ಪದ್ಯ ೩೮: ಅಶ್ವತ್ಥಾಮನು ಉಂಗುರವನ್ನು ಹೇಗೆ ಮೇಲಕ್ಕೆತ್ತಿದನು?

ಸರಳ ತೊಡಚಿ ತದೀಯ ಮಣಿ ಬಂ
ಧುರದ ಮುದ್ರಿಕೆಗೆಚ್ಚು ಹಿಳುಕಿನ
ಶಿರಕೆ ಶರವಾ ಹಿಳುಕಿನಲಿ ಕಣೆಯೆಚ್ಚು ಬಂಧದಲಿ
ಸರಳ ಸಂದರ್ಭದಲಿ ನಿಮಿಷಾಂ
ತರಕೆ ಫಡೆಪನ ಹೆಡೆವಣಿಯನು
ದ್ಧರಿಸುವಂತಿರೆ ತೆಗೆದು ಬಿಸುಟನು ರತುನಮುದ್ರಿಕೆಯ (ಆದಿ ಪರ್ವ, ೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಬಿಲ್ಲಿನಲ್ಲಿ ಬಾಣವನ್ನು ಹೂಡಿ, ರತ್ನದುಂಗುರಕ್ಕೆ ಹೊಡೆದು, ಆ ಬಾಣದ ಮೇಲ್ಭಾಗಕ್ಕೆ ಇನ್ನೊಂದು ಬಾನವನ್ನು ಹೊಡೆದು ಬಂಧಿಸಿ, ಈ ರೀತಿಯಾಗಿ ಬಾಣಗಳನ್ನು ಹೊಡೆಯುತ್ತಾ ನಿಮಿಷಮಾತ್ರದಲ್ಲಿಯೇ ಮೇಲಿನ ಬಾಣವನ್ನು ಹಿದಿದು ಆದಿಶೇಷನ ಹೆಡೆಯ ಮಣಿಯನ್ನು ಮೇಲಕ್ಕೆ ತೆಗೆದನೋ ಎಂಬಂತೆ ರತ್ನದುಂಗುರವನ್ನು ಮೇಲಕ್ಕೆ ತೆಗೆದು ಹಾಕಿದನು.

ಅರ್ಥ:
ಸರಳ: ಬಾಣ; ತೊಡಚು: ಹೂಡು; ಮಣಿ: ರತ್ನ; ಬಂಧುರ: ಬಾಗಿರುವುದು; ಮುದ್ರಿಕೆ: ಮೊಹರು ಮಾಡಲು ಬಳಸುವ ಲೋಹದ ವಸ್ತು, ಮುದ್ರೆ; ಎಚ್ಚು: ಬಾಣ ಪ್ರಯೋಗ ಮಾಡು; ಹಿಳುಕು: ಬಾಣದ ಹಿಂಭಾಗ; ಶಿರ: ತಲೆ; ಶರ: ಬಾಣ; ಕಣೆ: ಬಾಣ; ಬಂಧ: ಕಟ್ಟು, ಬಂಧನ; ಸಂದರ್ಭ: ರಚನೆ, ನಿರ್ಮಾಣ; ನಿಮಿಷಾಂತರ: ಅರ್ಧ ನಿಮಿಷಕ್ಕೆ; ಅಂತರ: ದೂರ; ಫಡೆಪ: ಆದಿಶೇಷ; ಹೆಡೆ: ಶಿರ; ಉದ್ಧರಿಸು: ಹೆಚ್ಚಾಗು, ಮೇಲೇಳು; ತೆಗೆ: ಹೊರತರು; ಬಿಸುಟು: ಹೊರಹಾಕು; ರತುನ: ರತ್ನ, ಬೆಲೆಬಾಳುವ ಹರಳು;

ಪದವಿಂಗಡಣೆ:
ಸರಳ+ ತೊಡಚಿ +ತದೀಯ +ಮಣಿ +ಬಂ
ಧುರದ +ಮುದ್ರಿಕೆಗ್+ಎಚ್ಚು +ಹಿಳುಕಿನ
ಶಿರಕೆ +ಶರವಾ +ಹಿಳುಕಿನಲಿ +ಕಣೆ+ಎಚ್ಚು +ಬಂಧದಲಿ
ಸರಳ +ಸಂದರ್ಭದಲಿ +ನಿಮಿಷಾಂ
ತರಕೆ +ಫಡೆಪನ +ಹೆಡೆವಣಿಯನ್
ಉದ್ಧರಿಸುವಂತಿರೆ+ ತೆಗೆದು +ಬಿಸುಟನು +ರತುನ+ಮುದ್ರಿಕೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಫಡೆಪನ ಹೆಡೆವಣಿಯನುದ್ಧರಿಸುವಂತಿರೆ
(೨) ಸರಳ, ಶರ,ಕಣೆ – ಸಮಾನಾರ್ಥಕ ಪದಗಳು