ಪದ್ಯ ೫೯: ಕುಂತಿಯು ಮಂತ್ರಶಕ್ತಿಯಿಂದ ಯಾರನ್ನು ಕರೆದಳು?

ಮಿಂದು ಕಡುಶುಚಿಯಾಗಿ ಸುಮನೋ
ವೃಮ್ದದೊಲಗಾರೈದು ನೋಡಿ ಪು
ರಂದರನ ನೆನೆದಳು ಮುನೀಂದ್ರನ ಮಂತ್ರಶಕ್ತಿಯಲಿ
ಬಂದನಲ್ಲಿಗೆ ಬಯಕೆಯೇನರ
ವಿಂದ ಲೋಚನೆ ಹೇಳೆನಲು ಪೂ
ರ್ಣೇಂದು ಮುಖಿ ತಲೆವಾಗಿದಳು ಲಜ್ಜಾನುಭಾವದಲಿ (ಆದಿ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ಸ್ನಾನವನ್ನು ಮಾಡಿ, ಶುಚಿಯಾಗಿ ಮಂತ್ರವನ್ನು ಜಪಿಸಿ ದೇವತೆಗಳಲ್ಲಿ ದೇವೇಂದ್ರನನ್ನು ಆರಿಸಿಕೊಂಡು ನೆನೆದಳು. ಒಡನೆಯೇ ಇಂದ್ರನು ಬಂದು ಕಮಲಾಕ್ಷಿ, ನಿನ್ನ ಬಯಕೆಯೇನು ಹೇಳು ಎನಲು, ಕುಂತಿಯು ಲಜ್ಜಾಭಾವದಿಂದ ತಲೆಯನ್ನು ತಗ್ಗಿಸಿದಳು.

ಅರ್ಥ:
ಮಿಂದು: ಸ್ನಾನಮಾಡಿ; ಕಡುಶುಚಿ: ತುಂಬ ನಿರ್ಮಲವಾಗಿ; ಸುಮನ: ಒಳ್ಳೆಯ ಮನಸ್ಸು; ವೃಂದ: ಗುಂಪು; ನೋಡು: ವೀಕ್ಷಿಸು; ಪುರಂದರ: ಇಂದ್ರ; ನೆನೆ: ಜ್ಞಾಪಿಸಿಕೊ; ಮುನಿ: ಋಷಿ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಶಕ್ತಿ: ಬಲ; ಬಂದು: ಆಗಮಿಸು; ಬಯಕೆ: ಆಸೆ; ಅರವಿಂದ: ಕಮಲ; ಲೋಚನೆ: ಕಣ್ಣು; ಹೇಳು: ಆಲಿಸು; ಪೂರ್ಣೇಂದು: ಪೂರ್ಣಚಂದ್ರ; ಮುಖ: ಆನನ; ತಲೆ: ಶಿರ; ತಲೆವಾಗು: ತಲೆಯನ್ನು ತಗ್ಗಿಸು; ಲಜ್ಜೆ: ನಾಚಿಕೆ; ಭಾವ: ಮನೋಧರ್ಮ, ಭಾವನೆ, ಚಿತ್ತವೃತ್ತಿ;

ಪದವಿಂಗಡಣೆ:
ಮಿಂದು +ಕಡುಶುಚಿಯಾಗಿ +ಸುಮನೋ
ವೃಂದದೊಳಗಾರೈದು+ ನೋಡಿ +ಪು
ರಂದರನ +ನೆನೆದಳು +ಮುನೀಂದ್ರನ+ ಮಂತ್ರ+ಶಕ್ತಿಯಲಿ
ಬಂದನಲ್ಲಿಗೆ+ ಬಯಕೆಯೇನ್+ ಅರ
ವಿಂದ +ಲೋಚನೆ +ಹೇಳೆನಲು +ಪೂ
ರ್ಣೇಂದು +ಮುಖಿ +ತಲೆವಾಗಿದಳು +ಲಜ್ಜಾನು+ಭಾವದಲಿ

ಅಚ್ಚರಿ:
(೧) ಕುಂತಿಯನ್ನು ಕರೆದ ಪರಿ – ಅರವಿಂದಲೋಚನೆ, ಪೂರ್ಣೇಂದುಮುಖಿ

ಪದ್ಯ ೨೨: ಅಭಿಮನ್ಯುವಿನ ಮಂತ್ರಾಸ್ತ್ರವು ಯಾರ ಬಳಿಗೆ ಹೋಯಿತು?

ಅವನಿಪತಿ ಕೇಳೈ ಮಹಾವೈ
ಷ್ಣವದ ಸತ್ರಾಣವನು ಗುರುಸಂ
ಭವನ ಮಂತ್ರದ ಪಾಡಿ ನಡಪಾಡಿಸಿತು ಪಾಂಡವರ
ತವಕದಲಿ ತೃಣಬಾಣವಭಿಮ
ನ್ಯುವಿನ ರಾಣೀವಾಸದುದರೋ
ದ್ಭವದ ಗರ್ಭಕೆ ಮುರಿದು ಹರಿದುದು ಸೂಕ್ಷ್ಮ ರೂಪದಲಿ (ಗದಾ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಆಗ ಶ್ರೀಕೃಷ್ಣನ ವೈಷ್ಣವ ರಕ್ಷಾಕವಚವನ್ನು ಅಶ್ವತ್ಥಾಮನ ಮಂತ್ರಾಸ್ತ್ರವನ್ನು ಎದುರಿಸಲಾಗದೆ ಪಾಂಡವರನ್ನು ಬಿಟ್ಟು ಅತಿವೇಗವಾಗಿ ಅಭಿಮನ್ಯುವಿನ ಪತ್ನಿಯಾದ ಉತ್ತರೆಯ ಗರ್ಭದೆಡೆಗೆ ಸೂಕ್ಷ್ಮ ರೂಪದಿಂದ ಹೋಯಿತು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ತ್ರಾಣ: ಕಾಪು, ರಕ್ಷಣೆ, ಶಕ್ತಿ; ಸಂಭವ: ಹುಟ್ಟು; ಗುರು: ಆಚಾರ್ಯ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಪಾಡಿ: ಪಡೆ, ಸೈನ್ಯ; ತವಕ: ಅವಸರ, ತ್ವರೆ; ತೃಣ: ಹುಲ್ಲು; ಬಾಣ: ಸರಳ; ರಾಣಿ: ಅರಸಿ; ರಾಣೀವಾಸ: ಅಂತಃಪುರ; ಉದರ: ಹೊಟ್ಟೆ; ಉದ್ಭವ: ಹುಟ್ಟು; ಗರ್ಭ: ಹೊಟ್ಟೆ; ಮುರಿ: ಸೀಳು; ಹರಿ: ಚಲಿಸು; ಸೂಕ್ಷ್ಮ: ಅತ್ಯಂತ ಚಿಕ್ಕದಾಗಿರುವಂಥದು; ರೂಪ: ಆಕಾರ;

ಪದವಿಂಗಡಣೆ:
ಅವನಿಪತಿ +ಕೇಳೈ +ಮಹಾವೈ
ಷ್ಣವದ +ಸತ್ರಾಣವನು+ ಗುರು+ಸಂ
ಭವನ +ಮಂತ್ರದ +ಪಾಡಿ +ನಡಪಾಡಿಸಿತು +ಪಾಂಡವರ
ತವಕದಲಿ +ತೃಣಬಾಣವ್+ಅಭಿಮ
ನ್ಯುವಿನ +ರಾಣೀವಾಸದ್+ಉದರೋ
ದ್ಭವದ +ಗರ್ಭಕೆ +ಮುರಿದು +ಹರಿದುದು +ಸೂಕ್ಷ್ಮ+ ರೂಪದಲಿ

ಅಚ್ಚರಿ:
(೧) ಉದರ, ಗರ್ಭ; ಸಂಭವ, ಉದ್ಭವ – ಸಮಾನಾರ್ಥಕ ಪದಗಳು

ಪದ್ಯ ೪೦: ಅಶ್ವತ್ಥಾಮನು ಯಾವು ವಿಚಾರವನ್ನು ಕೌರವನಿಗೆ ತಿಳಿಸಿದನು?

ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹಸ್ತಿನಾಪುರಿಗೆ
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರವಿದೆಂದನಶ್ವತ್ಥಾಮನವನಿಪನ (ಗದಾ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು, ರಾಜಾ, ನಿನ್ನ ಪುಣ್ಯವನ್ನು ಅರೆಬರೆಯಾಗಿದ್ದರೂ ಪೂರ್ಣಗೊಳಿಸುತ್ತೇನೆ. ಉದ್ವೇಗದ ಮಾತನ್ನು ಬಿಡು, ಮೇಲೇಳು, ಹಸ್ತಿನಾಪುರಕ್ಕೆ ಹೋಗೋಣ, ಶತ್ರುಗಳು ಮುತ್ತಿದರೆ ಕೋಟೆಯನ್ನು ಬಲಗೊಳಿಸೋಣ. ಇದೇ ಅತ್ಯುತ್ತಮವಾದ ಉಪಾಯ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸುಕೃತ: ಒಳ್ಳೆಯ ಕೆಲಸ; ವಿಸ್ತರಿಸು: ಹರಡು; ಪೂರಾಯ: ಪೂರ್ಣವಾಗಿ; ಕಾಹುರ: ಆವೇಶ, ಸೊಕ್ಕು, ಕೋಪ; ನುಡಿ: ಮಾತು; ಬೇಡ: ತ್ಯಜಿಸು; ನಡೆ: ಚಲಿಸು; ಅರಿ: ವೈರಿ; ಐತಂದು: ಬಂದು ಸೇರು; ಔಕು: ನೂಕು; ದುರ್ಗ: ಕೋಟೆ; ಬಲಿ: ಗಟ್ಟಿ, ದೃಢ; ನಿಲು: ನಿಲ್ಲು; ಪರಮ: ಶ್ರೇಷ್ಠ; ಮಂತ್ರ: ವಿಚಾರ; ಅವನಿಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಸುಕೃತವನು+ ವಿ
ಸ್ತರಿಸುವೆನು +ಪೂರಾಯವೆನೆ +ಕಾ
ಹುರದ +ನುಡಿ +ಬೇಡ್+ಏಳು +ನಡೆವುದು +ಹಸ್ತಿನಾಪುರಿಗೆ
ಅರಿಗಳ್+ಐತಂದ್+ಔಕಿದಡೆ +ಗಜ
ಪುರದ +ದುರ್ಗವ +ಬಲಿದು +ನಿಲುವುದು
ಪರಮ+ಮಂತ್ರವಿದೆಂದನ್+ಅಶ್ವತ್ಥಾಮನ್+ಅವನಿಪನ

ಅಚ್ಚರಿ:
(೧) ೬ನೇ ಸಾಲು ಒಂದೇ ಪದವಾಗಿ ರಚಿತವಾಗಿರುವುದು – ಪರಮಮಂತ್ರವಿದೆಂದನಶ್ವತ್ಥಾಮನವನಿಪನ
(೨) ಅರಸ, ಅವನಿಪ – ಪದ್ಯದ ಮೊದಲ ಹಾಗು ಕೊನೆಯ ಪದ

ಪದ್ಯ ೫೫: ಕೃಷ್ಣನು ಪಾಂಡವರನ್ನು ಹೇಗೆ ಸಂತೈಸಿದನು?

ಕುರುಬಲದ ಕಳಕಳದ ಹವಣ
ಲ್ಲರಿಬಲದ ಸಂತೋಷವಿದು ಮುರ
ಹರನ ಮಂತ್ರವು ಜೀಯ ಹರಿ ಸೂಳೈಸಿದನು ಭುಜವ
ಗರಳವಿಲ್ಲದ ಕುಪಿತಫಣಿ ಹಲು
ಮೊರೆದು ಮಾಡುವುದೇನು ಕರ್ಣನ
ನೊರಸಿದೆವು ಹೋಗೆಂದು ಸಂತೈಸಿದನು ಪಾಂಡವರ (ದ್ರೋಣ ಪರ್ವ, ೧೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಸಂಜಯನು ವಿವರಿಸುತ್ತಾ, ಎಲೈ ಧೃತರಾಷ್ಟ್ರ, ಘಟೋತ್ಕಚನ ಸಾವು ನಮ್ಮ ಸಂತೋಷಕ್ಕೆ ಕಾರಣವಲ್ಲ, ಇದು ಪಾಂಡವರಿಗೆ ಸಂತೋಷವನ್ನು ಕೊಡುವಂತಹದು. ಇದು ಶ್ರೀಕೃಷ್ಣನ ಉಪಾಯ. ಅವನು ತೋಳುತಟ್ಟಿ, ವಿಷವಿಲ್ಲದ ಹಾವು ಕಚ್ಚಿ ಮಾಡುವುದಾದರೂ ಏನು, ನಾವಿನ್ನು ಕರ್ಣನನ್ನು ಕೊಲ್ಲೋಣ ಎಂದು ಪಾಂಡವರನ್ನು ಸಂತೈಸಿದನು.

ಅರ್ಥ:
ಬಲ: ಸೈನ್ಯ; ಕಳಕಳ: ಗೊಂದಲ; ಹವಣ: ಮಿತಿ, ಅಳತೆ, ಉಪಾಯ; ಅರಿ: ವೈರಿ; ಸಂತೋಷ: ಹರ್ಷ; ಮುರಹರ: ಕೃಷ್ಣ; ಮಂತ್ರ: ಉಪಾಯ; ಜೀಯ: ಒಡೆಯ; ಸೂಳೈಸು: ಧ್ವನಿಮಾಡು, ಹೊಡೆ; ಭುಜ: ಬಾಹು; ಗರಳ: ವಿಷ; ಕುಪಿತ: ಕೋಪ; ಫಣಿ: ಹಾವು; ಹಲು: ದಂತ; ಮೊರೆ: ಗುಡುಗು ಹಾಕು; ಒರಸು: ಸಾಯಿಸು; ಹೋಗು: ತೆರಲು; ಸಂತೈಸು: ಸಾಂತ್ವನಗೊಳಿಸು;

ಪದವಿಂಗಡಣೆ:
ಕುರುಬಲದ +ಕಳಕಳದ +ಹವಣಲ್ಲ್
ಅರಿಬಲದ +ಸಂತೋಷವಿದು+ ಮುರ
ಹರನ +ಮಂತ್ರವು +ಜೀಯ +ಹರಿ+ ಸೂಳೈಸಿದನು+ ಭುಜವ
ಗರಳವಿಲ್ಲದ+ ಕುಪಿತ+ಫಣಿ +ಹಲು
ಮೊರೆದು +ಮಾಡುವುದೇನು +ಕರ್ಣನನ್
ಒರಸಿದೆವು +ಹೋಗೆಂದು +ಸಂತೈಸಿದನು +ಪಾಂಡವರ

ಅಚ್ಚರಿ:
(೧) ಲೋಕೋಕ್ತಿ – ಗರಳವಿಲ್ಲದ ಕುಪಿತಫಣಿ ಹಲುಮೊರೆದು ಮಾಡುವುದೇನು
(೨) ಕುರುಬಲ, ಅರಿಬಲ – ಪ್ರಾಸ ಪದಗಳು

ಪದ್ಯ ೩೧: ಭೀಷ್ಮರ ಮಾತಿಗೆ ಕರ್ಣನ ಅಭಿಪ್ರಾಯವೇನು?

ಜೀಯ ಮಂತ್ರದ ಮಾತು ರಾವುತ
ಪಾಯಕರಿಗೊಪ್ಪುವುದೆ ಅವರವ
ರಾಯತದಲೋಲೈಸಬೇಹುದು ಮೇರೆ ಮಾರ್ಗದಲಿ
ರಾಯನೊಲಿದುದೆ ಹಿಡಿವೆನೊಲ್ಲದ
ದಾಯವನು ಬಿಡುವೆನು ನಿಜಾಭಿ
ಪ್ರಾಯವಿದು ಸಂಪ್ರತಿಯ ನುಡಿ ತನಗಂಗವಲ್ಲೆಂದ (ದ್ರೋಣ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸ್ವಾಮಿ, ಸಂಧಿಯ ಮಾತು ರಾವುತರಿಗೆ ಕಾಲಾಳುಗಳಿಗೆ ಒಪ್ಪೀತೇ? ಅವರವರ ಅಭಿಪ್ರಾಯವೇನೋ ಅದಕ್ಕನುಸರಿಸಿ ಅವರನ್ನು ಓಲೈಸಬೇಕು. ಕೌರವನು ಹೇಳಿದುದಕ್ಕೆ ನಾನು ಒಪ್ಪುತ್ತೇನೆ, ಅವನಿಗೆ ಬೇಡವಾದುದನ್ನು ಬಿಡುತ್ತೇನೆ, ಇದು ನನ್ನ ನಿರ್ಧಾರ, ಸಂಧಿಯ ಮಾತನ್ನಾಡುವುದು ನನ್ನ ಕೆಲಸವಲ್ಲ ಎಂದು ಕರ್ಣನು ತಿಳಿಸಿದನು.

ಅರ್ಥ:
ಜೀಯ: ಒಡೆಯ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಪಾಯಕ: ಕಾಲಾಳು, ಸೇವಕ; ಒಪ್ಪು: ಸಮ್ಮತಿ; ಆಯತ: ಉಚಿತವಾದ, ಸಹಜ; ಓಲೈಸು: ಉಪಚರಿಸು; ಮೇರೆ: ಎಲ್ಲೆ, ಗಡಿ; ಮಾರ್ಗ: ದಾರಿ; ರಾಯ: ರಾಜ; ಹಿಡಿ: ಗ್ರಹಿಸು; ಆಯ: ಪರಿಮಿತಿ, ನಿಯಮ; ಬಿಡು: ತ್ಯಜಿಸು; ಅಭಿಪ್ರಾಯ: ಆಶಯ, ಉದ್ದೇಶ; ಸಂಪ್ರತಿ: ಸಂಧಿ; ನುಡಿ: ಮಾತು; ಅಂಗ: ರೀತಿ;

ಪದವಿಂಗಡಣೆ:
ಜೀಯ +ಮಂತ್ರದ +ಮಾತು +ರಾವುತ
ಪಾಯಕರಿಗ್+ಒಪ್ಪುವುದೆ +ಅವರವರ್
ಆಯತದಲ್+ಓಲೈಸಬೇಹುದು +ಮೇರೆ +ಮಾರ್ಗದಲಿ
ರಾಯನೊಲಿದುದೆ+ ಹಿಡಿವೆನ್+ಒಲ್ಲದದ್
ಆಯವನು +ಬಿಡುವೆನು+ ನಿಜ+ಅಭಿ
ಪ್ರಾಯವಿದು +ಸಂಪ್ರತಿಯ+ ನುಡಿ+ ತನಗ್+ಅಂಗವಲ್ಲೆಂದ

ಅಚ್ಚರಿ:
(೧) ಭೀಷ್ಮರ ಸಲಹೆಯನ್ನು ಮಾಡಲಾಗುವುದಿಲ್ಲ ಎಂದು ಹೇಳಿದ ಪರಿ – ಜೀಯ ಮಂತ್ರದ ಮಾತು ರಾವುತ
ಪಾಯಕರಿಗೊಪ್ಪುವುದೆ

ಪದ್ಯ ೨೧: ಸತ್ಯಭಾಮೆ ದ್ರೌಪದಿಯನ್ನು ಯಾವುದರ ಬಗ್ಗೆ ಪ್ರಶ್ನಿಸಿದಳು?

ಮಂತ್ರಸಿದ್ಧಿಯೊ ಮೇಣು ಶಾಬರ
ಯಂತ್ರ ರಕ್ಷೆಯೊ ಮೇಣ್ ವರೌಷಧ
ತಂತ್ರತಿಲಕವೊ ರಮಣರಿವರೈವರ ವಶೀಕರಣ
ಯಂತ್ರಮಯ ಹೂಹೆಗಳು ನೃಪರೀ
ಯಂತ್ರ ಸೂತ್ರದ ಕುಣಿಕೆ ನಿನ್ನ ನಿ
ಯಂತ್ರಣವ ಹೇಳೌ ನಿಧಾನವನೆಂದಳಿಂದು ಮುಖಿ (ಅರಣ್ಯ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸತ್ಯಭಾಮೆಯು ನಿನಗೆ ಮಂತ್ರ ಸಿದ್ಧಿಯಿದಿಯೇ? ಇಂದ್ರಜಾಲ ತಂತ್ರದಿಂದ ರಕ್ಷೆಯನ್ನು ಪಡೆದಿರುವೆಯೋ? ಇಲ್ಲದಿದ್ದರೆ ಯಾವ ಔಷಧಗಳಿಂದ ತಿಲಕವನ್ನು ರಚಿಸುವೆ? ಈ ಐವರೂ ಕೀಲುಗೊಂಬೆಗಳಂತೆ ಇದ್ದರೆ ನೀನು ಸೂತ್ರಧಾರಿ ಯಾಗಿರುವೆ, ಇದು ಹೇಗೆ ಸಾಧ್ಯವಾಯಿತು ಎಂದು ದ್ರೌಪದಿಯನ್ನು ಆಶ್ಚರ್ಯವಾಗಿ ಕೇಳಿದಳು.

ಅರ್ಥ:
ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಶಾಬರ: ಇಂದ್ರಜಾಲ; ಯಂತ್ರ: ಉಪಕರಣ; ರಕ್ಷೆ: ಕಾಪು; ಮೇಣ್: ಅಥವ; ವರ: ಶ್ರೇಷ್ಠ; ಔಷಧ: ಮದ್ದು; ತಂತ್ರ: ಉಪಾಯ; ತಿಲಕ: ಶ್ರೇಷ್ಠ; ರಮಣ: ಪ್ರಿಯಕರ, ಗಂಡ; ವಶೀಕರಣ: ವಶಪಡಿಸಿಕೊಳ್ಳುವಿಕೆ; ಹೂಹೆ: ಗೊಂಬೆ, ಪುತ್ತಳಿ; ನೃಪ: ರಾಜ; ಸೂತ್ರ: ನಿಯಮ; ಕುಣಿಕೆ: ಕೊನೆ, ತುದಿ; ನಿಯಂತ್ರಣ: ಹತೋಟಿ; ನಿಧಾನ: ಸಾವಕಾಶ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಸುಂದರಿ);

ಪದವಿಂಗಡಣೆ:
ಮಂತ್ರ+ಸಿದ್ಧಿಯೊ +ಮೇಣು +ಶಾಬರ
ಯಂತ್ರ +ರಕ್ಷೆಯೊ +ಮೇಣ್ +ವರೌಷಧ
ತಂತ್ರ+ತಿಲಕವೊ+ ರಮಣರ್+ಇವರ್+ಐವರ +ವಶೀಕರಣ
ಯಂತ್ರಮಯ +ಹೂಹೆಗಳು +ನೃಪರೀ
ಯಂತ್ರ +ಸೂತ್ರದ +ಕುಣಿಕೆ+ ನಿನ್ನ +ನಿ
ಯಂತ್ರಣವ+ ಹೇಳೌ +ನಿಧಾನವನೆಂದಳ್+ಇಂದುಮುಖಿ

ಅಚ್ಚರಿ:
(೧) ಮಂತ್ರ, ತಂತ್ರ, ಯಂತ್ರ, ನಿಯಂತ್ರ – ಪ್ರಾಸ ಪದಗಳು
(೨) ದ್ರೌಪದಿಯ ಛಾಪನ್ನು ವಿವರಿಸುವ ಪರಿ – ಯಂತ್ರಮಯ ಹೂಹೆಗಳು ನೃಪರೀ
ಯಂತ್ರ ಸೂತ್ರದ ಕುಣಿಕೆ ನಿನ್ನ ನಿಯಂತ್ರಣವ

ಪದ್ಯ ೩೫: ಶಿವನ ಬೇಟೆಗಾಗಿ ಯಾವ ವಸ್ತುಗಳು ಸಿದ್ಧವಾದವು?

ಶ್ರುತಿಗಳೂಳಿಗ ತರ್ಕಶಾಸ್ತ್ರದ
ಗತಿಯ ಸೋಹಿನ ಮಂತ್ರಮಯ ಸಂ
ತತಿಯ ಸೊಂಪಿನ ವಿವಿಧ ಜಪಯಜ್ಞಾದಿಗಳ ಬಲೆಯ
ವ್ರತದ ಜಂತ್ರದ ಕಣ್ಣಿಗಳ ಸ
ತ್ಕೃತಿಯ ಕೋಲ್ಗುಂಡುಗಳ ಯೋಗ
ಸ್ಥಿತಿಯ ಸರಳಿನ ಶಬರರೈದಿತು ಶಿವನ ಬಳಸಿನಲಿ (ಅರಣ್ಯ ಪರ್ವ, ೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶಿವನ ಬೇಟೆಗಾರರ ತಂಡಕ್ಕೆ ವೇದಗಳೆ ಕೆಲಸ ಮಾಡುವ ಸೇವಕರಾದರು. ತರ್ಕ ಶಾಸ್ತ್ರವು ಮೃಗಗಳನ್ನು ಒಂದು ಕಡೆ ತರಲು ಹೊರಟ ಸೇವಕರು. ಮಂತ್ರದಿಂದ ಮಾಡಿದ ವಿವಿಧ ಜಪಯಜ್ಞಗಳೇ ಬಲೆಗಳಾದವು. ವ್ರತಗಳು ಮೃಗಗಳ ಕಾಲನ್ನು ಹಿಡಿಯುವ ಕಣ್ಣಿಗಳಾದವು, ಪುಣ್ಯ ಕರ್ಮಗಳೇ ಕೋಲು ಕವಣಿಕಲ್ಲುಗಳಾದವು. ಯೋಗವೇ ಬಾಣವಾಯಿತು ಇವನ್ನು ಹಿಡಿದ ಶಿವನ ಪ್ರಮಥಗಣಗಳು ಶಿವನ ಬಳಿ ಸೇರಿದರು.

ಅರ್ಥ:
ಶ್ರುತಿ: ವೇದ; ಊಳಿಗ: ಕೆಲಸ, ಕಾರ್ಯ; ತರ್ಕ: ವಿಚಾರ, ಪರ್ಯಾಲೋಚನೆ; ಶಾಸ್ತ್ರ: ಧಾರ್ಮಿಕ ವಿಷಯ; ಗತಿ: ಗಮನ, ಸಂಚಾರ; ಸೋಹು:ಅಟ್ಟು, ಓಡಿಸು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಂತತಿ: ಗುಂಪು; ಸೊಂಪು: ಸೊಗಸು, ಚೆಲುವು; ವಿವಿಧ: ಹಲವಾರು; ಜಪ: ತಪ, ಧ್ಯಾನ; ಯಜ್ಞ: ಯಾಗ, ಯಜನ; ಬಲೆ: ಜಾಲ; ವ್ರತ: ನಿಯಮ; ಜಂತ್ರ: ಯಂತ್ರ, ವಾದ್ಯ; ಕಣ್ಣಿ:ಹಗ್ಗ, ರಜ್ಜು; ಸತ್ಕೃತಿ: ಒಳ್ಳೆಯ ಕೆಲಸ; ಕೋಲು: ದಂಡ; ಗುಂಡು: ಗುಂಡುಕಲ್ಲು; ಸ್ಥಿತಿ: ಅವಸ್ಥೆ; ಯೋಗ: ಧ್ಯಾನ; ಸರಳು: ಬಾಣ; ಐದು: ಬಂದು ಸೇರು; ಬಳಸು: ಹತ್ತಿರ;

ಪದವಿಂಗಡಣೆ:
ಶ್ರುತಿಗಳ್+ಊಳಿಗ+ ತರ್ಕ+ಶಾಸ್ತ್ರದ
ಗತಿಯ +ಸೋಹಿನ +ಮಂತ್ರಮಯ +ಸಂ
ತತಿಯ +ಸೊಂಪಿನ+ ವಿವಿಧ +ಜಪ+ಯಜ್ಞಾದಿಗಳ+ ಬಲೆಯ
ವ್ರತದ +ಜಂತ್ರದ +ಕಣ್ಣಿಗಳ +ಸ
ತ್ಕೃತಿಯ+ ಕೋಲ್+ಗುಂಡುಗಳ +ಯೋಗ
ಸ್ಥಿತಿಯ +ಸರಳಿನ +ಶಬರರ್+ಐದಿತು +ಶಿವನ +ಬಳಸಿನಲಿ

ಅಚ್ಚರಿ:
(೧) ವೇದ, ಮಂತ್ರ, ಜಪ ಯಜ್ಞ, ಸತ್ಕೃತಿ, ಯೋಗಸ್ಥಿತಿ – ಶಿವನ ಬೇಟೆಗಾರರ ಆಯುಧ

ಪದ್ಯ ೬೧: ಧೃತರಾಷ್ಟ್ರ ಯಾರ ಜೊತೆ ಉಪಾಯವನ್ನು ವಿಮರ್ಶಿಸುವುದು ಒಳಿತೆಂದನು?

ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ತನ್ನ ಮಗನ ವಿಚಾರವನ್ನು ಕೇಳಿ, ಹೌದು ನೀನು ಹೇಳುತ್ತಿರುವುದು ಸರಿಯಾಗಿದೆ, ಇದರಲ್ಲೇನು ತಪ್ಪಿಲ್ಲ. ಸರಿಯಾದ ಮಾರ್ಗವೇನೋ ಹೌದು, ವಿದುರನನ್ನು ಕರೆಸಿ ಕೇಳುತ್ತೇನೆ, ವಿದುರನು ಇಹಪರಗಳಿಗೆ ಹಿತವಾವುದು ಎಂದು ಬಲ್ಲವನು. ಆತ ಕುಹಕಿಯಲ್ಲ, ಅವನು ಇದಕ್ಕೆ ಒಪ್ಪಿದರೆ ಇದೇ ಸರಿಯಾದ ಆಲೋಚನೆ ಎಂದನು.

ಅರ್ಥ:
ಅಹುದು: ಹೌದು; ತಪ್ಪು: ಸರಿಯಿಲ್ಲದ; ಸಾಧನ: ಸಾಧಿಸುವಿಕೆ, ಗುರಿಮುಟ್ಟುವಿಕೆ; ಬುದ್ಧಿ: ಚಿತ್ತ, ಅಭಿಮತ: ಅಭಿಪ್ರಾಯ; ಕರೆಸು: ಬರೆಮಾಡು; ಐಸಲೇ: ಅಲ್ಲವೇ; ಬೆಸಸು: ಹೇಳು, ಆಜ್ಞಾಪಿಸು; ಕುಹಕ: ಮೋಸ, ವಂಚನೆ; ನೋಡು: ವೀಕ್ಷಿಸು; ಇಹಪರ: ಈ ಲೋಕ ಮತ್ತು ಪರಲೋಕ; ಹಿತ: ಒಳಿತು; ನಿರ್ವಹಿಸು: ಮಾಡು, ಪೂರೈಸು; ಕೊಡು: ನೀಡು; ಮಂತ್ರ: ವಿಚಾರ, ಆಲೋಚನೆ; ಮಗ: ಪುತ್ರ;

ಪದವಿಂಗಡಣೆ:
ಅಹುದು +ತಪ್ಪೇನ್+ಇದುವೆ +ಸಾಧನ
ವಹುದು +ವಿದುರನ +ಬುದ್ಧಿಗ್+ಅಭಿಮತ
ವಹಡೆ +ಕರೆಸುವೆವ್+ಐಸಲೇ +ಬೆಸಸುವೆನು+ ವಿದುರಂಗೆ
ಕುಹಕವ್+ಆತನಲ್+ಇಲ್ಲ +ನೋಡುವನ್
ಇಹಪರತ್ರದ+ ಹಿತವನ್+ಇದ +ನಿ
ರ್ವಹಿಸಿ +ಕೊಡುವರೆ +ಮಂತ್ರವೆಂದನು+ ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ವಿದುರನ ಗುಣ – ಕುಹಕವಾತನಲಿಲ್ಲ, ನೋಡುವನಿಹಪರತ್ರದ ಹಿತವನ್

ಪದ್ಯ ೫೬: ಧರ್ಮಜನ ಆಪ್ತರು ಹೇಗೆ ರಾಜನನ್ನು ಶುಶ್ರೂಷೆ ಮಾಡಿದರು?

ಮಂತ್ರಜಲದಲಿ ತೊಳೆದು ಘಾಯವ
ಮಂತ್ರಿಸುತ ಕರ್ಪುರದ ಕವಳದ
ಯಂತ್ರ ರಕ್ಷೆಯಲವನಿಪನ ಸಂತೈಸಿ ಮಲಗಿಸುತ
ತಂತ್ರ ತಲ್ಲಣಿಸದಿರಿ ಜಿತ ಶರ
ತಂತ್ರನೋ ಭೂಪತಿ ವಿರೋಧಿಭ
ಟಾಂತ್ರ ಭಂಜನ ನೀಗಳೆಂದುದು ರಾಯನಾಪ್ತಜನ (ಕರ್ಣ ಪರ್ವ, ೧೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮಜನ ಆಪ್ತರು ಅವನ ಗಾಯಗಳನ್ನು ಮಂತ್ರ ಜಲದಿಂದ ತೊಳೆದು ಮಂತ್ರಿಸಿದ ಕರ್ಪೂರ ತಾಂಬೂಲವನ್ನು ಕೊಟ್ಟು, ಯಂತ್ರದ ರಕ್ಷಣೆಯಿಂದ ಅವನನ್ನು ಸಂತೈಸಿ ಮಲಗಿಸಿದರು. ಬಳಿಕ ಸುತ್ತಲಿದ್ದವರಿಗೆ ಸೈನ್ಯವು ಬೆದರದಿರಲಿ ಅರಸನು ಬಾಣಗಳ ಹೊಡೆತವನ್ನು ಸುಧಾರಿಸಿ ಗೆದ್ದಿದ್ದಾನೆ, ವಿರೋಧಿಗಳ ಭಟರ ಕರುಳನ್ನು ಭಂಜಿಸಿ ಗೆಲ್ಲುತ್ತಾನೆ ಎಂದು ಹೇಳಿದರು.

ಅರ್ಥ:
ಮಂತ್ರ: ಪವಿತ್ರವಾದ ದೇವತಾಸ್ತುತಿ; ಜಲ: ನೀರು; ತೊಳೆ: ಸ್ವಚ್ಛಗೊಳಿಸು; ಘಾಯ: ಪೆಟ್ಟು; ಕರ್ಪುರ: ಸುಗಂಧ ದ್ರವ್ಯ; ಕವಳ:ತುತ್ತು, ತಾಂಬೂಲ; ಯಂತ್ರ: ತಾಯಿತಿ, ಕಾಪು; ರಕ್ಷೆ:ಕಾಪು, ರಕ್ಷಣೆ; ಅವನಿಪ: ರಾಜ; ಸಂತೈಸು: ಸಮಾಧಾನ ಪಡಿಸು; ಮಲಗು: ನಿದ್ರೆ, ಶಯನ; ತಂತ್ರ: ಔಷಧಿ, ಮದ್ದು; ತಲ್ಲಣ: ಅಂಜಿಕೆ, ಭಯ; ಜಿತ: ಗೆಲ್ಲಲ್ಪಟ್ಟ; ಶರ: ಬಾಣ; ಭೂಪತಿ: ರಾಜ; ವಿರೋಧ:ತಡೆ, ಅಡ್ಡಿ; ವಿರೋಧಿ: ವೈರಿ; ಅಂತ್ರ: ಕರುಳು; ಭಂಜನ: ಸೀಳು, ನಾಶಮಾಡು; ನೀಗು: ನಿವಾರಿಸಿಕೊಳ್ಳು; ರಾಯ: ರಾಜ; ಆಪ್ತ: ಹತ್ತಿರದ;

ಪದವಿಂಗಡಣೆ:
ಮಂತ್ರ+ಜಲದಲಿ +ತೊಳೆದು +ಘಾಯವ
ಮಂತ್ರಿಸುತ +ಕರ್ಪುರದ +ಕವಳದ
ಯಂತ್ರ +ರಕ್ಷೆಯಲ್+ಅವನಿಪನ +ಸಂತೈಸಿ +ಮಲಗಿಸುತ
ತಂತ್ರ +ತಲ್ಲಣಿಸದಿರಿ+ ಜಿತ+ ಶರ
ತಂತ್ರನೋ +ಭೂಪತಿ +ವಿರೋಧಿಭಟ
ಅಂತ್ರ +ಭಂಜನ +ನೀಗಳ್+ಎಂದುದು +ರಾಯನ್+ಆಪ್ತಜನ

ಅಚ್ಚರಿ:
(೧) ಮಂತ್ರ, ಯಂತ್ರ, ತಂತ್ರ, ಅಂತ್ರ – ಪ್ರಾಸ ಪದಗಳು
(೨) ಅವನಿಪ, ಭೂಪತಿ, ರಾಯ – ಸಮನಾರ್ಥಕ ಪದ

ಪದ್ಯ ೨೩: ಕರ್ಣನು ಸಂಧಿಯನ್ನರಿಯೆ ಎಂದು ಏಕೆ ಹೇಳಿದ

ಮಸೆದುದಿತ್ತಂಡಕೆ ಮತ್ಸರ
ವಸಮಸಂಗರರೀಗ ಸಂಧಿಯ
ನುಸಿರಿದೊಡೆ ಮನಗಾಣನೇ ಕೌರವ ಮಹೀಶ್ವರನು
ವಿಷಮನಹ ಕಟ್ಟಾಳು ಮಂತ್ರವ
ನೆಸಗಲಾಗದು ತನ್ನ ಬೀರಕೆ
ಮಸುಳಹುದು ಮುರವೈರಿ ಸಂಧಿಯನರಿಯೆ ನಾನೆಂದ (ಉದ್ಯೋಗ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಷ್ಣ ನೀನು ಎರಡು ತಂಡಗಳಿಗೂ ಮತ್ಸರವನ್ನು ಮಸೆದು ಅಸಮಾನ ವೀರನು ಸಂಧಿಯನ್ನು ಪ್ರತಿಪಾದಿಸಿದರೆ ಕೌರವನು ಏನೆಂದು ಕೊಂಡಾನು? ಯುದ್ಧವೇ ಇಲ್ಲದ ವೀರನು ಮಂತ್ರಾಲೋಚನೆ ಮಾಡಬಾರದು; ಹಾಗೆ ಮಾಡಿದರೆ ಅದು ನನ್ನ ಪರಾಕ್ರಮಕ್ಕೆ ಮಂಕುಬಡಿದಂತೆ ಆದುದರಿಂದ ನಾನು ಸಂಧಿಯನ್ನು ಅರಿಯೆ ಎಂದು ಕರ್ಣನು ಹೇಳಿದನು.

ಅರ್ಥ:
ಮಸೆ:ಹರಿತವಾದುದು; ತಂಡ: ಗುಂಪು; ಮತ್ಸರ: ಹೊಟ್ಟೆಕಿಚ್ಚು; ಅಸಮ:ಅಸದೃಶವಾದ; ಸಂಗರ:ಯುದ್ಧ, ಕಾಳಗ; ಸಂಧಿ: ಸಂಯೋಗ; ಉಸಿರು: ಸದ್ದು ಮಾಡು; ಮನ: ಮನಸ್ಸು; ಮನಗಾಣು: ತಿಳಿದುಕೊ; ಮಹೀಶ್ವರ: ರಾಜ; ವಿಷಮ: ಕಷ್ಟಕರವಾದುದು; ಕಟ್ಟಾಳು: ಶೂರ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಎಸಗು: ಕೆಲಸ, ಉದ್ಯೋಗ; ಬೀರ: ವೀರ; ಮಸುಳ:ಕಾಂತಿಹೀನವಾಗು; ಮುರವೈರಿ: ಕೃಷ್ಣ; ಅರಿ: ತಿಳಿ;

ಪದವಿಂಗಡನೆ:
ಮಸೆದುದ್+ಇತ್+ತಂಡಕೆ +ಮತ್ಸರವ್
ಅಸಮ+ಸಂಗರರ್+ಈಗ +ಸಂಧಿಯನ್
ಉಸಿರಿದೊಡೆ+ ಮನಗಾಣನೇ +ಕೌರವ +ಮಹೀಶ್ವರನು
ವಿಷಮನಹ +ಕಟ್ಟಾಳು +ಮಂತ್ರವನ್
ಎಸಗಲಾಗದು +ತನ್ನ +ಬೀರಕೆ
ಮಸುಳಹುದು+ ಮುರವೈರಿ+ ಸಂಧಿಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಮಸೆದು, ಮತ್ಸರ, ಮಹೀಶ್ವರ, ಮಂತ್ರ, ಮಸುಳ, ಮುರವೈರಿ, ಮನಗಾಣು – ಮ ಕಾರದ ಪದಗಳ ಬಳಕೆ