ಪದ್ಯ ೫೯: ಆನೆಗಳ ಸ್ಥಿತಿ ಹೇಗಾಗಿತ್ತು?

ಕೋಡ ಕಿತ್ತನು ನೂರು ಗಜವ ವಿ
ಭಾಡಿಸಿದನಿನ್ನೂರನಡಹಾ
ಯ್ದೋಡಿದವು ನೂರಾನೆ ಭೀಮನ ಗದೆಯ ಗಾಳಿಯಲಿ
ಜೋಡಿಗೆಡೆದವು ನುರು ಮಗ್ಗುಲ
ನೀಡಿದವು ನಾನೂರು ಪುನರಪಿ
ಕೇಡುಗಂಡವು ನೂರು ಭೀಮನ ಗದೆಯ ಘಾಯದಲಿ (ಗದಾ ಪರ್ವ, ೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ನೂರು ಗಜಗಳ ದಂತವನ್ನು ಕಿತ್ತು ಇನ್ನೂರಾನೆಗಳನ್ನು ಬಡಿದನು. ಭೀಮನ ಗದೆಯ ಗಾಳಿಗೆ ನೂರು ಆನೆಗಳು ಹಾರಿಹೋದವು. ಣುರಾನೆಗಳು ಜೋಡಿಜೋಡಿಯಾಗಿ ಬಿದ್ದವು. ನಾನೂರಾನೆಗಳು ಗದೆಯ ಹೊಡೆತಕ್ಕೆ ಗಾಯಗೊಂಡು ಕೆಟ್ಟವು.

ಅರ್ಥ:
ಕೋಡ: ದಂತ; ಕಿತ್ತು: ಕೀಳು, ತುಂಡು ಮಾಡು; ನೂರು: ಶತ; ಗಜ: ಆನೆ; ವಿಭಾಡಿಸು: ನಾಶಮಾಡು; ಹಾಯ್ದು: ಹೊಡೆ; ಗದೆ: ಮುದ್ಗರ; ಗಾಳಿ: ವಾಯು; ಜೋಡಿ: ಜೊತೆ; ಮಗ್ಗುಲು: ಪಕ್ಕ; ಪುನರಪಿ: ಮತ್ತೆ; ಕೇಡು: ಹಾಳು; ಘಾಯ: ಪೆಟ್ಟು;

ಪದವಿಂಗಡಣೆ:
ಕೋಡ +ಕಿತ್ತನು +ನೂರು +ಗಜವ +ವಿ
ಭಾಡಿಸಿದನ್+ಇನ್ನೂರನ್+ಅಡಹಾ
ಯ್ದೋಡಿದವು +ನೂರಾನೆ +ಭೀಮನ +ಗದೆಯ +ಗಾಳಿಯಲಿ
ಜೋಡಿ+ಕೆಡೆದವು +ನೂರು +ಮಗ್ಗುಲ
ನೀಡಿದವು +ನಾನೂರು +ಪುನರಪಿ
ಕೇಡುಗಂಡವು+ ನೂರು +ಭೀಮನ +ಗದೆಯ +ಘಾಯದಲಿ

ಅಚ್ಚರಿ:
(೧) ಗಾಳಿಯಲಿ, ಘಾಯದಲಿ – ಪ್ರಾಸ ಪದಗಳು
(೨) ನೂರು ಪದದ ಬಳಕೆ – ಎಲ್ಲಾ ಸಾಲುಗಳಲ್ಲಿ

ಪದ್ಯ ೩೯: ಯಮನ ನಗರಿಗೆ ಎಷ್ಟು ಮಂದಿ ಹೋದರು?

ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ (ಗದಾ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐನೂರು ಆನೆಗಲೂ, ಸಾವಿರದ ಮುನ್ನೂರೆರಡು ರಥಗಳು, ಎಂಬತ್ತು ಸಾವಿರ ಕಾಲಾಳುಗಳು, ಯಮನಗರಿಗೆ ಹೋದರು. ಮತ್ತೆ ಸಾವಿರ ಕುದುರೆಗಳು, ನೂರು ರಥಗಳು ಇನ್ನೂರೆಂಟು ಆನೆಗಳು, ಲೆಕ್ಕವಿಲ್ಲದಷ್ಟು ಕಾಲಾಳುಗಳು ಅಲ್ಲಿಗೇ ಹೋದರು.

ಅರ್ಥ:
ಕರಿಘಟೆ: ಆನೆಗಳ ಗುಂಪು; ರಥ: ಬಂಡಿ; ಸಾವಿರ: ಸಹಸ್ರ; ತುರಗ: ಅಶ್ವ, ಕುದುರೆ; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಕಾಲಾಳು; ತೆರಳು: ಗಮಿಸು; ಅಂತಕಪುರ: ಯಮನ ಊರು, ನರಕ; ಪುನರಪಿ: ಮತ್ತೆ; ಮದ: ಮತ್ತು, ಅಮಲು; ಅಗಣಿತ: ಲೆಕ್ಕವಿಲ್ಲದ; ಪಾಯದಳ: ಕಾಲಾಳು;

ಪದವಿಂಗಡಣೆ:
ಕರಿಘಟೆಗಳ್+ಐನೂರು +ರಥ+ ಸಾ
ವಿರದ +ಮೂನೂರೆರಡು +ಸಾವಿರ
ತುರಗದಳವ್+ಎಂಬತ್ತು +ಸಾವಿರ +ವಿಗಡ +ಪಾಯದಳ
ತೆರಳಿತ್+ಅಂತಕಪುರಿಗೆ +ಪುನರಪಿ
ತುರಗ +ಸಾವಿರ +ನೂರು +ರಥ +ಮದ
ಕರಿಗಳ್+ಇನ್ನೂರೆಂಟು +ಸಾವಿರ್+ಅಗಣಿತ +ಪಾಯದಳ

ಅಚ್ಚರಿ:
(೧) ಕರಿ, ತುರಗ, ಪಾಯದಳ – ೧,೬; ೩,೫ ಸಾಲಿನ ಮೊದಲ ಪದ; ೩, ೬ ಸಾಲಿನ ಕೊನೆ ಪದ

ಪದ್ಯ ೧೧: ಅರ್ಜುನನ ಬಾಣಕ್ಕೆೆಷ್ಟು ಆನೆಗಳ ಸತ್ತವು?

ಅಳಿದವಿನ್ನೂರಾನೆ ಸರಳ
ಚಳಿಸಿದವು ಮೂನೂರು ಪುನರಪಿ
ಮಲಗಿದವು ನೂರಾನೆ ಕೆಡೆದವು ತಾರುಥಟ್ಟಿನಲಿ
ಬಳಿಕ ನೂರು ನಿರಂತರಾಸ್ತ್ರಾ
ವಳಿ ವಿಘಾತಿಗೆ ನೂರು ಲೆಕ್ಕವ
ಕಳೆದವಿನ್ನೂರಾನೆ ಪಾರ್ಥನ ಕೋಲ ತೋಹಿನಲಿ (ಗದಾ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಇನ್ನೂರು, ಮುನ್ನೂರು, ಮತ್ತೆ ನೂರು ಆನೆಗಳು ಸತ್ತು ಒಟ್ಟೊಟ್ಟಾಗಿ ಬಿದ್ದವು. ಬಳಿಕ ಅವನು ಬಿಟ್ಟ ಬಾಣಗಳ ನಿರಂತರ ಘಾತಿಗೆ ಇನ್ನೂರಾನೆಗಳು ಸತ್ತು ಬಿದ್ದವು.

ಅರ್ಥ:
ಅಳಿ: ನಾಶ; ಸರಳ: ಬಾಣ; ಪುನರಪಿ: ಮತ್ತೆ; ಮಲಗು: ನಿದ್ರಿಸು; ಕೆಡೆ: ಬೀಳು, ಕುಸಿ; ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು; ಬಳಿಕ: ನಂತರ; ನಿರಂತರ: ಯಾವಾಗಲು; ಅಸ್ತ್ರ: ಶಸ್ತ್ರ; ಆವಳಿ: ಗುಂಪು; ವಿಘಾತ: ನಾಶ, ಧ್ವಂಸ; ಲೆಕ್ಕ: ಎಣಿಕೆ; ಕಳೆ: ಹೋಗಲಾಡಿಸು; ಕೋಲ: ಬಾಣ; ತೋಹು: ಸಮೂಹ;

ಪದವಿಂಗಡಣೆ:
ಅಳಿದವ್+ಇನ್ನೂರ್+ಆನೆ +ಸರಳ
ಚ್ಚಳಿಸಿದವು +ಮೂನೂರು +ಪುನರಪಿ
ಮಲಗಿದವು +ನೂರಾನೆ +ಕೆಡೆದವು +ತಾರು+ಥಟ್ಟಿನಲಿ
ಬಳಿಕ+ ನೂರು +ನಿರಂತರ+ಅಸ್ತ್ರಾ
ವಳಿ +ವಿಘಾತಿಗೆ +ನೂರು +ಲೆಕ್ಕವ
ಕಳೆದವ್+ಇನ್ನೂರ್+ಆನೆ +ಪಾರ್ಥನ +ಕೋಲ +ತೋಹಿನಲಿ

ಅಚ್ಚರಿ:
(೧) ಥಟ್ಟು, ತೋಹು, ಆವಳಿ – ಸಮಾನಾರ್ಥಕ ಪದ

ಪದ್ಯ ೩೮: ಧರ್ಮಜನ ಬಾಣವು ಶಲ್ಯನಿಗೇನು ಮಾಡಿತು?

ಸೈರಿಸಾದಡೆಯೆನುತ ಮುಳಿದು ಮ
ಹೀರಮಣ ಮದ್ರಾಧಿಪನನೆ
ಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
ಕೂರಲಗು ಸೀಸಕವ ಕವಚವ
ಹೋರುಗಳೆದವು ನೆತ್ತರಿನ ಬಾ
ಯ್ಧಾರೆಗಳ ತೋರಿದವು ದಳಪತಿಯಪರಭಾಗದಲಿ (ಶಲ್ಯ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇದನ್ನು ಸಹಿಸಿಕೋ ಶಲ್ಯ ಎಂದು ಕೂಗಿ ಯುಧಿಷ್ಠಿರನು ಮೇಲಿಂದ ಮೇಲೆ ಬಾಣಗಳನ್ನು ಶಲ್ಯನ್ ಮೇಲೆ ಬಿಟ್ಟನು. ಮತ್ತೆ ಗರ್ಜಿಸಿ ಮತ್ತೆ ಬಾಣ ಪ್ರಯೋಗಿಸಿದನು. ಅವನ ಬಾಣಗಳು ಶಲ್ಯನ ಕವಚದಲ್ಲಿ ರಂಧ್ರ ಮಾಡಿ ಶಲ್ಯನ ಬೆನ್ನಿನಲ್ಲಿ ಮೊನೆಯನ್ನು ತೋರಿಸಿದವು.

ಅರ್ಥ:
ಸೈರಿಸು: ತಾಳು, ಸಹಿಸು; ಮುಳಿ: ಸಿಟ್ಟು, ಕೋಪ; ಮಹೀರಮಣ: ರಾಜ; ಮದ್ರಾಧಿಪ: ಮದ್ರ ದೇಶದ ರಾಜ(ಶಲ್ಯ); ಎಚ್ಚು: ಬಾಣ ಪ್ರಯೋಗ ಮಾಡು; ಮಗುಳು: ಪುನಃ, ಮತ್ತೆ; ಪುನರಪಿ: ಮತ್ತೆ; ಎಸು: ಬಾಣ ಪ್ರಯೋಗ ಮಾಡು, ಎಚ್ಚು; ಕೂರಲಗು: ಹರಿತವಾದ ಬಾಣ; ಸೀಸಕ: ಶಿರಸ್ತ್ರಾಣ; ಕವಚ: ಹೊದಿಕೆ, ಉಕ್ಕಿನ ಅಂಗಿ; ಹೋರು: ಸೆಣಸು, ಕಾದಾಡು; ನೆತ್ತರು: ರಕ್ತ; ಧಾರೆ: ಮಳೆ; ತೋರು: ಗೋಚರಿಸು; ದಳಪತಿ: ಸೇನಾಧಿಪತಿ; ಅಪರ: ಬೇರೆಯ;

ಪದವಿಂಗಡಣೆ:
ಸೈರಿಸ್+ಆದಡ್+ಎನುತ +ಮುಳಿದು +ಮ
ಹೀರಮಣ+ ಮದ್ರಾಧಿಪನನ್
ಎಚ್ಚಾರಿದನು +ಮಗುಳೆಚ್ಚು +ಪುನರಪಿ+ಎಚ್ಚು +ಮಗುಳೆಸಲು
ಕೂರಲಗು +ಸೀಸಕವ+ ಕವಚವ
ಹೋರುಗಳೆದವು +ನೆತ್ತರಿನ+ ಬಾ
ಯ್ಧಾರೆಗಳ+ ತೋರಿದವು+ ದಳಪತಿ+ಅಪರ+ಭಾಗದಲಿ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುಳಿದು ಮಹೀರಮಣ ಮದ್ರಾಧಿಪನನೆಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
(೨) ರೂಪಕದ ಪ್ರಯೋಗ – ನೆತ್ತರಿನ ಬಾಯ್ಧಾರೆಗಳ ತೋರಿದವು

ಪದ್ಯ ೫೧: ಪಾಂಡವರ ಸೈನ್ಯದಲ್ಲಿ ಮಡಿದವರೆಷ್ಟು?

ಧಾರುಣೀಶರು ಮಡಿದರೊಂದೇ
ಸಾರಿಗೆಯಲೈನೂರು ಮತ್ತೆ ಮ
ಹಾರಥರು ಮೂನೂರು ಪುನರಪಿ ನೂರು ನಾನೂರು
ಮಾರಿ ಬಿರುದೇಗಿದಳು ಯಮನವ
ರಾರದೊಯ್ಯಲು ನಾಕದಲಿ ಹೊರ
ಕೇರಿಗಟ್ಟಿದುದೆನಲು ಕೊಂದನು ರಿಪುಚತುರ್ಬಲವ (ದ್ರೋಣ ಪರ್ವ, ೧೮ ಸಂಧಿ, ೫೧ ಪದ್ಯ)

ತಾತ್ಪರ್ಯ:
ಒಂದೇ ಸಾರಿ ಐನೂರು ರಾಜರು ಮಡಿದರು. ಮುನ್ನೂರು ಮಹಾರಥರು, ಅವರ ಹಿಂದೆ ಮುನ್ನೂರು, ಒಂದು ನೂರು, ನಾಲ್ಕು ನೂರು ಮಡಿದರು. ಮಾರಿ ಬಿರುಸಾಗಿ ತೇಗಿದಳು, ಇವರನ್ನು ಒಯ್ಯಲಾರೆವೆಂದು ಯಮದೂತರು ಸ್ವರ್ಗದ ಹೊರಕೇರಿಗೆ ಅಟ್ಟಿದರು. ಹೀಗೆ ದ್ರೋಣನು ಶತ್ರುಸೈನ್ಯವನ್ನು ಸಂಹಾರ ಮಾಡಿದನು.

ಅರ್ಥ:
ಧಾರುಣೀಶ: ರಾಜ; ಮಡಿ: ಮರಣಹೊಂದು; ಸಾರಿ: ಸಲ, ಬಾರಿ; ಮತ್ತೆ: ಪುನಃ; ಮಹಾರಥ: ಪರಾಕ್ರಮಿ; ಪುನರಪಿ: ಮತ್ತೆ; ನೂರು: ಶತ; ಮಾರಿ: ಕ್ಷುದ್ರ ದೇವತೆ; ಬಿರುದು: ವೇಗ; ಏಗು: ಸಾಗಿಸು, ನಿಭಾಯಿಸು; ಯಮ: ಅಂತಕ; ಒಯ್ಯು: ತೆಗೆದುಕೊಂಡು ಹೋಗು; ನಾಕ: ಸ್ವರ್ಗ; ಹೊರ: ಆಚೆ; ಕೇರಿ: ಬೀದಿ, ಓಣಿ, ಸಾಲು; ಅಟ್ಟು: ಬೆನ್ನುಹತ್ತಿ ಹೋಗು; ಕೊಂದು: ಸಾಯಿಸು; ರಿಪು: ವೈರಿ; ಚತುರ್ಬಲ: ಚತುರಂಗ; ತೇಗು: ತಿಂದು ಮುಗಿಸು;

ಪದವಿಂಗಡಣೆ:
ಧಾರುಣೀಶರು +ಮಡಿದರ್+ಒಂದೇ
ಸಾರಿಗೆಯಲ್+ಐನೂರು +ಮತ್ತೆ +ಮ
ಹಾರಥರು+ ಮೂನೂರು +ಪುನರಪಿ+ ನೂರು +ನಾನೂರು
ಮಾರಿ +ಬಿರು+ತೇಗಿದಳು +ಯಮನವರ್
ಆರದೊಯ್ಯಲು +ನಾಕದಲಿ +ಹೊರ
ಕೇರಿಗ್+ಅಟ್ಟಿದುದ್+ಎನಲು +ಕೊಂದನು +ರಿಪು+ಚತುರ್ಬಲವ

ಅಚ್ಚರಿ:
(೧) ಹೆಚ್ಚು ಜನ ಮಡಿದರೆಂದು ಹೇಳಲು – ಮಾರಿ ಬಿರುದೇಗಿದಳು ಯಮನವರಾರದೊಯ್ಯಲು ನಾಕದಲಿ ಹೊರಕೇರಿಗಟ್ಟಿದುದೆನಲು

ಪದ್ಯ ೨೭: ದ್ರೋಣರು ಭೀಮಾರ್ಜುನರೊಂದಿಗೆ ಹೇಗೆ ಯುದ್ಧ ಮಾಡಿದರು?

ನರನನೆಚ್ಚನು ಪವನಜನ ತನು
ಬಿರಿಯಲೆಚ್ಚನು ಸಾರಥಿಗಳಿ
ಬ್ಬರಲಿ ಹೂಳಿದನಂಬ ನೆರೆ ನೋಯಿಸಿದ ರಥ ಹಯವ
ನರನ ಕಣೆಯನು ಭೀಮನಂಬನು
ಹರೆಗಡಿದು ಮಗುಳೆಚ್ಚನವರನು
ಸರಳ ಪುನರಪಿ ಸವರಿ ಸೆಕ್ಕಿದನೊಡಲೊಳಂಬುಗಳ (ದ್ರೋಣ ಪರ್ವ, ೧೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಬಾಣಗಳಿಂದ ಹೊಡೆದನು. ಭೀಮನ ಮೈ ಬಿರಿಯುವಂತೆ ಹೊಡೆದನು. ಅವರ ದೇಹಗಳಲ್ಲಿ ಬಾಣಗಳನ್ನು ನೆಡಿಸಿದನು. ಅರ್ಜುನ ಭೀಮರ ಬಾಣಗಳನ್ನು ಕತ್ತರಿಸಿ ಎಸೆದು ಮತ್ತೆ ಅವರ ಮೈಗಳಲ್ಲಿ ಬಾಣಗಳು ನೆಡುವಂತೆ ದ್ರೋಣರು ಹೊಡೆದರು.

ಅರ್ಥ:
ನರ: ಅರ್ಜುನ; ಎಚ್ಚು: ಬಾಣ ಪ್ರಯೋಗ ಮಾಡು; ಪವನಜ: ಭೀಮ; ತನು: ದೇಹ; ಬಿರಿ: ಕಠಿಣ, ಕಷ್ಟ, ಸೀಳು; ಸಾರಥಿ: ಸೂತ; ಹೂಳು: ಹೂತು ಹಾಕು; ಅಂಬು: ಬಾಣ; ನೆರೆ: ಗುಂಪು; ನೋಯಿಸು: ಪೆಟ್ಟು; ರಥ: ಬಂಡಿ; ಹಯ: ಕುದುರೆ; ಕಣೆ: ಬಾಣ; ಹರೆ: ಚೆದುರು; ಕಡಿ: ಸೀಳು; ಮಗುಳು: ಪುನಃ, ಮತ್ತೆ; ಸರಳ: ಬಾಣ; ಪುನರಪಿ: ಪುನಃ; ಸವರು: ನಾಶಮಾಡು; ಸೆಕ್ಕು: ಒಳಸೇರಿಸು, ತುರುಕು; ಒಡಲು: ದೇಹ;

ಪದವಿಂಗಡಣೆ:
ನರನನ್+ಎಚ್ಚನು +ಪವನಜನ+ ತನು
ಬಿರಿಯಲ್+ಎಚ್ಚನು +ಸಾರಥಿಗಳ್
ಇಬ್ಬರಲಿ +ಹೂಳಿದನ್+ಅಂಬ +ನೆರೆ +ನೋಯಿಸಿದ+ ರಥ+ ಹಯವ
ನರನ +ಕಣೆಯನು +ಭೀಮನ್+ಅಂಬನು
ಹರೆ+ಕಡಿದು +ಮಗುಳ್+ಎಚ್ಚನವರನು
ಸರಳ +ಪುನರಪಿ+ ಸವರಿ+ ಸೆಕ್ಕಿದನ್+ಒಡಲೊಳ್+ಅಂಬುಗಳ

ಅಚ್ಚರಿ:
(೧) ಅಂಬು, ಸರಳ, ಕಣೆ; ಮಗುಳು, ಪುನರಪಿ; ಪವನಜ, ಭೀಮ – ಸಮಾನಾರ್ಥಕ ಪದಗಳು
(೨) ಎಚ್ಚನು – ೩ ಬಾರಿ ಪ್ರಯೋಗ

ಪದ್ಯ ೪೧: ಕರ್ಣನು ಮತ್ತೆ ಯುದ್ಧಕ್ಕೆ ಹೇಗೆ ಬಂದನು?

ರಥವ ಮೇಳೈಸಿದನು ಹೊಸ ಸಾ
ರಥಿಯ ಕರಸಿದನಾಹವದೊಳತಿ
ರಥಭಯಂಕರನೇರಿದನು ಬಲುಬಿಲ್ಲನೊದರಿಸುತ
ಪೃಥುವಿ ನೆಗ್ಗಲು ಸುಭಟ ಸಾಗರ
ಮಥನ ಕರ್ಣನು ಭೀಮಸೇನನ
ರಥವನರಸುತ ಬಂದು ಪುನರಪಿ ಕಾಳೆಗವ ಹಿಡಿದ (ದ್ರೋಣ ಪರ್ವ, ೧೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅತಿರಥ ಭಯಂಕರನಾದ ಕರ್ಣನು ಹೊಸ ರಥವನ್ನು ಜೋಡಿಸಿದನು. ಹೊಸ ಸಾರಥಿಯನ್ನು ಕರೆಸಿಕೊಂಡನು. ರಥವನ್ನೇರಿ ಹೆದೆಯನ್ನು ಧ್ವನಿಮಾಡಿ, ಭೂಮಿ ಕುಸಿಯುವ ವೇಗದಿಂದ ಸುಭಟ ಸಮುದ್ರವನ್ನು ಕಡೆಯಬಲ್ಲ ಕರ್ಣನು ಭೀಮನ ರಥವನ್ನು ಹುಡುಕುತ್ತಾ ಬಂದು ಅವನೊಡನೆ ಯುದ್ಧವನ್ನಾರಂಭಿಸಿದನು.

ಅರ್ಥ:
ರಥ: ಬಂಡಿ; ಮೇಳೈಸು: ಸೇರು, ಜೊತೆಯಾಗು; ಹೊಸ: ನವೀನ; ಸಾರಥಿ: ಸೂತ; ಕರಸು: ಬರೆಮಾಡು; ಆಹವ: ಯುದ್ಧ; ಅತಿರಥ: ಪರಾಕ್ರಮಿ; ಭಯಂಕರ: ಸಾಹಸಿ, ಗಟ್ಟಿಗ; ಏರು: ಹೆಚ್ಚಾಗು; ಬಲು: ಬಹಳ; ಬಿಲ್ಲು: ಚಾಪ, ಧನುಸ್ಸು; ಒದರು: ಗುಂಪು, ತೊಡಕು; ಪೃಥು: ಭೂಮಿ; ನೆಗ್ಗು: ಕುಗ್ಗು, ಕುಸಿ; ಸುಭಟ: ಪರಾಕ್ರಮಿ; ಸಾಗರ: ಸಮುದ್ರ; ಮಥನ: ಕಡೆಯುವುದು, ಮಂಥನ; ಅರಸು: ಹುಡುಕು; ಬಂದು: ಆಗಮಿಸು; ಪುನರಪಿ: ಪುನಃ; ಕಾಳೆಗ: ಯುದ್ಧ; ಹಿಡಿ: ಗ್ರಹಿಸು;

ಪದವಿಂಗಡಣೆ:
ರಥವ +ಮೇಳೈಸಿದನು +ಹೊಸ +ಸಾ
ರಥಿಯ +ಕರಸಿದನ್+ಆಹವದೊಳ್+ಅತಿ
ರಥ+ಭಯಂಕರನ್+ಏರಿದನು +ಬಲುಬಿಲ್ಲನ್+ಒದರಿಸುತ
ಪೃಥುವಿ +ನೆಗ್ಗಲು +ಸುಭಟ +ಸಾಗರ
ಮಥನ+ ಕರ್ಣನು +ಭೀಮಸೇನನ
ರಥವನ್+ಅರಸುತ +ಬಂದು +ಪುನರಪಿ +ಕಾಳೆಗವ +ಹಿಡಿದ

ಅಚ್ಚರಿ:
(೧) ರಥ, ಅತಿರಥ – ಪ್ರಾಸ ಪದ
(೨) ಕರ್ಣನ ಶಕ್ತಿ – ಸುಭಟ ಸಾಗರ ಮಥನ ಕರ್ಣನು

ಪದ್ಯ ೩೮: ಅರ್ಜುನನು ಮತ್ತೆ ಹೇಗೆ ಬಾಣಗಳನ್ನು ಹೂಡಿದನು?

ಬಸಿವ ರಕುತವ ಬಳಿದು ಖಾತಿಯ
ಮಸಕದಲಿ ಕೈಮರೆದು ಮಿಗೆ ದ
ಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು
ಹೊಸ ಮಸೆಯ ಬಾಯ್ಧಾರೆಗಳ ಶರ
ವಿಸರವನು ತೊಡಚಿದನು ಭೀಷ್ಮನ
ಮುಸುಕಿದನು ಮಗುಳೆಚ್ಚು ಪುನರಪಿ ಕರೆದನಂಬುಗಳ (ಭೀಷ್ಮ ಪರ್ವ, ೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮೈಯಿಂದೊಸರುವ ರಕ್ತವನ್ನು ಬಳಿದು ಅರ್ಜುನನು ಮಹಾಕೋಪದಿಂದ ಮೈಮರೆದು ಕೋಪದಿಂದ ಹಲ್ಲನ್ನ ಕಡಿದು, ಹುಬ್ಬುಗಳನ್ನು ಗಂಟಿಟ್ಟು, ಹೊಸದಾಗಿ ಮಸೆದ ಬಾಯಿಧಾರೆಗಳುಳ್ಳ ಬಾಣಗಳಿಂದ ಭೀಷ್ಮನನ್ನು ಮುಚ್ಚಿ, ಮತ್ತೆ ಬಾಣಗಳನ್ನು ಬಿಟ್ಟನು.

ಅರ್ಥ:
ಬಸಿ: ಒಸರು, ಸ್ರವಿಸು; ರಕುತ: ನೆತ್ತರು; ಬಳಿ:ಎಡೆ, ಸ್ಥಳ; ಖಾತಿ: ಕೋಪ, ಕ್ರೋಧ; ಮಸಕ: ಆಧಿಕ್ಯ, ಹೆಚ್ಚಳ; ಕೈ: ಹಸ್ತ; ಮರೆ:ನೆನಪಿನಿಂದ ದೂರ ಮಾಡು; ಮಿಗೆ: ಹೆಚ್ಚು; ದಳ್ಳಿಸು: ಧಗ್ ಎಂದು ಉರಿ; ಹೊಗರು: ಕಾಂತಿ, ಪ್ರಕಾಶ; ಔಡು: ಹಲ್ಲಿನಿಂದ ಕಚ್ಚು; ಕಚ್ಚು: ಕಡಿ; ಹುಬ್ಬು: ಕಣ್ಣಿನ ಮೇಲಿನ ರೋಮಾವಳಿ; ಬಲಿ: ಹೆಚ್ಚಾಗು; ಹೊಸ: ನವೀನ; ಮಸೆ: ಹರಿತವಾದುದು; ಬಾಯ್ಧಾರೆ: ಮೊನೆಯಾದ ಅಲಗು; ಶರ: ಬಾಣ; ವಿಸರ: ವಿಸ್ತಾರ, ವ್ಯಾಪ್ತಿ; ತೊಡಚು: ಕಟ್ಟು, ಬಂಧಿಸು; ಮುಸುಕು: ಆವರಿಸು; ಮಗುಳು: ಹಿಂತಿರುಗು; ಎಚ್ಚು: ಬಾಣ ಪ್ರಯೋಗ ಮಾಡು; ಪುನರಪಿ: ಮತ್ತೆ; ಕರೆ: ಬರೆಮಾಡು, ಹೂಡು; ಅಂಬು: ಬಾಣ;

ಪದವಿಂಗಡಣೆ:
ಬಸಿವ+ ರಕುತವ +ಬಳಿದು +ಖಾತಿಯ
ಮಸಕದಲಿ +ಕೈಮರೆದು +ಮಿಗೆ +ದ
ಳ್ಳಿಸುತ +ಹೊಗರಿಡುತ್+ಔಡುಗಚ್ಚುತ +ಹುಬ್ಬುಗಳ +ಬಲಿದು
ಹೊಸ +ಮಸೆಯ +ಬಾಯ್ಧಾರೆಗಳ +ಶರ
ವಿಸರವನು +ತೊಡಚಿದನು +ಭೀಷ್ಮನ
ಮುಸುಕಿದನು +ಮಗುಳೆಚ್ಚು +ಪುನರಪಿ+ ಕರೆದನ್+ಅಂಬುಗಳ

ಅಚ್ಚರಿ:
(೧) ಕೋಪವನ್ನು ಚಿತ್ರಿಸುವ ಪರಿ – ಖಾತಿಯ ಮಸಕದಲಿ ಕೈಮರೆದು ಮಿಗೆ ದಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು
(೨) ಮ ಕಾರದ ಪದಗಳ ಬಳಕೆ – ಮಸಕ, ಮುಸುಕಿ, ಮಗುಳು, ಮಸೆ, ಮಿಗೆ

ಪದ್ಯ ೬: ಧರ್ಮಜನು ಏನನ್ನು ಯೋಚಿಸುತ್ತಾ ಹೊರಟನು?

ಸೂಚಿಸಿದವೇ ಶಕುನ ಪುನರಪಿ
ಗೋಚರಿಸಿತೇ ಗರುವನಿಧಿ ನಾ
ವಾಚರಿಸಿತೇನೋ ಶಿವಾ ಭವಭವ ಸಹಸ್ರದಲಿ
ನಾಚಿದವು ನಿಗಮಂಗಳಾವನ
ಸೂಚಿಸಲು ತಮ್ಮೊಳಗೆ ಕೃಪೆಯಲ
ರೋಚಕವನಾದೈವ ಮಾಡದೆನುತ್ತ ಹೊರವಂಟ (ಅರಣ್ಯ ಪರ್ವ, ೧೫ ಸಂಧಿ, ೬ ಪದ್ಯ)

ತಾತ್ಪರ್ಯ:
ಶಕುನವು ಶ್ರೀ ಕೃಷ್ಣನ ಆಗಮನವನ್ನು ಸೂಚಿಸಿದವು. ಆ ಹಿರಿಯನು ಮತ್ತೆ ಕಾಣಿಸಿಕೊಂಡನು. ಸಹಸ್ರಾರು ಜನ್ಮಗಳಲ್ಲಿ ನಾವು ಮಾಡಿದ ಪುಣ್ಯವೇನಿರಬಹುದು! ಯಾರನ್ನು ಸೂಚಿಸಲು ವೇದಗಳು ಕೈಲಾಗದೇ ನಾಚಿದವೋ, ಆ ದೈವವು ನಮ್ಮಲ್ಲಿ ಕೃಪೆದೋರಲು ಎಂದಿಗೂ ಬೇಸರ ಪಡುವುದಿಲ್ಲ ಎನ್ನುತ್ತಾ ಧರ್ಮಜನು ಹೊರಟನು.

ಅರ್ಥ:
ಸೂಚಿಸು: ತೋರಿಸು, ಹೇಳು; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಪುನರಪಿ: ಪುನಃ; ಗೋಚರಿಸು: ತೋರು; ಗರುವ: ಶ್ರೇಷ್ಠ; ನಿಧಿ: ಸಂಪತ್ತು, ಐಶ್ವರ್ಯ; ಆಚರಿಸು: ಮಾಡಿದ; ಭವ: ಜನ್ಮ; ಸಹಸ್ರ: ಸಾವಿರ; ನಾಚು: ಅವಮಾನ ಹೊಂದು; ನಿಗಮ: ವೇದ; ಕೃಪೆ: ದಯೆ; ರೋಚಕ: ತೇಜಸ್ಸುಳ್ಳ; ದೈವ: ಭಗವಂತ; ಹೊರವಂಟ: ನಡೆದ;

ಪದವಿಂಗಡಣೆ:
ಸೂಚಿಸಿದವೇ +ಶಕುನ +ಪುನರಪಿ
ಗೋಚರಿಸಿತೇ +ಗರುವನಿಧಿ+ ನಾವ್
ಆಚರಿಸಿತ್+ಏನೋ +ಶಿವಾ +ಭವಭವ+ ಸಹಸ್ರದಲಿ
ನಾಚಿದವು+ ನಿಗಮಂಗಳ್+ಆವನ
ಸೂಚಿಸಲು+ ತಮ್ಮೊಳಗೆ +ಕೃಪೆಯಲ
ರೋಚಕವನ್+ಆ+ದೈವ +ಮಾಡದೆನುತ್ತ+ ಹೊರವಂಟ

ಅಚ್ಚರಿ:
(೧) ಸೂಚಿಸು, ಗೋಚರಿಸು – ಸಾಮ್ಯಾರ್ಥ ಪದಗಳು
(೨) ಕೃಷ್ಣನ ಮಹಿಮೆ – ನಾಚಿದವು ನಿಗಮಂಗಳಾವನ ಸೂಚಿಸಲು