ಪದ್ಯ ೧೩: ಸಂಜಯನು ಯಾರ ನಡಿಗೆಯನ್ನು ನೋಡಿದನು – ೬?

ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸರ ಬಳಿಬಳಿದು
ಗಡಣಹೆಣದೆರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ (ಗದಾ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮುರಿದ ತಡಿ ರಂಚೆಗಳಲ್ಲಿ ಕುಳಿತು ಮೊಣಕಾಲಿನಲ್ಲಾದ ಗಾಯಕ್ಕೆ ನೆಣದ ಕೆಸರನ್ನು ಬಳಿದು, ಒಟ್ಟಾಗಿ ಬಿದ್ದಿದ್ದ ಹೆಣಗಳ ನಡುವೆ ಜಾಗವನ್ನು ಹುಡುಕಿ ಕಾಲಿಟ್ಟು, ಮುಂದೆ ಹೆಜ್ಜೆಯನ್ನಿಡುವಾಗ ಓಲಾಡಿ ಮಾರ್ಗಶ್ರಮಕ್ಕೆ ಹೆದರುವವನೊಬ್ಬನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ತಡಿ: ಕುದುರೆಯ ಜೀನು; ಕುಳ್ಳಿರ್ದು: ಆಸೀನನಾಗು; ಗಾಢ: ಹೆಚ್ಚಳ, ಅತಿಶಯ; ವ್ರಣ: ಹುಣ್ಣು; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಬಳಿ: ಸವರು; ಗಡಣ: ಗುಂಪು; ಹೆಣ: ಜೀವವಿಲ್ಲದ ಶರೀರ; ಸೋದಿಸು: ಶುದ್ಧಿ ಮಾಡು; ಮುಂದೆ: ಎದುರು; ಹೆಜ್ಜೆ: ಪಾದ; ಪೈಸರ: ಕುಗ್ಗುವುದು; ಮಾರ್ಗ: ದಾರಿ; ಶರ್ಮ: ಆಯಾಸ; ಬೆಮರು: ಹೆದರು;

ಪದವಿಂಗಡಣೆ:
ಕಡಿವಡೆದ +ಹಕ್ಕರಿಕೆ +ರೆಂಚೆಯ
ತಡಿಗಳಲಿ +ಕುಳ್ಳಿರ್ದು +ಮೊಣಕಾ
ಲ್ಗಡಿಯ +ಗಾಢವ್ರಣದ+ ನೆಣವಸೆ+ಕೆಸರ +ಬಳಿಬಳಿದು
ಗಡಣ+ಹೆಣದ್+ಎರಹುಗಳೊಳಗೆ +ಕಾ
ಲಿಡುತ +ಸೋದಿಸಿ +ಮುಂದೆ +ಹೆಜ್ಜೆಯ
ನಿಡುತ +ಪೈಸರವೋಗಿ+ ಮಾರ್ಗಶ್ರಮಕೆ +ಬೆಮರುವನ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಹೆಜ್ಜೆಯನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ

ಪದ್ಯ ೫೭: ರಕ್ತನದಿಗಳು ಎಲ್ಲಿ ಹರೆದವು?

ನೊರೆ ರಕುತ ಸುಳಿ ಮಸಗಿ ಮಿದುಳಿನ
ಹೊರಳಿಗಳೆದುಬ್ಬಣದ ನೆಣ ವಸೆ
ದೊರಳೆಗಳ ಮೆದಕುಗಳ ಮೂಳೆಯ ಬಸಿವ ಬಲು ಜಿಗಿಯ
ಕರುಳ ಬಂಬಲು ಖಂಡದಿಂಡೆಯ
ತುರುಗಿದೆಲುವಿನ ತಳಿತ ಚರ್ಮದ
ಶಿರದ ತಡಿಗಳಲಡಸಿ ಹರಿದುದು ವೈರಿಸೇನೆಯಲಿ (ದ್ರೋಣ ಪರ್ವ, ೨ ಸಂಧಿ, ೫೭ ಪದ್ಯ)

ತಾತ್ಪರ್ಯ:
ನೊರೆ ರಕ್ತದ ಪ್ರವಾಹವು ಹರಿದು ಅಲ್ಲಲ್ಲಿ ಸುಳಿಗಳಾದವು. ಮಿದುಳುಗಳ ಹೊರೆ, ಉಬ್ಬಣಗಳು, ನೆಣವಸೆಗಳ ತೊರಳೆಗಳು, ಮೂಳೆಗಳಲ್ಲಿ ಬಸಿಯುವ ಅಂಟು, ಕರುಳುಗಳ ರಾಶಿ, ಮಾಂಸ ಎಲುಬುಗಳ ರಾಶಿಯ ದಡಗಳ ನಡುವೆ ರಕ್ತ ನದಿಗಳು ಹರಿದವು.

ಅರ್ಥ:
ನೊರೆ: ಬುರುಗು, ಫೇನ; ರಕುತ: ನೆತ್ತರು; ಸುಳಿ: ಗುಂಡಾಗಿ ಸುತ್ತು, ಚಕ್ರಾಕಾರವಾಗಿ ತಿರುಗು; ಮಸಗು: ಹರಡು; ಕೆರಳು; ಮಿದುಳು: ಮಸ್ತಿಷ್ಕ; ಹೊರಳು: ತಿರುವು, ಬಾಗು; ಉಬ್ಬಣ: ಅಧಿಕ; ನೆಣ: ಕೊಬ್ಬು, ಮೇದಸ್ಸು; ತೊರಳೆ: ಗುಲ್ಮ, ಪ್ಲೀಹ; ಮೆದೆ: ಗುಡ್ಡೆ ಹಾಕು; ಮೂಳೆ: ಎಲುಬು; ಬಸಿ: ಒಸರು, ಸ್ರವಿಸು; ಬಲು: ಬಹಳ; ಜಿಗಿ: ಅಂಟು, ಜಿಗುಟು; ಕರುಳು: ಪಚನಾಂಗ; ಬಂಬಲು: ಗುಂಪು; ಖಂಡ:ತುಂಡು, ಚೂರು; ತುರುಗು: ಸಂದಣಿ, ದಟ್ಟಣೆ; ಎಲುವು: ಮೂಳೆ; ತಳಿತ: ಚಿಗುರಿದ; ಚರ್ಮ: ತೊಗಲು; ಶಿರ: ತಲೆ; ತಡಿ: ತೇವ, ಒದ್ದೆ; ಅಡಸು: ಬಿಗಿಯಾಗಿ ಒತ್ತು; ಹರಿ: ಸೀಳು; ವೈರಿ: ಶತ್ರು; ಸೇನೆ: ಸೈನ್ಯ;

ಪದವಿಂಗಡಣೆ:
ನೊರೆ +ರಕುತ +ಸುಳಿ +ಮಸಗಿ +ಮಿದುಳಿನ
ಹೊರಳಿಗಳೆದ್+ಉಬ್ಬಣದ +ನೆಣವಸೆ
ತೊರಳೆಗಳ +ಮೆದಕುಗಳ+ ಮೂಳೆಯ +ಬಸಿವ +ಬಲು +ಜಿಗಿಯ
ಕರುಳ+ ಬಂಬಲು +ಖಂಡದಿಂಡೆಯ
ತುರುಗಿದ್+ಎಲುವಿನ +ತಳಿತ +ಚರ್ಮದ
ಶಿರದ +ತಡಿಗಳಲ್+ಅಡಸಿ +ಹರಿದುದು +ವೈರಿ+ಸೇನೆಯಲಿ

ಅಚ್ಚರಿ:
(೧) ಎಲುಬು, ಮೂಳೆ – ಸಮಾನಾರ್ಥಕ ಪದ
(೨) ರಕ್ತ ಹರಿದ ಪರಿ – ತುರುಗಿದೆಲುವಿನ ತಳಿತ ಚರ್ಮದ ಶಿರದ ತಡಿಗಳಲಡಸಿ ಹರಿದುದು

ಪದ್ಯ ೧೧: ಭೀಷ್ಮರು ಎಲ್ಲಿ ಮಲಗಿದರು?

ಹೂಳಿ ಹೋಯಿತು ಬಾಣದಲಿ ಮೈ
ತೋಳು ತೊಡೆ ಜೊಂಡೆದ್ದು ರಕುತದ
ಸಾಲುಗೊಳಚೆಯ ಕರುಳ ಕುಸುರಿಯ ಬಸಿವ ನೆಣವಸೆಯ
ಮೂಳೆಯೊಟ್ಟಿಲ ನೆಲನ ಮುಟ್ಟದ
ಜಾಳಿಗೆಯ ಹೊಗರೊಗುವ ಕೆಂಗರಿ
ಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ (ಭೀಷ್ಮ ಪರ್ವ, ೧೦ ಸಂಧಿ, ೧೧ ಪದ್ಯ
)

ತಾತ್ಪರ್ಯ:
ಮೈ ತೋಳು ತೊಡೆಗಳು ರಕ್ತ ಧಾರೆಗಳಿಂದ ಕೊಳಕಾಗಿ, ಕರುಳಿಂದ ಸುರಿಯುವ ನೆಣವಸೆ, ಮೂಳೆಯ ಒಟ್ಟಿಲುಗಳಿಂದ ಕೂಡಿ, ಕೆಂಗರಿಯ ಬಾಣಗಳ ಮಂಚದ ಮೇಲೆ ರಣರಂಗ ಮಧ್ಯದಲ್ಲಿ ಭೀಷ್ಮನು ಮಲಗಿದನು.

ಅರ್ಥ:
ಹೂಳು: ಹೂತು ಹಾಕು; ಬಾಣ: ಅಂಬು; ಮೈ: ತನು; ತೋಳು: ಬಾಹು; ತೊಡೆ: ಊರು; ಜೊಂಡು:ತಲೆಯ ಹೊಟ್ಟು, ನೀರಿನಲ್ಲಿ ಕೊಳೆತು ನಾರುವ ಕಸ; ರಕುತ: ನೆತ್ತರು; ಸಾಲು: ಗುಂಪು,ಆವಳಿ; ಕೊಳಚೆ: ಕೆಸರು; ಕರುಳ: ಪಚನಾಂಗ; ಕುಸುರಿ: ತುಂಡು, ಎಂಜಿಲು; ಬಸಿ: ಒಸರು, ಸ್ರವಿಸು, ಜಿನುಗು; ನೆಣವಸೆ: ಹಸಿಯಾದ ಕೊಬ್ಬು; ಮೂಳೆ: ಎಲುಬು; ನೆಲ: ಭೂಮಿ; ಮುಟ್ಟು: ತಾಗು; ಹೊಗರು: ಕಾಂತಿ, ಪ್ರಕಾಶ; ಕೆಂಗರಿಕೋಲು: ಕೆಂಪು ಗರಿಯುಳ್ಳ ಬಾಣ; ಮಂಚ: ಪಲ್ಲಂಗ; ರಣ: ಯುದ್ಧಭೂಮಿ; ಪವಡಿಸು: ಮಲಗು;

ಪದವಿಂಗಡಣೆ:
ಹೂಳಿ +ಹೋಯಿತು +ಬಾಣದಲಿ+ ಮೈ
ತೋಳು +ತೊಡೆ +ಜೊಂಡೆದ್ದು+ ರಕುತದ
ಸಾಲು+ಕೊಳಚೆಯ +ಕರುಳ +ಕುಸುರಿಯ +ಬಸಿವ +ನೆಣವಸೆಯ
ಮೂಳೆಯೊಟ್ಟಿಲ +ನೆಲನ +ಮುಟ್ಟದ
ಜಾಳಿಗೆಯ +ಹೊಗರೊಗುವ+ ಕೆಂಗರಿ
ಕೋಲ+ ಮಂಚದ +ಮೇಲೆ +ರಣದಲಿ +ಭೀಷ್ಮ +ಪವಡಿಸಿದ

ಅಚ್ಚರಿ:
(೧) ಭೀಷ್ಮರು ಮಲಗಿದ ಪರಿ – ಕೆಂಗರಿಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ

ಪದ್ಯ ೧೫: ಪರಶುರಾಮರು ಎಷ್ಟು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದರು?

ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮ ಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು (ಅರಣ್ಯ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪರಶುರಾಮರು ಮಾಡಿದ ಕಾರ್ತಿವೀರ್ಯನ ಸಂಹಾರ, ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ಸಂಹರಿಸಿದ್ದು, ಅವರ ಕಂಠನಾಳದಿಂದ ಹರಿದ ರಕ್ತ ತರ್ಪಣವನ್ನು ಪಿತೃಗಳಿಗೆ ಕೊಟ್ಟಿದ್ದು, ಆ ರಕ್ತ ನದಿಯ ವಿವರಗಳೆಲ್ಲವನ್ನೂ ಯುಧಿಷ್ಠಿರನು ಕೇಳಿದನು.

ಅರ್ಥ:
ಧುರ: ಯುದ್ಧ, ಕಾಳಗ; ಸೂಳು: ಆವೃತ್ತಿ, ಬಾರಿ; ಅರಿ: ಕತ್ತರಿಸು; ರಾಯ: ರಾಜ; ಕಂಠ: ಕೊರಳು; ನೆತ್ತರು: ರಕ್ತ; ನದಿ: ಕೂಲವತಿ; ಪರಮ: ಶ್ರೇಷ್ಠ; ಪಿತೃ: ಪೂರ್ವಜ; ತರ್ಪಣ: ತೃಪ್ತಿಪಡಿಸುವಿಕೆ, ತಣಿವು; ಪರಶು: ಕೊಡಲಿ, ಕುಠಾರ; ನೆಣವಸೆ: ಹಸಿಯಾದ ಕೊಬ್ಬು; ನೆಣ: ಕೊಬ್ಬು; ತೊಳಸು: ಕಾದಾಟ; ವರನದಿ: ಶ್ರೇಷ್ಠವಾದ ಸರೋವರ; ವಿಸ್ತರಣ: ವ್ಯಾಪ್ತಿ; ಸೂನು: ಮಗ;

ಪದವಿಂಗಡಣೆ:
ಪರಶುರಾಮನ +ಕಾರ್ತವೀರ್ಯನ
ಧುರದೊಳ್+ಇಪ್ಪತ್ತೊಂದು +ಸೂಳಿನೊಳ್
ಅರಿದ+ರಾಯರ +ಕಂಠನಾಳದ +ನೆತ್ತರಿನ +ನದಿಯ
ಪರಮ +ಪಿತೃ+ತರ್ಪಣವನ್+ಆತನ
ಪರಶುವಿನ +ನೆಣವಸೆಯ +ತೊಳಹದ
ವರನದಿಯ +ವಿಸ್ತರಣವನು +ಕೇಳಿದನು +ಯಮಸೂನು

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಸೂಳಿನೊಳರಿದರಾಯರ ಕಂಠನಾಳದ ನೆತ್ತರಿನ ನದಿಯ