ಪದ್ಯ ೩೮: ದ್ರೋಣನು ದ್ರುಪದನ ತಲೆಯನ್ನು ಹೇಗೆ ಕಡಿದನು?

ಹಿಂದನೆನೆಯಾಖೂಳ ನಾವಾ
ರೆಂದು ಮರೆದಾ ಸಾಕದಂತಿರ
ಲೊಂದನಲ್ಲದೆ ನಿನ್ನ ತಲೆಗೆರಡಂಬ ತೊಡಚಿದರೆ
ಇಂದು ನಿನ್ನಯ ಬಾಯತಂಬುಲ
ತಿಂದವನು ನೋಡೆನುತ ಹೆರೆಯಂ
ಬಿಂದ ಕಡಿದಿಳುಹಿದನು ಪಾಂಚಾಲಾಧಿಪನ ಶಿರವ (ದ್ರೋಣ ಪರ್ವ, ೧೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಎಲವೋ ದುಷ್ಟ, ಹಿಂದಾದುದನ್ನು ನೆನೆಸಿಕೋ, ನಾವು ಯಾರೆಂಬುದನ್ನು ಮರೆತಿದ್ದೆಯಾ? ಅದು ಹಾಗಿರಲಿ, ಈ ದಿವಸ ನಿನ್ನ ತಲೆಗೆ ಒಂದಲ್ಲದೆ ಎರಡು ಬಾನಗಳನ್ನು ತೊಟ್ಟರೆ, ನಿನ್ನ ಬಾಯ ತಂಬುಲ ತಿಂದವನು ಎಂದುಕೋ ನೋಡು ಎಂದು ದ್ರೋಣನು ಹೆರೆಯಂಬಿನಿಂದ ದ್ರುಪದನ ತಲೆಯನ್ನು ಕಡಿದು ಬೀಳಿಸಿದನು.

ಅರ್ಥ:
ಹಿಂದೆ: ಪುರಾತನ; ನೆನೆ: ಜ್ಞಾಪಿಸು; ಖೂಳ: ದುಷ್ಟ; ಮರೆ: ನೆನಪಿನಿಂದ ದೂರಸರಿ; ಸಾಕು: ನಿಲ್ಲು; ತಲೆ: ಶಿರ; ಅಂಬು: ಬಾಣ; ತೊಡಚು: ಕಟ್ಟು, ಬಂಧಿಸು; ತಂಬುಲ: ವೀಳೆಯ, ಅಡಿಕೆ ಮತ್ತು ಎಲೆ; ತಿಂದು: ಸೇವಿಸು; ನೋಡು: ವೀಕ್ಷಿಸು; ಹೆರೆ: ಸುಲಿ; ಕಡಿ: ಸೀಳು; ಅಧಿಪ: ಒಡೆಯ, ರಾಜ; ಶಿರ: ತಲೆ;

ಪದವಿಂಗಡಣೆ:
ಹಿಂದ +ನೆನೆ+ಆ+ಖೂಳ +ನಾವ್
ಆರೆಂದು +ಮರೆದಾ+ ಸಾಕ್+ಅದಂತಿರಲ್
ಒಂದನಲ್ಲದೆ +ನಿನ್ನ +ತಲೆಗ್+ಎರಡಂಬ +ತೊಡಚಿದರೆ
ಇಂದು +ನಿನ್ನಯ +ಬಾಯ+ತಂಬುಲ
ತಿಂದವನು +ನೋಡೆನುತ +ಹೆರೆ
ಅಂಬಿಂದ +ಕಡಿದ್+ಇಳುಹಿದನು +ಪಾಂಚಾಲ+ಅಧಿಪನ +ಶಿರವ

ಅಚ್ಚರಿ:
(೧) ದ್ರುಪದನನ್ನು ಪಾಂಚಾಲಾಧಿಪ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ