ಪದ್ಯ ೨೯: ಶಕುನಿ ನಕುಲರ ಯುದ್ಧವು ಹೇಗಿತ್ತು?

ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ (ಗದಾ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶಕುನಿಯು ನಕುಲನ ಬಾಣಗಳನ್ನು ಕತ್ತರಿಸಿ ನಕುಲನನ್ನು ಬಾಣಗಳಿಂದ ಮುಚ್ಚಿದನು. ಶಕುನಿಯ ಬಾಣಗಳು ಸಹದೇವನ ರಥದ ಅಗ್ರಭಾಗದಲ್ಲಿ ತುಂಬಿದವು. ಪ್ರತಿಯಾಗಿ ಸಹದೇವನು ಶಕುನಿಯ ಬಾಣಗಳನ್ನು ಕತ್ತರಿಸಿ ಅವನ ರಥದ ಕುದುರೆಗಳನ್ನೂ ಅವನನ್ನೂ ಬಾಣಗಳಿಂದ ಪೀಡಿಸಿದನು.

ಅರ್ಥ:
ಎಸಲು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ, ಆಯುಧ; ಖಂಡಿಸು: ಮುರಿ, ಸೀಳು; ಶರ: ಬಾಣ; ಔಘ: ಗುಂಪು; ಅಹಿತ: ವೈರಿ; ಮುಸುಕು: ಹೊದಿಕೆ; ಯೋನಿ; ಮೊನೆ: ತುದಿ, ಕೊನೆ; ಕಣೆ: ಬಾಣ; ಈಡಾಡು: ಚೆಲ್ಲು; ರಥ: ಬಂಡಿ; ಅಗ್ರ: ಮುಂಭಾಗ; ಕುಸುರಿ: ತುಂಡು; ಅತಿರಥ: ಪರಾಕ್ರಮಿ; ಬಾಣ: ಅಂಬು; ಪ್ರಸರ: ವಿಸ್ತಾರ, ಹರಹು; ರಥ: ಬಂಡಿ; ತುರಗ: ಅಶ್ವ; ಭಯ: ಅಂಜಿಕೆ; ಅದ್ದು: ತೋಯು; ಸೌಬಲ: ಶಕುನಿ; ಉದ್ದು: ಒರಸು, ಅಳಿಸು;

ಪದವಿಂಗಡಣೆ:
ಎಸಲು+ ಸಹದೇವ+ಅಸ್ತ್ರವನು +ಖಂ
ಡಿಸಿ +ಶರೌಘದಿನ್+ಅಹಿತ+ವೀರನ
ಮುಸುಕಿದನು +ಮೊನೆ+ಕಣೆಗಳ್+ಈಡಿರಿದವು +ರಥಾಗ್ರದಲಿ
ಕುಸುರಿದರಿದ್+ಅತಿರಥನ +ಬಾಣ
ಪ್ರಸರವನು +ರಥ +ತುರಗವನು +ಭಯ
ರಸದೊಳ್+ಅದ್ದಿದನ್+ಉದ್ದಿದನು +ಸಹದೇವ +ಸೌಬಲನ

ಅಚ್ಚರಿ:
(೧) ವೀರ, ಅತಿರಥ; ಬಾಣ, ಶರ – ಸಮಾನಾರ್ಥಕ ಪದ
(೨) ಅದ್ದಿದನ್, ಉದ್ದಿದನ್ – ಪ್ರಾಸ ಪದಗಳು

ಪದ್ಯ ೪೬: ಅಭಿಮನ್ಯುವು ದುಶ್ಯಾಸನನ್ನು ಹೇಗೆ ಹಂಗಿಸಿದನು?

ಬಿಲ್ಲ ಹಿಡಿಯಲು ಕೌರವಾನುಜ
ಬಲ್ಲ ನೋಡೈ ಸೂತ ಮಿಗೆ ತ
ಪ್ಪಲ್ಲ ತಪ್ಪಲ್ಲಂಬು ಬಿದ್ದವು ಗುರಿಯ ಸರಿಸದಲಿ
ನಿಲ್ಲು ನಿಲ್ಲಾದರೆಯೆನುತ ಬಲು
ಬಿಲ್ಲನುಗುಳಿಸಿದನು ಶರೌಘನ
ನೆಲ್ಲ ನಭ ದೆಸೆಯೆತ್ತಲೆನೆ ಘಾಡಿಸಿದವಂಬುಗಳು (ದ್ರೋಣ ಪರ್ವ, ೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅಭಿಮನ್ಯುವು ದುಶ್ಯಾಸನನಿಗೆ ಉತ್ತರಿಸುತ್ತಾ, ಎಲೈ ಸಾರಥಿ, ನೋಡು ದುಶ್ಯಾಸನನಿಗೆ ಬಿಲ್ಲು ಹಿಡಿಯಲು ಬರುತ್ತದೆ. ಅವನು ಬಿಟ್ಟಬಾಣಗಲು ಗುರಿಗೆ ಸರಿಯಾಗಿ ಬಿದ್ದಿವೆ ಎಂದು ದುಶ್ಯಾಸನ ನಿಲ್ಲು ನಿಲ್ಲು, ಎನ್ನುತ್ತಾ ಬಿಲ್ಲಿನಿಂದ ಬಾಣಗಳನ್ನು ಬಿಡಲು, ಆಕಾಶ ದಿಕ್ಕುಗಳು ಎಲ್ಲಿವೆಯೆಂದು ತಿಳಿಯದಂತೆ ಬಾಣಗಳು ತುಂಬಿದವು.

ಅರ್ಥ:
ಬಿಲ್ಲು: ಚಾಪ; ಹಿಡಿ: ಗ್ರಹಿಸು; ಅನುಜ: ತಮ್ಮ; ಬಲ್ಲ: ತಿಳಿದವ; ನೋಡು: ವೀಕ್ಷಿಸು; ಸೂತ: ಸಾರಥಿ; ಮಿಗೆ: ಮತ್ತು, ಅಧಿಕ; ತಪ್ಪು: ಸರಿಯಲ್ಲದ; ಅಂಬು: ಬಾಣ; ಬಿದ್ದು: ಬೀಳು; ಗುರಿ: ಲಕ್ಷ್ಯ; ಸರಿಸ: ನೇರವಾಗಿ, ಸರಳವಾಗಿ; ನಿಲ್ಲು: ತಾಳು; ಉಗುಳಿಸು: ಹೊರಹಾಕು; ಶರ: ಬಾಣ; ಔಘ: ಗುಂಪು, ಸಮೂಹ; ನಭ: ಆಗಸ; ದೆಸೆ: ದಿಕ್ಕು; ಘಾಡಿಸು: ವ್ಯಾಪಿಸು;

ಪದವಿಂಗಡಣೆ:
ಬಿಲ್ಲ +ಹಿಡಿಯಲು +ಕೌರವ+ಅನುಜ
ಬಲ್ಲ +ನೋಡೈ +ಸೂತ +ಮಿಗೆ +ತ
ಪ್ಪಲ್ಲ +ತಪ್ಪಲ್ಲ್+ಅಂಬು +ಬಿದ್ದವು +ಗುರಿಯ +ಸರಿಸದಲಿ
ನಿಲ್ಲು +ನಿಲ್ಲಾದರೆಯೆನುತ +ಬಲು
ಬಿಲ್ಲನ್+ಉಗುಳಿಸಿದನು +ಶರೌಘನನ್
ಎಲ್ಲ +ನಭ +ದೆಸೆಯೆತ್ತಲೆನೆ+ ಘಾಡಿಸಿದವ್+ಅಂಬುಗಳು

ಅಚ್ಚರಿ:
(೧)ದುಶ್ಯಾಸನನು ಹಂಗಿಸುವ ಪರಿ – ಬಿಲ್ಲ ಹಿಡಿಯಲು ಕೌರವಾನುಜ ಬಲ್ಲ ನೋಡೈ ಸೂತ

ಪದ್ಯ ೪೮: ಸುಪ್ರತೀಕದ ಮೇಲೆ ಅರ್ಜುನನು ಹೇಗೆ ದಾಳಿ ಮಾಡಿದನು?

ಗಿರಿಯ ವಿಸಟಂಬರಿಯನಮರೇ
ಶ್ವರನು ತಡೆವವೋಲಳ್ಳಿರಿವ ದಿ
ಕ್ಕರಿಯನಡಗಟ್ಟಿದನು ಕಾಯದೊಳೊಟ್ಟಿದನು ತರವ
ಕೆರಳಿದನು ಭಗದತ್ತನಿವನೇ
ನರನು ಫಡ ಫಡ ನಿಲ್ಲು ನಿಲ್ಲೆನು
ತುರುಶರೌಘವ ಕರೆದು ಮುಸುಕಿದನರ್ಜುನನ ರಥವ (ದ್ರೋಣ ಪರ್ವ, ೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಪರ್ವತಗಳ ಸ್ವೇಚ್ಛಾಗಮನವನ್ನು ದೇವೇಂದ್ರನು ತಡೆಯುವಂತೆ, ಗರ್ಜಿಸುತ್ತಿದ್ದ ಸುಪ್ರತೀಕದ ಗಮನವನ್ನು ಅರ್ಜುನನು ತಡೆದು ಅಡ್ಡಗಟ್ಟಿದನು. ಅದರ ದೇಹದಲ್ಲಿ ಬಾಣಗಳನ್ನೊಟ್ಟಿದನು. ಭಗದತ್ತನು ಕೆರಳಿ ಅರ್ಜುನನು ಇವನೇ ಏನು ಛೇ ನಿಲ್ಲು ನಿಲ್ಲು ಎನ್ನುತ್ತಾ ಬಾಣಗಳಿಂದ ಅರ್ಜುನನ ರಥವನ್ನು ಮುಸುಕಿದನು.

ಅರ್ಥ:
ಗಿರಿ: ಬೆಟ್ಟ; ವಿಸಟ: ಯಥೇಚ್ಛವಾಗಿ, ಮನ ಬಂದಂತೆ; ಅಂಬರ: ಬಟ್ಟೆ; ಅಮರೇಶ್ವರ: ಇಂದ್ರ; ತಡೆ: ನಿಲ್ಲಿಸು; ಅಳ್ಳಿರಿ: ನಡುಗಿಸು, ಚುಚ್ಚು; ದಿಕ್ಕರಿ: ದಿಗ್ಗಜ; ಅಡಗಟ್ಟು: ಅಡ್ಡಬಂದು; ಕಾಯ: ದೇಹ; ತರ: ರೀತಿ, ಕ್ರಮ; ಅಟ್ಟು: ಹಿಂಬಾಲಿಸು; ಕೆರಳು: ಕೆದರು, ಹರಡು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನಿಲ್ಲು: ತಡೆ; ಶರ: ಬಾಣ; ಔಘ: ಗುಂಪು, ಸಮೂಹ; ಕರೆ: ಬರೆಮಾಡು; ಮುಸುಕು: ಹೊದಿಕೆ; ರಥ: ಬಂಡಿ;

ಪದವಿಂಗಡಣೆ:
ಗಿರಿಯ +ವಿಸಟ್+ಅಂಬರಿಯನ್+ಅಮರೇ
ಶ್ವರನು +ತಡೆವವೋಲ್+ಅಳ್ಳಿರಿವ +ದಿ
ಕ್ಕರಿಯನ್+ಅಡಗಟ್ಟಿದನು +ಕಾಯದೊಳ್+ಒಟ್ಟಿದನು +ತರವ
ಕೆರಳಿದನು+ ಭಗದತ್ತನ್+ಇವನೇ
ನರನು+ ಫಡ+ ಫಡ +ನಿಲ್ಲು +ನಿಲ್ಲೆನುತ
ಉರು+ಶರೌಘವ+ ಕರೆದು +ಮುಸುಕಿದನ್+ಅರ್ಜುನನ +ರಥವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿರಿಯ ವಿಸಟಂಬರಿಯನಮರೇಶ್ವರನು ತಡೆವವೋಲ
(೨) ತರವ, ರಥವ – ಪದಗಳ ರಚನೆ

ಪದ್ಯ ೩೧: ಸುಪ್ರತೀಕ ಗಜದ ಕೋಲಾಹಲವನ್ನು ಹೇಗೆ ತಡೆಯಲು ಪ್ರಯತ್ನಿಸಿದರು?

ಕರಿಯ ಕೋಲಾಹಲವನಾ ಜೋ
ದರ ಶರೌಘನ ಸೈರಿಸುತ ಮು
ಕ್ಕುರುಕಿ ಧರ್ಮಜ ನಕುಲ ಸಾತ್ಯಕಿ ಭೀಮನಂದನರು
ಸರಳ ಸಾರವ ಕಟ್ಟಿದರು ಮಿಗೆ
ಕೆರಳಿದನು ಭಗದತ್ತನನಿಬರ
ಹರೆಗಡಿದು ಹೊಗರಂಬ ಸುರಿದನು ಸರಿದರತಿರಥರು (ದ್ರೋಣ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಆನೆಯ ಕೋಲಾಹಲವನ್ನು ಜೋದರ ಬಾಣಗಳನ್ನು ಸಹಿಸಿಕೊಂಡು ಧರ್ಜಜ, ನಕುಲ, ಸಾತ್ಯಕಿ, ಘಟೋತ್ಕಚರು ಬಾಣಗಳನ್ನು ಬಿಡುತ್ತಾ ಅದನ್ನು ತಡೆದರು. ಆಗ ಕೋಪಗೊಂಡ ಭಗದತ್ತನು ಅವರ ಬಾಣಗಳನ್ನು ತುಂಡುಮಾಡಿ ಥಳಥಳಿಸುವ ಬಾಣಗಳನ್ನು ಬಿಡಲು ಅತಿರಥರು ಪಕ್ಕಕ್ಕೆ ಸರಿದರು.

ಅರ್ಥ:
ಕರಿ: ಆನೆ; ಕೋಲಾಹಲ: ಗಜಿಬಿಜಿ, ಗಲಾಟೆ; ಜೋದ: ಯೋಧ; ಶರ: ಬಾಣ; ಔಘ: ಗುಂಪು; ಸೈರಿಸು: ತಾಳು; ಮುಕ್ಕುರು: ಕವಿ, ಮುತ್ತು; ಸರಳ: ಬಾಣ; ಕಟ್ಟು: ಬಂಧಿಸು; ಮಿಗೆ: ಅಧಿಕ; ಕೆರಳು: ಕೆದರು, ಹರಡು; ಅನಿಬರ: ಅಷ್ಟುಜನ; ಹರೆ: ವ್ಯಾಪಿಸು, ವಿಸ್ತರಿಸು; ಕಡಿ: ಸೀಳು; ಹೊಗರು: ಕಾಂತಿ; ಅಂಬು: ಬಾಣ; ಸುರಿ: ವರ್ಷಿಸು; ಅತಿರಥ: ಪರಾಕ್ರಮಿ; ಸರಿ: ಹೋಗು, ಗಮಿಸು;

ಪದವಿಂಗಡಣೆ:
ಕರಿಯ +ಕೋಲಾಹಲವನ್+ಆ+ ಜೋ
ದರ +ಶರೌಘನ+ ಸೈರಿಸುತ +ಮು
ಕ್ಕುರುಕಿ +ಧರ್ಮಜ +ನಕುಲ +ಸಾತ್ಯಕಿ +ಭೀಮ+ನಂದನರು
ಸರಳ+ ಸಾರವ +ಕಟ್ಟಿದರು +ಮಿಗೆ
ಕೆರಳಿದನು +ಭಗದತ್ತನ್+ಅನಿಬರ
ಹರೆಗಡಿದು+ ಹೊಗರಂಬ+ ಸುರಿದನು+ ಸರಿದರ್+ಅತಿರಥರು

ಅಚ್ಚರಿ:
(೧) ಶರ, ಅಂಬು – ಸಮಾನಾರ್ಥಕ ಪದ

ಪದ್ಯ ೨೮: ಅರ್ಜುನನು ತ್ರಿಗರ್ತರೊಡನೆ ಹೇಗೆ ಯುದ್ಧವನ್ನು ಮಾಡಿದನು?

ಇತ್ತಲರ್ಜುನನಾ ತ್ರಿಗರ್ತರಿ
ಗಿತ್ತನವಸರವನು ಕೃತಾಂತನ
ತೆತ್ತಿಗರಿಗೌತಣವ ಹೇಳಿಸಿದನು ಶರೌಘದಲಿ
ಕುತ್ತಿದವು ಕೂರಂಬು ದೊರೆಗಳ
ಮುತ್ತಿದವು ಕೆದರಿದವು ನಿಮಿಷಕೆ
ಬಿತ್ತಿಸಿದನಂದಹಿತ ಸುಭಟರ ವೀರ ಶರನಿಧಿಯ (ದ್ರೋಣ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಇತ್ತ ಅರ್ಜುನನು ತ್ರಿಗರ್ತರೊಡನೆ ಯುದ್ಧವನ್ನಾರಂಭಿಸಿದನು. ಯಮನ ದೂತರನ್ನು ಔತಣಕ್ಕೆ ಕರೆಸಿದನು. ಅವನ ಬಾಣಗಳು ಸೈನ್ಯವನ್ನು ದೊರೆಗಳನ್ನು ಮುತ್ತಿದವು. ನಿಮಿಷ ಗಳಿಗೆಯಲ್ಲಿ ಶತ್ರುಸೈನ್ಯ ಜಲಧಿ ಬತ್ತಿತು.

ಅರ್ಥ:
ಅವಸರ: ಸನ್ನಿವೇಶ, ಸಂದರ್ಭ; ಕೃತಾಂತ: ಯಮ; ತೆತ್ತಿಗ: ನಂಟ, ಬಂಧು; ಔತಣ: ವಿಶೇಷ ಊಟ; ಹೇಳು: ತಿಳಿಸು; ಶರ: ಬಾಣ; ಔಘ: ಗುಂಪು; ಕುತ್ತು: ತೊಂದರೆ, ಆಪತ್ತು; ಕೂರಂಬು: ಹರಿತವಾದ ಬಾಣ; ದೊರೆ: ರಾಜ; ಮುತ್ತು: ಆವರಿಸು; ಕೆದರು: ಹರಡು; ನಿಮಿಷ: ಕ್ಷಣ; ಬತ್ತು: ಒಣಗು, ಆರು; ಅಹಿತ: ವೈರಿ, ಶತ್ರು; ಸುಭಟ: ಪರಾಕ್ರಮಿ; ವೀರ: ಶೂರ; ಶರನಿಧಿ: ಸಮುದ್ರ;

ಪದವಿಂಗಡಣೆ:
ಇತ್ತಲ್+ಅರ್ಜುನನಾ+ ತ್ರಿಗರ್ತರಿಗ್
ಇತ್ತನ್+ಅವಸರವನು +ಕೃತಾಂತನ
ತೆತ್ತಿಗರಿಗ್+ಔತಣವ +ಹೇಳಿಸಿದನು +ಶರೌಘದಲಿ
ಕುತ್ತಿದವು +ಕೂರಂಬು +ದೊರೆಗಳ
ಮುತ್ತಿದವು +ಕೆದರಿದವು +ನಿಮಿಷಕೆ
ಬಿತ್ತಿಸಿದನಂದ್+ಅಹಿತ +ಸುಭಟರ +ವೀರ +ಶರನಿಧಿಯ

ಅಚ್ಚರಿ:
(೧) ಶರೌಘ, ಶರನಿಧಿ – ಪದಗಳ ಬಳಕೆ
(೨) ಸೈನ್ಯದವರು ಸತ್ತರು ಎಂದು ಹೇಳಲು – ಕೃತಾಂತನ ತೆತ್ತಿಗರಿಗೌತಣವ ಹೇಳಿಸಿದನು ಶರೌಘದಲಿ

ಪದ್ಯ ೫೫: ದ್ರೋಣನ ಎದುರು ಯಾರು ಹೋರಾಡಲು ನಿಂತರು?

ಬಿನುಗು ಹಾರುವ ನಿನಗೆ ಭೀಮಾ
ರ್ಜುನರ ಪರಿಯಂತೇಕೆಯಂಬಿನ
ಮೊನೆಯಲುಣಲಿಕ್ಕುವೆನು ರಣಭೂತಕ್ಕೆ ನಿನ್ನೊಡಲ
ಎನುತ ಧೃಷ್ಟದ್ಯುಮ್ನನಿದಿರಾ
ದನು ಶರೌಘದ ಸೋನೆಯಲಿ ಮು
ಮ್ಮೊನೆಯ ರಥಿಕರ ಮುರಿದು ದ್ರೋಣನ ರಥಕೆ ಮಾರಾಂತ (ದ್ರೋಣ ಪರ್ವ, ೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ಎಲವೋ ಬಡ ಬ್ರಾಹ್ಮಣ, ನೀನು ಬಃಈಮಾರ್ಜುನರೊಡನೆ ಹೋರಾಡಬೇಕೇ? ಅಷ್ಟು ಯೋಗ್ಯತೆ ನಿನಗಿದೆಯೇ? ನಿನ್ನ ದೇಹವನ್ನು ಬಾಣಗಳಿಂದ ಕಡಿದು ರಣಭೂತಗಳಿಗೆ ಉಣಿಸುವೆನು, ಎಂದು ಧೃಷ್ಟದ್ಯುಮ್ನನು ದ್ರೋಣನಿಗೆ ಎದುರಾಗಿ ಮುಂದಿದ್ದ ರಥಿಕರನ್ನು ಸೋಲಿಸಿ ದ್ರೋಣನ ರಥಕ್ಕೆದುರಾದನು.

ಅರ್ಥ:
ಬಿನುಗು: ಅಲ್ಪವ್ಯಕ್ತಿ, ದರಿದ್ರ; ಹಾರು: ಬ್ರಾಹ್ಮಣ; ಪರಿ: ರೀತಿ; ಅಂಬು: ಬಾಣ; ಮೊನೆ: ಚೂಪಾದ, ತುದಿ; ಉಣಲು: ತಿನ್ನಲು; ಇಕ್ಕು: ತಿವಿ; ರಣಭೂತ: ಯುದ್ಧಭೂಮಿಯ ದೆವ್ವ; ಒಡಲು: ದೇಹ; ಇದಿರು: ಎದುರು; ಶರ: ಬಾಣ; ಔಘ: ಗುಂಪು; ಸೋನೆ: ಮಳೆ, ವೃಷ್ಟಿ; ಮುಮ್ಮೊನೆ: ಮುಂದಿರುವ; ರಥಿಕ: ರಥಿ; ಮುರಿ: ಸೀಳು; ರಥ: ಬಂಡಿ; ಮಾರಾಂತು: ಎದುರಾಗಿ ನಿಲ್ಲು;

ಪದವಿಂಗಡಣೆ:
ಬಿನುಗು +ಹಾರುವ +ನಿನಗೆ +ಭೀಮಾ
ರ್ಜುನರ +ಪರಿಯಂತೇಕೆ+ಅಂಬಿನ
ಮೊನೆಯಲ್+ಉಣಲಿಕ್ಕುವೆನು +ರಣಭೂತಕ್ಕೆ+ ನಿನ್ನೊಡಲ
ಎನುತ +ಧೃಷ್ಟದ್ಯುಮ್ನನ್+ಇದಿರಾ
ದನು +ಶರೌಘದ +ಸೋನೆಯಲಿ +ಮು
ಮ್ಮೊನೆಯ +ರಥಿಕರ+ ಮುರಿದು+ ದ್ರೋಣನ+ ರಥಕೆ+ ಮಾರಾಂತ

ಅಚ್ಚರಿ:
(೧) ದ್ರೋಣನನ್ನು ಹಂಗಿಸಿದ ಪರಿ – ಬಿನುಗು ಹಾರುವ ನಿನಗೆ ಭೀಮಾರ್ಜುನರ ಪರಿಯಂತೇಕೆ

ಪದ್ಯ ೩೭: ಉತ್ತರನು ಅರ್ಜುನನಿಗೆ ಏನು ಹೇಳಿದ?

ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆ ಶಸ್ತ್ರ ಸೀಮೆಯಲಿ (ವಿರಾಟ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆಯುಧಗಳ ಅಲಗಿನ ಧಾರೆಗಳ ಕಾಂತಿಯ ಗುಚ್ಚಗಳು ಒಂದು ಕಡೆ ಥಳಥಳಿಸಿದರೆ, ಅದನ್ನು ನೋಡಿ ನಗುವಂತೆ ಬಂಗಾರದ ಹಿಡಿಕೆಗಳ ಕಾಂತಿಯು ಝಗಝಗಿಸಿತು. ಉತ್ತರನು ಕಣ್ಮುಚ್ಚಿ ಅರ್ಜುನನಿಗೆ ಕೈಮುಗಿದು ತಂದೆ ನನ್ನನ್ನು ಇಳಿಸಿಕೊಂಡು ಬಿಡು, ನಾನು ಶಸ್ತ್ರಗಳ ಸೀಮೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಹೊರಳಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಧಾರೆ: ಪ್ರವಾಹ; ತಳಪದ: ಕೆಳಗೆ, ಒಂದು ಬದಿ; ಕಾಂತಿ: ಪ್ರಕಾಶ; ಹೊನ್ನು: ಚಿನ್ನ; ಹೊನ್ನಾಯುಗ: ಬಂಗಾರದ ಹಿಡಿಕೆ; ಬಹಳ: ತುಂಬ; ಪ್ರಭೆ: ಕಾಂತಿ; ಶರ: ಬಾಣ; ಶರೌಘ: ಬಾಣಗಳ ಸಮೂಹ; ಶರೌಘಾನಲ: ಬಾಣಗಳ ಸಮೂಹದಿಂದ ಹುಟ್ಟಿದ ಬೆಂಕಿ; ಗಹಗಹಿಸು: ಗಟ್ಟಿಯಾಗಿ ನಗು; ಝಗಝಗಿಸು: ಹೊಳೆ, ಪ್ರಕಾಶಿಸು; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಕೈ: ಹಸ್ತ; ಕೈಮುಗಿ: ನಮಸ್ಕರಿಸು; ಸಾರಥಿ: ಸೂತ; ತೆಗೆದುಕೊ: ಹೊರತರು; ತಂದೆ: ಅಪ್ಪ, ಅಯ್ಯ; ಸಿಲುಕು: ಬಂಧನಕ್ಕೊಳಗಾದುದು; ಶಸ್ತ್ರ: ಆಯುಧ; ಸೀಮೆ: ಎಲ್ಲೆ, ಗಡಿ;

ಪದವಿಂಗಡಣೆ:
ಹೊಗರ+ ಹೊರಳಿಯ +ಹೊಳೆವ +ಬಾಯ್
ಧಾರೆಗಳ+ತಳಪದ+ ಕಾಂತಿ +ಹೊನ್ನಾ
ಯುಗದ +ಬಹಳ +ಪ್ರಭೆ +ಶರೌಘ+ಅನಲನ +ಗಹಗಹಿಸಿ
ಝಗಝಗಿಸೆ+ ಕಣ್ಮುಚ್ಚಿ +ಕೈಗಳ
ಮುಗಿದು +ಸಾರಥಿಗೆಂದನ್+ಎನ್ನನು
ತೆಗೆದುಕೊಳ್ಳೈ +ತಂದೆ +ಸಿಲುಕಿದೆ +ಶಸ್ತ್ರ +ಸೀಮೆಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಗರ ಹೊರಳಿಯ ಹೊಳೆವ
(೨) ಜೋಡಿ ಪದಗಳು – ಗಹಗಹಿಸಿ, ಝಗಝಗಿಸಿ

ಪದ್ಯ ೬೦: ಅರ್ಜುನನು ಶಿವನಿಗೆ ಸಮಜೋಡಿಯೇ?

ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಹಾ ಶರೌಘಕೆ
ಮೇಹುಗಡ ಜೀವನವು ಮೃತ್ಯುಂಜಯನ ಸೀಮೆಯಲಿ
ಆಹ ಮೂದಲೆಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ ಗಡ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ದೇಹ ರಹಿತನಾದ ಶಿವನು ಭುಜ ಯುದ್ಧಕ್ಕೆ ಗುರಿಯೆಂದುಕೊಂಡೆನಲ್ಲವೇ? ಮೃತ್ಯುಂಜಯನು ನನ್ನ ದಿವ್ಯಾಸ್ತ್ರಗಳಿಗೆ ಆಹಾರವೆಂದುಕೊಂಡೆನಲ್ಲಾ? ವೇದಗಳು ಯಾರನ್ನು ಹುಡುಕಿ ಕಾಣವೋ ಅವನನ್ನು ನಾನು ಮೂದಲಿಸಿದೆನಲ್ಲವೇ? ಯುದ್ಧದಲ್ಲಿ ಶಿವನಿಗೆ ನಾನು ಸರಿಸಮಾನನೇ, ಶಿವ ಶಿವಾ ಎಂದು ಅರ್ಜುನನು ಕೊರಗಿದನು.

ಅರ್ಥ:
ಗಾಹು: ಮೋಸ; ಹತ್ತಾಹತ್ತಿ: ಮುಷ್ಟಾಮುಷ್ಟಿ; ಗಡ: ಅಲ್ಲವೆ; ನಿರ್ದೇಹ: ಆಕಾರವಿಲ್ಲದ; ಮಹಾ: ದೊಡ್ಡ, ಶ್ರೇಷ್ಠ; ಶರ: ಬಾಣ; ಔಘ: ಗುಂಪು; ಮೇಹು: ಮೇಯುವ; ಗಡ: ಅಲ್ಲವೇ; ಜೀವನ: ಬಾಳು, ಬದುಕು; ಮೃತ್ಯು: ಸಾವು; ಮೃತ್ಯುಂಜಯ: ಶಿವ; ಸೀಮೆ: ಎಲ್ಲೆ; ಮೂದಲಿಸು: ಹಂಗಿಸು; ನಿಗಮ: ವೇದ, ಶೃತಿ; ವ್ಯೂಹ: ಗುಂಪು; ಕೂಡೆ: ಜೊತೆ; ಹರ: ಶಿವ; ಆಹವ: ಯುದ್ಧ; ಸಮಜೋಳಿ: ಒಂದೇ ರೀತಿಯಾದ ಜೋಡಿ; ಗಡ: ಅಲ್ಲವೇ;

ಪದವಿಂಗಡಣೆ:
ಗಾಹು +ಹತ್ತಾಹತ್ತಿ+ ಗಡ +ನಿ
ರ್ದೇಹ ನೊಡನೆ+ ಮಹಾ +ಶರೌಘಕೆ
ಮೇಹು+ಗಡ+ ಜೀವನವು +ಮೃತ್ಯುಂಜಯನ +ಸೀಮೆಯಲಿ
ಆಹ+ ಮೂದಲೆ+ಗಡ+ ಸುನಿಗಮ
ವ್ಯೂಹದೂರನ+ ಕೂಡೆ+ ಹರನೊಡನ್
ಆಹವಕೆ+ ಸಮಜೋಳಿ +ನಾವ್ +ಗಡ+ ಶಿವ+ ಶಿವಾಯೆಂದ

ಅಚ್ಚರಿ:
(೧) ಗಡ ಪದದ ಬಳಕೆ – ಶರೌಘಕೆ ಮೇಹು ಗಡ, ಆಹ ಮೂದಲೆ, ಹರನೊಡನಾಹವಕೆ ಸಮಜೋಳಿ ನಾವ್ ಗಡ

ಪದ್ಯ ೨೫: ಕರ್ಣನು ಅರ್ಜುನನನ್ನು ಹೇಗೆ ಹಂಗಿಸಿದನು?

ಆತನೆಚ್ಚ ಶರೌಘವನು ಕಡಿ
ದೀತ ನುಡಿದನು ಹೊಳ್ಳುಮಾತಿನ
ಹೋತುದರಿಹಿಗಳಿವರುಪಾಧ್ಯರು ನಾವು ಸೂಳೆಯರು
ಏತಕೀ ಬಳೆಗೈಗೆ ಬಿಲು ಹಿಣಿ
ಲೇತಕೀ ಚೊಲ್ಲೆಹಕೆ ಚಲ್ಲಣ
ವೇತಕೀ ಹೆಣ್ಣುಡಿಗೆಗೆನುತೆಚ್ಚನು ಧನಂಜಯನ (ಕರ್ಣ ಪರ್ವ, ೨೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕರ್ಣನು ಅರ್ಜುನನ ಬಾಣಗಳನ್ನು ಕಡಿದು, ಜೊಳ್ಳುಮಾತಿನ ಯಜ್ಞದೀಕ್ಷಿತನು ನೀನು, ನಾವು ವೇಶ್ಯೆಯರು! ಎಲವೋ ಬಳೆತೊಟ್ಟಿದ ಕೈಯಲ್ಲೇಕೆ ಬಿಲ್ಲು, ಜಡೆಗೆ ಬದಲು ಬತ್ತಳಿಕೆಯೇಕೆ, ಹೆಣ್ಣುಡುಗೆಗೆ ಚಲ್ಲಣವೇಕೆ ಎಂದು ಅರ್ಜುನನನ್ನು ಬಾಣಗಳಿಂದ ಹೊಡೆದನು.

ಅರ್ಥ:
ಎಚ್ಚು: ಬಾಣ ಬಿಡು; ಶರ: ಬಾಣ; ಔಘ: ಗುಂಪು, ಸಮೂಹ; ಕಡಿ: ಸೀಳು; ನುಡಿ: ಮಾತನಾಡು; ಹೊಳ್ಳೂ: ವ್ಯರ್ಥ, ಹುರುಳಿಲ್ಲದುದು; ಉಪಾಧ್ಯ: ಉಪಾಧ್ಯಾಯ, ತಿಳಿದವ, ಪಂಡಿತ; ಸೂಳೆ: ವೇಶ್ಯೆ; ಬಳೆ: ಕೈಗೆ ಹಾಕುವ ಆಭರಣ, ಕಡಗ, ಕಂಕಣ; ಕೈ: ಹಸ್ತ; ಬಿಲು: ಬಿಲ್ಲು; ಹಿಣಿಲು: ಹೆರಳು, ಜಡೆ; ಚೊಲ್ಲೆಯ:ತುರುಬಿನ ಕೊನೆ; ಚಲ್ಲಣ: ಷರಾಯಿ, ತೊಡೆ ಮುಚ್ಚುವ ಬಟ್ಟೆ; ಹೆಣ್ಣು: ಹೆಂಗಸು; ಉಡಿಗೆ: ಬಟ್ಟೆ;

ಪದವಿಂಗಡಣೆ:
ಆತನ್+ಎಚ್ಚ +ಶರೌಘವನು +ಕಡಿದ್
ಈತ +ನುಡಿದನು +ಹೊಳ್ಳು+ಮಾತಿನ
ಹೋತುದ್+ಅರಿಹಿಗಳ್+ಇವವ್+ಉಪಾಧ್ಯರು +ನಾವು +ಸೂಳೆಯರು
ಏತಕೀ+ ಬಳೆ+ಕೈಗೆ+ ಬಿಲು +ಹಿಣಿಲ್
ಏತಕೀ+ ಚೊಲ್ಲೆಹಕೆ+ ಚಲ್ಲಣವ್
ಏತಕೀ +ಹೆಣ್+ಉಡಿಗೆಗ್+ಎನುತ್+ಎಚ್ಚನು +ಧನಂಜಯನ

ಅಚ್ಚರಿ:
(೧) ಏತಕೀ – ೪, ೫,೬ ಸಾಲಿನ ಮೊದಲ ಪದ
(೨) ಹಂಗಿಸುವ ಬಗೆ: ಏತಕೀ ಬಳೆಗೈಗೆ ಬಿಲು; ಹಿಣಿಲೇತಕೀ ಚೊಲ್ಲೆಹಕೆ; ಚಲ್ಲಣ
ವೇತಕೀ ಹೆಣ್ಣುಡಿಗೆಗೆ

ಪದ್ಯ ೨೪: ಕರ್ಣನು ಬೈಯ್ದರೆ ಪ್ರಯೋಜನವಿಲ್ಲವೆಂದು ಶಲ್ಯನು ಏಕೆ ಹೇಳಿದನು?

ಏಸು ಪರಿಯಲಿ ನುಡಿದು ನಮ್ಮಯ
ದೇಶವನು ನೀ ಹಳಿದಡೆಯು ನೀ
ನೇಸು ಪರಿಯಲಿ ಬಯ್ದು ಭಂಗಿಸಿ ನಮ್ಮ ದೂರಿದಡೆ
ಆ ಸಿತಾಶ್ವನ ಬಿಲ್ಲನೊದೆದಾ
ಕಾಶಕವ್ವಳಿಸುವ ಶರೌಘಕೆ
ಮೀಸಲರಿಯಾ ಕರ್ಣ ನಿನ್ನೊಡಲೆಂದನಾ ಶಲ್ಯ (ಕರ್ಣ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಕರ್ಣ ನೀನು ನಮ್ಮ ದೇಶವನ್ನು ಎಷ್ಟೇ ಹಳಿದರೂ, ನಮ್ಮನ್ನು ಬೈದು, ಭಂಗಿಸಿ, ನಿಂದಿಸಿದರೂ, ಅರ್ಜುನನ ಗಾಂಡೀವ ಬಿಲ್ಲಿನಿಂದ ವೇಗವಾಗಿ ಹೊರಟು ಆಕಾಶದಲ್ಲಿ ಸದ್ದು ಮಾಡುತ್ತಾ ಬರುವ ಬಾಣಗಳಿಗೆ ನಿನ್ನ ದೇಹವು ಮೀಸಲಾಗಿರುವುದು ಸುಳ್ಳಲ್ಲ ಎಂದು ಶಲ್ಯನು ನುಡಿದನು.

ಅರ್ಥ:
ಏಸು: ಎಷ್ಟು; ಪರಿ: ರೀತಿ; ನುಡಿ: ಮಾತಾಡು; ದೇಶ: ರಾಷ್ಟ್ರ; ಹಳಿ: ಬಯ್ಯು, ಜರಿ; ಭಂಗಿಸು:ಅಪಮಾನ ಮಾಡು; ದೂರು: ಮೊರೆ, ಅಹವಾಲು; ಸಿತ: ಬಿಳಿ; ಅಶ್ವ: ಕುದುರೆ; ಬಿಲ್ಲು: ಚಾಪ; ಒದೆ: ಹೊಡಿ; ಆಕಾಶ: ಗಗನ; ಅವ್ವಳಿಸು: ಅಪ್ಪಳಿಸು; ಶರ: ಬಾಣ; ಔಘ: ಗುಂಪು, ಸಮೂಹ; ಮೀಸಲು:ಮುಡಿಪು; ಒಡಲು: ದೇಹ;

ಪದವಿಂಗಡಣೆ:
ಏಸು +ಪರಿಯಲಿ +ನುಡಿದು +ನಮ್ಮಯ
ದೇಶವನು +ನೀ +ಹಳಿದಡೆಯು +ನೀನ್
ಏಸು +ಪರಿಯಲಿ +ಬಯ್ದು +ಭಂಗಿಸಿ +ನಮ್ಮ +ದೂರಿದಡೆ
ಆ +ಸಿತಾಶ್ವನ +ಬಿಲ್ಲನೊದೆದ್
ಆಕಾಶಕ್+ಅವ್ವಳಿಸುವ +ಶರೌಘಕೆ
ಮೀಸಲರಿಯಾ +ಕರ್ಣ +ನಿನ್ನೊಡಲೆಂದನಾ +ಶಲ್ಯ

ಅಚ್ಚರಿ:
(೧) ಅರ್ಜುನನಿಂದ ಬರುವ ಬಾಣದ ಪರಿ – ಆ ಸಿತಾಶ್ವನ ಬಿಲ್ಲನೊದೆದಾ
ಕಾಶಕವ್ವಳಿಸುವ ಶರೌಘಕೆ ಮೀಸಲರಿಯಾ ಕರ್ಣ ನಿನ್ನೊಡಲ್
(೨) ಅರ್ಜುನನನ್ನು ಸಿತಾಶ್ವ ಎಂದು ಕರೆದಿರುವುದು
(೩) ಹಳಿ, ಬಯುದ್, ಭಂಗಿಸು, ದೂರು – ಪದಗಳ ಬಳಕೆ