ಪದ್ಯ ೩೯: ಯಮನ ನಗರಿಗೆ ಎಷ್ಟು ಮಂದಿ ಹೋದರು?

ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ (ಗದಾ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐನೂರು ಆನೆಗಲೂ, ಸಾವಿರದ ಮುನ್ನೂರೆರಡು ರಥಗಳು, ಎಂಬತ್ತು ಸಾವಿರ ಕಾಲಾಳುಗಳು, ಯಮನಗರಿಗೆ ಹೋದರು. ಮತ್ತೆ ಸಾವಿರ ಕುದುರೆಗಳು, ನೂರು ರಥಗಳು ಇನ್ನೂರೆಂಟು ಆನೆಗಳು, ಲೆಕ್ಕವಿಲ್ಲದಷ್ಟು ಕಾಲಾಳುಗಳು ಅಲ್ಲಿಗೇ ಹೋದರು.

ಅರ್ಥ:
ಕರಿಘಟೆ: ಆನೆಗಳ ಗುಂಪು; ರಥ: ಬಂಡಿ; ಸಾವಿರ: ಸಹಸ್ರ; ತುರಗ: ಅಶ್ವ, ಕುದುರೆ; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಕಾಲಾಳು; ತೆರಳು: ಗಮಿಸು; ಅಂತಕಪುರ: ಯಮನ ಊರು, ನರಕ; ಪುನರಪಿ: ಮತ್ತೆ; ಮದ: ಮತ್ತು, ಅಮಲು; ಅಗಣಿತ: ಲೆಕ್ಕವಿಲ್ಲದ; ಪಾಯದಳ: ಕಾಲಾಳು;

ಪದವಿಂಗಡಣೆ:
ಕರಿಘಟೆಗಳ್+ಐನೂರು +ರಥ+ ಸಾ
ವಿರದ +ಮೂನೂರೆರಡು +ಸಾವಿರ
ತುರಗದಳವ್+ಎಂಬತ್ತು +ಸಾವಿರ +ವಿಗಡ +ಪಾಯದಳ
ತೆರಳಿತ್+ಅಂತಕಪುರಿಗೆ +ಪುನರಪಿ
ತುರಗ +ಸಾವಿರ +ನೂರು +ರಥ +ಮದ
ಕರಿಗಳ್+ಇನ್ನೂರೆಂಟು +ಸಾವಿರ್+ಅಗಣಿತ +ಪಾಯದಳ

ಅಚ್ಚರಿ:
(೧) ಕರಿ, ತುರಗ, ಪಾಯದಳ – ೧,೬; ೩,೫ ಸಾಲಿನ ಮೊದಲ ಪದ; ೩, ೬ ಸಾಲಿನ ಕೊನೆ ಪದ

ಪದ್ಯ ೭: ಕೌರವಸೇನೆಯು ಹೇಗೆ ಕಂಡಿತು?

ಹತ್ತು ಸಾವಿರದೇಳುನೂರರು
ವತ್ತು ಗಜ ಹನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ (ಶಲ್ಯ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ಹತ್ತು ಸಾವಿರದ ಏಳುನೂರು ಅರವತ್ತು ಆನೆಗಳು, ಹನ್ನೊಂದು ಸಾವಿರ ರಥಗಳು, ಒಂದು ಲಕ್ಷ ಕುದುರೆಗಳು, ಮೂರು ಕೋಟಿ ಕಾಲಾಳುಗಳು, ಶಲ್ಯನ ಆಜ್ಞೆಯನ್ನು ಕಾದು ನಿಂತರು ಸಾಗರದಂತಿದ್ದ ಕೌರವಸೇನೆ ಬತ್ತಿಹೋಗಿ ತಳದಲ್ಲಿ ನಿಂತ ನೀರಿನಂತೆ ಕಾಣಿಸಿತು.

ಅರ್ಥ:
ಸಾವಿರ: ಸಹಸ್ರ; ಗಜ: ಆನೆ; ಹತ್ತು: ಮೇಲೇರು; ರಥ: ಬಂಡಿ; ಎಣಿಸು: ಲೆಕ್ಕ ಹಾಕು; ಹಯ: ಕುದುರೆ; ಪತ್ತಿ: ಪದಾತಿ; ವರ್ತಿಸು: ಚಲಿಸು, ಗಮಿಸು; ದಳಪತಿ: ಸೇನಾಧಿಪತಿ; ಸಾಗರ: ಸಮುದ್ರ; ಬತ್ತು: ಬರಡಾಗು; ನಿಂದು: ನಿಲ್ಲು; ನೀರು: ಜಲ;

ಪದವಿಂಗಡಣೆ:
ಹತ್ತು+ ಸಾವಿರದ್+ಏಳುನೂರ್
ಅರುವತ್ತು +ಗಜ +ಹನ್ನೊಂದು +ಸಾವಿರ
ಹತ್ತಿದವು +ರಥವೆರಡು +ಲಕ್ಕವನ್+ಎಣಿಸಿದರು +ಹಯವ
ಪತ್ತಿ +ಮೂರೇ +ಕೋಟಿಯದು +ಕೈ
ವರ್ತಿಸಿತು +ದಳಪತಿಗೆ+ ಸಾಗರ
ಬತ್ತಲ್+ಎಡೆಯಲಿ +ನಿಂದ +ನೀರವೊಲಾಯ್ತು +ಕುರುಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಗರ ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ
(೨) ಹತ್ತು, ನೂರು, ಸಾವಿರ, ಲಕ್ಕ, ಕೋಟಿ – ಎಣಿಕೆಯ ಬಳಕೆ

ಪದ್ಯ ೨೦: ಪಾಂಚಾಲ ಸೈನ್ಯದ ನಷ್ಟವೆಷ್ಟು?

ಕರಿಗಳೈಸಾವಿರ ತುರಂಗಮ
ವೆರಡು ಸಾವಿರವೆಂಟು ಸಾವಿರ
ವರವರೂಥದ ಥಟ್ಟು ಮುರಿದುದು ಲಕ್ಷ ಪಾಯದಳ
ಅರಸುಗಳು ಮೂನೂರು ಪುನರಪಿ
ಕರಿ ತುರಗ ರಥ ಮತ್ತೆ ಮೂವ
ತ್ತೆರಡು ಸಾವಿರವಳಿದುದರಿಪಾಂಚಾಲ ಸೇನೆಯಲಿ (ದ್ರೋಣ ಪರ್ವ, ೧೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ಐದು ಸಾವಿರ ಆನೆಗಳು, ಎರಡು ಸಾವಿರ ಕುದುರೆಗಳು, ಎಂಟು ಸಾವಿರ ರಥಗಳು, ಲಕ್ಷ ಕಾಲಾಳುಗಳು, ಮುನ್ನೂರು ದೊರೆಗಳು ಮತ್ತೆ ಮೂವತ್ತೆರಡು ಸಾವಿರ ಚತುರಂಗ ಸೈನ್ಯ ಪಾಂಚಾಲ ಸೇನೆಯಲ್ಲಿ ನಾಶವಾಯಿತು.

ಅರ್ಥ:
ಕರಿ: ಆನೆ; ಸಾವಿರ: ಸಹಸ್ರ; ತುರಂಗ: ಅಶ್ವ; ವರ: ಶ್ರೇಷ್ಠ; ವರೂಥ: ರಥ, ಬಂಡಿ; ಥಟ್ಟು: ಗುಂಪು; ಮುರಿ: ಸೀಳು; ಪಾಯದಳ: ಸೈನ್ಯ; ಅರಸು: ರಾಜ; ಪುನರಪಿ: ಮತ್ತೆ; ಅಳಿದು: ಸಾವು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಕರಿಗಳ್+ಐಸಾವಿರ +ತುರಂಗಮವ್
ಎರಡು +ಸಾವಿರವ್+ಎಂಟು +ಸಾವಿರ
ವರ+ವರೂಥದ +ಥಟ್ಟು +ಮುರಿದುದು +ಲಕ್ಷ +ಪಾಯದಳ
ಅರಸುಗಳು +ಮೂನೂರು +ಪುನರಪಿ
ಕರಿ +ತುರಗ +ರಥ +ಮತ್ತೆ +ಮೂವ
ತ್ತೆರಡು +ಸಾವಿರವ್+ಅಳಿದುದ್+ಅರಿ+ಪಾಂಚಾಲ +ಸೇನೆಯಲಿ

ಅಚ್ಚರಿ:
(೧) ಸಾವಿರ – ೪ ಬಾರಿ ಪ್ರಯೋಗ

ಪದ್ಯ ೪೧: ಸೈಂಧವನ ತಲೆ ನೆಲಕ್ಕೆ ಬಿದ್ದರೆ ಏನಾಗುತ್ತದೆ?

ಬೀಳು ಬೀಳಭಿಮನ್ಯುವಿನ ವಧೆ
ಬಾಳಲೀವುದೆ ನಿನ್ನನೆನುತು
ಬ್ಬಾಳತನದಲಿ ಪಾರ್ಥ ಬೊಬ್ಬಿಡೆ ಕೃಷ್ಣ ಖಾತಿಯಲಿ
ಖೂಳ ಕೇಳಿಳೆಗವನ ತಲೆಯನು
ಬೀಳಿಕಿದನ ಕಪಾಲ ಸಾವಿರ
ಹೋಳಹುದು ತೊಡು ಪಾಪಿ ಬೇಗದಲಂಬ ಕಳುಹೆಂದ (ದ್ರೋಣ ಪರ್ವ, ೧೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನು ಸೈಂಧವನ ತಲೆಯನ್ನು ಬಾಣದಿಂದ ತೆಗೆದ ಮೇಲೆ, ಹಿಗ್ಗುತ್ತಾ, ಬೀಳು ಬೀಳು, ಅಭಿಮನ್ಯುವಿನ ವಧೆ ನಿನ್ನನ್ನು ಬಾಳಲು ಬಿಟ್ಟೀತೇ ಎಂದು ಹರ್ಷದಿಂದ ಕೂಗಲು, ಕೃಷ್ಣನು, ಅಯ್ಯೋ ಮೂಢನೇ, ಈ ಸೈಂಧವನ ತಲೆಯನ್ನು ನೆಲಕ್ಕೆ ಬೀಳಿಸಿದವನ ತಲೆ ಸಾವಿರ ಹೋಳಾಗುತ್ತದೆ, ಪಾಪಿ, ಬೇಗ ಬಾಣವನ್ನು ಹೂಡು ಎಂದು ಹೇಳಿದನು.

ಅರ್ಥ:
ಬೀಳು: ಕುಸಿ; ವಧೆ: ಸಾವು; ಬಾಳು: ಜೀವಿಸು; ಉಬ್ಬು: ಹಿಗ್ಗು; ಆಳತನ: ಶೌರ್ಯ, ಪರಾಕ್ರಮ; ಬೊಬ್ಬಿಡು: ಅಬ್ಬರಿಸು; ಖಾತಿ: ಕೋಪ; ಖೂಳ: ದುಷ್ಟ; ಕೇಳು: ಆಲಿಸು; ಇಳೆ: ಭೂಮಿ; ತಲೆ: ಶಿರ; ಹೋಳು: ತುಂಡು; ತೊಡು: ಧರಿಸು; ಬೇಗ: ತ್ವರಿತ; ಅಂಬು: ಬಾಣ; ಕಳುಹು: ಕಳಿಸು;

ಪದವಿಂಗಡಣೆ:
ಬೀಳು+ ಬೀಳ್+ಅಭಿಮನ್ಯುವಿನ +ವಧೆ
ಬಾಳಲ್+ಈವುದೆ +ನಿನ್ನನ್+ಎನುತ್
ಉಬ್ಬ್+ಆಳತನದಲಿ +ಪಾರ್ಥ +ಬೊಬ್ಬಿಡೆ +ಕೃಷ್ಣ +ಖಾತಿಯಲಿ
ಖೂಳ +ಕೇಳ್+ಇಳೆಗ್+ಅವನ +ತಲೆಯನು
ಬೀಳಿಕಿದನ +ಕಪಾಲ +ಸಾವಿರ
ಹೋಳಹುದು +ತೊಡು +ಪಾಪಿ +ಬೇಗದಲ್+ಅಂಬ +ಕಳುಹೆಂದ

ಅಚ್ಚರಿ:
(೧) ಕೃಷ್ಣನು ಅರ್ಜುನನಿಗೆ ಬಯ್ಯುವ ಪರಿ – ತೊಡು ಪಾಪಿ ಬೇಗದಲಂಬ ಕಳುಹೆಂದ
(೨) ಸೈಂಧವನಿಗಿದ್ದ ವರ – ಖೂಳ ಕೇಳಿಳೆಗವನ ತಲೆಯನು ಬೀಳಿಕಿದನ ಕಪಾಲ ಸಾವಿರ ಹೋಳಹುದು

ಪದ್ಯ ೪೬: ಅರ್ಜುನನು ಭೀಷ್ಮನ ಎಷ್ಟು ಬಿಲ್ಲನ್ನು ತುಂಡುಮಾಡಿದನು?

ಮತ್ತೆ ಹೊಸ ಚಾಪದಲಿ ಭೀಷ್ಮನು
ಮಿತ್ತು ಖತಿಗೊಂಡಂತೆ ಶರದಲಿ
ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ
ಮುತ್ತಯನ ಕರತಳದ ಧನುವನು
ಕತ್ತರಿಸಿದನು ಹಿಡಿಯಲೀಯದೆ
ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ (ಭೀಷ್ಮ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭೀಷ್ಮನು ಮತ್ತೆ ಹೊಸಬಿಲ್ಲನ್ನು ಹಿಡಿದು ಕೋಪಗೊಂಡು ಮೃತ್ಯುವಿನಂತೆ ಬಾಣವನ್ನು ಬಿಡಲು, ಅರ್ಜುನನು ಭೀಷ್ಮನ ಆ ಬಿಲ್ಲನ್ನು ಮುರಿದನು. ಹೀಗೆ ಭೀಷ್ಮನು ಹಿಡಿದ ಹತ್ತು ಸಾವಿರ ಬಿಲ್ಲುಗಳನ್ನು ಅರ್ಜುನನು ತುಂಡು ಮಾಡಿದನು.

ಅರ್ಥ:
ಹೊಸ: ನವೀನ; ಚಾಪ: ಬಿಲ್ಲು; ಮಿತ್ತು: ಮೃತ್ಯು; ಖತಿ: ಕೋಪ; ಶರ: ಬಾಣ; ಕೆತ್ತು: ನಡುಕ, ಸ್ಪಂದನ; ಆಕಾಶ: ಅಂಬರ, ಆಗಸ; ಕಡಿ: ಸೀಳು; ನಿಮಿಷ: ಕ್ಷಣ, ಕಾಲದ ಪ್ರಮಾಣ; ಮುತ್ತಯ್ಯ: ಮುತ್ತಾತ; ಕರತಳ: ಹಸ್ತ; ಧನು: ಬಿಲ್ಲು; ಕತ್ತರಿಸು: ಸೀಳು; ಹಿಡಿ: ಗ್ರಹಿಸು; ಸವೆ: ನಾಶ, ನೀಗು; ಪಿತಾಮಹ: ತಾತ; ಸಾವಿರ: ಸಹಸ್ರ;

ಪದವಿಂಗಡಣೆ:
ಮತ್ತೆ +ಹೊಸ +ಚಾಪದಲಿ +ಭೀಷ್ಮನು
ಮಿತ್ತು +ಖತಿಗೊಂಡಂತೆ +ಶರದಲಿ
ಕೆತ್ತನ್+ಆಕಾಶವನು+ ಕಡಿದನು+ ಪಾರ್ಥ +ನಿಮಿಷದಲಿ
ಮುತ್ತಯನ+ ಕರತಳದ +ಧನುವನು
ಕತ್ತರಿಸಿದನು +ಹಿಡಿಯಲ್+ಈಯದೆ
ಹತ್ತು +ಸಾವಿರ +ಬಿಲ್ಲು +ಸವೆದವು +ಕುರು+ಪಿತಾಮಹನ

ಅಚ್ಚರಿ:
(೧) ಭೀಷ್ಮನ ಸವೆದ ಬಿಲ್ಲುಗಳು – ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ
(೨) ಚಾಪ, ಬಿಲ್ಲು, ಧನು – ಸಮಾನಾರ್ಥಕ ಪದ

ಪದ್ಯ ೪೮: ಅರ್ಜುನನ ಬಾಣದ ಹೊಡೆತವು ಹೇಗಿತ್ತು?

ತಾರು ಥಟ್ಟಿಗೆ ಕೆಡೆದವಾನೆಗ
ಳಾರು ಸಾವಿರ ತುರಗದಳದಸು
ಸೂರೆ ಹೋದುದು ಸಮರದಲಿ ಹದಿನೆಂಟು ಸಾವಿರವು
ಕಾರಿದರು ಕರುಳನು ಪದಾತಿಗ
ಳಾರು ಲಕ್ಷವು ಮೊದಲ ಲಗ್ಗೆಗೆ
ಮೂರು ಸಾವಿರ ತೇರು ನೆಗ್ಗಿದವೊಂದು ನಿಮಿಷದಲಿ (ಭೀಷ್ಮ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅರ್ಜುನನ ಹೊಡೆತಕ್ಕೆ ಒಂದೇ ನಿಮಿಷಕ್ಕೆ ಆರು ಸಾವಿರ ಆನೆಗಳ ಗುಂಪುಗಳೇ ಸತ್ತು ಬಿದ್ದವು. ಹದಿನೆಂಟು ಸಾವಿರ ರಾವುತರು ಮಡಿದರು. ಆರು ಲಕ್ಷ ಕಾಲಾಳುಗಳ ಕರುಳು ಕಾರಿ ಬಿದ್ದವು. ಮೂರು ಸಾವಿರ ರಥಗಳು ಪುಡಿ ಪುಡಿಯಾದವು.

ಅರ್ಥ:
ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು; ಕೆಡೆ:ಬೀಳು, ಕುಸಿ; ಆನೆ: ಕರಿ; ಸಾವಿರ: ಸಹಸ್ರ; ತುರಗ: ಅಶ್ವ; ದಳ: ಸೈನ್ಯ; ಸೂರೆ: ಕೊಳ್ಳೆ, ಲೂಟಿ; ಹೋದು: ಹೋಗು; ಸಮರ: ಯುದ್ಧ; ಸಾವಿರ: ಸಹಸ್ರ; ಕಾರಿ: ಚೌಳು ನೆಲ; ಕರುಳು: ಪಚನಾಂಗ; ಪದಾತಿ: ಸೈನಿಕ; ಮೊದಲು: ಆದಿ; ಲಗ್ಗೆ: ಆಕ್ರಮಣ; ತೇರು: ಬಂಡಿ; ನೆಗ್ಗು: ಕುಗ್ಗು, ಕುಸಿ; ನಿಮಿಷ: ಕ್ಷಣಮಾತ್ರದಲಿ; ಅಸು: ಪ್ರಾಣ;

ಪದವಿಂಗಡಣೆ:
ತಾರು +ಥಟ್ಟಿಗೆ +ಕೆಡೆದವ್+ಆನೆಗಳ್
ಆರು +ಸಾವಿರ +ತುರಗದಳದ್ +ಅಸು
ಸೂರೆ +ಹೋದುದು +ಸಮರದಲಿ +ಹದಿನೆಂಟು +ಸಾವಿರವು
ಕಾರಿದರು +ಕರುಳನು +ಪದಾತಿಗಳ್
ಆರು +ಲಕ್ಷವು+ ಮೊದಲ +ಲಗ್ಗೆಗೆ
ಮೂರು +ಸಾವಿರ +ತೇರು +ನೆಗ್ಗಿದವ್+ಒಂದು +ನಿಮಿಷದಲಿ

ಅಚ್ಚರಿ:
(೧) ಕೆಡೆದವು, ಸೂರೆ ಹೋದುದು, ಕಾರಿದರು, ನೆಗ್ಗಿದವು – ನಾಶವಾದುದನ್ನು ವಿವರಿಸುವ ಪದಗಳು
(೨) ಒಟ್ಟು ನಾಶವಾದವರ ಸಂಖ್ಯೆ – ೬,೨೭,೦೦೦

ಪದ್ಯ ೯: ಅರ್ಜುನನು ಯಾರ ರಥಗಳನ್ನು ಮುರಿದನು?

ಗುರುಸುತನ ಬಳಿ ರಥವನೈ ಸಾ
ವಿರವ ಮುರಿದನು ಕರ್ಣನೊಡನೆಯ
ವರಮಹಾರಥವೆಂಟುಸಾವಿರವನು ರಣಾಗ್ರದೊಳು
ಗುರುನದೀಜರ ಬಳಿ ರಥವಸಾ
ಸಿರವ ಸೈಂಧವ ಕೃಪ ಸುಯೋಧನ
ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ (ವಿರಾಟ ಪರ್ವ, ೯ ಸಂಧಿ, ೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಹತ್ತಿರವಿದ್ದ ಐದು ಸಾವಿರ ರಥಗಳು, ಕರ್ಣನ ಬಳಿಯಿದ್ದ ಎಂಟು ಸಾವಿರ ರಥಗಳು, ಭೀಷ್ಮ ದ್ರೋಣರ ಬಳಿಯಿದ್ದ ಸಾವಿರ ರಥಗಳು, ಜಯದ್ರಥ, ಕೃಪ, ದುರ್ಯೋಧನರ ಬಳಿಯಿದ್ದ ಹತ್ತು ಸಾವಿರ ರಥಗಳನ್ನು ಅರ್ಜುನನು ಮುರಿದನು.

ಅರ್ಥ:
ಗುರು: ಆಚಾರ್ಯ; ಸುತ: ಮಗ; ಬಳಿ: ಹತ್ತಿರ; ರಥ: ಬಂಡಿ; ಸಾವಿರ: ಸಹಸ್ರ; ಮುರಿ: ಸೀಳು; ವರ: ಶ್ರೇಷ್ಠ; ಮಹಾರಥ: ಶ್ರೇಷ್ಠವಾದ ಬಂಡಿ; ರಣ: ಯುದ್ಧ, ರಣರಂಗ; ಅಗ್ರ: ಮುಂದೆ; ನದೀಜ: ಗಂಗಾಪುತ್ರ, ಭೀಷ್ಮ; ಸೈಂಧವ: ಜಯದ್ರಥ; ಅರಸು: ರಾಜ; ಥಟ್ಟು: ಗುಂಪು, ಸಮೂಹ; ಮುರಿ: ಸೀಳು;

ಪದವಿಂಗಡಣೆ:
ಗುರುಸುತನ +ಬಳಿ +ರಥವನ್+ಐ+ ಸಾ
ವಿರವ+ ಮುರಿದನು+ ಕರ್ಣನೊಡನೆಯ
ವರ+ಮಹಾರಥವ್+ಎಂಟು+ಸಾವಿರವನು+ ರಣಾಗ್ರದೊಳು
ಗುರು+ನದೀಜರ +ಬಳಿ+ ರಥವ+ಸಾ
ಸಿರವ+ ಸೈಂಧವ +ಕೃಪ+ ಸುಯೋಧನರ್
ಅರಸು +ಥಟ್ಟಿನ +ರಥವ+ ಮುರಿದನು +ಹತ್ತು +ಸಾವಿರವ

ಅಚ್ಚರಿ:
(೧) ಐಸಾವಿರ, ಎಂಟು ಸಾವಿರ, ಸಾಸಿರ, ಹತ್ತು ಸಾವಿರ – ರಥಗಳ ಎಣಿಕೆ

ಪದ್ಯ ೩: ಭೀಮನೆದುರು ಎಷ್ಟು ಸೈನ್ಯ ನಿಂತರು?

ಆರುಸಾವಿರ ಕುದುರೆ ಕರಿಘಟೆ
ಮೂರುಸಾವಿರ ಸಾವಿರದ ನಾ
ನೂರು ರಥ ಪರಿಗಣನೆಗೊಂದೇ ಲಕ್ಕ ಪಾಯದಳ
ನೂರು ರಥದಲಿ ಸರಳ ಹೊದೆ ಮೂ
ನೂರು ಪರಿಚಾರರು ಸಹಿತ ಮೈ
ದೋರಿ ನಿಂದನು ಭೀಮನೊಬ್ಬನೆ ತರುಬಿ ಕುರುಬಲವ (ಕರ್ಣ ಪರ್ವ, ೧೫ ಸಂಧಿ, ೩ ಪದ್ಯ)

ತಾತ್ಪರ್ಯ:
ಆರು ಸಾವಿರ ಕುದುರೆಗಳು, ಮೂರು ಸಾವಿರ ಆನೆಗಳು, ಒಂದು ಸಾವಿರದ ನಾನೂರು ರಥಗಳು, ಒಂದು ಲಕ್ಷ ಕಾಲಾಳುಗಳು, ನೂರು ತೇರುಗಳಲ್ಲಿ ಬಾಣಗಳು, ಮುನ್ನೂರು ಸೇವಕರೊಡನೆ ಭೀಮನೊಬನೇ ಕೌರವ ಬಲವನ್ನು ಎದುರಿಸಿ ನಿಂತನು.

ಅರ್ಥ:
ಕುದುರೆ: ಅಶ್ವ; ಕರಿಘಟೆ: ಆನೆಯ ಗುಂಪು; ರಥ: ಬಂಡಿ, ತೇರು; ಪರಿಗಣನೆ: ಎಣಿಕೆ; ಲಕ್ಕ: ಲಕ್ಷ; ಪಾಯದಳ: ಸೈನಿಕರು; ಸರಳ ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಪರಿಚಾರಕ: ಸೇವಕ; ಸಹಿತ: ಜೊತೆ; ಮೈದೋರು: ಎದುರು ನಿಲ್ಲು; ನಿಂದನು: ನಿಲ್ಲು; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಬಲ: ಸೈನ್ಯ;

ಪದವಿಂಗಡಣೆ:
ಆರುಸಾವಿರ+ ಕುದುರೆ +ಕರಿಘಟೆ
ಮೂರುಸಾವಿರ +ಸಾವಿರದ +ನಾ
ನೂರು +ರಥ +ಪರಿಗಣನೆಗೊಂದೇ+ ಲಕ್ಕ+ ಪಾಯದಳ
ನೂರು +ರಥದಲಿ+ ಸರಳ+ ಹೊದೆ +ಮೂ
ನೂರು +ಪರಿಚಾರರು +ಸಹಿತ+ ಮೈ
ದೋರಿ +ನಿಂದನು +ಭೀಮನೊಬ್ಬನೆ +ತರುಬಿ +ಕುರುಬಲವ

ಅಚ್ಚರಿ:
(೧) ನೂರು – ೩-೫ ಸಾಲಿನ ಮೊದಲ ಪದ
(೨) ಭೀಮನ ಸಾಮರ್ಥ್ಯವನ್ನು ಹೇಳುವ ಪದ್ಯ

ಪದ್ಯ ೩೬: ಅರ್ಜುನನನ್ನು ತೋರಿದವಗೆ ಯಾವ ಬಹುಮಾನವನ್ನು ನೀಡುವೆನೆಂದು ಕರ್ಣ ತಿಳಿಸಿದನು?

ನರನ ತೋರಿಸಿದವಗೆ ಶತ ಸಾ
ವಿರದ ಪಟ್ಟಣವರ್ಜುನನ ಮೋ
ಹರವಿದೇ ಎಂದವಗೆ ಕೊಡುವೆನು ಹತ್ತು ಸಾವಿರದ
ನರನ ತೆರಳಿಚಿ ತಂದು ತನ್ನೊಡ
ನರುಹಿದಗೆ ನೂರಾನೆ ಹಯ ಸಾ
ವಿರದ ವಳಿತವ ಬರಸಿ ಕೊಡುವೆನು ರಾಯನಾಣೆಂದ (ಕರ್ಣ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನನ್ನು ತೋರಿಸಿದವನಿಗೆ ಒಂದು ಲಕ್ಷ ವರಹ ವರಮಾನದ ಪಟ್ಟಣವನ್ನು ಕೊಡುತ್ತೇನೆ. ಅರ್ಜುನನ ಸೇನೆಯನ್ನು ತೋರಿಸಿದವನಿಗೆ ಹತ್ತು ಸಾವಿರ ವರಮಾನದ ಪಟ್ಟಣವನ್ನು ಕೊಡುತ್ತೇನೆ. ಅರ್ಜುನನನ್ನು ನನ್ನೆಡೆಗೆ ಎಳೆದು ತಂದವನಿಗೆ ನೂರಾನೆ ಕುದುರೆಗಳೊಡನೆ ಅವುಗಳನ್ನು ಸಲಹಲು ಬೇಕಾಗುವ ನೆಲವನ್ನು ಬರಿಸಿಕೊಡುತ್ತೇನೆ, ಇದು ಕೌರವರಾಜನ ಮೇಲಾಣೆ ಎಂದು ಘೋಷಿಸಿದನು.

ಅರ್ಥ:
ನರ: ಅರ್ಜುನ; ತೋರು: ಕಾಣಿಸು, ಗೋಚರ; ಶತ: ನೂರು; ಸಾವಿರ: ಸಹಸ್ರ; ಪಟ್ಟಣ:ಊರು; ಮೋಹರ: ಯುದ್ಧ, ಕಾಳಗ; ಕೊಡು: ನೀಡು; ತೆರಳು: ಹೋಗು, ನಡೆ; ತಂದು: ಬರೆಮಾಡು; ತನ್ನೊಡ: ಅರುಹು: ತಿಳಿಸು, ಹೇಳು; ಆನೆ: ಗಜ; ಹಯ: ಕುದುರೆ; ವಳಿತ: ಮಂಡಲ ಪ್ರದೇಶ; ಬರಸು: ಅನುಗ್ರಹಿಸು; ಕೊಡು: ನೀಡು; ರಾಯ: ರಾಜ; ಆಣೆ: ಪ್ರಮಾಣ;

ಪದವಿಂಗಡಣೆ:
ನರನ +ತೋರಿಸಿದವಗೆ+ ಶತ +ಸಾ
ವಿರದ +ಪಟ್ಟಣವ್+ಅರ್ಜುನನ +ಮೋ
ಹರವ್+ಇದೇ +ಎಂದವಗೆ +ಕೊಡುವೆನು +ಹತ್ತು +ಸಾವಿರದ
ನರನ+ ತೆರಳಿಚಿ +ತಂದು +ತನ್ನೊಡನ್
ಅರುಹಿದಗೆ +ನೂರಾನೆ +ಹಯ +ಸಾ
ವಿರದ +ವಳಿತವ +ಬರಸಿ+ ಕೊಡುವೆನು +ರಾಯನಾಣೆಂದ

ಅಚ್ಚರಿ:
(೧) ನರ, ಅರ್ಜುನ – ಸಮನಾರ್ಥಕ ಪದ
(೨) ಶತಸಾವಿರ, ಹತ್ತುಸಾವಿರ, ನೂರಾನೆ ಹಯ ಸಾವಿರದ ವಳಿತ – ಬಹುಮಾನಗಳ ವಿವರಣೆ

ಪದ್ಯ ೪೫: ವಿದ್ವಾಂಸನ ಲಕ್ಷಣವೇನು?

ಒರ್ವನಹನೈ ಶೂರನೂರ
ಕ್ಕೊರ್ವನಹ ಸಾವಿರಕೆ ಪಂಡಿತ
ನೊರನಹನೈ ವಕ್ತ ಶತಸಾವಿರಕೆ ಲೋಕದೊಳು
ಒರ್ವದಾನಿಯ ಕಾಣೆನೈ ತಾ
ನೊರ್ವರೊರ್ವರಿಗೊಂದೆ ಗುಣವದು
ಸರ್ವಗುಣಸಂಪನ್ನರೈ ವಿದ್ವಾಂಸರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಜಗತ್ತಿನಲ್ಲಿ ನೂರಕ್ಕೆ ಒಬ್ಬ ಶೂರನಿರುತ್ತಾನೆ, ಸಾವಿರ ಜನರಲ್ಲಿ ಒಬ್ಬ ಪಂಡಿತನಿರುತ್ತಾನೆ, ಒಳ್ಳೆಯ ಮಾತುಗಾರನು ಲಕ್ಷಕ್ಕೆ ಒಬ್ಬನಿರುತ್ತಾನೆ, ಆದರೆ ಒಬ್ಬ ದಾನಿಯನ್ನು ನಾನು ಕಾಣೆ. ಒಬ್ಬೊಬ್ಬರಿಗೆ ಒಂದೇ ಗುಣವಿರುತ್ತದೆ ಆದರೆ ಎಲ್ಲಾ ಗುಣಗಳ ಸಂಪನ್ನನೇ ವಿದ್ವಾಂಸನೆಂದು ಕರೆಸಿಕೊಳ್ಳುತ್ತಾನೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಒರ್ವ: ಒಬ್ಬನೆ; ಶೂರ: ಧೀರ; ನೂರು: ಶತ; ಸಾವಿರ: ಸಹಸ್ರ; ಪಂಡಿತ: ಕೋವಿದ; ವಕ್ತ: ವಕ್ತಾರ; ಶತಸಾವಿರ: ಲಕ್ಷ; ಲೋಕ: ಜಗತ್ತು; ದಾನಿ: ದಾನ ಮಾಡುವವನು; ಕಾಣೆ: ನೋಡಲು ಸಿಗದು; ಗುಣ: ನಡತೆ, ಸ್ವಭಾವ; ಸರ್ವ: ಎಲ್ಲಾ; ಸಂಪನ್ನ: ಸಜ್ಜನ, ಸತ್ಪುರುಷ, ಹೊಂದಿದವನು; ವಿದ್ವಾಂಸ: ಜ್ಞಾನಿ, ಪಂಡಿತ;

ಪದವಿಂಗಡಣೆ:
ಒರ್ವನಹನೈ +ಶೂರ+ ನೂರಕ್
ಒರ್ವನಹ +ಸಾವಿರಕೆ+ ಪಂಡಿತನ್
ಒರನಹನೈ+ ವಕ್ತ +ಶತಸಾವಿರಕೆ+ ಲೋಕದೊಳು
ಒರ್ವದಾನಿಯ +ಕಾಣೆನೈ +ತಾನ್
ಒರ್ವರ್+ಒರ್ವರಿಗ್+ಒಂದೆ +ಗುಣವದು
ಸರ್ವಗುಣ+ಸಂಪನ್ನರೈ +ವಿದ್ವಾಂಸರುಗಳೆಂದ

ಅಚ್ಚರಿ:
(೧) ಒರ್ವ – ೧-೫ ಸಾಲಿನ ಮೊದಲ ಪದ
(೨) ನೂರು, ಸಾವಿರ, ಶತಸಾವಿರ – ಸಂಖ್ಯೆಗಳ ಬಳಕೆ
(೩) ಶೂರ, ಪಂಡಿತ, ವಕ್ತಾರ, ದಾನಿ, ವಿದ್ವಾಂಸ ರ ಬಗ್ಗೆ ತಿಳಿಸುವ ಪದ್ಯ