ಪದ್ಯ ೫೨: ಕರ್ಣನೇಕೆ ಸಂನ್ಯಾಸ ತ್ಯಾಗ ಮಾಡುವೆನೆಂದು ಹೇಳಿದನು?

ಎಲವೆಲವೊ ಕಲಿಯಾಗು ಮಾರುತಿ
ಗೆಲಿದನೆಂದಿರಬೇಡ ಸೋಲದ
ಗೆಲವಿನುದಯ ಮುಹೂರ್ತವಶ ಮೈಗುಡದೆ ಕಾದುವುದು
ಛಲವದುಳ್ಳಡೆ ಸಾಕು ನೀನೀ
ಹಲಗೆಯಲಿ ಹೊಕ್ಕಾಡಿ ಮರಳಿದು
ತಲೆವೆರಸಿ ನೀ ಹೋದಡಸ್ತ್ರತ್ಯಾಗ ತನಗೆಂದ (ದ್ರೋಣ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಎಲವೋ ಎಲವೋ ಭೀಮ, ಕಲಿಯಾಗು, ಗೆದ್ದೆನೆಂದು ಸುಮ್ಮನಿರಬೇಡ. ಯುದ್ಧದಲ್ಲಿ ಗೆಲುವು ಸೋಲುಗಳು ಆ ಮುಹೂರ್ತದ ಲಕ್ಷಣ. ಛಲದಿಂದ ನಿನ್ನ ದೇಹವನ್ನು ಒಡ್ಡದೆ ಯುದ್ಧಮಾಡಿದರೆ ಸಾಕು, ಈ ಬಾರಿ ನೀನು ಯುದ್ಧದಲ್ಲಿ ನೀನು ತಲೆಯೊಡನೆ ಹಿಂದಿರುಗಿದ್ದೇ ಆದರೆ ನಾನು ಅಸ್ತ್ರ ಸಂನ್ಯಾಸ ಮಾಡುತ್ತೇನೆ ಎಂದು ಕರ್ಣನು ಹೇಳಿದನು.

ಅರ್ಥ:
ಕಲಿ: ಶೂರ; ಮಾರುತಿ: ಭೀಮ; ಗೆಲಿ: ಜಯಿಸು; ಸೋಲು: ಪರಾಭವ; ಉದಯ: ಹುಟ್ತು; ಮುಹೂರ್ತ: ಒಳ್ಳೆಯ ಸಮಯ; ಮೈಗುಡು: ದೃಢವಾಗು; ಕಾದು: ಹೋರಾಡು; ಛಲ: ದೃಢ ನಿಶ್ಚಯ; ಹಲಗೆ: ಒಂದು ಬಗೆಯ ಗುರಾಣಿ; ಹೊಕ್ಕು: ಸೇರು; ಮರಳು: ಹಿಂದಿರುಗು; ತಲೆ: ಶಿರ; ಹೋದ: ತೆರಳು; ಅಸ್ತ್ರ: ಶಸ್ತ್ರ, ಆಯುಧ; ತ್ಯಾಗ: ತೊರೆ;

ಪದವಿಂಗಡಣೆ:
ಎಲವ್+ಎಲವೊ +ಕಲಿಯಾಗು +ಮಾರುತಿ
ಗೆಲಿದನ್+ಎಂದಿರಬೇಡ +ಸೋಲದ
ಗೆಲವಿನ್+ಉದಯ +ಮುಹೂರ್ತವಶ +ಮೈಗುಡದೆ +ಕಾದುವುದು
ಛಲವದುಳ್ಳಡೆ ಸಾಕು ನೀನ್+ಈ
ಹಲಗೆಯಲಿ +ಹೊಕ್ಕಾಡಿ +ಮರಳಿದು
ತಲೆ+ವೆರಸಿ+ ನೀ +ಹೋದಡ್+ಅಸ್ತ್ರತ್ಯಾಗ +ತನಗೆಂದ

ಅಚ್ಚರಿ:
(೧) ಕರ್ಣನ ಧೀರತನದ ಮಾತು – ಸೋಲದ ಗೆಲವಿನುದಯ ಮುಹೂರ್ತವಶ ಮೈಗುಡದೆ ಕಾದುವುದು