ಪದ್ಯ ೨೯: ಶಕುನಿ ನಕುಲರ ಯುದ್ಧವು ಹೇಗಿತ್ತು?

ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ (ಗದಾ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶಕುನಿಯು ನಕುಲನ ಬಾಣಗಳನ್ನು ಕತ್ತರಿಸಿ ನಕುಲನನ್ನು ಬಾಣಗಳಿಂದ ಮುಚ್ಚಿದನು. ಶಕುನಿಯ ಬಾಣಗಳು ಸಹದೇವನ ರಥದ ಅಗ್ರಭಾಗದಲ್ಲಿ ತುಂಬಿದವು. ಪ್ರತಿಯಾಗಿ ಸಹದೇವನು ಶಕುನಿಯ ಬಾಣಗಳನ್ನು ಕತ್ತರಿಸಿ ಅವನ ರಥದ ಕುದುರೆಗಳನ್ನೂ ಅವನನ್ನೂ ಬಾಣಗಳಿಂದ ಪೀಡಿಸಿದನು.

ಅರ್ಥ:
ಎಸಲು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ, ಆಯುಧ; ಖಂಡಿಸು: ಮುರಿ, ಸೀಳು; ಶರ: ಬಾಣ; ಔಘ: ಗುಂಪು; ಅಹಿತ: ವೈರಿ; ಮುಸುಕು: ಹೊದಿಕೆ; ಯೋನಿ; ಮೊನೆ: ತುದಿ, ಕೊನೆ; ಕಣೆ: ಬಾಣ; ಈಡಾಡು: ಚೆಲ್ಲು; ರಥ: ಬಂಡಿ; ಅಗ್ರ: ಮುಂಭಾಗ; ಕುಸುರಿ: ತುಂಡು; ಅತಿರಥ: ಪರಾಕ್ರಮಿ; ಬಾಣ: ಅಂಬು; ಪ್ರಸರ: ವಿಸ್ತಾರ, ಹರಹು; ರಥ: ಬಂಡಿ; ತುರಗ: ಅಶ್ವ; ಭಯ: ಅಂಜಿಕೆ; ಅದ್ದು: ತೋಯು; ಸೌಬಲ: ಶಕುನಿ; ಉದ್ದು: ಒರಸು, ಅಳಿಸು;

ಪದವಿಂಗಡಣೆ:
ಎಸಲು+ ಸಹದೇವ+ಅಸ್ತ್ರವನು +ಖಂ
ಡಿಸಿ +ಶರೌಘದಿನ್+ಅಹಿತ+ವೀರನ
ಮುಸುಕಿದನು +ಮೊನೆ+ಕಣೆಗಳ್+ಈಡಿರಿದವು +ರಥಾಗ್ರದಲಿ
ಕುಸುರಿದರಿದ್+ಅತಿರಥನ +ಬಾಣ
ಪ್ರಸರವನು +ರಥ +ತುರಗವನು +ಭಯ
ರಸದೊಳ್+ಅದ್ದಿದನ್+ಉದ್ದಿದನು +ಸಹದೇವ +ಸೌಬಲನ

ಅಚ್ಚರಿ:
(೧) ವೀರ, ಅತಿರಥ; ಬಾಣ, ಶರ – ಸಮಾನಾರ್ಥಕ ಪದ
(೨) ಅದ್ದಿದನ್, ಉದ್ದಿದನ್ – ಪ್ರಾಸ ಪದಗಳು

ಪದ್ಯ ೫೫: ಯಕ್ಷಸೈನಿಕರು ಏನೆಂದು ಚಿಂತಿಸಿದರು?

ಚೆಲ್ಲಿದರು ರಕ್ಕಸರು ಯಕ್ಷರು
ಬಿಲ್ಲ ಬಿಸುಟರು ಗುಹ್ಯಕರು ನಿಂ
ದಲ್ಲಿ ನಿಲ್ಲರು ಕಿನ್ನರರನಿನ್ನೇನು ಹೇಳುವೆನು
ಗೆಲ್ಲವಿದು ಲೇಸಾಯ್ತು ಮಾನವ
ನಲ್ಲ ನಮಗೀ ಭಂಗ ಭಯರಸ
ವೆಲ್ಲಿ ಭಾಪುರೆ ವಿಧಿಯೆನುತ ಚಿಂತಿಸಿತು ಭಟನಿಕರ (ಅರಣ್ಯ ಪರ್ವ, ೧೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಕ್ಷಸರು ಓಡಿದರು, ಯಕ್ಷರು ಬಿಲ್ಲುಗಳನ್ನು ಬಿಸಾಡಿದರು, ಗುಹ್ಯಕರು ನಿಂತಲ್ಲಿ ನಿಲ್ಲಲಿಲ್ಲ, ಕಿನ್ನರರ ಪಾಡನ್ನು ನಾನೇನು ಹೇಳಲಿ, ಇವನಾರೋ ನಮ್ಮನ್ನು ಜಯಿಸಿದ, ಖಂಡಿತವಾಗಿ ಇವನು ಮನುಷ್ಯನಲ್ಲ, ನಮಗೆ ಇಂತಹ ಭಯ ಅಪಮಾನಗಳು ವಿಧಿವಶದಿಂದಾದವು ಭಾಪುರೆ ವಿಧಿ ಎಂದು ಯಕ್ಷ ಯೋಧರು ಚಿಂತಿಸಿದರು.

ಅರ್ಥ:
ಚೆಲ್ಲು: ಹರಡು; ರಕ್ಕಸ: ರಾಕ್ಷಸ; ಯಕ್ಷ: ದೇವತೆಗಳ ಒಂದು ಗುಂಪು; ಬಿಲ್ಲು: ಚಾಪ; ಬಿಸುಟು: ಹೊರಹಾಕು; ಗುಹ್ಯಕ: ಯಕ್ಷ; ನಿಲ್ಲು: ಸ್ಥಿರವಾಗು; ಕಿನ್ನರ: ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಗೆಲುವು: ಜಯ; ಲೇಸು: ಒಳಿತು; ಮಾನವ: ನರ; ಭಂಗ: ಮುರಿ, ತುಂಡು; ಭಯ: ಭೀತಿ; ರಸ: ಸಾರ; ಭಾಪುರೆ: ಭಲೆ; ವಿಧಿ: ಸೃಷ್ಟಿಕರ್ತ, ಬ್ರಹ್ಮ; ಚಿಂತಿಸು: ಯೋಚಿಸು; ಭಟ: ಸೈನ್ಯ; ನಿಕರ: ಗುಂಪು;

ಪದವಿಂಗಡಣೆ:
ಚೆಲ್ಲಿದರು +ರಕ್ಕಸರು +ಯಕ್ಷರು
ಬಿಲ್ಲ +ಬಿಸುಟರು +ಗುಹ್ಯಕರು +ನಿಂ
ದಲ್ಲಿ +ನಿಲ್ಲರು +ಕಿನ್ನರರನ್+ಇನ್ನೇನು +ಹೇಳುವೆನು
ಗೆಲ್ಲವಿದು +ಲೇಸಾಯ್ತು +ಮಾನವ
ನಲ್ಲ +ನಮಗೀ +ಭಂಗ +ಭಯರಸ
ವೆಲ್ಲಿ +ಭಾಪುರೆ+ ವಿಧಿಯೆನುತ +ಚಿಂತಿಸಿತು +ಭಟನಿಕರ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭಂಗ ಭಯರಸವೆಲ್ಲಿ ಭಾಪುರೆ

ಪದ್ಯ ೩೬: ವೃಷಸೇನನ ಸಾವಿನ ನಂತರ ಕುರುಸೈನ್ಯವು ಯಾವ ಸ್ಥಿತಿಯಲ್ಲಿತ್ತು?

ಚಿಗಿದ ತಲೆ ಬೊಬ್ಬಿರಿಯೆ ಬಳಿಕಾ
ಳುಗಳ ದೇವನು ಮುಷ್ಟಿಬಳಿಗೋ
ಳುಗಳನೈದಾರೇಳ ಹಳುಹಳುವಾಯಿಯೆಸುಗೆಯಲಿ
ತೆಗೆದು ನಿಂದುದು ಭಯರಸದ ಹ
ಬ್ಬಗೆಯಲುಬ್ಬಿದ ಶೋಕದೊಡ್ಡಿನ
ಮುಗಿಲು ಕರೆದುದು ಕುರುಬಲದ ಕಂಬನಿಯ ಬರುವಳೆಯ (ಕರ್ಣ ಪರ್ವ, ೨೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಕ್ಕೆ ವೃಷಸೇನನ ತಲೆ ಕತ್ತರಿಸಿ ಹಾರಿತು, ಅದನ್ನು ನೋಡಿದ ಕುರುಸೇನೆಯವರು ಗಟ್ಟಿಯಾಗಿ ಕೂಗಿದರು, ನಂತರ ಐದಾರು ಏಳು ಬಾಣಗಳು ಸಡಿಸಲು ತಲೆಯು ನಿಧಾನವಾಗಿ ನೆಲಕ್ಕೆ ಬಿತ್ತು, ಕುರುಸೇನೆಯಲ್ಲಿ ಭಯವು ಆವರಿಸಿತು, ಎಲ್ಲರೂ ಭಯದ ಆವರಣದಲ್ಲಿ ವೃಷಸೇಸನು ಹೋದ ದುಃಖದಲ್ಲಿರಲು ಶೋಕದ ಮೋಡದಿಂದ ಕುರುಬಲವು ಕಂಬನಿಯೆರಗಿತೋ ಎಂಬಂತೆ ಕಂಡಿತು.

ಅರ್ಥ:
ಚಿಗಿ: ಹಾರು; ತಲೆ: ಶಿರ; ಬೊಬ್ಬಿರಿ: ಜೋರಾಗಿ ಕೂಗು; ಬಳಿಕ: ನಂತರ; ಆಳು: ಸೈನಿಕರು; ದೇವ: ಒಡೆಯ; ಮುಷ್ಟಿ: ಹಿಡಿಕೆ, ಮುಚ್ಚಿದ ಅಂಗೈ; ಬಳಿ: ಹತ್ತಿರ; ಕೋಳು: ಬಾಣ; ಹಳು: ತಗ್ಗಿದುದು, ಕುಗ್ಗಿದುದು; ಎಸು: ಬಾಣ ಪ್ರಯೋಗ ಮಾಡು; ತೆಗೆ: ಹೊರಹಾಕು; ನಿಂದುದು: ನಿಲ್ಲು; ಭಯ: ಅಂಜಿಕೆ, ಹೆದರಿಕೆ; ರಸ: ಸತ್ತ್ವ; ಹಬ್ಬ: ಶಿಕ್ಷೆ, ಶಾಸ್ತಿ, ಸಮಾರಂಭ ; ಉಬ್ಬಿದ: ಹೆಚ್ಚಿದ; ಶೋಕ: ದುಃಖ; ಒಡ್ಡು: ಸೈನ್ಯ, ಪಡೆ; ಮುಗಿಲು: ಆಗಸ; ಕರೆ: ಬರೆಮಾಡು; ಕಂಬನಿ: ಕಣ್ಣೀರು; ಬಿರು: ಗಟ್ಟಿ, ಬಿರುಸು; ಮಳೆ: ವರ್ಷ;

ಪದವಿಂಗಡಣೆ:
ಚಿಗಿದ +ತಲೆ +ಬೊಬ್ಬಿರಿಯೆ+ ಬಳಿಕ
ಆಳುಗಳ +ದೇವನು+ ಮುಷ್ಟಿಬಳಿ+ಕೋ
ಳುಗಳನ್+ಐದಾರೇಳ+ ಹಳುಹಳುವಾಯಿ+ಎಸುಗೆಯಲಿ
ತೆಗೆದು +ನಿಂದುದು +ಭಯರಸದ+ ಹ
ಬ್ಬಗೆಯಲ್+ಉಬ್ಬಿದ +ಶೋಕದ್+ಒಡ್ಡಿನ
ಮುಗಿಲು +ಕರೆದುದು +ಕುರುಬಲದ+ ಕಂಬನಿಯ +ಬರುವಳೆಯ

ಅಚ್ಚರಿ:
(೧) ಕುರುಬಲದ ಶೋಕವನ್ನು ವರ್ಣಿಸಲು – ಶೋಕದೊಡ್ಡಿನ ಮುಗಿಲು ಕರೆದುದು ಕುರುಬಲದ ಕಂಬನಿಯ ಬರುವಳೆಯ – ಕಣ್ಣಿರನ ಮಳೆಯನ್ನೆ ಸುರಿಸಿದರು ಎಂದು ಹೇಳುತ್ತಿರುವುದು
(೨) ವೃಷಸೇನನನ್ನು ಆಳುಗಳ ದೇವ ಎಂದು ಕರೆದಿರುವುದು