಟ್ಟು; ಮೊನೆ: ತುದಿ, ಕೊನೆ, ಹರಿತವಾದ; ಸವಡಿ: ಜೊತೆ, ಜೋಡಿ; ಎತ್ತು: ಮೇಲಕ್ಕೆ ತರು; ಬಲ: ಶಕ್ತಿ; ಬವರಿ: ತಿರುಗುವುದು; ತಡೆಗಾಲು: ಅಡ್ಡಮಾಡುತ್ತಿರವ ಕಾಲು; ಹೊಯ್ದು: ಹೊಡೆ;

ಪದವಿಂಗಡಣೆ:
ಅವನಿಪನ +ಹಿಂದಿಕ್ಕಿ +ಗಜ+ಯೂ
ಥವ +ವಿಭಾಡಿಸಿ +ಹಿಂಡ +ಕೆದರಿದನ್
ಅವಗಡಿಸಿದನು +ಹಾರಲ್+ ಊದಿದನ್+ಒದೆದು +ಬೊಬ್ಬಿರಿದ
ತಿವಿದನ್+ಅಣಸಿನಲ್+ಊರಿ +ಮೊನೆಯಲಿ
ಸವಡಿ+ ಆನೆಯನ್+ಎತ್ತಿದನು +ಬಲ
ಬವರಿ+ಎಡಬವರಿಯಲಿ +ತಡೆಗಾಲ+ಒಯ್ದನಾ +ಭೀಮ

ಅಚ್ಚರಿ:
(೧) ಯೂಥ, ಹಿಂಡು – ಸಾಮ್ಯಾರ್ಥ ಪದ
(೨) ಬಲಬವರಿ, ಎಡಬವರಿ – ಪದಗಳ ಬಳಕೆ

ಪದ್ಯ ೪: ಶಕುನಿಯು ಎಷ್ಟು ಸೈನ್ಯದೊಡನೆ ನಿಂತಿದ್ದನು?

ಕರಿಘಟೆಗಳೈನೂರು ಮೂವ
ತ್ತೆರಡು ಸಾವಿರ ಪಾಯದಳ ಸಾ
ವಿರದ ನೂರು ವರೂಥ ವಂಗಡದವನಿಪರು ಸಹಿತ
ತುರುಕ ಬರ್ಬರ ಪಾರಸೀಕರ
ತುರಗವೈಸಾವಿರ ಸಹಿತ ಮೋ
ಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ (ಗದಾ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಐನೂರು ಆನೆಗಳು, ಮೂವತ್ತೆರಡು ಸಾವಿರ ಕಾಲಾಳುಗಳು, ಸಾವಿರದನೂರು ರಥಗಳು, ಕೆಲ ರಾಜರು, ತುರುಕ, ಬರ್ಬರ ಪಾರಸೀಕರ ಐದು ಸಾವಿರ ಕುದುರೆಗಳೊಡನೆ ಶಕುನಿಯು ಸೈನ್ಯದ ಬಲಭಾಗದಲ್ಲಿದ್ದನು.

ಅರ್ಥ:
ಕರಿಘಟೆ: ಆನೆಗಳ ಗುಂಪು; ಸಾವಿರ: ಸಹಸ್ರ; ಪಾಯದಳ: ಕಾಲಾಳು; ನೂರು: ಶತ; ವರೂಥ: ತೇರು, ರಥ; ಅವನಿಪ: ರಾಜ; ಸಹಿತ: ಜೊತೆ; ತುರಗ: ಅಶ್ವ; ಸಹಿತ: ಜೊತೆ; ಮೋಹರ: ಯುದ್ಧ; ಥಟ್ಟು: ಗುಂಪು; ಬಲ: ಸೈನ್ಯ; ಬಾಹೆ: ಪಕ್ಕ, ಪಾರ್ಶ್ವ;

ಪದವಿಂಗಡಣೆ:
ಕರಿಘಟೆಗಳ್+ಐನೂರು +ಮೂವ
ತ್ತೆರಡು +ಸಾವಿರ +ಪಾಯದಳ+ ಸಾ
ವಿರದ +ನೂರು +ವರೂಥ +ವಂಗಡದ್+ಅವನಿಪರು+ ಸಹಿತ
ತುರುಕ +ಬರ್ಬರ +ಪಾರಸೀಕರ
ತುರಗವ್+ಐಸಾವಿರ+ ಸಹಿತ+ ಮೋ
ಹರಿಸಿ +ನಿಂದನು +ಶಕುನಿ +ಥಟ್ಟಿನ +ಬಲದ +ಬಾಹೆಯಲಿ

ಅಚ್ಚರಿ:
(೧) ಐನೂರು ಐಸಾವಿರ – ಐ ಪದದ ಬಳಕೆ

ಪದ್ಯ ೧: ಉಭಯ ಸೇನೆಗಳ ಯುದ್ಧವು ಹೇಗಾಯಿತು?

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಶಲ್ಯರ ಸಮರಕಿವರನು
ಕೂಲವಾದರಲೈ ಕೃಪಾದಿಗಳಿತ್ತಲಾಚೆಯಲಿ
ಮೇಳುವಿಸಿತರ್ಜುನ ನಕುಲ ಪಾಂ
ಚಾಲ ಬಲಭೀಮಾದಿಗಳು ಪದ
ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ (ಶಲ್ಯ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ಧರ್ಮಜನಿಗೆ ಅರ್ಜುನ ಭೀಮ, ನಕುಲ ಪಾಂಚಾಲ ಸೇನೆಗಳು ಒತ್ತಾಸೆಯಾಗಿ ಬಂದವು. ಕೃಪಾದಿಗಳು ಶಲ್ಯನ ಕಡೆಗೆ ಬಂದರು. ತುಳಿತದ ಕಾಲುಧೂಳು ಆಕಾಶ ಭೂಮಿಗಳನ್ನು ತುಂಬಲು ಎರಡು ಸೇನೆಗಳು ವೀರಾವೇಶದಿಂದ ವಿರೋಧಿಗಳನ್ನು ಹೊಡೆದಪ್ಪಳಿಸಿದವು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಭೂಪಾಲ: ರಾಜ; ಸಮರ: ಯುದ್ಧ; ಕೂಲ: ದಡ, ಮೊತ್ತ; ಆದಿ: ಮುಂತಾದ; ಆಚೆ: ಹೊರಗೆ; ಮೇಳ: ಗುಂಪು; ಪದ: ಪಾದ; ಧೂಳು: ಮಣ್ಣಿನ ಪುಡಿ; ಜಗ: ಪ್ರಪಂಚ; ಮುಳುಗು: ತೋಯು, ಒದ್ದೆಯಾಗು; ಜೋಡಿಸು: ಕೂಡಿಸು; ಜಡಿ:ಕೊಲ್ಲು, ಹೊಡೆ; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಭೂ
ಪಾಲ +ಶಲ್ಯರ +ಸಮರಕ್+ಇವರನು
ಕೂಲವಾದರಲೈ +ಕೃಪಾದಿಗಳ್+ಇತ್ತಲ್+ಆಚೆಯಲಿ
ಮೇಳುವಿಸಿತ್+ಅರ್ಜುನ+ ನಕುಲ+ಪಾಂ
ಚಾಲ +ಬಲಭೀಮಾದಿಗಳು +ಪದ
ಧೂಳಿಯಲಿ +ಜಗ +ಮುಳುಗೆ +ಜೋಡಿಸಿ +ಜಡಿದುದ್+ಉಭಯಬಲ

ಅಚ್ಚರಿ:
(೧) ರೂಪಕದ ಪ್ರಯೋಗ – ಪದಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ
(೨) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೩) ಭೂಪಾಲ, ಪಾಂಚಾಲ – ಪ್ರಾಸ ಪದ

ಪದ್ಯ ೬೨: ಯುದ್ಧದಲ್ಲಿ ಯಾವ ಓಕುಳಿಯಾಟವಾಡಿತು?

ಮತ್ತೆ ತರುಬಿದನವನಿಪನನಿದು
ಜೊತ್ತಿನಾಹವವಲ್ಲಲೇ ಮಿಗೆ
ಹೊತ್ತ ಹೊರಿಗೆಯ ನೆರವಣಿಗೆ ಸೇನಾಧಿಪತ್ಯವಲೆ
ತೆತ್ತಸಿದನಂಬಿನಲಿ ಜೋಡಿನ
ಹತ್ತರಿಕೆಯಲಿ ಚಿಪ್ಪನೊಡೆದೊಳು
ನೆತ್ತರೋಕುಳಿಯಾಡಿದವು ಮಾದ್ರೇಶನಂಬುಗಳು (ಶಲ್ಯ ಪರ್ವ, ೨ ಸಂಧಿ, ೬೨ ಪದ್ಯ)

ತಾತ್ಪರ್ಯ:
ಮಾದ್ರೇಶನು ಧರ್ಮಜನನ್ನು ಮತ್ತೆ ತರುಬಿದನು. ಇದು ವಂಚನೆಯ ಮೇಲ್ನೋಟದ ಯುದ್ಧವಲ್ಲ. ಇದು ಸೇನಾಧಿಪತಿಯ ಯುದ್ಧ ಎಂದು ಮತ್ತೆ ಯುಧಿಷ್ಠಿರನನ್ನು ಹೊಡೆಯಲು, ಬಾಣಗಳು ಕವಚವನ್ನು ಭೇದಿಸಿ ರಕ್ತದ ಓಕುಳಿಯನ್ನಾಡಿದವು.

ಅರ್ಥ:
ಮತ್ತೆ: ಪುನಃ; ತರುಬು: ತಡೆ, ನಿಲ್ಲಿಸು; ಅವನಿಪ: ರಾಜ; ಜೊತ್ತು: ಮೋಸ, ಆಸರೆ; ಆಹವ: ಯುದ್ಧ; ಮಿಗೆ: ಮತ್ತು, ಅಧಿಕ; ಹೊರಿಗೆ: ಭಾರ, ಹೊರೆ; ನೆರವಣಿಗೆ: ಪರಿಪೂರ್ಣತೆ; ತೆತ್ತಿಸು: ಜೋಡಿಸು, ಕೂಡಿಸು; ಅಂಬು: ಬಾಣ; ಜೋಡು: ಜೊತೆ; ಹತ್ತರಿಕೆ: ಸಣ್ಣ ಉಳಿ; ಚಿಪ್ಪು: ಕವಚ; ಒಡೆ: ಸೀಳು; ನೆತ್ತರು: ರಕ್ತ; ಓಕುಳಿ: ಉತ್ಸವ ಸಂದರ್ಭಗಳಲ್ಲಿ ಒಬ್ಬರ ಮೇಲೆ ಒಬ್ಬರು ಎರಚುವ ಬಣ್ಣದ ನೀರು; ಆಡು: ಕ್ರೀಡೆ; ಅಂಬು: ಬಾಣ;

ಪದವಿಂಗಡಣೆ:
ಮತ್ತೆ +ತರುಬಿದನ್+ಅವನಿಪನನ್+ಇದು
ಜೊತ್ತಿನ+ಆಹವವಲ್ಲ್+ಅಲೇ +ಮಿಗೆ
ಹೊತ್ತ +ಹೊರಿಗೆಯ +ನೆರವಣಿಗೆ +ಸೇನಾಧಿಪತ್ಯವಲೆ
ತೆತ್ತಸಿದನ್+ಅಂಬಿನಲಿ +ಜೋಡಿನ
ಹತ್ತರಿಕೆಯಲಿ +ಚಿಪ್ಪನೊಡೆದೊಳು
ನೆತ್ತರ್+ಓಕುಳಿ+ಆಡಿದವು +ಮಾದ್ರೇಶನ್+ಅಂಬುಗಳು

ಅಚ್ಚರಿ:
(೧) ಯುದ್ಧದ ವಿವರಣೆ – ತೆತ್ತಸಿದನಂಬಿನಲಿ ಜೋಡಿನ ಹತ್ತರಿಕೆಯಲಿ ಚಿಪ್ಪನೊಡೆದೊಳು ನೆತ್ತರೋಕುಳಿಯಾಡಿದವು

ಪದ್ಯ ೫೮: ಪಾಂಡವ ಸೇನೆಯು ಯಾವ ಮಾತುಗಳನ್ನಾಡುತ್ತಿತ್ತು?

ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ (ಶಲ್ಯ ಪರ್ವ, ೨ ಸಂಧಿ, ೫೮ ಪದ್ಯ)

ತಾತ್ಪರ್ಯ:
ಶಲ್ಯನು ಧರ್ಮಜನನ್ನು ಗೆದ್ದ, ಛೇ, ಇಲ್ಲ ಅವನು ನಮ್ಮ ದಳಪತಿಯನ್ನು ಸೋಲಿಸಿದನು, ಧರ್ಮಜನು ಹೆದರಿದ, ಅಜೇಯನಾದ ಶಲ್ಯನು ಹೆದರಿದನು, ಎಂಬ ತರತರದ ಮಾತುಗಳನ್ನು ಪಾಂಡವ ಸೇನೆಯು ಆಡುತ್ತಿತ್ತು.

ಅರ್ಥ:
ಗೆಲಿ: ಜಯಿಸು; ಅವನಿಪ: ರಾಜ; ತಿಲಕ: ಶ್ರೇಷ್ಠ; ಫಡ: ತಿರಸ್ಕಾರದ ಮಾತು; ಸುತ: ಮಗ; ದಳಪತಿ: ಸೇನಾಧಿಪತಿ; ಅದ್ದು: ತೋಯಿಸು, ಮುಳುಗು; ಪರಿಭವ: ಅನಾದರ, ತಿರಸ್ಕಾರ; ಸಮುದ್ರ: ಸಾಗರ; ಅಳುಕು: ಹೆದರು; ನೃಪ: ರಾಜ; ಬಲಾಧಿಪ: ಪರಾಕ್ರಮಿ; ಉಲುಕು: ಅಲ್ಲಾಡು, ನಡುಗು; ಅಂಜು: ಹೆದರು; ಲಗ್ಗೆ: ಆಕ್ರಮಣ; ಅಳಿ: ನಾಶ; ಮಸಗು: ಹರಡು; ಕೆರಳು; ಮೈದೋರು: ಎದುರು ನಿಲ್ಲು; ಆಚೆ: ಹೊರಗಡೆ; ಸಂದಣಿ: ಗುಂಪು;

ಪದವಿಂಗಡಣೆ:
ಗೆಲಿದನೋ +ಮಾದ್ರೇಶನ್+ಅವನಿಪ
ತಿಲಕನನು +ಫಡ +ಧರ್ಮಸುತನ್+ಈ
ದಳಪತಿಯನ್+ಅದ್ದಿದನು +ಪರಿಭವಮಯ +ಸಮುದ್ರದಲಿ
ಅಳುಕಿದನು +ನೃಪನ್+ಈ+ ಬಲಾಧಿಪನ್
ಅಲುಕನ್+ಅಂಜಿದನೆಂಬ +ಲಗ್ಗೆಯಲ್
ಅಳಿ +ಮಸಗಿ +ಮೈದೋರಿತ್+ಆಚೆಯ +ಸೇನೆ +ಸಂದಣಿಸಿ

ಅಚ್ಚರಿ:
(೧) ರೂಪಕದ ಪ್ರಯೋಗ – ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
(೨) ಜೋಡಿ ಪದಗಳ ಬಳಕೆ – ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ