ಪದ್ಯ ೭೦: ಮುನಿಗಳು ಮಕ್ಕಳನ್ನು ಹೇಗೆ ಸಂಭೋದಿಸಿದರು?

ಈತನೇ ಧರ್ಮಜನು ಯೆರಡನೆ
ಯಾತ ಭೀಮನು ಬಳಿಕ ಮೂರನೆ
ಯಾತನರ್ಜುನ ನಕುಲನೈದನೆಯಾತ ಸಹದೇವ
ಈತಗಳು ಕೌಂತೇಯ ಮಾದ್ರೇ
ಯಾತಿಶಯ ಪರಿಭೇದ ರಹಿತ
ಖ್ಯಾತರೆಂದರು ಪರಮಮುನಿಗಳು ಪಾಂಡುನಂದನರ (ಆದಿ ಪರ್ವ, ೪ ಸಂಧಿ, ೭೦ ಪದ್ಯ)

ತಾತ್ಪರ್ಯ:
ಮೊದಲನೆಯವನು ಧರ್ಮಜ, ಎರಡನೆಯವನು ಭೀಮ, ಮೂರನೆಯವನು ಅರ್ಜುನ, ನಕುಲನು ನಾಲ್ಕನೆಯವನು, ಐದನೆಯವಉ ಸಹದೇವ. ಕುಂತಿಯ ಮಕ್ಕಳು ಮಾದ್ರಿಯ ಮಕ್ಕಳೆಂಬ ಭೇದವು ಇವರಲ್ಲಿಲ್ಲ. ಇವರು ಪಾಂಡವರು, ಎಂದು ಅಲ್ಲಿದ್ದ ಋಷಿಗಳೆಲ್ಲರೂ ಸಂತೋಷದಿಂದ ಹೇಳಿದರು.

ಅರ್ಥ:
ಅತಿಶಯ: ಹೆಚ್ಚು; ಭೇದ: ಅಂತರ; ರಹಿತ: ಇಲ್ಲದ; ಖ್ಯಾತ: ಪ್ರಸಿದ್ಧಿ; ಪರಮ: ಶ್ರೇಷ್ಠ; ಮುನಿ: ಋಷಿ; ನಂದನ: ಮಕ್ಕಳು;

ಪದವಿಂಗಡಣೆ:
ಈತನೇ+ ಧರ್ಮಜನು +ಎರಡನೆ
ಯಾತ +ಭೀಮನು +ಬಳಿಕ +ಮೂರನೆ
ಯಾತನ್+ಅರ್ಜುನ +ನಕುಲನ್+ಐದನೆಯಾತ +ಸಹದೇವ
ಈತಗಳು +ಕೌಂತೇಯ +ಮಾದ್ರೇಯ
ಅತಿಶಯ +ಪರಿಭೇದ +ರಹಿತ
ಖ್ಯಾತರೆಂದರು +ಪರಮ+ಮುನಿಗಳು +ಪಾಂಡು+ನಂದನರ

ಅಚ್ಚರಿ:
(೧) ಈತ, ಖ್ಯಾತ, ಆತ – ಪ್ರಾಸ ಪದಗಳು

ಪದ್ಯ ೨೪: ಪಾಂಡುವು ಕಾಡಿನಲ್ಲಿ ಯಾವುದರಲ್ಲಿ ನಿರತನಾದನು?

ಈತನಮಲಾಷ್ಟಾಂಗಯೋಗ ವಿ
ಧೂತ ಕಿಲ್ಭಿಷನಾಗಿ ಬಳಿಕ ಮ
ಹಾತಪಸ್ವಿಗಳೊಳಗೆ ಸಂದನು ತೀವ್ರತೇಜದಲಿ
ಆ ತಪೋನಿಷ್ಟಂಗೆ ತಾವತಿ
ಭೀತಿ ಭಕ್ತಿಯೊಲಧಿಕ ಶುಶ್ರೂ
ಷಾತಿಶಯದಲಿ ಮನವಹಿಡಿದರು ಕುಂತಿಮಾದ್ರಿಯರು (ಆದಿ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾಂಡುವು ದೋಷರಹಿತವಾದ ಅಷ್ಟಾಂಗ ಯೊಗದಿಂದ ತನ್ನ ಕಲ್ಮಷಗಳನ್ನು ಕಳೆದುಕೊಂಡು ಮಹಾತೇಜಸ್ವಿಯಾದನು. ತಪೋನಿರತನಾಗಿದ್ದ ಪಾಂಡುವಿಗೆ ಕುಂತಿ ಮಾದ್ರಿಯರು ಭಯ ಭಕ್ತಿಗಳಿಂದ ಶುಶ್ರೂಷೆ ಮಾಡುವುದರಲ್ಲೇ ತಮ್ಮ ಮನಸ್ಸನ್ನು ನಿಯೋಜಿಸಿದರು.

ಅರ್ಥ:
ಅಮಲ: ನಿರ್ಮಲ; ಅಷ್ಟಾಂಗ: ಎಂಟು ಅಂಗಗಳು; ವಿಧೂತ: ಅಲುಗಾಡುವ; ಕಿಲ್ಭಿಷ: ಪಾಪ; ಬಳಿಕ: ನಂತರ; ಮಹಾತಪಸ್ವಿ: ಶ್ರೇಷ್ಠ ಮುನಿವರ್ಯ; ಸಂದು: ಎಡೆ, ಸ್ಥಳ; ತೀವ್ರ: ಹರಿತ, ತೀಕ್ಷ್ಣತೆ; ತೇಜ: ಪ್ರಕಾಶ; ಭೀತಿ: ಭಯ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಅಧಿಕ: ಹೆಚ್ಚು; ಶುಶ್ರೂಷ: ಉಪಚಾರ, ಸೇವೆ; ಮನ: ಮನಸ್ಸು; ಹಿಡಿ: ಗ್ರಹಿಸು;

ಪದವಿಂಗಡಣೆ:
ಈತನ್+ಅಮಲ+ಅಷ್ಟಾಂಗಯೋಗ +ವಿ
ಧೂತ +ಕಿಲ್ಭಿಷನಾಗಿ +ಬಳಿಕ +ಮ
ಹಾ+ತಪಸ್ವಿಗಳೊಳಗೆ +ಸಂದನು +ತೀವ್ರ+ತೇಜದಲಿ
ಆ +ತಪೋನಿಷ್ಟಂಗೆ +ತಾವ್+ಅತಿ
ಭೀತಿ +ಭಕ್ತಿಯೊಳ್+ಅಧಿಕ +ಶುಶ್ರೂಷ
ಅತಿಶಯದಲಿ +ಮನವ+ಹಿಡಿದರು+ ಕುಂತಿ+ಮಾದ್ರಿಯರು

ಅಚ್ಚರಿ:
(೧) ಒಂದೇ ಪದವಾಗಿ ರಚನೆ: ಈತನಮಲಾಷ್ಟಾಂಗಯೋಗ

ಪದ್ಯ ೩೮: ಧರ್ಮಜನು ಕೌರವನಿಗೆ ಏನು ಹೇಳಿದನು?

ಪೂತು ಮಝ ಕುರುಪತಿಯ ಘನಸ
ತ್ವಾತಿಶಯವೈ ಕೌರವಾನ್ವಯ
ಜಾತನಲ್ಲಾ ಬುಧ ಪುರೂರವಸಕ್ರಮಾಗತರ
ಖ್ಯಾತನಲ್ಲಾ ಬಂದುದೊಂದ
ಖ್ಯಾತಿ ಸಲಿಲದ ಗಾಹವುಳಿದಂ
ತೀತನೊಳು ದೊರೆಯಾರು ಸರಿಯೆಂದನು ಮಹೀಪಾಲ (ಗದಾ ಪರ್ವ, ೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ಧರ್ಮಜನು ಕೌರವನನ್ನು ನೋಡಿ, ಭಲೇ, ಭೇಷ್ ದುರ್ಯೋಧನ, ಅತಿಶಯ ಸತ್ವಶಾಲಿ, ಕುರುಕುಲದಲ್ಲಿ ಶ್ರೇಷ್ಠರಾದ ಪುರೂರವ ಪರಂಪರೆಯಲ್ಲಿ ಬಂದ ಪ್ರಖ್ಯಾತ, ಧೀರನಲ್ಲವೇ, ಏನೋ ನೀರಿನಲ್ಲಿ ಅಡಗಿದನೆಂಬ ಒಂದು ಅಪಖ್ಯಾತಿಯಿತ್ತು, ಈಗ ನೀರಿನಿಂದ ಹೊರಕ್ಕೆ ಬಂದಿದ್ದಾನೆ, ಇವನ ಸರಿಸಮಾನರಾರು ಎಂದನು.

ಅರ್ಥ:
ಪೂತು: ಭೇಷ್; ಮಝ: ಭಲೇ; ಘನ: ಶ್ರೇಷ್ಠ; ಸತ್ವ: ಸಾರ; ಅತಿಶಯ: ಹೆಚ್ಚು; ಅನ್ವಯ: ವಂಶ; ಜಾತ: ಹುಟ್ಟಿದ; ಬುಧ: ಪಂಡಿತ; ಕ್ರಮ: ಸರದಿ; ಆಗತ: ಬಂದ; ಖ್ಯಾತ: ಪ್ರಸಿದ್ಧ; ಅಖ್ಯಾತಿ: ಅಪ್ರಸಿದ್ಧ; ಸಲಿಲ: ನೀರು; ಗಾಹು: ಮೋಸ, ವಂಚನೆ; ದೊರೆ: ರಾಜ; ಸರಿ: ಸಮ; ಮಹೀಪಾಲ: ರಾಜ;

ಪದವಿಂಗಡಣೆ:
ಪೂತು +ಮಝ +ಕುರುಪತಿಯ +ಘನ+ಸತ್ವ
ಅತಿಶಯವೈ +ಕೌರವ+ಅನ್ವಯ
ಜಾತನಲ್ಲಾ +ಬುಧ +ಪುರೂರವ+ಸಕ್ರಮಾಗತರ
ಖ್ಯಾತನಲ್ಲಾ +ಬಂದುದ್+ಒಂದ್
ಅಖ್ಯಾತಿ +ಸಲಿಲದ +ಗಾಹವುಳಿದಂತ್
ಈತನೊಳು +ದೊರೆಯಾರು +ಸರಿಯೆಂದನು +ಮಹೀಪಾಲ

ಅಚ್ಚರಿ:
(೧) ಕೌರವನನ್ನು ಹೊಗಳುವ ಪರಿ – ಘನಸತ್ವಾತಿಶಯ; ಈತನೊಳು ದೊರೆಯಾರು ಸರಿ
(೨) ಖ್ಯಾತಿ, ಅಖ್ಯಾತಿ – ವಿರುದ್ಧ ಪದಗಳು

ಪದ್ಯ ೨೦: ಧರ್ಮಜನನ್ನು ಕಾಣಲು ಯಾರು ಬಂದರು?

ಧರಣಿಪನ ಶೋಕಾತಿಶಯವನು
ವರ ಸಮಾಧಿಯೊಳರಿದು ಮುನಿಪತಿ
ಕರಣದಲಿ ಕಡುನೊಂದು ಸಕಲ ಜಗಕ್ಕನುಗ್ರಹವ
ಕರುಣಿಸುವವೊಲು ಕರುಣಿತನವನು
ಮೆರೆಯಲೋಸುಗವಿರದೆ ಗಗನೇ
ಚರದ ಗತಿಯಲಿ ಬಂದನೈ ದ್ವೈಪಾಯನವ್ರತಿಪ (ದ್ರೋಣ ಪರ್ವ, ೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಧರ್ಮಜನ ಅತಿಶಯ ದುಃಖವನ್ನು ಸಮಾಧಿಯಲ್ಲಿದ್ದ ವೇದವ್ಯಾಸರು ತಿಳಿದುಕೊಂಡರು. ಸಕಲ ಲೋಕಕ್ಕೆ ಅನುಗ್ರಹವನ್ನು ಕರುಣಿಸುವ ಆ ಮಹಾನುಭಾವನು ಆಕಾಶ ಮಾರ್ಗದಲ್ಲಿ ಧರ್ಮರಾಯನಿದ್ದಲ್ಲಿಗೆ ಬಂದನು.

ಅರ್ಥ:
ಧರಣಿಪ: ರಾಜ; ಶೋಕ: ದುಃಖ; ಅತಿಶಯ: ಹೆಚ್ಚು; ವರ: ಶ್ರೇಷ್ಠ; ಸಮಾಧಿ: ತನ್ಮಯತೆ; ಅರಿ: ತಿಳಿ; ಮುನಿ: ಋಷಿ; ಕರಣ: ಜ್ಞಾನೇಂದ್ರಿಯ; ಕಡು: ಬಹಳ; ನೊಂದು: ನೋವು; ಸಕಲ: ಎಲ್ಲಾ; ಜಗ: ಪ್ರಪಂಚ; ಅನುಗ್ರಹ: ಕೃಪೆ, ದಯೆ; ಕರುಣೆ: ದಯೆ; ಮೆರೆ: ಖ್ಯಾತಿಹೊಂದು, ಹೊಳೆ; ಗಗನ: ಆಗಸ; ಚರ: ಚಲಿಸು; ಗತಿ: ವೇಗ; ಬಂದು: ಆಗಮಿಸು; ದ್ವೈಪಾಯನ: ವೇದವ್ಯಾಸ; ವ್ರತಿ: ತಪಸ್ವಿ ;

ಪದವಿಂಗಡಣೆ:
ಧರಣಿಪನ +ಶೋಕ+ಅತಿಶಯವನು
ವರ +ಸಮಾಧಿಯೊಳ್+ಅರಿದು +ಮುನಿಪತಿ
ಕರಣದಲಿ+ ಕಡುನೊಂದು +ಸಕಲ +ಜಗಕ್ಕ್+ಅನುಗ್ರಹವ
ಕರುಣಿಸುವವೊಲು +ಕರುಣಿತನವನು
ಮೆರೆಯಲೋಸುಗವ್+ಇರದೆ +ಗಗನೇ
ಚರದ +ಗತಿಯಲಿ +ಬಂದನೈ +ದ್ವೈಪಾಯನ+ವ್ರತಿಪ

ಅಚ್ಚರಿ:
(೧) ವ್ಯಾಸರು ಬಂದ ಕಾರಣ – ಸಕಲ ಜಗಕ್ಕನುಗ್ರಹವ ಕರುಣಿಸುವವೊಲು ಕರುಣಿತನವನು ಮೆರೆಯಲೋಸುಗವಿರದೆ ಗಗನೇಚರದ ಗತಿಯಲಿ ಬಂದನೈ

ಪದ್ಯ ೭೬: ಕೌರವನ ಮಕ್ಕಳು ಅಭಿಮನ್ಯುವನ್ನು ಹೇಗೆ ಹಂಗಿಸಿದರು?

ಫಡ ಕುಮಾರಕ ದೊದ್ದೆಗರ ಸದೆ
ಬಡಿದ ಗರ್ವಿತತನವಕಟ ನ
ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ
ಒಡನೊಡನೆ ನಾರಾಚ ನಿಚಯವ
ಗಡಣಿಸಿದರೇನೆಂಬೆನವರು
ಗ್ಗಡದ ಬಿಲುವಿದ್ಯಾತಿಶಯವನು ಸಮರಭೂಮಿಯಲಿ (ದ್ರೋಣ ಪರ್ವ, ೫ ಸಂಧಿ, ೭೬ ಪದ್ಯ)

ತಾತ್ಪರ್ಯ:
ಕೌರವನ ಮಕ್ಕಳೂ ಬಿಲ್ಲುವಿದ್ಯೆಯಲ್ಲಿ ವಿಶಾರದರು, ಛೇ ಅಭಿಮನ್ಯು ಕ್ಷುಲ್ಲಕರನ್ನು ಗೆದ್ದ ಗರ್ವವನ್ನು ನಮ್ಮೊಡನೆ ತೋರಿಸುವೆಯಾ, ನೋಡು ನಮಗೆ ನೀನು ಸರಿಸಮನೇ, ಸುಮ್ಮನೆ ಆಚೆ ಹೋಗು ಎನ್ನುತ್ತಾ ಮೂದಲಿಸುತ್ತಾ ಮತ್ತೆ ಮತ್ತೆ ಬಾಣಗಳನ್ನು ಬಿಟ್ಟರು.

ಅರ್ಥ:
ಫಡ: ತಿರಸ್ಕಾರದ ಮಾತು; ಕುಮಾರ: ಪುತ್ರ; ದೊದ್ದೆ:ಗುಂಪು; ಸದೆ: ಕುಟ್ಟು, ಪುಡಿಮಾಡು; ಗರ್ವಿತ: ಸೊಕ್ಕಿದ; ಅಕಟ: ಅಯ್ಯೋ; ನೋಡು: ವೀಕ್ಷಿಸು; ಮೇಳ: ಸೇರುವಿಕೆ, ಕೂಡುವಿಕೆ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಒಡನೆ: ಒಮ್ಮೆಲೆ; ನಾರಾಚ: ಬಾಣ, ಸರಳು; ನಿಚಯ: ಗುಂಪು; ಗಡಣ: ಸಮೂಹ; ಉಗ್ಗಡ: ಉತ್ಕಟತೆ, ಅತಿಶಯ; ಬಿಲು: ಬಿಲ್ಲು, ಚಾಪ; ವಿದ್ಯ: ಜ್ಞಾನ; ಅತಿಶಯ: ಹೆಚ್ಚು; ಸಮರಭೂಮಿ: ಯುದ್ಧಭೂಮಿ;

ಪದವಿಂಗಡಣೆ:
ಫಡ +ಕುಮಾರಕ+ ದೊದ್ದೆಗರ+ ಸದೆ
ಬಡಿದ +ಗರ್ವಿತತನವ್+ಅಕಟ +ನ
ಮ್ಮೊಡನೆಯೇ +ನೋಡಿಲ್ಲಿ +ಮೇಳವೆ +ಸಾರು +ಸಾರೆನುತ
ಒಡನೊಡನೆ +ನಾರಾಚ +ನಿಚಯವ
ಗಡಣಿಸಿದರ್+ಏನೆಂಬೆನ್+ಅವರ್
ಉಗ್ಗಡದ +ಬಿಲುವಿದ್ಯ+ಅತಿಶಯವನು +ಸಮರ+ಭೂಮಿಯಲಿ

ಅಚ್ಚರಿ:
(೧) ಅಭಿಮನ್ಯುವನ್ನು ಹಂಗಿಸುವ ಪರಿ – ಫಡ ಕುಮಾರಕ ದೊದ್ದೆಗರ ಸದೆಬಡಿದ ಗರ್ವಿತತನವಕಟ ನ
ಮ್ಮೊಡನೆಯೇ
(೨) ದೊದ್ದೆ, ನಿಚಯ, ಮೇಳ, ಗಡಣ – ಸಮಾನಾರ್ಥಕ ಪದಗಳು

ಪದ್ಯ ೪೫: ದುಶ್ಯಾಸನು ಅಭಿಮನ್ಯುವನ್ನು ಹೇಗೆ ಆಕ್ರಮಣ ಮಾಡಿದನು?

ಕಾತರಿಸದಿರು ಬಾಲ ಭಾಷೆಗ
ಳೇತಕಿವು ನೀ ಕಲಿತ ಬಲುವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ (ದ್ರೋಣ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ದುಶ್ಯಾಸನನು ಉತ್ತರಿಸುತ್ತಾ, ಸಲ್ಲದ ಮಾತಾಡಬೇಡ, ನಿನ್ನ ಬಿಲ್ಲುಗಾರಿಕೆಯ ಚಾತುರ್ಯವಿದ್ದರೆ ಅದನ್ನು ತೋರಿಸು, ಹೆದರುಪುಕ್ಕರನು ಸೋಲಿಸಿ ಅಹಂಕಾರದ ಅತಿರೇಕಕ್ಕೆ ತೆರಳುವ ಜಾಗವಿದಲ್ಲ ಎಂದು ನೂರುಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಕಾತರ: ಕಳವಳ, ಉತ್ಸುಕತೆ; ಬಾಲ: ಚಿಕ್ಕವ, ಮಗು; ಭಾಷೆ: ಮಾತು; ಕಲಿತ: ಅಭ್ಯಾಸಮಾಡಿದ; ಬಲು: ಶಕ್ತಿ; ಅತಿಶಯ: ಹೆಚ್ಚು, ಅಧಿಕ; ತೋರು: ಪ್ರದರ್ಶಿಸು; ಕೈಗುಣ: ಚಾಣಾಕ್ಷತೆ; ಭೀತ: ಭಯ; ಭಟ: ಸೈನಿಕ; ಹೊಳ್ಳು: ಸಾರವಿಲ್ಲದ; ಮದ: ಅಹಂಕಾರ; ಅತಿರೇಕ: ಅತಿಶಯ, ರೂಢಿಗೆ ವಿರೋಧವಾದ ನಡೆ; ಠಾವು: ಎಡೆ, ಸ್ಥಳ, ತಾಣ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಬಾಣ: ಅಂಬು, ಶರ; ಇಂದ್ರ: ಸುರೇಶ; ಸುತ: ಮಗ;

ಪದವಿಂಗಡಣೆ:
ಕಾತರಿಸದಿರು +ಬಾಲ +ಭಾಷೆಗಳ್
ಏತಕಿವು +ನೀ +ಕಲಿತ +ಬಲುವ್
ಇದ್ +ಅತಿಶಯವುಂಟಾದಡ್+ಎಮ್ಮೊಳು +ತೋರು +ಕೈಗುಣವ
ಭೀತ +ಭಟರನು +ಹೊಳ್ಳು+ಕಳೆದ +ಮದ
ಅತಿರೇಕದ +ಠಾವಿದಲ್ಲೆಂದ್
ಈತನ್+ಎಚ್ಚನು +ನೂರು +ಬಾಣದಲ್+ಇಂದ್ರಸುತ+ ಸುತನ

ಅಚ್ಚರಿ:
(೧) ಅಭಿಮನ್ಯುವನ್ನು ಇಂದ್ರಸುತಸುತನ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಹಂಗಿಸುವ ಪರಿ – ಭೀತ ಭಟರನು ಹೊಳ್ಳುಗಳೆದ ಮದಾತಿರೇಕದ ಠಾವಿ

ಪದ್ಯ ೧೪: ಸುಪ್ರತೀಕದ ಶಕ್ತಿ ಹೇಗಿತ್ತು?

ನೆಳಲು ಸುಳಿಯಲು ದಂತಿಯೆಂದ
ಪ್ಪಳಿಸೆ ವಾಸುಕಿ ನೊಂದನಂಬುಧಿ
ತುಳುಕಿದವು ಸತ್ವಾತಿಶಯವೆಂತುಟು ಮಹಾದೇವ
ತುಳಿದುದರಿ ಸುಭಟರನು ಸಾವಿರ
ತಲೆಯ ಸೆಳೆದುದು ಸೋಂಡಿಲಲಿ ವೆ
ಗ್ಗಳೆಯ ಮದಕರಿ ಕೇಣಿಗೊಂಡುದು ವೈರಿಮೋಹರವ (ದ್ರೋಣ ಪರ್ವ, ೩ ಸಂಧಿ, ೧೪
ಪದ್ಯ)

ತಾತ್ಪರ್ಯ:
ಸುಪ್ರತೀಕದ ನೆರಳು ಹೋದ ಹತ್ತಿರದಲ್ಲೆಲ್ಲಾ ಆದಿಶೇಷನು ನೋಂದನು. ಸಮುದ್ರಗಳು ಉಕ್ಕಿದವು. ಅದರ ಸತ್ವವು ಎಷ್ಟಿದ್ದೀತು? ಶತ್ರುಗಳನ್ನು ತುಳಿದು ಅಸಂಖ್ಯಾತ ತಲೆಗಳನ್ನು ಕಿತ್ತು ಮೇಲೆಸೆಯಿತು. ಪಾಂಡವ ಸೈನ್ಯದ ಸಂಹಾರದ ಕೇಣಿಯನ್ನು ಹಿಡಿಯಿತು.

ಅರ್ಥ:
ನೆಳಲು: ನೆರಳು; ಸುಳಿ: ಆವರಿಸು, ಮುತ್ತು; ದಂತಿ: ಆನೆ; ಅಪ್ಪಳಿಸು: ತಟ್ಟು, ತಾಗು; ವಾಸುಕಿ: ಅಷ್ಟಕುಲ ನಾಗಗಳಲ್ಲಿ ಎರಡನೆಯವ (ಅನಂತ, ವಾಸುಕಿ, ತಕ್ಷಕ, ಕರ್ಕೋಟಕ, ಪದ್ಮ, ಮಹಾಪದ್ಮ, ಶಂಖ ಹಾಗೂ ಕುಲಿಕ ಎಂಬ ಅಷ್ಟಕುಲ ನಾಗಗಳು); ನೊಂದು: ನೋವನ್ನುಂಡು; ಅಂಬುಧಿ: ಸಾಗರ; ತುಳುಕು: ತುಂಬಿ ಹೊರಸೂಸು, ಹೊರ ಚೆಲ್ಲು; ಸತ್ವ: ಸಾರ; ಅತಿಶಯ: ಹೆಚ್ಚಳ; ಮಹಾದೇವ: ಶಿವ; ತುಳಿ: ಮೆಟ್ಟು; ಅರಿ: ವೈರಿ; ಸುಭಟ: ಪರಾಕ್ರಮಿ; ಸಾವಿರ: ಸಹಸರ; ತಲೆ: ಶಿರ; ಸೆಳೆತ: ಎಳೆತ, ಸೆಳೆತ; ಸೊಂಡಿಲು: ಮುಖ, ಮೂತಿ, ಗಜಹಸ್ತ; ವೆಗ್ಗಳ: ಹೆಚ್ಚಳ; ಮದಕರಿ: ಅಮಲು ಗರ್ವದಿಂದ ಕೂಡಿದ ಆನೆ; ಕೇಣಿ: ಪ್ರತಿ; ಏಣಿ; ವೈರಿ: ಶತ್ರು; ಮೋಹರ: ಯುದ್ಧ;

ಪದವಿಂಗಡಣೆ:
ನೆಳಲು +ಸುಳಿಯಲು +ದಂತಿಯೆಂದ್
ಅಪ್ಪಳಿಸೆ +ವಾಸುಕಿ +ನೊಂದನ್+ಅಂಬುಧಿ
ತುಳುಕಿದವು+ ಸತ್ವ+ಅತಿಶಯವ್+ಎಂತುಟು +ಮಹಾದೇವ
ತುಳಿದುದ್+ಅರಿ +ಸುಭಟರನು +ಸಾವಿರ
ತಲೆಯ +ಸೆಳೆದುದು +ಸೊಂಡಿಲಲಿ +ವೆ
ಗ್ಗಳೆಯ +ಮದಕರಿ+ ಕೇಣಿಗೊಂಡುದು +ವೈರಿ+ಮೋಹರವ

ಅಚ್ಚರಿ:
(೧) ರೂಪಕದ ಪ್ರಯೋಗ – ನೆಳಲು ಸುಳಿಯಲು ದಂತಿಯೆಂದಪ್ಪಳಿಸೆ ವಾಸುಕಿ ನೊಂದನ್; ಅಂಬುಧಿ
ತುಳುಕಿದವು ಸತ್ವಾತಿಶಯವೆಂತುಟು
(೨) ದಂತಿ, ಕರಿ – ಸಮಾನಾರ್ಥಕ ಪದ

ಪದ್ಯ ೪೨: ಕೃಷ್ಣನ ಮಹಿಮೆ ಎಂತಹುದು?

ಶತ ಪಿತಾಮಹರಡಗರೇ ನೀ
ಮತಿ ಮುರಿಯೆ ಮೇಣ್ ಭ್ರೂವಿಲಾಸ
ಸ್ಥಿತಿಯೊಳೇನುತ್ಪತ್ತಿಯಾಗದೆ ಬ್ರಹ್ಮಕೋಟಿಗಳು
ಅತಿಶಯದ ಮಹಿಮಾಸ್ಪದನು ನೀ
ನತಿ ಗಹನನೆಂಬಗ್ಗಳಿಕೆಗಿದು
ಕೃತಕವಲ್ಲಾ ದೇವ ಹೇಳೆನ್ನಾಣೆ ಹೇಳೆಂದ (ಭೀಷ್ಮ ಪರ್ವ, ೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ನೀನು ಬೇಸತ್ತು ಬಿಟ್ಟರೆ ಸಾಕು, ನೂರು ಜನ ಬ್ರಹ್ಮರು ಅಡಗಿ ಹೋಗುತ್ತಾರೆ, ನಿನ್ನ ಹುಬ್ಬಿನ ವಿಲಾಸದಿಂದಲೇ ಅಸಂಖ್ಯಾತ ಬ್ರಹ್ಮರು ಹುಟ್ಟುವುದಿಲ್ಲವೇ? ನಿನ್ನ ಮಹಿಮೆ ಅತಿಶಯವಾದುದು, ನಿನ್ನನರಿಯುವುದು ಬಹಳ ಕಷ್ಟ ಎಂಬ ನಿನ್ನ ಹಿರಿಮೆಗೆ ಈ ನಿನ್ನ ಕೋಪವು ಕೃತಕವಲ್ಲವೇ ಎಂದು ಭೀಷ್ಮನು ಹೇಳಿದನು.

ಅರ್ಥ:
ಶತ: ನೂರು; ಪಿತಾಮಹ: ತಾತ; ಮತಿ: ಬುದ್ಧಿ; ಮುರಿ: ಸೀಳು; ಮೇಣ್: ಮತ್ತು; ಭ್ರೂವಿಲಾಸ: ಹುಬ್ಬಿನ ಸೊಗಸು; ಸ್ಥಿತಿ: ಇರವು, ಅಸ್ತಿತ್ವ; ಉತ್ಪತ್ತಿ: ಹುಟ್ಟು; ಕೋಟಿ: ಅಸಂಖ್ಯಾತ; ಅತಿಶಯ: ಹೆಚ್ಚು; ಮಹಿಮಾಸ್ಪದ: ಅತ್ಯಂತ ದೊಡ್ಡ, ಶ್ರೇಷ್ಠ; ಗಹನ: ಸುಲಭವಲ್ಲದುದು; ಅಗ್ಗಳಿಕೆ: ಶ್ರೇಷ್ಠ; ಕೃತಕ: ಕಪಟ; ಹೇಳು: ತಿಳಿಸು;

ಪದವಿಂಗಡಣೆ:
ಶತ +ಪಿತಾಮಹರ್+ಅಡಗರೇ +ನೀ
ಮತಿ+ ಮುರಿಯೆ +ಮೇಣ್ +ಭ್ರೂವಿಲಾಸ
ಸ್ಥಿತಿಯೊಳ್+ಏನ್+ಉತ್ಪತ್ತಿಯಾಗದೆ+ ಬ್ರಹ್ಮ+ಕೋಟಿಗಳು
ಅತಿಶಯದ +ಮಹಿಮಾಸ್ಪದನು+ ನೀ
ನತಿ +ಗಹನನೆಂಬ್+ಅಗ್ಗಳಿಕೆಗ್+ಇದು
ಕೃತಕವಲ್ಲಾ +ದೇವ+ ಹೇಳ್+ಎನ್ನಾಣೆ +ಹೇಳೆಂದ

ಅಚ್ಚರಿ:
(೧) ಮತಿ, ಸ್ಥಿತಿ, ಅತಿ – ಪ್ರಾಸ ಪದಗಳು
(೨) ಕೃಷ್ಣನ ಹಿರಿಮೆ – ಅತಿಶಯದ ಮಹಿಮಾಸ್ಪದನು ನೀನತಿ ಗಹನನೆಂಬಗ್ಗಳಿಕೆ

ಪದ್ಯ ೩೩: ಅರ್ಜುನನ ಬಾಣ ಪ್ರಯೋಗ ಹೇಗಿತ್ತು?

ಭಾವಿಸಲು ಪ್ರತಿ ಬಿಂಬದಲಿ ಬೇ
ರಾವುದತಿಶಯವುಂಟು ನೀವೆನ
ಗಾವ ಪರಿಯಲಿ ಕಲಿಸಿದಿರಿ ನಿಮಗೊಪ್ಪಿಸುವೆನದನು
ನೀವು ನೋಡುವುದೆನುತ ನರನೆಸ
ಲಾವುದಂಬರವಾವುದವನಿಯ
ದಾವುದರಿಬಲವೆನಲು ಹಬ್ಬಿತು ಪಾರ್ಥ ಶರಜಾಲ (ವಿರಾಟ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಬಿಂಬದಂತೆ ಪ್ರತಿಬಿಂಬ, ಅದರಲ್ಲೇನೂ ಹೆಚ್ಚಿಲ್ಲ, ನೀವು ನನಗೆ ಕಲಿಸಿದ ರೀತಿಯಲ್ಲೇ ನಾನು ನಿಮಗೆ ಪಾಠವನ್ನೊಪ್ಪಿಸುತ್ತೇನೆ, ಎನ್ನುತ್ತಾ ಅರ್ಜುನನು ಬಾಣಗಳನ್ನು ಬಿಡಲು ಯಾವುದು ಭೂಮಿ, ಯಾವುದು ಆಗಸ, ಶತ್ರು ಸೈನ್ಯವಾವುದು ಎನ್ನುವುದು ತಿಳಿಯದಂತೆ ಅರ್ಜುನನ ಬಾಣಗಳು ಹಬ್ಬಿದವು.

ಅರ್ಥ:
ಭಾವಿಸು: ತಿಳಿ; ಪ್ರತಿಬಿಂಬ: ಪ್ರತಿ ಚ್ಛಾಯೆ, ಮೂಲಕ್ಕೆ ಸದೃಶವಾದುದು; ಬೇರೆ: ಅನ್ಯ; ಅತಿಶಯ: ಹೆಚ್ಚು; ಪರಿ: ರೀತಿ; ಕಲಿಸು: ಹೇಳು; ಒಪ್ಪಿಸು: ನೀಡು; ನೋಡು: ವೀಕ್ಷಿಸು; ನರ: ಅರ್ಜುನ; ಎಸು: ಬಾಣ ಪ್ರಯೋಗ ಮಾಡು; ಅಂಬರ: ಆಗಸ; ಅವನಿ: ಭೂಮಿ; ಅರಿಬಲ: ವೈರಿಯ ಸೈನ್ಯ; ಹಬ್ಬು: ಹರಡು; ಶರಜಾಲ: ಬಾಣಗಳ ಬಲೆ;

ಪದವಿಂಗಡಣೆ:
ಭಾವಿಸಲು +ಪ್ರತಿ +ಬಿಂಬದಲಿ +ಬೇ
ರಾವುದ್+ಅತಿಶಯವುಂಟು +ನೀವ್+ಎನಗ್
ಆವ+ ಪರಿಯಲಿ +ಕಲಿಸಿದಿರಿ +ನಿಮಗ್+ಒಪ್ಪಿಸುವೆನದನು
ನೀವು +ನೋಡುವುದ್+ಎನುತ +ನರನ್+ಎಸಲ್
ಆವುದ್+ಅಂಬರವ್+ಆವುದ್+ಅವನಿಯದ್
ಆವುದ್+ಅರಿಬಲವ್+ಎನಲು +ಹಬ್ಬಿತು +ಪಾರ್ಥ +ಶರಜಾಲ

ಅಚ್ಚರಿ:
(೧) ತನ್ನನ್ನು ದ್ರೋಣನ ಪ್ರತಿಬಿಂಬ ಎಂದು ಹೇಳುವ ಪರಿ – ಭಾವಿಸಲು ಪ್ರತಿ ಬಿಂಬದಲಿ ಬೇರಾವುದತಿಶಯವುಂಟು
(೨) ಅ ಕಾರದ ಪದಗಳು – ಅಂಬರ, ಅವನಿ, ಅರಿಬಲ

ಪದ್ಯ ೪೬: ಉತ್ತರನು ಅರ್ಜುನನ ಚರಣಕ್ಕೆ ಏಕೆ ಎರಗಿದನು?

ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ (ವಿರಾಟ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಉತ್ತರನು, ಹೌದು ನಿಮಗಲ್ಲದೆ ಉಳಿದವರಿಗೆ ಇಂತಹ ಹಿರಿಮೆ ಎಲ್ಲಿಂದ ಬಂದೀತು? ಶಿವ ಶಿವಾ ನಾನು ಮೊದಲೇ ಹೇಳಿದಂತೆ, ಬದುಕಿದ್ದರೆ ಎಂತಹ ಆಶ್ಚರ್ಯವನ್ನಾದರೂ ನೋಡಬಹುದು, ನಿನ್ನೊಡನೆ ನಾನು ವರ್ತಿಸಿದ ರೀತಿ ಆಡಿದ ಮಾತುಗಳ ತಪ್ಪುಗಳನ್ನೇ ಭಾವಿಸದೆ, ನನ್ನನ್ನು ಕುಹಕಿಯೆನ್ನದೆ ಕಾಪಾಡು ಎಂದು ನಮಸ್ಕರಿಸಿದನು.

ಅರ್ಥ:
ಬಳಿಕ: ನಂತರ; ಉಳಿದ: ಮಿಕ್ಕ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಕಾಣು: ತೋರು; ಜೀವಿಸು: ಬಾಳು; ಅತಿಶಯ: ಹೆಚ್ಚು; ಗಹನ: ದಟ್ಟವಾದ, ನಿಬಿಡವಾದ; ನುಡಿ: ಮಾತಾಡು; ತಪ್ಪು: ಸರಿಯಲ್ಲದ; ಬಹಳ: ಅಧಿಕ, ಹೆಚ್ಚು; ಭಾವಿಸು: ತಿಳಿ; ಕುಹಕ: ಮೋಸ, ವಂಚನೆ; ಕಾಯ: ರಕ್ಷಿಸು; ಎರಗು: ನಮಸ್ಕರಿಸು, ಬಾಗು; ಪದ: ಪಾದ, ಚರಣ;

ಪದವಿಂಗಡಣೆ:
ಅಹುದು +ಬಳಿಕೇನ್+ಉಳಿದವರಿಗ್+ಈ
ಮಹಿಮೆ +ತಾನೆಲ್ಲಿಯದು +ಕಾಣಲು
ಬಹುದಲಾ +ಜೀವಿಸಿದರ್+ಅತಿಶಯವನು +ಮಹಾದೇವ
ಗಹನ+ ಮಾಡದೆ +ನುಡಿದ +ತಪ್ಪಿನ
ಬಹಳತೆಯ +ಭಾವಿಸದೆ +ತನ್ನನು
ಕುಹಕಿಯೆನ್ನದೆ+ ಕಾಯಬೇಕೆಂದ್+ಎರಗಿದನು +ಪದಕೆ

ಅಚ್ಚರಿ:
(೧) ಉತ್ತರನು ತನ್ನನ್ನು ಕ್ಷಮಿಸು ಎಂದು ಹೇಳುವ ಪರಿ – ನುಡಿದ ತಪ್ಪಿನ ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು