ಪದ್ಯ ೨೮: ದ್ರೋಣನು ಯಾಕೆ ಚಿಂತಿಸಿದನು?

ಇವು ಮಹಾನಿಸ್ಸೀಮತರ ವೈ
ಷ್ಣವವಲೇ ದಿವ್ಯಾಸ್ತ್ರನಿವಹವ
ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ
ಇವು ಮ್ಹಾರಣರಂಗದಲಿ ಶಾ
ತ್ರವ ನಿವಾರಣವೈಸಲೆಮ್ಮೀ
ವ್ಯವಹೃತಿಗೆ ತಾನೇನುಪಾಯವೆನುತ್ತ ಚಿಂತಿಸಿದ (ಆದಿ ಪರ್ವ, ೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪರಶುರಾಮನು ಇವು ಮಹಾವೈಷ್ಣವ ದಿವ್ಯಾಸ್ತ್ರಗಳು, ಇವುಗಳ ಪ್ರಭಾವಕ್ಕೆ ಎಲ್ಲೆಯೇ ಇಲ್ಲ. ಇವನ್ನು ತೆಗೆದುಕೋ ಎಂದು ಹೇಳಿದನು. ದ್ರೋಣನು ಉಚಿತರೀತಿಯಲ್ಲಿ ಅವನ್ನು ಸ್ವೀಕರಿಸಿದನು. ಈ ಅಸ್ತ್ರಗಳಿಂದ ರಣರಂಗದಲ್ಲಿ ಶತ್ರುಗಳನ್ನು ಸಂಹರಿಸಬಹುದು. ಆದರೆ ಲೌಕಿಕ ವ್ಯವಹಾರಕ್ಕೆ ಏನು ಉಪಾಯವನ್ನು ಮಾಡಬೇಕೆಂದು ದ್ರೋಣನು ಚಿಂತಿಸಿದನು.

ಅರ್ಥ:
ನಿಸ್ಸೀಮ: ನಿಪುಣ, ಅತಿಶೂರ, ಪರಾಕ್ರಮಿ; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧಗಳು; ನಿವಹ: ಗುಂಪು; ಕೊಟ್ಟರು: ನೀಡಿದರು; ಉಚಿತ: ಸರಿಯಾದ; ವಿಧಾನ: ರೀತಿ; ರಣರಂಗ: ಯುದ್ಧಭೂಮಿ; ಶಾತ್ರ: ಶತ್ರು; ನಿವಾರಣೆ: ನಾಶ; ವ್ಯವಹೃತಿ: ಲೌಕಿಕ ಜೀವನ; ಉಪಾಯ: ಯುಕ್ತಿ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಇವು +ಮಹಾ+ನಿಸ್ಸೀಮತರ +ವೈ
ಷ್ಣವವಲೇ +ದಿವ್ಯಾಸ್ತ್ರ+ನಿವಹವನ್
ಅವರು +ಕೊಟ್ಟರು +ಕೊಂಡನ್+ಉಚಿತ +ವಿಧಾನದಲಿ +ದ್ರೋಣ
ಇವು +ಮಹಾರಣರಂಗದಲಿ +ಶಾ
ತ್ರವ+ ನಿವಾರಣವೈಸಲ್+ಎಮ್ಮೀ
ವ್ಯವಹೃತಿಗೆ +ತಾನೇನ್+ಉಪಾಯವ್+ಎನುತ್ತ+ ಚಿಂತಿಸಿದ

ಅಚ್ಚರಿ:
(೧) ಮಹಾನಿಸ್ಸೀಮ, ಮಹಾರಣರಂಗ – ಮಹಾ ಪದದ ಬಳಕೆ

ಪದ್ಯ ೧೫: ಅರ್ಜುನನ ಬತ್ತಳಿಕೆಯಲ್ಲಿ ಯಾವ ಬಾಣಗಳಿವೆ?

ಒಂದು ಹರ ಹಿಡಿವಂಬು ಶಕ್ರನ
ದೊಂದು ಕೌಬೇರಾಗ್ನಿ ವಾಯುವ
ದೊಂದು ಪಾರ್ಥನ ಬತ್ತಳಿಕೆ ದಿವ್ಯಾಸ್ತ್ರ ತುಂಬಿಹವು
ಕೊಂದಡಲ್ಲದೆ ಮಾಣವವು ನಾ
ವೊಂದಕೊಬ್ಬರು ಗುರಿ ನಿದಾನಿಸ
ಲಿಂದು ನಮಗಳವಡದು ಜಯವಿಲ್ಲೆಂದನಾ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಒಂದು ಪಾಶುಪತಾಸ್ತ್ರ, ಐಂದ್ರಾಸ್ತ್ರ, ಕುಬೇರ, ಅಗ್ನಿವಾಯುಗಳ ಅಸ್ತ್ರಗಳು ಅರ್ಜುನನ ಬತ್ತಳಿಕೆಯಲ್ಲಿ ತುಂಬಿವೆ. ಅವು ಸಂಹಾರ ಮಾಡದೆ ಬಿಡುವುದಿಲ್ಲ. ನಾವು ಒಬ್ಬೊಬ್ಬರೂ ಒಂದಕ್ಕೆ ಗುರಿಯಾಗುತ್ತೇವೆ, ಯೋಚಿಸಿದರೆ ನಮಗೆ ಜಯ ಸಿಗುವುದಿಲ್ಲ ಎಂದು ದ್ರೋಣರು ವಿಶ್ಲೇಷಿಸಿದರು.

ಅರ್ಥ:
ಹರ: ಶಿವ; ಹಿಡಿ: ಗ್ರಹಿಸು; ಅಂಬು: ಬಾಣ; ಶಕ್ರ: ಇಂದ್ರ; ಅಗ್ನಿ: ಬೆಂಕಿ; ವಾಯು: ಗಾಳಿ, ಅನಿಲ; ಬತ್ತಳಿಕೆ: ಬಾಣಗಳನ್ನು ಇಡುವ ಸ್ಥಳ; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ತುಂಬು: ಭರ್ತಿಯಾಗು; ಕೊಂದು: ಸಾಯಿಸು; ಮಾಣು: ನಿಲ್ಲಿಸು; ಗುರಿ: ಲಕ್ಷ್ಯ, ಉದ್ದೇಶ; ನಿದಾನ: ಸಾವಕಾಶ, ತಡ; ಅಳವಡು: ಸೇರು, ಕೂಡು; ಜಯ: ಗೆಲುವು;

ಪದವಿಂಗಡಣೆ:
ಒಂದು +ಹರ +ಹಿಡಿವ್+ಅಂಬು+ ಶಕ್ರನದ್
ಒಂದು +ಕೌಬೇರ+ಅಗ್ನಿ +ವಾಯುವದ್
ಒಂದು +ಪಾರ್ಥನ +ಬತ್ತಳಿಕೆ+ ದಿವ್ಯಾಸ್ತ್ರ +ತುಂಬಿಹವು
ಕೊಂದಡ್+ಅಲ್ಲದೆ +ಮಾಣವವು +ನಾವ್
ಒಂದಕ್+ಒಬ್ಬರು +ಗುರಿ +ನಿದಾನಿಸಲ್
ಇಂದು +ನಮಗ್+ಅಳವಡದು +ಜಯವಿಲ್ಲೆಂದನಾ +ದ್ರೋಣ

ಅಚ್ಚರಿ:
(೧) ಪಾಶುಪತಾಸ್ತ್ರವನ್ನು ಹರ ಹಿಡಿವಂಬು ಎಂದು ಕರೆದಿರುವುದು

ಪದ್ಯ ೨೮: ಕುರುಕುಲದ ವಿನಾಶಕರಾರು?

ದುರುಳರುರವಣಿಸಿದರು ಜವ್ವನ
ದುರು ಮದದ ಭರತಾನ್ವಯದ ದು
ರ್ಧರ ಮದದ ಘನಭುಜಮದದ ದಿವ್ಯಾಸ್ತ್ರದರಿಕೆಗಳ
ಭರಮದದ ಮರ್ಕಟವಿಲಾಸರು
ಧುರರಚಿತ ಪರಿಹಾಸರಭಿಜನ
ಕುರುವಿನಾಶರು ತಾವಕರು ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ನಿನ್ನವರದ ಮಕ್ಕಳು ಭೀಮನನ್ನು ಎದುರಿಸಲು ಹೊರಟರು, ಅವರು ದುಷ್ಟರು. ಯೌವನ ಮದ, ಕುಲ ಮದ, ಭುಜಬಲದ ಮದ, ದಿವ್ಯಾಸ್ತ್ರವನ್ನರಿತಿರುವ ಮದ, ಕಪಿಗಳಂತೆ ವರ್ತಿಸುತ್ತಾ ಅವರು ಹೋಗುವುದು ಹಾಸ್ಯಾಸ್ಪದವಾಗಿತ್ತು. ನಿನ್ನವರು ನಿಮ್ಮ ಕುರುಕುಲದ ವಿನಾಶಕರು ಎಂದು ಸಂಜಯನು ವಿವರಿಸಿದನು.

ಅರ್ಥ:
ದುರುಳ: ದುಷ್ಟ; ಉರವಣಿಸು: ಆತುರಿಸು; ಜವ್ವ: ಹರೆಯ, ಯೌವ್ವನ; ಉರು: ಹೆಚ್ಚು; ಮದ: ಅಹಂಕಾರ; ಅನ್ವಯ: ವಂಶ; ದುರ್ಧರ: ತಾಳಲು ಅಸಾಧ್ಯವಾದ; ಘನ: ಶ್ರೇಷ್ಠ; ಭುಜ: ಬಾಹು; ದಿವ್ಯ: ಶ್ರೇಷ್ಠ; ಅಸ್ತ್ರ: ಆಯುಧ; ಅರಿ: ತಿಳಿ; ಭರ: ಭಾರ, ಹೊರೆ; ಮರ್ಕಟ: ಕೋತಿ, ಮಂಗ; ವಿಲಾಸ: ಸಂತಸ; ಧುರ: ಯುದ್ಧ, ಕಾಳಗ; ರಚಿತ: ನಿರ್ಮಿಸು; ಪರಿಹಾಸ: ವಿನೋದ, ಸರಸ; ಅಭಿಜನ: ವಂಶ; ವಿನಾಶ: ಹಾಳು, ಸರ್ವನಾಶ; ತಾವಕ: ಆತ್ಮೀಯ; ಭಕ್ತ; ಕೇಳು: ಆಲಿಸು;

ಪದವಿಂಗಡಣೆ:
ದುರುಳರ್+ಉರವಣಿಸಿದರು +ಜವ್ವನದ್
ಉರು +ಮದದ+ ಭರತ+ಅನ್ವಯದ +ದು
ರ್ಧರ +ಮದದ +ಘನ+ಭುಜ+ಮದದ +ದಿವ್ಯಾಸ್ತ್ರದ್+ಅರಿಕೆಗಳ
ಭರ+ಮದದ +ಮರ್ಕಟ+ವಿಲಾಸರು
ಧುರ+ರಚಿತ +ಪರಿಹಾಸರ್+ಅಭಿಜನ
ಕುರು+ವಿನಾಶರು +ತಾವಕರು +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಮದ ಪದದ ಬಳಕೆ – ಜವ್ವನ ದುರು ಮದ, ಭರತಾನ್ವಯದ ದುರ್ಧರ ಮದ, ಘನಭುಜಮದ, ದಿವ್ಯಾಸ್ತ್ರದರಿಕೆಗಳ ಭರಮದ

ಪದ್ಯ ೪೮: ಅರ್ಜುನನು ಹೇಗೆ ಭೀಷ್ಮನ ವೇಗವನ್ನು ಮೀರಿಸಿದನು?

ಆವ ಚಾಪವ ತುಡುಕಿ ಕೆನ್ನೆಗೆ
ತೀವಿ ತೆಗೆಯದ ಮುನ್ನ ಫಲುಗುಣ
ನೋವದೆಸುವನು ಕಡಿದು ಬಿಸುಡುವನಿವರ ಬಿಲ್ಲುಗಳ
ಆವ ದಿವ್ಯಾಸ್ತ್ರವನು ಕುಂತಿಯ
ಮಾವ ತೊಡುವನು ತೊಡದ ಮುನ್ನ ಶ
ರಾವಳಿಯ ಮುಂಕೊಂಡು ಖಂಡಿಸಿ ಪಾರ್ಥನೆಸುತಿರ್ದ (ಭೀಷ್ಮ ಪರ್ವ, ೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕುಂತಿಯ ಮಾವನಾದ ಭೀಷ್ಮನು ಯಾವ ಬಿಲ್ಲನ್ನು ಹಿಡಿದು ಹೆದೆಯನ್ನು ಕೆನ್ನೆಗೆ ಸೆಳೆದು ಬಾಣವನ್ನು ಬಿಡುವ ಮೊದಲೇ ಅರ್ಜುನನು ಅದನ್ನು ಮುರಿಯುವನು. ಯಾವ ದಿವ್ಯಾಸ್ತ್ರಗಳನ್ನು ಭೀಷ್ಮನು ಪ್ರಯೋಗಿಸುವ ಮೊದಲೇ ಅರ್ಜುನನು ಅದನ್ನು ತುಂಡು ಮಾಡುತ್ತಿದ್ದನು.

ಅರ್ಥ:
ಚಾಪ: ಬಿಲ್ಲು; ತುಡುಕು: ಹೋರಾಡು, ಸೆಣಸು; ಕೆನ್ನೆ: ಗಲ್ಲ; ತೀವು: ಚೆಲ್ಲು, ಹರಡು; ತೆಗೆ: ಹೊರತರು; ಮುನ್ನ: ಮೊದಲು; ಎಸು: ಬಾಣ ಪ್ರಯೋಗ ಮಾದು; ಕಡಿ: ಸೀಳು; ಬಿಸುಡು: ಹೊರಹಾಕು; ಬಿಲ್ಲು: ಚಾಪ; ದಿವ್ಯಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಮಾವ: ಗಂಡನ ತಂದೆ; ತೊಡು: ಧರಿಸು; ಶರಾವಳಿ: ಬಾಣಗಳ ಗುಂಪು; ಮುಂಕೊಂಡು: ಮೊದಲೇ; ಖಂಡಿಸು: ಚೂರು ಮಾಡು;

ಪದವಿಂಗಡಣೆ:
ಆವ +ಚಾಪವ +ತುಡುಕಿ +ಕೆನ್ನೆಗೆ
ತೀವಿ +ತೆಗೆಯದ +ಮುನ್ನ +ಫಲುಗುಣನ್
ಓವದ್+ಎಸುವನು +ಕಡಿದು +ಬಿಸುಡುವನ್+ಇವರ +ಬಿಲ್ಲುಗಳ
ಆವ +ದಿವ್ಯಾಸ್ತ್ರವನು +ಕುಂತಿಯ
ಮಾವ +ತೊಡುವನು +ತೊಡದ +ಮುನ್ನ +ಶ
ರಾವಳಿಯ +ಮುಂಕೊಂಡು +ಖಂಡಿಸಿ+ ಪಾರ್ಥನ್+ಎಸುತಿರ್ದ

ಅಚ್ಚರಿ:
(೧) ಭೀಷ್ಮನನ್ನು ಕುಂತಿಯ ಮಾವ ಎಂದು ಕರೆದ ಪರಿ

ಪದ್ಯ ೫೨: ದುರ್ಯೋಧನನು ಹೇಗೆ ಯುದ್ಧವನ್ನು ಮಾಡಿದನು?

ಮುತ್ತಿದರಿಬಲ ಜಾಲವನು ನಭ
ಕೊತ್ತಿ ದಿವ್ಯಾಸ್ತ್ರದಲಿ ಸೀಳಿದ
ನೆತ್ತ ಮುರಿದೋಡಿದರೆ ರಥವನು ಹರಿಸಿ ಬೇಗದಲಿ
ಒತ್ತಿ ಹರಿತಹ ರಥತುರಂಗಮ
ಮುತ್ತಿದಿಭಸಂಘಾತವನು ನೃಪ
ನೊತ್ತಿ ಕಡಿದನು ಹಯವ ಗಜರಥವುಳಿದ ಕಾಲಾಳ (ಅರಣ್ಯ ಪರ್ವ, ೨೦ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೌರವನು ತನ್ನ ಬಲವನ್ನು ತೋರುತ್ತಾ, ಅವನ ಸುತ್ತಾ ಆವರಿಸಿದ್ದ ಶತ್ರು ಸೈನ್ಯವನ್ನು ತನ್ನ ದಿವ್ಯಾಸ್ತ್ರಗಳಿಂದ ಘಾತಿಸಿದನು. ತನ್ನ ರಥವನ್ನು ಶತ್ರುಸೈನ್ಯಗಳ ಮಧ್ಯೆ ವೇಗವಾಗಿ ಹರಿಸಿದನು. ತನ್ನು ಸುತ್ತಲೂ ಆವರಿಸುತ್ತಿದ್ದ ಕುದುರೆ, ಆನೆ, ರಥ, ಕಾಲಾಳುಗಳ ಸೈನ್ಯವನ್ನು ಕತ್ತರಿಸಿ ಹಾಕಿದನು.

ಅರ್ಥ:
ಮುತ್ತು: ಆವರಿಸು; ಅರಿ: ಶತ್ರು; ಬಲ: ಸೈನ್ಯ; ಜಾಲ: ಬಲೆ; ನಭ: ಆಗಸ; ಒತ್ತು: ಆಕ್ರಮಿಸು, ಮುತ್ತು; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ಸೀಳು: ಕತ್ತರಿಸು; ಮುರಿ: ಸೀಳು; ರಥ: ಬಂಡಿ; ಹರಿಸು: ಚಲಿಸು; ಬೇಗ: ವೇಗ; ಹರಿತ: ಚೂಪು; ತುರಂಗ: ಅಶ್ವ, ಕುದುರೆ; ರಥ: ಬಂಡಿ; ಇಭ: ಆನೆ; ಸಂಘಾತ: ಗುಂಪು, ಸಮೂಹ; ಕಡಿ: ಸೀಳು; ಹಯ: ಕುದುರೆ; ಗಜ; ಆನೆ; ಉಳಿದ: ಮಿಕ್ಕ; ಕಾಲಾಳು: ಸೈನ್ಯ;

ಪದವಿಂಗಡಣೆ:
ಮುತ್ತಿದ್+ಅರಿಬಲ+ ಜಾಲವನು +ನಭಕ್
ಒತ್ತಿ +ದಿವ್ಯಾಸ್ತ್ರದಲಿ +ಸೀಳಿದನ್
ಎತ್ತ +ಮುರಿದ್+ಓಡಿದರೆ+ ರಥವನು +ಹರಿಸಿ +ಬೇಗದಲಿ
ಒತ್ತಿ +ಹರಿತಹ +ರಥ+ತುರಂಗಮ
ಮುತ್ತಿದ್+ಇಭ+ಸಂಘಾತವನು +ನೃಪನ್
ಒತ್ತಿ +ಕಡಿದನು +ಹಯವ +ಗಜ+ರಥವ್+ಉಳಿದ +ಕಾಲಾಳ

ಅಚ್ಚರಿ:
(೧) ಇಭ, ಗಜ – ಸಮನಾರ್ಥಕ ಪದ
(೨) ಒತ್ತಿ – ೨,೪, ೬ ಸಾಲಿನ ಮೊದಲ ಪದ

ಪದ್ಯ ೨೯: ಭೀಮನು ಶಿಶುಪಾಲನ ಮಾತಿಗೆ ಹೇಗೆ ಉತ್ತರ ನೀಡಿದನು?

ಬಿಡು ಬಿಡಕಟಾ ಭೀಷ್ಮ ದರ್ಪದಿ
ಕಡು ಜರೆದ ಕಳವಳದ ಕುನ್ನಿಗೆ
ಕುಡಿಸುವೆನು ದಿವ್ಯಾಸ್ತ್ರವಿಶಿಖ ವಿಶೇಷದೌಷಧಿಯ
ತಡೆದು ತನ್ನನು ರಾಜಕಾರ್ಯವ
ಕೆಡಿಸಿದೆಯಲಾ ದಕ್ಷಯಜ್ಞದ
ಮೃಡನ ಮುರುಕವ ಕಾಬೆನೆನುತೊಡೆಮುರುಚಿದನು ಭೀಮ (ಸಭಾ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶಿಶುಪಾಲನ ಮಾತನ್ನು ಕೇಳಿ ಕುಪಿತಗೊಂಡ ಭೀಮನು, ನನ್ನನ್ನು ತಡೆಯಬೇಡಿ ಭೀಷ್ಮ, ದರ್ಪದಿಂದ ಶ್ರೀಕೃಷ್ಣನನ್ನು ನಿಂದಿಸಿದ ಈ ಶಿಶುಪಾಲ ನಾಯಿಗೆ ದಿವ್ಯಾಸ್ತ್ರಗಳ ಔಷಧಿಯನ್ನು ಕುಡಿಸುತ್ತೇನೆ, ನನ್ನನು ತಡೆದು ನೀವು ರಾಜ್ಯಕಾರ್ಯವನ್ನು ಕೆಡಿಸುತ್ತಿದ್ದೀರಿ, ದಕ್ಷಯಜ್ಞವನ್ನು ಮೀರಿಸುವ ರೀತಿ ಈ ಯಜ್ಞವನ್ನು ಹಾಳುಮಾಡುವೆ ಎಂದು ದರ್ಪದಿಂದ ಕೂಗುತ್ತಿರುವ ಶಿಶುಪಾಲನನನ್ನು ನಾನು ಒಮ್ಮೆ ನೋಡಿಕೊಳ್ಳುತ್ತೇನೆ ಎಂದು ಭೀಮನು ನಿಂತನು.

ಅರ್ಥ:
ಬಿಡು: ತೊರೆ; ಅಕಟ: ಅಯ್ಯೋ; ದರ್ಪ: ಅಹಂಕಾರ; ಕಡು: ಬಹಳ, ಹೆಚ್ಚು; ಜರೆ: ಬಯ್ಯು; ಕಳವಳ: ಗೊಂದಲ; ಕುನ್ನಿ: ನಾಯಿ; ಕುಡಿಸು: ಪಾನಮಾಡು; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ವಿಶೇಷ: ಅತಿಶಯ, ವೈಶಿಷ್ಟ್ಯ; ವಿಶಿಖ: ಬಾಣ, ಅಂಬು; ಔಷಧಿ: ಮದ್ದು; ತಡೆ: ನಿಲ್ಲಿಸು; ರಾಜಕಾರ್ಯ: ರಾಜ್ಯದ ಕೆಲಸ; ಕೆಡಿಸು: ಹಾಳುಮಾಡು; ಮೃಡ: ಶಿವ; ಮುರುಕ:ಬಿಂಕ, ಬಿನ್ನಾಣ, ಸೊಕ್ಕು; ಕಾಬ: ನೋಡುವ;ಒಡೆ: ಹೊರಬರು, ಸೀಳು; ಮುರುಚು: ಹಿಂತಿರುಗಿಸು;

ಪದವಿಂಗಡಣೆ:
ಬಿಡು +ಬಿಡ್+ಅಕಟಾ +ಭೀಷ್ಮ +ದರ್ಪದಿ
ಕಡು +ಜರೆದ +ಕಳವಳದ+ ಕುನ್ನಿಗೆ
ಕುಡಿಸುವೆನು+ ದಿವ್ಯಾಸ್ತ್ರ+ವಿಶಿಖ+ ವಿಶೇಷದ್+ಔಷಧಿಯ
ತಡೆದು+ ತನ್ನನು +ರಾಜಕಾರ್ಯವ
ಕೆಡಿಸಿದೆಯಲಾ+ ದಕ್ಷ+ಯಜ್ಞದ
ಮೃಡನ+ ಮುರುಕವ+ ಕಾಬೆನೆನುತ್+ ಒಡೆ+ಮುರುಚಿದನು ಭೀಮ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿಡು ಬಿಡಕಟಾ ಭೀಷ್ಮ
(೨) ಕ ಕಾರದ ಸಾಲು ಪದ – ಕಡು ಜರೆದ ಕಳವಳದ ಕುನ್ನಿಗೆ ಕುಡಿಸುವೆನು
(೩) ಶಿಶುಪಾಲನನ್ನು ಬಯ್ಯುವ ಪರಿ – ಕಳವಳದ ಕುನ್ನಿ

ಪದ್ಯ ೨೪: ಸರ್ಪಾಸ್ತ್ರದ ಶಕ್ತಿ ಹೇಗಿತ್ತು?

ಜನಪ ಕೇಳೈ ಬಳಿಕ ಭೀಮಾ
ರ್ಜುನ ನಕುಲ ಸಹದೇವ ಸಾತ್ಯಕಿ
ತನತನಗೆ ದಿವ್ಯಾಸ್ತ್ರನಿಕರದಲೆಚ್ಚರಹಿಶರವ
ಅನಿತು ಶರವನು ನುಂಗಿ ಮಗುಳೆ
ಚ್ಚನಿತನೊಳುಕೊಳುತಾಜ್ಯಧಾರೆಗೆ
ನನೆದ ಹುತವಹನಂತೆ ಹೆಚ್ಚಿತು ತೀವ್ರ ಫಣಿಬಾಣ (ಕರ್ಣ ಪರ್ವ, ೨೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಆ ಬಳಿಕ ಭೀಮಾರ್ಜುನ ನಕುಲ, ಸಹದೇವ, ಸಾತ್ಯಕಿಯರು ಸರ್ಪಾಸ್ತ್ರದ ಮೇಲೆ ದಿವ್ಯಾಸ್ತ್ರಗಳನ್ನು ಬಿಟ್ಟರು. ಆದರೆ ಸರ್ಪಾಸ್ತ್ರವು ತುಪ್ಪದ ಧಾರೆಯಿಂದ ಹೆಚ್ಚುವ ಬೆಂಕಿಯಂತೆ ಎಲ್ಲವನ್ನು ನುಂಗಿತು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಬಳಿಕ: ನಂತರ; ದಿವ್ಯ: ಶ್ರೇಷ್ಠ; ಅಸ್ತ್ರ: ಶಸ್ತ್ರ; ನಿಕರ: ಗುಂಪು; ಎಚ್ಚು: ಬಾಣಬಿಡು; ಅಹಿ: ಹಾವು; ಶರ: ಬಾಣ; ಅನಿತು: ಅಷ್ಟು; ಶರ: ಬಾಣ; ನುಂಗು: ಕಬಳಿಸು, ಸ್ವಾಹಮಾಡು; ಮಗುಳು: ಪುನಃ, ಮತ್ತೆ; ಆಜ್ಯ; ತುಪ್ಪ; ಧಾರೆ: ಪ್ರವಾಹ, ಮೇಲಿನಿಂದ ಹರಿದುಬರುವ ನೀರು ಎಣ್ಣೆ; ನನೆ:ತೋಯು, ಒದ್ದೆಯಾಗು; ಹುತವಹ: ಅಗ್ನಿ; ಹೆಚ್ಚು: ಅಧಿಕ; ತೀವ್ರ: ತ್ವರೆ, ರಭಸ; ಫಣಿ: ಹಾವು; ಬಾಣ; ಶರ;

ಪದವಿಂಗಡಣೆ:
ಜನಪ +ಕೇಳೈ +ಬಳಿಕ +ಭೀಮಾ
ರ್ಜುನ +ನಕುಲ +ಸಹದೇವ +ಸಾತ್ಯಕಿ
ತನತನಗೆ +ದಿವ್ಯಾಸ್ತ್ರ+ನಿಕರದಲ್+ಎಚ್ಚರ್+ಅಹಿ+ಶರವ
ಅನಿತು +ಶರವನು +ನುಂಗಿ +ಮಗುಳ್
ಎಚ್ಚನ್+ಇತನೊಳುಕೊಳುತ್+ಆಜ್ಯ+ಧಾರೆಗೆ
ನನೆದ +ಹುತವಹನಂತೆ +ಹೆಚ್ಚಿತು +ತೀವ್ರ +ಫಣಿಬಾಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಜ್ಯಧಾರೆಗೆ ನನೆದ ಹುತವಹನಂತೆ
(೨) ಸಮನಾರ್ಥಕ ಪದ – ಶರ, ಬಾಣ
(೩) ಅಹಿ, ಆಜ್ಯ, ಅನಿತು – ಪದಗಳ ಬಲಕೆ

ಪದ್ಯ ೪೬: ಕರ್ಣನು ಬ್ರಹ್ಮಾಸ್ತ್ರಕ್ಕೆ ಪ್ರತಿಯಾಗಿ ಯಾವ ಅಸ್ತ್ರವನ್ನು ಬಿಟ್ಟನು?

ಶಿವಶಿವಾ ಬ್ರಹ್ಮಾಸ್ತ್ರವಿದಲಾ
ಭುವನಜನ ಸಂಹಾರಶರ ಸಂ
ಭವಿಸಿತೋ ಹಾ ಎನುತ ಹರೆದುದು ಮೇಲೆ ದಿವಿಜಗಣ
ತವಕದಲಿ ತತ್ಪ್ರತಿಮಹಾಸ್ತ್ರವ
ಜವಳಿವೆರಳಿಂದುಗಿದು ಬಿಡೆ ತಿವಿ
ತಿವಿದು ತಮ್ಮೊಳಗಡಗಿದವು ದಿವ್ಯಾಸ್ತ್ರವಭ್ರದಲಿ (ಕರ್ಣ ಪರ್ವ, ೨೩ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ಬ್ರಹ್ಮಾಸ್ತ್ರವನ್ನು ಹೂಡಲು, ದೇವತೆಗಳೆಲ್ಲಾ ಶಿವ ಶಿವಾ ಇದು ಲೋಕವನ್ನೇ ಸಂಹರಿಸಬಲ್ಲ ಬ್ರಹ್ಮಾಸ್ತ್ರ, ಇದರ ಪ್ರಯೋಗವಾಯಿತೇ ಎಂದು ಆಚೆ ಈಚೆಗೆ ಹೋದರು. ಕರ್ಣನು ಅದಕ್ಕೆ ಪ್ರತಿಯಾಗಿ ಬ್ರಹ್ಮಾಸ್ತ್ರವನ್ನೇ ಎರಡು ಬೆರಳಿನಿಂದ ತೆಗೆದು ಬಿಡಲು, ಆ ದಿವ್ಯಾಸ್ತ್ರಗಳು ಒಂದಕ್ಕೊಂದು ಹೋರಾಡಿ ಆಗಸದಲ್ಲಿ ಅಡಗಿದವು.

ಅರ್ಥ:
ಶಿವಶಿವಾ: ಭಗವಂತ; ಭುವನ: ಜಗತ್ತು; ಜನ: ಮನುಷ್ಯ; ಸಂಹಾರ: ನಾಶ, ಕೊನೆ; ಶರ: ಬಾಣ; ಸಂಭವಿಸು: ಉಂಟಾಗು, ಒದಗಿಬರು; ಹರೆ: ವ್ಯಾಪಿಸು, ವಿಸ್ತರಿಸು, ಚೆದುರು; ದಿವಿಜ: ದೇವತೆ; ಗಣ: ಗುಂಪು; ತವಕ: ಬಯಕೆ, ಆತುರ; ಪ್ರತಿ: ಎದುರಾಗಿ; ಮಹಾ: ದೊಡ್ಡ, ಶ್ರೇಷ್ಠ; ಅಸ್ತ್ರ: ಆಯುಧ, ಶಸ್ತ್ರ; ಅವಳಿ: ಜೋಡಿ; ವೆರಳು: ಬೆರಳು; ಉಗಿ: ಹೊರಹಾಕು; ಬಿಡು: ಹಾರಿಸು; ತಿವಿ: ಚುಚ್ಚು; ಅಡಗು: ಮರೆಯಾಗು; ಅಭ್ರ: ಆಕಾಶ;

ಪದವಿಂಗಡಣೆ:
ಶಿವಶಿವಾ +ಬ್ರಹ್ಮಾಸ್ತ್ರವ್+ಇದಲ್+ಆ
ಭುವನಜನ +ಸಂಹಾರ+ಶರ +ಸಂ
ಭವಿಸಿತೋ +ಹಾ +ಎನುತ +ಹರೆದುದು +ಮೇಲೆ +ದಿವಿಜಗಣ
ತವಕದಲಿ+ ತತ್+ಪ್ರತಿ+ಮಹಾಸ್ತ್ರವ
ಜವಳಿ+ ವೆರಳಿಂದ್+ಉಗಿದು +ಬಿಡೆ +ತಿವಿ
ತಿವಿದು+ ತಮ್ಮೊಳಗ್+ಅಡಗಿದವು +ದಿವ್ಯಾಸ್ತ್ರವ್+ಅಭ್ರದಲಿ

ಅಚ್ಚರಿ:
(೧) ಬ್ರಹ್ಮಾಸ್ತ್ರದ ಬಗ್ಗೆ ಇರುವ ಭಯ – ಶಿವಶಿವಾ ಬ್ರಹ್ಮಾಸ್ತ್ರವಿದಲಾ ಭುವನಜನ ಸಂಹಾರಶರ ಸಂಭವಿಸಿತೋ ಹಾ ಎನುತ ಹರೆದುದು ಮೇಲೆ ದಿವಿಜಗಣ
(೨) ಬ್ರಹ್ಮಾಸ್ತ್ರ ಹೋರಾಡಿದ ಪರಿ – ತಿವಿತಿವಿದು ತಮ್ಮೊಳಗಡಗಿದವು ದಿವ್ಯಾಸ್ತ್ರವಭ್ರದಲಿ
(೩) ಬ್ರಹ್ಮಾಸ್ತ್ರ, ಮಹಾಸ್ತ್ರ, ದಿವ್ಯಾಸ್ತ್ರ – ಪದಗಳ ಬಳಕೆ

ಪದ್ಯ ೨೦: ಕರ್ಣನೇಕೆ ಬೇಸರಪಟ್ಟನು?

ಪೂತು ದೈವವೆ ಭೀಮಸೇನನ
ಘಾತಿಯಲಿ ಸೊಪ್ಪಾದೆನೈ ಸುಡ
ಲೇತಕೀ ಧನುವೇತಕೀ ದಿವ್ಯಾಸ್ತ್ರನಿಕರಗಳು
ಜಾತಿ ನಾನೆಂದೆನ್ನನಗ್ಗಿಸಿ
ಭೂತಳಾಧಿಪ ಸಾಕಿದನು ತಾ
ನೇತರಿಂದುಪಕಾರಿ ಎಂದನು ಸುಯ್ದು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ ತಮ್ಮಂದಿರನ್ನು ಕೊಂದ ಸುದ್ದಿಯನ್ನು ಕೇಳಿ ಅವಮಾನದಿಂದ ಕುದಿಯುತ್ತಾ, ಭಲೇ ವಿಧಿಯೇ ಭೀಮನ ಹೊಡೆತದಿಂದ ನಾನು ಬಲಹೀನನಾದೆ, ಈ ಬಿಲ್ಲು, ಈ ದಿವ್ಯಾಸ್ತ್ರಗಳೀದ್ದರೂ ಏನು ಫಲ? ಇವನ್ನು ಸುಡಬೇಕು, ಉತ್ತಮ ಜಾತಿಯವನೆಂದು ನನ್ನನ್ನು ಮೇಲೆತ್ತಿ ಸಾಕಿದ ಕೌರವನಿಗೆ ನಾನು ಮಾಡಿದ ಉಪಕಾರವಾದರೂ ಏನು? ಎಂದು ಕರ್ಣನು ನಿಟ್ಟುಸಿರು ಬಿಟ್ಟನು.

ಅರ್ಥ:
ಪೂತು: ಭಲೇ, ಭೇಷ್; ದೈವ: ಭಗವಂತ; ಘಾತ: ಹೊಡೆತ, ಪೆಟ್ಟು; ಸೊಪ್ಪು: ಕುಗ್ಗಿದ ಸ್ಥಿತಿ; ಸುಡು: ದಹಿಸು; ಧನು: ಧನಸ್ಸು; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧಗಳು; ನಿಕರ: ಗುಂಪು; ಜಾತಿ: ಕುಲ; ಅಗ್ಗ: ಶ್ರೇಷ್ಠ; ಭೂತಳಾಧಿಪ: ರಾಜ; ಸಾಕು: ಸಲಹು; ಉಪಕಾರ: ಸಹಾಯ; ಸುಯ್ದು: ನಿಟ್ಟುಸಿರು; ಕಲಿ: ಶೂರ;

ಪದವಿಂಗಡಣೆ:
ಪೂತು +ದೈವವೆ +ಭೀಮ+ಸೇನನ
ಘಾತಿಯಲಿ +ಸೊಪ್ಪಾದೆನೈ +ಸುಡಲ್
ಏತಕೀ+ ಧನುವ್+ಏತಕೀ +ದಿವ್ಯಾಸ್ತ್ರ+ನಿಕರಗಳು
ಜಾತಿ +ನಾನೆಂದ್+ಎನ್ನನ್+ಅಗ್ಗಿಸಿ
ಭೂತಳಾಧಿಪ+ ಸಾಕಿದನು+ ತಾನ್
ಏತರಿಂದ್+ಉಪಕಾರಿ +ಎಂದನು +ಸುಯ್ದು +ಕಲಿಕರ್ಣ

ಅಚ್ಚರಿ:
(೧) ಘಾತಿ, ಜಾತಿ – ಪ್ರಾಸ ಪದ
(೨) ಏತಕೀ – ೨ ಬಾರಿ ಬಳಕೆ
(೩) ಕೃತಜ್ಞತೆಯನ್ನು ತೋರುವ ಮಾತು – ಜಾತಿ ನಾನೆಂದೆನ್ನನಗ್ಗಿಸಿ ಭೂತಳಾಧಿಪ ಸಾಕಿದನು