ಪದ್ಯ ೭: ವ್ಯಾಸರು ಕೌರವನ ಬಗ್ಗೆ ಏನೆಂದು ನುಡಿದರು?

ಧರ್ಮವೆಲ್ಲಿಹುದಲ್ಲಿ ಜಯ ಸ
ತ್ಕರ್ಮವೆಲ್ಲಿಹುದಲ್ಲಿ ಸಿರಿ ಸ
ದ್ಧರ್ಮಸಂರಕ್ಷಕರು ಹರಿ ಧೂರ್ಜಟಿ ಪಿತಾಮಹರು
ಧರ್ಮದೂರನು ನಿನ್ನವನು ಸ
ತ್ಕರ್ಮಬಾಹಿರನಾತ್ಮರಚಿತ ವಿ
ಕರ್ಮದೋಷದಲಳಿದನಿನ್ನೇನೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ವ್ಯಾಸ ಮುನಿಗಳು ತಮ್ಮ ಮಾತುಗಳನ್ನು ಮುಂದುವರೆಸುತ್ತಾ, ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿರುತ್ತದೆ. ಎಲ್ಲಿ ಸತ್ಕರ್ಮವಿದೆಯೋ ಅಲ್ಲಿ ಸಂಪತ್ತಿರುತ್ತದೆ. ಆ ಧರ್ಮದ ಸಂರಕ್ಷರು ಹರಿಹರಬ್ರಹ್ಮರು. ನಿನ್ನ ಮಗನು ಧರ್ಮದೂರ, ಸತ್ಕರ್ಮಬಾಹಿರ, ತಾನು ಮಾಡಿದ ವಿಕಾರ ಕರ್ಮದ ದೋಷದಿಂದ ಹತನಾದನು. ಇನ್ನೇನು ಹೇಳಲಿ ಎಂದು ವ್ಯಾಸರು ನುಡಿದರು.

ಅರ್ಥ:
ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಜಯ: ಗೆಲುವು; ಸತ್ಕರ್ಮ: ಒಳ್ಳೆಯ ಕೆಲಸ; ಸಿರಿ: ಐಶ್ವರ್ಯ; ಸಂರಕ್ಷಕ: ರಕ್ಷಣೆ ಮಾಡುವವ; ಪಿತಾಮಹ: ತಾತ, ಬ್ರಹ್ಮ; ಧೂರ್ಜಟಿ: ಶಿವ; ದೂರ: ಬಹಳ ಅಂತರ, ಹತ್ತಿರವಲ್ಲದುದು; ಬಾಹಿರ: ಹೊರಗಿನವ; ವಿಕರ್ಮ: ಕೆಟ್ಟ ಕೆಲಸ; ದೋಷ: ತಪ್ಪು; ಅಳಿ: ನಾಶ; ಮುನಿ: ಋಷಿ;

ಪದವಿಂಗಡಣೆ:
ಧರ್ಮವೆಲ್ಲಿಹುದಲ್ಲಿ +ಜಯ +ಸ
ತ್ಕರ್ಮವೆಲ್ಲಿಹುದಲ್ಲಿ+ ಸಿರಿ +ಸ
ದ್ಧರ್ಮ+ಸಂರಕ್ಷಕರು +ಹರಿ +ಧೂರ್ಜಟಿ +ಪಿತಾಮಹರು
ಧರ್ಮದೂರನು +ನಿನ್ನವನು +ಸ
ತ್ಕರ್ಮ+ಬಾಹಿರನ್+ಆತ್ಮರಚಿತ+ ವಿ
ಕರ್ಮ+ದೋಷದಲ್+ಅಳಿದನ್+ಇನ್ನೇನೆಂದನಾ +ಮುನಿಪ

ಅಚ್ಚರಿ:
(೧) ಹಿತ ನುಡಿ – ಧರ್ಮವೆಲ್ಲಿಹುದಲ್ಲಿ ಜಯ, ಸತ್ಕರ್ಮವೆಲ್ಲಿಹುದಲ್ಲಿ ಸಿರಿ
(೨) ಕೌರವನ ನಡತೆಯನ್ನು ಹೇಳುವ ಪರಿ – ಧರ್ಮದೂರನು ನಿನ್ನವನು
(೩) ಧರ್ಮ, ಸದ್ಧರ್ಮ, ಸತ್ಕರ್ಮ, ವಿಕರ್ಮ – ಪ್ರಾಸ ಪದಗಳು
(೪) ಧರ್ಮ, ಸತ್ಕರ್ಮ – ೧, ೪ ಸಾಲಿನ ಮೊದಲ ಮತ್ತು ಕೊನೆ ಪದ

ಪದ್ಯ ೧೮: ಸುರ್ಯೋಧನನು ಯಾರನ್ನು ಯುದ್ಧದಲ್ಲಿ ಕಳೆದುಕೊಂಡನು?

ಅನುಜರಳಿದುದು ನೂರು ರಣದಲಿ
ತನುಜರಳಿದುದು ಮಾವ ಗುರು ಮೈ
ದುನ ಪಿತಾಮಹ ಪುತ್ರ ಮಿತ್ರ ಜ್ಞಾತಿ ಬಾಂಧವರು
ಅನಿಬರವನೀಶ್ವರರು ಸಮರಾ
ವನಿಯೊಳಡಗಿದುದೇಕದೇಶದ
ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ (ಗದಾ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಎಲೈ ಭೀಮ, ದುರ್ಯೊಧನನ ನೂರು ತಮ್ಮಂದಿರು, ಮಕ್ಕಳು, ಮಾವ, ಗ್ರು, ಮೈದುನ, ತಾತ, ಮಿತ್ರರು, ದಾಯಾದಿಗಳು, ಬಾಂಧವರು, ಮಿತ್ರರಾಜರು ಈ ರಣರಂಗದಲ್ಲಿ ಮಡಿದು ಹೋಗಿದ್ದಾರೆ. ಏಕಾಂಗಿಯಾಗಿದ್ದ ಅವನನ್ನು ಮುರಿದುದೇ ಸಾಲದೆ? ಅದರ ಮೇಲೆ ಅವನಿಗೆ ಈ ರೀತಿ ಹಿಂಸೆ ಕೊಡುವುದು ಸರಿಯೇ? ಎಂದು ಪ್ರಶ್ನಿಸಿದನು.

ಅರ್ಥ:
ಅನುಜ: ತಮ್ಮ; ರಣ: ಯುದ್ಧ; ತನುಜ: ಮಕ್ಕಳು; ಮಾವ: ಅಮ್ಮನ ಅಣ್ಣ/ತಮ್ಮ; ಗುರು: ಆಚಾರ್ಯ; ಮೈದುನ: ತಂಗಿಯ ಗಂಡ; ಪಿತಾಮಹ: ತಾತ; ಪುತ್ರ: ಮಗ; ಮಿತ್ರ: ಸ್ನೇಹಿತ; ಜ್ಞಾತಿ: ತಂದೆಯ ಕಡೆಯ ಬಂಧು, ದಾಯಾದಿ; ಬಾಂಧವ: ಬಂಧು ಬಳಗ; ಅನಿಬರು: ಅಷ್ಟು ಜನ; ಅವನೀಶ್ವರ: ರಾಜ; ಸಮರ: ಯುದ್ಧ; ಅವನಿ: ಭೂಮಿ; ಅಡಗು: ಬಚ್ಚಿಡು, ಕಾಣದಂತಾಗು; ಜನಪತಿ: ರಾಜ; ಮುರಿ: ಸೀಳು; ಸಾಲದೆ: ಸಾಕಾಗು;

ಪದವಿಂಗಡಣೆ:
ಅನುಜರ್+ಅಳಿದುದು +ನೂರು +ರಣದಲಿ
ತನುಜರ್+ಅಳಿದುದು +ಮಾವ +ಗುರು +ಮೈ
ದುನ +ಪಿತಾಮಹ +ಪುತ್ರ+ ಮಿತ್ರ+ ಜ್ಞಾತಿ +ಬಾಂಧವರು
ಅನಿಬರ್+ಅವನೀಶ್ವರರು +ಸಮರ
ಅವನಿಯೊಳ್+ಅಡಗಿದುದ್+ಏಕ+ದೇಶದ
ಜನಪತಿಯ +ಮುರಿದ್+ಅದುವೆ +ಸಾಲದೆ +ಭೀಮ +ನಮಗೆಂದ

ಅಚ್ಚರಿ:
(೧) ಏಕ ಚಕ್ರಾಧಿಪತಿ ಎಂದು ಹೇಳುವ ಪರಿ – ಏಕದೇಶದಜನಪತಿ
(೨) ರಣರಂಗ ಎಂದು ಹೇಳುವ ಪರಿ – ಸಮರಾವನಿ
(೩) ಅನುಜ, ತನುಜ – ಪ್ರಾಸ ಪದಗಳು

ಪದ್ಯ ೩೭: ಧರ್ಮಜನು ಭೀಮನಿಗೆ ಎಲ್ಲಿಗೆ ಹೋಗಲು ಹೇಳಿದ?

ಹಾ ನುಡಿಯದಿರು ನಿಲು ಪಿತಾಮಹ
ನೇನ ಬೆಸಸಿದುದಕೆ ಹಸಾದವು
ನೀನು ನಡೆ ಪಾಳಯಕೆ ಬಿಡುಗುರಿತನವ ಮಾಣೆಯಲ
ಮೌನಮುದ್ರೆಯ ಹಿಡಿಯೆನಲು ಪವ
ಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ ನೋಡಿ ಮೆಲ್ಲನೆ ಸರಿದನಲ್ಲಿಂದ (ಭೀಷ್ಮ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿ ಧರ್ಮಜನು, ಸಾಕು, ಮಾತನಾಡಬೇಡ, ತಾತನು ಏನು ಹೇಳಿದರೂ ಅದೇ ನಮಗೆ ಪ್ರಸಾದ. ಛೇ ನೀನು ಉರಿತುಂಬಿದ ಮಾತಾಡುವುದನ್ನು ಬಿಡುವುದೇ ಇಲ್ಲವಲ್ಲ. ಸುಮ್ಮನೆ ಪಾಳೆಯಕ್ಕೆ ಹೋಗು, ಎನ್ನಲು ಭೀಮನು ಸಿಟ್ಟಿನಿಂದ ಅಣ್ಣನನ್ನು ನೋಡುತ್ತಾ ಅಲ್ಲಿಂದ ಹೊರಟು ಹೋದನು.

ಅರ್ಥ:
ನುಡಿ: ಮಾತು; ನಿಲು: ನಿಲ್ಲು, ತಾಳು; ಪಿತಾಮಹ: ತಾತ; ಬೆಸಸು: ಆಜ್ಞಾಪಿಸು, ಹೇಳು; ಹಸಾದ: ಪ್ರಸಾದ; ನಡೆ: ಹೋಗು; ಪಾಳಯ: ಸೀಮೆ; ಬಿಡು: ತೊರೆ, ಹೋಗು; ಉರಿ: ಬೆಂಕಿ; ಮಾಣು: ನಿಲ್ಲು, ಸ್ಥಗಿತಗೊಳ್ಳು; ಮೌನ: ಸುಮ್ಮನಿರುವಿಕೆ; ಮುದ್ರೆ: ಚಿಹ್ನೆ; ಹಿಡಿ: ಗ್ರಹಿಸು; ಪವಮಾನ: ವಾಯು; ನಂದನ: ಮಗ; ಖಾತಿ: ಕೋಪ; ಸೂನು: ಮಗ; ಬಿಡು: ತೊರೆ, ತ್ಯಜಿಸು; ನೋಡು: ತೋರು, ಗೋಚರಿಸು; ಮೆಲ್ಲನೆ: ನಿಧಾನವಾಗಿ; ಸರಿ: ಚಲಿಸು, ಗಮಿಸು;

ಪದವಿಂಗಡಣೆ:
ಹಾ +ನುಡಿಯದಿರು +ನಿಲು +ಪಿತಾಮಹನ್
ಏನ+ ಬೆಸಸಿದುದಕೆ+ ಹಸಾದವು
ನೀನು +ನಡೆ +ಪಾಳಯಕೆ +ಬಿಡುಗ್+ಉರಿತನವ +ಮಾಣೆಯಲ
ಮೌನಮುದ್ರೆಯ +ಹಿಡಿಯೆನಲು+ ಪವ
ಮಾನನಂದನ+ ಖಾತಿಯಲಿ +ಯಮ
ಸೂನುವನು+ ಬಿಡೆ +ನೋಡಿ +ಮೆಲ್ಲನೆ +ಸರಿದನಲ್ಲಿಂದ

ಅಚ್ಚರಿ:
(೧) ಸುಮ್ಮನಿರು ಎಂದು ಹೇಳುವ ಪರಿ – ಮೌನಮುದ್ರೆಯ ಹಿಡಿಯೆನಲು ಪವಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ

ಪದ್ಯ ೪೬: ಅರ್ಜುನನು ಭೀಷ್ಮನ ಎಷ್ಟು ಬಿಲ್ಲನ್ನು ತುಂಡುಮಾಡಿದನು?

ಮತ್ತೆ ಹೊಸ ಚಾಪದಲಿ ಭೀಷ್ಮನು
ಮಿತ್ತು ಖತಿಗೊಂಡಂತೆ ಶರದಲಿ
ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ
ಮುತ್ತಯನ ಕರತಳದ ಧನುವನು
ಕತ್ತರಿಸಿದನು ಹಿಡಿಯಲೀಯದೆ
ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ (ಭೀಷ್ಮ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭೀಷ್ಮನು ಮತ್ತೆ ಹೊಸಬಿಲ್ಲನ್ನು ಹಿಡಿದು ಕೋಪಗೊಂಡು ಮೃತ್ಯುವಿನಂತೆ ಬಾಣವನ್ನು ಬಿಡಲು, ಅರ್ಜುನನು ಭೀಷ್ಮನ ಆ ಬಿಲ್ಲನ್ನು ಮುರಿದನು. ಹೀಗೆ ಭೀಷ್ಮನು ಹಿಡಿದ ಹತ್ತು ಸಾವಿರ ಬಿಲ್ಲುಗಳನ್ನು ಅರ್ಜುನನು ತುಂಡು ಮಾಡಿದನು.

ಅರ್ಥ:
ಹೊಸ: ನವೀನ; ಚಾಪ: ಬಿಲ್ಲು; ಮಿತ್ತು: ಮೃತ್ಯು; ಖತಿ: ಕೋಪ; ಶರ: ಬಾಣ; ಕೆತ್ತು: ನಡುಕ, ಸ್ಪಂದನ; ಆಕಾಶ: ಅಂಬರ, ಆಗಸ; ಕಡಿ: ಸೀಳು; ನಿಮಿಷ: ಕ್ಷಣ, ಕಾಲದ ಪ್ರಮಾಣ; ಮುತ್ತಯ್ಯ: ಮುತ್ತಾತ; ಕರತಳ: ಹಸ್ತ; ಧನು: ಬಿಲ್ಲು; ಕತ್ತರಿಸು: ಸೀಳು; ಹಿಡಿ: ಗ್ರಹಿಸು; ಸವೆ: ನಾಶ, ನೀಗು; ಪಿತಾಮಹ: ತಾತ; ಸಾವಿರ: ಸಹಸ್ರ;

ಪದವಿಂಗಡಣೆ:
ಮತ್ತೆ +ಹೊಸ +ಚಾಪದಲಿ +ಭೀಷ್ಮನು
ಮಿತ್ತು +ಖತಿಗೊಂಡಂತೆ +ಶರದಲಿ
ಕೆತ್ತನ್+ಆಕಾಶವನು+ ಕಡಿದನು+ ಪಾರ್ಥ +ನಿಮಿಷದಲಿ
ಮುತ್ತಯನ+ ಕರತಳದ +ಧನುವನು
ಕತ್ತರಿಸಿದನು +ಹಿಡಿಯಲ್+ಈಯದೆ
ಹತ್ತು +ಸಾವಿರ +ಬಿಲ್ಲು +ಸವೆದವು +ಕುರು+ಪಿತಾಮಹನ

ಅಚ್ಚರಿ:
(೧) ಭೀಷ್ಮನ ಸವೆದ ಬಿಲ್ಲುಗಳು – ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ
(೨) ಚಾಪ, ಬಿಲ್ಲು, ಧನು – ಸಮಾನಾರ್ಥಕ ಪದ

ಪದ್ಯ ೪೨: ಕೃಷ್ಣನ ಮಹಿಮೆ ಎಂತಹುದು?

ಶತ ಪಿತಾಮಹರಡಗರೇ ನೀ
ಮತಿ ಮುರಿಯೆ ಮೇಣ್ ಭ್ರೂವಿಲಾಸ
ಸ್ಥಿತಿಯೊಳೇನುತ್ಪತ್ತಿಯಾಗದೆ ಬ್ರಹ್ಮಕೋಟಿಗಳು
ಅತಿಶಯದ ಮಹಿಮಾಸ್ಪದನು ನೀ
ನತಿ ಗಹನನೆಂಬಗ್ಗಳಿಕೆಗಿದು
ಕೃತಕವಲ್ಲಾ ದೇವ ಹೇಳೆನ್ನಾಣೆ ಹೇಳೆಂದ (ಭೀಷ್ಮ ಪರ್ವ, ೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ನೀನು ಬೇಸತ್ತು ಬಿಟ್ಟರೆ ಸಾಕು, ನೂರು ಜನ ಬ್ರಹ್ಮರು ಅಡಗಿ ಹೋಗುತ್ತಾರೆ, ನಿನ್ನ ಹುಬ್ಬಿನ ವಿಲಾಸದಿಂದಲೇ ಅಸಂಖ್ಯಾತ ಬ್ರಹ್ಮರು ಹುಟ್ಟುವುದಿಲ್ಲವೇ? ನಿನ್ನ ಮಹಿಮೆ ಅತಿಶಯವಾದುದು, ನಿನ್ನನರಿಯುವುದು ಬಹಳ ಕಷ್ಟ ಎಂಬ ನಿನ್ನ ಹಿರಿಮೆಗೆ ಈ ನಿನ್ನ ಕೋಪವು ಕೃತಕವಲ್ಲವೇ ಎಂದು ಭೀಷ್ಮನು ಹೇಳಿದನು.

ಅರ್ಥ:
ಶತ: ನೂರು; ಪಿತಾಮಹ: ತಾತ; ಮತಿ: ಬುದ್ಧಿ; ಮುರಿ: ಸೀಳು; ಮೇಣ್: ಮತ್ತು; ಭ್ರೂವಿಲಾಸ: ಹುಬ್ಬಿನ ಸೊಗಸು; ಸ್ಥಿತಿ: ಇರವು, ಅಸ್ತಿತ್ವ; ಉತ್ಪತ್ತಿ: ಹುಟ್ಟು; ಕೋಟಿ: ಅಸಂಖ್ಯಾತ; ಅತಿಶಯ: ಹೆಚ್ಚು; ಮಹಿಮಾಸ್ಪದ: ಅತ್ಯಂತ ದೊಡ್ಡ, ಶ್ರೇಷ್ಠ; ಗಹನ: ಸುಲಭವಲ್ಲದುದು; ಅಗ್ಗಳಿಕೆ: ಶ್ರೇಷ್ಠ; ಕೃತಕ: ಕಪಟ; ಹೇಳು: ತಿಳಿಸು;

ಪದವಿಂಗಡಣೆ:
ಶತ +ಪಿತಾಮಹರ್+ಅಡಗರೇ +ನೀ
ಮತಿ+ ಮುರಿಯೆ +ಮೇಣ್ +ಭ್ರೂವಿಲಾಸ
ಸ್ಥಿತಿಯೊಳ್+ಏನ್+ಉತ್ಪತ್ತಿಯಾಗದೆ+ ಬ್ರಹ್ಮ+ಕೋಟಿಗಳು
ಅತಿಶಯದ +ಮಹಿಮಾಸ್ಪದನು+ ನೀ
ನತಿ +ಗಹನನೆಂಬ್+ಅಗ್ಗಳಿಕೆಗ್+ಇದು
ಕೃತಕವಲ್ಲಾ +ದೇವ+ ಹೇಳ್+ಎನ್ನಾಣೆ +ಹೇಳೆಂದ

ಅಚ್ಚರಿ:
(೧) ಮತಿ, ಸ್ಥಿತಿ, ಅತಿ – ಪ್ರಾಸ ಪದಗಳು
(೨) ಕೃಷ್ಣನ ಹಿರಿಮೆ – ಅತಿಶಯದ ಮಹಿಮಾಸ್ಪದನು ನೀನತಿ ಗಹನನೆಂಬಗ್ಗಳಿಕೆ

ಪದ್ಯ ೧೭: ಭೀಷ್ಮನು ಭೀಮನನ್ನು ಹೇಗೆ ಸೋಲಿಸಿದನು?

ಎಲೆ ಪಿತಾಮಹ ನೀವು ಕರುಣಿಸಿ
ದಳವ ನಿಮಗೊಪ್ಪಿಸುವೆ ಜಯವೆಮ
ಗುಳಿವು ಬೇರೆಂತೆನುತ ಕೊಂಡನು ಪವನಸುತ ಧನುವ
ಚಳಕದಲಿ ತೆಗೆದೆಚ್ಚಡಹಿತನ
ಹಿಳುಕ ಸೀಳಿದು ಬಿಸುಟು ಭೀಮನ
ಗೆಲಿದನೆಂಟಂಬಿನಲಿ ಗಂಗಾಸೂನು ಸಮರದಲಿ (ಭೀಷ್ಮ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಎಲೈ ಪಿತಾಮಹರೇ, ನೀವು ಕಲಿಸಿದ ಪಾಥವನ್ನು ನಿಮಗೊಪ್ಪಿಸುತ್ತೇನೆ ಎಂದು ಭೀಮನು ಭೀಷ್ಮನ ಮೇಲೆ ಬಹು ಬೇಗ ಬಾಣಗಳನ್ನು ಬಿಟ್ಟನು. ಭೀಷ್ಮನು ಭೀಮನ ಬಾಣಗಳನ್ನು ಕಡಿದು ಎಂಟು ಬಾಣಗಳಿಂದ ಅವನನ್ನು ಗೆದ್ದನು.

ಅರ್ಥ:
ಪಿತಾಮಹ: ಅಜ್ಜ; ಕರುಣಿಸು: ದಯೆ ತೋರು; ದಳ: ಸೈನ್ಯ; ಒಪ್ಪು: ಅಂಗೀಕರಿಸು, ಸಮ್ಮತಿಸು; ಜಯ: ಗೆಲುವು; ಉಳಿವು: ಜೀವ; ಕೊಂಡನು: ಧರಿಸಿದನು; ಪವನಸುತ: ವಾಯುಪುತ್ರ; ಧನು: ಬಿಲ್ಲು; ಚಳಕ: ಚಾತುರ್ಯ; ಎಚ್ಚು: ಬಾಣ ಪ್ರಯೋಗ ಮಾಡು; ಅಹಿತ: ವೈರಿ; ಹಿಳುಕು: ಬಾಣದ ಗರಿ; ಸೀಳು: ಚೂರು, ತುಂಡು; ಬಿಸುಟು: ಹೊರಹಾಕು; ಗೆಲಿ: ಜಯಿಸು; ಅಂಬು: ಬಾಣ; ಸೂನು: ಪುತ್ರ; ಸಮರ: ಯುದ್ಧ; ಅಳವು: ಶಕ್ತಿ;

ಪದವಿಂಗಡಣೆ:
ಎಲೆ +ಪಿತಾಮಹ +ನೀವು +ಕರುಣಿಸಿದ್
ಅಳವ+ ನಿಮಗ್+ಒಪ್ಪಿಸುವೆ +ಜಯವೆಮಗ್
ಉಳಿವು+ ಬೇರೆಂತ್+ಎನುತ +ಕೊಂಡನು +ಪವನಸುತ +ಧನುವ
ಚಳಕದಲಿ+ ತೆಗೆದ್+ಎಚ್ಚಡ್+ಅಹಿತನ
ಹಿಳುಕ+ ಸೀಳಿದು +ಬಿಸುಟು +ಭೀಮನ
ಗೆಲಿದನ್+ಎಂಟ್+ಅಂಬಿನಲಿ +ಗಂಗಾಸೂನು +ಸಮರದಲಿ

ಅಚ್ಚರಿ:
(೧) ಭೀಷ್ಮನ ಸಾಮರ್ಥ್ಯ – ಅಹಿತನ ಹಿಳುಕ ಸೀಳಿದು ಬಿಸುಟು ಭೀಮನ ಗೆಲಿದನೆಂಟಂಬಿನಲಿ ಗಂಗಾಸೂನು

ಪದ್ಯ ೯೨: ಅರ್ಜುನನಿಗೆ ಕೃಷ್ಣನು ಯಾವ ಪ್ರಶ್ನೆ ಕೇಳಿದನು?

ಗುರುಗಳಿಗೆ ನಾ ತಪ್ಪೆನೆಂದೇ
ಮುರಿದಡೆನಗದು ಖಾತಿ ಭೀಷ್ಮನು
ವರಪಿತಾಮಹನೆಂದು ಹೊಳೆದರೆ ಬಳಿಕಸಹ್ಯವದು
ಅರಿಬಲವು ಮುನ್ನುರಿವುದೋ ನೀ
ನರಿವೆಯೋ ಲೇಸಾಗಿ ಎನ್ನೊಳು
ನರ ನಿರೀಕ್ಷಿಸೆನುತ್ತ ನುಡಿದನು ದಾನವಧ್ವಂಸಿ (ಭೀಷ್ಮ ಪರ್ವ, ೩ ಸಂಧಿ, ೯೨ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಉತ್ತರಿಸುತ್ತಾ, ಎಲೈ ಅರ್ಜುನ ನೀನು ನನ್ನ ಗುರುಗಳ ಮೇಲೆ ನಾನು ಕೈಯೆತ್ತುವುದಿಲ್ಲವೆಂದು ಹೇಳಿದರೆ ನನಗೆ ಕೋಪ ಬರುತ್ತದೆ, ಭೀಷ್ಮನು ನನಗೆ ಪಿತಾಮಹನೆಂದು ನೀನು ಹೋರಾಡಲು ಹಿಂಜರಿದರೆ ನಾನದನ್ನು ಸಹಿಸುವುದಿಲ್ಲ, ಅರ್ಜುನ ನೀನು ಹೊಡೆದರೆ ಶತ್ರು ಸೈನ್ಯವು ಉರಿಯುವುದೋ ನನ್ನನ್ನು ನೋಡಿ ಹೇಳು ಎಂದು ಅರ್ಜುನನನ್ನು ಕೇಳಿದನು.

ಅರ್ಥ:
ಗುರು: ಆಚಾರ್ಯ; ತಪ್ಪು: ಸರಿಯಲ್ಲದು; ಮುರಿ: ಸೀಳು; ಖಾತಿ: ಕೋಪ; ವರ: ಶ್ರೇಷ್ಠ; ಪಿತಾಮಹ: ತಾತ; ಹೊಳೆ: ಜ್ಞಾಪಿಸಿಕೋ; ಬಳಿಕ: ನಂತರ; ಅಸಹ್ಯ: ಹೇಸಿಗೆ; ಅರಿ: ಶತ್ರು; ಬಲ: ಸೈನ್ಯ; ಮುನ್ನ: ಮೊದಲು; ಉರಿ: ಜ್ವಾಲೆ; ಅರಿ: ತಿಳಿ; ಲೇಸು: ಒಳಿತು; ನರ: ಅರ್ಜುನ; ನಿರೀಕ್ಷೆ: ದಾರಿ ಕಾಯುವುದು; ನುಡಿ: ಮಾತಾಡು; ದಾನವ: ರಾಕ್ಷಸ; ಧ್ವಂಸಿ: ನಾಶಮಾಡುವವ;

ಪದವಿಂಗಡಣೆ:
ಗುರುಗಳಿಗೆ +ನಾ+ ತಪ್ಪೆನೆಂದೇ
ಮುರಿದಡ್+ಎನಗದು +ಖಾತಿ +ಭೀಷ್ಮನು
ವರ+ಪಿತಾಮಹನೆಂದು +ಹೊಳೆದರೆ +ಬಳಿಕ್+ಅಸಹ್ಯವದು
ಅರಿ+ಬಲವು +ಮುನ್ನ್+ಉರಿವುದೋ +ನೀನ್
ಅರಿವೆಯೋ +ಲೇಸಾಗಿ +ಎನ್ನೊಳು
ನರ +ನಿರೀಕ್ಷಿಸೆನುತ್ತ+ ನುಡಿದನು+ ದಾನವಧ್ವಂಸಿ

ಅಚ್ಚರಿ:
(೧) ಅರಿ ಪದದ ಬಳಕೆ – ವೈರಿ ಮತ್ತು ತಿಳಿ ಅರ್ಥದಲ್ಲಿ

ಪದ್ಯ ೩೪: ಕರ್ಣನು ಯಾವ ಪ್ರಶ್ನೆಯನ್ನು ಕೇಳಿದನು?

ಎಲೆ ಮರುಳೆ ಭೂಪಾಲ ಕೌರವ
ಕುಲಪಿತಾಮಹನಹನು ಧರ್ಮಂ
ಗಳಲಿ ಪರಿಣತನಹನು ಕಾಳಗವೆತ್ತಲಿವರೆತ್ತ
ಗಳದ ಗರಳನ ದೊರೆಯ ಭಟಮಂ
ಡಲಿಯೊಳಗೆ ಮನ್ನಣೆಯೆ ಹೇಳೈ
ಕಳಿದ ಹರೆಯಂಗೆಂದು ಗಹಗಹಿಸಿದನು ಕಲಿಕರ್ಣ (ಭೀಷ್ಮ ಪರ್ವ, ೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕರ್ಣನು ಜೋರಾಗಿ ನಗುತ್ತಾ ಎಲೈ ಮೂಢ ದುರ್ಯೋಧನ, ಭೀಷ್ಮನು ಕುಲಪಿತಾಮಹನು ನಿಜ, ಧರ್ಮಗಳನ್ನು ಚೆನ್ನಾಗಿ ಅರಿತು ಆಚರಿಸುವವನು, ಆದರೆ ಇವನೆಲ್ಲಿ ಯುದ್ಧವೆಲ್ಲಿ? ಯೌವ್ವನವು ಕಳೆದುಹೋದ ಇವನಿಗೆ ಕಂಠದಲ್ಲಿ ವಿಷವನ್ನು ಧರಿಸಿದ ಶಿವನಿಗೆ ಸರಿಸಮಾನರಾದ ವೀರರ ನಡುವೆ ಗೌರವವು ದೊರೆತೀತೇ ಎಂದು ಮತ್ಸರಭಾವದಿಂದ ದುರ್ಯೋಧನನನ್ನು ಕೇಳಿದನು.

ಅರ್ಥ:
ಮರುಳೆ: ಮೂಢ; ಭೂಪಾಲ: ರಾಜ; ಕುಲ: ವಂಶ; ಪಿತಾಮಹ: ತಾತ; ಧರ್ಮ: ಧಾರಣ ಮಾಡಿದುದು, ನಿಯಮ; ಪರಿಣತ: ನೈಪುಣ್ಯವುಳ್ಳವನು, ನಿಷ್ಣಾತ; ಕಾಳಗ: ಯುದ್ಧ; ಗಳ: ಕಂಠ; ಗರಳ: ವಿಷ; ದೊರೆ: ರಾಜ; ಭಟ: ಪರಾಕ್ರಮಿ; ಮಂಡಲಿ: ಗುಂಪು; ಮನ್ನಣೆ: ಗೌರವ; ಹೇಳು: ತಿಳಿಸು; ಕಳಿದ: ತೀರಿಹೋದ; ಹರೆ: ಯೌವ್ವನ; ಗಹಗಹಿಸು: ಗಟ್ಟಿಯಾಗಿ ನಗು;

ಪದವಿಂಗಡಣೆ:
ಎಲೆ +ಮರುಳೆ +ಭೂಪಾಲ +ಕೌರವ
ಕುಲ+ಪಿತಾಮಹನಹನು +ಧರ್ಮಂ
ಗಳಲಿ+ ಪರಿಣತನಹನು +ಕಾಳಗವ್+ಎತ್ತಲ್+ಇವರೆತ್ತ
ಗಳದ +ಗರಳನ +ದೊರೆಯ +ಭಟ+ಮಂ
ಡಲಿಯೊಳಗೆ +ಮನ್ನಣೆಯೆ +ಹೇಳೈ
ಕಳಿದ +ಹರೆಯಂಗೆಂದು +ಗಹಗಹಿಸಿದನು +ಕಲಿಕರ್ಣ

ಅಚ್ಚರಿ:
(೧) ಶಿವನನ್ನು ವರ್ಣಿಸುವ ಪರಿ – ಗಳದ ಗರಳನ ದೊರೆಯ
(೨) ಹಂಗಿಸುವ ಪರಿ – ಕಳಿದ ಹರೆಯಂಗೆಂದು ಗಹಿಗಹಿಸಿದನು ಕಲಿಕರ್ಣ

ಪದ್ಯ ೮: ದೂತರು ಉತ್ತರನ ಪೌರುಷವನ್ನು ಹೇಗೆ ವಿವರಿಸಿದರು?

ರಾಯಕುವರ ಪಿತಾಮಹನು ರಿಪು
ರಾಯಕುವರ ಕುಠಾರ ಕೌರವ
ರಾಯಥಟ್ಟುವಿಭಾಡ ಕುರುಕುಲ ಗಜಕೆ ಪಂಚಾಸ್ಯ
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯದಳವನು ಗೆಲಿದ ನುತ್ತರ ತುರುವ ಮರಳಿಚಿದ (ವಿರಾಟ ಪರ್ವ, ೯ ಸಂಧಿ, ೮ ಪದ್ಯ)

ತಾತ್ಪರ್ಯ:
ಉತ್ತರನು ರಾಜಕುಮಾರರೆಲ್ಲರಿಗೆ ಹಿರಿಯ, ಶತ್ರು ರಾಜಕುಮಾರರ ಪಾಲಿಗೆ ಕೊಡಲಿ, ಕೌರವ ಸೈನ್ಯವನ್ನು ನಾಶಗೊಳಿಸಿದವನು, ಕೌರವರೆಂಬ ಆನೆಗಳಿಗೆ ಸಿಂಹನಾದವನು, ಒಡೆಯ ಎಂತಹ ಸಂತಸದ ಸುದ್ದಿ, ಕರ್ಣ, ದ್ರೋಣ, ಭೀಷ್ಮ, ಮೊದಲಾದ ಸಮಸ್ತ ಕೌರವ ಸೈನ್ಯವನ್ನು ಗೆದ್ದು ಉತ್ತರ ಕುಮಾರನು ಗೋವುಗಳನ್ನು ಬಿಡಿಸಿದ್ದಾನೆ ಎಂದು ದೂತರು ಹೇಳಿದರು.

ಅರ್ಥ:
ರಾಯ: ರಾಜ; ಕುವರ: ಪುತ್ರ; ಪಿತಾಮಹ: ಹಿರಿಯ, ತಾತ; ರಿಪು: ವೈರಿ; ಕುಠಾರ: ಕೊಡಲಿ, ಗುದ್ದಲಿ; ಥಟ್ಟು: ಸೈನ್ಯ, ಪಡೆ; ವಿಭಾಡ: ನಾಶಮಾಡುವವನು; ಕುಲ: ವಂಶ; ಗಜ: ಆನೆ; ಪಂಚಾಸ್ಯ: ಸಿಂಹ; ಜೀಯ: ಒಡೆಯ; ಬಿನ್ನಹ: ಮನವಿ; ಅಖಿಳ: ಎಲ್ಲಾ; ದಳ: ಸೈನ್ಯ; ಗೆಲಿದು: ಜಯಿಸಿ; ತುರು: ಆಕಳು; ಮರಳು: ಹಿಂದಿರುಗು;

ಪದವಿಂಗಡಣೆ:
ರಾಯ+ಕುವರ +ಪಿತಾಮಹನು +ರಿಪು
ರಾಯ+ಕುವರ+ ಕುಠಾರ+ ಕೌರವ
ರಾಯ+ಥಟ್ಟು+ವಿಭಾಡ +ಕುರುಕುಲ +ಗಜಕೆ +ಪಂಚಾಸ್ಯ
ಜೀಯ +ಬಿನ್ನಹ +ಕರ್ಣ +ಗುರು+ ಗಾಂ
ಗೇಯ +ಮೊದಲಾದ್+ಅಖಿಳ +ಕೌರವ
ರಾಯ+ದಳವನು +ಗೆಲಿದನ್ +ಉತ್ತರ +ತುರುವ +ಮರಳಿಚಿದ

ಅಚ್ಚರಿ:
(೧) ರಾಯ – ೧-೩. ೬ ಸಾಲಿನ ಮೊದಲ ಪದ
(೨) ಉತ್ತರನನ್ನು ಹೊಗಳುವ ಪರಿ – ರಾಯಕುವರ ಪಿತಾಮಹನು ರಿಪುರಾಯಕುವರ ಕುಠಾರ ಕೌರವ
ರಾಯಥಟ್ಟುವಿಭಾಡ ಕುರುಕುಲ ಗಜಕೆ ಪಂಚಾಸ್ಯ

ಪದ್ಯ ೫೦: ಭೀಷ್ಮನನ್ನು ಪಾಠಕರು ಹೇಗೆ ಹೊಗಳಿದರು?

ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರುಸಾರೆನುತೆ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ (ವಿರಾಟ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಭೀಷ್ಮನ ಸುತ್ತಲಿದ್ದ ಮಹಾರಥರು ಅರ್ಜುನನಿಗೆ, ರಾಜ ಪಿತಾಮಹರಾದ ಭೀಷ್ಮನ ಕೋಪವು ಅತಿಶಯವಾದುದು, ನಿನ್ನನ್ನು ರಕ್ಷಿಸಲು ಹರಿಹರ್ರನ್ನೇ ಕರೆಸು, ನೀನಿನ್ನೂ ಕೂಸು, ಭೀಷ್ಮ ನನ್ನೆದುರಿಸಲು ನಿನ್ನಿಂದಾಗುವುದಿಲ್ಲ. ದೂರ ಹೋಗು ಎಂದು ಕೂಗುತ್ತಿದ್ದರು, ಕಹಳೆಗಳು ಮೊಳಗಿದವು, ಭೀಷ್ಮನ ಬಿರುದುಗಳನ್ನು ಪಾಠಕರು ಉಗ್ಗಡಿಸುತ್ತಿದ್ದರು.

ಅರ್ಥ:
ತೊಲಗು: ಹೊರಡು; ರಾಯ: ರಾಜ; ಪಿತಾಮಹ: ತಾತ; ಖತಿ: ಕೋಪ; ಬಲುಹು: ಹೆಚ್ಚು; ತೆತ್ತಿಗ: ಹೊಣೆಗಾರ, ರಕ್ಷಕ; ರುದ್ರ: ಶಿವನ ಅವತಾರ; ನಳಿನನಾಭ: ವಿಷ್ಣು; ಕರೆಸು: ಬರೆಮಾಡು; ಶಿಶು: ಮಗು; ಸಾರು: ಪ್ರಕಟಿಸು; ಉಲಿ: ಶಬ್ದ; ಬಳಿ: ಹತ್ತಿರ; ಮಹಾರಥ: ಪರಾಕ್ರಮಿ; ಕಳಕಳ: ವ್ಯಥೆ, ಉದ್ವಿಗ್ನತೆ; ಕಹಳೆ: ತುತ್ತೂರಿ; ಪಾಠಕ: ಹೊಗಳುಭಟ್ಟ; ಗಾವಳಿ: ಘೋಷಣೆ; ಬಿರುದು: ಹೊಗಳುವ ಮಾತು; ಬಹಳ:ತುಂಬ; ಐತಂದು: ಬರೆಮಾಡು;

ಪದವಿಂಗಡಣೆ:
ತೊಲಗು+ ರಾಯ +ಪಿತಾಮಹನ+ ಖತಿ
ಬಲುಹು +ತೆತ್ತಿಗರಹರೆ +ರುದ್ರನ
ನಳಿನನಾಭನ+ ಕರೆಸು +ನೀ +ಶಿಶು+ ಸಾರುಸಾರೆನುತೆ
ಉಲಿವ +ಬಳಿಯ +ಮಹಾರಥರ +ಕಳ
ಕಳದ +ಕಹಳೆಯ +ಪಾಠಕರ+ ಗಾ
ವಳಿಯ +ಬಿರುದಿನ+ ಬಹಳತೆಯಲ್+ಐತಂದನಾ +ಭೀಷ್ಮ

ಅಚ್ಚರಿ:
(೧) ಭೀಷ್ಮನನ್ನು ಹೊಗಳುವ ಪರಿ – ರಾಯಪಿತಾಮಹನ ಖತಿಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರುಸಾರೆನುತೆ