ಪದ್ಯ ೮: ನೋಟಕರೇಕೆ ಹೊಗಳಿದರು?

ಲುಳಿಯ ಪಯಪಾಡುಗಳ ಬವರಿಯ
ಸುಳಿವುಗಳ ಜಾರುಗಳ ಘಾಯದ
ಕಳವುಗಲ ಕೈಮೆಗಳ ಮೋಡಾಮೋಡಿಯುಬ್ಬಣದ
ಲಲಿತ ಚಿತ್ರದ ಚದುರ ಭಟರ
ವ್ವಳಿಸಿ ಹೊಯ್ದಾಡಿದರು ನೋಟಕ
ರುಲಿದುದಿಬ್ಬರ ಶ್ರಮದ ಶೌರ್ಯದ ವೆಗ್ಗಳೆಯತನಕೆ (ದ್ರೋಣ ಪರ್ವ, ೧೪ ಸಂಧಿ, ೮ ಪದ್ಯ
)

ತಾತ್ಪರ್ಯ:
ರಭಸದಿಂದ ಕಾಲನ್ನು ಇಡುತ್ತಾ ಸುತ್ತಿ, ಸುಳಿದು ಜಾರಿ, ಗಾಯವಾಗುವಂತೆ ಕೈಚಳಕದಿಂದ ಕದ್ದು ತಿವಿದು, ವಿವಿಧ ಪಟ್ಟುಗಳನ್ನು ಹಾಕುತ್ತಾ, ಚತುರರಾದ ಇಬ್ಬರೂ ಬಂಧುರವಾಗಿ ಹೋರಾಡುವುದನ್ನು ನೋಡಿ ಅವರಿಬ್ಬರ ಅಭ್ಯಾಸ ಶೌರ್ಯಗಳನ್ನು ನೋಟಕರು ಹೊಗಳಿದರು.

ಅರ್ಥ:
ಲುಳಿ: ರಭಸ, ವೇಗ; ಪಯ: ಕಾಳಗದಲ್ಲಿ ಒಂದು ವರಸೆ, ಯುದ್ಧದಲ್ಲಿ ಹೆಜ್ಜೆ ಹಾಕುವ ಒಂದು ಕ್ರಮ; ಪಾಡು: ರೀತಿ; ಬವರಿ: ತಿರುಗುವುದು; ಸುಳಿವು: ತಿರುಗು, ಕಾಣಿಸಿಕೊಳ್ಳು; ಜಾರು: ನುಣುಚಿಕೊಳ್ಳು; ಘಾಯ: ಪೆಟ್ಟು; ಕಳವು: ಕಾಣೆಯಾಗು; ಕೈಮೆ: ಕೈಚಳಕ, ಹಸ್ತಕೌಶಲ, ನೈಪುಣ್ಯ; ಮೋಡ: ಮುಗಿಲು, ಮೇಘ; ಮೋಡಿ: ರೀತಿ, ಶೈಲಿ; ಉಬ್ಬಣ: ಚೂಪಾದ ಆಯುಧ; ಲಲಿತ: ಚೆಲುವಾದ; ಚಿತ್ರ: ಬರೆದ ಆಕೃತಿ; ಚದುರ: ಜಾಣ, ಬುದ್ಧಿವಂತ; ಭಟ: ಸೈನಿಕ; ಅವ್ವಳಿಸು: ಆರ್ಭಟಿಸು; ಹೊಯ್ದಾಡು: ಹೊಡೆದಾಡು; ನೋಟ: ವೀಕ್ಷಣೆ; ಉಲಿ: ಶಬ್ದ; ಶ್ರಮ: ಆಯಾಸ; ಶೌರ್ಯ: ಪರಾಕ್ರಮ; ವೆಗ್ಗಳ: ಶ್ರೇಷ್ಠತೆ, ಹಿರಿಮೆ;

ಪದವಿಂಗಡಣೆ:
ಲುಳಿಯ +ಪಯ+ಪಾಡುಗಳ +ಬವರಿಯ
ಸುಳಿವುಗಳ +ಜಾರುಗಳ +ಘಾಯದ
ಕಳವುಗಳ +ಕೈಮೆಗಳ +ಮೋಡಾಮೋಡಿ+ಉಬ್ಬಣದ
ಲಲಿತ +ಚಿತ್ರದ +ಚದುರ +ಭಟರ್
ಅವ್ವಳಿಸಿ +ಹೊಯ್ದಾಡಿದರು +ನೋಟಕರ್
ಉಲಿದುದ್+ಇಬ್ಬರ+ ಶ್ರಮದ +ಶೌರ್ಯದ +ವೆಗ್ಗಳೆಯತನಕೆ

ಅಚ್ಚರಿ:
(೧) ಲುಳಿ, ಸುಳಿ – ಪ್ರಾಸ ಪದ
(೨) ಕತ್ತಿವರಸೆಯ ಯುದ್ಧವನ್ನು ವಿವರಿಸಿರುವ ಪರಿ

ಪದ್ಯ ೩೭: ಭೀಮನು ಕರ್ಣನನ್ನು ಹೇಗೆ ಹೀಯಾಳಿಸಿದನು?

ಲುಳಿಯಲೊಲೆದಿದಿರಾಗಿ ತಾಗಿದ
ಬಲುಕಣೆಯ ಕರವಾಳನಿಕ್ಕಡಿ
ಗಳೆದು ಹಲಗೆಯನೆಂಟು ಕಡಿ ಮಾಡಿದನು ಕಲಿಭೀಮ
ತೊಲಗು ಬಾಹಿರ ಮತ್ತೆ ಸಾರಥಿ
ಬಿಲು ರಥವನನುಮಾಡು ಪಾರ್ಥಗೆ
ಕಳದ ಮೀಸಲು ಕೊಲ್ಲೆನೆಲವೋ ಕರ್ಣ ಹೋಗೆಂದ (ದ್ರೋಣ ಪರ್ವ, ೧೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ವೇಗದಿಂದ ಇದಿರಾಗಿ ಕರ್ಣನು ಕಾದಲೆಂದು ಹಿಡಿದು ಬಂದ ಕತ್ತಿಯನ್ನು ಭೀಮನು ಎರಡು ತುಂಡಾಗಿ ಕತ್ತರಿಸಿ, ಗುರಾಣಿಯನ್ನು ಎಂಟು ತುಂಡು ಮಾಡಿದನು. ಎಲವೋ ಬಾಹಿರ, ಹೀನ ಕುಲದವನೇ, ಮತ್ತೆ ಹೋಗಿ ರಥ, ಸಾರಥಿ, ಬಿಲ್ಲು ಬಾಣಗಳನ್ನು ಜೋಡಿಸಿಕೊಂಡು ಯುದ್ಧಕ್ಕೆ ಬಾ, ನೀನು ಅರ್ಜುನನಿಗಾಗಿ ತೆಗೆದಿಟ್ಟ ಮೀಸಲು, ನಿನ್ನನ್ನು ನಾನು ಕೊಲ್ಲುವುದಿಲ್ಲ, ನೀನು ತೆರಳು ಎಂದು ಭೀಮನು ಕರ್ಣನನ್ನು ಹಂಗಿಸಿದನು.

ಅರ್ಥ:
ಲುಳಿ: ರಭಸ, ವೇಗ; ಇದಿರು: ಎದುರು; ತಾಗು: ಮುಟ್ಟು; ಕಣೆ: ಬಾಣ; ಕರವಾಳ: ಕತ್ತಿ; ಇಕ್ಕಡಿ: ಎರಡು ತುಂಡು; ಹಲಗೆ: ಒಂದು ಬಗೆಯ ಗುರಾಣಿ; ಕಡಿ: ಕತ್ತರಿಸು; ಕಲಿ: ಶೂರ; ತೊಲಗು: ಹೊರಡು; ಬಾಹಿರ: ಹೊರಗೆ; ಸಾರಥಿ: ಸೂತ; ಬಿಲು: ಧನಸ್ಸು; ರಥ: ಬಂಡಿ; ಅನುವು: ಅವಕಾಶ; ಕಳ: ರಣರಂಗ; ಮೀಸಲು: ಮುಡಿಪು; ಕೊಲ್ಲು: ಸಾಯಿಸು; ಹೋಗು: ತೆರಳು;

ಪದವಿಂಗಡಣೆ:
ಲುಳಿಯಲೊಲೆದ್+ಇದಿರಾಗಿ +ತಾಗಿದ
ಬಲು+ಕಣೆಯ +ಕರವಾಳನ್+ಇಕ್ಕಡಿ
ಕಳೆದು +ಹಲಗೆಯನ್+ಎಂಟು +ಕಡಿ +ಮಾಡಿದನು +ಕಲಿಭೀಮ
ತೊಲಗು +ಬಾಹಿರ +ಮತ್ತೆ +ಸಾರಥಿ
ಬಿಲು +ರಥವನ್+ಅನುಮಾಡು +ಪಾರ್ಥಗೆ
ಕಳದ+ ಮೀಸಲು +ಕೊಲ್ಲೆನ್+ಎಲವೋ +ಕರ್ಣ +ಹೋಗೆಂದ

ಅಚ್ಚರಿ:
(೧) ಕರ್ಣನನ್ನು ಹಂಗಿಸುವ ಪರಿ – ತೊಲಗು ಬಾಹಿರ, ಪಾರ್ಥಗೆ ಕಳದ ಮೀಸಲು ಕೊಲ್ಲೆನೆಲವೋ ಕರ್ಣ ಹೋಗೆಂದ

ಪದ್ಯ ೪೪: ಭೀಷ್ಮಾರ್ಜುನರ ಬಾಣ ಪ್ರಯೋಗದ ವೇಗ ಹೇಗಿತ್ತು?

ಆವ ವಿಧದಲಿ ಪಾರ್ಥನೆಸುವನ
ದಾವ ಬೇಗದಿ ಮುರಿವನೀತನ
ದಾವ ಚಾಪ ರಹಸ್ಯವಿದ್ಯೆಗಳೊಳಗೆ ಬಳಸಿದನೊ
ಆ ವಿಧದಲಾ ಪರಿಯಲಾ ಸಂ
ಭಾವನೆಯಲಾ ಲುಳಿಯಲಾ ನಾ
ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಯಾವ ವಿಧದಲ್ಲಿ ಅರ್ಜುನನು ಬಾಣಪ್ರಯೋಗ ಮಾಡುತ್ತಿದ್ದನೋ, ಅಷ್ಟೇ ಬೇಗ ಭೀಷ್ಮನು ಅವನ್ನು ಮುರಿದು ಹಾಕುವನು. ಬಿಲ್ವಿದ್ಯೆಯ ಯಾವ ರಹಸ್ಯದಿಂದ ಅರ್ಜುನನು ಹೊಡೆಯುತ್ತಿದ್ದನೋ ಅದೇ ರೀತಿ ಅದೇ ಸ್ವೀಕಾರ. ಅದಕ್ಕೇನು ಎದುರೊಡ್ಡಬೇಕೋ ಅದೇ ವೇಗದಿಂದ ಭೀಷ್ಮನು ನಾನಾ ಪರಿಯಿಮ್ದ ಅರ್ಜುನನಿಗೆ ಸರಿಮಿಗಿಲಾಗಿ ಕಾದಿದನು.

ಅರ್ಥ:
ವಿಧ: ರೀತಿ; ಎಸು: ಬಾಣ ಪ್ರಯೋಗ ಮಾಡು; ಬೇಗ: ವೇಗ; ಮುರಿ: ಸೀಳು; ಚಾಪ: ಬಿಲ್ಲು; ರಹಸ್ಯ: ಗುಟ್ತು; ವಿದ್ಯೆ: ಜ್ಞಾನ; ಬಳಸು: ಉಪಯೋಗಿಸು; ವಿಧ: ರೀತಿ; ಪರಿ: ಕ್ರಮ; ಸಂಭಾವನೆ: ಆಲೋಚನೆ, ಅಭಿಪ್ರಾಯ; ಲುಳಿ: ರಭಸ, ವೇಗ; ವಿಧಾನ: ರೀತಿ; ಮಿಗಿಲು: ಹೆಚ್ಚು;

ಪದವಿಂಗಡಣೆ:
ಆವ +ವಿಧದಲಿ+ ಪಾರ್ಥನ್+ಎಸುವನದ್
ಆವ +ಬೇಗದಿ +ಮುರಿವನ್+ಈತನದ್
ಆವ+ ಚಾಪ +ರಹಸ್ಯ+ವಿದ್ಯೆಗಳೊಳಗೆ +ಬಳಸಿದನೊ
ಆ +ವಿಧದಲ್+ಆ+ ಪರಿಯಲ್+ಆ ಸಂ
ಭಾವನೆಯಲ್+ಆ+ ಲುಳಿಯಲ್+ಆ+ ನಾ
ನಾ +ವಿಧಾನದಲ್+ಒದಗಿ +ಸರಿ +ಮಿಗಿಲೆನಿಸಿದನು+ ಭೀಷ್ಮ

ಅಚ್ಚರಿ:
(೧) ಆವ ಪದದ ಪ್ರಯೋಗ – ೧-೩ ಸಾಲಿನ ಮೊದಲ ಪದ

ಪದ್ಯ ೧೯: ಜಯದ್ರಥನು ಹೇಗೆ ಕಂಡನು?

ಲುಳಿಯ ಮಿಂಚಿನ ಮಂದೆ ಸುಗತಿಯ
ಝಳಕದನಿಲನ ಥಟ್ಟು ಬೀದಿಯ
ಬಳಿಗೆ ಪುರುಷಾಮೃಗದ ಗಾವಲಿಯೆನೆ ವಿಲಾಸದಲಿ
ಹೊಳೆವ ಚಮರಿಯ ಸುತ್ತು ಝಲ್ಲಿಯ
ನೆಲಕುಗಿವ ಜೋಡುಗಳ ತೇಜಿಯ
ದಳವ ನೋಡೈ ಪಾರ್ಥ ಬಳಸಿದೆ ಕಲಿಜಯದ್ರಥನ (ಭೀಷ್ಮ ಪರ್ವ, ೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕೃಷ್ಣನು ಮುಂದೆ ಜಯದ್ರಥನ ರಥವನ್ನು ತೋರಿಸಿದನು. ಅಲ್ಲಿ ನೋಡು ಅರ್ಜುನ ಜಯದ್ರಥನ ಸೈನ್ಯವ. ಅಪ್ಪಳಿಸುವ ಮಿಂಚಿನ ಮುಂದೆ ಬೀಸುವ ಬಿರುಗಾಳಿಯಂತೆ, ಬೀದಿಗಿಳಿದ ಪುರುಷಾಮೃಗಗಳ ಗುಂಪಿನಂತೆ, ಹೊಳೆಯುವ ಚಾಮರಗಳು, ನೆಲಕ್ಕೊರಗಿಸುವ ಝಲ್ಲರಿ ಎಂಬಂತೆ ಶೋಭಿಸುವ ಕೇಶರಾಶಿಯನ್ನುಳ್ಳ ಕುದುರೆಗಳ ದಳವು ಅವನ ಸುತ್ತಲೂ ನಿಂತಿವೆ.

ಅರ್ಥ:
ಲುಳಿ: ರಭಸ; ಮಿಂಚು: ವಿದ್ಯುತ್ತು, ಹೊಳಪು; ಮಂದೆ: ಗುಂಪು; ಸುಗತಿ: ಒಳ್ಳೆಯ ನಡಗೆ; ಝಳಕ: ಮೀಯುವುದು; ಅನಿಲ:ಗಾಳಿ; ಥಟ್ಟು: ಗುಂಪು; ಬೀದಿ: ಮಾರ್ಗ; ಬಳಿ: ಹತ್ತಿರ; ಪುರುಷಾಮೃಗ: ನಾಲ್ಕು ಕಾಲಿನ ಮನುಷ್ಯನ ಮುಖದ ಕಾಲ್ಪನಿಕ ಪ್ರಾಣಿ; ಆವಳಿ: ಗುಂಪು; ವಿಲಾಸ: ವಿಹಾರ, ಅಂದ, ಸೊಬಗು; ಹೊಳೆ: ಪ್ರಕಾಶ; ಚಮರಿ: ಚಾಮರ; ಸುತ್ತು: ಆವರಿಸು; ಝಲ್ಲಿ: ಕುಚ್ಚು, ಗೊಂಚಲು; ನೆಲ: ಭೂಮಿ; ಉಗಿ: ಹೊರಹಾಕು; ಜೋಡು: ಜೊತೆ; ತೇಜಿ: ಕುದುರೆ; ದಳ: ಸೈನ್ಯ; ನೋಡು: ವೀಕ್ಷಿಸು; ಬಳಸು: ಸುತ್ತುವರಿ; ಕಲಿ: ಶೂರ;

ಪದವಿಂಗಡನೆ:
ಲುಳಿಯ +ಮಿಂಚಿನ +ಮಂದೆ +ಸುಗತಿಯ
ಝಳಕದ್+ಅನಿಲನ +ಥಟ್ಟು +ಬೀದಿಯ
ಬಳಿಗೆ+ ಪುರುಷಾಮೃಗದ+ ಗಾವಲಿ+ಎನೆ +ವಿಲಾಸದಲಿ
ಹೊಳೆವ +ಚಮರಿಯ +ಸುತ್ತು +ಝಲ್ಲಿಯ
ನೆಲಕ್+ಉಗಿವ+ ಜೋಡುಗಳ +ತೇಜಿಯ
ದಳವ+ ನೋಡೈ +ಪಾರ್ಥ +ಬಳಸಿದೆ +ಕಲಿ+ಜಯದ್ರಥನ

ಅಚ್ಚರಿ:
(೧) ಜಯದ್ರಥನ ಬಳಗವನ್ನು ವಿವರಿಸುವ ಪರಿ – ಲುಳಿಯ ಮಿಂಚಿನ ಮಂದೆ ಸುಗತಿಯ ಝಳಕದನಿಲನ ಥಟ್ಟು ಬೀದಿಯಬಳಿಗೆ ಪುರುಷಾಮೃಗದ ಗಾವಲಿಯೆನೆ ವಿಲಾಸದಲಿ

ಪದ್ಯ ೭: ಕೃಷ್ಣನೇಕೆ ಅರ್ಜುನನನ್ನು ಜರೆದನು?

ನಿಲಿಸಿದನು ಫಲುಗುಣನ ರಥವನು
ತಳಪಟದೊಳೇನೈ ಮಹಾರಥ
ರಳವಿಗೊಡ್ಡಿದೆ ನಿನ್ನೊಳುಂಟೇ ಕೈಮನದ ಕಡುಹು
ಲುಳಿಯ ಬಿಲುವಿದ್ಯಾಚಮತ್ಕೃತಿ
ಯಳವು ಗರುಡಿಯೊಳಲ್ಲದೀ ರಿಪು
ಬಲಕೆ ತೋರಿಸಬಹುದೆ ಹೇಳೆಂದರ್ಜುನನ ಜರೆದ (ಭೀಷ್ಮ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನ ರಥವನ್ನು ಸಮತಟ್ಟಾದ ಭೂಮಿಯಲ್ಲಿ ನಿಲಿಸಿ, ಇದೋ ಯುದ್ಧಕ್ಕೆ ಮಹಾರಥರು ನಿನಗೆದುರಾಗಿ ನಿಂತಿದ್ದಾರೆ, ನಿನ್ನ ದೇಹ ಮನಸ್ಸುಗಳ ಬಲವು ಅವರೆನ್ನೆದುರಿಸುವಷ್ಟು ಸಮರ್ಥವಾಗಿದೆಯೇ? ನಿನ್ನ ಧನುರ್ವಿದ್ಯೆಯ ಚಮತ್ಕಾರ ವೇಗಗಳು ಬರಿಯ ಗರುಡಿಯ ಮನೆಗೇ ಸೀಮಿತವೋ, ಇವರಿಗೂ ಅದನ್ನು ತೋರಿಸಬಲ್ಲೆಯೋ ಎಂದು ಜರೆದನು.

ಅರ್ಥ:
ನಿಲಿಸು: ತಡೆ; ಫಲುಗುಣ: ಅರ್ಜುನ; ರಥ: ಬಂಡಿ; ತಳಪಟ: ಅಂಗಾತವಾಗಿ ಬೀಳು; ಮಹಾರಥರು: ಪರಾಕ್ರಮಿಗಳು; ಅಳವಿ: ಯುದ್ಧ, ಯೋಗ್ಯತೆ; ಅಳವು: ಶಕ್ತಿ; ಕೈ: ಹಸ್ತ; ಮನ: ಮನಸ್ಸು; ಕಡುಹು: ಸಾಹಸ, ಹುರುಪು; ಲುಳಿ: ರಭಸ, ವೇಗ; ಬಿಲು: ಚಾಪ; ಚಮತ್ಕೃತಿ: ವಿಸ್ಮಯ; ಗರುಡಿ: ವ್ಯಾಯಾಮ ಶಾಲೆ; ರಿಪುಬಲ: ವೈರಿಯ ಸೈನ್ಯ; ಬಲ: ಶಕ್ತಿ; ತೋರಿಸು: ಗೋಚರಿಸು; ಜರಿ: ಬಯ್ಯುವಿಕೆ, ನಿಂದಿಸು;

ಪದವಿಂಗಡಣೆ:
ನಿಲಿಸಿದನು +ಫಲುಗುಣನ +ರಥವನು
ತಳಪಟದೊಳ್+ಏನೈ +ಮಹಾರಥರ್
ಅಳವಿಗೊಡ್ಡಿದೆ+ ನಿನ್ನೊಳುಂಟೇ+ ಕೈಮನದ +ಕಡುಹು
ಲುಳಿಯ +ಬಿಲುವಿದ್ಯಾ+ಚಮತ್ಕೃತಿ
ಅಳವು +ಗರುಡಿಯೊಳಲ್ಲದ್+ಈ+ ರಿಪು
ಬಲಕೆ +ತೋರಿಸಬಹುದೆ +ಹೇಳೆಂದ್+ಅರ್ಜುನನ +ಜರೆದ

ಅಚ್ಚರಿ:
(೧) ಅರ್ಜುನನನ್ನು ಉತ್ತೇಜಿಸುವ ಪರಿ – ಮಹಾರಥರಳವಿಗೊಡ್ಡಿದೆ ನಿನ್ನೊಳುಂಟೇ ಕೈಮನದ ಕಡುಹು; ಲುಳಿಯ ಬಿಲುವಿದ್ಯಾಚಮತ್ಕೃತಿ ಯಳವು ಗರುಡಿಯೊಳಲ್ಲದೀ ರಿಪುಬಲಕೆ ತೋರಿಸಬಹುದೆ

ಪದ್ಯ ೨೧: ವಿಶೋಕನು ಭೀಮನಿಗೆ ಏನು ಹೇಳಿದ?

ಅರಸ ಚಿತ್ತವಿಸುಳಿದ ಧನು ಹ
ನ್ನೆರಡುಸಾವಿರ ಬಲುಸರಳು ಹ
ನ್ನೆರಡುಸಾವಿರ ಬೋಳೆಯೈನೂರರ್ಧಚಂದ್ರಶರ
ಪರಿಗಳಿತ ಲುಳಿಯಂಬು ಕಣಗಿಲ
ಸರಳುಗೂಡಿಪ್ಪತ್ತು ಸಾವಿರ
ವೆರಡುಸಾವಿರವುಳಿದವೀ ನಾರಾಚ ನಿಕರದಲಿ (ಕರ್ಣ ಪರ್ವ, ೧೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಹನ್ನೆರಡು ಸಾವಿರ ಬಿಲ್ಲುಗಳು, ಹನ್ನೆರಡು ಸಾವಿರ ಬೋಳೆಯ ಭಾರೀ ಬಾಣಗಳು, ಐನೂರು ಅರ್ಧ ಚಂದ್ರ ಬಾಣಗಳು, ವೇಗದಿಂದ ಚಲಿಸುವ ಲುಳಿ ಬಾಣಗಳು, ಕಣಗಿಲ ಬಾಣಗಳು ಇಪ್ಪತ್ತು ಸಾವಿರ ಇದ್ದವು. ಇವುಗಳಲ್ಲಿ ಎರಡು ಸಾವಿರ ಬಾಣಗಳುಳಿದಿವೆ ಎಂದು ವಿಶೋಕನು ಭೀಮನಿಗೆ ತಿಳಿಸಿದನು.

ಅರ್ಥ:
ಅರಸ: ರಾಜ; ಚಿತ್ತವಿಸು: ಗಮನವಿಟ್ಟು ಕೇಳು; ಧನು: ಧನಸ್ಸು; ಸಾವಿರ: ಸಹಸ್ರ; ಬಲು: ಭಾರೀ; ಸರಳು: ಬಾಣ; ಬೋಳೆ: ಒಂದು ಬಗೆಯ ಹರಿತವಾದ ಬಾಣ; ಶರ: ಬಾಣ; ಪರಿಗಳಿತ: ತಲೆಕೆಳಗಾದ, ಉರುಳಿದ; ಲುಳಿ:ರಭಸ, ವೇಗ; ಅಂಬು: ಬಾಣ; ಉಳಿದ: ಮಿಕ್ಕ; ನಾರಾಚ: ಬಾಣ; ನಿಕರ: ಗುಂಪು;

ಪದವಿಂಗಡಣೆ:
ಅರಸ +ಚಿತ್ತವಿಸ್+ಉಳಿದ +ಧನು +ಹ
ನ್ನೆರಡು+ಸಾವಿರ+ ಬಲು+ಸರಳು +ಹ
ನ್ನೆರಡು+ಸಾವಿರ+ ಬೋಳೆ+ಐನೂರ್+ಅರ್ಧಚಂದ್ರ+ಶರ
ಪರಿಗಳಿತ+ ಲುಳಿ+ಅಂಬು +ಕಣಗಿಲ
ಸರಳು+ಕೂಡ್+ಇಪ್ಪತ್ತು +ಸಾವಿರ
ಎರಡು+ಸಾವಿರ+ಉಳಿದವ್+ಈ+ ನಾರಾಚ +ನಿಕರದಲಿ

ಅಚ್ಚರಿ:
(೧) ಬಾಣಗಳ ಹೆಸರು: ಬಲು, ಬೋಳೆ, ಅರ್ಧಚಂದ್ರ, ಲುಳಿ, ಕಣಗಿಲ
(೨) ಸರಳು, ಶರ, ಅಂಬು, ನಾರಾಚ – ಸಮನಾರ್ಥಕ ಪದ