ಪದ್ಯ ೩೮: ಅಶ್ವತ್ಥಾಮನು ಉಂಗುರವನ್ನು ಹೇಗೆ ಮೇಲಕ್ಕೆತ್ತಿದನು?

ಸರಳ ತೊಡಚಿ ತದೀಯ ಮಣಿ ಬಂ
ಧುರದ ಮುದ್ರಿಕೆಗೆಚ್ಚು ಹಿಳುಕಿನ
ಶಿರಕೆ ಶರವಾ ಹಿಳುಕಿನಲಿ ಕಣೆಯೆಚ್ಚು ಬಂಧದಲಿ
ಸರಳ ಸಂದರ್ಭದಲಿ ನಿಮಿಷಾಂ
ತರಕೆ ಫಡೆಪನ ಹೆಡೆವಣಿಯನು
ದ್ಧರಿಸುವಂತಿರೆ ತೆಗೆದು ಬಿಸುಟನು ರತುನಮುದ್ರಿಕೆಯ (ಆದಿ ಪರ್ವ, ೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಬಿಲ್ಲಿನಲ್ಲಿ ಬಾಣವನ್ನು ಹೂಡಿ, ರತ್ನದುಂಗುರಕ್ಕೆ ಹೊಡೆದು, ಆ ಬಾಣದ ಮೇಲ್ಭಾಗಕ್ಕೆ ಇನ್ನೊಂದು ಬಾನವನ್ನು ಹೊಡೆದು ಬಂಧಿಸಿ, ಈ ರೀತಿಯಾಗಿ ಬಾಣಗಳನ್ನು ಹೊಡೆಯುತ್ತಾ ನಿಮಿಷಮಾತ್ರದಲ್ಲಿಯೇ ಮೇಲಿನ ಬಾಣವನ್ನು ಹಿದಿದು ಆದಿಶೇಷನ ಹೆಡೆಯ ಮಣಿಯನ್ನು ಮೇಲಕ್ಕೆ ತೆಗೆದನೋ ಎಂಬಂತೆ ರತ್ನದುಂಗುರವನ್ನು ಮೇಲಕ್ಕೆ ತೆಗೆದು ಹಾಕಿದನು.

ಅರ್ಥ:
ಸರಳ: ಬಾಣ; ತೊಡಚು: ಹೂಡು; ಮಣಿ: ರತ್ನ; ಬಂಧುರ: ಬಾಗಿರುವುದು; ಮುದ್ರಿಕೆ: ಮೊಹರು ಮಾಡಲು ಬಳಸುವ ಲೋಹದ ವಸ್ತು, ಮುದ್ರೆ; ಎಚ್ಚು: ಬಾಣ ಪ್ರಯೋಗ ಮಾಡು; ಹಿಳುಕು: ಬಾಣದ ಹಿಂಭಾಗ; ಶಿರ: ತಲೆ; ಶರ: ಬಾಣ; ಕಣೆ: ಬಾಣ; ಬಂಧ: ಕಟ್ಟು, ಬಂಧನ; ಸಂದರ್ಭ: ರಚನೆ, ನಿರ್ಮಾಣ; ನಿಮಿಷಾಂತರ: ಅರ್ಧ ನಿಮಿಷಕ್ಕೆ; ಅಂತರ: ದೂರ; ಫಡೆಪ: ಆದಿಶೇಷ; ಹೆಡೆ: ಶಿರ; ಉದ್ಧರಿಸು: ಹೆಚ್ಚಾಗು, ಮೇಲೇಳು; ತೆಗೆ: ಹೊರತರು; ಬಿಸುಟು: ಹೊರಹಾಕು; ರತುನ: ರತ್ನ, ಬೆಲೆಬಾಳುವ ಹರಳು;

ಪದವಿಂಗಡಣೆ:
ಸರಳ+ ತೊಡಚಿ +ತದೀಯ +ಮಣಿ +ಬಂ
ಧುರದ +ಮುದ್ರಿಕೆಗ್+ಎಚ್ಚು +ಹಿಳುಕಿನ
ಶಿರಕೆ +ಶರವಾ +ಹಿಳುಕಿನಲಿ +ಕಣೆ+ಎಚ್ಚು +ಬಂಧದಲಿ
ಸರಳ +ಸಂದರ್ಭದಲಿ +ನಿಮಿಷಾಂ
ತರಕೆ +ಫಡೆಪನ +ಹೆಡೆವಣಿಯನ್
ಉದ್ಧರಿಸುವಂತಿರೆ+ ತೆಗೆದು +ಬಿಸುಟನು +ರತುನ+ಮುದ್ರಿಕೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಫಡೆಪನ ಹೆಡೆವಣಿಯನುದ್ಧರಿಸುವಂತಿರೆ
(೨) ಸರಳ, ಶರ,ಕಣೆ – ಸಮಾನಾರ್ಥಕ ಪದಗಳು

ಪದ್ಯ ೩೮: ದ್ರೋಣನು ದ್ರುಪದನ ತಲೆಯನ್ನು ಹೇಗೆ ಕಡಿದನು?

ಹಿಂದನೆನೆಯಾಖೂಳ ನಾವಾ
ರೆಂದು ಮರೆದಾ ಸಾಕದಂತಿರ
ಲೊಂದನಲ್ಲದೆ ನಿನ್ನ ತಲೆಗೆರಡಂಬ ತೊಡಚಿದರೆ
ಇಂದು ನಿನ್ನಯ ಬಾಯತಂಬುಲ
ತಿಂದವನು ನೋಡೆನುತ ಹೆರೆಯಂ
ಬಿಂದ ಕಡಿದಿಳುಹಿದನು ಪಾಂಚಾಲಾಧಿಪನ ಶಿರವ (ದ್ರೋಣ ಪರ್ವ, ೧೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಎಲವೋ ದುಷ್ಟ, ಹಿಂದಾದುದನ್ನು ನೆನೆಸಿಕೋ, ನಾವು ಯಾರೆಂಬುದನ್ನು ಮರೆತಿದ್ದೆಯಾ? ಅದು ಹಾಗಿರಲಿ, ಈ ದಿವಸ ನಿನ್ನ ತಲೆಗೆ ಒಂದಲ್ಲದೆ ಎರಡು ಬಾನಗಳನ್ನು ತೊಟ್ಟರೆ, ನಿನ್ನ ಬಾಯ ತಂಬುಲ ತಿಂದವನು ಎಂದುಕೋ ನೋಡು ಎಂದು ದ್ರೋಣನು ಹೆರೆಯಂಬಿನಿಂದ ದ್ರುಪದನ ತಲೆಯನ್ನು ಕಡಿದು ಬೀಳಿಸಿದನು.

ಅರ್ಥ:
ಹಿಂದೆ: ಪುರಾತನ; ನೆನೆ: ಜ್ಞಾಪಿಸು; ಖೂಳ: ದುಷ್ಟ; ಮರೆ: ನೆನಪಿನಿಂದ ದೂರಸರಿ; ಸಾಕು: ನಿಲ್ಲು; ತಲೆ: ಶಿರ; ಅಂಬು: ಬಾಣ; ತೊಡಚು: ಕಟ್ಟು, ಬಂಧಿಸು; ತಂಬುಲ: ವೀಳೆಯ, ಅಡಿಕೆ ಮತ್ತು ಎಲೆ; ತಿಂದು: ಸೇವಿಸು; ನೋಡು: ವೀಕ್ಷಿಸು; ಹೆರೆ: ಸುಲಿ; ಕಡಿ: ಸೀಳು; ಅಧಿಪ: ಒಡೆಯ, ರಾಜ; ಶಿರ: ತಲೆ;

ಪದವಿಂಗಡಣೆ:
ಹಿಂದ +ನೆನೆ+ಆ+ಖೂಳ +ನಾವ್
ಆರೆಂದು +ಮರೆದಾ+ ಸಾಕ್+ಅದಂತಿರಲ್
ಒಂದನಲ್ಲದೆ +ನಿನ್ನ +ತಲೆಗ್+ಎರಡಂಬ +ತೊಡಚಿದರೆ
ಇಂದು +ನಿನ್ನಯ +ಬಾಯ+ತಂಬುಲ
ತಿಂದವನು +ನೋಡೆನುತ +ಹೆರೆ
ಅಂಬಿಂದ +ಕಡಿದ್+ಇಳುಹಿದನು +ಪಾಂಚಾಲ+ಅಧಿಪನ +ಶಿರವ

ಅಚ್ಚರಿ:
(೧) ದ್ರುಪದನನ್ನು ಪಾಂಚಾಲಾಧಿಪ ಎಂದು ಕರೆದಿರುವುದು

ಪದ್ಯ ೨೧: ಭೀಮನ ಸಹಾಯಕ್ಕೆ ಯಾರು ಬಂದರು?

ಕರಿ ಬಲುಹು ಕಲಿ ಭೀಮಸೇನನು
ದುರುಳನಿನ್ನೇನಹನೆನುತ ಮೋ
ಹರಿಸಿ ಕವಿದುದು ಮತ್ಸ್ಯ ಸೃಂಜಯ ಪಂಚಕೈಕೆಯರು
ತಿರುವಿಗಂಬನು ತೊಡಚಿ ಸಾತ್ಯಕಿ
ನರನ ಮಗ ಹೈಡಿಂಬ ಯವನೇ
ಶ್ವರರು ಧೃಷ್ಟದ್ಯುಮ್ನ ಮೊದಲಾಗೈದಿದರು ಗಜವ (ದ್ರೋಣ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಈ ಆನೆಯ ಸತ್ವವು ಬಲು ಹೆಚ್ಚಿನದು, ಭೀಮನು ಮೂಮ್ದರಿಯದೆ ಹೋರಾಡುವವನು. ಇವನು ಏನಾಗುವನೋ ಏನೋ ಎಂದುಕೊಂಡು ಅವನ ಸಹಾಯಕ್ಕೆ ವಿರಾಟ, ಕೈಕೆಯರು ಬಂದರು. ಬಿಲ್ಲಿಗೆ ಬಾಣವನ್ನು ಹೂಡಿ ಸಾತ್ಯಕಿಯು, ಅಭಿಮನ್ಯು, ಘಟೋತ್ಕಚ, ಯವನರಾಜರು, ಧೃಷ್ಟದ್ಯುಮ್ನ ಮೊದಲಾದವರು ಸುಪ್ರತೀಕಗಜದತ್ತ ಬಂದರು.

ಅರ್ಥ:
ಕರಿ: ಆನೆ; ಬಲುಹು: ಶಕ್ತಿ; ಕಲಿ: ಶೂರ; ದುರುಳ: ದುಷ್ಟ; ಮೋಹರ: ಸೈನ್ಯ, ದಂಡು, ಯುದ್ಧ; ಕವಿ: ಆವರಿಸು; ತಿರುವು: ಬಾಗು, ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಅಂಬು: ಬಾಣ; ತೊಡಚು: ಹೂಡು; ನರ: ಅರ್ಜುನ; ಮಗ: ಸುತ; ಹೈಡಿಂಬ: ಘಟೋತ್ಕಚ; ಮೊದಲಾದ: ಮುಂತಾದ; ಐದು: ಬಂದುಸೇರು; ಗಜ: ಆನೆ;

ಪದವಿಂಗಡಣೆ:
ಕರಿ +ಬಲುಹು +ಕಲಿ +ಭೀಮಸೇನನು
ದುರುಳನ್+ಇನ್ನೇನಹನ್+ಎನುತ +ಮೋ
ಹರಿಸಿ +ಕವಿದುದು +ಮತ್ಸ್ಯ +ಸೃಂಜಯ +ಪಂಚ+ಕೈಕೆಯರು
ತಿರುವಿಗ್+ಅಂಬನು +ತೊಡಚಿ +ಸಾತ್ಯಕಿ
ನರನ +ಮಗ +ಹೈಡಿಂಬ +ಯವನೇ
ಶ್ವರರು +ಧೃಷ್ಟದ್ಯುಮ್ನ +ಮೊದಲಾಗ್+ಐದಿದರು +ಗಜವ

ಅಚ್ಚರಿ:
(೧) ಕರಿ, ಕಲಿ – ಪದಗಳ ಬಲಕೆ
(೨) ಬಾಣವನ್ನು ಹೂಡು ಎಂದು ಹೇಳುವ ಪರಿ – ತಿರುವಿಗಂಬನು ತೊಡಚಿ

ಪದ್ಯ ೩೯: ದುರ್ಯೋಧನನು ತನ್ನ ಅಭಿಮಾನ ಬತ್ತಿತೆಂದು ಏಕೆ ಹೇಳಿದ?

ಮತ್ತೆ ಗೊಳ್ಳೆಂದುದು ನೃಪಾಲನ
ಮತ್ತಕಾಶಿನಿಯರು ಯುಧಿಷ್ಠಿರ
ನಿತ್ತದಿವ್ಯ ದುಕೂಲವನು ತಡಿಗಡರಿ ತೊಡಚಿದೆನು
ಬತ್ತಿತೆನ್ನಭಿಮಾನ ಜಲನಿಧಿ
ಮತ್ತೆ ಮಾರಿಯ ಮಸಕವನು ನೀ
ವ್ಚಿತ್ತವಿಸಿರೇ ಬೊಪ್ಪಯೆಂದನು ಕೌರವರ ರಾಯ (ಸಭಾ ಪರ್ವ, ೧೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಮತ್ತೆ ಯುಧಿಷ್ಠಿರನ ಅಂತಃಪುರದವರು ಘೊಳ್ಳನೆ ನಕ್ಕರು. ಅವನು ತರಿಸಿಕೊಟ್ಟ ಉತ್ತಮ ವಸ್ತ್ರವನ್ನು ಆ ನೀರಿನ ತಡಿಯನ್ನು ಹತ್ತಿ ಉಟ್ಟುಕೊಂಡೆನು. ನನ್ನ ಅಭಿಮಾನ ಸಮುದ್ರವು ಬತ್ತಿ ಹೋಯಿತು. ಇಷ್ಟೇ ಅಲ್ಲ ಅಪಮಾನ ಮಾರಿಯ ಹೊಡೆತವನ್ನು, ಅಪ್ಪ ನೀವು ಗಮನವಿಟ್ಟು ಕೇಳಿರಿ.

ಅರ್ಥ:
ಗೊಳ್ಳು: ನಗುವನ್ನು ಚಿತ್ರಿಸುವ ಪದ; ನೃಪಾಲ: ರಾಜ; ಮತ್ತಕಾಶಿನಿ: ಸುಂದರಿ; ದಿವ್ಯ: ಶ್ರೇಷ್ಠ; ದುಕೂಲ: ರೇಷ್ಮೆ ಬಟ್ಟೆ; ತಡಿಗಡರು: ದಡಕ್ಕೆ ಹತ್ತು; ತೊಡಚು: ಕಟ್ಟು, ಬಂಧಿಸು; ಬತ್ತು: ಒಣಗು, ಆರು, ಬರಿದಾಗು; ಅಭಿಮಾನ: ಹೆಮ್ಮೆ, ಅಹಂಕಾರ; ಜಲನಿಧಿ: ಸಾಗರ; ಮಾರಿ: ಮುಖ; ಮಸಕ: ಕಾಂತಿ, ತೇಜಸ್ಸು; ಚಿತ್ತವಿಸು: ಗಮನವಿಡು; ಬೊಪ್ಪ: ತಂದೆ; ರಾಯ: ರಾಜ;

ಪದವಿಂಗಡಣೆ:
ಮತ್ತೆ +ಗೊಳ್ಳೆಂದುದು +ನೃಪಾಲನ
ಮತ್ತಕಾಶಿನಿಯರು +ಯುಧಿಷ್ಠಿರನ್
ಇತ್ತ+ದಿವ್ಯ+ ದುಕೂಲವನು+ ತಡಿಗಡರಿ+ ತೊಡಚಿದೆನು
ಬತ್ತಿತ್+ಎನ್+ಅಭಿಮಾನ +ಜಲನಿಧಿ
ಮತ್ತೆ +ಮಾರಿಯ +ಮಸಕವನು +ನೀವ್
ಚಿತ್ತವಿಸಿರೇ +ಬೊಪ್ಪ+ಎಂದನು +ಕೌರವರ+ ರಾಯ

ಅಚ್ಚರಿ:
(೧) ಅಂತಃಪುರದ ಸ್ತ್ರೀಯರನ್ನು ಕರೆದ ಬಗೆ – ಮತ್ತಕಾಶಿನಿ
(೨) ದುರ್ಯೋಧನನ ದುಃಖವನ್ನು ತಿಳಿಸುವ ಪರಿ – ಬತ್ತಿತೆನ್ನಭಿಮಾನ ಜಲನಿಧಿ