ಪದ್ಯ ೨೯: ಶಕುನಿ ನಕುಲರ ಯುದ್ಧವು ಹೇಗಿತ್ತು?

ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ (ಗದಾ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶಕುನಿಯು ನಕುಲನ ಬಾಣಗಳನ್ನು ಕತ್ತರಿಸಿ ನಕುಲನನ್ನು ಬಾಣಗಳಿಂದ ಮುಚ್ಚಿದನು. ಶಕುನಿಯ ಬಾಣಗಳು ಸಹದೇವನ ರಥದ ಅಗ್ರಭಾಗದಲ್ಲಿ ತುಂಬಿದವು. ಪ್ರತಿಯಾಗಿ ಸಹದೇವನು ಶಕುನಿಯ ಬಾಣಗಳನ್ನು ಕತ್ತರಿಸಿ ಅವನ ರಥದ ಕುದುರೆಗಳನ್ನೂ ಅವನನ್ನೂ ಬಾಣಗಳಿಂದ ಪೀಡಿಸಿದನು.

ಅರ್ಥ:
ಎಸಲು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ, ಆಯುಧ; ಖಂಡಿಸು: ಮುರಿ, ಸೀಳು; ಶರ: ಬಾಣ; ಔಘ: ಗುಂಪು; ಅಹಿತ: ವೈರಿ; ಮುಸುಕು: ಹೊದಿಕೆ; ಯೋನಿ; ಮೊನೆ: ತುದಿ, ಕೊನೆ; ಕಣೆ: ಬಾಣ; ಈಡಾಡು: ಚೆಲ್ಲು; ರಥ: ಬಂಡಿ; ಅಗ್ರ: ಮುಂಭಾಗ; ಕುಸುರಿ: ತುಂಡು; ಅತಿರಥ: ಪರಾಕ್ರಮಿ; ಬಾಣ: ಅಂಬು; ಪ್ರಸರ: ವಿಸ್ತಾರ, ಹರಹು; ರಥ: ಬಂಡಿ; ತುರಗ: ಅಶ್ವ; ಭಯ: ಅಂಜಿಕೆ; ಅದ್ದು: ತೋಯು; ಸೌಬಲ: ಶಕುನಿ; ಉದ್ದು: ಒರಸು, ಅಳಿಸು;

ಪದವಿಂಗಡಣೆ:
ಎಸಲು+ ಸಹದೇವ+ಅಸ್ತ್ರವನು +ಖಂ
ಡಿಸಿ +ಶರೌಘದಿನ್+ಅಹಿತ+ವೀರನ
ಮುಸುಕಿದನು +ಮೊನೆ+ಕಣೆಗಳ್+ಈಡಿರಿದವು +ರಥಾಗ್ರದಲಿ
ಕುಸುರಿದರಿದ್+ಅತಿರಥನ +ಬಾಣ
ಪ್ರಸರವನು +ರಥ +ತುರಗವನು +ಭಯ
ರಸದೊಳ್+ಅದ್ದಿದನ್+ಉದ್ದಿದನು +ಸಹದೇವ +ಸೌಬಲನ

ಅಚ್ಚರಿ:
(೧) ವೀರ, ಅತಿರಥ; ಬಾಣ, ಶರ – ಸಮಾನಾರ್ಥಕ ಪದ
(೨) ಅದ್ದಿದನ್, ಉದ್ದಿದನ್ – ಪ್ರಾಸ ಪದಗಳು

ಪದ್ಯ ೫೪: ಭೂಮಿಯು ಯಾರ ರಾಣಿ ಎಂದು ಶಲ್ಯನು ಹೇಳಿದನು?

ಅರಸ ಕೇಳಿತ್ತಲು ಯುಧಿಷ್ಠಿರ
ನರಪತಿಯನರಸಿದನು ಮಾದ್ರೇ
ಶ್ವರನು ರಾವುಠಿಯೆಸುಗೆಯಲಿ ಮುಸುಕಿದನು ಧರ್ಮಜನ
ಧರೆಗೆ ಕಾಮಿಸಿದೈ ಸುಯೋಧನ
ನರಸಿಯಲ್ಲಾ ಧಾತ್ರಿ ನಿಮ್ಮೆ
ಲ್ಲರಿಗೆ ಹುದುನೆಲನಲ್ಲವೆಂದೆನುತೆಚ್ಚನಾ ಶಲ್ಯ (ಶಲ್ಯ ಪರ್ವ, ೨ ಸಂಧಿ, ೫೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಇತ್ತ ಶಲ್ಯನು ಧರ್ಮಜನನ್ನು ಹುಡುಕಿಕೊಂಡು ಹೋಗಿ ಪೈಶಾಚಿಕವಾದ ಅಬ್ಬರದಿಂದ ಅವನನ್ನು ಬಾಣಗಳಿಂದ ಮುಸುಕಿದನು. ಧರ್ಮಜ, ನೀನು ಭೂಮಿಯನ್ನು ಕಾಮಿಸಿದೆಯಲ್ಲವೇ? ಆದರೆ ಭೂಮಿಯು ದುರ್ಯೋಧನನ ರಾಣಿ, ನಿಮ್ಮಂತೆ ಹುದುವಿನ ಒಡೆತನವನ್ನು ಭೂಮಿ ಒಪ್ಪುವುದಿಲ್ಲ ಎಂದು ಬಾಣಗಳನ್ನು ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ನರಪತಿ: ರಾಜ; ಅರಸು: ಹುಡುಕು; ಮಾದ್ರೇಶ್ವರ: ಶಲ್ಯ; ರಾವು: ದೆವ್ವ, ಭೂತ, ಅಬ್ಬರ; ಎಸು: ಬಾಣ ಪ್ರಯೋಗ ಮಾಡು; ಮುಸುಕು: ಆವರಿಸು; ಧರೆ: ಭೂಮಿ; ಕಾಮಿಸು: ಇಚ್ಛಿಸು; ಅರಸಿ: ರಾಣಿ; ಧಾತ್ರಿ: ಭೂಮಿ; ಹುದು: ಕೂಡುವಿಕೆ, ಸೇರುವಿಕೆ; ನೆಲ: ಭೂಮಿ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಅರಸ+ ಕೇಳ್+ಇತ್ತಲು +ಯುಧಿಷ್ಠಿರ
ನರಪತಿಯನ್+ಅರಸಿದನು +ಮಾದ್ರೇ
ಶ್ವರನು +ರಾವುಠಿ+ಎಸುಗೆಯಲಿ +ಮುಸುಕಿದನು +ಧರ್ಮಜನ
ಧರೆಗೆ +ಕಾಮಿಸಿದೈ +ಸುಯೋಧನನ್
ಅರಸಿಯಲ್ಲಾ +ಧಾತ್ರಿ +ನಿಮ್ಮೆ
ಲ್ಲರಿಗೆ +ಹುದುನೆಲನ್+ಅಲ್ಲವೆಂದೆನುತ್+ಎಚ್ಚನ್+ಆ +ಶಲ್ಯ

ಅಚ್ಚರಿ:
(೧) ಧರೆ, ಧಾತ್ರಿ; ಅರಸ, ನರಪತಿ – ಸಮಾನಾರ್ಥಕ ಪದ
(೨) ದುರ್ಯೋಧನನೇ ರಾಜ ಎಂದು ಹೇಳುವ ಪರಿ – ಸುಯೋಧನನರಸಿಯಲ್ಲಾ ಧಾತ್ರಿ

ಪದ್ಯ ೪೪: ನಾರಾಯಣಾಸ್ತ್ರವು ಭೀಮನಿಗೆ ಏನು ಹೇಳಿತು?

ಪೂತು ಪಾಯಿಕು ಭೀಮ ನೆರೆದೀ
ಬೂತು ಬಲದಲಿ ವೀರ ನೀನಹ
ಯೇತಕಿವದಿರು ಗಂಡು ಜೋಹದ ಗರುವ ಸೂಳೆಯರು
ಸೋತಡೆಯು ಜಯ ನಿನ್ನದೆನುತ ವಿ
ಧೂತಧೂಮದಿ ಕಿಡಿಯ ಝಾಡಿಗ
ಳೀತನನು ಮುಸುಕಿದವು ಚುಂಬಿಸಿತಂಬು ಪವನಜನ (ದ್ರೋಣ ಪರ್ವ, ೧೯ ಸಂದಿ, ೪೪ ಪದ್ಯ)

ತಾತ್ಪರ್ಯ:
ಭೀಮನು ಆಯುಧವನ್ನು ಹಿಡಿದುದನ್ನು ಕಂಡು ನಾರಾಯಣಾಸ್ತ್ರವು ಸಂತಸ ಪಟ್ಟು, ಭಲೇ ಭೀಮ ಇಲ್ಲಿ ಸೇರಿರುವ ನಾಚಿಕೆಗೆಟ್ಟ ಸೈನ್ಯದಲ್ಲಿ ನೀನೊಬ್ಬನೇ ವೀರ. ಗಂಡುವೇಷದ ಮಾನಿಷ್ಠರಂತೆ ನಟಿಸುವ ಈ ಸೂಳೆಯರಿದ್ದರೇನು ಬಿಟ್ಟರೇನು, ನೀನು ಈ ಯುದ್ಧದಲ್ಲಿ ಸೋತರೂ ನೀನೇ ಗೆದ್ದಂತೆ, ಎನ್ನುತ್ತಾ ತನ್ನ ಕಿಡಿಗಳ ಹೊಗೆಗಳಿಂದ ಭೀಮನನ್ನು ಮುತ್ತಿಟ್ಟಿತು.

ಅರ್ಥ:
ಪೂತು: ಭಲೇ; ಪಾಯಿಕು: ಭೇಷ್; ನೆರೆ: ಗುಂಪು; ಬೂತು: ನಾಚಕೆಗೆಟ್ಟ ಮಾತು, ನಟನೆ; ಬಲ: ಸೈನ್ಯ; ವೀರ: ಪರಾಕ್ರಮಿ; ಇವದಿರು: ಇಷ್ಟು ಜನ; ಗಂಡು: ಪುರುಷ; ಜೋಹ: ಮೋಸದ ವೇಷ, ಸೋಗು; ಗರುವ: ಗರ್ವ, ಸೊಕ್ಕು, ಶ್ರೇಷ್ಠ; ಸೂಳೆ: ವೇಷ್ಯೆ; ಸೋತು: ಪರಾಭವ; ಜಯ: ಗೆಲುವು; ವಿಧೂತ:ಅಲುಗಾಡುವ, ಅಲ್ಲಾಡುವ; ಧೂಮ: ಹೊಗೆ; ಕಿಡಿ: ಬೆಂಕಿ; ಝಾಡಿ: ಕಾಂತಿ; ಮುಸುಕು: ಆವರಿಸು; ಚುಂಬಿಸು: ಮುತ್ತಿಡು; ಪವನಜ: ಭೀಮ;

ಪದವಿಂಗಡಣೆ:
ಪೂತು +ಪಾಯಿಕು +ಭೀಮ +ನೆರೆದೀ
ಬೂತು +ಬಲದಲಿ +ವೀರ +ನೀನಹ
ಏತಕ್+ಇವದಿರು+ ಗಂಡು +ಜೋಹದ+ ಗರುವ +ಸೂಳೆಯರು
ಸೋತಡೆಯು +ಜಯ +ನಿನ್ನದೆನುತ +ವಿ
ಧೂತ+ಧೂಮದಿ +ಕಿಡಿಯ +ಝಾಡಿಗಳ್
ಈತನನು +ಮುಸುಕಿದವು +ಚುಂಬಿಸಿತ್+ಅಂಬು +ಪವನಜನ

ಅಚ್ಚರಿ:
(೧) ಹಂಗಿಸುವ ಪರಿ – ಗಂಡು ಜೋಹದ ಗರುವ ಸೂಳೆಯರು

ಪದ್ಯ ೯: ತಾವರೆಗಳೇಕೆ ಆಗಸದಲ್ಲಿ ಹೊಳೆದವು?

ಮುಸುಕಿದನು ರವಿ ಧೂಳಿಯಲಿ ಹೊಳೆ
ವಸಿ ಮುಸುಂಡಿ ತ್ರಿಶೂಲ ಕೊಂತ
ಪ್ರಸರ ಕಾಂತಿಗಳಿಳುಹಿದವು ಖದ್ಯೋತದೀಧಿತಿಯ
ಬಿಸಜಸಖನಡಗಿದರೆ ನಭದಲಿ
ಮಸಗಿದವು ತಾರೆಗಳೆನಲು ಶೋ
ಭಿಸಿದವವನೀಪಾಲಮೌಳಿಸುರತ್ನ ರಾಜಿಗಳು (ದ್ರೋಣ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ಸೂರ್ಯನು ಧೂಳಿನಿಂದ ಮುಚ್ಚಿದನು. ಕತ್ತಿ, ಮುಸುಂಡಿ, ತ್ರಿಶೂಲ, ಕುಂತಗಳ ಕಾಂತಿ ಬಿಸಿಲಿನ ಕಾಂತಿಯನ್ನು ಮೀರಿಸಿತು. ಸೂರ್ಯನು ಮುಳುಗಿದಂತಾದುದರಿಂದ ತಾವರೆಗಳು ಆಕಾಶದಲ್ಲೇ ಅರಳಿದವೆಂಬಂತೆ, ರಾಜರ ಕಿರೀಟಗಳ ಉತ್ತಮ ರತ್ನಗಳು ಹೊಳೆದವು.

ಅರ್ಥ:
ಮುಸುಕು: ಹೊದಿಕೆ; ರವಿ: ಸೂರ್ಯ; ಧೂಳು: ಮಣ್ಣಿನ ಪುಡಿ; ಹೊಳೆ: ಪ್ರಕಾಶ; ಅಸಿ: ಕತ್ತಿ; ಮುಸುಂಡಿ: ಅಂಜುಬುರುಕ; ತ್ರಿಶೂಲ: ಮೂರುಮೊನೆಯ ಆಯುಧ; ಕೊಂತ: ದಿಂಡು; ಕುಂತ: ಈಟಿ, ಭರ್ಜಿ; ಪ್ರಸರ: ಗುಂಪು, ಸಮೂಹ, ವಿಸ್ತಾರ; ಕಾಂತಿ: ಪ್ರಕಾಶ; ಇಳುಹು: ಇಳಿಸು; ಖದ್ಯೋತ: ಸೂರ್ಯ; ದೀಧಿತಿ: ಹೊಳಪು, ಕಾಂತಿ; ಬಿಸಜ: ಕಮಲ; ಸಖ: ಸ್ನೇಹಿತ; ಬಿಸಜಸಖ: ಸೂರ್ಯ; ಅಡಗು: ಮರೆಯಾಗು; ನಭ: ಆಗಸ; ಮಸಗು: ಹರಡು; ತಾರೆ: ನಕ್ಷತ್ರ; ಶೋಭಿಸು: ಪ್ರಕಾಶ; ಅವನೀಪಾಲ: ರಾಜ; ಮೌಳಿ: ಶಿರ; ರತ್ನ: ಬೆಲೆಬಾಳುವ ಮಣಿ; ರಾಜಿ: ಗುಂಪು, ಸಮೂಹ;

ಪದವಿಂಗಡಣೆ:
ಮುಸುಕಿದನು+ ರವಿ +ಧೂಳಿಯಲಿ +ಹೊಳೆವ್
ಅಸಿ +ಮುಸುಂಡಿ +ತ್ರಿಶೂಲ +ಕೊಂತ
ಪ್ರಸರ +ಕಾಂತಿಗಳ್+ಇಳುಹಿದವು +ಖದ್ಯೋತ +ದೀಧಿತಿಯ
ಬಿಸಜಸಖನ್+ಅಡಗಿದರೆ +ನಭದಲಿ
ಮಸಗಿದವು +ತಾರೆಗಳ್+ಎನಲು +ಶೋ
ಭಿಸಿದವ್+ಅವನೀಪಾಲಮೌಳಿ+ಸುರತ್ನ +ರಾಜಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿಸಜಸಖನಡಗಿದರೆ ನಭದಲಿ ಮಸಗಿದವು ತಾರೆಗಳೆನಲು ಶೋ
ಭಿಸಿದವವನೀಪಾಲಮೌಳಿಸುರತ್ನ ರಾಜಿಗಳು
(೨) ರವಿ, ಖದ್ಯೋತ, ಬಿಸಜಸಖ – ಸೂರ್ಯನನ್ನು ಕರೆದ ಪರಿ

ಪದ್ಯ ೪೮: ಸುಪ್ರತೀಕದ ಮೇಲೆ ಅರ್ಜುನನು ಹೇಗೆ ದಾಳಿ ಮಾಡಿದನು?

ಗಿರಿಯ ವಿಸಟಂಬರಿಯನಮರೇ
ಶ್ವರನು ತಡೆವವೋಲಳ್ಳಿರಿವ ದಿ
ಕ್ಕರಿಯನಡಗಟ್ಟಿದನು ಕಾಯದೊಳೊಟ್ಟಿದನು ತರವ
ಕೆರಳಿದನು ಭಗದತ್ತನಿವನೇ
ನರನು ಫಡ ಫಡ ನಿಲ್ಲು ನಿಲ್ಲೆನು
ತುರುಶರೌಘವ ಕರೆದು ಮುಸುಕಿದನರ್ಜುನನ ರಥವ (ದ್ರೋಣ ಪರ್ವ, ೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಪರ್ವತಗಳ ಸ್ವೇಚ್ಛಾಗಮನವನ್ನು ದೇವೇಂದ್ರನು ತಡೆಯುವಂತೆ, ಗರ್ಜಿಸುತ್ತಿದ್ದ ಸುಪ್ರತೀಕದ ಗಮನವನ್ನು ಅರ್ಜುನನು ತಡೆದು ಅಡ್ಡಗಟ್ಟಿದನು. ಅದರ ದೇಹದಲ್ಲಿ ಬಾಣಗಳನ್ನೊಟ್ಟಿದನು. ಭಗದತ್ತನು ಕೆರಳಿ ಅರ್ಜುನನು ಇವನೇ ಏನು ಛೇ ನಿಲ್ಲು ನಿಲ್ಲು ಎನ್ನುತ್ತಾ ಬಾಣಗಳಿಂದ ಅರ್ಜುನನ ರಥವನ್ನು ಮುಸುಕಿದನು.

ಅರ್ಥ:
ಗಿರಿ: ಬೆಟ್ಟ; ವಿಸಟ: ಯಥೇಚ್ಛವಾಗಿ, ಮನ ಬಂದಂತೆ; ಅಂಬರ: ಬಟ್ಟೆ; ಅಮರೇಶ್ವರ: ಇಂದ್ರ; ತಡೆ: ನಿಲ್ಲಿಸು; ಅಳ್ಳಿರಿ: ನಡುಗಿಸು, ಚುಚ್ಚು; ದಿಕ್ಕರಿ: ದಿಗ್ಗಜ; ಅಡಗಟ್ಟು: ಅಡ್ಡಬಂದು; ಕಾಯ: ದೇಹ; ತರ: ರೀತಿ, ಕ್ರಮ; ಅಟ್ಟು: ಹಿಂಬಾಲಿಸು; ಕೆರಳು: ಕೆದರು, ಹರಡು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನಿಲ್ಲು: ತಡೆ; ಶರ: ಬಾಣ; ಔಘ: ಗುಂಪು, ಸಮೂಹ; ಕರೆ: ಬರೆಮಾಡು; ಮುಸುಕು: ಹೊದಿಕೆ; ರಥ: ಬಂಡಿ;

ಪದವಿಂಗಡಣೆ:
ಗಿರಿಯ +ವಿಸಟ್+ಅಂಬರಿಯನ್+ಅಮರೇ
ಶ್ವರನು +ತಡೆವವೋಲ್+ಅಳ್ಳಿರಿವ +ದಿ
ಕ್ಕರಿಯನ್+ಅಡಗಟ್ಟಿದನು +ಕಾಯದೊಳ್+ಒಟ್ಟಿದನು +ತರವ
ಕೆರಳಿದನು+ ಭಗದತ್ತನ್+ಇವನೇ
ನರನು+ ಫಡ+ ಫಡ +ನಿಲ್ಲು +ನಿಲ್ಲೆನುತ
ಉರು+ಶರೌಘವ+ ಕರೆದು +ಮುಸುಕಿದನ್+ಅರ್ಜುನನ +ರಥವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿರಿಯ ವಿಸಟಂಬರಿಯನಮರೇಶ್ವರನು ತಡೆವವೋಲ
(೨) ತರವ, ರಥವ – ಪದಗಳ ರಚನೆ