ಪದ್ಯ ೩೧: ಕೊಲ್ಲುವುದೇಕೆ ಅರ್ಜುನನಿಗೆ ಸೇರುವುದಿಲ್ಲ?

ಯಂತ್ರಿ ಮಿಡಿದರೆ ಕಾದಿ ಬೀಳ್ವವು
ಯಂತ್ರಮಯ ಹಾಹೆಗಳು ವಧೆಯಾ
ಯಂತ್ರಿಗೋ ಹಾಹೆಗಳಿಗೋ ಹೇಳಾರ ನೆಮ್ಮುವದು
ಯಂತ್ರಿ ಕೃಷ್ಣನು ನಾವು ನೀವೀ
ತಂತ್ರವಖಿಲ ಚರಾಚರಂಗಳು
ಯಂತ್ರರೂಪುಗಳೆಲ್ಲ ಕಾರಣವಿಲ್ಲ ನಿನಗೆಂದ (ಭೀಷ್ಮ ಪರ್ವ, ೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಗೊಂಬೆಯಾಟದಲ್ಲಿ ಯಂತ್ರವನ್ನು ಹಿಡಿದವನು ಆಡಿಸಿದರೆ ಗೊಂಬೆಗಳು ಕಾದಾಡಿ ಸತ್ತು ಬೀಳುತ್ತವೆ. ವಧೆಯ ಪಾಪ ಗೊಂಬೆಗೆ ಬರುತ್ತದೆಯೋ ಸೂತ್ರಧಾರನಿಗೆ ಬರುತ್ತದೆಯೋ? ನಾವು ನೀವು ಸಮಸ್ತ ಸಚರಾಚರಗಳು ಎಲ್ಲವೂ ಯಂತ್ರದ ಗೊಂಬೆಗಳು ಕೃಷ್ಣನು ಈ ಯಂತ್ರವನ್ನಾಡಿಸುವ ಸೂತ್ರಧಾರ. ಆದುದರಿಂದ ಕೊಲ್ಲುವುದು ಸಾಯುವುದು ನಿನಗೆ ಸೇರಿದ್ದಲ್ಲ.

ಅರ್ಥ:
ಯಂತ್ರ: ಕೆಲಸ ಮಾಡುವ ಸಾಧನ, ಉಪಕರಣ; ಮಿಡಿ: ಕಸುಗಾಯಿ, ಸಣ್ಣ; ಕಾದು: ಹೋರಾಡು; ಬೀಳು: ಕುಸಿ; ಹಾಹೆ: ಗೊಂಬೆ, ಪುತ್ತಳಿ; ವಧೆ: ಕೊಲ್ಲು; ನೆಮ್ಮು: ಅವಲಂಬನ; ಯಂತ್ರಿ: ಗೊಂಬೆಯನ್ನು ಆಡಿಸುವವ; ತಂತ್ರ: ದಾರ, ನೂಲು; ಚರಾಚರ: ಜಂಗಮ ಮತ್ತು ಸ್ಥಾವರ ವಸ್ತುಗಳು; ರೂಪ: ಆಕಾರ; ಕಾರಣ: ನಿಮಿತ್ತ, ಹೇತು;

ಪದವಿಂಗಡಣೆ:
ಯಂತ್ರಿ +ಮಿಡಿದರೆ +ಕಾದಿ +ಬೀಳ್ವವು
ಯಂತ್ರಮಯ +ಹಾಹೆಗಳು +ವಧೆಯಾ
ಯಂತ್ರಿಗೋ +ಹಾಹೆಗಳಿಗೋ+ ಹೇಳ್+ಆರ+ ನೆಮ್ಮುವದು
ಯಂತ್ರಿ +ಕೃಷ್ಣನು +ನಾವು +ನೀವ್+ಈ+
ತಂತ್ರವ್+ಅಖಿಲ+ ಚರಾಚರಂಗಳು
ಯಂತ್ರರೂಪುಗಳೆಲ್ಲ+ ಕಾರಣವಿಲ್ಲ+ ನಿನಗೆಂದ

ಅಚ್ಚರಿ:
(೧) ಯಂತ್ರ, ತಂತ್ರ – ಪ್ರಾಸ ಪದಗಳು
(೨) ಕೃಷ್ಣನೇ ಸೂತ್ರಧಾರಿ ಎಂದು ಹೇಳುವ ಪರಿ – ಯಂತ್ರಿ ಕೃಷ್ಣನು ನಾವು ನೀವೀ ತಂತ್ರವಖಿಲ ಚರಾಚರಂಗಳು ಯಂತ್ರರೂಪುಗಳೆಲ್ಲ

ಪದ್ಯ ೨೧: ಸತ್ಯಭಾಮೆ ದ್ರೌಪದಿಯನ್ನು ಯಾವುದರ ಬಗ್ಗೆ ಪ್ರಶ್ನಿಸಿದಳು?

ಮಂತ್ರಸಿದ್ಧಿಯೊ ಮೇಣು ಶಾಬರ
ಯಂತ್ರ ರಕ್ಷೆಯೊ ಮೇಣ್ ವರೌಷಧ
ತಂತ್ರತಿಲಕವೊ ರಮಣರಿವರೈವರ ವಶೀಕರಣ
ಯಂತ್ರಮಯ ಹೂಹೆಗಳು ನೃಪರೀ
ಯಂತ್ರ ಸೂತ್ರದ ಕುಣಿಕೆ ನಿನ್ನ ನಿ
ಯಂತ್ರಣವ ಹೇಳೌ ನಿಧಾನವನೆಂದಳಿಂದು ಮುಖಿ (ಅರಣ್ಯ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸತ್ಯಭಾಮೆಯು ನಿನಗೆ ಮಂತ್ರ ಸಿದ್ಧಿಯಿದಿಯೇ? ಇಂದ್ರಜಾಲ ತಂತ್ರದಿಂದ ರಕ್ಷೆಯನ್ನು ಪಡೆದಿರುವೆಯೋ? ಇಲ್ಲದಿದ್ದರೆ ಯಾವ ಔಷಧಗಳಿಂದ ತಿಲಕವನ್ನು ರಚಿಸುವೆ? ಈ ಐವರೂ ಕೀಲುಗೊಂಬೆಗಳಂತೆ ಇದ್ದರೆ ನೀನು ಸೂತ್ರಧಾರಿ ಯಾಗಿರುವೆ, ಇದು ಹೇಗೆ ಸಾಧ್ಯವಾಯಿತು ಎಂದು ದ್ರೌಪದಿಯನ್ನು ಆಶ್ಚರ್ಯವಾಗಿ ಕೇಳಿದಳು.

ಅರ್ಥ:
ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಶಾಬರ: ಇಂದ್ರಜಾಲ; ಯಂತ್ರ: ಉಪಕರಣ; ರಕ್ಷೆ: ಕಾಪು; ಮೇಣ್: ಅಥವ; ವರ: ಶ್ರೇಷ್ಠ; ಔಷಧ: ಮದ್ದು; ತಂತ್ರ: ಉಪಾಯ; ತಿಲಕ: ಶ್ರೇಷ್ಠ; ರಮಣ: ಪ್ರಿಯಕರ, ಗಂಡ; ವಶೀಕರಣ: ವಶಪಡಿಸಿಕೊಳ್ಳುವಿಕೆ; ಹೂಹೆ: ಗೊಂಬೆ, ಪುತ್ತಳಿ; ನೃಪ: ರಾಜ; ಸೂತ್ರ: ನಿಯಮ; ಕುಣಿಕೆ: ಕೊನೆ, ತುದಿ; ನಿಯಂತ್ರಣ: ಹತೋಟಿ; ನಿಧಾನ: ಸಾವಕಾಶ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಸುಂದರಿ);

ಪದವಿಂಗಡಣೆ:
ಮಂತ್ರ+ಸಿದ್ಧಿಯೊ +ಮೇಣು +ಶಾಬರ
ಯಂತ್ರ +ರಕ್ಷೆಯೊ +ಮೇಣ್ +ವರೌಷಧ
ತಂತ್ರ+ತಿಲಕವೊ+ ರಮಣರ್+ಇವರ್+ಐವರ +ವಶೀಕರಣ
ಯಂತ್ರಮಯ +ಹೂಹೆಗಳು +ನೃಪರೀ
ಯಂತ್ರ +ಸೂತ್ರದ +ಕುಣಿಕೆ+ ನಿನ್ನ +ನಿ
ಯಂತ್ರಣವ+ ಹೇಳೌ +ನಿಧಾನವನೆಂದಳ್+ಇಂದುಮುಖಿ

ಅಚ್ಚರಿ:
(೧) ಮಂತ್ರ, ತಂತ್ರ, ಯಂತ್ರ, ನಿಯಂತ್ರ – ಪ್ರಾಸ ಪದಗಳು
(೨) ದ್ರೌಪದಿಯ ಛಾಪನ್ನು ವಿವರಿಸುವ ಪರಿ – ಯಂತ್ರಮಯ ಹೂಹೆಗಳು ನೃಪರೀ
ಯಂತ್ರ ಸೂತ್ರದ ಕುಣಿಕೆ ನಿನ್ನ ನಿಯಂತ್ರಣವ

ಪದ್ಯ ೨೩: ಧರ್ಮಜನು ಭೀಮನ ನಂತರ ಯಾರನ್ನು ಪಣಕ್ಕೆ ಒಡ್ಡಿದನು?

ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹು ಹಾಯ್ದ ಹಿಮಾಂಶುಮಂಡಲದುಳಿದ ಕಳೆಯಂತೆ
ತೋಹಿನಲಿ ತುಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರ ಸೂತ್ರದ
ಹೂಹೆಯಂತಿರೆ ಹಗೆಗೆ ತೆತ್ತನು ನೃಪತಿ ತನುಧನವ (ಸಭಾ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧರ್ಮಜನು ಆ ಆಟವನ್ನು ಸೋತನು. ಅವನ ಲೆಕ್ಕಾಚಾರ ತಪ್ಪಿತು, ಮುಂದೆ ತೋರದಂತಾಯಿತು, ರಾಹುವಿನಿಂದ ಕಳೆಗುಂದಿದ ಚಂದ್ರಮಂಡಲದಂತೆ, ಸಂಕೇತ ಸ್ಥಾನದಲ್ಲಿ ಬೇಟೆಗಾರರಿಗೆ ಸಿಕ್ಕಿಬಿದ್ದ ಮೃಗದಂತೆ, ಯಂತ್ರದ ಸೂತ್ರಕ್ಕೆ ಸಿಕ್ಕ ಗೊಂಬೆಯಂತೆ, ನಿಸ್ತೇಜನಾದ ಧರ್ಮರಾಯನು ವಿರೋಧಿಗೆ ತನ್ನ ದೇಹವನ್ನೇ ಪಣವಾಗಿ ಒಡ್ಡಿದನು.

ಅರ್ಥ:
ಹಲಗೆ: ಪಗಡೆಯ ಹಾಸು; ಸೋತು: ಪರಾಭವ; ಉಹೆ: ಅಂದಾಜು; ಮುರಿ: ಸೀಳು; ಮುಂದುಗೆಡು: ಮುಂದೆ ತೋರು; ಹಾಯಿ: ಚಾಚು, ಮೇಲೆ ಬೀಳು; ಹಿಮಾಂಶು: ಚಂದ್ರ; ಮಂಡಲ: ವರ್ತುಲಾಕಾರ; ಉಳಿದ: ಮಿಕ್ಕ; ಕಳೆ:ಕಾಂತಿ, ತೇಜ; ತೋಹು: ಬೇಟೆಯಾಡಲು ವನ್ಯಮೃಗಗಳನ್ನು ಆಕರ್ಷಿಸುವ ಸ್ಥಳ; ತುಟ್ಟಿಸು: ಶಕ್ತಿಗುಂದು, ಬಲಹೀನವಾಗು; ಮೃಗ: ಪ್ರಾಣಿ; ಅಳಿ: ನಾಶ; ಯಂತ್ರ: ಉಪಕರಣ; ಸೂತ್ರ: ನಿಯಮ; ಹಗೆ: ವೈರ; ತೆತ್ತು: ನೀಡು; ತನು: ದೇಹ; ಧನ: ಐಶ್ವರ್ಯ;

ಪದವಿಂಗಡಣೆ:
ಆ +ಹಲಗೆ +ಸೋತುದು +ಯುಧಿಷ್ಠಿರನ್
ಊಹೆ +ಮುರಿದುದು +ಮುಂದುಗೆಟ್ಟನು
ರಾಹು+ ಹಾಯ್ದ +ಹಿಮಾಂಶು+ಮಂಡಲದ್+ಉಳಿದ +ಕಳೆಯಂತೆ
ತೋಹಿನಲಿ+ ತುಟ್ಟಿಸಿದ +ಮೃಗದವೊಲ್
ಊಹೆ+ಅಳಿದುದು +ಯಂತ್ರ +ಸೂತ್ರದ
ಹೂಹೆಯಂತಿರೆ+ ಹಗೆಗೆ+ ತೆತ್ತನು +ನೃಪತಿ +ತನು+ಧನವ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಾಹು ಹಾಯ್ದ ಹಿಮಾಂಶುಮಂಡಲದುಳಿದ ಕಳೆಯಂತೆ; ತೋಹಿನಲಿ ತುಟ್ಟಿಸಿದ ಮೃಗದವೊಲೂಹೆಯಳಿದುದು ಯಂತ್ರ ಸೂತ್ರದ ಹೂಹೆಯಂತಿರೆ

ಪದ್ಯ ೫೬: ಧರ್ಮಜನ ಆಪ್ತರು ಹೇಗೆ ರಾಜನನ್ನು ಶುಶ್ರೂಷೆ ಮಾಡಿದರು?

ಮಂತ್ರಜಲದಲಿ ತೊಳೆದು ಘಾಯವ
ಮಂತ್ರಿಸುತ ಕರ್ಪುರದ ಕವಳದ
ಯಂತ್ರ ರಕ್ಷೆಯಲವನಿಪನ ಸಂತೈಸಿ ಮಲಗಿಸುತ
ತಂತ್ರ ತಲ್ಲಣಿಸದಿರಿ ಜಿತ ಶರ
ತಂತ್ರನೋ ಭೂಪತಿ ವಿರೋಧಿಭ
ಟಾಂತ್ರ ಭಂಜನ ನೀಗಳೆಂದುದು ರಾಯನಾಪ್ತಜನ (ಕರ್ಣ ಪರ್ವ, ೧೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮಜನ ಆಪ್ತರು ಅವನ ಗಾಯಗಳನ್ನು ಮಂತ್ರ ಜಲದಿಂದ ತೊಳೆದು ಮಂತ್ರಿಸಿದ ಕರ್ಪೂರ ತಾಂಬೂಲವನ್ನು ಕೊಟ್ಟು, ಯಂತ್ರದ ರಕ್ಷಣೆಯಿಂದ ಅವನನ್ನು ಸಂತೈಸಿ ಮಲಗಿಸಿದರು. ಬಳಿಕ ಸುತ್ತಲಿದ್ದವರಿಗೆ ಸೈನ್ಯವು ಬೆದರದಿರಲಿ ಅರಸನು ಬಾಣಗಳ ಹೊಡೆತವನ್ನು ಸುಧಾರಿಸಿ ಗೆದ್ದಿದ್ದಾನೆ, ವಿರೋಧಿಗಳ ಭಟರ ಕರುಳನ್ನು ಭಂಜಿಸಿ ಗೆಲ್ಲುತ್ತಾನೆ ಎಂದು ಹೇಳಿದರು.

ಅರ್ಥ:
ಮಂತ್ರ: ಪವಿತ್ರವಾದ ದೇವತಾಸ್ತುತಿ; ಜಲ: ನೀರು; ತೊಳೆ: ಸ್ವಚ್ಛಗೊಳಿಸು; ಘಾಯ: ಪೆಟ್ಟು; ಕರ್ಪುರ: ಸುಗಂಧ ದ್ರವ್ಯ; ಕವಳ:ತುತ್ತು, ತಾಂಬೂಲ; ಯಂತ್ರ: ತಾಯಿತಿ, ಕಾಪು; ರಕ್ಷೆ:ಕಾಪು, ರಕ್ಷಣೆ; ಅವನಿಪ: ರಾಜ; ಸಂತೈಸು: ಸಮಾಧಾನ ಪಡಿಸು; ಮಲಗು: ನಿದ್ರೆ, ಶಯನ; ತಂತ್ರ: ಔಷಧಿ, ಮದ್ದು; ತಲ್ಲಣ: ಅಂಜಿಕೆ, ಭಯ; ಜಿತ: ಗೆಲ್ಲಲ್ಪಟ್ಟ; ಶರ: ಬಾಣ; ಭೂಪತಿ: ರಾಜ; ವಿರೋಧ:ತಡೆ, ಅಡ್ಡಿ; ವಿರೋಧಿ: ವೈರಿ; ಅಂತ್ರ: ಕರುಳು; ಭಂಜನ: ಸೀಳು, ನಾಶಮಾಡು; ನೀಗು: ನಿವಾರಿಸಿಕೊಳ್ಳು; ರಾಯ: ರಾಜ; ಆಪ್ತ: ಹತ್ತಿರದ;

ಪದವಿಂಗಡಣೆ:
ಮಂತ್ರ+ಜಲದಲಿ +ತೊಳೆದು +ಘಾಯವ
ಮಂತ್ರಿಸುತ +ಕರ್ಪುರದ +ಕವಳದ
ಯಂತ್ರ +ರಕ್ಷೆಯಲ್+ಅವನಿಪನ +ಸಂತೈಸಿ +ಮಲಗಿಸುತ
ತಂತ್ರ +ತಲ್ಲಣಿಸದಿರಿ+ ಜಿತ+ ಶರ
ತಂತ್ರನೋ +ಭೂಪತಿ +ವಿರೋಧಿಭಟ
ಅಂತ್ರ +ಭಂಜನ +ನೀಗಳ್+ಎಂದುದು +ರಾಯನ್+ಆಪ್ತಜನ

ಅಚ್ಚರಿ:
(೧) ಮಂತ್ರ, ಯಂತ್ರ, ತಂತ್ರ, ಅಂತ್ರ – ಪ್ರಾಸ ಪದಗಳು
(೨) ಅವನಿಪ, ಭೂಪತಿ, ರಾಯ – ಸಮನಾರ್ಥಕ ಪದ

ಪದ್ಯ ೪೪: ಅರ್ಜುನನ ಪರಾಕ್ರಮ ಎಂತಹುದು?

ಎಲವೊ ದ್ರುಪದನ ಮಗಳ ಮದುವೆಗೆ
ನೆಲನು ಬೆಸಲಾದಂತೆ ನೀಂ ಮೊದ
ಲಿಳೆಯ ರಾಯರು ನೆರೆದರಂದಿನ ಬಿಲ್ಲ ನೆಗಹುವೊಡೆ
ಉಲಿದು ಹೋರಿದು ಕೆಡೆದರಂದತಿ
ಬಲರು ಧನುವನು ತೊನೆದು ತೆಗೆದ
ಗ್ಗಳದ ಯಂತ್ರವ ಜಯಿಸನೇ ನರನನುವ ನೀನರಿಯಾ (ಉದ್ಯೋಗ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ ಹಿಂದೆ ದ್ರುಪದನ ಮಗಳು ದ್ರೌಪದಿಯ ಸ್ವಯಂವರಕ್ಕೆ ನೀನು ಮೊದಲುಗೊಂಡು ಭೂಮಿಯ ಎಲ್ಲಾ ರಾಜರು ಸೇರಿದ್ದರು. ಬೆಲ್ಲನ್ನು ಎತ್ತಲಾಗದೆ ಅದರೊಡನೆ ಸೆಣಸಾಡಿ ಕೆಳಕ್ಕೆ ಬಿದ್ದರು. ಅಂತಹ ಧನುಸ್ಸನ್ನು ಅರ್ಜುನನು ನಿರಾಯಾಸವಾಗಿ ಎತ್ತಿ ಮತ್ಸ್ಯಯಂತ್ರವನ್ನು ಭೇದಿಸಿದನು. ಅವನ ಪರಾಕ್ರಮವು ನಿನಗೆ ತಿಳಿಯದೇ? ಎಂದು ಕೃಷ್ಣನು ಪ್ರಶ್ನಿಸಿದನು.

ಅರ್ಥ:
ಮಗಳು: ತನಯ; ಮದುವೆ: ವಿವಾಹ; ಬೆಸ: ಕಾರ್ಯ, ಕೆಲಸ; ನೀಂ: ನೀನು; ಇಳೆ: ಭೂಮಿ; ರಾಯ: ರಾಜ; ನೆರೆ: ಸೇರು; ಅಂದಿನ: ಅವತ್ತು; ಬಿಲ್ಲು: ಚಾಪ; ನೆಗಹು: ಮೇಲೆತ್ತು; ಉಲಿ: ಧ್ವನಿಮಾಡು; ಹೋರಿ: ಯುದ್ಧಮಾಡಿ; ಕೆಡೆ: ಬೀಳು, ಕುಸಿ; ಅತಿ: ಬಹಳ; ಬಲರು: ಶಕ್ತಿಯುತರು; ಧನು: ಬಿಲ್ಲು, ಧನುಸ್ಸು; ತೊನೆ: ಅಲ್ಲಾಡು; ತೆಗೆ: ಎತ್ತಿಕೊಳ್ಳ; ಅಗ್ಗ: ಶ್ರೇಷ್ಠ; ಯಂತ್ರ: ಉಪಕರಣ; ಜಯಿಸು: ಗೆಲ್ಲು; ನರ: ಅರ್ಜುನ, ಮನುಷ್ಯ; ಅನುವು: ರೀತಿ; ಅರಿ: ತಿಳಿ;

ಪದವಿಂಗಡಣೆ:
ಎಲವೊ +ದ್ರುಪದನ +ಮಗಳ +ಮದುವೆಗೆ
ನೆಲನು +ಬೆಸಲಾದಂತೆ +ನೀಂ +ಮೊದಲ್
ಇಳೆಯ +ರಾಯರು +ನೆರೆದರ್+ಅಂದಿನ +ಬಿಲ್ಲ +ನೆಗಹುವೊಡೆ
ಉಲಿದು+ ಹೋರಿದು+ ಕೆಡೆದರ್+ಅಂದ್+ಅತಿ
ಬಲರು +ಧನುವನು +ತೊನೆದು +ತೆಗೆದ್
ಅಗ್ಗಳದ+ ಯಂತ್ರವ +ಜಯಿಸನೇ +ನರನ್+ಅನುವ +ನೀನ್+ಅರಿಯಾ

ಅಚ್ಚರಿ:
(೧) ಅಂದು ರಾಜರು ಹೇಗೆ ಬಿದ್ದರು ಎಂದು ತಿಳಿಸಲು – ಉಲಿದು ಹೋರಿದು ಕೆಡೆದರಂದತಿ
ಬಲರು
(೨) ಜೋಡಿ ಅಕ್ಷರಗಳ ಬಳಕೆ – ಮಗಳ ಮದುವೆಗೆ; ತೊನೆದು ತೆಗೆದ; ನರನನುವ ನೀನರಿಯಾ