ಪದ್ಯ ೩೭: ಮಕ್ಕಳು ಕೂಪದ ದಡದಲ್ಲೇಕೆ ನಿಂತರು?

ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಥಿರನೃಪನ ಹರಳುಂ
ಗುರು ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು
ತಿರೆ ಮಗಂಗೆ ಮುನಿಂದ್ರನೆಂದನು ಬೇಗೆ ತೆಗೆಯೆಂದು (ಆದಿ ಪರ್ವ, ೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆ ಬಾಲಕರ ಗುಂಪಿನೊಡನೆ ಸೇರಿಕೊಂಡು ನೋಡುತ್ತಿರುವಾಗ ಯುಧಿಷ್ಠಿರನ ವಜ್ರದುಂಗುರವು ಬೆರಳಿನಿಂದ ಜಾರಿ ಆಳವಾದ ಗುಂಡಿಯಲ್ಲಿ ಬಿದ್ದಿತು. ನೂರಾರು ಹುಡುಗರು ಗುಂಡಿಯ ದಡದಲ್ಲಿ ನಿಂತು ಕೆಳಕ್ಕೆ ನೋಡಿ ಉಂಗುರವನ್ನು ಮೇಲಕ್ಕೆ ತರಲು ಸಾಧ್ಯವಿಲ್ಲವೆಂದು ಮಾತನಾದುತ್ತಿರಲು, ದ್ರೋಣನು ಅದನ್ನುಬ್ ಏಗೆ ತೆಗೆಯೆಂದು ತನ್ನ ಮಗ ಅಶ್ವತ್ಥಾಮನಿಗೆ ಹೇಳಿದನು.

ಅರ್ಥ:
ಬೆರಸು: ಕೂಡಿಸು; ನೆರವಿ: ಗುಂಪು, ಸಮೂಹ; ನೋಡು: ವೀಕ್ಷಿಸು; ನೃಪ: ರಾಜ; ಹರಳು: ಬೆಲೆಬಾಳುವ ರತ್ನ; ಉಂಗುರ: ಬೆರಳಿಗೆ ಹಾಕುವ ಆಭರನ; ವಿಘಾತ: ಕೇಡು, ಹಾನಿ, ಬಿಡುವುದು; ಬಿದ್ದು: ಜಾರು; ಅಗಾಧ: ದೊಡ್ಡ; ಕೂಪ: ಬಾವಿ; ನೆರೆ: ಸೇರು; ತಡಿ: ದಡ; ನಿಂದು: ನಿಲ್ಲು; ನೂರು: ಶತ; ನಿರೀಕ್ಷಿಸಿ: ಕಾಯುವುದು; ಸಾಧ್ಯ: ಮಾಡಬೇಕಾದ; ಮಗ: ಪುತ್ರ; ಮುನಿ: ಋಷಿ; ಬೇಗ: ಶೀಘ್ರ; ತೆಗೆ: ಹೊರತರು;

ಪದವಿಂಗಡಣೆ:
ಬೆರಸಿದನು +ನೆರವಿಯನು +ನೋಡು
ತ್ತಿರೆ+ ಯುಧಿಷ್ಠಿರ+ನೃಪನ +ಹರಳುಂ
ಗುರು +ವಿಘಾತಿಯೊಳುಗಿದು+ ಬಿದ್ದುದ್+ ಅಗಾಧ +ಕೂಪದಲಿ
ನೆರೆದು +ತಡಿಯಲಿ +ನಿಂದು +ನೂರ್+ಅರು
ವರು +ನಿರೀಕ್ಷಿಸಿ+ ಸಾಧ್ಯವಲ್ಲೆನು
ತಿರೆ +ಮಗಂಗೆ +ಮುನೀಂದ್ರನ್+ಎಂದನು +ಬೇಗೆ +ತೆಗೆಯೆಂದು

ಅಚ್ಚರಿ:
(೧) ನೂರರುವರು – ನೂರ ಆರು ಮಕ್ಕಳು ಎಂದು ಹೇಳಲು ಬಳಸಿದ ಪದ

ಪದ್ಯ ೪೩: ಶ್ರೀಕೃಷ್ಣನು ಪಾಂಡವ ಸೇನೆಗೆ ಯಾವ ಅಪ್ಪಣೆಯನ್ನು ನೀಡಿದನು?

ಗರುವ ಸುಭಟರು ಘಾಸಿಯಾದಿರಿ
ತುರಗ ಗಜ ಬಳಲಿದವು ಸೂರ್ಯನ
ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ
ತ್ವರಿತದಲಿ ಪಾಂಚಾಲ ಸೃಂಜಯ
ಧರಣಿಪರು ನೀವ್ ಹೋಗಿ ನಿದ್ರೆಯೊ
ಳಿರುಳ ನೂಕುವುದೆಂದು ನುಡಿದನು ದೈತ್ಯರಿಪು ನಗುತ (ಗದಾ ಪರ್ವ, ೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅಲ್ಲಿ ಸೇರಿದ್ದ ಪಾಂಡವಸೇನೆಗೆ, ವೀರರಾದ ಸುಭಟರು ಯುದ್ಧದಲ್ಲಿ ನೊಂದು ಬಳಲಿರುವಿರಿ. ಸೂರ್ಯನ ಕುದುರೆಗಳು ಪಶ್ಚಿಮ ಬೆಟ್ಟದ ತಪ್ಪಲಲ್ಲಿ ನಿಂತಿವೆ. ಪಾಂಚಾಲರೂ ಸೃಂಜಯರೂ ನಿಮ್ಮ ಸೇನೆಯೊಂದಿಗೆ ಪಾಳೆಯಕ್ಕೆ ಹೋಗಿ ನಿದ್ರಿಸಿರಿ ಎಂದು ಅಪ್ಪಣೆಯನ್ನು ನೀಡಿದನು.

ಅರ್ಥ:
ಗರುವ: ಹಿರಿಯ, ಶ್ರೇಷ್ಠ; ಸುಭಟ: ಪರಾಕ್ರಮಿ; ಘಾಸಿ: ದಣಿವು, ತೊಂದರೆ; ತುರಗ: ಕುದುರೆ; ಗಜ: ಆನೆ; ಬಳಲು: ಆಯಾಸಗೊಳ್ಳು; ಸೂರ್ಯ: ರವಿ; ಬಿಡು: ತೆರಳು; ಅದ್ರಿ: ಬೆಟ್ಟ; ತಡಿ: ದಡ, ತೀರ; ತಪ್ಪಲು: ಬೆಟ್ಟದ ಪಕ್ಕದ ಪ್ರದೇಶ; ತ್ವರಿತ: ಬೇಗ; ಧರಣಿಪ: ರಾಜ; ಹೋಗು: ತೆರಳು; ನಿದ್ರೆ: ಶಯನ; ಇರುಳು: ರಾತ್ರಿ; ನೂಕು: ತಳ್ಳು; ನುಡಿ: ಮಾತಾಡು; ದೈತ್ಯರಿಪು: ರಾಕ್ಷಸರ ವೈರಿ (ಕೃಷ್ಣ); ನಗು: ಹರ್ಷ;

ಪದವಿಂಗಡಣೆ:
ಗರುವ +ಸುಭಟರು +ಘಾಸಿಯಾದಿರಿ
ತುರಗ+ ಗಜ +ಬಳಲಿದವು +ಸೂರ್ಯನ
ತುರಗ +ಬಿಡುತದೆ +ಪಶ್ಚಿಮಾದ್ರಿಯ +ತಡಿಯ +ತಪ್ಪಲಲಿ
ತ್ವರಿತದಲಿ +ಪಾಂಚಾಲ +ಸೃಂಜಯ
ಧರಣಿಪರು +ನೀವ್ +ಹೋಗಿ +ನಿದ್ರೆಯೊಳ್
ಇರುಳ +ನೂಕುವುದೆಂದು+ ನುಡಿದನು +ದೈತ್ಯರಿಪು +ನಗುತ

ಅಚ್ಚರಿ:
(೧) ತುರಗ – ೨, ೩ ಸಾಲಿನ ಮೊದಲ ಪದ
(೨) ಸಂಜೆಯಾಯಿತು ಎಂದು ಹೇಳಲು – ಸೂರ್ಯನ ತುರಗ ಬಿಡುತದೆ ಪಶ್ಚಿಮಾದ್ರಿಯ ತಡಿಯ ತಪ್ಪಲಲಿ

ಪದ್ಯ ೩೦: ಕೃಪ ಅಶ್ವತ್ಥಾಮರು ಯಾರ ಹೆಸರನ್ನು ಕರೆದರು?

ಅರಸ ಕೇಳ್ ಕೃಪ ಗುರುಜ ಕೃತವ
ರ್ಮರು ರಥಾಶ್ವಂಗಳನು ದೂರದ
ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ
ತರುಲತೆಗಳಿರುಬಿನಲಿ ಕಂಜಾ
ಕರದ ತಡಿಯಲಿ ನಿಂದು ಮೆಲ್ಲನೆ
ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ (ಗದಾ ಪರ್ವ, ೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಕೃಪ, ಅಶ್ವತ್ಥಾಮ, ಕೃತವರ್ಮರು ತಮ್ಮ ರಥ ಕುದುರೆಗಳನ್ನು ದೂರದಲ್ಲಿ ನಿಲ್ಲಿಸಿ, ತಲೆ ಮುಸುಕು ಹಾಕಿಕೊಂಡು ಸರೋವರದ ದಡಕ್ಕೆ ಬಂದು, ಮರಬಳ್ಳಿಗಳ ನಡುವೆ ನಿಂತು ಅರಸನನ್ನು ಕರೆದು ತಮ್ಮ ಹೆಸರುಗಳನ್ನು ಹೇಳಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಗುರುಜ: ಅಶ್ವತ್ಥಾಮ; ಅಶ್ವ: ಕುದುರೆ; ದೂರ: ಅಂತರ; ತಲೆ: ಶಿರ; ಮುಸುಕು: ಹೊದಿಕೆ; ಯೋನಿ; ಕೊಳ: ಸರೋವರ; ತಡಿ: ದಡ; ತರು: ಮರ, ವೃಕ್ಷ; ಲತೆ: ಬಳ್ಳಿ; ಇರುಬು: ಇಕ್ಕಟ್ಟು; ಕಂಜ: ತಾವರೆ; ನಿಂದು: ನಿಲ್ಲು; ಮೆಲ್ಲನೆ: ನಿಧಾನ; ಕೇಳು: ಆಲಿಸು; ಹೆಸರು: ನಾಮ;

ಪದವಿಂಗಡಣೆ:
ಅರಸ +ಕೇಳ್ +ಕೃಪ +ಗುರುಜ +ಕೃತವ
ರ್ಮರು+ ರಥ+ಅಶ್ವಂಗಳನು +ದೂರದಲ್
ಇರಿಸಿ +ತಲೆ+ಮುಸುಕಿನಲಿ +ಬಂದರು +ಕೊಳನ +ತಡಿಗಾಗಿ
ತರು+ಲತೆಗಳ್+ಇರುಬಿನಲಿ+ ಕಂಜಾ
ಕರದ +ತಡಿಯಲಿ +ನಿಂದು +ಮೆಲ್ಲನೆ
ಕರೆದು +ಕೇಳಿಸಿ +ಹೇಳಿದರು+ ತಂತಮ್ಮ +ಹೆಸರುಗಳ

ಅಚ್ಚರಿ:
(೧) ಕೇಳಿ, ಹೇಳಿ – ಪ್ರಾಸ ಪದ
(೨) ಗುಟ್ಟಾಗಿ ಎಂದು ಹೇಳುವ ಪರಿ – ರಥಾಶ್ವಂಗಳನು ದೂರದಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ

ಪದ್ಯ ೯: ಸಂಜಯನು ಎಲ್ಲಿಗೆ ಹಿಂದಿರುಗಿದನು?

ಅಳಲದಿರಿ ಗಜಪುರಿಗೆ ಸತಿಯರ
ಕಳುಹುವೆನು ನೀವವನಿಪಾಲನ
ತಿಳುಹಲಾಪಡೆ ಸಂಧಿಗೊಡಬಡಿಸುವದು ಕುರುಪತಿಯ
ಕೊಳನ ತಡಿಯಲಿ ಕಾಣದಂತಿರೆ
ಬಳಸಿ ನೀವೆಂದವರನತ್ತಲು
ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ (ಗದಾ ಪರ್ವ, ೪ ಸಂಧಿ, ೯ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ಅಶ್ವತ್ಥಾಮ ನೀವು ದುಃಖಿಸಬೇಡಿ, ಸ್ತ್ರೀಯರನ್ನು ಅರಮನೆಗೆ ಕಳುಹಿಸುವೆನು. ಕೊಳದ ಸುತ್ತಲೂ ಯಾರಿಗೂ ಕಾಣದಂತೆ ಕಾದುಕೊಂಡಿರಿ, ಸಾಧ್ಯವಾದರೆ ಕೌರವನನ್ನು ಸಂಧಿಗೆ ಒಪ್ಪಿಸಿರಿ ಎಂದು ಸಂಜಯನು ತಿಳಿಸಿ ಅವರನ್ನು ಬೀಳ್ಕೊಟ್ಟು ಹಸ್ತಿನಾಪುರಕ್ಕೆ ತೆರಳಿ ರಾಜನ ಅರಮನೆಯನ್ನು ಸೇರಿದನು.

ಅರ್ಥ:
ಅಳಲು: ದುಃಖಿಸು; ಗಜಪುರಿ: ಹಸ್ತಿನಾಪುರ; ಸತಿ: ಹೆಂಡರಿ, ಸ್ತ್ರಿ; ಕಳುಹು: ಬೀಳ್ಕೊಡು; ಅವನಿಪಾಲ: ರಾಜ; ತಿಳುಹು: ಹೇಳು; ಸಂಧಿ: ಸೇರಿಕೆ, ಸಂಯೋಗ; ಒಡಬಡಿಸು: ಹೊಂದಿಸು; ಕೊಳ: ಸರಸಿ; ತಡಿ: ದಡ; ಕಾಣು: ತೋರು; ಬಳಸು: ಆವರಿಸುವಿಕೆ, ಸುತ್ತುವರಿಯುವಿಕೆ; ಹೊಕ್ಕು: ಸೇರು; ನೃಪ: ರಾಜ; ಪಾಳೆಯ: ಬಿಡಾರ;

ಪದವಿಂಗಡಣೆ:
ಅಳಲದಿರಿ +ಗಜಪುರಿಗೆ +ಸತಿಯರ
ಕಳುಹುವೆನು +ನೀವ್+ಅವನಿಪಾಲನ
ತಿಳುಹಲಾಪಡೆ +ಸಂಧಿಗ್+ಒಡಬಡಿಸುವದು +ಕುರುಪತಿಯ
ಕೊಳನ +ತಡಿಯಲಿ +ಕಾಣದಂತಿರೆ
ಬಳಸಿ+ ನೀವೆಂದ್+ಅವರನ್+ಅತ್ತಲು
ಕಳುಹಿ +ಸಂಜಯ +ಬಂದು + ಹೊಕ್ಕನು +ನೃಪನ +ಪಾಳೆಯವ

ಅಚ್ಚರಿ:
(೧) ಅವನಿಪಾಲ, ಕುರುಪತಿ – ಕೌರವನನ್ನು ಕರೆದ ಪರಿ
(೨) ಅವನಿಪಾಲ, ನೃಪ – ಸಮಾನಾರ್ಥಕ ಪದ

ಪದ್ಯ ೩೯: ದುರ್ಯೋಧನನು ಸಂಜಯನಿಗೆ ಏನು ತಿಳಿಸಲು ಹೇಳಿದನು?

ಬಂದು ತಡಿಯಲಿ ಸಂಜಯನ ಕರೆ
ದೆಂದನೀ ಸರಸಿಯಲಿ ತಾನಿಹೆ
ನಿಂದಿನೀ ದಿವಸವನು ಕಳೆವೆನು ಕೊಳನ ಮಧ್ಯದಲಿ
ಮುಂದೆ ಪಾಂಡವರೈವರನು ಗೆಲಿ
ದಂದು ಹೊಗುವೆನು ಗಜಪುರವನಿಂ
ತೆಂದು ಜನನಿಗೆ ಜನಕ ವಿದುರರಿಗರುಹು ನೀನೆಂದ (ಗದಾ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸರೋವರದ ದಡಕ್ಕೆ ಬಂದು, ದುರ್ಯೋಧನನು ಸಂಜಯನಿಗೆ, ಈ ಸರೋವರದಲ್ಲಿ ಮುಳುಗಿ ಈ ಒಂದು ದಿವಸವನ್ನು ಕಳೆಯುತ್ತೇನೆ. ಮುಂದೆ ಪಾಂಡವರನ್ನು ಗೆದ್ದಂದು ಹಸ್ತಿನಾಪುರಕ್ಕೆ ಬರುತ್ತೇನೆಂದು ನನ್ನ ತಾಯಿ, ತಂದೆ ಮತ್ತು ವಿದುರರಿಗೆ ತಿಳಿಸು ಎಂದು ಹೇಳಿದನು.

ಅರ್ಥ:
ಬಂದು: ಆಗಮಿಸು; ತಡಿ: ದಡ; ಕರೆ: ಬರೆಮಾಡು; ಸರಸಿ: ಸರೋವರ; ಇಹೆ: ಇರುವೆ; ದಿವಸ: ದಿನ; ಕಳೆ: ಹೋಗಲಾಡಿಸು; ಕೊಳ: ಸರೋವರ; ಮಧ್ಯ: ನಡುವೆ; ಮುಂದೆ: ಭವಿಷ್ಯ; ಗೆಲಿದು: ಜಯಿಸು; ಹೊಗು: ತೆರಳು; ಪುರ: ಊರು; ಜನನಿ: ತಾಯಿ; ಜನಕ: ತಂದೆ; ಅರುಹು: ಹೇಳು;

ಪದವಿಂಗಡಣೆ:
ಬಂದು +ತಡಿಯಲಿ +ಸಂಜಯನ +ಕರೆದ್
ಎಂದನ್+ಈ+ ಸರಸಿಯಲಿ +ತಾನಿಹೆನ್
ಇಂದಿನ್+ಈ+ ದಿವಸವನು +ಕಳೆವೆನು+ ಕೊಳನ +ಮಧ್ಯದಲಿ
ಮುಂದೆ +ಪಾಂಡವರ್+ಐವರನು +ಗೆಲಿ
ದಂದು +ಹೊಗುವೆನು +ಗಜಪುರವನ್
ಇಂತೆಂದು +ಜನನಿಗೆ +ಜನಕ +ವಿದುರರಿಗ್+ಅರುಹು +ನೀನೆಂದ

ಅಚ್ಚರಿ:
(೧) ಸರಸಿ, ಕೊಳ – ಸಮಾನಾರ್ಥಕ ಪದ
(೨) ಜೋಡಿ ಪದಗಳು – ಕಳೆವೆನು ಕೊಳನ, ಜನನಿಗೆ ಜನಕ, ಮಧ್ಯದಲಿ ಮುಂದೆ

ಪದ್ಯ ೫೭: ರಕ್ತನದಿಗಳು ಎಲ್ಲಿ ಹರೆದವು?

ನೊರೆ ರಕುತ ಸುಳಿ ಮಸಗಿ ಮಿದುಳಿನ
ಹೊರಳಿಗಳೆದುಬ್ಬಣದ ನೆಣ ವಸೆ
ದೊರಳೆಗಳ ಮೆದಕುಗಳ ಮೂಳೆಯ ಬಸಿವ ಬಲು ಜಿಗಿಯ
ಕರುಳ ಬಂಬಲು ಖಂಡದಿಂಡೆಯ
ತುರುಗಿದೆಲುವಿನ ತಳಿತ ಚರ್ಮದ
ಶಿರದ ತಡಿಗಳಲಡಸಿ ಹರಿದುದು ವೈರಿಸೇನೆಯಲಿ (ದ್ರೋಣ ಪರ್ವ, ೨ ಸಂಧಿ, ೫೭ ಪದ್ಯ)

ತಾತ್ಪರ್ಯ:
ನೊರೆ ರಕ್ತದ ಪ್ರವಾಹವು ಹರಿದು ಅಲ್ಲಲ್ಲಿ ಸುಳಿಗಳಾದವು. ಮಿದುಳುಗಳ ಹೊರೆ, ಉಬ್ಬಣಗಳು, ನೆಣವಸೆಗಳ ತೊರಳೆಗಳು, ಮೂಳೆಗಳಲ್ಲಿ ಬಸಿಯುವ ಅಂಟು, ಕರುಳುಗಳ ರಾಶಿ, ಮಾಂಸ ಎಲುಬುಗಳ ರಾಶಿಯ ದಡಗಳ ನಡುವೆ ರಕ್ತ ನದಿಗಳು ಹರಿದವು.

ಅರ್ಥ:
ನೊರೆ: ಬುರುಗು, ಫೇನ; ರಕುತ: ನೆತ್ತರು; ಸುಳಿ: ಗುಂಡಾಗಿ ಸುತ್ತು, ಚಕ್ರಾಕಾರವಾಗಿ ತಿರುಗು; ಮಸಗು: ಹರಡು; ಕೆರಳು; ಮಿದುಳು: ಮಸ್ತಿಷ್ಕ; ಹೊರಳು: ತಿರುವು, ಬಾಗು; ಉಬ್ಬಣ: ಅಧಿಕ; ನೆಣ: ಕೊಬ್ಬು, ಮೇದಸ್ಸು; ತೊರಳೆ: ಗುಲ್ಮ, ಪ್ಲೀಹ; ಮೆದೆ: ಗುಡ್ಡೆ ಹಾಕು; ಮೂಳೆ: ಎಲುಬು; ಬಸಿ: ಒಸರು, ಸ್ರವಿಸು; ಬಲು: ಬಹಳ; ಜಿಗಿ: ಅಂಟು, ಜಿಗುಟು; ಕರುಳು: ಪಚನಾಂಗ; ಬಂಬಲು: ಗುಂಪು; ಖಂಡ:ತುಂಡು, ಚೂರು; ತುರುಗು: ಸಂದಣಿ, ದಟ್ಟಣೆ; ಎಲುವು: ಮೂಳೆ; ತಳಿತ: ಚಿಗುರಿದ; ಚರ್ಮ: ತೊಗಲು; ಶಿರ: ತಲೆ; ತಡಿ: ತೇವ, ಒದ್ದೆ; ಅಡಸು: ಬಿಗಿಯಾಗಿ ಒತ್ತು; ಹರಿ: ಸೀಳು; ವೈರಿ: ಶತ್ರು; ಸೇನೆ: ಸೈನ್ಯ;

ಪದವಿಂಗಡಣೆ:
ನೊರೆ +ರಕುತ +ಸುಳಿ +ಮಸಗಿ +ಮಿದುಳಿನ
ಹೊರಳಿಗಳೆದ್+ಉಬ್ಬಣದ +ನೆಣವಸೆ
ತೊರಳೆಗಳ +ಮೆದಕುಗಳ+ ಮೂಳೆಯ +ಬಸಿವ +ಬಲು +ಜಿಗಿಯ
ಕರುಳ+ ಬಂಬಲು +ಖಂಡದಿಂಡೆಯ
ತುರುಗಿದ್+ಎಲುವಿನ +ತಳಿತ +ಚರ್ಮದ
ಶಿರದ +ತಡಿಗಳಲ್+ಅಡಸಿ +ಹರಿದುದು +ವೈರಿ+ಸೇನೆಯಲಿ

ಅಚ್ಚರಿ:
(೧) ಎಲುಬು, ಮೂಳೆ – ಸಮಾನಾರ್ಥಕ ಪದ
(೨) ರಕ್ತ ಹರಿದ ಪರಿ – ತುರುಗಿದೆಲುವಿನ ತಳಿತ ಚರ್ಮದ ಶಿರದ ತಡಿಗಳಲಡಸಿ ಹರಿದುದು