ಪದ್ಯ ೨೬: ಭೀಮ ಸುಯೋಧನರ ಯುದ್ಧವು ಹೇಗಿತ್ತು?

ನೂಕಿದರೆ ಹೆರತೆಗೆವ ಹೆರತೆಗೆ
ದೌಕುವೌಕಿದಡೊತ್ತು ವೊತ್ತಿದ
ಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ
ಆ ಕಠೋರದ ಕಯ್ದು ಕಿಡಿಗಳ
ನೋಕರಿಸೆ ಖಣಿಖಟಿಲ ಝಾಡಿಯ
ಜೋಕೆಯಲಿ ಕಾದಿದರು ಸಮಬಲರಾಹವಾಗ್ರದಲಿ (ಗದಾ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಇಬ್ಬರೂ ಯುದ್ಧವನ್ನು ಸಮಬಲವಾಗಿ ಆಡಿದರು. ನೂಕಿದರೆ ಪಕ್ಕಕ್ಕೆ ಸರಿದು ಹಿಂದಕ್ಕೊತ್ತುವ, ಒತ್ತಿದರೆ ಪಂಥಿಸುವ (ದೂರಕ್ಕೆ ಹೋಗುವ), ಪಂಠಿಸಿದರೆ ಮತ್ತೆ ಕೂಡುವ, ಕಠೋರವಾದ ಗದೆಗಲ ಕಿದಿಗಳನ್ನು ಸುರಿಸುತ್ತಿರಲು, ಖಣಿ ಖಟಿಲೆಂಬ ಸದ್ದಾಗುತ್ತಿರಲು ಸಮಬಲರಾದ ಭೀಮ ದುರ್ಯೋಧನರು ಯುದ್ಧ ಮಾಡಿದರು.

ಅರ್ಥ:
ನೂಕು: ತಳ್ಳು; ಹೆರತೆಗೆ: ಹಿಂದಕ್ಕೆ ಒತ್ತು; ಔಕು: ತಳ್ಳು; ಒತ್ತು:ಚುಚ್ಚು; ಪಂಠಿಸು: ದೂರಕ್ಕೆ ಹೋಗು; ಕೂಡೆ: ಜೊತೆ; ಸಂಧಿಸು: ಕೂಡು; ಕಠೋರ: ಬಿರುಸಾದ; ಕಯ್ದು: ಆಯುಧ; ಕಿಡಿ: ಬೆಂಕಿ; ಓಕರಿಸು: ಹೊರಹಾಕು; ಖಣಿಖಟಿಲ: ಬಾಣದ ಶಬ್ದವನ್ನು ವಿವರಿಸುವ ಪದ; ಝಾಡಿ: ಕಾಂತಿ; ಜೋಕೆ: ಎಚ್ಚರಿಕೆ, ಜಾಗರೂಕತೆ; ಕಾದು: ಹೋರಾಡು; ಸಮಬಲ: ಒಂದೇ ಶಕ್ತಿಯೊಂದಿಗೆ; ಆಹವ: ಯುದ್ಧ; ಅಗ್ರ: ಮುಂದೆ; ಡಾಕೆ: ಆಕ್ರಮಣ;

ಪದವಿಂಗಡಣೆ:
ನೂಕಿದರೆ +ಹೆರತೆಗೆವ+ ಹೆರತೆಗೆದ್
ಔಕುವ್+ಔಕಿದಡ್+ಒತ್ತು+ ಒತ್ತಿದ
ಡಾಕೆಯಲಿ +ಪಂಠಿಸುವ +ಪಂಠಿಸೆ +ಕೂಡೆ +ಸಂಧಿಸುವ
ಆ +ಕಠೋರದ +ಕಯ್ದು+ ಕಿಡಿಗಳ
ನೋಕರಿಸೆ+ ಖಣಿಖಟಿಲ+ ಝಾಡಿಯ
ಜೋಕೆಯಲಿ+ ಕಾದಿದರು +ಸಮಬಲರ್+ಆಹವಾಗ್ರದಲಿ

ಅಚ್ಚರಿ:
(೧) ಪದಗಳ ಬಳಕೆ – ಹೆರತೆಗೆವ ಹೆರತೆಗೆದೌಕುವೌಕಿದಡೊತ್ತು ವೊತ್ತಿದಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ

ಪದ್ಯ ೪೬: ಯುದ್ಧದ ತೀವ್ರತೆ ಹೇಗಿತ್ತು?

ಬವರಿಯಲಿ ಪೈಸರಿಸಿ ಪರಘಾ
ಯವನು ವಂಚಿಸಿ ಭಟರ ಕೊರೆದೆ
ತ್ತುವರು ಕೈಮಾಡಿದರೆ ತಿವಿವರು ಕೋಡಕೈಯವರು
ಕವಿಯಲೌಕುವರೌಕಿದರೆ ತ
ಗ್ಗುವರು ತಗ್ಗಿದರೊಡನೊಡನೆ ಜಾ
ರುವರು ಜುಣುಗುವರೈದೆ ತಿವಿದಾಡಿದರು ಸಬಳಿಗರು (ಭೀಷ್ಮ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಬವರಿಯಿಂದ ಸರಿಸು, ಎದುರಾಳಿಯ ಹೊಡೆತವನ್ನು ಕಪಿಮುಷ್ಟಿಯ ಯೋಧರು ತಪ್ಪಿಸಿಕೊಳ್ಳುವರು. ಎದುರಾಳಿಯನ್ನು ತಿವಿಯುವರು, ಅವನು ಕೈಮಾಡಿದರೆ ತಾವೂ ಕೈಮಾದುವರು, ಮೇಲೆ ಬಿದ್ದರೆ ಹಿಂದಕ್ಕೊತ್ತುವರು, ಔಕಿದರೆ ತಗ್ಗುವರು, ಅವನೂ ತಗ್ಗಿದರೆ ತಾವು ಸರಿದು ತಪ್ಪಿಸಿಕೊಳ್ಳುವರು. ಹೀಗೆ ಯುದ್ಧ ಘನಘೋರವಾಗಿ ನಡೆಯಿತು.

ಅರ್ಥ:
ಬವರಿ:ತಿರುಗುವುದು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಪರ: ವೈರಿ,ಎದುರಾಳಿ; ಘಾಯ: ಪೆಟ್ಟು; ವಂಚಿಸು: ಮೋಸ; ಭಟ: ಸೈನಿಕರು; ಕೊರೆ: ಇರಿ, ಚುಚ್ಚು; ಎತ್ತು: ಮೇಲೆ ತರು; ಕೈಮಾಡು: ಹೊಡೆ; ತಿವಿ: ಚುಚ್ಚು; ಕೋಡಕೈ: ಆಯುಧ; ಕವಿ: ಆವರಿಸು; ಔಕು: ತಳ್ಳು; ತಗ್ಗು: ಬಗ್ಗು, ಕುಸಿ; ಒಡನೊಡನೆ: ಒಮ್ಮೆಲೆ; ಜಾರು: ಬೀಳು; ಜುಣುಗು: ನುಣುಚಿಕೊಳ್ಳು; ಐದು: ಬಂದುಸೇರು; ತಿವಿ: ಚುಚ್ಚು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಬವರಿಯಲಿ +ಪೈಸರಿಸಿ +ಪರಘಾ
ಯವನು +ವಂಚಿಸಿ +ಭಟರ +ಕೊರೆದ್
ಎತ್ತುವರು +ಕೈಮಾಡಿದರೆ+ ತಿವಿವರು+ ಕೋಡಕೈಯವರು
ಕವಿಯಲ್+ಔಕುವರ್+ಔಕಿದರೆ+ ತ
ಗ್ಗುವರು +ತಗ್ಗಿದರೊಡನೊಡನೆ+ ಜಾ
ರುವರು+ ಜುಣುಗುವರ್+ಐದೆ +ತಿವಿದಾಡಿದರು +ಸಬಳಿಗರು

ಅಚ್ಚರಿ:
(೧) ಔಕು, ತಿವಿ, ಕೊರೆ, ಕವಿ, ತಗ್ಗು, ಜಾರು, ಜುಣುಗು – ಹೋರಾಟವನ್ನು ವಿವರಿಸುವ ಪದಗಳು

ಪದ್ಯ ೨೪: ಸುರಗಿಯ ವೀರರು ಹೇಗೆ ಕಾದಾಡಿದರು?

ಅಣೆದರೌಕುವ ಸೋಂಕಿ ತಿವಿದರೆ
ಹೆಣನ ತೋರುವ ಹಜ್ಜೆದೆಗೆದರೆ
ಜುಣಗಲೀಯದೆ ಮೇಲೆ ಕವಿಸುವ ಮೀರಿ ಕೈಮಾಡಿ
ಕೆಣಕಿದರೆ ಝಂಕಿಸುವ ನಿಟ್ಟಿಸಿ
ಹಣುಗಿ ಮೊನೆಗೊಡೆ ದಂಡೆಯೊಳು ಖಣಿ
ಖಣಿಲುರವವೆಸೆಯಲ್ಕೆ ಕಾದಿತು ಸುರಗಿಯತಿಬಲರು (ಬೀಷ್ಮ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ತಿವಿದರೆ ಮೇಲೆ ನುಗ್ಗುವ, ಹತ್ತಿರ ಬಂದು ಇರಿದರೆ ಸತ್ತು ಬೀಳುವ, ಪಕ್ಷಕ್ಕೆ ಸರಿದರೆ, ಜಾರಲು ಬಿಡದೆ ಮೇಲೆ ಬೀಳುವ ಕೆಣಕಿದರೆ ಅಬ್ಬರಿಸುವ, ಕಣ್ಣೆಚ್ಚು ನೋಡಿ ತಿವಿದರೆ, ಮಂಡಿಯೂರಿ ಅಲಗಿಗೆ ಅಲಗನ್ನೊಡ್ಡಿ ಖಣಿ ಖಣಿಲು ಸದ್ದು ಮಾಡುವ, ಸುರಗಿಯ ವೀರರು ಕಾದಾಡಿದರು.

ಅರ್ಥ:
ಅಣೆ: ತಿವಿ, ಹೊಡೆ; ಔಕು: ಒತ್ತು, ಹಿಚುಕು; ಸೋಂಕು: ತಾಗು, ಮುಟ್ಟು; ತಿವಿ: ಚುಚ್ಚು; ಹೆಣ: ಜೀವವಿಲ್ಲದ ಶರೀರ; ತೋರು: ಪ್ರದರ್ಶಿಸು; ಹಜ್ಜೆ: ನಡಗೆಯಲ್ಲಿ; ತೆಗೆ: ಹೊರತರು; ಜುಣಗು: ಜಾರು; ಕವಿಸು: ಆವರಿಸು; ಮೀರು: ಉಲ್ಲಂಘಿಸು; ಕೈಮಾಡು: ತೋರು; ಕೆಣಕು: ಪ್ರಚೋದಿಸು; ಝಂಕಿಸು: ತಿರಸ್ಕರಿಸು; ನಿಟ್ಟಿಸು: ನೋಡು, ಕಾಣು; ಹಣಗು: ಹಿಂಜರಿ; ಮೊನೆ: ಚೂಪಾದ; ದಂಡೆ: ಗುರಾಣಿ; ಖಣಿ: ಶಬ್ದವನ್ನು ವಿವರಿಸುವ ಪದ; ಉರವಣೆ: ಆತುರ; ಕಾದು: ಹೋರಾಡು; ಸುರಗಿ: ಕತ್ತಿ; ಅತಿಬಲರು: ಪರಾಕ್ರಮಿ;

ಪದವಿಂಗಡಣೆ:
ಅಣೆದರ್+ಔಕುವ +ಸೋಂಕಿ +ತಿವಿದರೆ
ಹೆಣನ+ ತೋರುವ +ಹಜ್ಜೆದ್+ಎಗೆದರೆ
ಜುಣಗಲ್+ಈಯದೆ +ಮೇಲೆ +ಕವಿಸುವ +ಮೀರಿ +ಕೈಮಾಡಿ
ಕೆಣಕಿದರೆ +ಝಂಕಿಸುವ +ನಿಟ್ಟಿಸಿ
ಹಣುಗಿ+ ಮೊನೆಗೊಡೆ +ದಂಡೆಯೊಳು +ಖಣಿ
ಖಣಿಲ್+ಉರವವ್+ಎಸೆಯಲ್ಕೆ +ಕಾದಿತು +ಸುರಗಿ+ಅತಿಬಲರು

ಅಚ್ಚರಿ:
(೧) ಶಬ್ದವನ್ನು ವಿವರಿಸುವ ಪರಿ – ಖಣಿಖಣಿಲುರವವೆಸೆಯಲ್ಕೆ ಕಾದಿತು ಸುರಗಿಯತಿಬಲರು

ಪದ್ಯ ೫೪: ಧರ್ಮಜನನ್ನು ಕರ್ಣನು ಹೇಗೆ ಬೀಳಿಸಿದನು?

ಕೆದರಿದನು ಮಾರ್ಗಣೆಯೊಳರಸನ
ಹೊದಿಸಿದನು ಹುಸಿಯೇಕೆ ರಾಯನ
ಹುದಿದ ಕವಚವ ಭೇದಿಸಿದವೊಳಬಿದ್ದವಂಬುಗಳು
ಎದೆಯೊಳೌಕಿದ ಬಾಣ ಬೆನ್ನಲಿ
ತುದಿ ಮೊನೆಯ ತೋರಿದವು ಪೂರಾ
ಯದ ವಿಘಾತಿಯಲರಸ ಕಳವಳಿಸಿದನು ಕಂಪಿಸುತ (ಕರ್ಣ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕರ್ಣನು ಬಾಣಗಳನ್ನು ಕೆದರಿ ಧರ್ಮಜನನ್ನು ಬಾಣಗಳಿಂದ ಹೊದಿಸಿದನು. ಕರ್ಣನ ಬಾಣಗಳು ಅರಸನ ಕವಚವನ್ನು ಭೇದಿಸಿ ಒಳಹೊಕ್ಕವು. ಕೆಲವು ಎದೆಗೆ ನಟ್ಟು ಬೆನ್ನಿನಲ್ಲಿ ಮೊನೆಯು ಕಾಣಿಸಿತು. ಬಲವಾದ ಪೆಟ್ಟು ಪೂರ್ಣವಾಗಿ ಬೀಳಲು, ಧರ್ಮಜನು ನಡುಗಿ ಕಳವಳಿಸಿದನು.

ಅರ್ಥ:
ಕೆದರು: ಹರಡು, ಚದರಿಸು; ಮಾರ್ಗಣೆ:ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ; ಅರಸ: ರಾಜ; ಹೊದಿಸು: ಮುಚ್ಚು, ಆವರಿಸು; ಹುಸಿ: ಸುಳ್ಳು; ರಾಯ: ರಾಜ; ಹುದಿ:ಆವೃತವಾಗು, ಒಳಸೇರು; ಕವಚ: ಹೊದಿಕೆ, ಉಕ್ಕಿನ ಅಂಗಿ; ಭೇದಿಸು: ಛಿದ್ರ, ಸೀಳು; ಅಂಬು: ಬಾಣ; ಎದೆ: ವಕ್ಷ; ಔಕು: ಒತ್ತು; ಬಾಣ: ಶರ; ಬೆನ್ನು: ಹಿಂಬದಿ; ತುದಿ: ಅಗ್ರಭಾಗ; ಮೊನೆ: ಚೂಪು; ತೋರು: ಕಾಣಿಸು; ಪೂರಾಯದ: ಪೂರ್ಣವಾಗಿ; ವಿಘಾತಿ: ಹೊಡೆತ, ವಿರೋಧ; ಕಳವಳ: ತಳಮಳ, ಚಿಂತೆ; ಕಂಪಿಸು: ನಡುಗು;

ಪದವಿಂಗಡಣೆ:
ಕೆದರಿದನು +ಮಾರ್ಗಣೆಯೊಳ್+ಅರಸನ
ಹೊದಿಸಿದನು+ ಹುಸಿಯೇಕೆ+ ರಾಯನ
ಹುದಿದ +ಕವಚವ +ಭೇದಿಸಿದವ್+ಒಳಬಿದ್ದವ್+ಅಂಬುಗಳು
ಎದೆಯೊಳ್+ಔಕಿದ +ಬಾಣ +ಬೆನ್ನಲಿ
ತುದಿ +ಮೊನೆಯ +ತೋರಿದವು+ ಪೂರಾ
ಯದ +ವಿಘಾತಿಯಲ್+ಅರಸ +ಕಳವಳಿಸಿದನು +ಕಂಪಿಸುತ

ಅಚ್ಚರಿ:
(೧) ಕೆದರು, ಹೊದಿಸು, ಭೇದಿಸು, ಔಕು, ವಿಘಾತಿ – ಹೋರಟವನ್ನು ವಿವರಿಸುವ ಪದಗಳು
(೨) ರಾಯ, ಅರಸ; ಬಾಣ, ಅಂಬು – ಸಮಾನಾರ್ಥಕ ಪದಗಳು
(೩) ಬಾಣದ ತೀವ್ರತೆಯನ್ನು ವಿವರಿಸುವ ಬಗೆ – ಎದೆಯೊಳೌಕಿದ ಬಾಣ ಬೆನ್ನಲಿ
ತುದಿ ಮೊನೆಯ ತೋರಿದವು

ಪದ್ಯ ೩೪: ಕರ್ಣನ ಮಕ್ಕಳ ಪರಾಕ್ರಮವು ಹೇಗಿತ್ತು?

ಕಡಿದು ಬಿಸುಟರು ತೇರುಗಳನಡ
ಗೆಡಹಿದರು ಹೇರಾನೆಗಳ ಕೆಲ
ಕಡೆಯಲೌಕುವ ಕುದುರೆ ನನೆದವು ಬಸಿವ ನೆತ್ತರಲಿ
ತುಡುಕಿದರೆ ಕಾಲಾಳನಟ್ಟೆಯ
ನುಡಿಯಲರಿಯೆನು ಕರ್ಣತನುಜರ
ಕಡುಹು ನಕುಲಾದಿಗಳ ಬೆದರಿಸಿತರಸ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕರ್ಣಪುತ್ರರಾದ ವೃಷಸೇನ ಮತ್ತು ಸುಷೇಣರು ಪಾಂಡವರ ತೇರುಗಳನ್ನು ಕಡಿದು ಕೆಡಹಿದರು. ಆನೆ ಕುದುರೆಗಳು ಸುರಿಯುವ ರಕ್ತದಲ್ಲಿ ನೆನೆದು ಹೋದವು. ಕಾಲಾಳುಗಳು ಮೇಲೆ ಬಂದರೆ ಅವರ ಅಟ್ಟೆಯನ್ನೇ ಕಡಿದು ಹಾಕಿದರು. ಅವರ ಪರಾಕ್ರಮವನ್ನು ಕಂಡ ನಕುಲನೇ ಮೊದಲಾದವರು ಬೆದರಿದರು.

ಅರ್ಥ:
ಕಡಿ: ಸೀಳು, ತುಂಡರಿಸು; ಬಿಸುಟು: ಬಿಸಾಕು, ಹೊರಹಾಕು; ತೇರು: ರಥ; ಅಡಗೆಡಹು: ಅಡ್ಡಹಾಕು; ಹೇರಾನೆ: ದೊಡ್ಡದಾದ ಆನೆ; ಕೆಲ: ಸ್ವಲ್ಪ; ಕಡೆ: ಸೀಳು; ಔಕು: ಒತ್ತು, ಹಿಚುಕು; ಕುದುರೆ: ಅಶ್ವ; ನನೆದು: ತೊಯ್ದು; ಬಸಿ: ಒಸರು, ಸ್ರವಿಸು, ಜಿನುಗು; ನೆತ್ತರು: ರಕ್ತ; ತುಡುಕು: ಹೋರಾಡು, ಸೆಣಸು; ಕಾಲಾಳು: ಸೈನ್ಯ; ನುಡಿ: ಮಾತು; ಅರಿ: ತಿಳಿ; ತನುಜ: ಮಕ್ಕಳು; ಕಡುಹು: ಸಾಹಸ, ಹುರುಪು; ಬೆದರಿಸು: ಹೆದರು; ಅರಸ: ರಾಜ; ಕೇಳು: ಆಲಿಸು; ಅಟ್ಟೆ: ತಲೆಯಿಲ್ಲದ ದೇಹ;

ಪದವಿಂಗಡಣೆ:
ಕಡಿದು +ಬಿಸುಟರು +ತೇರುಗಳನ್+ಅಡ
ಗೆಡಹಿದರು+ ಹೇರಾನೆಗಳ +ಕೆಲ
ಕಡೆಯಲ್+ಔಕುವ +ಕುದುರೆ +ನನೆದವು +ಬಸಿವ +ನೆತ್ತರಲಿ
ತುಡುಕಿದರೆ+ ಕಾಲಾಳನ್+ಅಟ್ಟೆಯ
ನುಡಿಯಲ್+ಅರಿಯೆನು +ಕರ್ಣ+ತನುಜರ
ಕಡುಹು +ನಕುಲಾದಿಗಳ +ಬೆದರಿಸಿತ್+ಅರಸ +ಕೇಳೆಂದ

ಅಚ್ಚರಿ:
(೧) ಯುದ್ಧದ ಘೋರದೃಶ್ಯ: ಹೇರಾನೆಗಳ ಕೆಲಕಡೆಯಲೌಕುವ ಕುದುರೆ ನನೆದವು ಬಸಿವ ನೆತ್ತರಲಿ

ಪದ್ಯ ೨೪: ದೇವತೆಗಳ ಸೈನ್ಯವನ್ನೆದುರಿಸಲು ಯಾರು ಮುಂದೆ ಬಂದರು?

ಭಟರು ವಿದ್ಯುನ್ಮಾಲಿಯದು ಲಟ
ಕಟಿಸಿ ನೂಕಿತು ತಾರಕಾಕ್ಷನ
ಚಟುಳ ಹಯ ಬಲ ಹೊಕ್ಕು ಹೊಯ್ದುದು ಬಿಟ್ಟ ಸೂಠಿಯಲಿ
ಲಟಕಟಿಸೆ ಸುರಸೇನೆ ಬಲುಗಜ
ಘಟೆಗಳೌಕಿತು ದೈತ್ಯ ಸುರ ಸಂ
ಘಟಿತ ಸಮರವನೇನನೆಂಬೆನು ಮಾವ ಕೇಳೆಂದ (ಕರ್ಣ ಪರ್ವ, ೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಿವನು ಮೂರು ಊರುಗಳನ್ನು ಮುತ್ತಿಗೆ ಹಾಕಲು, ವಿದ್ಯುನ್ಮಾಲಿಯ ಸೈನಿಕರು ತವಕದಿಂದ ಮುನ್ನುಗ್ಗಿದರು. ತಾರಕಾಕ್ಷನ ಕುದುರೆಗಳ ಸೇನೆ ವೇಗವಾಗಿ ಯುದ್ಧಕ್ಕಿಳಿಯಿತು. ಅವರಿಗಿದಿರಾಗಿ ದೇವತೆಗಳ ಸೇನೆಯೂ ತವಕದಿಂದ ಯುದ್ಧವನ್ನಾರಂಭಿಸಿಸ್ತು. ದೇವಾಸುರರ ಯುದ್ಧದ ಭರವನ್ನು ಏನೆಂದು ಹೇಳಲಿ ಎಂದು ದುರ್ಯೋಧನನು ಶಲ್ಯನಿಗೆ ಹೇಳಿದ.

ಅರ್ಥ:
ಭಟ: ಸೈನಿಕ; ಲಟಕಟ: ಉದ್ರೇಕಗೊಳ್ಳು; ನೂಕು: ತಳ್ಳು; ಚಟುಳ: ಚಟವಟಿಕೆ, ಲವಲವಿಕೆಯುಳ್ಳ; ಹಯ: ಕುದುರೆ; ಬಲ: ಸೈನ್ಯ; ಹೊಕ್ಕು: ಸೇರು; ಹೊಯ್ದು: ಹೊಡೆದು; ಬಿಡು: ತೊರೆ, ತ್ಯಜಿಸು; ಸೂಠಿ: ವೇಗ, ಚುರುಕುತನ; ಸುರಸೇನೆ: ದೇವತೆಗಳ ಸೈನ್ಯ; ಬಲು: ಬಹಳ; ಗಜ: ಆನೆ; ಘಟೆ: ಆನೆಗಳ ಗುಂಪು; ಔಕು: ಒತ್ತು; ದೈತ್ಯ: ದಾನವ; ಸುರ: ದೇವತೆ; ಸಂಘಟಿತ: ಒಟ್ಟಾಗಿ; ಸಮರ: ಯುದ್ಧ; ಮಾವ: ತಾಯಿಯ ಸಹೋದರ; ಕೇಳು: ಆಲಿಸು;

ಪದವಿಂಗಡಣೆ:
ಭಟರು +ವಿದ್ಯುನ್ಮಾಲಿಯದು +ಲಟ
ಕಟಿಸಿ +ನೂಕಿತು +ತಾರಕಾಕ್ಷನ
ಚಟುಳ +ಹಯ +ಬಲ +ಹೊಕ್ಕು +ಹೊಯ್ದುದು +ಬಿಟ್ಟ +ಸೂಠಿಯಲಿ
ಲಟಕಟಿಸೆ+ ಸುರಸೇನೆ +ಬಲು+ಗಜ
ಘಟೆಗಳ್+ಔಕಿತು +ದೈತ್ಯ +ಸುರ +ಸಂ
ಘಟಿತ+ ಸಮರವನ್+ಏನನೆಂಬೆನು +ಮಾವ +ಕೇಳೆಂದ

ಅಚ್ಚರಿ:
(೧) ಲಟಕಟಿಸಿ – ೨, ೪ ಸಾಲಿನ ಮೊದಲ ಪದ
(೨) ದೈತ್ಯ ಸುರ – ವಿರೋಧಾಭಾಸದ ಪದಗಳು
(೩) ಸ ಕಾರದ ತ್ರಿವಳಿ ಪದ – ಸುರ ಸಂಘಟಿತ ಸಮರವನೇನನೆಂಬೆನು

ಪದ್ಯ ೧೨: ಆನೆಗಳು ಯುದ್ಧರಂಗದಲ್ಲಿ ಯಾವ ರೀತಿ ಹೋರಾಡಿದವು?

ನೀಡಿ ಬರಿಕೈಗಳಲಿ ಸೆಳೆದೀ
ಡಾಡಿದವು ಬಂಡಿಗಳನೌಕಿದ
ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ
ಹೂಡು ಜಂತ್ರದ ಜತ್ತರಟ್ಟವ
ನಾಡಲೇತಕೆ ಹಿಂದಣೊಡ್ಡನು
ಝಾಡಿಸಿದವೀ ಕ್ಷೇಮಧೂರ್ತಿನೃಪಾಲನಾನೆಗಳು (ಕರ್ಣ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕ್ಷೇಮಧೂರ್ತಿಯ ಆನೆಗಳು ಸೊಂಡಿಲನ್ನು ಚಾಚಿ ಆಯುಧದ ಬಂಡಿಗಳನ್ನು ಎಸೆದವು. ದಂತಗಳಿಂದ ಸಬಳ ಹೊತ್ತವರನ್ನು ಸೀಳಿದವು. ಹೂಡಿದ ಜತ್ತರಟ್ಟದ ಯಂತ್ರಗಳು ಕಾಣದಂತಾದವು. ಮುಂಚೂಣಿಯನ್ನು ಮುರಿದು ಹಿಂದಿನ ಸೇನೆಯನ್ನು ಝಾಡಿಸಿದವು.

ಅರ್ಥ:
ನೀಡು: ಕೊಡು; ಬರಿ: ಕೇವಲ; ಕೈ: ಕರ, ಹಸ್ತ; ಸೆಳೆದು: ಹತ್ತಿರ ಕರೆದು; ಈಡಾಡು: ಬಿಸಾಡು; ಬಂಡಿ: ರಥ; ಔಕು: ಒತ್ತು, ಹಿಸುಕು; ಕೋಡ: ದಂತ; ಕೈ: ಹಸ್ತ; ಸಬಳ: ಈಟಿ; ಸೀಳು: ಚೂರುಮಾಡು, ಮುರಿ; ದೆಸೆ: ದಿಕ್ಕು; ಹೂಡು: ಹೆದೆಯೇರಿಸು; ಜಂತ್ರ: ಯಂತ್ರ; ಜತ್ತರಟ್ಟ: ಯುದ್ಧದಲ್ಲಿ ಬಳಸುತ್ತಿದ್ದ ಒಂದು ಬಗೆಯ ಯಂತ್ರ; ಝಾಡಿಸು: ಒದೆ; ನೃಪ: ರಾಜ; ಆನೆ: ಗಜ; ಹಿಂದಣೊಡ್ಡನು: ಕಾಣದಂತಾಗು;

ಪದವಿಂಗಡಣೆ:
ನೀಡಿ +ಬರಿಕೈಗಳಲಿ +ಸೆಳೆದ್
ಈಡಾಡಿದವು +ಬಂಡಿಗಳನ್+ಔಕಿದ
ಕೋಡ +ಕೈಯಲಿ +ಸಬಳಿಗರ +ಸೀಳಿದವು +ದೆಸೆದೆಸೆಗೆ
ಹೂಡು +ಜಂತ್ರದ +ಜತ್ತರಟ್ಟವನ್
ಆಡಲೇತಕೆ +ಹಿಂದಣೊಡ್ಡನು
ಝಾಡಿಸಿದವೀ +ಕ್ಷೇಮಧೂರ್ತಿ+ನೃಪಾಲನ್+ಆನೆಗಳು

ಅಚ್ಚರಿ:
(೧) ಜೋಡಿ ಪದಗಳು – ಕೋಡ ಕೈಯಲಿ; ಸಬಳಿಗರ ಸೀಳಿದವು; ಜಂತ್ರದ ಜತ್ತರಟ್ಟವ
(೨) ಈಡಾಡಿ, ಔಕು, ಸೀಳು, ಝಾಡಿಸು – ಯುದ್ಧವನ್ನು ವಿವರಿಸುವ ಪದಗಳು

ಪದ್ಯ ೫೦: ಯಾವ ರೀತಿ ಅರ್ಜುನನ ಸೈನ್ಯವು ದುರ್ಗವನ್ನು ವಶಪಡಿಸಿಕೊಂಡಿತು?

ಇಳುಹಿದರು ಚೂಣಿಯನು ಮುಂದರೆ
ನೆಲೆಯಭಟರೌಕಿದರು ಭಾರಿಯ
ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು
ಕಲುವಳೆಯ ಕೋಲಾಹಲಕ್ಕಿವ
ರಳುಕದಿರಿದರು ಸುರಗಿಯಲಿ ತೆನೆ
ವಳಿಯ ಹಿಡಿದರು ಹೊಯ್ದು ಕೇಶಾಕೇಶಿಯುದ್ಧದಲಿ (ಸಭಾ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನ ಸೈನ್ಯವು ಮಂದರಪರ್ವತದ ಕೋಟೆಗಳನ್ನು ಆಕ್ರಮಿಸಲು ಮುಂದಾದಾಗ, ಕೋಟೆಯಲ್ಲಿದ್ದ ಸೈನ್ಯವು ಯುದ್ಧಕ್ಕೆ ಬಂದಿತು. ಕೌಶಲ್ಯದಿಂದ ಇವರನ್ನು ತಡೆದು, ಬಳಿಕ ಕೋಟೆಯೊಳಕ್ಕೆ ಬಿಟ್ಟರು. ಅವರ ಕವಣೆಗಲ್ಲುಗಳ ಹೊಡೆತಕ್ಕೆ ಅರ್ಜುನನ ಸೈನ್ಯವು ಹೆದರದೆ, ಕತ್ತಿಗಳನ್ನು ಹಿಡಿದು ಬುರುಜುಗಳನ್ನು ವಶಪಡಿಸಿಕೊಂಡಿತು. ಕೇಶಾಕೇಶಿ ಯುದ್ಧದಲ್ಲಿ ಗಿರಿದುರ್ಗದವರು ಸೋತರು.

ಅರ್ಥ:
ಇಳುಹು: ಇಳಿಸು, ಕತ್ತರಿಸು; ಚೂಣಿ: ಮುಂದಿನ ಸಾಲು; ನೆಲೆಯಭಟರು: ಭೂಸೈನ್ಯ; ಔಕು: ಒತ್ತು; ಭಾರಿ: ಬಹಳ;
ಒತ್ತು: ಉಬ್ಬಸಗೊಳಿಸು; ತಲೆವರಿಗೆ: ಗುರಾಣಿ; ಹೊಗಿಸು: ಪ್ರವೇಶಕ್ಕೆ ಅನುಮತಿಯನ್ನು ಕೊಡು; ದುರ್ಗ: ಕೋಟೆ;
ಕಲುವಳೆ: ಕಲ್ಲಿನ ಮಳೆ; ಕೋಲಾಹಲ: ;ಅಳುಕು: ಅಂಜಿಕೆ, ಹೆದರು; ಸುರಗಿ: ಕತ್ತಿ; ತೆನೆವಳಿ: ಕೋಟೆಯ ಉನ್ನತ ಭಾಗಗಳ ಮಾರ್ಗ, ಬುರುಜು; ಹಿಡಿ: ಕಬಳಿಸು, ವಶಕ್ಕೆ ಪಡೆ; ಹೊಯ್ದು: ಹೊಡೆದು; ಕೇಶಾಕೇಶಿ: ಕೂದಲು ಹಿಡಿದು ಯುದ್ಧ;

ಪದವಿಂಗಡಣೆ:
ಇಳುಹಿದರು +ಚೂಣಿಯನು +ಮುಂದರೆ
ನೆಲೆಯಭಟರ್+ಔಕಿದರು +ಭಾರಿಯ
ತಲೆವರಿಗೆಗಳಲ್+ಒತ್ತಿದರು+ ಹೊಗಿಸಿದರು+ ದುರ್ಗವನು
ಕಲುವಳೆಯ +ಕೋಲಾಹಲಕ್+ಇವರ್
ಅಳುಕದಿರ್+ಇದರು+ ಸುರಗಿಯಲಿ+ ತೆನೆ
ವಳಿಯ +ಹಿಡಿದರು+ ಹೊಯ್ದು +ಕೇಶಾಕೇಶಿ+ಯುದ್ಧದಲಿ

ಅಚ್ಚರಿ:
(೧) ಔಕು, ಒತ್ತು, ಹೊಯ್ದು, ಹೊಗಿಸು – ಯುದ್ಧವನ್ನು ವರ್ಣಿಸುವ ಪದಗಳು
(೨) ಯುದ್ಧದ ತೀವ್ರತೆಯನ್ನು ವರ್ಣಿಸಲು – ಕೇಶಾಕೇಶಿ ಯುದ್ಧ

ಪದ್ಯ ೮: ಭೀಮನು ಬರುವ ನಿದ್ರೆಯನ್ನು ಹೇಗೆ ತಡೆದನು?

ಔಕುವುದು ಬಲು ನಿದ್ರೆ ನಿದ್ರೆಯ
ನೂಕುವನು ಕಣ್ಣೆವೆಗಳಲಿ ನಸು
ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ
ಸೋಕುವುದು ಮೈಮರವೆ ಮರವೆಯ
ನೋಕರಿಸುವುದು ಚಿತ್ತವೃತ್ತಿ ನಿ
ರಾಕುಲಾಂತಃಕರಣನಾದನು ಬಳಿಕ ಕಲಿಭೀಮ (ಆದಿ ಪರ್ವ, ೯ ಸಂಧಿ, ೮ ಪದ್ಯ)

ತಾತ್ಪರ್ಯ:
ತನ್ನ ತಾಯಿ ಸೋದರರು ಮಲಗಲು ಭೀಮನು ಅವರನ್ನು ಕಾಯಲು ಎಚ್ಚರದಿಂದ್ದಿದನು, ಆದರು ಅವನಿಗಾದರು ಆಯಸ ವಾಗದಿರದೆ? ಕುಳಿತ ಬಳಿಕ ಬಲವಾದ ನಿದ್ರೆಯು ಅವನನ್ನು ಆವರಿಸುತಿತ್ತು, ಅದನ್ನು ಅವನು ಕಣ್ಣೆವೆಗಳಿಂದ ನೂಕುವನು, ಹಾಗೆಯೆ ಸ್ವಲ್ಪ ತೂಕಡಿಕೆ ಬಂದರೆ ಮೈಯನ್ನು ಕೊಡವಿ ಆ ತೂಕಡಿಕೆಯನ್ನು ದೂರತಳ್ಳುವನು, ಆದರು ನಿದ್ರೆ ಯ ಮರವೇ ಅವನನ್ನು ಆವರಿಸುತಿತ್ತು, ಆಗ ಆ ಪರಿಸ್ಥಿತಿಯನ್ನು ಅರಿತ ಭೀಮನು ಅಂತಃಕರಣದಿಂದ ಎಚ್ಚರವಾಗಿ ಕುಳಿತನು.

ಅರ್ಥ:
ಔಕು: ಒತ್ತು, ಅದುಮು; ಬಲು: ತುಂಬ, ಬಹಳ; ನಿದ್ರೆ: ಶಯನ, ನಿದ್ದೆ, ಎಚ್ಚರವಿಲ್ಲದ ಸ್ಥಿತಿ; ನೂಕು: ದೂರತಳ್ಳು; ಎವೆ: ಕಣ್ಣಿನ ರೆಪ್ಪೆ; ನಸು: ಸ್ವಲ್ಪ; ತೂಕಡಿಕೆ: ಝೋಂಪು; ತೋರು: ಕಾಣಿಸು; ಮೈ: ತನು; ಕೆದರು: ಅಲುಗಾಡಿಸು; ಕೈ: ಕರ; ಸೋಕು: ತಾಗು, ಸ್ಪರ್ಶಿಸು; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಓಕ: ವಾಸಸ್ಥಳ; ಚಿತ್ತ: ಮನಸ್ಸು; ವೃತ್ತಿ: ಕೆಲಸ; ಚಿತ್ತವೃತ್ತಿ: ಮನಸ್ಸಿನ ಯೋಚನೆ, ಏಕಾಗ್ರತೆ; ನಿರಾಕುಲ: ದುಃಖರಹಿತ, ಕ್ಲೇಶರಹಿತ; ಅಂತಃಕರಣ: ಚಿತ್ತವೃತ್ತಿ, ಒಳಗಿನ ಇಂದ್ರಿಯ ಮನಸ್ಸು; ಬಳಿಕ: ನಂತರ; ಕಲಿ: ಪರಾಕ್ರಮಿ;

ಪದವಿಂಗಡನೆ:
ಔಕುವುದು +ಬಲು +ನಿದ್ರೆ +ನಿದ್ರೆಯ
ನೂಕುವನು+ ಕಣ್ಣ್+ಎವೆಗಳಲಿ+ ನಸು
ತೂಕಡಿಕೆ+ ತೋರಿದೊಡೆ+ ಮೈಗೆದರುವನು +ಕೈಯೊಡನೆ
ಸೋಕುವುದು+ ಮೈಮರವೆ +ಮರವೆಯನ್
ಓಕರಿಸುವುದು+ ಚಿತ್ತವೃತ್ತಿ+ ನಿ
ರಾಕುಲ+ಅಂತಃಕರಣ+ನಾದನು+ ಬಳಿಕ+ ಕಲಿ+ಭೀಮ

ಅಚ್ಚರಿ:
(೧) ನಿದ್ರೆ ನಿದ್ರೆಯ ನೂಕುವನು, ಮರವೆ ಮರವೆಯ ನೋಕರಿಸುವುದು – ನಿದ್ರೆ, ಮರವೆ ಜೋಡಿ ಪದಗಳ ಬಳಕೆ
(೨) ಔಕು, ನೂಕು, ಕೆದರು, ಸೋಕು – ಕ್ರಿಯಾಪದಗಳ ಬಳಕೆ
(೩) ಅಂತಃಕರಣ, ಚಿತ್ತವೃತ್ತಿ – ಸಮಾನಾರ್ಥಕ ಪದ