ಪದ್ಯ ೧೫: ಅರ್ಜುನನ ಮುಂದೆ ಯಾರ ಬಿರುದುಗಳನ್ನು ಹೇಳಿದರು?

ಉದಯವಾಗುವ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ (ದ್ರೋಣ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೂರ್ಯೋದಯವಾಗುವ ಮೊದಲೇ ತ್ರಿಗರ್ತರು ಗುಂಪಾಗಿ ತಮ್ಮೊಡನೆ ಕಾಳಗಕ್ಕೆ ಬರಬೇಕೆಂದು ಮದೋನ್ಮತ್ತ ಶತ್ರುಭಟ ಭೈರವನಾದ ಅರ್ಜುನನಿಗೆ ದೂತರೊಡನೆ ಹೇಳಿಕಳುಹಿಸಿದರು. ಅವರು ಬಂದು ಅರ್ಜುನನ ಮುಂದೆ ಸಂಶಪ್ತಕರ ಬಿರುದುಗಳನ್ನು ಉದ್ಘೋಷಿಸಿದರು.

ಅರ್ಥ:
ಉದಯ: ಹುಟ್ಟು; ಮುನ್ನ: ಮೊದಲು; ಕಳ:ರಣರಂಗ; ಹೊದರು: ಗುಂಪು, ಸಮೂಹ; ಕಟ್ಟು: ಬಂಧಿಸು; ಕದನ: ಯುದ್ಧ; ಅಳವಿ: ಯುದ್ಧ; ಕೊಡು: ನೀಡು; ಬೇಗ: ಶೀಘ್ರ; ಮದ:ಅಹಂಕಾರ; ಅರಿ: ವೈರಿ; ಭಟ: ಸೈನಿಕ; ಭೈರವ: ಶಿವನ ರೂಪ; ಅಟ್ಟು: ಹಿಂಬಾಲಿಸು; ಭಟ್ಟ: ಪರಾಕ್ರಮಿ; ಬಂದು: ಆಗಮಿಸು; ಒದರು: ಹೇಳು; ಬಿರುದು: ಗೌರವಸೂಚಕ ಪದ;

ಪದವಿಂಗಡಣೆ:
ಉದಯವಾಗುವ +ಮುನ್ನ +ಕಳನೊಳು
ಹೊದರು+ಕಟ್ಟಿದರ್+ಈ+ ತ್ರಿಗರ್ತರು
ಕದನಕ್+ಎಮ್ಮೊಳಗ್+ಅಳವಿ+ಕೊಡುವುದು +ಬೇಗ +ಬಹುದೆಂದು
ಮದವದ್+ಅರಿಭಟ+ ಭೈರವಂಗ್
ಅಟ್ಟಿದರು +ಭಟ್ಟರನ್+ಅವರು +ಬಂದ್+ಒದ
ರಿದರು +ಪಾರ್ಥನ +ಮುಂದೆ+ ಸಮಸಪ್ತಕರ +ಬಿರುದುಗಳ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಅರಿಭಟ ಭೈರವ

ಪದ್ಯ ೧೯: ಮಲ್ಲರು ಎಲ್ಲಿಗೆ ಹೊರಟರು?

ಕರವ ಮುಗಿದಾ ದಾರುಕನ ಕೂ
ಡರಸ ನೇಮವನಿತ್ತು ಮಲ್ಲರ
ಕರೆಯೆನಲು ತಿರುಗಿದನು ಭಟ್ಟನ ಸಹಿತ ವಹಿಲದಲಿ
ಪುರದ ಹೊರಬನದಲ್ಲಿಯಿರುತಿ
ರ್ದರನು ಕಂಡು ನೃಪಾಲ ನಿಮ್ಮನು
ಕರೆಯ ಕಳುಹಿದನೆಂದೊಡೆದ್ದರು ಮಲ್ಲರತಿಮುದದಿ (ವಿರಾಟ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ದೂತ ದಾರುಕನು ಬಂದು ಕೈಮುಗಿಯಲು, ಮಲ್ಲರನ್ನು ಕರೆತರಲು ದೊರೆಯು ಅಪ್ಪಣೆ ಮಾಡಿದನು. ಅವನು ಭಟನೊಡನೆ ಊರ ಹೊರಗಿನ ಉಪವನದಲ್ಲಿದ್ದ ಮಲ್ಲರನ್ನು ಕಂಡು ರಾಜನು ನಿಮ್ಮನ್ನು ಕರೆಯ ಕಳಿಸಿದ್ದಾರೆ ಎಂದನು, ಮಲ್ಲರು ಈ ಆದೇಶವನ್ನು ಕೇಳಿ ಸಂತೋಷದಿಂದ ಮೇಲೆದ್ದು ರಾಜಸಭೆಗೆ ಹೊರಟರು.

ಅರ್ಥ:
ಕರ: ಹಸ್ತ; ಕರಮುಗಿ: ನಮಸ್ಕರಿಸು; ಕೂಡ: ಜೊತೆ; ಅರಸ: ರಾಜ; ನೇಮ: ನಿಯಮ, ಅಪ್ಪಣೆ; ಮಲ್ಲ: ಜಟ್ಟಿ; ಕರೆ: ಬರೆಮಾಡು; ತಿರುಗು: ಸುತ್ತು; ಭಟ್ಟ: ಸೈನಿಕ; ಸಹಿತ: ಜೊತೆ; ವಹಿಲ: ಬೇಗ, ತ್ವರೆ; ಪುರ: ಊರು; ಹೊರ: ಆಚೆ; ಬನ: ಕಾಡು; ಇರು: ವಾಸಿಸು; ಕಂಡು: ನೋಡು; ನೃಪಾಲ: ರಾಜ; ಎದ್ದು: ಮೇಲೇಳು; ಅತಿ: ಬಹಳ; ಮುದ: ಸಂತಸ;

ಪದವಿಂಗಡಣೆ:
ಕರವ +ಮುಗಿದ್+ಆ+ ದಾರುಕನ+ ಕೂಡ
ಅರಸ+ ನೇಮವನಿತ್ತು +ಮಲ್ಲರ
ಕರೆ+ಎನಲು +ತಿರುಗಿದನು +ಭಟ್ಟನ +ಸಹಿತ +ವಹಿಲದಲಿ
ಪುರದ +ಹೊರ+ಬನದಲ್ಲಿ+ಇರುತಿ
ರ್ದರನು +ಕಂಡು +ನೃಪಾಲ +ನಿಮ್ಮನು
ಕರೆಯ +ಕಳುಹಿದನೆಂದೊಡ್+ಎದ್ದರು +ಮಲ್ಲರ್+ಅತಿ+ಮುದದಿ

ಅಚ್ಚರಿ:
(೧) ಅರಸ, ನೃಪಾಲ – ಸಮನಾರ್ಥಕ ಪದ

ಪದ್ಯ ೩೭: ದುರ್ಯೋಧನನು ಯಾರಿಗೆ ಗೋವುಗಳನ್ನು ನೀಡಿದನು?

ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋಲಕ್ಷವಿತ್ತನು ವಿಪ್ರಸಂಕುಲಕೆ
ಕರೆಸಿಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟ ವಿಧಾವಂ
ತರಿಗೆ ಬಹುವಿಧ ಬಹಳ ವಮ್ದಿಗೆ ಮಾಗಧವ್ರಜಕೆ (ಅರಣ್ಯ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಹೋರಿಗಳನ್ನೂ ಹಸುಗಳನ್ನೂ ತರಿಸಿ, ಕೆಲಸವನ್ನು ಕೃಷಿಕರಿಗೆ ನೀಡಿದನು. ಬ್ರಾಹ್ಮಣರಿಗೆ ಲಕ್ಷ ಗೋವುಗಳನ್ನು ಕೊಟ್ಟನು. ಭಟ್ಟರು, ವಂದಿಮಾಗಧರು ಮಲ್ಲರು, ವಿಟರು, ನಟರು, ಆನೆ ಕುದುರೆಗಳ ಆರೈಕೆಗಾರರುಗಳನ್ನು ಕರೆಸಿ ಗೋವುಗಳನ್ನು ನೀಡಿದನು.

ಅರ್ಥ:
ತರಿಸು: ಹೊಂದಿಸು; ಹೋರಿ: ಗೂಳಿ; ಗವಿ: ನೆಲೆ, ಆಶ್ರಯಸ್ಥಾನ; ಗೂಳಿ: ಎತ್ತು, ವೃಷಭ; ಬರಿಸು: ಬರೆಮಾಡು; ಕೆಲ: ಕೊಂಚ, ಸ್ವಲ್ಪ; ಕೆಲವ: ಕೆಲಸ; ಕೃಷಿಕ: ರೈತ; ಗೋ: ಗೋವು; ವಿತ್ತು: ನೀಡು; ವಿಪ್ರ: ಬ್ರಾಹ್ಮಣ; ಸಂಕುಲ: ಗುಂಪು; ಕರೆಸಿ: ಬರೆಮಾಡು; ಭಟ್ಟ: ವಿದ್ವಾಂಸ, ಪಂಡಿತ; ಮಲ್ಲ: ಜಟ್ಟಿ; ವಿಟ:ಜಾರ, ಕಾಮುಕ; ನಟ: ನಟನೆ ಮಾಡುವವ; ವಿಧಾವಂತ: ಆನೆ ಕುದುರೆಗಳನ್ನು ಆರೈಕೆ ಮಾಡುವವ; ಬಹುವಿಧ: ಹಲವಾರು; ಬಹಳ: ತುಂಬ; ವಂದಿಮಾಗಧ: ಹೊಗಳುಭಟ್ಟ; ವ್ರಜ: ಗುಂಪು;

ಪದವಿಂಗಡಣೆ:
ತರಿಸಿ +ಹೋರಿಯ +ಗವಿಯ +ಗೂಳಿಯ
ಬರಿಸಿದನು +ಕೆಲಕೆಲವ +ಕೃಷಿಕರಿಗ್
ಇರಿಸಿದನು +ಗೋಲಕ್ಷವಿತ್ತನು+ ವಿಪ್ರ+ಸಂಕುಲಕೆ
ಕರೆಸಿಕೊಟ್ಟನು +ಭಟ್ಟರಿಗೆ+ ಮ
ಲ್ಲರಿಗೆ+ ವಿಟರಿಗೆ+ ನಟ +ವಿಧಾವಂ
ತರಿಗೆ+ ಬಹುವಿಧ +ಬಹಳ+ ವಂದಿಗೆ +ಮಾಗಧ+ವ್ರಜಕೆ

ಅಚ್ಚರಿ:
(೧) ತರಿಸಿ, ಕರೆಸಿ, ಬರಿಸಿ, ಇರಿಸಿ – ಪ್ರಾಸ ಪದಗಳು
(೨) ಹಲವು ರೀತಿಯ ಜನರು – ಭಟ್ಟ, ಮಲ್ಲ, ವಿಟ, ನಟ, ವಿಧಾವಂತ, ವಂದಿ, ಮಾಗಧ

ಪದ್ಯ ೩೭: ಕೋಪಗೊಂಡ ಶಿಶುಪಾಲ ಭೀಷ್ಮನಿಗೆ ಏನು ಹೇಳಿದ?

ಎಲವೋ ಗೋಪಕುಮಾರನೆನ್ನನು
ಕೊಲುವನೇ ತಾನಿವನ ಕೈಯಿಂ
ದಳಿವವನೆ ಶಿವಶಿವ ವಿಕಾರಿಯನೇನು ಮಾಡುವೆನು
ಗಳಹ ಭೀಷ್ಮ ವೃಕೋದರನ ಮೈ
ವಳಿಯ ಭಟನೋ ಮೇಣು ನೀ ಗೋ
ವಳರ ಹಳ್ಳಿಯ ಭಟ್ಟನೋ ಹೇಳೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲವೋ ಭೀಷ್ಮ, ಈ ಗೋಪಾಲಕನ ಕುಮಾರನು ನನ್ನನ್ನು ಸಾಯಿಸುವನೇ, ನಾನು ಇವನ ಕೈಯಲ್ಲಿ ಮರಣವನ್ನು ಹೊಂದುತ್ತೇನೆಯೇ? ಶಿವ ಶಿವಾ ಈ ಮೂರ್ಖನನ್ನು ಏನು ಮಾಡಲಿ! ಎಲವೋ ಬಾಯಿಬಡುಕ ಭೀಷ್ಮ, ನೀನು ಭೀಮನು ಸಾಕಿದ ಸೈನಿಕನೋ? ಗೊಲ್ಲರಹಟ್ಟಿಯ ಬಿರುದಾವಳಿಯ ಹೊಗಳುಭಟ್ಟನೋ ಹೇಳು ಎಂದು ಕೋಪದಿಂದ ಶಿಶುಪಾಲನು ನುಡಿದನು.

ಅರ್ಥ:
ಗೋಪಕುಮಾರ: ಕೃಷ್ಣ; ಕೊಲು: ಸಾಯಿಸು; ಅಳಿ: ಸಾವು; ವಿಕಾರಿ: ಮೂರ್ಖ; ವಿಕಾರ: ಮನಸ್ಸಿನ ವಿಕೃತಿ; ಗಳಹ: ಬಾಯಿಬಡುಕ; ವೃಕೋದರ: ತೋಳದಂತೆ ಹೊಟ್ಟೆಯುಳ್ಳವ (ಭೀಮ); ಮೈವಳಿ: ಅಧೀನ, ವಶ; ಭಟ: ಶೂರ, ವೀರ; ಮೇಣ್: ಅಥವ; ಗೋವಳ: ಗೋಪಾಲಕ; ಹಳ್ಳಿ: ಊರು; ಭಟ್ಟ: ಹೊಗಳುವವ; ಹೇಳು: ತಿಳಿಸು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಎಲವೋ+ ಗೋಪಕುಮಾರನ್+ಎನ್ನನು
ಕೊಲುವನೇ +ತಾನ್+ಇವನ +ಕೈಯಿಂದ್
ಅಳಿವವನೆ+ ಶಿವಶಿವ+ ವಿಕಾರಿಯನ್+ಏನು +ಮಾಡುವೆನು
ಗಳಹ +ಭೀಷ್ಮ +ವೃಕೋದರನ+ ಮೈ
ವಳಿಯ +ಭಟನೋ +ಮೇಣು +ನೀ +ಗೋ
ವಳರ+ ಹಳ್ಳಿಯ+ ಭಟ್ಟನೋ +ಹೇಳೆಂದನಾ+ ಚೈದ್ಯ

ಅಚ್ಚರಿ:
(೧) ಭಟ, ಭಟ್ಟ – ಪದಗಳ ಬಳಕೆ
(೨) ಅಳಿ, ಮೈವಳಿ – ಪ್ರಾಸ ಪದಗಳು
(೩) ಭೀಷ್ಮನನ್ನು ಬಯ್ಯುವ ಪರಿ – ಗಳಹ, ಎಲವೋ, ವಿಕಾರಿ

ಪದ್ಯ ೨೦: ಭೀಮನು ಅಶ್ವತ್ಥಾಮನಿಗೆ ಹೇಗೆ ಉತ್ತರವನ್ನು ಕೊಟ್ಟನು?

ತಿರುಗಿ ನಿಂದನು ಪವನಸುತನೆಲೆ
ಗುರುಜ ನಿನ್ನಗ್ಗಳಿಕೆಗಳ ಜಗ
ವರಿಯದೇ ಫಡ ಭಟ್ಟನಾದೈ ನಿನಗೆ ನೀನೆನುತ
ಸರಳ ಬಳಿಸರಳುಗಳನಾ ಲಘು
ತರದ ಲೆಕ್ಕದಲೆಸೆವ ವಿವರದ
ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ (ಕರ್ಣ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಎದುರು ಭೀಮನು ತಿರುಗಿ ನಿಂದನು, ಎಲವೋ ಗುರುಪುತ್ರ, ನಿನ್ನ ಶ್ರೇಷ್ಠತೆ ಜಗವು ತಿಳಿಯದೇ? ಅದನ್ನು ಹೊಗಳುವ ಭಟ್ಟ ನಿನಗೆ ನೀನೇ ಆದೆಯಾ? ಎಂದು ಅಶ್ವತ್ಥಾಮನ ಬಾಣಗಳನ್ನು ನಿರಾಯಾಸವಾಗಿ ಕಡಿದೆಸೆಯುವ ವೇಗವನ್ನು ಪ್ರದರ್ಶಿಸಿದನು ಭೀಮ.

ಅರ್ಥ:
ತಿರುಗು: ಮತ್ತೆ, ಸುತ್ತು; ನಿಂದನು: ನಿಲ್ಲು; ಪವನಸುತ: ವಾಯುಪುತ್ರ (ಭೀಮ); ಗುರುಜ: ಗುರುವಿನಪುತ್ರ (ಅಶ್ವತ್ಥಾಮ); ಅಗ್ಗಳಿಕೆ: ಶ್ರೇಷ್ಠತೆ; ಜಗ: ಜಗತ್ತು; ಅರಿ: ತಿಳಿ; ಭಟ್ಟ: ಹೊಗಳುವವನು; ಸರಳ: ಬಾಣ; ಬಳಿ: ಹತ್ತಿರ; ಲಘು: ಕ್ಷುಲ್ಲಕವಾದುದು; ತರ: ರೀತಿ; ಲೆಕ್ಕ: ಗಣನೆ; ಎಸೆ: ತೋರು; ವಿವರ: ವಿಸ್ತಾರ, ಹರಹು; ಪರಿವಿಡಿ: ಅನುಕ್ರಮ, ರೀತಿ; ವೇಗ: ರಭಸ; ವೇಗಾಯ: ವೇಗವಾಗಿ ಚಲಿಸುವ; ಆಯತ: ವಿಸ್ತಾರ; ತೋರು: ಪ್ರದರ್ಶಿಸು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು;

ಪದವಿಂಗಡಣೆ:
ತಿರುಗಿ +ನಿಂದನು +ಪವನಸುತನ್+ಎಲೆ
ಗುರುಜ +ನಿನ್ನ್+ಅಗ್ಗಳಿಕೆಗಳ+ ಜಗವ್
ಅರಿಯದೇ +ಫಡ +ಭಟ್ಟನಾದೈ +ನಿನಗೆ +ನೀನೆನುತ
ಸರಳ +ಬಳಿ+ಸರಳುಗಳನ್+ಆ+ ಲಘು
ತರದ+ ಲೆಕ್ಕದಲ್+ಎಸೆವ +ವಿವರದ
ಪರಿವಿಡಿಯ +ವೇಗಾಯ್ಲತನವನು+ ತೋರಿದನು +ಭೀಮ

ಅಚ್ಚರಿ:
(೧) ಭೀಮನು ಅಶ್ವತ್ಥಾಮನನ್ನು ಹಂಗಿಸುವ ಪರಿ – ಫಡ ಭಟ್ಟನಾದೈ ನಿನಗೆ ನೀನೆನುತ
(೨) ಭೀಮನು ಬಾಣವನ್ನು ಎದುರಿಸಿದ ಬಗೆ – ಸರಳ ಬಳಿಸರಳುಗಳನಾ ಲಘು
ತರದ ಲೆಕ್ಕದಲೆಸೆವ ವಿವರದ ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ