ಪದ್ಯ ೧: ನೈಮಿಶಾರಣ್ಯಕ್ಕೆ ಯಾರು ಬಂದರು?

ಸೂತನೈತಂದನು ಜಗದ್ವಿ
ಖ್ಯಾತ ಶೌನಕಮುಖ್ಯ ಮುನಿಸಂ
ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ
ಆತನನು ಕಂಡದು ತಪಸ್ವಿ
ವ್ರಾತ ಕುಶಲಕ್ಷೇಮ ಮಧುರ
ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು (ಆದಿ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಶೌನಕರೇ ಮೊದಲಾದ ಋಷಿಗಳು ನೈಮಿಶಾರಣ್ಯಕ್ಕೆ ಸೂತಪುರಾಣಿಕರು ಬಂದರು. ಋಷಿಗಳು ಆತನ ಕುಶಲಕ್ಷೇಮವನ್ನು ವಿಚಾರಿಸಿ ಮಧುರ ವಚನಗಳಿಂದ ಗೌರವಿಸಿದರು.

ಅರ್ಥ:
ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ಜಗ: ಜಗತ್ತು, ಪ್ರಪಂಚ; ವಿಖ್ಯಾತ: ಪ್ರಸಿದ್ಧ; ಮುಖ್ಯ: ಪ್ರಸಿದ್ಧ; ಮುನಿ: ಋಷಿ; ಸಂಘಾತ: ಗುಂಪು, ಸಮೂಹ; ಪಾವನ: ನಿರ್ಮಲ; ಅರಣ್ಯ: ಕಾನನ; ಆಶ್ರಮ: ಕುಟೀರ; ಕಂಡು: ನೋಡು; ತಪಸ್ವಿ: ಋಷಿ; ವ್ರಾತ: ಗುಂಪು; ಕುಶಲ: ಕ್ಷೇಮ; ಮಧುರ: ಸವಿ; ವಚನ: ನುಡಿ; ಅಮೃತ: ಸುಧೆ; ಸಂಭಾವನೆ: ಆಲೋ ಚನೆ, ಅಭಿಪ್ರಾಯ;

ಪದವಿಂಗಡಣೆ:
ಸೂತನೈತಂದನು+ ಜಗದ್ವಿ
ಖ್ಯಾತ +ಶೌನಕ+ಮುಖ್ಯ+ ಮುನಿ+ಸಂ
ಘಾತ +ಪಾವನ +ನೈಮಿಶಾರಣ್ಯಕ+ ವರಾಶ್ರಮಕೆ
ಆತನನು +ಕಂಡದು +ತಪಸ್ವಿ
ವ್ರಾತ+ ಕುಶಲ+ಕ್ಷೇಮ+ ಮಧುರ
ಪ್ರೀತಿ+ ವಚನಾಮೃತದಿ +ಸಂಭಾವನೆಯ +ಮಾಡಿದರು

ಅಚ್ಚರಿ:
(೧) ಮುನಿ, ತಪಸ್ವಿ – ಸಾಮ್ಯಾರ್ಥ ಪದಗಳು

ಪದ್ಯ ೧೩: ಧರ್ಮಜನು ಕೃಷ್ಣನಿಗೆ ಏನು ಹೇಳಿದನು?

ಐಹಿಕದ ಸಂಭಾವನೆಯ ಸ
ಮ್ಮೋಹನಕೆ ಮರುಳಾಗಿ ಸುಕೃತ
ದ್ರೋಹವಾಗದಲೇ ಸುಯೋಧನವಧೆಯ ದೆಸೆಯಿಂದ
ಈ ಹದನ ಬಿನ್ನೈಸಿದೆವು ನೀ
ವಾಹವಕೆ ಧರ್ಮಾರ್ಥಶಾಸ್ತ್ರವ
ನೂಹಿಸಿದಿರೆಂದರಸ ನುಡಿಸಿದನಿತ್ತ ಕುರುಪತಿಯ (ಗದಾ ಪರ್ವ, ೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ಇಹಲೋಕದ ಸಂಪತ್ತಿಗೆ ಮರುಳಾಗಿ ಇವನನ್ನು ಕೊಂದು ಪುಣ್ಯಕ್ಕೆೆ ಎರವಾಗಬಾರದೆಂದು ನಿಮ್ಮನ್ನು ಕೇಳಿದೆ, ಯುದ್ಧವನ್ನು ಮುಂದುವರೆಸಲು ನೀವು ಧರ್ಮವನ್ನು ಬೋಧಿಸಿದಿರಿ ಎಂದು ಹೇಳಿ, ದುರ್ಯೋಧನನನ್ನು ಮಾತಾಡಿಸಿದನು.

ಅರ್ಥ:
ಐಹಿಕ: ಇಹಲೋಕ; ಸಂಭಾವನೆ: ಆಲೋಚನೆ; ಸಮ್ಮೋಹನ: ಮರುಳು, ಮೈಮರೆವು; ಸುಕೃತ: ಒಳ್ಳೆಯ ಕೆಲಸ; ದ್ರೋಹ: ಮೋಸ; ವಧೆ: ಸಾವು; ದೆಸೆ: ಅವಸ್ಥೆ; ಹದ: ಸ್ಥಿತಿ; ಬಿನ್ನೈಸು: ಅರಿಕೆ ಮಾಡು; ಆವಹ: ಯುದ್ಧ; ಶಾಸ್ತ್ರ: ಧಾರ್ಮಿಕ ವಿಷಯ, ತತ್ವ; ಊಹಿಸಿದಿರಿ: ತಿಳಿಸಿದಿರಿ; ನುಡಿ: ಮಾತಾಡು;

ಪದವಿಂಗಡಣೆ:
ಐಹಿಕದ+ ಸಂಭಾವನೆಯ +ಸ
ಮ್ಮೋಹನಕೆ +ಮರುಳಾಗಿ +ಸುಕೃತ
ದ್ರೋಹವಾಗದಲೇ +ಸುಯೋಧನ+ವಧೆಯ +ದೆಸೆಯಿಂದ
ಈ +ಹದನ+ ಬಿನ್ನೈಸಿದೆವು +ನೀವ್
ಆಹವಕೆ +ಧರ್ಮಾರ್ಥಶಾಸ್ತ್ರವನ್
ಊಹಿಸಿದಿರ್+ಎಂದ್+ಅರಸ +ನುಡಿಸಿದನ್+ಇತ್ತ +ಕುರುಪತಿಯ

ಅಚ್ಚರಿ:
(೧) ಸ ಕಾರದ ಪದಗಳು – ಸಮ್ಮೋಹನ, ಸುಕೃತ, ಸುಯೋಧನ

ಪದ್ಯ ೪೪: ಭೀಷ್ಮಾರ್ಜುನರ ಬಾಣ ಪ್ರಯೋಗದ ವೇಗ ಹೇಗಿತ್ತು?

ಆವ ವಿಧದಲಿ ಪಾರ್ಥನೆಸುವನ
ದಾವ ಬೇಗದಿ ಮುರಿವನೀತನ
ದಾವ ಚಾಪ ರಹಸ್ಯವಿದ್ಯೆಗಳೊಳಗೆ ಬಳಸಿದನೊ
ಆ ವಿಧದಲಾ ಪರಿಯಲಾ ಸಂ
ಭಾವನೆಯಲಾ ಲುಳಿಯಲಾ ನಾ
ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಯಾವ ವಿಧದಲ್ಲಿ ಅರ್ಜುನನು ಬಾಣಪ್ರಯೋಗ ಮಾಡುತ್ತಿದ್ದನೋ, ಅಷ್ಟೇ ಬೇಗ ಭೀಷ್ಮನು ಅವನ್ನು ಮುರಿದು ಹಾಕುವನು. ಬಿಲ್ವಿದ್ಯೆಯ ಯಾವ ರಹಸ್ಯದಿಂದ ಅರ್ಜುನನು ಹೊಡೆಯುತ್ತಿದ್ದನೋ ಅದೇ ರೀತಿ ಅದೇ ಸ್ವೀಕಾರ. ಅದಕ್ಕೇನು ಎದುರೊಡ್ಡಬೇಕೋ ಅದೇ ವೇಗದಿಂದ ಭೀಷ್ಮನು ನಾನಾ ಪರಿಯಿಮ್ದ ಅರ್ಜುನನಿಗೆ ಸರಿಮಿಗಿಲಾಗಿ ಕಾದಿದನು.

ಅರ್ಥ:
ವಿಧ: ರೀತಿ; ಎಸು: ಬಾಣ ಪ್ರಯೋಗ ಮಾಡು; ಬೇಗ: ವೇಗ; ಮುರಿ: ಸೀಳು; ಚಾಪ: ಬಿಲ್ಲು; ರಹಸ್ಯ: ಗುಟ್ತು; ವಿದ್ಯೆ: ಜ್ಞಾನ; ಬಳಸು: ಉಪಯೋಗಿಸು; ವಿಧ: ರೀತಿ; ಪರಿ: ಕ್ರಮ; ಸಂಭಾವನೆ: ಆಲೋಚನೆ, ಅಭಿಪ್ರಾಯ; ಲುಳಿ: ರಭಸ, ವೇಗ; ವಿಧಾನ: ರೀತಿ; ಮಿಗಿಲು: ಹೆಚ್ಚು;

ಪದವಿಂಗಡಣೆ:
ಆವ +ವಿಧದಲಿ+ ಪಾರ್ಥನ್+ಎಸುವನದ್
ಆವ +ಬೇಗದಿ +ಮುರಿವನ್+ಈತನದ್
ಆವ+ ಚಾಪ +ರಹಸ್ಯ+ವಿದ್ಯೆಗಳೊಳಗೆ +ಬಳಸಿದನೊ
ಆ +ವಿಧದಲ್+ಆ+ ಪರಿಯಲ್+ಆ ಸಂ
ಭಾವನೆಯಲ್+ಆ+ ಲುಳಿಯಲ್+ಆ+ ನಾ
ನಾ +ವಿಧಾನದಲ್+ಒದಗಿ +ಸರಿ +ಮಿಗಿಲೆನಿಸಿದನು+ ಭೀಷ್ಮ

ಅಚ್ಚರಿ:
(೧) ಆವ ಪದದ ಪ್ರಯೋಗ – ೧-೩ ಸಾಲಿನ ಮೊದಲ ಪದ

ಪದ್ಯ ೬: ಧೃತರಾಷ್ಟ್ರನೇಕೆ ಕೊರಗಿದನು?

ಈ ವಿಧಿಯೆ ಪಾಂಡವರಿಗಕಟಾ
ಸಾವು ಸೇರದು ತನಗೆ ತಾಮು
ನ್ನಾವ ನೋಂಪಿಯನಳಿದೆನೋ ಭವಭವಸಹಸ್ರದಲಿ
ಈ ವಿಲಾಸವನೀವಿಭವ ಸಂ
ಭಾವನೆಯನೀಪದವನೀ ಪು
ತ್ರಾವಳಿಯ ಸುಡಲೆನುತ ಮಿಗೆ ಮರುಗಿದನು ಧೃತರಾಷ್ಟ್ರ (ಅರಣ್ಯ ಪರ್ವ, ೧೮ ಸಂಧಿ, ೬ ಪದ್ಯ)

ತಾತ್ಪರ್ಯ:
ಬ್ರಾಹ್ಮಣನ ಮಾತನ್ನು ಕೇಳಿದ ಧೃತರಾಷ್ಟ್ರನು, ಪಾಂಡವರಿಗೆ ಈ ಗತಿಯೇ! ಅಯ್ಯೋ ನನಗೆ ಸಾವು ಬರುತ್ತಿಲ್ಲವಲ್ಲ, ಹಿಂದಿನ ಸಹಸ್ರಾರು ಜನ್ಮಗಳಲ್ಲಿ ಯಾವ ವ್ರತವನ್ನು ಮುರಿದೆನೋ!, ಈ ವಿಲಾಸ, ವಿಭ್ರಮ, ವೈಭವ, ಸ್ಥಾನ, ಸನ್ಮಾನ, ಮಕ್ಕಳು ಇದರಿಂದೇನು, ಇವೆಲ್ಲವನ್ನು ಸುಡಬೇಕೆಂದು ಹೇಳಿ ಕೊರಗಿದನು.

ಅರ್ಥ:
ವಿಧಿ: ನಿಯಮ, ಬ್ರಹ್ಮ; ಅಕಟ: ಅಯ್ಯೋ; ಸಾವು: ಮರಣ; ಸೇರು: ತಲುಪು; ಮುನ್ನ: ಮೊದಲು; ನೋಂಪು: ನಿಯಮ, ವ್ರತ; ಅಳಿ: ಮುರಿ; ಭವ: ಜನ್ಮ, ಇರುವಿಕೆ; ಸಹಸ್ರ: ಸಾವಿರ; ವಿಲಾಸ: ಅಂದ, ಸೊಬಗು; ವಿಭವ: ಸಿರಿ, ಸಂಪತ್ತು; ಸಂಭಾವನೆ: ಮನ್ನಣೆ; ಪದವಿ: ಅಂತಸ್ತು, ಸ್ಥಾನ; ಪುತ್ರಾವಳಿ: ಮಕ್ಕಳ ಸಾಲು; ಸುಡು: ದಹಿಸು; ಮರುಗು: ಕನಿಕರಿಸು, ಕೊರಗು; ಮಿಗೆ: ಅಧಿಕ;

ಪದವಿಂಗಡಣೆ:
ಈ +ವಿಧಿಯೆ +ಪಾಂಡವರಿಗ್+ಅಕಟಾ
ಸಾವು +ಸೇರದು +ತನಗೆ +ತಾಮು
ನ್ನಾವ +ನೋಂಪಿಯನ್+ಅಳಿದೆನೋ +ಭವ+ಭವ+ಸಹಸ್ರದಲಿ
ಈ +ವಿಲಾಸವನ್+ಈ+ವಿಭವ +ಸಂ
ಭಾವನೆಯನ್+ಈ+ಪದವನ್+ಈ+ ಪು
ತ್ರಾವಳಿಯ+ ಸುಡಲೆನುತ+ ಮಿಗೆ +ಮರುಗಿದನು +ಧೃತರಾಷ್ಟ್ರ

ಅಚ್ಚರಿ:
(೧) ವಿಲಾಸ, ವಿಭವ, ಸಂಭಾವನೆ, ಪದವಿ, ಪುತ್ರವಳಿ – ಆನಂದಕಾರಕವನ್ನು ಸೂಚಿಸುವ ಪದಗಳು

ಪದ್ಯ ೩೫: ಬೃಹಸ್ಪತಿಯು ಇಂದ್ರನಿಗೆ ಯಾವ ಉಪದೇಶವ ನೀಡಿದನು?

ಧರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರ ಗುರು ದೇ
ವರಲಿ ಸಂಕಲ್ಪವನು ಕೃತ ವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ವಿದುರನು ನಾಲ್ಕು ಮುಖ್ಯವಾದ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು, ಇದನ್ನು ದೇವಗುರು ಬೃಹಸ್ಪತಿಯೇ ಇಂದ್ರನಿಗೆ ಹೇಳಿದ್ದಾನೆ, ಅವು: ದೇವರ ಆರಾಧನೆಯನ್ನು ಸಂಕಲ್ಪ ಪೂರ್ವಕವಾಗಿ ಮಾಡಬೇಕು, ಗುರುಗಳಲ್ಲಿ ವಿನಯವನ್ನು ಪ್ರದರ್ಶಿಸಬೇಕು, ಹಿರಿಯರನ್ನು ಗೌರವಿಸಬೇಕು ಮತ್ತು ಪಾಪಕಾರ್ಯವನ್ನು ಮಾಡಬಾರದು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಚಿತ್ತ: ಮನಸ್ಸು; ಸ್ವರ್ಗ: ನಾಕ; ಒರೆ: ಶೋಧಿಸಿ ನೋಡು, ಹೇಳು, ನಿರೂಪಿಸು; ಅಮರ: ದೇವತೆ; ಗುರು: ಆಚಾರ್ಯ; ದೇವ: ಈಶ್ವರ; ಸಂಕಲ್ಪ: ನಿರ್ಧಾರ, ನಿರ್ಣಯ; ಕೃತ: ಪುಣ್ಯವಂತ; ವಿದ್ಯ: ಜ್ಞಾನ; ವಿನಯ: ಒಳ್ಳೆಯತನ, ಸೌಜನ್ಯ; ಹಿರಿಯ: ದೊಡ್ಡವರು; ಸಂಭಾವನೆ: ಮನ್ನಣೆ; ಸಂಹರಣ: ಪ್ರಳಯ, ಅಳಿವು; ಪದ: ನಿಲುವು;

ಪದವಿಂಗಡಣೆ:
ಧರಣಿಪತಿ +ಚಿತ್ತವಿಸು +ಸ್ವರ್ಗದಲ್
ಒರೆದನ್+ಇಂದ್ರಗ್+ಅಮರ +ಗುರು +ದೇ
ವರಲಿ +ಸಂಕಲ್ಪವನು +ಕೃತ ವಿದ್ಯರಲಿ+ ವಿನಯವನು
ಹಿರಿಯರಲಿ +ಸಂಭಾವನೆಯ +ಸಂ
ಹರಣಪದವನು +ಪಾಪ +ಕಾರ್ಯದೊಳ್
ಇರದೆ +ಮಾಡುವುದೆಂಬ+ ನಾಲ್ಕನು +ರಾಯ +ಕೇಳೆಂದ

ಅಚ್ಚರಿ:
(೧) ಧರಣಿಪತಿ, ರಾಯ – ಸಮನಾರ್ಥಕ ಪದ
(೨) ಬೃಹಸ್ಪತಿಯನ್ನು ಅಮರಗುರು ಎಂದು ಕರೆದಿರುವುದು