ಪದ್ಯ ೪೬: ಭೀಮನು ಯುದ್ಧದಲ್ಲಿ ಎಂತಹವನು?

ವೀರರೆಂದೆನಿಸುವರು ತೊಡೆಹದ
ಶೌರಿಯದ ಸಿರಿವಂತರರಸುಕು
ಮಾರಕರು ನಿನ್ನವರು ಕೋಮಲಧೈರ್ಯರಾಹವಕೆ
ಮಾರಿ ಮುಖದವ ಕಠಿಣಮನ ನಿ
ಸ್ಸಾರ ಹೃದಯನು ಭೀಮನವನೊಳು
ಹೋರಿದವರೇನಹರು ಕೇಳೈ ನಿನ್ನವರ ವಿಧಿಯ (ದ್ರೋಣ ಪರ್ವ, ೧೩ ಸಂಧಿ, ೪೬ ಪದ್ಯ)

ತಾತ್ಪರ್ಯ:
ನಿನ್ನ ಮಕ್ಕಳನ್ನು ವೀರರೆಂದು ಕರೆಯುತ್ತಾರೆ ಅಷ್ಟೆ ಅವರ ಶೌರ್ಯ ಸಿರಿ (ಐಶ್ವರ್ಯದ) ಮೇಲೆ ಲೇಪಿಸಿದುದು. ಯುದ್ಧದಲ್ಲಿ ಧೈರ್ಯವಿದ್ದವರಲ್ಲ, ಭೀಮನಾದರೋ ಮಾರಿಯ ಮುಖದವನು. ಅವನ ಮನಸ್ಸು ಕಠಿಣ, ನಿಸ್ಸಾರ ಹೃದಯದವನು. ಅಂಥವನೊಡನೆ ಹೋರಾಡಿದವರು ಏನಾಗುತ್ತಾರೆ ನೀನೆ ಹೇಳು ಧೃತರಾಷ್ಟ್ರ, ಹೇಳುವೆ ಕೇಳು ನಿನ್ನ ಮಕ್ಕಳ ವಿಧಿಯನ್ನು ಎಂದು ಸಂಜಯನು ಮುಂದುವರೆಸಿದನು.

ಅರ್ಥ:
ವೀರ: ಶೂರ; ತೊಡೆ: ಬಳಿ, ಸವರು; ಶೌರ್ಯ: ಪರಾಕ್ರಮ; ಸಿರಿ: ಐಶ್ವರ್ಯ; ಅರಸು: ರಾಜ; ಕುಮಾರ: ಪುತ್ರ; ಕೋಮಲ: ಮೃದು; ಧೈರ್ಯ: ಪರಾಕ್ರಮ; ಆಹವ: ಯುದ್ಧ; ಮಾರಿ: ಕ್ಷುದ್ರ ದೇವತೆ, ಮೃತ್ಯು; ಮುಖ: ಆನನ; ಕಠಿಣ: ಗಟ್ಟಿ, ಬಿರುಸು; ಮನ: ಮನಸ್ಸು; ನಿಸ್ಸಾರ: ಸತ್ತ್ವವಿಲ್ಲದ; ಹೃದಯ: ಎದೆ; ಹೋರಿ: ಕೋಣ; ಕೇಳು: ಆಲಿಸು; ವಿಧಿ: ಆಜ್ಞೆ, ಆದೇಶ;

ಪದವಿಂಗಡಣೆ:
ವೀರರೆಂದೆನಿಸುವರು+ ತೊಡೆಹದ
ಶೌರಿಯದ +ಸಿರಿವಂತರ್+ಅರಸು+ಕು
ಮಾರಕರು +ನಿನ್ನವರು +ಕೋಮಲ+ಧೈರ್ಯರ್+ಆಹವಕೆ
ಮಾರಿ +ಮುಖದವ +ಕಠಿಣ+ಮನ +ನಿ
ಸ್ಸಾರ +ಹೃದಯನು +ಭೀಮನವನೊಳು
ಹೋರಿದವರ್+ಏನಹರು +ಕೇಳೈ +ನಿನ್ನವರ+ ವಿಧಿಯ

ಅಚ್ಚರಿ:
(೧) ಕೌರವರ ಸ್ಥಿತಿ – ಅರಸು ಕುಮಾರಕರು ನಿನ್ನವರು ಕೋಮಲ
(೨) ಭೀಮನ ಶೌರ್ಯ – ಆಹವಕೆ ಮಾರಿ ಮುಖದವ ಕಠಿಣಮನ ನಿಸ್ಸಾರ ಹೃದಯನು ಭೀಮ

ಪದ್ಯ ೨೩: ಕರ್ಣನು ಅರ್ಜುನನನ್ನು ಹೇಗೆ ಹಂಗಿಸಿದನು?

ವೀರನಲ್ಲಾ ಬನದ ರಾಜಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದೆಲಾ ದಿಟವೇಕಚಕ್ರದೊಳು
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೇಕೆನುತ ತೆಗೆದೆಚ್ಚನಾ ಕರ್ಣ (ವಿರಾಟ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲೋ ಅರ್ಜುನ ನೀಣು ವೀರನಲ್ಲವೇ? ಕಾಡಿನ ರಾಜಕುಮಾರನಲ್ಲವೇ? ಕೌರವನ ಬಡಿ ಹೋರಿಯಲ್ಲವೇ? ಏಕ ಚಕ್ರದಲ್ಲಿ ಓಡಾಡಿ ತಿಂದು ಉಂಡವನಲ್ಲವೇ? ಅದಿರಲಿ ನಾಟ್ಯದಲ್ಲಿ ಧರಿಸಿದ್ದ ಸ್ತ್ರೀ ವೇಷವನ್ನು ತೆಗೆದು ನಿನಗೆ ಗಂಡುಡಿಗೆ ಕೊಟ್ಟವರಾರು? ನಿನಗೇಕೆ ಈ ಶೌರ್ಯ ಎನ್ನುತ್ತಾ ಕರ್ಣನು ಮತ್ತೆ ಬಾಣಗಳನ್ನು ಬಿಟ್ಟನು.

ಅರ್ಥ:
ವೀರ: ಶೂರ; ಬನ: ಕಾಡು; ಹೋರಿ: ಗೂಳಿ: ಬಡಿ: ಹೊಡೆ, ತಾಡಿಸು; ತಿರಿ: ಸುತ್ತಾಡು, ತಿರುಗಾಡು; ದಿಟ: ನಿಜ; ನಾರಿ: ಹೆಣ್ಣು; ನಾಟಕ: ಪ್ರದರ್ಶನ ಕಲೆ; ಚೋಹ: ಚೋದ್ಯ, ಅಚ್ಚರಿ; ತೆಗೆ: ಹೊರತರು; ಶೌರ್ಯ: ಪರಾಕ್ರಮ; ಸಿರಿ: ಐಶ್ವರ್ಯ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ವೀರನಲ್ಲಾ+ಬನದ +ರಾಜಕು
ಮಾರನಲ್ಲಾ +ಕೌರವನ +ಬಡಿ
ಹೋರಿಯಲ್ಲಾ+ ತಿರಿದೆಲಾ +ದಿಟವ್+ಏಕಚಕ್ರದೊಳು
ನಾರಿಯರ+ ನಾಟಕದ +ಚೋಹವನ್
ಆರು +ತೆಗೆದರು +ಪಾರ್ಥ +ನಿನಗೀ
ಶೌರಿಯದ +ಸಿರಿಯೇಕೆನುತ +ತೆಗೆ+ಎಚ್ಚನಾ +ಕರ್ಣ

ಅಚ್ಚರಿ:
(೧) ಅರ್ಜುನನನ್ನು ಕೆಣಕುವ ಪರಿ – ನಾರಿಯರ ನಾಟಕದ ಚೋಹವನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೇಕೆನುತ

ಪದ್ಯ ೫೩: ಧರ್ಮಜನೇಕೆ ಅಳುಕಿದನು?

ಎದ್ದು ವಾಘೆಯೊಳೆತ್ತಿ ಭೀಮನ
ಗುದ್ದಿದನು ಲೇಸಾಗಿ ಮಲ್ಲನ
ನದ್ದಿದನು ನೆಲಕಿಕ್ಕಿ ಭೀಮನು ಬಾಹುಸತ್ವದಲಿ
ತಿದ್ದಿತಾತನ ದೆಸೆಯೆನಲು ಸಿಡಿ
ದೆದ್ದು ಮಲ್ಲನು ಭೀಮನನು ನೆಲ

ಕುದ್ದಿ ಮಂಡಿಯಕೊಂಡು ಹೋರಿದನಳುಕೆ ಭೂಪಾಲ (ವಿರಾಟ ಪರ್ವ, ೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕೆಳಗೆ ಬಿದ್ದ ಭೀಮನ ಮುಖವನ್ನು ಹಿಡಿದು ಜೀಮೂತನು ಬೆನ್ನಿನ ಮೇಲೆ ಗುದ್ದಿದನು. ಭೀಮನು ತೋಳ ಸತ್ವದಿಂದ ಜೀಮೂತನನ್ನು ನೆಲಕ್ಕೆ ಕೆಡವಿ ಒತ್ತಿದನು. ಇನ್ನೇನು ಜೀಮೂತನು ಹೋದನೆಂದು ತಿಳಿಯಲು, ಅವನು ಸಿಡಿದೆದ್ದು ಭೀಮನನ್ನು ನೆಲಕ್ಕೆ ಕೆಡವಿ ಮಂಡಿಯೂರಿ ಹೋರಾಡಿದನು. ಇದನ್ನು ಕಂಡು ಧರ್ಮಜನು ಅಳುಕಿದನು.

ಅರ್ಥ:
ಎದ್ದು: ಮೇಲೇಳು; ವಾಘೆ: ಲಗಾಮು; ಗುದ್ದು: ಅಪ್ಪಳಿಸು; ಲೇಸು: ಒಳಿತು; ಮಲ್ಲ: ಜಟ್ಟಿ; ಅದ್ದು: ಮುಳುಗಿಸು; ನೆಲ: ಭೂಮಿ; ಇಕ್ಕು: ಇರಿಸು, ಇಡು; ಬಾಹು: ಭುಜ; ಸತ್ವ: ಸಾರ; ತಿದ್ದು: ಸರಿಪಡಿಸು; ದೆಸೆ: ದಿಕ್ಕು; ಸಿಡಿದೆದ್ದು: ಜೋರಾಗಿ ಮೇಲೇಳು; ಉದ್ದು:ಒರಸು, ಅಳಿಸು; ಮಂಡಿ: ಮೊಳಕಾಲು, ಜಾನು; ಹೋರು: ಸೆಣಸು, ಕಾದಾಡು; ಅಳುಕು: ಹೆದರು; ಭೂಪಾಲ: ರಾಜ;

ಪದವಿಂಗಡಣೆ:
ಎದ್ದು +ವಾಘೆಯೊಳ್+ಎತ್ತಿ +ಭೀಮನ
ಗುದ್ದಿದನು +ಲೇಸಾಗಿ +ಮಲ್ಲನನ್
ಅದ್ದಿದನು +ನೆಲಕ್+ಇಕ್ಕಿ+ ಭೀಮನು +ಬಾಹು+ಸತ್ವದಲಿ
ತಿದ್ದಿತ್+ಆತನ+ ದೆಸೆ+ಎನಲು +ಸಿಡಿದ್
ಎದ್ದು +ಮಲ್ಲನು +ಭೀಮನನು +ನೆಲಕ್
ಉದ್ದಿ +ಮಂಡಿಯಕೊಂಡು +ಹೋರಿದನ್+ಅಳುಕೆ+ ಭೂಪಾಲ

ಅಚ್ಚರಿ:
(೧) ಎದ್ದು, ಗುದ್ದು, ಅದ್ದು,ಉದ್ದು, ತಿದ್ದು, ಇಕ್ಕು – ಯುದ್ಧವನ್ನು ವಿವರಿಸಲು ಬಳಸಿದ ಪದಗಳು

ಪದ್ಯ ೩೭: ದುರ್ಯೋಧನನು ಯಾರಿಗೆ ಗೋವುಗಳನ್ನು ನೀಡಿದನು?

ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋಲಕ್ಷವಿತ್ತನು ವಿಪ್ರಸಂಕುಲಕೆ
ಕರೆಸಿಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟ ವಿಧಾವಂ
ತರಿಗೆ ಬಹುವಿಧ ಬಹಳ ವಮ್ದಿಗೆ ಮಾಗಧವ್ರಜಕೆ (ಅರಣ್ಯ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಹೋರಿಗಳನ್ನೂ ಹಸುಗಳನ್ನೂ ತರಿಸಿ, ಕೆಲಸವನ್ನು ಕೃಷಿಕರಿಗೆ ನೀಡಿದನು. ಬ್ರಾಹ್ಮಣರಿಗೆ ಲಕ್ಷ ಗೋವುಗಳನ್ನು ಕೊಟ್ಟನು. ಭಟ್ಟರು, ವಂದಿಮಾಗಧರು ಮಲ್ಲರು, ವಿಟರು, ನಟರು, ಆನೆ ಕುದುರೆಗಳ ಆರೈಕೆಗಾರರುಗಳನ್ನು ಕರೆಸಿ ಗೋವುಗಳನ್ನು ನೀಡಿದನು.

ಅರ್ಥ:
ತರಿಸು: ಹೊಂದಿಸು; ಹೋರಿ: ಗೂಳಿ; ಗವಿ: ನೆಲೆ, ಆಶ್ರಯಸ್ಥಾನ; ಗೂಳಿ: ಎತ್ತು, ವೃಷಭ; ಬರಿಸು: ಬರೆಮಾಡು; ಕೆಲ: ಕೊಂಚ, ಸ್ವಲ್ಪ; ಕೆಲವ: ಕೆಲಸ; ಕೃಷಿಕ: ರೈತ; ಗೋ: ಗೋವು; ವಿತ್ತು: ನೀಡು; ವಿಪ್ರ: ಬ್ರಾಹ್ಮಣ; ಸಂಕುಲ: ಗುಂಪು; ಕರೆಸಿ: ಬರೆಮಾಡು; ಭಟ್ಟ: ವಿದ್ವಾಂಸ, ಪಂಡಿತ; ಮಲ್ಲ: ಜಟ್ಟಿ; ವಿಟ:ಜಾರ, ಕಾಮುಕ; ನಟ: ನಟನೆ ಮಾಡುವವ; ವಿಧಾವಂತ: ಆನೆ ಕುದುರೆಗಳನ್ನು ಆರೈಕೆ ಮಾಡುವವ; ಬಹುವಿಧ: ಹಲವಾರು; ಬಹಳ: ತುಂಬ; ವಂದಿಮಾಗಧ: ಹೊಗಳುಭಟ್ಟ; ವ್ರಜ: ಗುಂಪು;

ಪದವಿಂಗಡಣೆ:
ತರಿಸಿ +ಹೋರಿಯ +ಗವಿಯ +ಗೂಳಿಯ
ಬರಿಸಿದನು +ಕೆಲಕೆಲವ +ಕೃಷಿಕರಿಗ್
ಇರಿಸಿದನು +ಗೋಲಕ್ಷವಿತ್ತನು+ ವಿಪ್ರ+ಸಂಕುಲಕೆ
ಕರೆಸಿಕೊಟ್ಟನು +ಭಟ್ಟರಿಗೆ+ ಮ
ಲ್ಲರಿಗೆ+ ವಿಟರಿಗೆ+ ನಟ +ವಿಧಾವಂ
ತರಿಗೆ+ ಬಹುವಿಧ +ಬಹಳ+ ವಂದಿಗೆ +ಮಾಗಧ+ವ್ರಜಕೆ

ಅಚ್ಚರಿ:
(೧) ತರಿಸಿ, ಕರೆಸಿ, ಬರಿಸಿ, ಇರಿಸಿ – ಪ್ರಾಸ ಪದಗಳು
(೨) ಹಲವು ರೀತಿಯ ಜನರು – ಭಟ್ಟ, ಮಲ್ಲ, ವಿಟ, ನಟ, ವಿಧಾವಂತ, ವಂದಿ, ಮಾಗಧ

ಪದ್ಯ ೪೪: ಅರ್ಜುನನ ಪರಾಕ್ರಮ ಎಂತಹುದು?

ಎಲವೊ ದ್ರುಪದನ ಮಗಳ ಮದುವೆಗೆ
ನೆಲನು ಬೆಸಲಾದಂತೆ ನೀಂ ಮೊದ
ಲಿಳೆಯ ರಾಯರು ನೆರೆದರಂದಿನ ಬಿಲ್ಲ ನೆಗಹುವೊಡೆ
ಉಲಿದು ಹೋರಿದು ಕೆಡೆದರಂದತಿ
ಬಲರು ಧನುವನು ತೊನೆದು ತೆಗೆದ
ಗ್ಗಳದ ಯಂತ್ರವ ಜಯಿಸನೇ ನರನನುವ ನೀನರಿಯಾ (ಉದ್ಯೋಗ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ ಹಿಂದೆ ದ್ರುಪದನ ಮಗಳು ದ್ರೌಪದಿಯ ಸ್ವಯಂವರಕ್ಕೆ ನೀನು ಮೊದಲುಗೊಂಡು ಭೂಮಿಯ ಎಲ್ಲಾ ರಾಜರು ಸೇರಿದ್ದರು. ಬೆಲ್ಲನ್ನು ಎತ್ತಲಾಗದೆ ಅದರೊಡನೆ ಸೆಣಸಾಡಿ ಕೆಳಕ್ಕೆ ಬಿದ್ದರು. ಅಂತಹ ಧನುಸ್ಸನ್ನು ಅರ್ಜುನನು ನಿರಾಯಾಸವಾಗಿ ಎತ್ತಿ ಮತ್ಸ್ಯಯಂತ್ರವನ್ನು ಭೇದಿಸಿದನು. ಅವನ ಪರಾಕ್ರಮವು ನಿನಗೆ ತಿಳಿಯದೇ? ಎಂದು ಕೃಷ್ಣನು ಪ್ರಶ್ನಿಸಿದನು.

ಅರ್ಥ:
ಮಗಳು: ತನಯ; ಮದುವೆ: ವಿವಾಹ; ಬೆಸ: ಕಾರ್ಯ, ಕೆಲಸ; ನೀಂ: ನೀನು; ಇಳೆ: ಭೂಮಿ; ರಾಯ: ರಾಜ; ನೆರೆ: ಸೇರು; ಅಂದಿನ: ಅವತ್ತು; ಬಿಲ್ಲು: ಚಾಪ; ನೆಗಹು: ಮೇಲೆತ್ತು; ಉಲಿ: ಧ್ವನಿಮಾಡು; ಹೋರಿ: ಯುದ್ಧಮಾಡಿ; ಕೆಡೆ: ಬೀಳು, ಕುಸಿ; ಅತಿ: ಬಹಳ; ಬಲರು: ಶಕ್ತಿಯುತರು; ಧನು: ಬಿಲ್ಲು, ಧನುಸ್ಸು; ತೊನೆ: ಅಲ್ಲಾಡು; ತೆಗೆ: ಎತ್ತಿಕೊಳ್ಳ; ಅಗ್ಗ: ಶ್ರೇಷ್ಠ; ಯಂತ್ರ: ಉಪಕರಣ; ಜಯಿಸು: ಗೆಲ್ಲು; ನರ: ಅರ್ಜುನ, ಮನುಷ್ಯ; ಅನುವು: ರೀತಿ; ಅರಿ: ತಿಳಿ;

ಪದವಿಂಗಡಣೆ:
ಎಲವೊ +ದ್ರುಪದನ +ಮಗಳ +ಮದುವೆಗೆ
ನೆಲನು +ಬೆಸಲಾದಂತೆ +ನೀಂ +ಮೊದಲ್
ಇಳೆಯ +ರಾಯರು +ನೆರೆದರ್+ಅಂದಿನ +ಬಿಲ್ಲ +ನೆಗಹುವೊಡೆ
ಉಲಿದು+ ಹೋರಿದು+ ಕೆಡೆದರ್+ಅಂದ್+ಅತಿ
ಬಲರು +ಧನುವನು +ತೊನೆದು +ತೆಗೆದ್
ಅಗ್ಗಳದ+ ಯಂತ್ರವ +ಜಯಿಸನೇ +ನರನ್+ಅನುವ +ನೀನ್+ಅರಿಯಾ

ಅಚ್ಚರಿ:
(೧) ಅಂದು ರಾಜರು ಹೇಗೆ ಬಿದ್ದರು ಎಂದು ತಿಳಿಸಲು – ಉಲಿದು ಹೋರಿದು ಕೆಡೆದರಂದತಿ
ಬಲರು
(೨) ಜೋಡಿ ಅಕ್ಷರಗಳ ಬಳಕೆ – ಮಗಳ ಮದುವೆಗೆ; ತೊನೆದು ತೆಗೆದ; ನರನನುವ ನೀನರಿಯಾ