ಪದ್ಯ ೩೪: ಸಂಜಯನು ದುರ್ಯೋಧನನಿಗೆ ಏನು ಹೇಳಿದ?

ಜೀಯ ನಿಮ್ಮಡಿಗಳಿಗೆ ಗುರು ಗಾಂ
ಗೇಯ ವಿದುರಾದಿಗಳು ಹೇಳಿದ
ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ
ರಾಯ ಫಲವೇನೈ ಯುಧಿಷ್ಠಿರ
ರಾಯನೊಲಿದಂತಿರಲಿ ನಿಮ್ಮಯ
ತಾಯಿತಂದೆಗೆ ಹೇಳ್ವೆನೇನನು ಬುದ್ಧಿಗಲಿಸೆಂದ (ಗದಾ ಪರ್ವ, ೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸಂಜಯನು, ನನ್ನ ಪ್ರಲಾಪಕ್ಕೆ ನಿಮಗೆ ದ್ರೋಣ, ಭೀಷ್ಮ, ವಿದುರರು ಹೇಳಿದ ಭವಿಷ್ಯಕ್ಕಾದ ಗತಿಯೇ ಬಂತೇ? ಹೇಳಿ ಏನು ಫಲ, ಯುಧಿಷ್ಠಿರನು ತನಗಿಷ್ಟಬಂದಂತೆ ಇಅಲಿ. ನಿಮ್ಮ ತಂದೆತಾಯಿಗಳಿಗೆ ಏನು ಹೇಳಲಿ? ತಿಳಿಸಿರಿ ಎಂದು ಕೇಳಿದನು.

ಅರ್ಥ:
ಜೀಯ: ಒಡೆಯ; ಅಡಿ: ಪಾದ; ಗುರು: ಆಚಾರ್ಯ; ಗಾಂಗೇಯ: ಭೀಷ್ಮ; ಆದಿ: ಮುಂತಾದರು; ಜೋಯಿಸ: ಜೋತಿಷಿ; ಪ್ರಳಾಪ: ಅಸಂಬದ್ಧವಾದ ಮಾತು, ಪ್ರಲಾಪ; ರಾಯ: ಒಡೆಯ; ಫಲ: ಪ್ರಯೋಜನ; ರಾಯ: ರಾಜ; ಒಲಿ: ಒಪ್ಪು, ಸಮ್ಮತಿಸು; ತಾಯಿ: ಮಾತೆ; ತಂದೆ: ಪಿತ; ಬುದ್ಧಿ: ತಿಳಿವು, ಅರಿವು;

ಪದವಿಂಗಡಣೆ:
ಜೀಯ +ನಿಮ್ಮಡಿಗಳಿಗೆ +ಗುರು +ಗಾಂ
ಗೇಯ +ವಿದುರಾದಿಗಳು +ಹೇಳಿದ
ಜೋಯಿಸವ +ಕೈಕೊಂಡಿರೇ +ನಮ್ಮೀ +ಪ್ರಳಾಪದಲಿ
ರಾಯ +ಫಲವೇನೈ +ಯುಧಿಷ್ಠಿರ
ರಾಯನ್+ಒಲಿದಂತಿರಲಿ +ನಿಮ್ಮಯ
ತಾಯಿ+ತಂದೆಗೆ +ಹೇಳ್ವೆನ್+ಏನನು +ಬುದ್ಧಿ+ಕಲಿಸೆಂದ

ಅಚ್ಚರಿ:
(೧) ಜೀಯ, ರಾಯ – ಸಾಮ್ಯಾರ್ಥ ಪದ
(೨) ತಿಳಿಸಿ ಎಂದು ಹೇಳುವ ಪರಿ – ಬುದ್ಧಿಗಲಿಸೆಂದ

ಪದ್ಯ ೩೩: ದುರ್ಯೋಧನನ ಮತವಾವುದು?

ಮೊದಲಲೆಂದಿರಿ ನೀವು ಬಳಿಕೀ
ಯದುಕುಲಾಧಿಪ ಕೃಷ್ಣ ನೆರೆ ಹೇ
ಳಿದನು ಋಷಿಗಳು ಬೊಪ್ಪನವರೀ ಹದನ ಸಾರಿದರು
ವಿದುರ ಹೇಳಿದನೆಲ್ಲರಿಗೆ ತಾ
ನಿದುವೆ ಮತವೆನಗೊಬ್ಬಗೆಯು ಬಲು
ಗದನವೇ ಮತವೆಂದು ಹೇಳಿದ ಹಿಂದೆ ನಿಮಗೆಂದ (ಭೀಷ್ಮ ಪರ್ವ, ೧೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಮೊದಲು ನೀವು ಸಂಧಿ ಮಾಡಿಕೋ ಮೈತ್ರಿಯಿಂದ ಬಾಳು ಎಂದು ಹೇಳಿದಿರಿ, ಬಳಿಕ ಕೃಷ್ಣನು ಹೇಳಿದ, ಋಷಿಗಳು ಸಹ ಇದನ್ನೇ ಹೇಳಿದರು. ಅಪ್ಪನೂ, ವಿದುರನೂ ಈ ಮಾತನ್ನೇ ಹೇಳಿದರು, ನಿಮ್ಮೆಲ್ಲರಿಗೂ ಒಂದೇ ಅಭಿಪ್ರಾಯ, ಆದರೆ ನನಗೊಬ್ಬನಿಗೆ ಯುದ್ಧದಲ್ಲಿಯೇ ಮತ ಎಂದು ಈ ಹಿಂದೆಯೇ ಹೇಳಿದ್ದೆ ಎಂದು ದುರ್ಯೋಧನನು ತಿಳಿಸಿದನು.

ಅರ್ಥ:
ಮೊದಲು: ಆದಿ, ಮುಂಚೆ; ಬಳಿಕ: ನಂತರ; ಯದುಕುಲಾಧಿಪ: ಕೃಷ್ಣ; ಅಧಿಪ: ಒಡೆಯ; ನೆರೆ: ಸೇರು; ಹೇಳು: ತಿಳಿಸು; ಋಷಿ: ಮುನಿ; ಬೊಪ್ಪ: ತಂದೆ; ಹದ: ರೀತಿ; ಸಾರು: ಕೂಗು, ಘೋಷಿಸು; ಮತ: ಅಭಿಪ್ರಾಯ; ಕದನ: ಯುದ್ಧ; ಮತ: ವಿಚಾರ;

ಪದವಿಂಗಡಣೆ:
ಮೊದಲಲ್+ಎಂದಿರಿ +ನೀವು +ಬಳಿಕ್+ಈ
ಯದುಕುಲ+ಅಧಿಪ+ ಕೃಷ್ಣ +ನೆರೆ +ಹೇ
ಳಿದನು +ಋಷಿಗಳು +ಬೊಪ್ಪನವರೀ +ಹದನ +ಸಾರಿದರು
ವಿದುರ+ ಹೇಳಿದನ್+ಎಲ್ಲರಿಗೆ +ತಾ
ನಿದುವೆ +ಮತವ್+ಎನಗ್+ಒಬ್ಬಗೆಯು +ಬಲು
ಕದನವೇ +ಮತವೆಂದು +ಹೇಳಿದ +ಹಿಂದೆ +ನಿಮಗೆಂದ

ಅಚ್ಚರಿ:
(೧) ದುರ್ಯೋಧನನ ಮತ – ಎನಗೊಬ್ಬಗೆಯು ಬಲುಗದನವೇ ಮತ

ಪದ್ಯ ೨೯: ವಿದುರನು ದ್ರೌಪದಿಗೆ ಏನು ಹೇಳಿದ?

ಬಾಯ ಬಿಡಲೇಕಕಟ ಬಳಲಿದೆ
ತಾಯೆ ಕೈದೋರಿಸರು ನಿನ್ನಯ
ರಾಯರೈವರು ಕೆಲಬಲದ ಜನರೇನ ಮಾಡುವರು
ನ್ಯಾಯ ನಿನ್ನದು ದೈವದೊಲುಮೆಯ
ದಾಯ ತಪ್ಪಿತು ಬರಿದೆ ಧೈರ್ಯವ
ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ (ಸಭಾ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ದ್ರೌಪದಿಯ ಅಳಲನ್ನು ಕೇಳಿ ವಿದುರನು, ಎಲೈ ದ್ರೌಪದಿಯೇ, ಸುಮ್ಮನೆ ಏಕೆ ಗೋಳಿಡುವೆ? ಅತ್ತು ಅತ್ತು ನೀನು ಆಯಾಸಗೊಳ್ಳುವೆ, ನಿನ್ನ ಪತಿಗಳು ತಮ್ಮ ಪೌರುಷವನ್ನು ತೋರಿಸಲಿಲ್ಲ. ಉಳಿದವರಾದರೂ ಏನು ಮಾಡಿಯಾರು? ನಿನ್ನ ಮಾತು ನ್ಯಾಯ ಆದರೆ ದೈವವು ಯಾರಿಗೆ ಅನುಗ್ರಹ ಮಾಡಬೇಕೆಂಬ ಲೆಕ್ಕದಲ್ಲಿ ತಪ್ಪಿದೆ, ಸುಮ್ಮನೆ ಎದೆಗುಂದಬೇಡ ಎಂದು ವಿದುರನು ದ್ರೌಪದಿಗೆ ಸಹಾನುಭೂತಿಯ ಮಾತುಗಳನ್ನು ಆಡಿದನು.

ಅರ್ಥ:
ಬಾಯಿ: ಮುಖದ ಒಂದು ಅಂಗ; ಬಾಯ ಬಿಡು: ಮೊರಳಿಡು, ಹಲುಬು; ಅಕಟ: ಅಯ್ಯೋ; ಬಳಲು: ಆಯಾಸ; ತಾಯೆ: ಮಾತೆ; ಕೈದೋರು: ಪೌರುಷವನ್ನು ಬೀರು; ರಾಯರು: ಒಡೆಯ, ರಾಜ; ಕೆಲಬಲ: ಅಕ್ಕಪಕ್ಕ; ಜನರು: ಮನುಷ್ಯರು; ನ್ಯಾಯ: ಸರಿಯಾದುದು; ದೈವ: ಭಗವಂತ; ಒಲುಮೆ: ಪ್ರೀತಿ; ಆಯ: ರೀತಿ, ಪರಿಮಿತಿ; ತಪ್ಪು: ಸರಿಯಿಲ್ಲದ; ಬರಿ: ಕೇವಲ; ಧೈರ್ಯ: ದಿಟ್ಟತನ; ಬೀಯ: ವ್ಯಯ; ನುಡಿ: ಮಾತಾಡು; ಅಂಗನೆ: ಹೆಣ್ಣು;

ಪದವಿಂಗಡಣೆ:
ಬಾಯ +ಬಿಡಲೇಕ್+ಅಕಟ +ಬಳಲಿದೆ
ತಾಯೆ +ಕೈದೋರಿಸರು +ನಿನ್ನಯ
ರಾಯರ್+ಐವರು +ಕೆಲಬಲದ +ಜನರ್+ಏನ +ಮಾಡುವರು
ನ್ಯಾಯ +ನಿನ್ನದು +ದೈವದ್+ಒಲುಮೆಯದ್
ಆಯ +ತಪ್ಪಿತು +ಬರಿದೆ+ ಧೈರ್ಯವ
ಬೀಯ +ಮಾಡದಿರ್+ಎಂದು+ ನುಡಿದನು+ ವಿದುರನ್+ಅಂಗನೆಗೆ

ಅಚ್ಚರಿ:
(೧) ವಿದುರನು ಧೈರ್ಯ ಹೇಳುವ ಪರಿ – ನ್ಯಾಯ ನಿನ್ನದು ದೈವದೊಲುಮೆಯದಾಯ ತಪ್ಪಿತು ಬರಿದೆ ಧೈರ್ಯವ ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ

ಪದ್ಯ ೬೧: ಧೃತರಾಷ್ಟ್ರ ಯಾರ ಜೊತೆ ಉಪಾಯವನ್ನು ವಿಮರ್ಶಿಸುವುದು ಒಳಿತೆಂದನು?

ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ತನ್ನ ಮಗನ ವಿಚಾರವನ್ನು ಕೇಳಿ, ಹೌದು ನೀನು ಹೇಳುತ್ತಿರುವುದು ಸರಿಯಾಗಿದೆ, ಇದರಲ್ಲೇನು ತಪ್ಪಿಲ್ಲ. ಸರಿಯಾದ ಮಾರ್ಗವೇನೋ ಹೌದು, ವಿದುರನನ್ನು ಕರೆಸಿ ಕೇಳುತ್ತೇನೆ, ವಿದುರನು ಇಹಪರಗಳಿಗೆ ಹಿತವಾವುದು ಎಂದು ಬಲ್ಲವನು. ಆತ ಕುಹಕಿಯಲ್ಲ, ಅವನು ಇದಕ್ಕೆ ಒಪ್ಪಿದರೆ ಇದೇ ಸರಿಯಾದ ಆಲೋಚನೆ ಎಂದನು.

ಅರ್ಥ:
ಅಹುದು: ಹೌದು; ತಪ್ಪು: ಸರಿಯಿಲ್ಲದ; ಸಾಧನ: ಸಾಧಿಸುವಿಕೆ, ಗುರಿಮುಟ್ಟುವಿಕೆ; ಬುದ್ಧಿ: ಚಿತ್ತ, ಅಭಿಮತ: ಅಭಿಪ್ರಾಯ; ಕರೆಸು: ಬರೆಮಾಡು; ಐಸಲೇ: ಅಲ್ಲವೇ; ಬೆಸಸು: ಹೇಳು, ಆಜ್ಞಾಪಿಸು; ಕುಹಕ: ಮೋಸ, ವಂಚನೆ; ನೋಡು: ವೀಕ್ಷಿಸು; ಇಹಪರ: ಈ ಲೋಕ ಮತ್ತು ಪರಲೋಕ; ಹಿತ: ಒಳಿತು; ನಿರ್ವಹಿಸು: ಮಾಡು, ಪೂರೈಸು; ಕೊಡು: ನೀಡು; ಮಂತ್ರ: ವಿಚಾರ, ಆಲೋಚನೆ; ಮಗ: ಪುತ್ರ;

ಪದವಿಂಗಡಣೆ:
ಅಹುದು +ತಪ್ಪೇನ್+ಇದುವೆ +ಸಾಧನ
ವಹುದು +ವಿದುರನ +ಬುದ್ಧಿಗ್+ಅಭಿಮತ
ವಹಡೆ +ಕರೆಸುವೆವ್+ಐಸಲೇ +ಬೆಸಸುವೆನು+ ವಿದುರಂಗೆ
ಕುಹಕವ್+ಆತನಲ್+ಇಲ್ಲ +ನೋಡುವನ್
ಇಹಪರತ್ರದ+ ಹಿತವನ್+ಇದ +ನಿ
ರ್ವಹಿಸಿ +ಕೊಡುವರೆ +ಮಂತ್ರವೆಂದನು+ ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ವಿದುರನ ಗುಣ – ಕುಹಕವಾತನಲಿಲ್ಲ, ನೋಡುವನಿಹಪರತ್ರದ ಹಿತವನ್

ಪದ್ಯ ೧೫: ಕೃಷ್ಣನು ನಿನ್ನ ಮಕ್ಕಳಿಗೇಕೆ ಅಂಜನು ಎಂದು ವಿದುರ ತಿಳಿಸಿದ?

ನೊರಜುಹೊಕ್ಕೊಡೆ ಕದಡುವುದೆ ಸಾ
ಗರದ ಜಲ ನೊಣವೆರಗಿದೊಡೆ ಕುಲ
ಗಿರಿಗಳಲ್ಲಾಡುವುವೆ ಕೇಳ್ ಧೃತರಾಷ್ಟ್ರ ಭೂಪಾಲ
ತೆರಳಲರಿವನೆ ಕೊಬ್ಬಿದೊಳ್ಳೆಯ
ಮರಿಗೆ ಗರುಡನು ನಿನ್ನ ಮಕ್ಕಳ
ದುರುಳುತನಕಂಜುವನೆ ಮುರರಿಪುವೆಂದನಾ ವಿದುರ (ಉದ್ಯೋಗ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಚಿಕ್ಕ ಚಿಕ್ಕ ಕಲ್ಲುಗಳು ಸಾಗರಕ್ಕೆ ಅಪ್ಪಳಿಸಿದರೆ, ಸಾಗರದ ಜಲ ಕದಡುತ್ತದೆಯೇ? ನೊಣವು ದೊಡ್ಡ ಬೆಟ್ಟಕ್ಕೆ ಡಿಕ್ಕಿಹೊಡೆದರೆ ಕುಲಗಿರಿಗಳು ಅಲ್ಲಾಡುತ್ತವೆಯೇ? ಕೊಬ್ಬಿದ ನೀರುಹಾವನ್ನು ಇಲ್ಲವಾಗಿಸಲು ಗರುಡನಿಗೆ ತಿಳಿಯದೇ? ನಿನ್ನ ಮಕ್ಕಳ ದುಷ್ಟತನಕ್ಕೆ ಕೃಷ್ಣನು ಹೆದರುವನೇ

ಅರ್ಥ:
ನೊರಜು: ಸಣ್ಣ ಕೀಟ, ನುಣುಪಾದ ಸಣ್ಣ ಸಣ್ಣ ಕಲ್ಲಿನ ಚೂರು, ಅಲ್ಪ; ಹೊಕ್ಕು: ಸೇರು; ಕದಡು: ರಾಡಿ, ಕಲುಕು; ಸಾಗರ: ಸಮುದ್ರ; ಜಲ: ನೀರು; ನೊಣ: ಕೀಟ; ಎರಗು: ಬೀಳು; ಕುಲಗಿರಿ: ಪಾರಿಯಾತ್ರ ಮೊದಲಾದ ಎತ್ತರದ ಪರ್ವತಗಳು; ಅಲ್ಲಾಡು: ನಡುಗು; ಭೂಪಾಲ: ರಾಜ; ತೆರಳು: ಹೋಗು; ಅರಿ: ತಿಳಿ; ಕೊಬ್ಬು: ಸೊಕ್ಕು; ಒಳ್ಳೆ: ನೀರಹಾವು; ಮರಿ: ಚಿಕ್ಕದ್ದು; ಗರುಡ: ಹದ್ದು, ವಿಷ್ಣುವಿನ ವಾಹನ; ಮಕ್ಕಳು: ಸುತರು; ದುರುಳ: ದುಷ್ಟ; ಅಂಜು: ಹೆದರು; ಮುರರಿಪು: ರಾಕ್ಷಸನ ವೈರಿ (ಕೃಷ್ಣ); ಎಂದನು: ಹೇಳು;

ಪದವಿಂಗಡಣೆ:
ನೊರಜು+ಹೊಕ್ಕೊಡೆ +ಕದಡುವುದೆ+ ಸಾ
ಗರದ +ಜಲ +ನೊಣವ್+ಎರಗಿದೊಡೆ +ಕುಲ
ಗಿರಿಗಳಲ್+ಅಲಾಡುವುವೆ +ಕೇಳ್+ ಧೃತರಾಷ್ಟ್ರ+ ಭೂಪಾಲ
ತೆರಳಲ್+ಅರಿವನೆ +ಕೊಬ್ಬಿದ್+ಒಳ್ಳೆಯ
ಮರಿಗೆ+ ಗರುಡನು +ನಿನ್ನ +ಮಕ್ಕಳ
ದುರುಳುತನಕ್+ಅಂಜುವನೆ +ಮುರರಿಪುವ್+ಎಂದನಾ +ವಿದುರ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೊರಜುಹೊಕ್ಕೊಡೆ ಕದಡುವುದೆ ಸಾಗರದ ಜಲ; ನೊಣವೆರಗಿದೊಡೆ ಕುಲಗಿರಿಗಳಲ್ಲಾಡುವುವೆ; ತೆರಳಲರಿವನೆ ಕೊಬ್ಬಿದೊಳ್ಳೆಯ
ಮರಿಗೆ ಗರುಡನು

ಪದ್ಯ ೬೬: ವಿದುರನು ತನ್ನ ಕೋಪವನ್ನು ಹೇಗೆ ವ್ಯಕ್ತಪಡಿಸಿದನು?

ಕುರುಪತಿಯ ಬಿರುನುಡಿಯ ಕೇಳಿದು
ಕರಣದಲಿ ಕೋಪಾಗ್ನಿಯುಕ್ಕಲು
ಕೆರಳಿ ನಿರ್ಭೀತಿಯಲಿ ನುಡಿದನು ವಿದುರನರಸಂಗೆ
ದುರುಳ ನೀನಾಡಿದ ನುಡಿಗೆ ಉ
ತ್ತರವನೀಯಲದೇಕೆ ನಿನ್ನಯ
ವರ ಜನನಿಗಾದಿಯಲಿ ಗಂಡರದಾರು ಹೇಳೆಂದ (ಉದ್ಯೋಗ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತು ಕೇಳಿ ಕಿವಿಯಲ್ಲಿ ಕೋಪದ ಜ್ವಾಲೆಗಳು ಹೊರಹೊಮ್ಮಲು ಕೆರಳಿ ಅಂಜದೇ ದುರ್ಯೋಧನನೆದುರು ನಿಂತು ವಿದುರನು ಹೇಳಿದ, “ಎಲೈ ಪಾಪಿ ದುರ್ಯೋಧನ, ನೀನಾಡಿದ ಮಾತಿಗೆ ಉತ್ತರವನು ನೀಡಬೇಕೆ, ಹಾಗದರೆ ನಿನ್ನಯ ತಾಯಿಗೆ ಆದಿಯಲಿ ಗಂಡರು ಯಾರು ಹೇಳು” ಎಂದು ವಿದುರ ದುರ್ಯೋಧನನಿಗೆ ಪ್ರಶ್ನಿಸಿದ.

ಅರ್ಥ:
ಕುರುಪತಿ: ದುರ್ಯೋಧನ; ಬಿರುನುಡಿ: ಒರಟಾದ ಮಾತು; ಕೇಳಿ: ಆಲಿಸಿ; ಕರಣ: ಕಿವಿ; ಕೋಪ: ಕ್ರೋಧ, ಸಿಟ್ಟು; ಉಕ್ಕು: ಹೊರಹೊಮ್ಮು; ಕೆರಳು: ಉದ್ರಿಕ್ತವಾಗು; ನಿರ್ಭೀತಿ: ಅಂಜಿಕೆಯಿಲ್ಲದೆ; ನುಡಿ: ಮಾತಾಡು; ಅರಸ: ರಾಜ; ದುರುಳ: ಪಾಪಿ, ದುಷ್ಟ; ನುಡಿ: ಮಾತು; ಉತ್ತರ: ಜವಾಬು; ವರ: ಶ್ರೇಷ್ಠ; ಜನನಿ: ಮಾತೆ; ಆದಿ: ಹಿಂದೆ; ಗಂಡ: ಯಜಮಾನ; ಹೇಳು: ತಿಳಿಸು;

ಪದವಿಂಗಡಣೆ:
ಕುರುಪತಿಯ +ಬಿರುನುಡಿಯ +ಕೇಳಿದು
ಕರಣದಲಿ +ಕೋಪಾಗ್ನಿಯುಕ್ಕಲು
ಕೆರಳಿ +ನಿರ್ಭೀತಿಯಲಿ+ ನುಡಿದನು +ವಿದುರನ್+ಅರಸಂಗೆ
ದುರುಳ +ನೀನ್+ಆಡಿದ +ನುಡಿಗೆ+ ಉ
ತ್ತರವನೀಯಲ್+ಅದೇಕೆ +ನಿನ್ನಯ
ವರ +ಜನನಿಗ್+ಆದಿಯಲಿ+ ಗಂಡರ್+ಅದಾರು+ ಹೇಳೆಂದ

ಅಚ್ಚರಿ:
(೧) ‘ಕ’ಕಾರದ ಸಾಲು ಪದಗಳು – ಕೇಳಿದು ಕರಣದಲಿ ಕೋಪಾಗ್ನಿಯುಕ್ಕಲು ಕೆರಳಿ

ಪದ್ಯ ೪೮: ಕೃಷ್ಣನು ವಿದುರನಿಗೇನು ಹೇಳಿದನು?

ದೇವ ದೇವರ ಸಮಯವೆನೆ ರಾ
ಜೀವನಾಭನು ಮುಗುಳುನಗೆಯಲಿ
ಭಾವನವರಟ್ಟಿದರೆ ಹರ ಹರ ಬಹೆವು ನಡೆಯೆನುತ
ರಾವಣನ ಪರಿ ನೆಲೆಸಿತಿವನಲಿ
ಸಾವಿಗಂಜುವನಲ್ಲ ಖಳನು ನ
ಯಾವಿಳನು ನಮ್ಮುಕುತಿ ಕೊಳ್ಳದು ವಿದುರ ಕೇಳೆಂದ (ಉದ್ಯೋಗ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸಮಯಕ್ಕೆ ಅಧಿಪತಿಯಾದ ಭಗವಂತನಿಗೆ ಸಮಯವನ್ನು ನೀಡಿದ್ದಾನಲ್ಲ ಎಂದು ಕೃಷ್ಣನು ಮುಗುಳುನಗೆಯನ್ನು ಬೀರುತ್ತಾ, ದುರ್ಯೋಧನನು ನನ್ನನ್ನು ಕರೆತರಲು ನಿಮ್ಮನ್ನು ಅಟ್ಟಿದರೆ ಶಿವ ಶಿವ ನಾವು ನಿಮ್ಮೊಂದಿಗೆ ಬರುವೆವು ಎಂದು ಕೃಷ್ಣನು ಹೇಳಿದನು. ರಾವಣನ ಮನಸ್ಥಿತಿ ಇವನಲ್ಲಿ ನೆಲಸಿದೆ, ಇವನು ಸಾವಿಗಂಜುವವನಲ್ಲ, ದುಷ್ಟನಾದ, ಕದಡಿದ ರಾಜನೀತಿಯಿಂದ ಕೂಡಿದ ಇವನು ಮುಕ್ತಿಗೆ ಯೋಗ್ಯನಲ್ಲ ಎಂದು ಕೃಷ್ಣನು ವಿದುರನಿಗೆ ಹೇಳಿದನು.

ಅರ್ಥ:
ದೇವ: ಭಗವಂತ; ಸಮಯ: ಕಾಲ; ರಾಜೀವನಾಭ: ವಿಷ್ಣು, ಕೃಷ್ಣ; ಮುಗುಳು:ಚಿಗುರು; ನಗೆ: ನಗು, ಸಂತೋಷ; ಹರ: ಶಿವ; ಬಹೆ: ಬರುವೆ; ನಡೆ: ಚಲಿಸು; ಪರಿ: ರೀತಿ; ನೆಲೆಸು: ಬೀಡು; ಸಾವು: ಮರಣ; ಅಂಜು: ಹೆದರು;ಖಳ: ಕ್ರೂರ, ದುಷ್ಟ; ನಯಾವಿಳ: ಕದಡಿದ ರಾಜನೀತಿಯಿಂದ ಕೂಡಿದ; ಮುಕುತಿ: ಮೋಕ್ಷ; ಕೊಳ್ಳು: ಪಡೆ;

ಪದವಿಂಗಡಣೆ:
ದೇವ+ ದೇವರ +ಸಮಯವೆನೆ +ರಾ
ಜೀವನಾಭನು+ ಮುಗುಳು+ನಗೆಯಲಿ
ಭಾವನ್+ಅವರ್+ಅಟ್ಟಿದರೆ +ಹರ +ಹರ+ ಬಹೆವು +ನಡೆಯೆನುತ
ರಾವಣನ +ಪರಿ +ನೆಲೆಸಿತ್+ಇವನಲಿ
ಸಾವಿಗಂಜುವನಲ್ಲ +ಖಳನು +ನ
ಯಾವಿಳನು +ನಮ್+ಮುಕುತಿ+ ಕೊಳ್ಳದು+ ವಿದುರ +ಕೇಳೆಂದ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ದೇವ ದೇವ, ಶಿವ ಶಿವ
(೨) ಉಪಮಾನದ ಪ್ರಯೋಗ – ರಾವಣನ ಪರಿ ನೆಲೆಸಿತಿವನಲಿ

ಪದ್ಯ ೨೮: ದುರ್ಯೋಧನನು ವಿದುರನಿಗೆ ಏನು ಹೇಳಿದನು?

ನಾಳೆ ಬರಹೇಳೆಂದು ವಿದುರನ
ಬೀಳುಕೊಟ್ಟನು ಬೇಹ ಭಟರಿಗೆ
ವೀಳೆಯವ ನೀಡಿದನು ಹರಿದುದು ರಾಯನಾಸ್ಥಾನ
ಜಾಳಿಸಿತು ತಮ ಮೂಡಣಾದ್ರಿಯ
ಮೇಲೆ ತಲೆದೋರಿದನು ರವಿ ಭೂ
ಪಾಲ ಕೌರವನಂದಿನೊಡ್ಡೋಲಗವ ರಚಿಸಿದನು (ಉದ್ಯೋಗ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರನಿಗೆ ಕೃಷ್ಣನು ನಾಳೆ ಬರಲೆಂದು ಹೇಳಿ ಗೂಢಚಾರ್ಯರಿಗೆ ಅಪ್ಪಣೆಯನ್ನು ನೀಡಿ ಸಭೆಯನ್ನು ವಿಸರ್ಜಿಸಿದನು. ಅಂಧಕಾರವನ್ನು ಹೊರದೂಡಿ ಪೂರ್ವದ ಬೆಟ್ಟದ ಮೇಲೆ ರವಿ ಉದಯಿಸಿದನು, ದುರ್ಯೋಧನನು ಅಂದು ದೊಡ್ಡ ಸಭೆಯನ್ನು ರಚಿಸಿದನು.

ಅರ್ಥ:
ನಾಳೆ: ಮರುದಿನ; ಬರು: ಆಗಮಿಸು; ಹೇಳು: ತಿಳಿಸು; ಬೀಳುಕೊಟ್ಟು: ಕಳುಹಿಸಿ; ಬೇಹು:ಗುಪ್ತಚಾರಿಕೆ; ಭಟ:ಸೈನಿಕ ; ವೀಳೆಯ: ಒಪ್ಪಿಗೆ ಕೊಡು, ಆಮಂತ್ರಿಸು; ನೀಡು: ಕೊಡು; ಹರಿ: ಮುಗಿ, ತೀರು; ಆಸ್ಥಾನ: ದರ್ಬಾರು; ರಾಯ: ರಾಜ; ಜಾಳಿಸು: ಚಲಿಸು, ನಡೆ; ತಮ: ಅಂಧಕಾರ; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಮೇಲೆ: ತುದಿಯಲ್ಲಿ, ಅಗ್ರಭಾಗ; ತಲೆದೋರು: ತೋರು, ಕಾಣಿಸು; ರವಿ: ಸೂರ್ಯ; ಭೂಪಾಲ: ರಾಜ; ಒಡ್ಡೋಲಗ: ಸಭೆ, ದೊಡ್ಡ ದರ್ಬಾರು; ರಚಿಸು: ರೂಪಿಸು, ಸಜ್ಜುಗೊಳಿಸು;

ಪದವಿಂಗಡಣೆ:
ನಾಳೆ +ಬರಹೇಳ್+ಎಂದು +ವಿದುರನ
ಬೀಳುಕೊಟ್ಟನು +ಬೇಹ +ಭಟರಿಗೆ
ವೀಳೆಯವ +ನೀಡಿದನು +ಹರಿದುದು +ರಾಯನಾಸ್ಥಾನ
ಜಾಳಿಸಿತು +ತಮ +ಮೂಡಣ+ಅದ್ರಿಯ
ಮೇಲೆ +ತಲೆದೋರಿದನು +ರವಿ+ ಭೂ
ಪಾಲ +ಕೌರವನ್+ಅಂದಿನ+ಒಡ್ಡೋಲಗವ+ ರಚಿಸಿದನು

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಬೀಳುಕೊಟ್ಟನು ಬೇಹ ಭಟರಿಗೆ
(೨) ಮುಂಜಾನೆಯ ವರ್ಣನೆ: ಜಾಳಿಸಿತು ತಮ ಮೂಡಣಾದ್ರಿಯಮೇಲೆ ತಲೆದೋರಿದನು ರವಿ
(೩) ಸಭೆಯನ್ನು ವಿಸರ್ಜಿಸಿದನು ಎಂದು ಹೇಳಲು – ಹರಿದುದು ರಾಯನಾಸ್ಥಾನ ಪದದ ಬಳಕೆ

ಪದ್ಯ ೧೪: ಕೃಷ್ಣನು ಯಾವುದರಿಂದ ತನ್ನ ಹಸಿವನ್ನು ನೀಗಿಸಿಕೊಂಡನು?

ಒಲವರವೆ ಕೌತುಕವು ಪಾಲ್ಗಡ
ಲೊಳಗೆ ಮಲಗುವ ವಿಷ್ಣು ವಿದುರನ
ನಿಳಯದೊಳಗೊಕ್ಕುಡಿತೆ ಹಾಲಲಿ ಹಸಿವ ನೂಕಿದನು
ಹೊಲಬುಗೆಡಿಸಿದನಖಿಳ ನಿಗಮಂ
ಗಳನು ತನ್ನರಿಕೆಯಲಿ ಭಜಕಂ
ಗೊಲಿದು ತಾನೈತರಲು ಕರುಣದ ಘನತೆಯೆನೆ ಲೋಕ (ಉದ್ಯೋಗ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಇದೆಂತಹ ಆಶ್ಚರ್ಯದ ಸಂಗತಿ, ಕ್ಷೀರಸಾಗರದಲ್ಲಿ ಮಲಗುವ ವಿಷ್ಣು ವಿದುರನ ಮನೆಗೆ ಬಂದು ಹಾಲನ್ನು ಕುಡಿದು ತನ್ನ ಹಸಿವನ್ನು ನೀಗಿಸಿಕೊಂಡನು. ತನ್ನ ಮಾರ್ಗವನ್ನು ಬದಲಿಸಿಯಾದರೂ ಸರ್ವ ಲೋಕದ ಮಂಗಳವನ್ನು ಬಯಸುವವನು ತನ್ನರಿಕೆಯಲ್ಲಿ ಭಕ್ತರಿಗೊಲಿದು ಬರುತ್ತಿರಲು ಕರುಣದ ಘನತೆಯೆ ರೂಪನಾದ ಕೃಷ್ಣನನ್ನು ಲೋಕ ಕಂಡಿತು.

ಅರ್ಥ:
ಒಲವು: ಸ್ನೇಹ, ಪ್ರೀತಿ; ಕೌತುಕ: ಕುತೂಹಲ; ಪಾಲ್: ಹಾಲು; ಗಡ: ದುರ್ಗ; ಕಡಲು: ಸಮುದ್ರ; ಮಲಗು: ಶಯನ; ನಿಳಯ: ಮನೆ, ಆಲಯ; ಒಕ್ಕು: ಸೇರು; ಹಾಲು: ಕ್ಷೀರ; ಹಸಿವು: ಆಹಾರವನ್ನು ಬಯಸು; ನೂಕು: ತಳ್ಳು; ಹೊಲಬು: ದಾರಿ, ಪಥ, ಮಾರ್ಗ; ಅಖಿಳ: ಎಲ್ಲಾ; ಮಂಗಳ: ಶುಭ; ಅರಿಕೆ: ವಿಜ್ಞಾಪನೆ; ಭಜಕ:ಭಕ್ತ; ಐತರು: ಬಾ, ಬಂದು ಸೇರು; ಕರುಣೆ: ದಯೆ; ಘನತೆ: ಶ್ರೇಷ್ಠ; ಲೋಕ: ಜಗತ್ತು;

ಪದವಿಂಗಡಣೆ:
ಒಲವರವೆ+ ಕೌತುಕವು +ಪಾಲ್+ಕಡಲ್
ಒಳಗೆ+ ಮಲಗುವ +ವಿಷ್ಣು +ವಿದುರನ
ನಿಳಯದೊಳಗ್+ಒಕ್ಕುಡಿತೆ +ಹಾಲಲಿ +ಹಸಿವ +ನೂಕಿದನು
ಹೊಲಬುಗೆಡಿಸಿದನ್+ಅಖಿಳ +ನಿಗಮಂ
ಗಳನು +ತನ್ನರಿಕೆಯಲಿ +ಭಜಕಂಗ್
ಒಲಿದು+ ತಾನೈತರಲು+ ಕರುಣದ+ ಘನತೆಯೆನೆ+ ಲೋಕ

ಅಚ್ಚರಿ:
(೧) ಹಸಿವನ್ನು ನೀಗಿಸಿದನು ಎಂದು ಹೇಳಲು – ಹಾಲಲಿ ಹಸಿವ ನೂಕಿದನು

ಪದ್ಯ ೧: ಕೃಷ್ಣನು ಯಾರನ್ನು ಬೀಳ್ಕೊಟ್ಟನು?

ಕೇಳು ಜನಮೇಜಯ ಧರಿತ್ರೀ
ಪಾಲ ಮುರಹರ ಗುರು ನದೀಜರ
ಬೀಳುಕೊಟ್ಟನು ಕೃಪನ ಮನ್ನಿಸಿ ಮನೆಗೆ ಕಳುಹಿದನು
ಆಲಯಕೆ ವಿದುರಂಗೆ ಕೊಟ್ಟನು
ವೀಳಯವನೊಡನೆಯ್ದಿ ಬಂದ
ನೃಪಾಲಕರ ಮೊಗಸನ್ನೆಯಲಿ ಕಳುಹಿದನು ಮನೆಗಳಿಗೆ (ಉದ್ಯೋಗ ಪರ್ವ, ೮ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಜನಮೇಜಯ ರಾಜನಿಗೆ ಮಹಾಭಾರತದ ಕಥೆಯನ್ನು ಮುಂದುವರಿಸುತ್ತಾ, ಕೃಷ್ಣನು ಧೃತರಾಷ್ಟ್ರನನ್ನು ಬೀಳ್ಕೊಟ್ಟಮೇಲೆ ಅವರ ಜೊತೆಯಿದ್ದ ದ್ರೋಣ ಮತ್ತು ಭೀಷ್ಮರನ್ನು ಕಳುಹಿಸಿದನು, ಕೃಪಚಾರ್ಯರನ್ನು ಮನ್ನಿಸಿ ಅವರನ್ನು ಕಳುಹಿಸಿ, ವಿದುರನಿಗೆ ಅವನ ಮನೆಗೆ ಹೋಗಲು ವೀಳಯವನ್ನು ನೀಡಿ ಉಳಿದೆಲ್ಲ ರಾಜರನ್ನು ಮುಖಸನ್ನೆಯಲ್ಲೆ ಅವರ ಮನೆಗೆ ಹೋಗಲು ಅಪ್ಪಣೆನೀಡಿದನು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಮುರಹರ: ಕೃಷ್ಣ; ಗುರು: ಆಚಾರ್ಯ (ದ್ರೋಣ), ನದೀಜ: ಗಂಗೆಯಲ್ಲಿ ಹುಟ್ಟಿದ (ಭೀಷ್ಮ); ಬೀಳುಕೊಟ್ಟನು: ಕಳುಹಿಸಿದನು; ಮನ್ನಿಸು: ಅನುಗ್ರಹಿಸು; ಮನೆ: ಆಲಯ; ವೀಳಯ: ತಾಂಬೂಲ; ಐದು: ಹೋಗಿಸೇರು; ನೃಪಾಲ: ರಾಜ; ಮೊಗ: ಮುಖ; ಸನ್ನೆ: ಸಂಕೇತ, ಸುಳಿವು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಮುರಹರ +ಗುರು +ನದೀಜರ
ಬೀಳುಕೊಟ್ಟನು +ಕೃಪನ +ಮನ್ನಿಸಿ +ಮನೆಗೆ +ಕಳುಹಿದನು
ಆಲಯಕೆ+ ವಿದುರಂಗೆ +ಕೊಟ್ಟನು
ವೀಳಯವನ್+ಒಡನೆಯ್ದಿ+ ಬಂದ
ನೃಪಾಲಕರ+ ಮೊಗಸನ್ನೆಯಲಿ+ ಕಳುಹಿದನು +ಮನೆಗಳಿಗೆ

ಅಚ್ಚರಿ:
(೧) ಕೇಳು, ಬೀಳು – ಪ್ರಾಸ ಪದ
(೨) ಆಲಯ, ಮನೆ; ಬೀಳುಕೊಟ್ಟನು, ಕಳುಹಿದನು – ಸಮನಾರ್ಥಕ ಪದ