ಪದ್ಯ ೨೪: ಕೃಷ್ಣನು ಯಾರ ಕುಡಿಯನ್ನು ರಕ್ಷಿಸಿದನು?

ಸೆಳೆದುಕೊಂಡನು ಮಿತ್ತುವಿನ ಗಂ
ಟಲಲಿ ಮಾರ್ಕಂಡೇಯನನು ರಣ
ದೊಳಗೆ ಭಗದತ್ತಾಂಕುಶದಿ ನಾರಾಯಣಾಸ್ತ್ರದಲಿ
ಉಳುಹಿದನು ಪಾರ್ಥನನು ಗುರುಸುತ
ಕಳುಪಿದೀ ಕುಶಿಕಾಸ್ತ್ರದಲಿ ಶಶಿ
ಕುಲದ ರಾಜಾಂಕುರವ ಕರುಣಿಸಿ ಕಾಯ್ದನಸುರಾರಿ (ಗದಾ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮೃತ್ಯುವಿನ ಗಂಟಲಿನಿಂದ ಮಾರ್ಕಂಡೇಯನನ್ನು ಸೆಳೆದುಕೊಂಡನಲ್ಲವೇ? ಯುದ್ಧದಲ್ಲಿ ಭಗದತ್ತನ ಶಕ್ತಿ ಮತ್ತು ನಾರಾಯಣಾಸ್ತ್ರಗಳ ಕಂಟಕದಿಂದ ಅರ್ಜುನನನ್ನು ಉಳಿಸಿದನಲ್ಲವೇ? ಅಂತಹ ಮಹಾಮಹಿಮ ಶ್ರೀಕೃಷ್ಣನು ಚಂದ್ರವಂಶದ ಕುಡಿಯನ್ನು (ಅಭಿಮನ್ಯುವಿನ ಮಗ) ರಕ್ಷಿಸಿದನು.

ಅರ್ಥ:
ಸೆಳೆ: ಆಕರ್ಷಿಸು, ಎಳೆ; ಮಿತ್ತು: ಮೃತ್ಯು; ಗಂಟಲು: ಕೊರಳು, ಕಂಠ; ರಣ: ಯುದ್ಧ; ಅಂಕುಶ: ಒಂದು ಆಯುಧ, ಹಿಡಿತ, ಹತೋಟಿ; ಅಸ್ತ್ರ: ಶಸ್ತ್ರ; ಉಳುಹು: ರಕ್ಷಿಸು, ಜೀವಿಸು; ಕಳುಪಿದ: ಕಳಿಸಿದ; ಕುಶಿಕ: ಗುಳ, ವಿಶ್ವಾಮಿತ್ರನ ತಂದೆಯ ಹೆಸರು; ಶಶಿ: ಚಂದ್ರ; ಕುಲ: ವಂಶ; ರಾಜ: ನೃಪ; ಅಂಕುರ: ಚಿಗುರು; ಕರುಣಿಸು: ದಯಪಾಲಿಸು; ಕಾಯ್ದು: ರಕ್ಷಿಸು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಸೆಳೆದುಕೊಂಡನು +ಮಿತ್ತುವಿನ +ಗಂ
ಟಲಲಿ +ಮಾರ್ಕಂಡೇಯನನು +ರಣ
ದೊಳಗೆ +ಭಗದತ್ತ+ಅಂಕುಶದಿ+ ನಾರಾಯಣಾಸ್ತ್ರದಲಿ
ಉಳುಹಿದನು +ಪಾರ್ಥನನು +ಗುರುಸುತ
ಕಳುಪಿದ್+ಈ +ಕುಶಿಕಾಸ್ತ್ರದಲಿ +ಶಶಿ
ಕುಲದ +ರಾಜಾಂಕುರವ+ ಕರುಣಿಸಿ +ಕಾಯ್ದನ್+ಅಸುರಾರಿ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಸೆಳೆದುಕೊಂಡನು ಮಿತ್ತುವಿನ ಗಂಟಲಲಿ ಮಾರ್ಕಂಡೇಯನನು
(೨) ಅಭಿಮನ್ಯುವಿನ ಮಗ ಎಂದು ಹೇಳುವ ಪರಿ – ಶಶಿಕುಲದ ರಾಜಾಂಕುರವ

ಪದ್ಯ ೧೫: ಅಶ್ವತ್ಥಾಮನು ಯಾರಿಗೆ ಯಾವ ಜವಾಬ್ದಾರಿಯನ್ನು ವಹಿಸಿದನು?

ಎರಡು ಬಾಗಿಲ ಪಾಳೆಯಕೆ ಕೃಪ
ನಿರಲಿ ಮೂಡಲು ಪಶ್ಚಿಮಾಂಗದೊ
ಳಿರಲಿ ಕೃತವರ್ಮಕನು ಬಾಗಿಲೊಳಾಂತ ರಿಪುಜನವ
ಕರಿ ತುರಗ ರಥ ಪತ್ತಿಗಳ ಸಂ
ಹರಿಸುವುದು ನೀವಿಲ್ಲಿ ಮಧ್ಯದೊ
ಳರಸು ಮೊತ್ತಕೆ ಮಿತ್ತು ತಾನಹೆನೆಂದು ಕೈಗೊಂಡ (ಗದಾ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಪಾಳೆಯಕ್ಕೆ ಪುರ್ವದಲ್ಲೊಂದು ಬಾಗಿಲಿದೆ, ಇಲ್ಲಿ ಕೃಪನು ಕಾದಿರಲಿ, ಪಶ್ಚಿಮದಲ್ಲಿರುವ ಎರಡನೆಯ ಬಾಗಿಲಲ್ಲಿ ಕೃತವರ್ಮನಿರಲಿ. ಚತುರಮ್ಗ ಸೈನ್ಯವು ಹೊರ ಬಂದರೆ ನೀವಿಬ್ಬರೂ ಅವರನ್ನು ಸಂಹರಿಸಿರಿ, ಉಳಿದ ಅರಸುಗಳಿಗೆ ನಾನು ಮೃತ್ಯುವಾಗುತ್ತೇನೆ ಎಂದು ಹೇಳಿ ತನ್ನ ಕಾರ್ಯವನ್ನು ಕೈಗೊಂಡನು.

ಅರ್ಥ:
ಬಾಗಿಲು: ಕದ; ಪಾಳೆಯ: ಬಿಡಾರ; ಮೂಡಲು: ಪೂರ್ವ; ಪಶ್ಚಿಮ: ಪಡುವಣ; ಅಂಗ:ಭಾಗ; ರಿಪು: ವೈರಿ; ಜನ: ಗುಂಪು; ಕರಿ: ಆನೆ; ತುರಗ: ಅಶ್ವ, ಕುದುರೆ; ರಥ: ಬಂಡಿ; ಪತ್ತಿ: ಒಂದು ರಥ, ಒಂದು ಆನೆ, ಮೂರು ಕುದುರೆ ಮತ್ತು ಐದು ಕಾಲಾಳುಗಳಿಂದ ಕೂಡಿದ ಸೈನ್ಯದ ಚಿಕ್ಕ ಭಾಗ; ಸಂಹರಿಸು: ನಾಶಮಾಡು; ಮಧ್ಯ: ನಡುಭಾಗ; ಅರಸು:ರಾಜ; ಮೊತ್ತ: ರಾಶಿ, ಒಟ್ಟಲು, ಕೂಡಿದುದು; ಮಿತ್ತು: ಮೃತ್ಯು; ಕೈಗೊಂಡ: ನಿರ್ಧರಿಸು;

ಪದವಿಂಗಡಣೆ:
ಎರಡು +ಬಾಗಿಲ +ಪಾಳೆಯಕೆ +ಕೃಪ
ನಿರಲಿ +ಮೂಡಲು +ಪಶ್ಚಿಮಾಂಗದೊಳ್
ಇರಲಿ +ಕೃತವರ್ಮಕನು +ಬಾಗಿಲೊಳಾಂತ +ರಿಪುಜನವ
ಕರಿ +ತುರಗ +ರಥ +ಪತ್ತಿಗಳ+ ವುದು +ನೀವಿಲ್ಲಿ+ ಮಧ್ಯದೊಳ್
ಅರಸು +ಮೊತ್ತಕೆ +ಮಿತ್ತು +ತಾನಹೆನೆಂದು +ಕೈಗೊಂಡ

ಅಚ್ಚರಿ:
(೧) ಅಶ್ವತ್ಥಾಮನ ದಿಟ್ಟ ನುಡಿ – ಮಧ್ಯದೊಳರಸು ಮೊತ್ತಕೆ ಮಿತ್ತು ತಾನಹೆನ್
(೨) ಸೈನ್ಯದ ಭಾಗವನ್ನು ವಿವರಿಸುವ ಪರಿ – ಕರಿ ತುರಗ ರಥ ಪತ್ತಿ

ಪದ್ಯ ೪೬: ಅರ್ಜುನನು ಭೀಷ್ಮನ ಎಷ್ಟು ಬಿಲ್ಲನ್ನು ತುಂಡುಮಾಡಿದನು?

ಮತ್ತೆ ಹೊಸ ಚಾಪದಲಿ ಭೀಷ್ಮನು
ಮಿತ್ತು ಖತಿಗೊಂಡಂತೆ ಶರದಲಿ
ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ
ಮುತ್ತಯನ ಕರತಳದ ಧನುವನು
ಕತ್ತರಿಸಿದನು ಹಿಡಿಯಲೀಯದೆ
ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ (ಭೀಷ್ಮ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭೀಷ್ಮನು ಮತ್ತೆ ಹೊಸಬಿಲ್ಲನ್ನು ಹಿಡಿದು ಕೋಪಗೊಂಡು ಮೃತ್ಯುವಿನಂತೆ ಬಾಣವನ್ನು ಬಿಡಲು, ಅರ್ಜುನನು ಭೀಷ್ಮನ ಆ ಬಿಲ್ಲನ್ನು ಮುರಿದನು. ಹೀಗೆ ಭೀಷ್ಮನು ಹಿಡಿದ ಹತ್ತು ಸಾವಿರ ಬಿಲ್ಲುಗಳನ್ನು ಅರ್ಜುನನು ತುಂಡು ಮಾಡಿದನು.

ಅರ್ಥ:
ಹೊಸ: ನವೀನ; ಚಾಪ: ಬಿಲ್ಲು; ಮಿತ್ತು: ಮೃತ್ಯು; ಖತಿ: ಕೋಪ; ಶರ: ಬಾಣ; ಕೆತ್ತು: ನಡುಕ, ಸ್ಪಂದನ; ಆಕಾಶ: ಅಂಬರ, ಆಗಸ; ಕಡಿ: ಸೀಳು; ನಿಮಿಷ: ಕ್ಷಣ, ಕಾಲದ ಪ್ರಮಾಣ; ಮುತ್ತಯ್ಯ: ಮುತ್ತಾತ; ಕರತಳ: ಹಸ್ತ; ಧನು: ಬಿಲ್ಲು; ಕತ್ತರಿಸು: ಸೀಳು; ಹಿಡಿ: ಗ್ರಹಿಸು; ಸವೆ: ನಾಶ, ನೀಗು; ಪಿತಾಮಹ: ತಾತ; ಸಾವಿರ: ಸಹಸ್ರ;

ಪದವಿಂಗಡಣೆ:
ಮತ್ತೆ +ಹೊಸ +ಚಾಪದಲಿ +ಭೀಷ್ಮನು
ಮಿತ್ತು +ಖತಿಗೊಂಡಂತೆ +ಶರದಲಿ
ಕೆತ್ತನ್+ಆಕಾಶವನು+ ಕಡಿದನು+ ಪಾರ್ಥ +ನಿಮಿಷದಲಿ
ಮುತ್ತಯನ+ ಕರತಳದ +ಧನುವನು
ಕತ್ತರಿಸಿದನು +ಹಿಡಿಯಲ್+ಈಯದೆ
ಹತ್ತು +ಸಾವಿರ +ಬಿಲ್ಲು +ಸವೆದವು +ಕುರು+ಪಿತಾಮಹನ

ಅಚ್ಚರಿ:
(೧) ಭೀಷ್ಮನ ಸವೆದ ಬಿಲ್ಲುಗಳು – ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ
(೨) ಚಾಪ, ಬಿಲ್ಲು, ಧನು – ಸಮಾನಾರ್ಥಕ ಪದ

ಪದ್ಯ ೮೨: ಯುದ್ಧವು ಭಾಯಾನಕವಾಗಿ ಹೇಗೆ ಕಂಡಿತು?

ಕುತ್ತಿ ಹಿಂಗುವ ಭಟರ ದಾಡೆಯೊ
ಳೊತ್ತಿ ನೆಗಹಿದಡೊಗುವ ರಕುತಕೆ
ಮುತ್ತಿ ಬಾಯ್ಗಳನೊಡ್ಡಿ ಕುಡಿದುದು ಶಾಕಿನೀನಿವಹ
ಮಿತ್ತುವಿನ ಗಣವಿಭದ ದಾಡೆಯ
ಸುತ್ತಿ ಜೋಲುವ ಕರುಳ ಹಿಣಿಲನು
ಕುತ್ತಿದವು ತಮ್ಮೊಳಗೆ ಹೆಣಗಿದವಸಮಸರದಲಿ (ಭೀಷ್ಮ ಪರ್ವ, ೪ ಸಂಧಿ, ೮೨ ಪದ್ಯ)

ತಾತ್ಪರ್ಯ:
ಅಸಮಾನ ಯುದ್ಧದಲ್ಲಿ ತಮ್ಮನ್ನು ಹೊಡೆದು ಹಿಂದಕ್ಕೆ ಹೋಗುವ ಶತ್ರುಗಳನ್ನು ದಂತದಿಂದ ತಿವಿದು ಮೇಲಕ್ಕೆತ್ತಿದಾಗ ಸುರಿಯುವ ರಕ್ತವನ್ನು ಶಾಕಿನಿಯರು ಹೀರಿದರು. ಆನೆಗಳ ದಂತಗಳಿಗೆ ತೊಡಕಿದ್ದ ಕರುಳ ಹಿಣಿಲನ್ನು ಯಮದೂತರು ನುಂಗಿದರು. ಯುದ್ಧವು ಭಯಾನಕವಾಗಿತ್ತು.

ಅರ್ಥ:
ಕುತ್ತು: ಚುಚ್ಚು, ತಿವಿ, ಇರಿ; ಹಿಂಗು: ಬತ್ತು; ಭಟ: ಸೈನಿಕ; ದಾಡೆ: ದವಡೆ, ಒಸಡು; ಒತ್ತು: ಒತ್ತಡ, ಮುತ್ತು; ನೆಗಹು: ಮೇಲೆತ್ತು; ಒಗು: ಚೆಲ್ಲು, ಸುರಿ, ಆವರಿಸು; ರಕುತ: ನೆತ್ತರು; ಮುತ್ತು: ಆವರಿಸು; ಒಡ್ಡು: ತೋರು; ಕುಡಿ: ಪಾನಮಾಡು; ಶಾಕಿನಿ: ಒಂದು ಕ್ಷುದ್ರ ದೇವತೆ; ನಿವಹ: ಗುಂಪು; ಮಿತ್ತು: ಮೃತ್ಯು, ಸಾವು; ಗಣ: ಸಮೂಹ; ಸುತ್ತಿ: ಒಂದು ಬಗೆಯ ಕಬ್ಬಿಣದ ಸಾಧನ, ಸುತ್ತಿಗೆ; ಜೋಲು: ಇಳಿಬೀಳು; ಕರುಳು: ಪಚನಾಂಗ; ಹಿಣಿಲು: ಹೆರಳು, ಜಡೆ; ಕುತ್ತು: ತೊಂದರೆ, ಆಪತ್ತು; ಹೆಣಗು: ಹೋರಾಡು; ಅಸಮ: ಸಮಾನವಲ್ಲದ;

ಪದವಿಂಗಡಣೆ:
ಕುತ್ತಿ +ಹಿಂಗುವ +ಭಟರ +ದಾಡೆಯೊಳ್
ಒತ್ತಿ +ನೆಗಹಿದಡ್+ಒಗುವ +ರಕುತಕೆ
ಮುತ್ತಿ +ಬಾಯ್ಗಳನೊಡ್ಡಿ+ ಕುಡಿದುದು +ಶಾಕಿನೀ+ನಿವಹ
ಮಿತ್ತುವಿನ +ಗಣ+ವಿಭದ+ ದಾಡೆಯ
ಸುತ್ತಿ +ಜೋಲುವ +ಕರುಳ +ಹಿಣಿಲನು
ಕುತ್ತಿದವು +ತಮ್ಮೊಳಗೆ +ಹೆಣಗಿದವ್+ಅಸಮಸರದಲಿ

ಅಚ್ಚರಿ:
(೧) ಕುತ್ತಿ, ಒತ್ತಿ, ಮುತ್ತಿ, ಸುತ್ತಿ – ಪ್ರಾಸ ಪದಗಳು

ಪದ್ಯ ೨೫: ಉತ್ತರನು ಅರ್ಜುನನಲ್ಲಿ ಏನು ಬೇಡಿದನು?

ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲಿಸದೆ ಬಿಟ್ಟು ಕಳುಹೆಂದ (ವಿರಾಟ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಾಚಿಕೆಗೇಡಾದ ಮೇಲೆ ಇರಿದುಕೊಂಡು ಸಾಯುವುದೇ ಒಳಿತೆಂಬ ಗಾದೆಯ ಮಾತನ್ನು ನನಗೆ ಅನ್ವಯಿಸಬೇಡ. ನನಗೆ ಯುದ್ಧವೆಂದರೆ ಭಯ, ನಾನು ಸಲಹಿದವನು ನೀನು, ಶತ್ರುವಿನಂತೆ ನೀನು ನನಗೆ ಮೃತ್ಯುವಾಗಬಹುದೆ? ನೀನು ಕೇಳಿದುದನ್ನು ಕೊಡುತ್ತೇನೆ, ನನ್ನನ್ನು ಕೊಲ್ಲಬೇಡ, ಬಿಟ್ಟು ಬಿಡು ಎಂದು ಬೇಡಿದನು.

ಅರ್ಥ:
ಕೆತ್ತು: ಅದಿರು, ನಡುಗು; ನಾಚಿಕೆ: ಲಜ್ಜೆ; ನೆರೆ: ಸೇರು, ಜೊತೆಗೂಡು; ಕುತ್ತು: ತೊಂದರೆ, ಆಪತ್ತು, ಕಷ್ಟ; ಗಾದೆ: ನಾಣ್ಣುಡಿ; ಹೊದ್ದಿಸು: ಸೇರಿಸು; ಅಂಜು: ಹೆದರು; ಕಾಳಗ: ಯುದ್ಧ; ತೆತ್ತು: ಮೋಸ, ವಂಚನೆ; ಅಹಿತ: ವೈರಿ; ಮಿತ್ತು: ಮೃತ್ಯು, ಸಾವು; ಬೇಡು: ಕೇಳು; ಸಲಹು: ಕಾಪಾಡು; ಕೊಲಿಸು: ಸಾಯಿಸು; ಬಿಟ್ಟು: ತೊರೆ; ಕಳುಹು: ಬೀಳ್ಕೊಡು;

ಪದವಿಂಗಡಣೆ:
ಕೆತ್ತುಕೊಂಡಾ+ ನಾಚಿಕೆಗೆ +ನೆರೆ
ಕುತ್ತಿಕೊಳಬೇಕೆಂಬ+ ಗಾದೆಯನ್
ಇತ್ತ+ ಹೊದ್ದಿಸಬೇಡ+ ನಾವ್+ಅಂಜುವೆವು +ಕಾಳಗಕೆ
ತೆತ್ತಿಗನು +ನೀನ್+ಅಹಿತನಂತಿರೆ
ಮಿತ್ತುವಹರೇ+ ನಿನಗೆ +ಬೇಡಿದನ್
ಇತ್ತು +ಸಲಹುವೆನ್+ಎನ್ನ +ಕೊಲಿಸದೆ +ಬಿಟ್ಟು +ಕಳುಹೆಂದ

ಅಚ್ಚರಿ:
(೧) ಗಾದೆಯ ಮಾತನ್ನು ಹೇಳುವ ಪರಿ – ಕೆತ್ತುಕೊಂಡಾ ನಾಚಿಕೆಗೆ ನೆರೆಕುತ್ತಿಕೊಳಬೇಕು