ಪದ್ಯ ೪೨: ಕೃಷ್ಣನು ಭೀಮನಿಗೆ ಏನು ಮಾಡಲು ಹೇಳಿದನು?

ಇವರೊಳುಂಟೇ ಕೈದುವೊತ್ತವ
ರವರನರಸುವೆನೆನುತ ಬರಲಾ
ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು
ಅವನಿಗಿಳಿದೀಡಾಡಿ ಕಳೆ ಕೈ
ದುವನು ತಾ ಮೊದಲಾಗಿ ನಿಂದಂ
ದವನು ನೋಡೆನಲನಿಲಸುತ ನಸುನಗುತಲಿಂತೆಂದ (ದ್ರೋಣ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎದುರಿನಲ್ಲಿ ಎಲ್ಲರೂ ಶಸ್ತ್ರವನ್ನು ತ್ಯಜಿಸಿರುವುದನ್ನು ಕಂಡ ನಾರಾಯಣಾಸ್ತ್ರವು, ಶಸ್ತ್ರವನ್ನು ಹಿಡಿದವರನ್ನು ಹುಡುಕುತ್ತಾ ಬರುತ್ತಿತ್ತು. ಆಗ ಕೃಷ್ಣನು ಭೀಮನಿಗೆ ಕೋಪದಿಂದ, ತನ್ನ ಕೈಯಲ್ಲಿರುವ ಆಯುಧವನ್ನು ಭೂಮಿಗೆ ಎಸೆದು ನನ್ನನ್ನೇ ನೋಡೆಂದು ಹೇಳಲು ಭೀಮನು ನಗುತ್ತಾ ಹೀಗೆ ಉತ್ತರಿಸಿದನು.

ಅರ್ಥ:
ಕೈದು: ಶಸ್ತ್ರ; ಒತ್ತ: ಹಿಡಿದ; ಅಸರು: ಹುಡುಕು; ಬರಲು: ಆಗಮಿಸು; ಪವನಸುತ: ಭೀಮ; ಸುತ: ಮಗ; ಥಟ್ಟು: ಪಕ್ಕ, ಕಡೆ, ಗುಂಪು; ದನುಜರಿಪು: ಕೃಷ್ಣ; ಮುಳಿ: ಸಿಟ್ಟು, ಕೋಪ; ಅವನಿ: ಭೂಮಿ; ಈಡಾಡು: ಕಿತ್ತು, ಒಗೆ, ಚೆಲ್ಲು; ಕಳೆ: ಬೀಡು, ತೊರೆ; ಕೈದು: ಆಯುಧ; ಮೊದಲು: ಮುಂಚೆ; ನಿಂದು: ನಿಲ್ಲು; ನೋಡು: ವೀಕ್ಷಿಸು; ಅನಿಲಸುತ: ಭೀಮ; ನಸುನಗು: ಹಸನ್ಮುಖ;

ಪದವಿಂಗಡಣೆ:
ಇವರೊಳ್+ಉಂಟೇ +ಕೈದು+ ವೊತ್ತವರ್
ಅವರನ್+ಅರಸುವೆನ್+ಎನುತ +ಬರಲ್+ಆ
ಪವನಸುತನನು+ ಥಟ್ಟಿಸಿದನಾ +ದನುಜರಿಪು+ ಮುಳಿದು
ಅವನಿಗ್+ಇಳಿದ್+ಈಡಾಡಿ +ಕಳೆ +ಕೈ
ದುವನು +ತಾ +ಮೊದಲಾಗಿ +ನಿಂದಂದ್
ಅವನು+ ನೋಡೆನಲ್+ಅನಿಲಸುತ +ನಸುನಗುತಲ್+ಇಂತೆಂದ

ಅಚ್ಚರಿ:
(೧) ಪವನಸುತ, ಅನಿಲಸುತ – ಭೀಮನನ್ನು ಕರೆದ ಪರಿ

ಪದ್ಯ ೩೯: ಕೃಷ್ಣನು ದ್ರೋಣನನ್ನು ಸೋಲಿಸಲು ಯಾವ ಉಪಾಯವನ್ನು ಹೇಳಿದನು?

ಧುರದ ಜಯವಹುದೊಂದು ಪರಿಯಲಿ
ನಿರುತವಲ್ಲದ ನುಡಿಯ ನುಡಿದರೆ
ಪರಿಹರಿಸಬಹುದೆಂದನಸುರಾರಾತಿ ನಸುನಗುತ
ನರನದೆಂತೆನೆ ಗುರುತನುಜ ಸಂ
ಗರದೊಳೊರಗಿದನೆಂದು ದ್ರೋಣಂ
ಗರುಹು ಫಲುಗುಣ ಮನದೊಳಳುಕದೆ ಬೇಗ ಮಾಡೆಂದ (ದ್ರೋಣ ಪರ್ವ, ೧೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಈ ಯುದ್ಧದಲ್ಲಿ ಗೆಲ್ಲಲು ಒಂದೇ ಒಂದು ಉಪಾಯವಿದೆ, ಅದೇನೆಂದರೆ ಸುಳ್ಳನ್ನು ಹೇಳುವುದು ಎಂದು ಕೃಷ್ಣನು ತಿಳಿಸಲು, ಅರ್ಜುನನು ಅದಾದರು ಹೇಗೆ ಎಂದು ಹೇಳಲು, ಕೃಷ್ಣನು ಉಪಾಯವನ್ನು ಹೇಳುತ್ತಾ, ದ್ರೋಣನಿಗೆ ಅಶ್ವತ್ಥಾಮನು ಸತ್ತನೆಂದು ಬೇಗ ತಿಳಿಸುವುದು. ಇದನ್ನು ತಿಳಿಸಲು ಸ್ವಲ್ಪವೂ ಅಳುಕಬೇಡ ಎಂದು ಕೃಷ್ಣನು ಹೇಳಿದನು.

ಅರ್ಥ:
ಧುರ: ಯುದ್ಧ, ಕಾಳಗ; ಜಯ: ಗೆಲುವು; ಪರಿ: ರೀತಿ; ನಿರುತ: ದಿಟ, ಸತ್ಯ; ನುಡಿ: ಮಾತು; ಪರಿಹರಿಸು: ನಿವಾರಿಸು; ಅಸುರ: ದಾನವ; ಅರಾತಿ: ವೈರಿ; ನಸುನಗು: ಹಸನ್ಮುಖ; ನರ: ಅರ್ಜುನ; ತನುಜ: ಮಗ; ಸಂಗರ: ಯುದ್ಧ; ಒರಗು: ಸಾಯು, ಮರಣ ಹೊಂದು; ಅರುಹು: ತಿಳಿಸು, ಹೇಳು; ಅಳುಕು: ದೆಹರು;

ಪದವಿಂಗಡಣೆ:
ಧುರದ +ಜಯವಹುದ್+ಒಂದು +ಪರಿಯಲಿ
ನಿರುತವಲ್ಲದ+ ನುಡಿಯ +ನುಡಿದರೆ
ಪರಿಹರಿಸಬಹುದೆಂದನ್+ಅಸುರ+ಅರಾತಿ +ನಸುನಗುತ
ನರನ್+ಅದೆಂತೆನೆ+ ಗುರುತನುಜ +ಸಂ
ಗರದೊಳ್+ಒರಗಿದನೆಂದು+ ದ್ರೋಣಂಗ್
ಅರುಹು +ಫಲುಗುಣ +ಮನದೊಳ್+ಅಳುಕದೆ +ಬೇಗ +ಮಾಡೆಂದ

ಅಚ್ಚರಿ:
(೧) ಕೃಷ್ಣನ ಉಪಾಯ – ಗುರುತನುಜ ಸಂಗರದೊಳೊರಗಿದನೆಂದು ದ್ರೋಣಂಗರುಹು
(೨) ಒಂದೇ ಪದದ ರಚನೆ – ಪರಿಹರಿಸಬಹುದೆಂದನಸುರಾರಾತಿ
(೩) ಕೃಷ್ಣನನ್ನು ಅಸುರಾರಾತಿ ಎಂದು ಕರೆದಿರುವುದು

ಪದ್ಯ ೩೬: ಧರ್ಮಜನು ಅಭಿಮನ್ಯುವಿಗೆ ಏನು ಹೇಳಿದನು?

ಹಸುಳೆಯದಟಿನ ನುಡಿಯ ಕೇಳಿದು
ನಸುನಗುತ ಧರ್ಮಜನು ಘನ ಪೌ
ರುಷವು ನಿನಗುಂಟೆಂದು ಕಂದನ ತೆಗೆದು ಬಿಗಿಯಪ್ಪಿ
ಶಿಶುವು ನೀನೆಲೆ ಮಗನೆ ಕಾದುವ
ರಸಮಬಲರು ಕಣಾ ಮಹಾರಥ
ರೆಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ (ದ್ರೋಣ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಮಗನ ಪೌರುಷದ ಮಾತುಗಳನ್ನು ಕೇಳಿ, ಧರ್ಮಜನು ಅವನನ್ನು ಬಿಗಿದಪ್ಪಿಕೊಂಡು ನಿನಗೆ ಮಹಾಪೌರುಷವಿದೆ, ಆದರೆ ನೀನಿನ್ನೂ ಬಾಲಕ. ನಿನ್ನೊಡನೆ ಯುದ್ಧಮಾಡುವವರು ಅಸಮಾನ ಮಹಾರಥರು. ಅವರ ಶಸ್ತ್ರಾಸ್ತ್ರ ಪ್ರಯೋಗಗಳನ್ನು ಎದುರಿಸಿ ನೀನು ಸಹಿಸುವುದಾದರೂ ಹೇಗೆ ಎಂದು ಕೇಳಿದನು.

ಅರ್ಥ:
ಹಸುಳೆ: ಚಿಕ್ಕಮಗು, ಶಿಶು; ಅದಟು: ಪರಾಕ್ರಮ, ಶೌರ್ಯ; ನುಡಿ: ಮಾತು; ಕೇಳು: ಆಲಿಸು; ನಸುನಗುತ: ಹರ್ಷ; ಘನ: ಶ್ರೇಷ್ಠ; ಪೌರುಷ: ಪರಾಕ್ರಮ; ಕಂದ: ಮಗ; ತೆಗೆ: ಹೊರತರು; ಅಪ್ಪು: ಆಲಂಗಿಸು; ಶಿಶು: ಚಿಕ್ಕಮಗು; ಮಗ: ಪುತ್ರ, ಕುಮಾರ; ಕಾದು: ಹೋರಾಡು; ಅಸಮಬಲ: ಪರಾಕ್ರಮ; ಮಹಾರಥ: ಪರಾಕ್ರಮಿ; ಎಸುಗೆ: ಬಾಣದ ಹೊಡೆತ; ಸೈರಿಸು: ತಾಳು, ಸಹಿಸು; ಹೇಳು: ತಿಳಿಸು;

ಪದವಿಂಗಡಣೆ:
ಹಸುಳೆ+ಅದಟಿನ +ನುಡಿಯ +ಕೇಳಿದು
ನಸುನಗುತ +ಧರ್ಮಜನು +ಘನ +ಪೌ
ರುಷವು +ನಿನಗುಂಟೆಂದು +ಕಂದನ +ತೆಗೆದು +ಬಿಗಿಯಪ್ಪಿ
ಶಿಶುವು +ನೀನೆಲೆ +ಮಗನೆ +ಕಾದುವರ್
ಅಸಮಬಲರು +ಕಣಾ +ಮಹಾರಥರ್
ಎಸುಗೆಯನು +ನೀನೆಂತು +ಸೈರಿಸಲಾಪೆ +ಹೇಳೆಂದ

ಅಚ್ಚರಿ:
(೧) ಪೌರುಷ, ಮಹಾರಥ, ಅಸಮಬಲ – ಸಾಮ್ಯಾರ್ಥ ಪದಗಳು

ಪದ್ಯ ೩೪: ದ್ರೋಣರು ಎಲ್ಲಿಯವರೆಗೆ ಹೋರಾಡುವರು?

ಆದರೆಮಗಿನ್ನೇನು ಗತಿ ರಣ
ವಾದಸಿದ್ಧಿಯದೆಂತು ಜಯಸಂ
ಪಾದಕರು ನಮಗಾರೆನಲು ಗುರು ಕೇಳಿ ನಸುನಗುತ
ಕಾದುವಾ ಸಮಯದೊಳಗಪ್ರಿಯ
ವಾದ ನುಡಿಗಳ ಕೇಳಿದಾಕ್ಷಣ
ಮೇದಿನಿಯೊಳಾವಿರೆವು ಚಿಂತಿಸಬೇಡ ಹೋಗೆಂದ (ಭೀಷ್ಮ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಧರ್ಮಜನು ದ್ರೋಣರ ಮಾತನ್ನು ಕೇಳಿ, ಆಚಾರ್ಯರೇ ನಮಗೇನು ಗತಿ, ನಮಗೆ ಜಯವನ್ನು ಕೊಡುವವರಾರು ಎಂದು ಕೇಳಲು, ದ್ರೋಣನು ಚಿಂತಿಸಬೇಡ, ಯುದ್ಧಕಾಲದಲ್ಲಿ ಅಪ್ರಿಯವಾದ ವಾರ್ತೆಯನ್ನು ಕೇಳಿದೊಡನೆಯೇ ನಾವು ಬದುಕಿ ಉಳಿಯುವುದಿಲ್ಲ ಎಂದು ನುಡಿದರು.

ಅರ್ಥ:
ಗತಿ: ಅವಸ್ಥೆ; ರಣ: ಯುದ್ಧ; ಜಯ: ಗೆಲುವು; ಸಂಪಾದಕ: ಕೊಡುವವ; ಗುರು: ಆಚಾರ್ಯ; ಕೇಳು: ಆಲಿಸು; ನಸುನಗು: ಮಂದಸ್ಮಿತ; ಕಾದು: ಯುದ್ಧಮಾಡು; ಸಮಯ: ಕಾಲ; ಅಪ್ರಿಯ: ಹಿತವಲ್ಲದ; ನುಡಿ: ಮಾತು; ಕ್ಷಣ: ಸಮಯ; ಮೇದಿನಿ: ಭೂಮಿ; ಚಿಂತೆ: ಯೋಚನೆ; ಹೋಗು: ತೆರಳು;

ಪದವಿಂಗಡಣೆ:
ಆದರ್+ಎಮಗಿನ್ನೇನು +ಗತಿ +ರಣ
ವಾದ+ಸಿದ್ಧಿಯದೆಂತು +ಜಯ+ಸಂ
ಪಾದಕರು +ನಮಗಾರ್+ಎನಲು +ಗುರು +ಕೇಳಿ +ನಸುನಗುತ
ಕಾದುವಾ +ಸಮಯದೊಳಗ್+ಅಪ್ರಿಯ
ವಾದ +ನುಡಿಗಳ+ ಕೇಳಿದ್+ಆ+ಕ್ಷಣ
ಮೇದಿನಿಯೊಳ್+ಆವ್+ಇರೆವು +ಚಿಂತಿಸಬೇಡ+ ಹೋಗೆಂದ

ಅಚ್ಚರಿ:
(೧) ದ್ರೋಣರ ಸುಳಿವು – ಕಾದುವಾ ಸಮಯದೊಳಗಪ್ರಿಯವಾದ ನುಡಿಗಳ ಕೇಳಿದಾಕ್ಷಣ ಮೇದಿನಿಯೊಳಾವಿರೆವು

ಪದ್ಯ ೩೧: ದ್ರೌಪದಿಯು ಯಾವ ಕೆಲಸವನ್ನು ಮಾಡುವೆನೆಂದು ಹೇಳಿದಳು?

ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವೆ
ಸೂನ ಮುಡಿಸುವೆ ವರಕಟಾಕ್ಷಕೆ ಕಾಡಿಯನಿಡುವೆ
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿದಳಂದು ವಿನಯದಲಿ (ವಿರಾಟ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ವಿರಾಟ ರಾಣಿಯು ಏನು ಮಾಡಲು ಬಲ್ಲೆ ಎಂದು ಕೇಳಲು, ದ್ರೌಪದಿಯು ಮಹಾರಾಣಿಯವರ ಕೇಶ ವಿನ್ಯಾಸ ಮಾಡಬಲ್ಲೆ, ಅವರ ಮುಡಿಗೆ ಹೂವನ್ನು ಮುಡಿಸಬಲ್ಲೆ, ಅವರ ಕಣ್ಣಿಗೆ ಕಾಡಿಗೆಯನ್ನು ಇಡಬಲ್ಲೆ, ಯಾವ ಕೆಲಸವನ್ನು ಹೇಳಿದರೂ ನಾನು ಪ್ರೀತಿಯಿಂದ ಮಾಡಬಲ್ಲೆ ಎಂದು ಹೇಳಲು, ಸುದೇಷ್ಣೆಯು ದ್ರೌಪದಿಯ ಮಾತಿಗೆ ಮೆಚ್ಚಿದಳು.

ಅರ್ಥ:
ಮಾಡು: ನಿರ್ವಹಿಸು; ಬಲ್ಲೆ: ತಿಳಿ; ಮಾನಿನಿ: ಹೆಣ್ಣು; ಸಿರಿಮುಡಿ: ಶ್ರೇಷ್ಠವಾದ ಶಿರ; ಕಟ್ಟು:ಬಂಧಿಸು; ಸೂನ: ಪುಷ್ಪ, ಹೂವು; ಮುಡಿಸು: ತಲೆಗೆ ಅಲಂಕರಿಸು; ವರ: ಶ್ರೇಷ್ಠ; ಕಟಾಕ್ಷ: ಓರೆನೋಟ, ದೃಷ್ಟಿ; ಕಾಡಿಗೆ: ಕಣ್ಣಿಗೆ ಹಚ್ಚಿಕೊಳ್ಳುವ ಕಪ್ಪು, ಅಂಜನ; ಅನುರಾಗ: ಪ್ರೀತಿ; ನಸುನಗು: ಸಂತಸ; ನುಡಿಸು: ಮಾತನಾಡಿಸು; ವಿನಯ: ಸೌಜನ್ಯ;

ಪದವಿಂಗಡಣೆ:
ಏನ +ಮಾಡಲು +ಬಲ್ಲೆ+ಎಂದರೆ
ಮಾನಿನಿಯ +ಸಿರಿಮುಡಿಯ +ಕಟ್ಟುವೆ
ಸೂನ +ಮುಡಿಸುವೆ +ವರ+ಕಟಾಕ್ಷಕೆ+ ಕಾಡಿಯನಿಡುವೆ
ಏನ+ ಹೇಳಿದ +ಮಾಡಬಲ್ಲೆನು
ಸಾನುರಾಗದೊಳ್+ಎಂದೆನಲು +ವರ
ಮಾನಿನಿಯ +ನಸುನಗುತ+ ನುಡಿಸಿದಳಂದು+ ವಿನಯದಲಿ

ಅಚ್ಚರಿ:
(೧) ಮಾನಿನಿ – ೨, ೬ ಸಾಲಿನ ಮೊದಲ ಪದ

ಪದ್ಯ ೧೫: ಕರ್ಣನು ಮನಸ್ಸಿನಲ್ಲಿ ನಸುನಗಲು ಕಾರಣವೇನು?

ತ್ಯಾಗಿ ಜಗದೊಳಗೆಂಬ ಕೀರ್ತಿಯ
ಲೋಗರಿಂದವೆ ಕೇಳ್ದು ಬಂದೆನು
ಮೇಗಾತಿಶಯ ಪದವನೊಲಿವಡೆ ಮನದ ಬಯಕೆಗಳ
ಈಗಳೀವುದು ನಮ್ಮಭೀಷ್ಟ
ಶ್ರೀಗೆ ಮಂಗಳವೆಂದು ಹರಸಿದ
ಡಾಗಳರಿದಾ ಕರ್ಣ ನಸುನಗುತಿರ್ದ ಮನದೊಳಗೆ (ಕರ್ಣ ಪರ್ವ, ೨೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಕಪಟವೇಷದ ಬ್ರಾಹ್ಮಣನ ರೂಪದಲ್ಲಿ ಕರ್ಣನ ಬಳಿ ಬಂದು, ನೀನು ಮಹಾದಾನಿಯೆಂಬ ಕೀರ್ತಿ ಜನಜನಿತವಾಗಿದೆ. ಅದನ್ನು ಕೇಳಿ ನಿನ್ನ ಬಳಿಗೆ ಬಂದಿದ್ದೇನೆ, ಅತಿಶಯವಾದ ಸದ್ಗತಿಯನ್ನು ನೀನು ಬಯಸುವುದಾದರೆ, ನನ್ನ ಮನಸ್ಸಿನ ಬಯಕೆಯನ್ನು ಸಲ್ಲಿಸು ನಿನಗೆ ಮಂಗಳವಾಗುತ್ತದೆ ಎಂದು ಆಶೀರ್ವದಿಸಲು, ಕೃಷ್ಣನ ಆ ಕಪತವೇಷವನ್ನು ಅರಿತ ಕರ್ಣನು ಮನದೊಳಗೆ ನಸುನಕ್ಕನು.

ಅರ್ಥ:
ತ್ಯಾಗಿ: ದಾನಿ; ಜಗ: ಪ್ರಪಂಚ; ಕೀರ್ತಿ: ಖ್ಯಾತಿ, ಯಶಸ್ಸು; ಲೋಗ: ಜನರು; ಕೇಳು: ಆಲಿಸು; ಬಂದೆ: ಆಗಮಿಸು; ಅತಿಶಯ: ಹೆಚ್ಚು; ಪದ: ಪದವಿ; ಒಲಿ: ಅಪೇಕ್ಷಿಸು; ಮನ: ಮನಸ್ಸು; ಬಯಕೆ: ಆಸೆ; ಈವುದು: ನೀಡುವುದು; ಅಭೀಷ್ಟ: ಬಯಕೆ; ಮಂಗಳ: ಶುಭ; ಹರಸು: ಆಶೀರ್ವದಿಸು; ಅರಿ: ತಿಳಿ; ನಸುನಗು: ಮಂದಸ್ಮಿತ; ಮನ: ಮನಸ್ಸು;

ಪದವಿಂಗಡಣೆ:
ತ್ಯಾಗಿ +ಜಗದೊಳಗೆಂಬ +ಕೀರ್ತಿಯ
ಲೋಗರಿಂದವೆ +ಕೇಳ್ದು +ಬಂದೆನು
ಮೇಗಾತಿಶಯ+ ಪದವನ್+ಒಲಿವಡೆ+ ಮನದ +ಬಯಕೆಗಳ
ಈಗಳ್+ಈವುದು +ನಮ್ಮ್+ಅಭೀಷ್ಟ
ಶ್ರೀಗೆ +ಮಂಗಳವೆಂದು +ಹರಸಿದಡ್
ಆಗಳ್+ಅರಿದ್+ಆ+ ಕರ್ಣ+ ನಸುನಗುತಿರ್ದ+ ಮನದೊಳಗೆ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಬಗೆ – ತ್ಯಾಗಿ ಜಗದೊಳಗೆಂಬ ಕೀರ್ತಿಯ ಲೋಗರಿಂದವೆ ಕೇಳ್ದು ಬಂದೆನು

ಪದ್ಯ ೩೧: ಕೃಷ್ಣನು ಅರ್ಜುನನಿಗೆ ಕರ್ಣನಾರೆಂದು ಉತ್ತರಿಸಿದ?

ಅರಸ ಕೇಳೈ ಬಳಿಕ ಪಾರ್ಥನ
ಕರುಣರಸದಾಳಾಪ ವಾಗ್ವಿ
ಸ್ತರಕೆ ಮನದಲಿ ಮರುಗಿದನು ಮುರವೈರಿ ನಸುನಗುತ
ಕೆರಳಿದನು ಮಾತಿನಲಿ ಸುಡು ಬಾ
ಹಿರನಲಾ ನೀ ನಿನ್ನ ವಂಶಕೆ
ಸರಿಯೆ ಸೂತನ ಮಗನಿದೇನೆಂದಸುರರಿಪು ಜರೆದ (ಕರ್ಣ ಪರ್ವ, ೨೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಕಥೆಯ ವಿವರಣೆಯನ್ನು ಮುಂದುವರೆಸುತ್ತಾ, ರಾಜ ಕೇಳು ಅರ್ಜುನನ ವಿಸ್ತಾರವಾದ ಪ್ರಶ್ನೆಗಳನ್ನು ಆಲಿಸಿದ ಶ್ರೀಕೃಷ್ಣನು ಅರ್ಜುನನ ಸ್ಥಿತಿಗೆ ಮನದಲ್ಲಿಯೇ ಕನಿಕರಿಸಿದನು, ಆದರೆ ಬಾಹಿರದಲ್ಲಿ ನಸುನಕ್ಕು ಕೋಪಗೊಂಡವನಂತೆ ಅರ್ಜುನ ಇವನು ನಿನ್ನ ವಂಶಕ್ಕೂ ಕ್ಷತ್ರಿಯ ಕುಲಕ್ಕೂ ಹೊರಗಾದವನು, ಈ ಸೂತಪುತ್ರನು ಚಂದ್ರವಂಶದಲ್ಲಿ ಜನಿಸಿದ ನಿನಗೆ ಸರಿಸಮಾನನೇ ಎಂದು ಜರೆದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ಕರುಣರಸ: ದಯೆಯ ಭಾವನೆ; ಆಳಾಪ: ಅಳಲು; ವಾಗ್: ಮಾತು; ವಿಸ್ತರ: ವಿಶಾಲ; ಮನ: ಮನಸ್ಸು; ಮರುಗು: ಕನಿಕರಿಸು; ಮುರವೈರಿ: ಕೃಷ್ಣ; ನಸುನಗು: ಮಂದಸ್ಮಿತ; ಕೆರಳು: ಕೋಪಗೊಳ್ಳು; ಮಾತು: ವಾಣಿ; ಸುಡು: ನಾಶಮಾಡು; ಬಾಹಿರ: ಹೊರಗಿನವ; ವಂಶ: ಕುಲ; ಸರಿ: ಸಮಾನ; ಸೂತ: ರಥವನ್ನು ಓಡಿಸುವವ; ಮಗ: ಪುತ್ರ; ಅಸುರರಿಪು: ದಾನವರ ವೈರಿ (ಕೃಷ್ಣ); ಜರೆ: ಬಯ್ಯು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಪಾರ್ಥನ
ಕರುಣರಸದ್+ಆಳಾಪ +ವಾಗ್ವಿ
ಸ್ತರಕೆ+ ಮನದಲಿ +ಮರುಗಿದನು+ ಮುರವೈರಿ+ ನಸುನಗುತ
ಕೆರಳಿದನು +ಮಾತಿನಲಿ +ಸುಡು +ಬಾ
ಹಿರನಲಾ +ನೀ +ನಿನ್ನ+ ವಂಶಕೆ
ಸರಿಯೆ+ ಸೂತನ+ ಮಗನ್+ಇದೇನೆಂದ್+ಅಸುರರಿಪು+ ಜರೆದ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮನದಲಿ ಮರುಗಿದನು ಮುರವೈರಿ
(೨) ಕೃಷ್ಣನ ಭಾವನೆಯ ಚಿತ್ರಣ – ನದಲಿ ಮರುಗಿದನು ಮುರವೈರಿ ನಸುನಗುತ
ಕೆರಳಿದನು ಮಾತಿನಲಿ

ಪದ್ಯ ೧೭: ಕರ್ಣನು ಬಿಲ್ಲನ್ನು ರಥದಲ್ಲೇಕೆ ಇಟ್ಟನು?

ಇಳುಹಿದನು ರಥದೊಳಗೆ ಚಾಪವ
ನಳವಡಿಸಿದನು ಸೆರಗನಲ್ಲಿಂ
ದಿಳಿದು ಗಾಲಿಯನಲುಗಿ ಪಾರ್ಥನ ನೋಡಿ ನಸುನಗುತ
ಎಲೆ ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ ನಿನಗಾ
ನಳವಿಗೊಡುವೆನು ತನ್ನ ಪರಿಯನು ಬಳಿಕ ನೋಡೆಂದ (ಕರ್ಣ ಪರ್ವ, ೨೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಥದ ಚಕ್ರವು ಭೂಮಿಯಲ್ಲಿ ಸಿಕ್ಕುಹಾಕಿಕೊಂಡಿರಲು, ಅದನ್ನು ಸರಿಪಡಿಸಲು ಕರ್ಣನು ರಥದಿಂದ ಇಳಿದನು, ಬಿಲ್ಲನ್ನು ರಥದೊಳಗೆ ಬಿಟ್ಟು ತನ್ನ ಉತ್ತರೀಯವನ್ನು ಕಟ್ಟಿಕೊಂಡನು. ರಥದಿಂದ ಇಳಿದು ಚಕ್ರಗಳನ್ನು ಅಲುಗಿಸಿ, ಅರ್ಜುನನ ಕಡೆ ನೋಡಿ ಮಂದಸ್ಮಿತದಿಂದ, ಎಲೈ ಅರ್ಜುನ ಇನ್ನರ್ಧಗಳಿಗೆ ತಾಳು, ಈ ರಥವನ್ನು ಮೇಲಕ್ಕೆತ್ತಿ ನಿನ್ನೊಡನೆ ಮತ್ತೆ ಯುದ್ಧಮಾಡುತ್ತೇನೆ, ಆಮೇಲೆ ನನ್ನ ಸತ್ವವನ್ನು ನೋಡು ಎಂದು ಕರ್ಣನು ಹೇಳಿದನು.

ಅರ್ಥ:
ಇಳುಹು: ಇಳಿದು; ರಥ: ಬಂಡಿ; ಚಾಪ: ಬಿಲ್ಲು; ಅಳವಡಿಸು: ಸರಿಮಾಡಿಕೋ; ಸೆರಗು:ವಸ್ತ್ರದ ಕೊನೆ ಭಾಗ, ಅಂಚು, ಉತ್ತರೀಯ; ಗಾಲಿ: ಚಕ್ರ; ಅಲುಗು: ಅಲ್ಲಾಡಿಸು; ನೋಡಿ: ವೀಕ್ಷಿಸಿ; ನಸುನಗುತ: ಮಂದಹಾಸ; ಸೈರಿಸು: ಸಾವಧಾನದಿಂದಿರು; ಅರೆಗಳಿಗೆ: ಸ್ವಲ್ಪ ಹೊತ್ತು; ಎತ್ತು: ಮೇಲಕ್ಕೆ ತರು; ಅಳವಿ: ಶಕ್ತಿ, ಯುದ್ಧ; ಪರಿ: ರೀತಿ; ಬಳಿಕ: ನಂತರ; ನೋಡು: ವೀಕ್ಷಿಸು;

ಪದವಿಂಗಡಣೆ:
ಇಳುಹಿದನು +ರಥದೊಳಗೆ +ಚಾಪವನ್
ಅಳವಡಿಸಿದನು +ಸೆರಗನ್+ಅಲ್ಲಿಂದ್
ಇಳಿದು +ಗಾಲಿಯನ್+ಅಲುಗಿ +ಪಾರ್ಥನ +ನೋಡಿ +ನಸುನಗುತ
ಎಲೆ+ ಧನಂಜಯ+ ಸೈರಿಸುವುದ್+ಅರೆ
ಗಳಿಗೆಯನು +ರಥವೆತ್ತಿ+ ನಿನಗ್
ಆನ್+ಅಳವಿ+ಕೊಡುವೆನು +ತನ್ನ +ಪರಿಯನು +ಬಳಿಕ+ ನೋಡೆಂದ

ಅಚ್ಚರಿ:
(೧) ಇಂತಹ ಕ್ಲಿಷ್ಟದ ಸಮಯದಲ್ಲೂ ಕರ್ಣನ ಮುಖಭಾವದ ಚಿತ್ರಣ – ನಸುನಗುತ
(೨) ಕರ್ಣನ ಉತ್ಸಾಹದ ಮಾತು – ನಿನಗಾನಳವಿಗೊಡುವೆನು ತನ್ನ ಪರಿಯನು ಬಳಿಕ ನೋಡೆಂದ