ಪದ್ಯ ೮: ಬಲರಾಮನು ಏನೆಂದು ಯೋಚಿಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲ ಬಿಜಯಂಗೈಯನೇ ಕುರುಪತಿಯನವಗಡಿಸಿ
ತಾಳಹಳವಿಗೆಯವನು ಯಾದವ
ಜಾಲ ಸಹಿತೈತಂದು ಕಾರ್ಯದ
ಮೇಲುದಾಗಿನ ಹದನನರಿದನು ಕೃಷ್ಣನಭಿಮತವ (ಗದಾ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ವೈಶಂಪಾಯನ ಮುನಿಗಳು ಜನಮೇಜಯನಿಗೆ ಉತ್ತರಿಸುತ್ತಾ, ರಾಜನೇ ಕೇಳು, ಶ್ರೀಕೃಷ್ಣನು ಸಂಧಿಯನ್ನು ಮುರಿದು, ದುರ್ಯೋಧನನನ್ನು ತಿರಸ್ಕರಿಸಿ ಹಿಂದಿರುಗಿದನು. ತಾಳಧ್ವಜನಾದ ಬಲರಾಮನು ಯಾದವ ಸೈನ್ಯದೊಡನೆ ಬಂದು ಮುಂದಿನ ಕಾರ್ಯವನ್ನು ಚಿಂತಿಸಿ ಶ್ರೀಕೃಷ್ಣನ ಅಭಿಪ್ರಾಯವನ್ನು ಊಹಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಸಂಧಿ: ಸೇರಿಕೆ, ಸಂಯೋಗ; ಮುರಿ: ಸೀಳು; ಲೋಲ: ಪ್ರೀತಿ, ಅಕ್ಕರೆ; ಬಿಜಯಂಗೈ: ದಯಮಾಡಿಸು, ತೆರಳು; ಅವಗಡ: ಅಸಡ್ಡೆ; ಅಳವಿ: ಶಕ್ತಿ; ಹಳವಿಗೆ: ಬಾವುಟ; ಜಾಲ: ಗುಂಪು; ಸಹಿತ: ಜೊತೆ; ಐತಂದು: ಬರೆಮಾಡು; ಕಾರ್ಯ: ಕೆಲಸ; ಹದ: ಸ್ಥಿತಿ; ಅರಿ: ತಿಳಿ; ಅಭಿಮತ: ಅಭಿಪ್ರಾಯ;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಸಂಧಿಯ +ಮುರಿದು +ಲಕ್ಷ್ಮೀ
ಲೋಲ +ಬಿಜಯಂಗೈಯನೇ+ ಕುರುಪತಿಯನ್+ಅವಗಡಿಸಿ
ತಾಳಹಳವಿಗೆಯವನು +ಯಾದವ
ಜಾಲ +ಸಹಿತೈತಂದು+ ಕಾರ್ಯದ
ಮೇಲುದಾಗಿನ +ಹದನನ್+ಅರಿದನು +ಕೃಷ್ಣನ್+ಅಭಿಮತವ

ಅಚ್ಚರಿ:
(೧) ಬಲರಾಮನನ್ನು ತಾಳಹಳವಿಗೆಯವನು ಎಂದು ಕರೆದಿರುವುದು

ಪದ್ಯ ೧: ಸಂಜಯನು ಯಾವ ಮೂರು ರಥಗಳನ್ನು ನೋಡಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ (ಗದಾ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೃಪಚಾರ್ಯ ಮುಂತಾದವರುಗಳನ್ನು ನೋಡಿ ಇವರು ಭೀಮನ ಕಡೆಯವರಲ್ಲವಲ್ಲ ಎಂದು ಬೆದರುತ್ತಾ ಹತ್ತಿರಕ್ಕೆ ಬಂದು ಮೂರೂ ರಥಗಳು ಒಂದೇ ಗತಿಯಲ್ಲಿ ಬರುವುದನ್ನೂ ಅದರಲ್ಲಿ ಕೃಪ ಅಶ್ವತ್ಥಾಮರಿರುವುದನ್ನು ಕಂಡು ಹತ್ತಿರಕ್ಕೆ ಬಂದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಬರುತ: ಆಗಮಿಸು; ಭೂಪಾಲ: ರಾಜ; ಅರಕೆ: ಕೊರತೆ, ನ್ಯೂನತೆ; ಹತ್ತಿರ: ಸಮೀಪ; ಸಮಪಾಳಿ: ಒಂದೇ ಗತಿ; ರಥ: ಬಂಡಿ; ಕೋಲ: ಬಾಣ; ಗುರು: ಆಚಾರ್ಯ; ಮಗ: ಸುತ; ಐತಂದ: ಬಂದುಸೇರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ +ಬರುತ +ಕುರು+ಭೂ
ಪಾಲನ್+ಅರಕೆಯ +ಭೀಮನವರಿವರಲ್ಲಲೇ+ ಎನುತ
ಮೇಲೆ +ಹತ್ತಿರ +ಬರಬರಲು +ಸಮ
ಪಾಳಿಯಲಿ +ರಥ +ಮೂರರಲಿ +ಕೃಪ
ಕೋಲ +ಗುರುವಿನ +ಮಗನಲಾ +ಎನುತ್+ಅಲ್ಲಿಗ್+ಐತಂದ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ – ಸಮಾನಾರ್ಥಕ ಪದ

ಪದ್ಯ ೧: ಸಂಜಯನು ಯಾರನ್ನು ಹುಡುಕಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ (ಗದಾ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ರಣರಂಗಕ್ಕೆ ರಕ್ಷಣೆಗಾಗಿ ಬಂದ ಕುದುರೆಗಳೊಡನೆ ರಣರಂಗದ ಉದ್ದಗಲಕ್ಕೂ ಚಲಿಸಿ ದುರ್ಯೋಧನನ ಬಗ್ಗೆ ಕೇಳುತ್ತಾ ಕುರುಪತಿಯನ್ನು ಹುಡುಕಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಭೂಪಾಲಕ: ರಾಜ; ಅರಸು: ಹುಡುಕು; ಸಂಗರ: ಯುದ್ಧ; ರಂಗಭೂಮಿ: ಯುದ್ಧಭೂಮಿ, ಕಳ; ಸುಯಿಧಾನ: ರಕ್ಷಣೆ; ತುರಂಗ: ಕುದುರೆ; ಜಾಲ: ಗುಮ್ಫು; ಸಹಿತ: ಜೊತೆ; ಅಗಲ: ವಿಸ್ತಾರ; ಭೂಪಾಲ: ರಾಜ; ಆವೆಡೆ: ಎಲ್ಲಿ; ಬೆಸ: ಕೇಳು; ನೃಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ+ ಬಂದು+ ಕುರುಭೂ
ಪಾಲಕನನ್+ಅರಸಿದನು +ಸಂಗರ +ರಂಗಭೂಮಿಯಲಿ
ಮೇಲುಸುಯಿಧಾನದ +ತುರಂಗಮ
ಜಾಲ +ಸಹಿತ್+ಅಗಲದಲಿ +ಕುರು+ಭೂ
ಪಾಲನ್+ಆವೆಡೆ+ಎನುತ +ಬೆಸಗೊಳುತ್+ಅರಸಿದನು+ ನೃಪನ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ, ನೃಪ – ಸಮಾನಾರ್ಥಕ ಪದ
(೨) ಕುರುಭೂಪಾಲ – ೨, ೫ ಸಾಲಿನ ಕೊನೆಯ ಪದ

ಪದ್ಯ ೧: ಧರ್ಮಜನು ಯಾರ ಪಾದವನ್ನು ಅಪ್ಪಿಕೊಂಡನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣಾರ್ಜುನರು ಬರೆ ಭೂ
ಪಾಲನಂದಿದಿರಾಗಿ ಬಂದನು ಸಕಲ ದಳಸಹಿತ
ಹೇಳಲರಿಯೆನು ಹರುಷದುದಯವ
ನಾಲಿ ಹೂಳಿದವಶ್ರುಜಲದಲಿ
ಮೇಲುವಾಯ್ದಪ್ಪಿದನ ದೇವನು ಪಾದಪಂಕಜವ (ದ್ರೋಣ ಪರ್ವ, ೧೫ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ್ ಕೇಳು, ಕೃಷ್ಣಾರ್ಜುನರು ವಿಜಯಶಾಲಿಗಳಾಗಿ ಹಿಂದಿರುಗಿ ಬರುತ್ತಿರಲು, ಧರ್ಮಜನು ಸಮಸ್ತ ಸೈನ್ಯದೊಡನೆ ಇದಿರಾಗಿ ಬಂದನು. ಅವನಿಗಾದ ಸಂತೋಷವನ್ನು ಹೇಳಲು ಸಾಧ್ಯವಿಲ್ಲ. ಕಣ್ತುಂಬಾ ಆನಂದಾಶ್ರುಗಳು ತುಂಬಿದ್ದವು. ಬೇಗನೆ ಬಂದು ಶ್ರೀಕೃಷ್ಣನ ಪಾದ ಕಮಲಗಳನ್ನು ಅಪ್ಪಿಕೊಂಡನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಬರೆ: ಕೇವಲ; ಭೂಪಾಲ: ರಾಜ; ಇದಿರು: ಎದುರು; ಬಂದು: ಆಗಮಿಸು; ಸಕಲ: ಎಲ್ಲಾ; ದಳ: ಸೈನ್ಯ; ಸಹಿತ: ಜೊತೆ; ಅರಿ: ತಿಳಿ; ಹರುಷ: ಸಂತಸ; ಉದಯ: ಜನನ, ಹೊರತರು; ಆಲಿ: ಕಣ್ಣು; ಹೂಳು: ಮುಳುಗಿಸು; ಅಶ್ರು: ಕಣ್ಣೀರು; ಜಲ: ನೀರು; ದೇವ: ಭಗವಂತ; ಪಾದ: ಚರಣ; ಪಂಕಜ: ಪದ್ಮ; ಮೇಲ್ವಾಯಿ: ಮೇಲೆ ಬೀಳು;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಕೃಷ್ಣಾರ್ಜುನರು +ಬರೆ +ಭೂ
ಪಾಲನಂದ್+ಇದಿರಾಗಿ+ ಬಂದನು +ಸಕಲ +ದಳ+ಸಹಿತ
ಹೇಳಲ್+ಅರಿಯೆನು +ಹರುಷದ್+ಉದಯವನ್
ಆಲಿ+ ಹೂಳಿದವ್+ಅಶ್ರು+ಜಲದಲಿ
ಮೇಲುವಾಯ್ದ್+ಅಪ್ಪಿದನ +ದೇವನು +ಪಾದ+ಪಂಕಜವ

ಅಚ್ಚರಿ:
(೧) ಸಂತಸವನ್ನು ವರ್ಣಿಸುವ ಪರಿ – ಹರುಷದುದಯವ ನಾಲಿ ಹೂಳಿದವಶ್ರುಜಲದಲಿ
(೨) ಧರಿತ್ರೀಪಾಲ, ಭೂಪಾಲ – ಸಮಾನಾರ್ಥಕ ಪದ

ಪದ್ಯ ೧: ಅರ್ಜುನನು ಆಯುಧಶಾಲೆಯಲ್ಲಿ ಯಾವ ಆಯುಧಗಳನ್ನು ತೆಗೆಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಫಲುಗುಣ ಹೊಕ್ಕನಾಯುಧ
ಶಾಲೆಯನು ತೆಗೆಸಿದನು ಧನು ಮೊದಲಾದ ಕೈದುಗಳ
ಸಾಲರಿದು ನಿಲಿಸಿದನು ನಿಶಿತ ಶ
ರಾಳಿ ಚಾಪ ಕೃಪಾಣ ಪರಶು ತ್ರಿ
ಶೂಲ ಮುದ್ಗರ ಚಕ್ರ ಸೆಲ್ಲೆಹ ಶಕುತಿ ತೋಮರವ (ದ್ರೋಣ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನು ಆಯುಧಶಾಲೆಯನ್ನು ಹೊಕ್ಕು, ಬಿಲ್ಲು ಮೊದಲಾದ ಎಲ್ಲಾ ಆಯುಧಗಳನ್ನು ತೆಗೆಸಿದನು. ಚೂಪಾದ ಬಾಣಗಳು, ಬಿಲ್ಲು, ಗಂಡುಗೊಡಲಿ, ತ್ರಿಶೂಲ, ಕತ್ತಿ, ಮುದ್ಗರ, ಚಕ್ರ, ಶಲ್ಯ, ಶಕ್ತಿ, ತೋಮರಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಹೊಕ್ಕು: ಸೇರು; ಆಯುಧ: ಶಸ್ತ್ರ; ಶಾಲೆ: ಪಾಠಶಾಲೆ, ಆಲಯ; ತೆಗೆಸು: ಹೊರತರು; ಧನು: ಬಿಲ್ಲು; ಕೈದು: ಆಯುಧ, ಶಸ್ತ್ರ; ನಿಶಿತ: ಹರಿತವಾದುದು; ಶರಾಳಿ: ಬಾಣಗಳ ಗುಂಪು; ಚಾಪ: ಬಿಲ್ಲು; ಕೃಪಾಣ: ಕತ್ತಿ, ಖಡ್ಗ; ಪರಶು: ಕೊಡಲಿ, ಕುಠಾರ; ತ್ರಿಶೂಲ: ಮೂರು ಮೊನೆಗಳುಳ್ಳ ಆಯುಧ, ಪಿನಾಕ; ಮುದ್ಗರ: ಗದೆ; ಶಕುತಿ: ಶಕ್ತಿ, ಬಲ; ತೋಮರ: ಈಟಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಫಲುಗುಣ +ಹೊಕ್ಕನ್+ಆಯುಧ
ಶಾಲೆಯನು +ತೆಗೆಸಿದನು +ಧನು+ ಮೊದಲಾದ +ಕೈದುಗಳ
ಸಾಲರಿದು +ನಿಲಿಸಿದನು +ನಿಶಿತ +ಶ
ರಾಳಿ +ಚಾಪ +ಕೃಪಾಣ +ಪರಶು +ತ್ರಿ
ಶೂಲ +ಮುದ್ಗರ+ ಚಕ್ರ +ಸೆಲ್ಲೆಹ +ಶಕುತಿ +ತೋಮರವ

ಅಚ್ಚರಿ:
(೧) ಆಯುಧಗಳ ಹೆಸರು – ಶರಾಳಿ, ಚಾಪ, ಕೃಪಾಣ, ಪರಶು, ತ್ರಿಶೂಲ, ಮುದ್ಗರ, ಚಕ್ರ, ತೋಮರ

ಪದ್ಯ ೧: ಕೃಷ್ಣನು ರಥವನ್ನು ಎಲ್ಲಿಗೆ ತಿರುಗಿಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಮಸಪ್ತಕರ ಬಲ ನಿಜ
ಪಾಳೆಯಕೆ ತಿರುಗಿದುದು ತೀರಿತು ತರಣಿಯಾಟೋಪ
ಕಾಳೆಗವ ತೆಗೆಸಿದರು ಕೌರವ
ರೇಳು ಫಲುಗುಣ ಎನುತ ಲಕ್ಷ್ಮೀ
ಲೋಲ ವಾಘೆಯ ಮರಳಿಕೊಂಡನು ಹಯವ ಬೋಳೈಸಿ (ದ್ರೋಣ ಪರ್ವ, ೮ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಸಮಸಪ್ತಕರು ತಮ್ಮ ಪಾಳೆಯಕ್ಕೆ ಹಿಂದಿರುಗಿದರು, ಸೂರ್ಯನು ತನ್ನ ದಿನದ ಆಟವನ್ನು ಮುಗಿಸಿ ಅಸ್ತಂಗತನಾದನು. ಕೌರವರು ಯುದ್ಧವನ್ನು ನಿಲ್ಲಿಸಿದರು. ಅರ್ಜುನ ಏಳು ಎಂದು ಶ್ರೀಕೃಷ್ಣನು ಕುದುರೆಯ ಹಗ್ಗವನ್ನು ಎಳೆದು ರಥವನ್ನು ತಿರುಗಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾದಿ ಹೋರಾಡುವರು; ಬಲ: ಶಕ್ತಿ; ಪಾಳೆಯ: ಬಿಡಾರ; ತಿರುಗು: ಮರಳು; ತೀರು: ಅಂತ್ಯ; ತರಣಿ: ಸೂರ್ಯ; ಆಟೋಪ: ಆಡಂಬರ, ಆವೇಶ; ಕಾಳೆಗ: ಯುದ್ಧ; ತೆಗೆಸು: ಹೊರತರು; ಲೋಲ: ಪ್ರೀತಿ; ವಾಘೆ: ಲಗಾಮು; ಮರಳಿ: ಮತ್ತೆ, ಪುನಃ; ಹಯ: ಕುದುರೆ; ಬೋಳೈಸು: ಸಂತೈಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಮಸಪ್ತಕರ +ಬಲ +ನಿಜ
ಪಾಳೆಯಕೆ +ತಿರುಗಿದುದು +ತೀರಿತು +ತರಣಿ+ಆಟೋಪ
ಕಾಳೆಗವ +ತೆಗೆಸಿದರು +ಕೌರವರ್
ಏಳು +ಫಲುಗುಣ +ಎನುತ +ಲಕ್ಷ್ಮೀ
ಲೋಲ +ವಾಘೆಯ +ಮರಳಿಕೊಂಡನು +ಹಯವ +ಬೋಳೈಸಿ

ಅಚ್ಚರಿ:
(೧) ದಿನ ಕಳೆಯಿತು ಎಂದು ಹೇಳಲು – ತೀರಿತು ತರಣಿಯಾಟೋಪ
(೨) ಕೃಷ್ಣನನ್ನು ಲಕ್ಷ್ಮೀಲೋಲ ಎಂದು ಕರೆದಿರುವುದು

ಪದ್ಯ ೧: ದುರ್ಯೋಧನನು ಕರ್ಣನನ್ನು ಏನು ಕೇಳಿದನು?

ಕೇಳು ಜನಮೇಜಯ ಧರಿತ್ರಿ
ಪಾಲ ತೆಗೆದವು ಬಲವೆರಡು ನಿಜ
ಪಾಳಯಂಗಳಿಗಿರುಳು ಕೌರವನಿತ್ತನೋಲಗವ
ಹೇಳು ಕರ್ಣ ದ್ರೋಣ ರಿಪು ಭೂ
ಪಾಲಕನನರೆಯಟ್ಟಿದನು ಗಡ
ಕಾಳಗದ ಹದನೇನೆನುತ ಕುರುರಾಯ ಬೆಸಗೊಂಡ (ದ್ರೋಣ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ರಾತ್ರಿಯಾಗಲು ಎರಡೂ ಸೈನ್ಯಗಳು ಪಾಳೆಯಗಳಿಗೆ ಹೋದವು. ಆ ರಾತ್ರಿ ಕೌರವನು ಓಲಗವನ್ನಿತ್ತು, ಕರ್ಣ, ಸೇನಾಧಿಪತಿ ದ್ರೋನನು ಧರ್ಮಜನನ್ನು ಅಟ್ಟಿಸಿಕೊಂಡು ಹೋದನಲ್ಲವೇ, ಯುದ್ಧದಲ್ಲೇನಾಯಿತು ಎಂದು ಕೇಳಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ತೆಗೆ: ಹೊರತರು; ಬಲ: ಸೈನ್ಯ; ಪಾಳೆಯ: ಸೀಮೆ; ಇರುಳು: ರಾತ್ರಿ; ಓಲಗ: ದರ್ಬಾರು; ರಿಪು: ವೈರಿ; ಭೂಪಾಲ: ರಾಜ; ಅಟ್ಟು: ಬೆನ್ನಟ್ಟುವಿಕೆ, ಧಾವಂತ; ಗಡ: ಅಲ್ಲವೆ; ಕಾಳಗ: ಯುದ್ಧ; ಹದ: ಸರಿಯಾದ ಸ್ಥಿತಿ; ರಾಯ: ರಾಜ; ಬೆಸ: ಕೆಲಸ, ಕಾರ್ಯ, ಅಪ್ಪಣೆ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರಿ
ಪಾಲ+ ತೆಗೆದವು +ಬಲವೆರಡು +ನಿಜ
ಪಾಳಯಂಗಳಿಗ್+ಇರುಳು +ಕೌರವನಿತ್ತನ್+ಓಲಗವ
ಹೇಳು +ಕರ್ಣ +ದ್ರೋಣ +ರಿಪು +ಭೂ
ಪಾಲಕನನ್+ಅರೆಯಟ್ಟಿದನು +ಗಡ
ಕಾಳಗದ+ ಹದನೇನೆನುತ+ ಕುರುರಾಯ +ಬೆಸಗೊಂಡ

ಅಚ್ಚರಿ:
(೧) ಕೇಳು, ಹೇಳು – ಪ್ರಾಸ ಪದಗಳು
(೨) ರಾಯ, ಧರಿತ್ರೀಪಾಲ, ಭೂಪಾಲಕ – ಸಮಾನಾರ್ಥಕ ಪದ

ಪದ್ಯ ೧: ನಾಲ್ಕನೇ ದಿನದ ಯುದ್ಧವು ಹೇಗೆ ಪ್ರಾರಂಭವಾಯಿತು?

ಕೇಳು ಜನಮೇಜಯ ಧರಿತ್ರೀ
ಪಾಲ ದಿನ ಮೂರಾಯ್ತು ಭೀಷ್ಮನ
ಕಾಳೆಗದೊಳಲ್ಲಿಂದ ಮೇಲಣ ಕಥನಕೌತುಕವ
ಆಲಿಸುವದೈ ಮೂಡಣದ್ರಿಯ
ಮೇಲೆ ಕೆಂಪೆಸೆಯಿತ್ತು ಘನನಿ
ಸ್ಸಾಳವೊದರಿದವೈ ನೃಪಾಲರ ಕಟಕವೆರಡರಲಿ (ಭೀಷ್ಮ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹೀಗೆ ಯುದ್ಧವು ಮೂರನೇ ದಿನಕ್ಕೆ ತಲುಪಿತು. ಮುಂದಿನ ಕಥೆಯು ಬಹು ರೋಚಕವಾಗಿದೆ, ಸೂರ್ಯನು ಪೂರ್ವ ದಿಕ್ಕಿನ ಬೆಟ್ಟದಿಂದ ಹೊರಹೊಮ್ಮಲು ಕೆಂಬೆಳಕು ಮೂಡಿತು, ಆಗ ಎರಡು ಸೈನ್ಯಗಳಲ್ಲೂ ರಣವಾದ್ಯಗಳಾದ ನಿಸ್ಸಾಳ ಮುಂತಾದವು ಮೊಳಗಿದವು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಕಾಳೆಗ: ಯುದ್ಧ; ಮೇಲಣ: ಮುಂದಿನ; ಕೌತುಕ: ಆಶ್ಚರ್ಯ; ಆಲಿಸು: ಕೇಳು; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಕೆಂಪೆಸೆ: ಕೆಂಪಾದ ಬಣ್ಣವು ತೋರಿತು; ಘನ: ಶ್ರೇಷ್ಠ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಒದರು: ಗರ್ಜಿಸು; ನೃಪಾಲ: ರಾಜ; ಕಟಕ: ಯುದ್ಧ;

ಪದವಿಂಗಡಣೆ:
ಕೇಳು +ಜನಮೇಜಯ+ ಧರಿತ್ರೀ
ಪಾಲ +ದಿನ +ಮೂರಾಯ್ತು +ಭೀಷ್ಮನ
ಕಾಳೆಗದೊಳ್+ಅಲ್ಲಿಂದ +ಮೇಲಣ+ ಕಥನ+ಕೌತುಕವ
ಆಲಿಸುವದೈ +ಮೂಡಣ್+ಅದ್ರಿಯ
ಮೇಲೆ +ಕೆಂಪೆಸೆಯಿತ್ತು+ ಘನ+ನಿ
ಸ್ಸಾಳವ್+ಒದರಿದವೈ+ ನೃಪಾಲರ+ ಕಟಕವ್+ಎರಡರಲಿ

ಅಚ್ಚರಿ:
(೧) ಸೂರ್ಯೋದಯವಾಯಿತು ಎಂದು ಹೇಳುವ ಪರಿ – ಮೂಡಣದ್ರಿಯ ಮೇಲೆ ಕೆಂಪೆಸೆಯಿತ್ತು
(೨) ಕಾಳೆಗ, ಕಟಕ – ಸಮನಾರ್ಥಕ ಪದ

ಪದ್ಯ ೭: ದುರ್ಯೋಧನನು ಯಾರನ್ನು ತೋರಿಸಲು ಕೇಳಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಭೀಷ್ಮನ ಹೊರೆಗೆ ಕುರುಭೂ
ಪಾಲ ಬಂದನು ಬಿನ್ನವಿಸಿದನು ಮುಕುಳಕರನಾಗಿ
ಮೇಳದಲಿ ಮಂಡಳಿಸಿದರಿನೃಪ
ಜಾಲದಲಿ ಯಮಸೂನುವಾವನು
ಮೇಲೆ ಭೀಮಾರ್ಜುನರ ವಿವರಿಸಿ ತೋರಬೇಕೆಂದ (ಭೀಷ್ಮ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಭೀಷ್ಮನ ರಕ್ಷಣೆಯಲ್ಲಿ ಕುರುಸೈನ್ಯವು ಯುದ್ಧಕ್ಕೆ ಹೊರಟಿತು, ದುರ್ಯೋಧನನು ಭೀಷ್ಮನ ಬಳಿಗೆ ಬಂದು ಶತ್ರು ಸೈನ್ಯದ ನಡುವೆ ನಿಂತ ಯುಧಿಷ್ಠಿರನನ್ನೂ, ಭೀಮಾರ್ಜುನರನ್ನು ತೋರಿಸಿ ಎಂದು ಕೇಳಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಹೊರೆ: ರಕ್ಷಣೆ, ಆಶ್ರಯ; ಭೂಪಾಲ: ರಾಜ; ಬಂದನು: ಆಗಮಿಸು; ಬಿನ್ನವಿಸು: ಕೇಳು, ಬೇಡು; ಮುಕುಳಕರ: ಮೊಗ್ಗಿನಾಕಾರದ ಕೈ, ನಮಸ್ಕರಿಸು; ಮೇಳ: ಗುಂಪು; ಮಂಡಳ: ವರ್ತುಲಾಕಾರ; ಅರಿ: ವೈರಿ; ನೃಪ: ರಾಜ; ಜಾಲ: ಗುಂಪು; ಸೂನು: ಮಗ; ವಿವರಿಸು: ಹೇಳು; ತೊರು: ಗೋಚರಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಭೀಷ್ಮನ+ ಹೊರೆಗೆ +ಕುರು+ಭೂ
ಪಾಲ +ಬಂದನು+ ಬಿನ್ನವಿಸಿದನು +ಮುಕುಳಕರನಾಗಿ
ಮೇಳದಲಿ+ ಮಂಡಳಿಸಿದ್+ಅರಿ+ನೃಪ
ಜಾಲದಲಿ +ಯಮಸೂನುವ್+ಆವನು
ಮೇಲೆ+ ಭೀಮಾರ್ಜುನರ+ ವಿವರಿಸಿ+ ತೋರಬೇಕೆಂದ

ಅಚ್ಚರಿ:
(೧) ಧರಿತ್ರೀಪಾಲ, ನೃಪ, ಭೂಪಾಲ – ಸಮನಾರ್ಥಕ ಪದ
(೨) ನಮಸ್ಕರಿಸಿದನು ಎಂದು ಹೇಳಲು – ಮುಕುಳಕರನಾಗಿ ಎಂಬ ಪದದ ಬಳಕೆ
(೩) ಬ, ಮ ಕಾರಗಳ ಸಾಲು ಪದ – ಭೂಪಾಲ ಬಂದನು ಬಿನ್ನವಿಸಿದನು ಮುಕುಳಕರನಾಗಿ
ಮೇಳದಲಿ ಮಂಡಳಿಸಿದರಿನೃಪ

ಪದ್ಯ ೧: ಸೈನಿಕರು ಯಾರ ಅಪ್ಪಣೆಗಾಗಿ ಕಾಯುತ್ತಿದ್ದರು?

ಕೇಳು ಜನಮೇಜಯ ಧರಿತ್ರೀ
ಪಾಲ ಧೃಷ್ಟದ್ಯುಮ್ನ ಭೀಷ್ಮರ
ಪಾಳಯದೊಳಂದಮಮ ಕೈಗೈದಿಳೆಗೆ ಹೊಸತೆನಿಸಿ
ಕಾಳೆಗಕ್ಕನುವಾಗಿ ರಥತುರ
ಗಾಳಿ ಕರಿ ಕಾಲಾಳು ದೊರೆಗಳ
ಮೇಲುಗೈ ಚಮರಿಗಳನೀಕ್ಷಿಸುತಿದ್ದುದುಭಯಬಲ (ಭೀಷ್ಮ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಭಾರತದ ಕಥೆಯನ್ನು ಮುಂದುವರೆಸುತ್ತಾ, ಜನಮೇಜಯ ರಾಜ ಕೇಳು, ಧೃಷ್ಟದ್ಯುಮ್ನ, ಭೀಷ್ಮರ ಪಾಳೆಯಗಳ ಸೈನ್ಯಗಳ ಅಂದವು ಭೂಮಿಗೆ ಹೊಸತೆನಿಸಿತು, ತಮ್ಮ ನಾಯಕರು ಚಾಮರವನ್ನು ಬೀಸಿ ಯುದ್ಧಾರಂಭ ಮಾಡಲು ಸನ್ನೆಯನ್ನು ಕೊಡುವುದಕ್ಕಾಗಿ ಎರಡು ಸೈನ್ಯದವರು ಎದುರ್ ನೋಡುತ್ತಿದ್ದರು.

ಅರ್ಥ:
ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಪಾಲ: ಒಡೆಯ; ಪಾಳಯ: ಶಿಬಿರ, ಬೀಡು; ಕೈಗೈ: ಸಿದ್ಧನಾಗು; ಇಳೆ: ಭೂಮಿ; ಹೊಸತು: ನವೀನ; ಕಾಳೆಗ: ಯುದ್ಧ; ಅನುವು: ಸೊಗಸು, ರೀತಿ; ರಥ: ಬಂಡಿ; ತುರಗಾಳಿ: ಕುದುರೆಗಳ ಸಾಲು; ಕರಿ: ಆನೆ; ಕಾಲಾಳು: ಸೈನಿಕರು; ದೊರೆ: ರಾಜ; ಮೇಲುಗೈ: ಹೆಚ್ಚುಗಾರಿಕೆ; ಚಮರಿ: ಚಾಮರ; ಈಕ್ಷಿಸು: ನೋಡು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಧೃಷ್ಟದ್ಯುಮ್ನ +ಭೀಷ್ಮರ
ಪಾಳಯದೊಳ್+ಅಂದಮಮ+ ಕೈಗೈದ್+ಇಳೆಗೆ +ಹೊಸತೆನಿಸಿ
ಕಾಳೆಗಕ್+ಅನುವಾಗಿ +ರಥ+ತುರ
ಗಾಳಿ +ಕರಿ +ಕಾಲಾಳು +ದೊರೆಗಳ
ಮೇಲುಗೈ +ಚಮರಿಗಳನ್+ಈಕ್ಷಿಸುತಿದ್ದುದ್+ಉಭಯ+ಬಲ

ಅಚ್ಚರಿ:
(೧) ಚತುರಂಗ ಸೈನ್ಯವೆಂದು ಹೇಳಲು – ಕಾಳೆಗಕ್ಕನುವಾಗಿ ರಥತುರಗಾಳಿ ಕರಿ ಕಾಲಾಳು
(೨) ಧರಿತ್ರೀಪಾಲ, ದೊರೆ – ಸಮನಾರ್ಥಕ ಪದ