ಪದ್ಯ ೪೭: ಕುದುರೆಗಳನ್ನು ಹೇಗೆ ಸಂತೈಸಿದರು?

ಸೂತನಿಳಿದನು ಮುನ್ನ ರಥವನು
ಭೂತಳಾಧಿಪನಿಳಿದನಶ್ವ
ವ್ರಾತವನು ಕಡಿಯಣದ ನೇಣಲಿ ತೆಗೆದು ಬಂಧಿಸಿದ
ವಾತಜನ ಸಾತ್ಯಕಿಯ ಯಮಳರ
ಸೂತರಿಳಿದರು ಮುನ್ನ ತುರಗವ
ನಾತಗಳು ಸಂತೈಸಿದರು ಸಂಗರಪರಿಶ್ರಮವ (ಗದಾ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಸೂತನು ರಥವನ್ನಿಳಿದು ಕುದುರೆಗಳನ್ನು ಬಿಚ್ಚಿ ಲಾಯದಲ್ಲಿ ಕಟ್ಟಿದನು. ಸೂತನ ಬಳಿಕ ಧರ್ಮಜನೂ ಇಳಿದನು. ಇದರಂತೆ ಭೀಮ, ನಕುಲ ಸಹದೇವರು ಸಾತ್ಯಕಿ ಇವರ ಸೂತರಿಳಿದ ಮೇಲೆ ಅವರೂ ಇಳಿದರು. ಕುದುರೆಗಳಿಗಾದ ಸಂಗ್ರಾಮ ಆಯಾಸಕ್ಕೆ ಉಪಶಮನ ಮಾಡಿ ಸಂತೈಸಿದರು.

ಅರ್ಥ:
ಸೂತ: ಸಾರಥಿ; ಇಳಿ: ಕೆಳಕ್ಕೆ ಬಂದು; ಮುನ್ನ: ಮೊದಲು; ರಥ: ಬಂಡಿ; ಭೂತಳ: ಭೂಮಿ; ಅಧಿಪ: ರಾಜ; ಅಶ್ವ: ಕುದುರೆ; ವ್ರಾತ: ಗುಂಪು; ಕಡಿ: ಹತ್ತಿ ನೂಲಿನ ನೀಳವಾದ ಸುರುಳಿ, ಲಡಿ; ನೇಣು: ಹಗ್ಗ, ಹುರಿ; ತೆಗೆ: ಈಚೆಗೆ ತರು, ಹೊರತರು; ಬಂಧಿಸು: ಜೋಡಿಸು; ವಾತಜ: ವಾಯುಪುತ್ರ (ಭೀಮ); ಯಮಳ: ಅವಳಿ ಮಕ್ಕಳು; ಸಂತೈಸು: ಸಮಾಧಾನ ಪಡಿಸು; ಸಂಗರ: ಯುದ್ಧ; ಪರಿಶ್ರಮ: ಆಯಾಸ;

ಪದವಿಂಗಡಣೆ:
ಸೂತನ್+ಇಳಿದನು +ಮುನ್ನ+ ರಥವನು
ಭೂತಳಾಧಿಪನ್+ಇಳಿದನ್+ಅಶ್ವ
ವ್ರಾತವನು +ಕಡಿಯಣದ +ನೇಣಲಿ +ತೆಗೆದು +ಬಂಧಿಸಿದ
ವಾತಜನ +ಸಾತ್ಯಕಿಯ +ಯಮಳರ
ಸೂತರ್+ಇಳಿದರು +ಮುನ್ನ +ತುರಗವ
ನಾತಗಳು+ ಸಂತೈಸಿದರು +ಸಂಗರ+ಪರಿಶ್ರಮವ

ಅಚ್ಚರಿ:
(೧) ಅಶ್ವ, ತುರಗ – ಸಮಾನಾರ್ಥಕ ಪದ
(೨) ಭೀಮನನ್ನು ವಾತಜ ಎಂದು ಕರೆದಿರುವುದು
(೩) ವಾತ, ವ್ರಾತ – ಪದಗಳ ಬಳಕೆ

ಪದ್ಯ ೪೨: ಅರ್ಜುನನು ಕೃಷ್ಣನಿಗೆ ಭೀಮನ ಬಗ್ಗೆ ಏನು ಹೇಳಿದ?

ಅರಸ ಕೇಳೈ ಬಿದ್ದ ಭೀಮನ
ಹೊರಗೆ ಬಂದರ್ಜುನನು ಮೋರೆಗೆ
ಬೆರಳನೊಡ್ಡಿ ಸಮೀರನಂದನನುಸಾರನಾರೈದು
ಮರಳಿದನು ಮುರಹರನನೆಕ್ಕಟಿ
ಗರೆದು ಸಪ್ರಾಣನು ಗದಾನಿ
ರ್ಭರಪರಿಶ್ರಮ ಭೀಮ ಬಳಲಿದನೆಂದನಾ ಪಾರ್ಥ (ಗದಾ ಪರ್ವ, ೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ರಾಜ ಕೇಳು, ನೆಲದ ಮೇಲೆ ಬಿದ್ದಿದ್ದ ಭೀಮನ ಬಳಿಗೆ ಅರ್ಜುನನು ಬಂದು, ಮೂಗಿಗೆ ಬೆರಳನ್ನಿಟ್ತುನೋಡಿ, ಕೃಷ್ಣನನ್ನು ಪಕ್ಕಕ್ಕೆ ಕರೆದು ಭೀಮನಿಗೆ ಪ್ರಾಣವಿದೆ, ಯುದ್ಧದ ಬಳಲಿಕೆಯಿಂದ ಮೂರ್ಛಿತನಾಗಿದ್ದಾನೆ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಿದ್ದ: ಎರಗು; ಹೊರಗೆ: ಆಚೆಗೆ; ಮೋರೆ: ಮುಖ; ಬೆರಳು: ಅಂಗುಲಿ; ಒಡ್ಡು: ನೀಡು; ಸಮೀರ: ವಾಯು; ನಂದನ: ಮಗ; ಉಸುರು: ಜೀವ; ಮರಳು: ಹಿಂದಿರುಗು; ಮುರಹರ: ಕೃಷ್ಣ; ಎಕ್ಕಟಿ: ಏಕಾಕಿ, ಗುಟ್ಟಾಗಿ; ಕರೆದು: ಬರೆಮಾಡು; ಪ್ರಾಣ: ಜೀವ; ನಿರ್ಭರ: ವೇಗ, ರಭಸ; ಪರಿಶ್ರಮ: ಬಳಲಿಕೆ, ಆಯಾಸ; ಬಳಲು: ಆಯಾಸಗೊಳ್ಳು;

ಪದವಿಂಗಡಣೆ:
ಅರಸ+ ಕೇಳೈ +ಬಿದ್ದ+ ಭೀಮನ
ಹೊರಗೆ +ಬಂದ್+ಅರ್ಜುನನು +ಮೋರೆಗೆ
ಬೆರಳನೊಡ್ಡಿ+ ಸಮೀರನಂದನನ್+ಉಸಾರನಾರೈದು
ಮರಳಿದನು +ಮುರಹರನನ್+ಎಕ್ಕಟಿ
ಕರೆದು +ಸಪ್ರಾಣನು +ಗದಾ+ನಿ
ರ್ಭರ+ಪರಿಶ್ರಮ+ ಭೀಮ +ಬಳಲಿದನೆಂದನಾ +ಪಾರ್ಥ

ಅಚ್ಚರಿ:
(೧) ಹೊರೆಗೆ, ಮೋರೆಗೆ – ಪ್ರಾಸ ಪದಗಳು, ೨ ಸಾಲು
(೨) ಭೀಮನನ್ನು ಸಮೀರನಂದನ ಎಂದು ಕರೆದ ಪರಿ

ಪದ್ಯ ೨: ಕೃಷ್ಣನು ಅರ್ಜುನನೊಡನೆ ಎಲ್ಲಿಗೆ ಬಂದನು?

ಅಳಿಯನಳಿವನು ಹೇಳಬಾರದು
ತಿಳಿಯಲಿದನಿನ್ನೆನುತ ಚಿಂತಿಸಿ
ನಳಿನಲೋಚನ ಬರುತ ಕಂಡನು ವರ ಸರೋವರವ
ಇಳಿದು ರಥವನು ರಣ ಪರಿಶ್ರಮ
ಗಳೆವೆನೆನುತವೆ ಪಾರ್ಥ ಸಹಿತಾ
ಕೊಳನ ಹೊಕ್ಕನು ಜಗದುದರ ಲೀಲಾವತಾರಕನು (ದ್ರೋಣ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಮರಣವನ್ನು ಅರ್ಜುನನಿಗೆ ನಾನು ಹೇಳಬಾರದು. ಅವನೇ ತಿಳಿದುಕೊಳ್ಳಲಿ ಎಂದು ಯೋಚಿಸಿ ರಥವನ್ನು ಪಾಳೆಯದ ಕಡೆಗೆ ನಡೆಸುತ್ತಾ, ಶ್ರೀಕೃಷ್ಣನು ಸರೋವರವೊಂದನ್ನು ಕಂಡು ಆಯಾಸ ಪರಿಹಾರಕ್ಕಾಗಿ ಅರ್ಜುನನೊಡನೆ ಸರೋವರವನ್ನು ಹೊಕ್ಕನು.

ಅರ್ಥ:
ಅಳಿಯ: ಸೋದರಿಯ ಮಗ; ಅಳಿ: ನಾಶ; ಹೇಳು: ತಿಳಿಸು; ತಿಳಿ: ಅರ್ಥೈಸು; ಚಿಂತಿಸು: ಯೋಚಿಸು; ನಳಿನಲೋಚನ: ಕಮಲದಂತ ಕಣ್ಣುಳ್ಳವ; ಬರುತ: ಆಗಮಿಸು; ಕಂಡು: ನೋಡು; ವರ: ಶ್ರೇಷ್ಠ; ಸರೋವರ: ನದಿ, ಸರಸಿ; ಇಳಿ: ಕೆಳಗೆ ಬಾಗು; ರಥ: ಬಂಡಿ; ರಣ: ಯುದ್ಧ; ಪರಿಶ್ರಮ: ಆಯಾಸ; ಕಳೆ: ನಿವಾರಿಸು; ಸಹಿತ: ಜೊತೆ; ಕೊಳ: ಸರೋವರ; ಹೊಕ್ಕು: ಸೇರು; ಜಗದುದರ: ಜಗತ್ತನ್ನೆಲ್ಲ ತನ್ನ ಹೊಟ್ಟೆ ಯಲ್ಲಿ ಇಟ್ಟು ಕೊಂಡವನು, ಕೃಷ್ಣ; ಲೀಲಾ: ಆನಂದ, ಸಂತೋಷ, ಕ್ರೀಡೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು;

ಪದವಿಂಗಡಣೆ:
ಅಳಿಯನ್+ಅಳಿವನು +ಹೇಳಬಾರದು
ತಿಳಿಯಲಿದನ್+ಇನ್ನೆನುತ +ಚಿಂತಿಸಿ
ನಳಿನಲೋಚನ +ಬರುತ +ಕಂಡನು +ವರ +ಸರೋವರವ
ಇಳಿದು +ರಥವನು +ರಣ +ಪರಿಶ್ರಮ
ಕಳೆವೆನ್+ಎನುತವೆ +ಪಾರ್ಥ +ಸಹಿತ+ಆ
ಕೊಳನ +ಹೊಕ್ಕನು +ಜಗದುದರ +ಲೀಲಾವತಾರಕನು

ಅಚ್ಚರಿ:
(೧) ಕೃಷ್ಣನನ್ನು ಜಗದುದರ ಲೀಲಾವತಾರಕ, ನಳಿನಲೋಚನ ಎಂದು ಕರೆದಿರುವುದು
(೨) ಅಳಿ ಪದದ ಬಳಕೆ – ಅಳಿಯನಳಿವನು
(೩) ಕೊಳ, ಸರೋವರ – ಸಾಮ್ಯಾರ್ಥ ಪದ