ಪದ್ಯ ೧೦: ವಿರಾಟನ ಪತ್ನಿಯರ ಸ್ಥಿತಿ ಹೇಗಿತ್ತು?

ಅದೆ ವಿರಾಟನ ಸತಿಯರೀಚೆಯ
ಲದೆ ಘಟೋತ್ಕಚನಂಗನೆಯರಾ
ಸುದತಿಯರ ಶೋಕವ ನಿರೀಕ್ಷಿಸು ಪಂಚಕೇಕೆಯರ
ಒದರಿ ಪಾಂಡ್ಯನ ಹೆಂಡಿರಾಚೆಯ
ಲದೆ ಸುಸೋಮಕ ಸೃಂಜಯಾದ್ಯರ
ವಧುಗಳೊರಲುತ್ತದೆ ಮುರಾಂತಕ ನಿಮ್ಮ ಸೇನೆಯಲಿ (ಗದಾ ಪರ್ವ, ೧೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಿನ್ನ ಸೇನೆಯ ಕಡೆ ಈಚೆ ವಿರಾಟನ ಪತ್ನಿಯರು, ಘಟೋತ್ಕಚನ ಅಂಗನೆಯರು, ಪಂಚಕೇಕೆಯರ ಪತ್ನಿಯರು ಶೋಕಿಸುತ್ತಿರುವುದನ್ನು ನೋಡು. ಪಾಂಡ್ಯನ ಹೆಂಡಿರು ಒದರುತ್ತಿದ್ದಾರೆ. ಸೋಮಕ ಸಂಜಯರ ಪತ್ನಿಯರು ಒರಲುತ್ತಿದ್ದಾರೆ.

ಅರ್ಥ:
ಸತಿ: ಹೆಂಡತಿ; ಅಂಗನೆ: ಹೆಣ್ಣು; ಸುದತಿ: ಹೆಣ್ಣು; ಶೋಕ: ದುಃಖ; ನಿರೀಕ್ಷಿಸು: ನೋಡುವುದು, ದಾರಿ ಕಾಯುವುದು; ಪಂಚ: ಐದು; ಹೆಂಡಿರು: ಸತಿ; ಒದರು: ಕೊಡಹು, ಜಾಡಿಸು; ಆಚೆ: ಹೊರಗೆ; ಆದಿ: ಮುಂತಾದ; ವಧು: ಹೆಣ್ಣು; ಒರಲು:ಅರಚು, ಕೂಗಿಕೊಳ್ಳು; ಮುರಾಂತಕ: ಕೃಷ್ಣ; ಸೇನೆ: ಸೈನ್ಯ;

ಪದವಿಂಗಡಣೆ:
ಅದೆ +ವಿರಾಟನ +ಸತಿಯರ್+ಈಚೆಯಲ್
ಅದೆ +ಘಟೋತ್ಕಚನ್+ಅಂಗನೆಯರ್+ಆ+
ಸುದತಿಯರ +ಶೋಕವ +ನಿರೀಕ್ಷಿಸು+ ಪಂಚಕೇಕೆಯರ
ಒದರಿ +ಪಾಂಡ್ಯನ +ಹೆಂಡಿರಾಚೆಯಲ್
ಅದೆ +ಸುಸೋಮಕ +ಸೃಂಜಯಾದ್ಯರ
ವಧುಗಳ್+ ಒರಲುತ್ತದೆ+ ಮುರಾಂತಕ +ನಿಮ್ಮ+ ಸೇನೆಯಲಿ

ಅಚ್ಚರಿ:
(೧) ಸತಿ, ಅಂಗನೆ, ಸುದತಿ, ಹೆಂಡಿರು, ವಧು – ಹೆಣ್ಣು ಅಂತ ಸೂಚಿಸುವ ಪದಗಳ ಬಳಕೆ

ಪದ್ಯ ೮: ಗೂಢಾಚಾರರು ಏನೆಂದು ಹೇಳಿದರು?

ಮುರಿದು ಬರುತಿದೆ ಸೇನೆ ಸಾಕೀ
ಪರಿಯ ಸೈರಣೆ ನಿಮ್ಮ ಮಾವನ
ಕುರಿದರಿಗೆ ಖತಿಗೊಂಡು ಕಾದಿ ವಿರಾಟ ಕೈಕೆಯರು
ತುರುಗಿದರು ತೆತ್ತೀಸರಲಿ ತೆಗೆ
ಮರೆಯ ಮಾತೇ ವಿಜಯಲಕ್ಷ್ಮಿಯ
ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ (ದ್ರೋಣ ಪರ್ವ, ೧೮ ಸಂಧಿ, ೮ ಪದ್ಯ)

ತಾತ್ಪರ್ಯ:
ರಣರಂಗದಿಂದ ಅರಸನ ನೆಲೆಗೆ ಬಂದ ದೂತರು, ಜೀಆ, ದ್ರೋಣನು ನಿಮ್ಮ ಮಾವನನ್ನು ಕುರಿಯಂತೆ ಕಡಿದು ಹಾಕಿದನು. ಇದರಿಂದ ಕೋಪಗೊಂಡ ವಿರಾಟನು, ಕೇಕೆಯನೂ ದ್ರೋಣನೊಡನೆ ಕಾದಿ ದೇವತೆಗಳ ಲೋಕಕ್ಕೆ ಹೋದರು. ಮರೆ ಮುಚ್ಚಿನ ಮಾತೇಕೆ, ದ್ರೋಣನು ವಿಜಯಲಕ್ಷ್ಮಿಯ ಸೆರಗನ್ನುಹಿಡಿದೆಳೆದನು ಎಂದು ಧರ್ಮಜನಿಗೆ ಹೇಳಿದರು.

ಅರ್ಥ:
ಮುರಿ: ಸೀಳು; ಬರುತಿದೆ: ಆಗಮಿಸು; ಸೇನೆ: ಸೈನ್ಯ; ಸಾಕು: ನಿಲ್ಲು; ಪರಿ: ರೀತಿ; ಸೈರಣೆ: ತಾಳ್ಮೆ; ಮಾವ: ಹೆಂಡತಿಯ ತಂದೆ; ಕುರಿ: ಮೇಷ; ಖತಿ: ಕೋಪ; ಕಾದು: ಹೋರಾದು; ತುರುಗು: ಹೆಚ್ಚಾಗು, ಅಧಿಕವಾಗು; ತೆತ್ತು: ತಿರಿಚು, ಸುತ್ತು; ತೆಗೆ: ಹೊರತರು; ಮರೆ: ಮುಚ್ಚು; ಮಾತು: ವಾಣಿ; ವಿಜಯ: ಗೆಲುವು; ಸೆರಗು: ಬಟ್ಟೆ, ಉತ್ತರೀಯ; ಹಿಡಿ: ಗ್ರಹಿಸು; ಚರ: ಗೂಢಚಾರ, ಸೇವಕ; ಭೂಪತಿ: ರಾಜ;

ಪದವಿಂಗಡಣೆ:
ಮುರಿದು +ಬರುತಿದೆ +ಸೇನೆ +ಸಾಕ್+ಈ
ಪರಿಯ +ಸೈರಣೆ +ನಿಮ್ಮ +ಮಾವನ
ಕುರಿದರಿಗೆ+ ಖತಿಗೊಂಡು +ಕಾದಿ +ವಿರಾಟ +ಕೈಕೆಯರು
ತುರುಗಿದರು +ತೆತ್ತೀಸರಲಿ +ತೆಗೆ
ಮರೆಯ +ಮಾತೇ +ವಿಜಯಲಕ್ಷ್ಮಿಯ
ಸೆರಗ+ ಹಿಡಿದನು +ದ್ರೋಣನ್+ಎಂದರು +ಚರರು+ ಭೂಪತಿಗೆ

ಅಚ್ಚರಿ:
(೧) ದ್ರುಪದನನ್ನು ಕೊಂದ ಪರಿ – ನಿಮ್ಮ ಮಾವನ ಕುರಿದರಿಗೆ
(೨) ಜಯವನ್ನು ಸಮೀಪಿಸಿದ ಎಂದು ಹೇಳುವ ಪರಿ – ವಿಜಯಲಕ್ಷ್ಮಿಯ ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ

ಪದ್ಯ ೪೦: ದ್ರೋಣನು ವಿರಾಟ ಕುಂತೀಭೋಜರನ್ನು ಎಲ್ಲಿಗೆ ಕಳಿಸಿದನು?

ಅಡಸಿ ಗಿರಿಗಳ ನುಂಗುವನ ಬಾಯ್
ಹಿಡಿಯದಿಹುದೇ ಹಣ್ಣುಹಂಪಲ
ಬಡವಿರಾಟನನಾರು ಬಲ್ಲರು ದ್ರೋಣನಿದಿರಿನಲಿ
ನಡೆದು ಬಹುದನು ಕಂಡೆವಾಗಲೆ
ಮಡಿದನೆಂಬುದನರಿಯೆವೈ ಬಿಲು
ದುಡುಕಿ ಕುಂತೀಭೋಜ ಹೊಕ್ಕನು ಮಿಕ್ಕನವರುಗಳ (ದ್ರೋಣ ಪರ್ವ, ೧೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಬೆಟ್ಟಗಳನ್ನೇ ಬಾಯಲ್ಲಿ ತುರುಕಿಕೊಂಡು ನುಂಗುವಂತಹ ಬಾಯಲ್ಲಿ ಹಣ್ಣು ಹಂಪಲುಗಳು ಹಿಡಿಸುವುದಿಲ್ಲವೇ? ಬಡ ವಿರಾಟನು ದ್ರೋಣನೆದುರಿಗೆ ನಿಂದುದೇ ಕಾಣಲಿಲ್ಲ. ಅವನು ದ್ರೋಣನ ಬಳಿಗೆ ಬಂದುದು ಕಾಣಿಸಿತು. ಸತ್ತಿದ್ದು ಕಾಣಿಸಲಿಲ್ಲ. ಕುಂತೀಭೋಜನು ಬಿಲ್ಲು ಹಿಡಿದು ಹೊರಟು ದ್ರುಪದ ವಿರಾಟರಿಗಿಂತ ಕಡಿಮೆ ಸಮಯದಲ್ಲೇ ಅವರನ್ನು ಕೂಡಿಕೊಂಡನು.

ಅರ್ಥ:
ಅಡಸು: ಬಿಗಿಯಾಗಿ ಒತ್ತು; ಗಿರಿ: ಬೆಟ್ಟ; ನುಂಗು: ಕಬಳಿಸು; ಹಿಡಿ: ಗ್ರಹಿಸು; ಹಣ್ಣು: ಫಲ; ಬಡವ: ದೀನ; ಬಲ್ಲರು: ತಿಳಿದವ; ಇದಿರು: ಎದುರು; ನಡೆ: ಚಲಿಸು; ಕಂಡು: ನೋಡು; ಮಡಿ: ಸಾವು; ಅರಿ: ತಿಳಿ; ದುಡುಕು: ವಿಚಾರಣೆ ಮಾಡದೆ ಮುನ್ನುಗ್ಗು; ಹೊಕ್ಕು: ಸೇರು;

ಪದವಿಂಗಡಣೆ:
ಅಡಸಿ +ಗಿರಿಗಳ +ನುಂಗುವನ +ಬಾಯ್
ಹಿಡಿಯದಿಹುದೇ +ಹಣ್ಣು+ಹಂಪಲ
ಬಡ+ವಿರಾಟನನ್+ಆರು +ಬಲ್ಲರು +ದ್ರೋಣನ್+ಇದಿರಿನಲಿ
ನಡೆದು +ಬಹುದನು +ಕಂಡೆವಾಗಲೆ
ಮಡಿದನ್+ಎಂಬುದನ್+ಅರಿಯೆವೈ +ಬಿಲು
ದುಡುಕಿ+ ಕುಂತೀಭೋಜ +ಹೊಕ್ಕನು +ಮಿಕ್ಕನವರುಗಳ

ಅಚ್ಚರಿ:
(೧) ರೂಪಕದ ಪ್ರಯೋಗ – ಅಡಸಿ ಗಿರಿಗಳ ನುಂಗುವನ ಬಾಯ್ಹಿಡಿಯದಿಹುದೇ ಹಣ್ಣುಹಂಪಲ

ಪದ್ಯ ೪೨: ಧರ್ಮಜನ ಪ್ರಕ್ರಾರ ಯುದ್ಧ ಗೆಲ್ಲುವುದೇಕೆ ಕಷ್ಟಕರ?

ಅಹುದು ಮಗನೆ ಸಮಗ್ರಬಲ ನೀ
ನಹೆ ನಿಧಾನಿಸಲಿಂದು ಪವನಜ
ನಹವ ಮುರಿದರು ಕಾಯ್ದು ಬಿಟ್ಟರು ನಕುಲ ಸಾತ್ಯಕಿಯ
ಸಹಸ ದ್ರುಪದ ವಿರಾಟರುಗಳು
ಮ್ಮಹವ ಸೆಳೆದರು ವಿಜಯ ಗರ್ವದ
ಲಿಹ ಬಲವ ನೀನೊಬ್ಬನೇ ಸಾಧಿಸುವುದರಿದೆಂದ (ದ್ರೋಣ ಪರ್ವ, ೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಧರ್ಮಜನು ಅಭಿಮನ್ಯುವಿನ ಬಳಿ ಹೇಳುತ್ತಾ, ನೀನು ಸಂಪೂರ್ಣವೀರ, ಸಮಗ್ರ ಪರಾಕ್ರಮಿ. ಯುದ್ಧದಲ್ಲಿ ಏನಾಗಿದೆಯೆಂದು ನೀನೇ ನೋಡಿರುವೆ. ಭೀಮನ ದರ್ಪವನ್ನು ಮುರಿದು ಕಳಿಸಿದರು. ನಕುಲ ಸಾತ್ಯಕಿಗಳನ್ನು ಕೊಲ್ಲದೆ ಉಳಿಸಿ ಹಿಂದಕ್ಕೆ ಕಳಿಸಿದರು. ದ್ರುಪದ ವಿರಾಟರ ಸಂತೋಷ ಉಲ್ಲಾಸಗಲನ್ನು ಸೆಳೆದುಕೊಂಡರು. ಗೆಲುವಿನ ಗರ್ವದಿಂದ ಬೀಗುವ ಆ ಸೈನ್ಯವನ್ನು ನೀನೊಬ್ಬನೇ ಹೇಗೆ ಗೆದ್ದು ವಿಜಯವನ್ನು ಸಾಧಿಸುವೆ, ಅದು ಅಸಾಧ್ಯವಲ್ಲವೆ ಎಂದು ನುಡಿದನು.

ಅರ್ಥ:
ಮಗ: ಪುತ್ರ; ಸಮಗ್ರ: ಎಲ್ಲಾ; ಬಲ: ಸೈನ್ಯ; ನಿಧಾನ: ಮಂದಗತಿ; ಪವನಜ: ಭೀಮ; ಅಹವ: ದರ್ಪ, ಅಹಂಕಾರ; ಮುರಿ: ಸೀಳು; ಕಾಯ್ದು: ಕೊಲ್ಲದೆ; ಸಹಸ: ಪರಾಕ್ರಮ; ಉಮ್ಮಹ: ಉತ್ಸಾಹ, ಸಂತೋಷ; ಸೆಳೆ: ಆಕರ್ಷಿಸು; ಗರ್ವ: ದರ್ಪ, ಅಹಂಕಾರ; ಬಲ: ಸೈನ್ಯ; ಸಾಧಿಸು: ದೊರಕಿಸಿಕೊಳ್ಳು; ಅರಿ: ತಿಳಿ;

ಪದವಿಂಗಡಣೆ:
ಅಹುದು +ಮಗನೆ +ಸಮಗ್ರಬಲ+ ನೀ
ನಹೆ +ನಿಧಾನಿಸಲಿಂದು +ಪವನಜನ್
ಅಹವ +ಮುರಿದರು +ಕಾಯ್ದು +ಬಿಟ್ಟರು +ನಕುಲ+ ಸಾತ್ಯಕಿಯ
ಸಹಸ +ದ್ರುಪದ +ವಿರಾಟರುಗಳ
ಉಮ್ಮಹವ +ಸೆಳೆದರು +ವಿಜಯ +ಗರ್ವದ
ಲಿಹ +ಬಲವ +ನೀನೊಬ್ಬನೇ +ಸಾಧಿಸುವುದ್+ಅರಿದೆಂದ

ಅಚ್ಚರಿ:
(೧) ಅಭಿಮನ್ಯುವಿನ ಬಲವನ್ನು ಹೊಗಳುವ ಪರಿ – ಅಹುದು ಮಗನೆ ಸಮಗ್ರಬಲ ನೀನಹೆ
(೨) ಸೋಲಿಸಿದರು ಎಂದು ಹೇಳುವ ಪರಿ – ಉಮ್ಮಹವ ಸೆಳೆದರು, ಅಹವ ಮುರಿದರು, ಕಾಯ್ದು ಬಿಟ್ಟರು

ಪದ್ಯ ೫೪: ದ್ರುಪದನು ದ್ರೋಣರಿಗೆ ಏನು ಹೇಳಿದನು?

ಮರುಳೆ ಮಂಜಿನ ಮಳೆಗೆ ಕುಲಗಿರಿ
ಕರಗುವುದೆ ನೀನೆಚ್ಚ ಶರ ಪಂ
ಜರಕೆ ಸಿಲುಕುವ ವೀರರೇ ಪಾಂಡವ ಮಹಾರಥರು
ಕೊರಳ ರಕ್ಷಿಸಿಕೊಳ್ಳೆನುತ ಚ
ಪ್ಪರಿಸಿ ದ್ರುಪದ ವಿರಾಟರೆಚ್ಚರು
ಸರಳ ರಶ್ಮಿಯ ಮಾಲೆ ಮುಕ್ಕುರುಕಿದವು ದಿಗುತಟವ (ದ್ರೋಣ ಪರ್ವ, ೨ ಸಂಧಿ, ೫೪ ಪದ್ಯ)

ತಾತ್ಪರ್ಯ:
ದ್ರುಪದ ವಿರಾಟರು ದ್ರೋಣನನ್ನು ಸಂಭೋದಿಸುತ್ತಾ, ಅಯ್ಯೋ ಹುಚ್ಚಾ ಮಂಜಿನ ಮಳೆಗೆ ಕುಲ ಪರ್ವತವು ಕರಗಿ ಹೋದೀತೇ? ನಿನ್ನ ಬಾಣ ಪಂಜರದಲ್ಲಿ ಪಾಂಡವವೀರರು ಸಿಕ್ಕಿಕೊಳ್ಳುವರೇ? ನಿನ್ನ ಕೊರಳನ್ನು ಕಾಪಾಡಿಕೋ ಎಂದುತ್ತರಿಸಿ, ಬಿಟ್ಟಬಾಣಗಳ ಹೊಳಪಿನ ಕಿರಣಗಳು ದಿಕ್ತಟವನ್ನು ಆವರಿಸಿದವು.

ಅರ್ಥ:
ಮರುಳ: ತಿಳಿಗೇಡಿ, ದಡ್ಡ; ಮಂಜು: ಇಬ್ಬನಿ, ಹಿಮ; ಮಳೆ: ವರ್ಷ; ಕುಲಗಿರಿ: ದೊಡ್ಡ ಬೆಟ್ಟ; ಕರಗು: ಮಾಯವಾಗು, ನೀರಾಗಿಸು; ಎಚ್ಚು: ಬಾಣ ಪ್ರಯೋಗ ಮಾಡು; ಪಂಜರ: ಗೂಡು; ಸಿಲುಕು: ಸೆರೆಯಾದ ವಸ್ತು; ವೀರ: ಶೂರ; ಮಹಾರಥ: ಪರಾಕ್ರಮಿ; ಕೊರಳು: ಗಂಟಲು; ರಕ್ಷಿಸು: ಕಾಪಾಡು; ಚಪ್ಪರಿಸು: ಸವಿ, ರುಚಿನೋಡು; ಸರಳ: ಬಾಣ; ರಶ್ಮಿ: ಕಾಂತಿ, ಪ್ರಕಾಶ; ಮಾಲೆ: ಹಾರ; ಮುಕ್ಕುರು: ಕವಿ, ಮುತ್ತು, ಆವರಿಸು; ದಿಗುತಟ: ದಿಕ್ಕು

ಪದವಿಂಗಡಣೆ:
ಮರುಳೆ +ಮಂಜಿನ +ಮಳೆಗೆ +ಕುಲಗಿರಿ
ಕರಗುವುದೆ +ನೀನೆಚ್ಚ +ಶರ +ಪಂ
ಜರಕೆ +ಸಿಲುಕುವ +ವೀರರೇ +ಪಾಂಡವ +ಮಹಾರಥರು
ಕೊರಳ +ರಕ್ಷಿಸಿಕೊಳ್ಳೆನುತ +ಚ
ಪ್ಪರಿಸಿ +ದ್ರುಪದ +ವಿರಾಟರ್+ಎಚ್ಚರು
ಸರಳ +ರಶ್ಮಿಯ +ಮಾಲೆ +ಮುಕ್ಕುರುಕಿದವು+ ದಿಗುತಟವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮರುಳೆ ಮಂಜಿನ ಮಳೆಗೆ ಕುಲಗಿರಿ ಕರಗುವುದೆ

ಪದ್ಯ ೬೬: ಕೃಷ್ಣನು ಯಾವ ರೂಪವನ್ನು ತಾಳಿದನು?

ಆದಡರ್ಜುನ ನೊಡೆನುತ ಕಮ
ಲೋದರನು ಕೈಕೊಂಡನಗ್ಗದ
ನಾದಿಪುರುಷ ಶ್ರೀನಿಜವ ವಿಶ್ವಾತ್ಮಕಾಕೃತಿಯ
ವಾದಿಸುವ ಷಟ್ತರ್ಕಗಿರ್ಕದ
ಭೇದ ಕೊಳ್ಳದ ಸಕಲ ಲೋಕದ
ಬಿಡಿ ವಿಸಟಂಬರಿವ ವಿಮಲ ವಿರಾಟ ರೂಪವನು (ಭೀಷ್ಮ ಪರ್ವ, ೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ಆಗ ಶ್ರೀಕೃಷ್ಣನು, ಹಾಗಾದರೆ ನನ್ನ ವಿಶ್ವರೂಪವನ್ನು ನೋಡು, ವಿಶ್ವದ ಆತ್ಮವಾಗಿರುವ ಈ ರೂಪವನ್ನು ನೋಡು ಎಂದು ಷಟ್ತರ್ಕಗಿರ್ಕಗಳ ಭೇದಕ್ಕೆ ಸಿಲುಕದ, ಸಮಸ್ತ ಲೋಕವನ್ನು ನಡೆಸುವ ತನ್ನ ವಿಮಲಾ ವಿರಾಟರೂಪವನ್ನು ತಾಳಿದನು.

ಅರ್ಥ:
ಆದಡ್: ಹಾಗಾದರೆ; ನೋಡು: ವೀಕ್ಷಿಸು; ಕಮಲೋದರ: ಕೃಷ್ಣ, ವಿಷ್ಣು; ಕೈಕೊಡ: ತೆಗೆದುಕೋ; ಅಗ್ಗದ: ಶ್ರೇಷ್ಠ; ಆದಿ: ಮೊದಲ; ಶ್ರೀ: ಶ್ರೇಷ್ಠ, ಐಶ್ವರ್ಯ; ನಿಜ: ತನ್ನ, ದಿಟ; ಆತ್ಮ: ಜೀವ; ವಿಶ್ವ: ಜಗತ್ತು; ಆಕೃತಿ: ರೂಪ; ವಾದ: ಮಾತು, ಸಂಭಾಷಣೆ; ಷಟ್ತರ್ಕ: ಆರು ತರ್ಕಗಳು, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸಾ, ವೇದಾಂತ; ಭೇದ: ವ್ಯತ್ಯಾಸ; ಸಕಲ: ಎಲ್ಲಾ; ಲೋಕ: ಜಗತ್ತು; ಬೀದಿ: ವಿಸ್ತಾರ; ವಿಸಟ: ಯಥೇಚ್ಛವಾಗಿ, ಮನ ಬಂದಂತೆ; ಅಂಬರ: ಆಗಸ; ವಿಮಲ: ನಿರ್ಮಲ; ವಿರಾಟ: ಬೃಹತ್; ರೂಪ: ಆಕಾರ;

ಪದವಿಂಗಡಣೆ:
ಆದಡ್ + ಅರ್ಜುನ+ ನೊಡೆನುತ+ ಕಮ
ಲೋದರನು +ಕೈಕೊಂಡನ್ +ಅಗ್ಗದನ್
ಆದಿಪುರುಷ +ಶ್ರೀನಿಜವ+ ವಿಶ್ವಾತ್ಮಕ +ಆಕೃತಿಯ
ವಾದಿಸುವ +ಷಟ್ತರ್ಕಗಿರ್ಕದ
ಭೇದ +ಕೊಳ್ಳದ+ ಸಕಲ+ ಲೋಕದ
ಬಿಡಿ +ವಿಸಟಂಬರಿವ +ವಿಮಲ +ವಿರಾಟ +ರೂಪವನು

ಅಚ್ಚರಿ:
(೧) ರೂಪದ ವರ್ಣನೆ: ವಾದಿಸುವ ಷಟ್ತರ್ಕಗಿರ್ಕದ ಭೇದ ಕೊಳ್ಳದ ಸಕಲ ಲೋಕದ ಬಿಡಿ ವಿಸಟಂಬರಿವ ವಿಮಲ ವಿರಾಟ ರೂಪವನು

ಪದ್ಯ ೬೦: ದ್ರೌಪದಿಯ ಸ್ಥಿತಿ ಹೇಗಿತ್ತು?

ಜನನವೇ ಪಾಂಚಾಲರಾಯನ
ಮನೆ ಮನೋವಲ್ಲಭರದಾರೆನೆ
ಮನುಜಗಿನುಜರು ಗಣ್ಯರೇ ಗೀರ್ವಾಣರಿಂ ಮಿಗಿಲು
ಎನಗೆ ಬಂದೆಡರೀ ವಿರಾಟನ
ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ (ವಿರಾಟ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಬಾಳನ್ನು ಒಮ್ಮೆ ನೋಡಿಕೊಳ್ಳುತ್ತಾ, ನಾನು ಜನಿಸಿದುದು ಪಾಂಚಾಲ ರಾಜನ ಮಗಳಾಗಿ, ನನ್ನ ಗಂಡಂದಿರು ಮನುಜಗಿನುಜರಿರಲಿ, ದೇವತೆಗಳಿಗೂ ಮಿಗಿಲು, ಹೀಗಿದ್ದರೂ ನನ್ನ ಪಾಲಿಗೆ ಬಂದುದೇನು, ವಿರಾಟನ ರಾನಿಯರ ಮುಡಿಯನ್ನು ಕಟ್ಟುವುದು, ಸುಗಂಧದ್ರವ್ಯವನ್ನು ಲೇಪಿಸುವುದು, ಕಾಲನ್ನೊತ್ತುವುದು, ಇದರಿಂದ ನಾನು ಉತ್ಸಾಹಗೊಳ್ಳಬೇಕು ಎಂದು ಮರುಗಿದಳು.

ಅರ್ಥ:
ಜನನ: ಹುಟ್ಟು; ರಾಯ: ರಾಜ; ಮನೆ: ಆಲಯ; ಮನ: ಮನಸ್ಸು; ವಲ್ಲಭ: ಗಂಡ, ಪತಿ; ಮನುಜ: ಮನುಷ್ಯ; ಗಣ್ಯ: ಶ್ರೇಷ್ಠ; ಗೀರ್ವಾಣ: ದೇವತೆ, ಸುರ; ಮಿಗಿಲು: ಹೆಚ್ಚು; ಬಂದು: ಒದಗಿದು; ವನಿತೆ: ಹೆಣ್ಣು; ಮುಡಿ: ತಲೆ, ಶಿರ; ಕಟ್ಟು: ಬಂಧಿಸು; ತನು: ದೇಹ; ತಿಗುರು: ಸುಗಂಧ ವಸ್ತು, ಪರಿಮಳದ್ರವ್ಯ; ಕಾಲು: ಪಾದ; ಒತ್ತು: ಲಟ್ಟಿಸು; ಕೆಲಸ: ಕಾರ್ಯ; ಉತ್ಸಾಹ: ಆಸಕ್ತಿ;

ಪದವಿಂಗಡಣೆ:
ಜನನವೇ +ಪಾಂಚಾಲ+ರಾಯನ
ಮನೆ +ಮನೋ+ವಲ್ಲಭರ್+ಅದಾರ್+ಎನೆ
ಮನುಜಗಿನುಜರು+ ಗಣ್ಯರೇ+ ಗೀರ್ವಾಣರಿಂ +ಮಿಗಿಲು
ಎನಗೆ+ ಬಂದೆಡರ್+ಈ+ ವಿರಾಟನ
ವನಿತೆಯರುಗಳ +ಮುಡಿಯ +ಕಟ್ಟುವ
ತನುವ +ತಿಗುರುವ +ಕಾಲನೊತ್ತುವ +ಕೆಲಸದುತ್ಸಾಹ

ಅಚ್ಚರಿ:
(೧) ಆಡು ಪದದ ಬಳಕೆ – ಮನುಜಗಿನುಜ

ಪದ್ಯ ೨೨: ಭೀಮನು ಏನೆಂದು ನಿಶ್ಚೈಸಿದನು?

ಒಳಗೆ ನಿಶ್ಚೈಸಿದನು ಮೊದಲಲಿ
ಹಿಳಿದು ಹಿಂಡುವೆನಿವಳ ಬಡಿದಾ
ಖಳನನಿವನೊಡಹುಟ್ಟಿದರನಿವನಾಪ್ತಪರಿಜನವ
ಬಳಿಕ ಪರಿಜನ ಸಹ ವಿರಾಟನ
ಕೊಲುವೆನರಿಯದ ಮುನ್ನ ಕೌರವ
ಕುಲವ ಸವರುವೆನೆಂದು ಕಿಡಿಕಿಡಿಯಾದನಾ ಭೀಮ (ವಿರಾಟ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಈ ಮರವನ್ನು ಕಿತ್ತು, ದ್ರೌಪದಿಯನ್ನು ಹೊಡೆದ ನೀಚನನ್ನು ಹೊಸಗಿ ಹಿಂಡಿ ಹಾಕಿ ಬಿಡುತ್ತೇನೆ, ಬಳಿಕ ಇವನ ಒಡ ಹುಟ್ಟಿದವರನ್ನು ಪರಿಜನರನ್ನು, ಆಪ್ತರನ್ನು ಸವರುತ್ತೇನೆ, ಬಳಿಕ ಪರಿಜನರೊಡನೆ ವಿರಾಟನನ್ನು ಕೊಲ್ಲುತ್ತೇನೆ, ಈ ಸಮಾಚಾರವು ಕೌರವರಿಗೆ ತಿಳಿಯುವ ಮೊದಲೇ ಕೌರವ ಕುಲವನ್ನು ನಾಶಮಾಡುತ್ತೇನೆ ಎಂದು ಭೀಮನು ಕಿಡಿಕಿಡಿಯಾದನು.

ಅರ್ಥ:
ನಿಶ್ಚೈಸು: ನಿರ್ಧರಿಸು; ಮೊದಲು: ಮುಂಚೆ; ಹಿಳಿ: ಹಿಸುಕಿ ರಸವನ್ನು ತೆಗೆ, ನಾಶಮಾಡು; ಹಿಂಡು: ಹಿಸುಕು, ತಿರುಚು; ಬಡಿ: ಹೊಡೆ; ಖಳ: ದುಷ್ಟ; ಒಡಹುಟ್ಟಿದ: ಜೊತೆಯಲ್ಲಿ ಜನಿಸಿದ; ಆಪ್ತ: ಹತ್ತಿರದ; ಪರಿಜನ: ಸುತ್ತಲಿನ ಜನ, ಬಂಧುಗಳು; ಬಳಿಕ: ನಂತರ; ಸಹ: ಜೊತೆ; ಕೊಲು: ಸಾಯಿಸು; ಅರಿ: ತಿಳಿ; ಮುನ್ನ: ಮುಂಚೆ; ಕುಲ: ವಂಶ; ಸವರು: ನಾಶಗೊಳಿಸು, ಧ್ವಂಸ ಮಾಡು; ಕಿಡಿಕಿಡಿ: ಕೋಪಗೊಂಡು;

ಪದವಿಂಗಡಣೆ:
ಒಳಗೆ +ನಿಶ್ಚೈಸಿದನು +ಮೊದಲಲಿ
ಹಿಳಿದು +ಹಿಂಡುವೆನ್+ಇವಳ +ಬಡಿದ್+ಆ
ಖಳನನ್+ಇವನ್+ಒಡಹುಟ್ಟಿದರನ್+ಇವನ್+ಆಪ್ತ+ಪರಿಜನವ
ಬಳಿಕ+ ಪರಿಜನ+ ಸಹ +ವಿರಾಟನ
ಕೊಲುವೆನ್+ಅರಿಯದ +ಮುನ್ನ +ಕೌರವ
ಕುಲವ +ಸವರುವೆನೆಂದು +ಕಿಡಿಕಿಡಿಯಾದನ್+ಆ+ ಭೀಮ

ಅಚ್ಚರಿ:
(೧) ಕೊಲು, ಸವರು, ಹಿಂಡು, ಹಿಳಿ – ನಾಶಮಾಡುವೆನೆಂದು ಹೇಳುವ ಪದಗಳು

ಪದ್ಯ ೫: ಸುದೇಷ್ಣೆಯನ್ನು ನೋಡಲು ಯಾರು ಬಂದರು?

ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ (ವಿರಾಟ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ಒಂದು ದಿನ ಸುದೇಷ್ಣೆಯನ್ನು ನೋಡಲು ಅವಳ ತಮ್ಮನಾದ, ಮಹಾ ಪರಾಕ್ರಮಿಯಾದ ಕೀಚಕನು ಆಗಮಿಸಿದನು. ಸುದೇಷ್ಣೆಯು ತನ್ನ ಅಂತಃಪುರದಲ್ಲಿ ಸಖೀಜನದ ಸಮೂಹದ ನಡುವೆ ಕುಳಿತಿದ್ದಳು, ಅವಳ ಅರಮನೆಗೆ ಬಂದು ಆಕೆಗೆ ಕಾಣಿಕೆಯನ್ನು ನೀಡಿ ನಮಸ್ಕರಿಸಿದನು.

ಅರ್ಥ:
ದಿವಸ: ದಿನ, ವಾರ; ಅರಸಿ: ರಾಣಿ; ಮಂದಿರ: ಆಲಯ; ಓಲೈಸು: ಸೇವೆಮಾಡು, ಉಪಚರಿಸು; ಐಂತದು: ಬಂದು ಸೇರು; ತಮ್ಮ: ಸಹೋದರ; ಅತುಳ: ಬಹಳ; ಭುಜಬಲ: ಪರಾಕ್ರಮಿ; ಹಿಂದೆ ಮುಂದೆ: ಅಕ್ಕ ಪಕ್ಕ; ಇಕ್ಕೆಲ: ಎರಡೂ ಕಡೆ; ಸತಿ: ಹೆಣ್ಣು; ಸಂದಣಿ: ಗುಂಪು; ಮಧ್ಯ: ನಡುವೆ; ಮೆರೆ: ಹೊಳೆವ; ಅರವಿಂದ: ಕಮಲ; ವದನ: ಮುಖ; ಕಂಡು: ನೋಡು; ಕಾಣಿಕೆ: ಉಡುಗೊರೆ; ಪೊಡಮಟ್ಟು: ನೀಡು;

ಪದವಿಂಗಡಣೆ:
ಒಂದು +ದಿವಸ +ವಿರಾಟನ್+ಅರಸಿಯ
ಮಂದಿರಲ್+ಓಲೈಸಲೆಂದ್+ಐ
ತಂದನ್+ಆಕೆಯ +ತಮ್ಮ +ಕೀಚಕನ್+ಅತುಳ +ಭುಜಬಲನು
ಹಿಂದೆ +ಮುಂದಿಕ್ಕೆಲದ+ ಸತಿಯರ
ಸಂದಣಿಯ+ ಮಧ್ಯದಲಿ+ ಮೆರೆವ್
ಅರವಿಂದ+ವದನೆಯ +ಕಂಡು +ಕಾಣಿಕೆಗೊಟ್ಟು +ಪೊಡಮಟ್ಟ

ಅಚ್ಚರಿ:
(೧) ಅರವಿಂದ ವದನೆ, ವಿರಾಟನರಸಿ – ಸುದೇಷ್ಣೆಯನ್ನು ಕರೆದ ಪರಿ
(೨) ಸುದೇಷ್ಣೆಯು ಕುಳಿತಿದ್ದ ಪರಿ – ಹಿಂದೆ ಮುಂದಿಕ್ಕೆಲದ ಸತಿಯರಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು

ಪದ್ಯ ೪: ಅರ್ಜುನನ ಯೋಚನಾ ಲಹರಿ ಹೇಗಿತ್ತು?

ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲವಿರಾಟಂಗವನ ದೆಸೆಯಿಂ ಭಯವಿಹೀನವದು
ಮುಳಿದು ಹೇಳಿಕೆಯಾದ ರವಿಸುತ
ಕಲಿತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ (ವಿರಾಟ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಕೀಚಕನು ಕೌರವರ ರಾಜ್ಯದಲ್ಲಿ ನುಗ್ಗಿ ಗೋಗ್ರಹಣ ಮಾದಿ ಅವರಿಗೆ ಶತ್ರುವಾಗಿರುವ ಬಲಶಾಲಿ, ಅವನ ದೆಸೆಯಿಂದ ವಿರಾಟನಿಗೆ ಬಲ ಬಂದಿದೆ. ಕರ್ನ, ತ್ರಿಗರ್ತರು ಮೊದಲಾದ ಕೌರವರ ಮಾಂಡಲಿಕರನ್ನು ಲೆಕ್ಕಿಸದೆ ವಿರಾಟನು ಪಶ್ಚಿಮದಲ್ಲಿ ಆಳುತ್ತಾನೆ, ಆದ್ದರಿಂದ ನಾವು ಮತ್ಸ್ಯನಗರಿಯಲ್ಲಿ ಅಜ್ಞಾತವಾಸವನ್ನು ಕಳೆಯಬಹುದೆಂದು ಅರ್ಜುನನು ಹೇಳಿದನು.

ಅರ್ಥ:
ವಳಿ: ತಿರುಗಿದುದು; ಹೊಕ್ಕು: ನುಗ್ಗು; ಹಗೆ: ವೈರಿ; ಬಲ: ಸೈನ್ಯ; ದೆಸೆ: ರೀತಿ, ಕಾರಣ, ನಿಮಿತ್ತ; ಭಯ: ಅಂಜಿಕೆ; ವಿಹೀನ: ಇಲ್ಲದಿರುವ; ಮುಳಿ: ಸಿಟ್ಟು, ಕೋಪ; ರವಿಸುತ: ಸೂರ್ಯನ ಮಗ (ಕರ್ಣ); ಕಲಿ: ಶೂರ; ಆದಿ: ಮುಂತಾದ; ಮಂಡಳಿಕ: ಸಾಮಂತ ರಾಜ; ಕೈಕೊಳ್ಳು: ಸ್ವೀಕರಿಸು; ಆಳು: ಅಧಿಕಾರ ನಡೆಸು; ಪಶ್ಚಿಮ: ಪಡುವಣ;

ಪದವಿಂಗಡಣೆ:
ವಳಿತವನು +ಹೊಕ್ಕ್+ಇರಿದು +ಕೌರವ
ರೊಳಗೆ+ ಹಗೆಯಾಗಿಹನು +ಕೀಚಕ
ಬಲ+ವಿರಾಟಂಗ್+ಅವನ+ ದೆಸೆಯಿಂ +ಭಯ+ವಿಹೀನವದು
ಮುಳಿದು +ಹೇಳಿಕೆಯಾದ +ರವಿಸುತ
ಕಲಿ+ತ್ರಿಗರ್ತಾದಿಗಳ್+ಎನಿಪ +ಮಂ
ಡಳಿಕರನು +ಕೈಕೊಳ್ಳದ್+ಆಳುವರ್+ಅವರು+ ಪಶ್ಚಿಮವ

ಅಚ್ಚರಿ:
(೧) ವಿರಾಟನಿಗೆ ಧೈರ್ಯ ಬರಲು ಕಾರಣ – ಕೀಚಕ ಬಲ ವಿರಾಟಂಗವನ ದೆಸೆಯಿಂ ಭಯವಿಹೀನವದು