ಪದ್ಯ ೬೮: ಯಾದವಸೇನೆೆ ಎಲ್ಲಿ ಸಂದಣಿಸಿತು?

ನಗುತ ಹರಿ ನಿಂದಿರಲು ಕೈ ದೀ
ವಿಗೆಯವರು ಹೊದ್ದಿದರು ರೂವಾ
ರಿಗೆಗೆ ಬಿಜಯಂಗೈದನುಘೆಯೆಂದುದು ಸುರಸ್ತೋಮ
ಬಿಗಿದ ದಡ್ಡಿಯ ಬದ್ದರದ ಬೀ
ಯಗದ ರಾಣಿವಾಸದಂದಣ
ತೆಗೆದು ನಡೆದುವು ಮುಂದೆ ಸಂದಣಿಸಿತ್ತು ಯದುಸೇನೆ (ವಿರಾಟ ಪರ್ವ, ೧೧ ಸಂಧಿ, ೬೮ ಪದ್ಯ)

ತಾತ್ಪರ್ಯ:
ಕತ್ತಲಾಗುತ್ತಾ ಬರಲು, ಕೈದೀವಿಗೆಯವರು ಶ್ರೀಕೃಷ್ಣನ ಬಳಿಗೆ ಬಂದರು. ಶ್ರೀಕೃಷ್ಣನು ನಸುನಗುತ್ತಾ ಊರ ಪಕ್ಕದ ಬಯಲಿಗೆ ಬಂದನು, ದೇವತೆಗಳು ಜಯಘೋಷವನ್ನು ಮೊಳಗಿದರು. ಬೀಗ ಹಾಕಿದ್ದ ರಾಣೀವಾಸದ ಪಲ್ಲಕ್ಕಿಗಳು ಮುಂದುವರಿದವು. ಅದರ ಮುಮ್ದೆ ಯಾದವರ ಸೇನೆ ನಡೆಯುತ್ತಿತ್ತು.

ಅರ್ಥ:
ನಗು: ಹಸನ್ಮುಖ; ಹರಿ: ವಿಷ್ಣು; ನಿಂದಿರು: ನಿಲ್ಲು; ಕೈ: ಹಸ್ತ; ದೀವಿಗೆ: ಸೊಡರು, ದೀಪಿಕೆ; ಹೊದ್ದು: ಹೊಂದು, ಸೇರು; ರೂವಾರಿ: ವಿಗ್ರಹ, ಶಾಸನಗಳನ್ನು ಕೆತ್ತುವವನು, ಶಿಲ್ಪಿ; ಬಿಜಯಂಗೈ: ದಯಮಾಡು; ಸುರಸ್ತೋಮ: ದೇವತೆಗಳ ಗುಂಪು; ಬಿಗಿ: ಬಂಧಿಸು; ದಡ್ಡಿ: ಜವನಿಕೆ, ಪಂಜರ; ಉಘೆ: ಜಯಘೋಷ; ಬದ್ದರ:ಮಂಗಳಕರವಾದುದು; ಬೀಯ: ವ್ಯಯ, ನಷ್ಟ; ರಾಣೀವಾಸ: ಅಂತಃಪುರ; ಅಂದಣ: ಸೊಬಗು; ತೆಗೆ: ಹೊರತರು; ನಡೆ: ಚಲಿಸು; ಮುಂದೆ: ಅಗ್ರಭಾಗ; ಸಂದಣಿಸು: ಗುಂಪು; ಸೇನೆ: ಸೈನ್ಯ;

ಪದವಿಂಗಡಣೆ:
ನಗುತ +ಹರಿ +ನಿಂದಿರಲು+ ಕೈ+ ದೀ
ವಿಗೆಯವರು +ಹೊದ್ದಿದರು +ರೂವಾ
ರಿಗೆಗೆ+ ಬಿಜಯಂಗೈದನ್+ಉಘೆಯೆಂದುದು +ಸುರಸ್ತೋಮ
ಬಿಗಿದ +ದಡ್ಡಿಯ +ಬದ್ದರದ +ಬೀ
ಯಗದ +ರಾಣಿವಾಸದ್+ಅಂದಣ
ತೆಗೆದು +ನಡೆದುವು+ ಮುಂದೆ +ಸಂದಣಿಸಿತ್ತು +ಯದುಸೇನೆ

ಅಚ್ಚರಿ:
(೧) ಬಿಜಯಂಗೈ, ನಡೆ – ಸಾಮ್ಯಾರ್ಥ ಪದಗಳು

ಪದ್ಯ ೫೮: ದ್ರೌಪದಿಯು ಕೃಷ್ಣನನ್ನು ಹೇಗೆ ಸ್ವಾಗತಿಸಿದಳು?

ಕಾಣಿಕೆಯ ಕೈಗೊಂಡು ರಾಯನ
ರಾಣಿಯನು ಮನ್ನಿಸಿದ ತನ್ನಯ
ರಾಣಿವಾಸದ ಹೊರೆಗೆ ನೇಮವ ಕೊಟ್ಟು ಕಳುಹಿದನು.
ರಾಣಿ ರ್ಕುಮಿಣಿಯಾದಿ ಯಾದವ
ಕ್ಷೋಣಿಧರನರಸಿಯರನನಿಬರ
ಕಾಣಿಕೆಯಕೊಟ್ಟೆರಗಿ ದ್ರೌಪದಿ ಕಂಡಳೊಲವಿನೊಳು (ವಿರಾಟ ಪರ್ವ, ೧೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ದ್ರೌಪದಿಯ ಕಾಣಿಕೆಯನ್ನು ಸ್ವೀಕರಿಸಿ ಕೃಷ್ಣನು ಅವಳನ್ನು ತನ್ನ ರಾಣೀವಾಸದವರ ಬಳಿಗೆ ಕಳುಹಿಸಿದನು. ಶ್ರೀಕೃಷ್ಣನ ರಾಣೀವಾಸದವರೆಲ್ಲರನ್ನು ಕಂಡು ದ್ರೌಪದಿಯು ಕಾಣಿಗೆಗಳನ್ನು ಕೊಟ್ಟು ವಂದಿಸಿದಳು.

ಅರ್ಥ:
ಕಾಣಿಕೆ: ಉಡುಗೊರೆ; ಕೈಗೊಂಡು: ತೆಗೆದು; ರಾಯ: ರಾಜ; ರಾಣಿ: ಅರಸಿ; ಮನ್ನಿಸು: ಗೌರವಿಸು; ಹೊರೆ:ರಕ್ಷಣೆ, ಆಶ್ರಯ; ನೇಮ: ವ್ರತ, ನಿಯಮ; ಕೊಡು: ನೀಡು; ಕಳುಹಿದ: ತೆರಳು, ಬೀಳ್ಕೊಳು; ಆದಿ: ಮೊದಲಾದ; ಕ್ಷೋಣಿ: ನೆಲ, ಭೂಮಿ; ಧರ: ಧರಿಸಿದ; ಅರಸಿ: ರಾಣಿ; ಅನಿಬರು: ಅಷ್ಟು ಜನ; ಎರಗು: ನಮಸ್ಕರಿಸು; ಒಲವು: ಪ್ರೀತಿ;

ಪದವಿಂಗಡಣೆ:
ಕಾಣಿಕೆಯ +ಕೈಗೊಂಡು +ರಾಯನ
ರಾಣಿಯನು +ಮನ್ನಿಸಿದ+ ತನ್ನಯ
ರಾಣಿವಾಸದ+ ಹೊರೆಗೆ +ನೇಮವ +ಕೊಟ್ಟು +ಕಳುಹಿದನು
ರಾಣಿ +ರುಕುಮಿಣಿ+ಆದಿ+ ಯಾದವ
ಕ್ಷೋಣಿಧರನ್+ಅರಸಿಯರನ್+ಅನಿಬರ
ಕಾಣಿಕೆಯಕೊಟ್ಟ್+ಎರಗಿ+ ದ್ರೌಪದಿ+ ಕಂಡಳ್+ಒಲವಿನೊಳು

ಅಚ್ಚರಿ:
(೧) ೧-೬ ಸಾಲಿನ ಮೊದಲ ಪದ – ಕಾಣಿಕೆ
(೨) ೨-೫ ಸಾಲಿನ ಮೊದಲ ಪದ – ರಾಣಿ
(೩) ಕೃಷ್ಣನನ್ನು ಯಾದವಕ್ಷೋಣಿಧರ ಎಂದು ಕರೆದಿರುವುದು

ಪದ್ಯ ೨೯: ಗಗನವೇಕೆ ಕಾಣದಾಯಿತು?

ಬಿಗಿದ ಬೀಯಗ ಬದ್ದರದ ಬಂ
ಡಿಗಳು ರಾಣಿವಾಸದಂದಣ
ತೆಗೆದುವೊರಲುವ ಕಂಚುಕಿಗಳುಗ್ಗಡದ ರಭಸದಲಿ
ಗಗನವಡಗಿತು ಪಲ್ಲವದ ಸ
ತ್ತಿಗೆಯ ಸಾಲಿನ ಝಲ್ಲರಿಯ ಜಾ
ಡಿಗಳಲಾಡುವ ಚಮರ ಸೀಗುರಿಗಳ ಪತಾಕೆಯಲಿ (ಅರಣ್ಯ ಪರ್ವ, ೧೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬೀಗ ಹಾಕಿ ಬಿಗಿ ಮಾಡಿದ ರಥಗಳು ಮತ್ತು ಪಲ್ಲಕ್ಕಿಗಳಲ್ಲಿ ರಾಣಿವಾಸದವರು ಹೊರಡಲು, ಮುಂದೆ ಕಂಚುಕಿಗಳು ದಾರಿ ಬಿಡಿಸಲು ಕೂಗುತ್ತಿದ್ದರು. ಚಾಮರ, ಕೊಡೆ, ಜಾಲರಿಗಳ ಆಟದಿಂದ ಆಕಾಶವು ಕಾಣದಾಯಿತು.

ಅರ್ಥ:
ಬಿಗಿ: ಭದ್ರವಾಗಿ; ಬೀಯಗ: ಬಂಧು; ಬದ್ದರ: ಮಂಗಳಕರವಾದುದು; ಬಂಡಿ: ರಥ; ರಾಣಿ: ಅರಸಿ; ಅಂದಣ: ಚೆಲುವು; ತೆಗೆ: ಹೊರತರು; ಒರಲು: ಅರಚು, ಕೂಗಿಕೊಳ್ಳು; ಕಂಚುಕಿ: ಅಂತಃಪುರದ ಅಧಿಕಾರಿ; ಉಗ್ಗಡ: ಶ್ರೇಷ್ಠತೆ; ರಭಸ: ವೇಗ; ಗಗನ: ಆಗಸ; ಅಡಗು: ಮುಚ್ಚು; ಪಲ್ಲವ: ಮೊಳಕೆ, ಚಿಗುರು; ಸತ್ತಿಗೆ: ಕೊಡೆ, ಛತ್ರಿ; ಸಾಲು: ಪಂಕ್ತಿ, ಶ್ರೇಣಿ; ಝಲ್ಲರಿ: ಕುಚ್ಚು; ಜಾಡಿ: ಸಂದಣಿ, ದಟ್ಟಣೆ; ಆಡು: ಕ್ರೀಡಿಸು; ಸೀಗುರಿ: ಚಾಮರ; ಪತಾಕೆ: ಬಾವುಟ;

ಪದವಿಂಗಡಣೆ:
ಬಿಗಿದ +ಬೀಯಗ +ಬದ್ದರದ+ ಬಂ
ಡಿಗಳು +ರಾಣಿವಾಸದ್+ಅಂದಣ
ತೆಗೆದುವ್+ಒರಲುವ+ ಕಂಚುಕಿಗಳ್+ಉಗ್ಗಡದ +ರಭಸದಲಿ
ಗಗನವ್+ಅಡಗಿತು +ಪಲ್ಲವದ+ ಸ
ತ್ತಿಗೆಯ +ಸಾಲಿನ +ಝಲ್ಲರಿಯ +ಜಾ
ಡಿಗಳಲ್+ಆಡುವ +ಚಮರ +ಸೀಗುರಿಗಳ +ಪತಾಕೆಯಲಿ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿಗಿದ ಬೀಯಗ ಬದ್ದರದ ಬಂಡಿಗಳು

ಪದ್ಯ ೮೪: ಶಕುನಿಯು ದ್ರೌಪದಿಯನ್ನು ಹೇಗೆ ಹಂಗಿಸಿದ?

ಅಹುದಲೇ ಬಳಿಕೇನು ದಾಸ್ಯಕೆ
ವಿಹಿತವಾಯಿತು ನಿನ್ನ ತನುವಿನ
ಲಹ ಮನೋವ್ಯಥೆಯೇಕೆ ರಾಣಿವಾಸ ವೀಧಿಯಲಿ
ಮಹಿಳೆಯರ ಸಖ್ಯದಲಿ ಸೌಖ್ಯದ
ರಹಣಿಗೊಡಬಡು ವಾರಕದಲತಿ
ಬಹಳ ಭೂಷಣ ಭಾರದಲಿ ಮೆರೆಯೆಂದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೮೪ ಪದ್ಯ)

ತಾತ್ಪರ್ಯ:
ಹೌದು ಕರ್ಣನು ಹೇಳುತ್ತಿರುವುದು ಸರಿ, ಮತ್ತೇನು, ನಿನ್ನ ದೇಹವು ಈಗ ದಾಸ್ಯಕ್ಕೆಂದೇ ಆಯಿತು. ನಿನಗೇಕೆ ಮನಸ್ಸಿನ ವ್ಯಥೆ? ರಾಣೀವಾಸದ ಬೀದಿಯಲ್ಲಿ ದಾಸಿಯರ ಜೊತೆಯಲ್ಲಿ ಸೌಖ್ಯವನ್ನು ಅನುಭವಿಸಲು ಒಪ್ಪು. ನಿನಗೆ ಬರುವ ಹೇರಳವಾದ ಆಭರಣಗಳ ಭಾರದಿಂದ ಮೆರೆ ಎಂದು ಶಕುನಿಯು ಹಂಗಿಸಿದನು.

ಅರ್ಥ:
ಅಹುದು: ನಿಜ; ಬಳಿಕ: ನಂತರ; ದಾಸ್ಯ: ಸೇವೆ; ವಿಹಿತ: ಯೋಗ್ಯ; ತನು: ದೇಹ; ವ್ಯಥೆ: ನೋವು, ಯಾತನೆ; ಮನ: ಮನಸ್ಸು; ರಾಣಿ: ಅರಸಿ; ವಾಸ: ಮನೆ; ವೀಧಿ: ದಾರಿ; ಮಹಿಳೆ: ಸ್ತ್ರೀ; ಸಖ್ಯ: ಸ್ನೇಹ; ಸೌಖ್ಯ: ಕ್ಷೇಮ; ಅಣಿ: ಅವಕಾಶ; ಕೊಡಬಡು: ಒಪ್ಪು; ವಾರಕ: ಉಡುಗೊರೆ; ಅತಿಬಹಳ: ತುಂಬ; ಭೂಷಣ: ಅಲಂಕರಿಸುವುದು; ಭಾರ: ಹೊರೆ; ಮೆರೆ: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಅಹುದಲೇ +ಬಳಿಕೇನು +ದಾಸ್ಯಕೆ
ವಿಹಿತವಾಯಿತು +ನಿನ್ನ +ತನುವಿನ
ಲಹ+ ಮನೋವ್ಯಥೆಯೇಕೆ +ರಾಣಿವಾಸ+ ವೀಧಿಯಲಿ
ಮಹಿಳೆಯರ+ ಸಖ್ಯದಲಿ +ಸೌಖ್ಯದ
ರಹಣಿ+ಕೊಡಬಡು +ವಾರಕದಲ್+ಅತಿ
ಬಹಳ +ಭೂಷಣ+ ಭಾರದಲಿ+ ಮೆರೆಯೆಂದನಾ +ಶಕುನಿ

ಅಚ್ಚರಿ:
(೧) ಹಂಗಿಸುವ ಪರಿ – ದಾಸ್ಯಕೆವಿಹಿತವಾಯಿತು ನಿನ್ನ ತನು; ವಾರಕದಲತಿ ಬಹಳ ಭೂಷಣ ಭಾರದಲಿ ಮೆರೆ

ಪದ್ಯ ೩೬: ದುರ್ಯೋಧನನು ದ್ರೌಪದಿಯನ್ನು ಕರೆಯಲು ಯಾರಿಗೆ ತಿಳಿಸಿದ?

ವಿದುರ ಬಾ ನಮ್ಮಾಕೆಯಾ ದ್ರೌ
ಪದಿಯ ಕರೆ ಬೆಸಗೊಂಬೆ ತೊತ್ತಿರ
ಸದನದಿಚ್ಛೆಯೊ ರಾಣಿವಾಸದ ಮನೆಯಪೇಕ್ಷಿತವೊ
ಬೆದರ ಬೇಡಿನ್ನಬುಜಮುಖಿಗಾ
ವುದು ಮನೋರಥವೆಮ್ಮೊಳುಂಟೆಂ
ಬುದು ಲತಾಂಗಿಯ ಕರೆವುದೆಂದನು ಕೌರವರ ರಾಯ (ಸಭಾ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಶಕುನಿಯ ಸನ್ನೆಯನ್ನು ಅರಿತ ದುರ್ಯೋಧನನು ವಿದುರನನ್ನು ಕರೆದು, ವಿದುರ ಇಲ್ಲಿ ಬಾ, ಈಗ ದ್ರೌಪದಿಯು ನಮ್ಮ ದಾಸಿ, ಅವಳನ್ನು ಕರೆದುಕೊಂಡು ಬಾ, ಅವಳೇನು ದಾಸಿಯರ ಮನೆಯಲ್ಲಿರುವಳೋ, ರಾಣಿವಾಸದಲ್ಲಿರುವಳೋ ಕೇಳು, ಇದಕ್ಕೆ ನೀನು ಹೆದರಬೇಕಾಗಿಲ್ಲ. ಅವಳು ಆಯ್ದುಕೊಂಡ ಸ್ಥಳದಲ್ಲಿ ಅವಳಿಚ್ಛೆಯೇನೆಂಬುದು ತಿಳಿದು ಅದರಂತೆಯೇ ನಡೆಯಲಿ, ಅವಳನ್ನು ಕರೆದುಕೊಂಡು ಬಾ ಎಂದು ದುರ್ಯೋಧನನು ತಿಳಿಸಿದನು.

ಅರ್ಥ:
ಬಾ: ಆಗಮಿಸು; ನಮ್ಮಾಕೆ: ನನ್ನ ಹೆಣ್ಣು; ಕರೆ: ಬರೆಮಾಡು; ಬೆಸ: ಕೇಳುವುದು, ವಿಚಾರಿಸುವುದು; ತೊತ್ತು: ದಾಸಿ, ಸೇವಕಿ; ಸದನ: ಮನೆ; ಇಚ್ಛೆ: ಆಸೆ; ರಾಣಿ: ಅರಸಿ; ವಾಸ: ಮನೆ; ಅಪೇಕ್ಷೆ: ಆಸೆ, ಇಚ್ಛೆ; ಬೆದರು: ಹೆದರು, ಅಂಜಿಕೆ; ಬೇಡ: ಸಲ್ಲದು, ಕೂಡದು; ಅಬುಜಮುಖಿ: ಕಮಲದಂತ ಮುಖವುಳ್ಳವಳು, ಸುಂದರಿ; ಮನೋರಥ: ಬಯಕೆ, ಆಸೆ; ಲತಾಂಗಿ: ಲತೆಯಂತ ಅಂಗವುಳ್ಳವಳು, ಸುಂದರಿ; ಕರೆ: ಬರೆಮಾಡು; ರಾಯ; ರಾಜ;

ಪದವಿಂಗಡಣೆ:
ವಿದುರ +ಬಾ +ನಮ್ಮಾಕೆ+ಆ +ದ್ರೌ
ಪದಿಯ +ಕರೆ +ಬೆಸಗೊಂಬೆ+ ತೊತ್ತಿರ
ಸದನದ್+ಇಚ್ಛೆಯೊ +ರಾಣಿವಾಸದ +ಮನೆ+ಅಪೇಕ್ಷಿತವೊ
ಬೆದರ+ ಬೇಡಿನ್+ಅಬುಜಮುಖಿಗ್
ಆವುದು +ಮನೋರಥವ್+ಎಮ್ಮೊಳುಂಟ್
ಎಂಬುದು +ಲತಾಂಗಿಯ +ಕರೆವುದೆಂದನು+ ಕೌರವರ+ ರಾಯ

ಅಚ್ಚರಿ:
(೧) ದ್ರೌಪದಿಯನ್ನು ಅಬುಜಮುಖಿ, ಲತಾಂಗಿ ಎಂದು ಕರೆದಿರುವುದು