ಪದ್ಯ ೩೨: ದ್ರೋಣನ ಮೇಲೆ ಹೇಗೆ ಆಕ್ರಮಣವಾಯಿತು?

ಮೇಲೆ ಬಿದ್ದುದು ಮುಳಿಸಿನಲಿ ಪಾಂ
ಚಾಲರಾಯನ ಥಟ್ಟು ನಿಶಿತ ಶ
ರಾಳಿಯಲಿ ಹೂಳಿದನು ಧೃಷ್ಟದ್ಯುಮ್ನನಂಬರವ
ಬಾಲಕರಲೇ ಖಡ್ಗಧಾರೆಯ
ಮೇಲೆ ಮೋಹಿದ ಮಧುವ ಸವಿಯಲಿ
ನಾಲಗೆಯಲಿವರೊಲ್ಲರೆಂದನು ನಗುತ ಕಲಿದ್ರೋಣ (ದ್ರೋಣ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಚಾಲ ಸೈನ್ಯವು ದ್ರೋಣನ ಮೇಲೆ ಹಲ್ಲೆ ಮಾಡಿತು, ಧೃಷ್ಟದ್ಯುಮ್ನನು ಆಕಾಶ ತುಂಬುವಂತೆ ಬಾಣಗಳನ್ನು ಬಿಟ್ಟನು. ದ್ರೋಣನು ಎಷ್ಟೇ ಆಗಲಿ, ಇವರು ಬಾಲಕರು, ಖಡ್ಗದ ಅಲಗಿಗೆ ಹಚ್ಚಿದ ಜೇನುತುಪ್ಪವನ್ನು ನಾಲಗೆಯಲ್ಲಿ ನೆಕ್ಕಲಿ, ಇವರು ಸುಮ್ಮನಿರುವವರಲ್ಲ ಎಂದನು.

ಅರ್ಥ:
ಬಿದ್ದು: ಬೀಳು, ಕುಸಿ; ಮುಳಿಸು: ಕೋಪ; ರಾಯ: ರಾಜ; ಥಟ್ಟು: ಗುಂಪು; ನಿಶಿತ: ಹರಿತವಾದುದು; ಶರಾಳಿ: ಬಾಣಗಳ ಗುಂಪು; ಹೂಳು: ಹೂತು ಹಾಕು; ಅಂಬರ: ಆಕಾಶ; ಬಾಲಕ: ಮಗು; ಖಡ್ಗ: ಕತ್ತಿ; ಧಾರೆ: ಮಳೆ; ಮೋಹ: ಮೈ ಮರೆಯುವಿಕೆ ಎಚ್ಚರ ತಪ್ಪುವಿಕೆ; ಮಧು: ಜೇನು; ಸವಿ: ಸಿಹಿ; ನಾಲಗೆ: ಜಿಹ್ವೆ; ಒಲ್ಲೆ: ಬೇಡ; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಮೇಲೆ +ಬಿದ್ದುದು +ಮುಳಿಸಿನಲಿ +ಪಾಂ
ಚಾಲರಾಯನ +ಥಟ್ಟು +ನಿಶಿತ +ಶ
ರಾಳಿಯಲಿ +ಹೂಳಿದನು +ಧೃಷ್ಟದ್ಯುಮ್ನನ್+ಅಂಬರವ
ಬಾಲಕರಲೇ+ ಖಡ್ಗಧಾರೆಯ
ಮೇಲೆ +ಮೋಹಿದ +ಮಧುವ +ಸವಿಯಲಿ
ನಾಲಗೆಯಲ್+ಇವರ್+ಒಲ್ಲರೆಂದನು +ನಗುತ +ಕಲಿದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಬಾಲಕರಲೇ ಖಡ್ಗಧಾರೆಯ ಮೇಲೆ ಮೋಹಿದ ಮಧುವ ಸವಿಯಲಿ ನಾಲಗೆಯಲಿವರೊಲ್ಲರೆಂದನು

ಪದ್ಯ ೫೨: ದುರ್ಯೋಧನನು ಅರ್ಜುನನಿಗೆ ಏನೆಂದು ಉತ್ತರಿಸಿದನು?

ಆರ ದೀಪನ ಚೂರ್ಣಬಲದಲಿ
ವೀರರುದ್ರನು ಜಗವ ನುಂಗುವ
ನೋರೆಗೆಡೆಯದಿರಂಬ ಸುರಿ ಸುರಿ ಹೊಳ್ಳುನುಡಿಯೇಕೆ
ಸಾರು ನೀ ಬರಹೇಳು ಕೀಚಕ
ವೈರಿಯನು ಪಡಿಸಣವ ನೋಡಲಿ
ಭೂರಿಬಾಣದ ಸವಿಯನೆಂದನು ಕೌರವರಾಯ (ದ್ರೋಣ ಪರ್ವ, ೧೦ ಸಂಧಿ, ೫೨ ಪದ್ಯ)

ತಾತ್ಪರ್ಯ:
ಯಾರಾದರೂ ಕೊಟ್ಟ ದೀಪನ ಚೂರ್ಣದ ಬಲದಿಂದ ರುದ್ರನ ಜಗತ್ತನ್ನು ನುಂಗುವನೇ? ಅಸಂಬದ್ಧವಾದ ಮಾತನ್ನಾಡಬೇಡ. ಪುಳ್ಳುಮಾತನ್ನು ಬಿಟ್ಟು ಅದೆಷ್ಟು ಬಾಣಗಳನ್ನು ಸುರಿಯುವೆಯೋ ಸುರಿ, ನಿನ್ನಿಂದಾಗುವುದಿಲ್ಲ ಆಚೆಗೆ ಹೋಗು, ಭೀಮನನ್ನು ಕರೆ, ಅವನೂ ನನ್ನ ಬಾಣಗಳ ಸವಿನೋಡಲಿ ಎಂದು ದುರ್ಯೊಧನನು ಗುಡುಗಿದನು.

ಅರ್ಥ:
ದೀಪ: ದೀವಿಗೆ; ಚೂರ್ಣ: ಪುಡಿ; ವೀರ: ಶೂರ; ಜಗ: ಪ್ರಪಂಚ; ನುಂಗು: ಆವರಣ, ಮುಸುಕು; ಓರೆ: ವಕ್ರ, ಡೊಂಕು; ಕೆಡೆ: ಬೀಳು, ಕುಸಿ; ಸುರಿ: ವರ್ಷಿಸು; ಹೊಳ್ಳು: ಹುರುಳಿಲ್ಲದುದು, ಜೊಳ್ಳು; ನುಡಿ: ಮಾತು; ಸಾರು: ಹರಡು; ಬರಹೇಳು: ಆಗಮಿಸು; ವೈರಿ: ಶತ್ರು; ಪಡಿಸಣ: ಪರೀಕ್ಷೆ, ಪರಿಶೀಲನೆ; ನೋಡು: ವೀಕ್ಷಿಸು; ಭೂರಿ: ಹೆಚ್ಚು, ಅಧಿಕ; ಬಾಣ: ಸರಳು; ಸವಿ: ಸಿಹಿ; ರಾಯ: ರಾಜ;

ಪದವಿಂಗಡಣೆ:
ಆರ +ದೀಪನ +ಚೂರ್ಣಬಲದಲಿ
ವೀರ+ರುದ್ರನು +ಜಗವ +ನುಂಗುವನ್
ಓರೆ+ಕೆಡೆಯದಿರ್+ಅಂಬ+ ಸುರಿ+ ಸುರಿ+ ಹೊಳ್ಳು+ನುಡಿಯೇಕೆ
ಸಾರು +ನೀ +ಬರಹೇಳು +ಕೀಚಕ
ವೈರಿಯನು +ಪಡಿಸಣವ+ ನೋಡಲಿ
ಭೂರಿಬಾಣದ +ಸವಿಯನೆಂದನು +ಕೌರವರಾಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆರ ದೀಪನ ಚೂರ್ಣಬಲದಲಿ ವೀರರುದ್ರನು ಜಗವ ನುಂಗುವ

ಪದ್ಯ ೫: ಶಲ್ಯನ ಸೈನ್ಯದ ಮಾಂಸವು ಯಾರಿಗೆ ರುಚಿಸಿತು?

ಹಳಚಿ ಮುರಿದುದು ವೀರ ಕರ್ಣನ
ಬಲ ಕೃಪಾಚಾರಿಯರ ಸೇನೆಗೆ
ತಲೆಯ ಋಣ ಸಂಬಂಧ ಸವೆದುದು ಕಾತರಿಸಿ ಕವಿವ
ಬಲದ ಬಿರುದರಿಗಮರ ನಾರಿಯ
ರೊಳಗೆ ಸೇರುವೆಯಾಯ್ತು ಶಲ್ಯನ
ಬಲದಡಗು ಸವಿಯಾಯ್ತು ಜಂಬುಕ ಕಾಕ ಸಂತತಿಗೆ (ದ್ರೋಣ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ಕರ್ಣನ ಸೈನ್ಯ ಯುದ್ಧಮಾಡಿ ಸೋತು ಓಡಿತು, ಕೃಪಾಚಾರ್ಯನ ಯೋಧರಿಗೆ ತಲೆಯ ಋಣಸಂಬಂಧ ಕಡಿದು ಹೋಯಿತು. ಉತ್ಸಾಹದಿಂದ ಸುತ್ತುವರಿದ ವೀರರು ಅಪ್ಸರ ಸ್ತ್ರೀಯರೊಂದಿಗೆ ಬೆರೆತರು. ಶಲ್ಯನ ಸೈನ್ಯದ ಮಾಂಸಖಂಡಗಳು ಕಾಗೆ ನರಿಗಳಿಗೆ ಪ್ರಿಯವಾಯಿತು.

ಅರ್ಥ:
ಹಳಚು: ತಾಗು, ಬಡಿ; ಮುರಿ: ಸೀಳು; ವೀರ: ಶೂರ; ಬಲ: ಸೈನ್ಯಲ್ ಸೇನೆ: ಸೈನ್ಯ; ತಲೆ: ಶಿರ; ಋಣ: ಹಂಗು; ಸಂಬಂಧ: ಸಂಪರ್ಕ, ಸಹವಾಸ; ಸವೆ: ಹಾಕು, ಉಂಟಾಗು; ಕಾತರಿಸು: ತವಕಗೊಳ್ಳು; ಕವಿ: ಆವರಿಸು; ಬಲ: ಸೈನ್ಯ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಅಮರ: ದೇವತೆ; ನಾರಿ: ಹೆಣ್ಣು; ಸೇರು: ಜೊತೆಗೂಡು; ಅಡಗು: ಮಾಂಸ; ಸವಿ: ರುಚಿ; ಜಂಬುಕ: ನರಿ; ಕಾಕ: ಕಾಗೆ; ಸಂತತಿ: ವಂಶ;

ಪದವಿಂಗಡಣೆ:
ಹಳಚಿ +ಮುರಿದುದು +ವೀರ +ಕರ್ಣನ
ಬಲ +ಕೃಪಾಚಾರಿಯರ +ಸೇನೆಗೆ
ತಲೆಯ +ಋಣ +ಸಂಬಂಧ +ಸವೆದುದು +ಕಾತರಿಸಿ +ಕವಿವ
ಬಲದ +ಬಿರುದರಿಗ್+ಅಮರ +ನಾರಿಯ
ರೊಳಗೆ +ಸೇರುವೆಯಾಯ್ತು +ಶಲ್ಯನ
ಬಲದ್+ಅಡಗು +ಸವಿಯಾಯ್ತು +ಜಂಬುಕ +ಕಾಕ +ಸಂತತಿಗೆ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಬಲದ ಬಿರುದರಿಗಮರ ನಾರಿಯರೊಳಗೆ ಸೇರುವೆಯಾಯ್ತು; ಬಲದಡಗು ಸವಿಯಾಯ್ತು ಜಂಬುಕ ಕಾಕ ಸಂತತಿಗೆ; ತಲೆಯ ಋಣ ಸಂಬಂಧ ಸವೆದುದು

ಪದ್ಯ ೧: ಸಂಜಯನು ಧೃತರಾಷ್ಟ್ರನಿಗೆ ಯಾವುದನ್ನು ಸವಿಯಲ್ಲು ಹೇಳಿದನು?

ಸಾಲದೇ ಕಥೆಯನ್ನು ಮೇಲಣ
ಕಾಳೆಗದ ಮಾತುಗಳನಕಟಾ
ಕೇಳಿ ಜೀವವ ಹಿಡಿಯಲಾಪೈ ತಂದೆ ಧೃತರಾಷ್ಟ್ರ
ಹೇಳುವಡೆ ಕರ್ಣವ್ಯಥೆಯ ಸಂ
ಭಾಳಿಸುವಡೆನಗರಿದು ನುಡಿಗಳ
ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ (ಕರ್ಣ ಪರ್ವ, ೨೭ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧದ ವೃತ್ತಾಂತವನ್ನು ತಿಳಿಸುತ್ತಾ, ಧೃತರಾಷ್ಟ್ರ ಇನ್ನು ಕಥೆಯನ್ನು ಕೇಳಿದುದು ಸಾಕಾಗಲಿಲ್ಲವೇ? ಯುದ್ಧದಲ್ಲಿ ಮುಂದಾಗುವುದನ್ನು ಕೇಳಿ ನೀನು ಜೀವಸಹಿತನಾಗಿರುವೆಯಾ? ಅಯ್ಯೋ, ಮುಂದಿನ ಕಥೆಯು ಕಿವಿಗೆ ಶೂಲದಂತೆ ನೋವನ್ನುಂಟುಮಾಡುತ್ತದೆ. ಅದನ್ನು ಹೇಳಲೂ ಸಹಿಸಲೂ ನನಗೇ ಅಸಾಧ್ಯ. ಕಾಳಕೂಟದಂತಹ ಮಾತುಗಳನ್ನು ಬಡಿಸುತ್ತೇನೆ, ಕೇಳಿ ಆಹ್ಲಾದಿಸು.

ಅರ್ಥ:
ಸಾಲದೇ: ಸಾಕು; ಕಥೆ: ನಿರೂಪಣೆ; ಮೇಲಣಿಗೆ: ಮೇಲಕ್ಕೆ; ಕಾಳೆಗ: ಯುದ್ಧ; ಮಾತು: ವಾಣಿ, ವಾಕ್; ಅಕಟ: ಅಯ್ಯೋ; ಕೇಳು: ಆಲಿಸು; ಜೀವ: ಬದುಕು; ಹಿಡಿಯು: ಬಂಧಿಸು, ಕಟ್ಟು; ತಂದೆ: ಪಿತ; ಹೇಳು: ತಿಳಿಸು; ವ್ಯಥೆ: ನೋವು, ಯಾತನೆ; ಸಂಭಾಳಿಸು: ಸಹಿಸು; ಅರಿ: ತಿಳಿ; ನುಡಿ: ಮಾತು; ಕಾಳಕೂಟ: ವಿಷ; ಬಡಿಸು: ನೀಡು; ಕಿವಿ: ಕರ್ಣ; ಸವಿ: ಆಹ್ಲಾದಿಸು;

ಪದವಿಂಗಡಣೆ:
ಸಾಲದೇ+ ಕಥೆಯನ್ನು +ಮೇಲಣ
ಕಾಳೆಗದ +ಮಾತುಗಳನ್+ಅಕಟಾ
ಕೇಳಿ +ಜೀವವ+ ಹಿಡಿಯಲಾಪೈ+ ತಂದೆ +ಧೃತರಾಷ್ಟ್ರ
ಹೇಳುವಡೆ +ಕರ್ಣ+ವ್ಯಥೆಯ +ಸಂ
ಭಾಳಿಸುವಡ್+ಎನಗ್+ಅರಿದು+ ನುಡಿಗಳ
ಕಾಳಕೂಟವ+ ಬಡಿಸುವೆನು+ ಕಿವಿಯಾರೆ +ಸವಿಯೆಂದ

ಅಚ್ಚರಿ:
(೧) ನುಡಿಯನ್ನು ಬಡಿಸುವ – ಕವಿಯ ಪದಗಳ ಪ್ರೌಢಿಮೆ
(೨) ವಿಷವನ್ನು ಸವಿಯೆಂದು ಹೇಳುವ ಪರಿ – ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ