ಪದ್ಯ ೪೮: ಶಲ್ಯ ಪಾರ್ಥರ ಚಾಪಯುದ್ಧವು ಹೇಗಿತ್ತು?

ಅರಸ ಕೇಳೈ ಶಲ್ಯ ಪಾರ್ಥರ
ಶರ ವಿಧಾನವನವರ ಬಾಣೋ
ತ್ಕರವನವರಂಬುಗಳ ಬಹಳಾಡಮ್ಬರಧ್ವನಿಯ
ನಿರುಪಮಾಸ್ತ್ರ ಪ್ರೌಢಿಯನು ದು
ರ್ಧರ ಶಿಳೀಮುಖ ಸರ್ಗಬಂಧ
ಸ್ಫುರಣವನು ಹಿಂದೀಸು ದಿನ ಕಾಣೆನು ರಣಾಗ್ರದಲಿ (ಶಲ್ಯ ಪರ್ವ, ೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅರ್ಜುನ ಶಲ್ಯರಿಗೆ ಬಿಲ್ಲು ಯುದ್ಧವಾರಂಭವಾಯಿತು. ಅವರು ಆಯ್ದು ಕೊಳ್ಳುವ ಬಾಣಗಳು, ಬಿಲ್ಲಿನ ಟಂಕಾರ, ಬಿಡುವ ವಿಧಾನದ ಹೆಗ್ಗಳಿಕೆ, ಮಹತ್ತುಗಳನ್ನು ಇಷ್ಟುದಿನಗಳ ಯುದ್ಧದಲ್ಲಿ ನಾನು ನೋಡಲೇ ಇಲ್ಲ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಶರ: ಬಾಣ; ವಿಧಾನ: ರೀತಿ; ಬಾಣ: ಅಂಬು; ಉತ್ಕರ: ಅತಿಶಯ; ಅಂಬು: ಬಾಣ; ಬಹಳ: ತುಂಬ; ಆಡಂಬರ: ತೋರಿಕೆ; ಧ್ವನಿ: ಶಬ್ದ; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಅಸ್ತ್ರ: ಶಸ್ತ್ರ; ಪ್ರೌಢಿ: ಧೈರ್ಯ, ಪ್ರಬುದ್ಧನಾದವನು; ದುರ್ಧರ: ಕಠಿಣವಾದ; ಶಿಳೀಮುಖ: ಬಾಣ; ಸರ್ಗ: ಗುಂಪು; ಬಂಧ: ಕಟ್ಟು; ಸ್ಫುರಣ: ನಡುಗುವುದು; ಹಿಂದೆ: ನಡೆದ, ಭೂತ; ಈಸು: ಇಷ್ಟು; ದಿನ: ವಾರ; ಕಾಣು: ತೋರು; ರಣ: ಯುದ್ಧ; ಅಗ್ರ: ಮುಂಭಾಗ;

ಪದವಿಂಗಡಣೆ:
ಅರಸ +ಕೇಳೈ +ಶಲ್ಯ +ಪಾರ್ಥರ
ಶರ +ವಿಧಾನವನ್+ಅವರ +ಬಾಣ
ಉತ್ಕರವನ್+ಅವರ್+ಅಂಬುಗಳ +ಬಹಳ+ಆಡಂಬರ+ಧ್ವನಿಯ
ನಿರುಪಮ+ಅಸ್ತ್ರ+ ಪ್ರೌಢಿಯನು +ದು
ರ್ಧರ +ಶಿಳೀಮುಖ +ಸರ್ಗ+ಬಂಧ
ಸ್ಫುರಣವನು +ಹಿಂದೀಸು +ದಿನ +ಕಾಣೆನು +ರಣಾಗ್ರದಲಿ

ಅಚ್ಚರಿ:
(೧) ಶರ, ಬಾಣ, ಶಿಳೀಮುಖ, ಅಂಬು – ಸಮಾನಾರ್ಥಕ ಪದ

ಪದ್ಯ ೪೩: ಭೀಷ್ಮಾರ್ಜುನರು ಯಾವ ಅಸ್ತ್ರಗಳಿಂದ ಯುದ್ಧವನ್ನು ಮಾಡಿದರು?

ಉರಗ ಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ (ಭೀಷ್ಮ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಸರ್ಪಾಸ್ತ್ರವನ್ನು ಅರ್ಜುನನು ಗರುಡಾಸ್ತ್ರದಿಂದ ಕಡಿದನು, ಅರ್ಜುನನ ಆಗ್ನೇಯಾಸ್ತ್ರವನ್ನು ಭೀಷ್ಮನು ವರುಣಾಸ್ತ್ರದಿಂದ ಉಪಶಮನ ಮಾಡಿದನು, ಪರ್ವತಾಸ್ತ್ರವನ್ನು ಭೀಷ್ಮನು ವಜ್ರಾಸ್ತ್ರದಿಂದ ವಿಫಲಗೊಳಿಸಿದನು, ಅರ್ಜುನನ ತಿಮಿರಾಸ್ತ್ರವನ್ನು ಭೀಷ್ಮನು ಸೂರ್ಯಾಸ್ತ್ರದಿಂದ ಗೆದ್ದನು.

ಅರ್ಥ:
ಉರಗ: ಹಾವು; ಬಾಣ: ಅಂಬು; ಕರೆ: ಬರೆಮಾಡು; ಶರ: ಬಾಣ; ತವಿಸು: ಕೊಲ್ಲು, ನಾಶಮಾಡು; ಉರಿ: ಬೆಂಇ; ವಿಶಿಖ: ಬಾಣ, ಅಂಬು; ನಂದಿಸು: ಆರಿಸು; ಜಲ: ನೀರು; ಅಸ್ತ್ರ: ಶಸ್ತ್ರ; ಗಿರಿ: ಬೆಟ್ಟ; ಶಿಳೀಮುಖ: ಬಾಣ; ವಜ್ರ: ವಜ್ರಾಸ್ತ್ರ; ಹರಿಸು: ಬಿಡು, ವ್ಯಾಪಿಸು; ತಿಮಿರ: ಕತ್ತಲೆ; ತರಣಿ: ಸೂರ್ಯ; ಮಾರ್ಗಣ: ಬಾಣ; ತರಿ: ಬಿಡು; ವಹಿಲ: ಬೇಗ, ತ್ವರೆ;

ಪದವಿಂಗಡಣೆ:
ಉರಗ +ಬಾಣವನ್+ಇವರು +ಕರೆದರು
ಗರುಡ +ಶರದಲಿ +ಪಾರ್ಥ +ತವಿಸಿದನ್
ಉರಿಯ +ವಿಶಿಖವನ್+ಇವರು +ನಂದಿಸಿದರು+ ಜಲಾಸ್ತ್ರದಲಿ
ಗಿರಿ+ಶಿಳೀಮುಖಕ್+ಇವರು +ವಜ್ರವ
ಹರಿಸಿದರು +ತಿಮಿರಾಸ್ತ್ರವ್+ಎದ್ದರೆ
ತರಣಿ+ ಮಾರ್ಗಣದಿಂದ +ತರಿದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ಬಾಣಕ್ಕೆ ಬಳಸಿದ ಪದಗಳು – ಬಾಣ, ಶರ, ವಿಶಿಖ, ಶಿಳೀಮುಖ, ಮಾರ್ಗಣ
(೨) ಅಸ್ತ್ರಗಳ ಬಲಕೆ – ಉರಗ, ಗರುಡ; ಉರಿ, ಜಲ; ಗಿರಿ, ವಜ್ರ; ತಿಮಿರ, ತರಣಿ;

ಪದ್ಯ ೩೪: ಸರ್ಪಾಸ್ತ್ರವು ಕರ್ಣನಿಗೆ ಏನೆಂದು ಹೇಳಿತು?

ಶಿವನ ಮರೆಯನು ಹೊಗಲಿ ಮೇಣ್ ವಾ
ಸವನ ಸೀಮೆಯೊಳಿರಲಿ ಪಾತಾ
ಳವನು ಹೊಗಲಂಬುಧಿಯ ಮುಳುಗಲಿ ಜವನ ಕೆಳೆಗೊಳಲಿ
ಭುವನಕತಿಶಯವಾಗಿ ರಣದಲಿ
ತಿವಿವೆ ಪಾರ್ಥನನೆನಲು ಕೇಳಿದು
ರವಿಯ ಮಗ ಬೆರಗಾಗಿ ಬೆಸಗೊಂಡನು ಶಿಳೀಮುಖವ (ಕರ್ಣ ಪರ್ವ, ೨೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರವು ತನ್ನ ಬೇಡಿಕೆಯನ್ನು ಮುಂದುವರಿಸುತ್ತಾ, ಅರ್ಜುನನು ಶಿವನ ಆಶ್ರಯಕ್ಕೆ ಹೋಗಲಿ, ಇಂದ್ರನ ರಕ್ಷಣೆಯಲ್ಲಿರಲಿ, ಪಾತಾಲಕ್ಕೆ ಇಳಿದು ಮರೆಯಾಗಲಿ, ಸಮುದ್ರದಲ್ಲಿ ಮುಳುಗಲಿ, ಯಮನ ಸ್ನೇಹವನ್ನು ಮಾಡಿಕೊಳ್ಲಲಿ, ಅರ್ಜುನನನ್ನು ಇಂದು ಯುದ್ಧದಲ್ಲಿ ಸಂಹರಿಸುತ್ತೇನೆ ಎಂದು ಸರ್ಪಾಸ್ತ್ರವು ಬೇಡಿಕೋಳ್ಳಲು, ಕರ್ಣನು ಬೆರಗಾಗಿ ಆ ಬಾಣವನ್ನು ಕೇಳಿದನು.

ಅರ್ಥ:
ಶಿವ: ಶಂಕರ; ಮರೆ: ಮೊರೆ, ಶರಣಾಗತಿ; ಹೊಗಲಿ: ತೆರಳಲಿ; ಮೇಣ್: ಅಥವ; ವಾಸವ:ಇಂದ್ರ; ಸೀಮೆ: ಎಲ್ಲೆ, ಗಡಿ, ಮೇರೆ; ಪಾತಾಳ: ಅಧೋಲೋಕ; ಅಂಬುಧಿ: ಸಾಗರ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಜವ: ಯಮ; ಕೆಳೆ: ಸ್ನೇಹ, ಗೆಳೆತನ; ಭುವನ: ಲೋಕ; ಅತಿಶಯ: ಹೆಚ್ಚಾಗು; ರಣ: ಯುದ್ಧ; ತಿವಿ: ಚುಚ್ಚು; ರವಿ: ಸೂರ್ಯ; ಮಗ: ಸೂನು; ಬೆರಗು: ಆಶ್ಚರ್ಯ; ಬೆಸ:ಕೇಳುವುದು, ವಿಚಾರಿಸುವುದು; ಶಿಳೀಮುಖ: ಬಾಣ;

ಪದವಿಂಗಡಣೆ:
ಶಿವನ +ಮರೆಯನು +ಹೊಗಲಿ +ಮೇಣ್ +ವಾ
ಸವನ +ಸೀಮೆಯೊಳಿರಲಿ+ ಪಾತಾ
ಳವನು +ಹೊಗಲ್+ಅಂಬುಧಿಯ +ಮುಳುಗಲಿ +ಜವನ+ ಕೆಳೆಗೊಳಲಿ
ಭುವನಕ್+ಅತಿಶಯವಾಗಿ +ರಣದಲಿ
ತಿವಿವೆ +ಪಾರ್ಥನನ್+ಎನಲು+ ಕೇಳಿದು
ರವಿಯ +ಮಗ +ಬೆರಗಾಗಿ+ ಬೆಸಗೊಂಡನು+ ಶಿಳೀಮುಖವ

ಅಚ್ಚರಿ:
(೧) ಶಿಳೀಮುಖ ಪದದ ಪ್ರಯೋಗ
(೨) ಇಂದ್ರನನ್ನು ವಾಸವನ ಎಂದು ಕರೆದಿರುವುದು
(೩) ಹೊಗಲಿ, ಮುಳುಗಲಿ, ಇರಲಿ, ಕೆಳೆಗೊಳಲಿ – ಪದಗಳ ಬಳಕೆ

ಪದ್ಯ ೧೮: ಅರ್ಜುನ ಅಶ್ವತ್ಥಾಮರ ಬಾಣ ಯುದ್ಧ ಹೇಗೆ ಸಾಗಿತು?

ಸರಳ ಹರಿಮೇಖಳೆಗೆ ನೀವೇ
ಗುರುಗಳಲ್ಲಾ ನಿಮ್ಮ ವಿದ್ಯೆಯ
ಹುರುಳುಗೆಡಿಸುವಿರೆನುತ ಗುರುಸುತನಂಬ ಹರೆಗಡಿದು
ತುರಗದಲಿ ರಥಚಕ್ರದಲಿ ಕೂ
ಬರದೊಳೀಸಿನಲಚ್ಚಿನಲಿ ದು
ರ್ಧರ ಶಿಳೀಮುಖ ಜಾಳವನು ಜೋಡಿಸಿದನಾ ಪಾರ್ಥ (ಕರ್ಣ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಬಾಣದ ಇಂದ್ರಜಾಲ ವಿದ್ಯೆಗೆ ನೀವೆ ನನ್ನ ಗುರುಗಳು, ನೀವು ಕಲಿಸಿದ ವಿದ್ಯೆಯನ್ನು ನೀವೇ ಮೂದಲಿಸುತ್ತಿರುವಿರಲ್ಲಾ, ಎಂದು ಅರ್ಜುನನು ಅಶ್ವತ್ಥಾಮನ ಬಾಣಗಳನ್ನು ಕತ್ತರಿಸಿ ಅವನ ರಥ, ಕುದುರೆ, ಗಾಲಿ, ಈಚು, ಅಚ್ಚು, ನೊಗಗಳಿಗೆ ಬಾಣಗಳನ್ನು ಬಿಟ್ಟನು.

ಅರ್ಥ:
ಸರಳು: ಬಾಣ; ಹರಿಮೇಖಲೆ: ರತ್ನದ ಡಾಬು; ಗುರು: ಆಚಾರ್ಯ; ವಿದ್ಯೆ: ಜ್ಞಾನ; ಹುರುಳು: ಶಕ್ತಿ, ಸಾಮರ್ಥ್ಯ; ಕೆಡಿಸು: ಹಾಳು ಮಾದು; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಹರೆ: ಚೆದುರು; ಕಡಿ: ಸೀಳು; ತುರಗ: ಅಶ್ವ, ಕುದುರೆ; ರಥ: ಬಂಡಿ; ಚಕ್ರ: ಗಾಲಿ; ಕೂಬರ: ಬಂಡಿಯ ಈಸು; ಈಸು: ಗಾಡಿಯ ಮೂಕಿ, ಗಾಡಿ ಹೊಡೆಯುವವನು ಕೂಡುವ ಗಾಡಿಯ ಮುಂಭಾಗದ ಮರ; ದುರ್ಧರ: ಕಠಿನವಾದ; ಶಿಳೀಮುಖ: ಬಾಣ; ಜಾಳ: ಬಲೆ; ಸಮೂಹ; ಜೋಡಿಸು: ನಿರ್ಮಿಸು;

ಪದವಿಂಗಡಣೆ:
ಸರಳ+ ಹರಿಮೇಖಳೆಗೆ +ನೀವೇ
ಗುರುಗಳಲ್ಲಾ +ನಿಮ್ಮ +ವಿದ್ಯೆಯ
ಹುರುಳು+ಕೆಡಿಸುವಿರ್+ಎನುತ +ಗುರುಸುತನ್+ಅಂಬ +ಹರೆಗಡಿದು
ತುರಗದಲಿ+ ರಥ+ಚಕ್ರದಲಿ+ ಕೂ
ಬರದೊಳ್+ಈಸಿನಲ್+ಅಚ್ಚಿನಲಿ +ದು
ರ್ಧರ +ಶಿಳೀಮುಖ+ ಜಾಳವನು+ ಜೋಡಿಸಿದನಾ+ ಪಾರ್ಥ

ಅಚ್ಚರಿ:
(೧) ಬಾಣದ ಜಾಲ ಎಂದು ಹೇಳಲು – ಶಿಳೀಮುಖ ಜಾಳವನು ಜೋಡಿಸಿದ
(೨) ಶಿಳಿಮುಖ, ಅಂಬ, ಸರಳ – ಸಮನಾರ್ಥಕ ಪದ