ಪದ್ಯ ೨೦: ಕುಂತಿಯು ಏಕೆ ಬೆರಗಾದಳು?

ಅರಸ ಕೇಳ್ ಆಶ್ಚರ್ಯವನು ತಾ
ವರೆಯ ಮಿತ್ರನ ಕರಗಿ ಕರುವಿನೊ
ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ
ಕುರುಳುದಲೆ ನಿಟ್ಟೆಸಳುಗಂಗಳ
ಚರಣಕರ ಪಲ್ಲವದ ಕೆಂಪಿನ
ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ (ಆದಿ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ, ಆಗ ನಡೆದ ಆಶ್ಚರ್ಯಕರ ಘಟನೆಯನ್ನು ಕೇಳು. ಸೂರ್ಯನನ್ನು ಕರಗಿಸಿ ಈ ಮಗುವಿನಲ್ಲಿ ಕೂಡಿಸಿದೆಯೋ ಎನ್ನುವಂತೆ ಥಳಥಳಿಸುವ ದೇಹಕಾಂತಿ, ಗುಂಗುರು ಕೂದಲಿನ ತಲೆ, ವಿಶಾಲವಾದ ಎಸಳು ಕಣ್ಣುಗಳು, ಎಳೆಯ ಕೆಂಪಾದ ಚಿಗುರಿನಂತಿರುವ ಕೈಕಾಲುಗಳುಳ್ಳ ಉತ್ತಮ ಶಿಶುವನ್ನು ಕಂಡು ಕುಂತಿಯು ಬೆರಗಾದಳು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಆ‍ಶ್ಚರ್ಯ: ಕುತೂಹಲ; ಕರಗು: ಮಾಯವಾಗು, ನೀರಾಗಿಸು; ಕರು: ಚಿಕ್ಕದ್ದು; ಎರೆದ: ಎರಕ ಹೊಯ್ದ; ಥಳಥಳ: ಪ್ರಕಾಶ; ತೊಳಗು: ಕಾಂತಿ, ಪ್ರಕಾಶ; ತನು: ದೇಹ; ಚ್ಛವಿ: ಕಾಂತಿ; ಕುರುಳು: ಗುಂಗುರು; ತಲೆ: ಶಿರ; ಎಸಳು: ವಿಭಾಗ, ಕವಲು; ಕಂಗಳು: ಕಣ್ಣು; ಚರಣ: ಪಾದ; ಕರ: ಕೈ; ಪಲ್ಲವ: ಚಿಗುರು; ಕೆಂಪು: ರಕ್ತವರ್ಣ; ವರ: ಶ್ರೇಷ್ಠ; ಕುಮಾರ: ಮಗ; ಕಂಡು: ನೋಡು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಅರಸ +ಕೇಳ್ +ಆಶ್ಚರ್ಯವನು +ತಾ
ವರೆಯ +ಮಿತ್ರನ+ ಕರಗಿ +ಕರುವಿನೊಳ್
ಎರೆದರೆಂದೆನೆ+ ಥಳಥಳಿಸಿ +ತೊಳಗುವ +ತನುಚ್ಛವಿಯ
ಕುರುಳು+ತಲೆ +ನಿಟ್ಟೆಸಳು+ಕಂಗಳ
ಚರಣ+ಕರ +ಪಲ್ಲವದ +ಕೆಂಪಿನ
ವರ+ಕುಮಾರನ+ ಕಂಡು +ಬೆರಗಿನೊಳ್+ಇರ್ದಳಾ +ಕುಂತಿ

ಅಚ್ಚರಿ:
(೧) ಸೂರ್ಯನನ್ನು ತಾವರೆಯ ಮಿತ್ರ ಎಂದು ಕರೆದ ಪರಿ
(೨) ಮಗುವನ್ನು ವರ್ಣಿಸುವ ಪರಿ – ತಾವರೆಯ ಮಿತ್ರನ ಕರಗಿ ಕರುವಿನೊಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ

ಪದ್ಯ ೧೭: ಭೀಮನಿಗೆ ವರ್ತನೆಗೆ ಧರ್ಮಜನೇಕೆ ಅಸಮ್ಮತಿ ಸೂಚಿಸಿದನು?

ಗುಣನಿಧಿಯನೇಕಾದಶಾಕ್ಷೋ
ಹಿಣಿಯ ಪತಿಯನಶೇಷ ಪಾರ್ಥಿವ
ಮಣಿಮಕುಟ ಕಿರಣೋಪಲಾಲಿತ ಪಾದಪಲ್ಲವನ
ರಣದೊಳನ್ಯಾಯದಲಿ ತೊಡೆಗಳ
ಹಣಿದುದಲ್ಲದೆ ಪಾದದಲಿ ನೀ
ಕೆಣಕುವರೆ ಕುರುರಾಜಮೌಳಿಯನೆಂದನಾ ಭೂಪ (ಗದಾ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಗುಣನಿಧಿಯೂ, ಹನ್ನೊಂದು ಅಕ್ಷೋಹಿಣಿಯ ಒಡೆಯನೂ, ಸಮಸ್ತ ಕ್ಷತ್ರಿಯರ ಕಿರೀಟದಿಮ್ದ ಶೋಭಿತವಾದ ಪಾದಗಳನ್ನುಳ್ಳವನ್ನೂ ಆದವನ ತೊಡೆಯನ್ನು ಗದಾಯುದ್ಧದಲ್ಲಿ ಅನ್ಯಾಯದಿಂದ ಮುರಿದುದಲ್ಲದೆ, ಅವನ ತಲೆಯನ್ನು ಪಾದಗಳಿಂದೊದೆಯಬಹುದೇ? ಎಂದನು.

ಅರ್ಥ:
ಗುಣ: ನಡತೆ, ಸ್ವಭಾವ, ಸತ್ತ್ವ, ರಜಸ್ಸು, ತಮಸ್ಸು ಎಂಬ ಮೂರು ಮೂಲ ಸ್ವಭಾವಗಳು; ನಿಧಿ: ಸಂಪತ್ತು, ಐಶ್ವರ್ಯ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಶೇಷ: ಉಳಿದ; ಪತಿ: ಒಡೆಯ; ಪಾರ್ಥಿವ: ಭೌತಿಕವಾದುದು; ಮಣಿಮಕುಟ: ರತ್ನಖಚಿತವಾದ ಕಿರೀಟ; ಕಿರಣ: ರಶ್ಮಿ, ಬೆಳಕಿನ ಕದಿರು; ಲಾಲಿತ: ಪ್ರೀತಿಯ, ಮಮತೆಯ; ಪಾದ: ಚರಣ; ಪಲ್ಲವ: ಚಿಗುರು, ತಳಿರು; ರಣ: ಯುದ್ಧ; ಅನ್ಯಾಯ: ಸರಿಯಲ್ಲದ ರೀತಿ; ತೊಡೆ: ಜಂಘೆ; ಹಣಿ: ಬಾಗು, ಮಣಿ; ಕೆಣಕು: ರೇಗಿಸು; ಮೌಳಿ: ಶಿರ; ಭೂಪ: ರಾಜ;

ಪದವಿಂಗಣೆ:
ಗುಣನಿಧಿಯನ್+ಏಕಾದಶ+ಅಕ್ಷೋ
ಹಿಣಿಯ +ಪತಿಯನ್+ಅಶೇಷ +ಪಾರ್ಥಿವ
ಮಣಿಮಕುಟ+ ಕಿರಣೋಪ+ಲಾಲಿತ +ಪಾದ+ಪಲ್ಲವನ
ರಣದೊಳ್+ಅನ್ಯಾಯದಲಿ +ತೊಡೆಗಳ
ಹಣಿದುದಲ್ಲದೆ+ ಪಾದದಲಿ +ನೀ
ಕೆಣಕುವರೆ +ಕುರುರಾಜಮೌಳಿಯನ್+ಎಂದನಾ ಭೂಪ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ: ಗುಣನಿಧಿ, ಕುರುರಾಜಮೌಳಿ, ಏಕಾದಶಾಕ್ಷೋಹಿಣಿಯ ಪತಿಯನ್

ಪದ್ಯ ೩೯: ಕೃಷ್ಣನು ಸೈನಿಕರಿಗೆ ಏನೆಂದು ಹೇಳಿದನು?

ನಿಲ್ಲಿ ಭಯ ಬೇಡಾವ ರನವಿದು
ತಲ್ಲಣಕೆ ತರುವಾಯೆ ದೀವಿಗೆ
ಪಲ್ಲವಿಸಿದರೆ ತಳಿತುದೇ ಭುಜಶೌರ್ಯ ಕುರುಬಲಕೆ
ಖುಲ್ಲರಾರೋ ಬಲವ ರಿತುಹಿದ
ರಿಲ್ಲಿ ನಿಲಲಂಜಿದರೆನುತ ಕರ
ಪಲ್ಲವವ ನೆಗಹಿದನು ಲಕ್ಷ್ಮೀಕಾಂತ ಕರುಣದಲಿ (ದ್ರೋಣ ಪರ್ವ, ೧೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭಯಪಡಬೇಡಿರಿ, ಇದ್ದಲ್ಲೇ ನಿಲ್ಲಿರಿ, ತಲ್ಲಣಗೊಂಡ ಮೇಲೆ ಎಂತಹ ಯುದ್ಧ? ಕೌರವರ ಸೈನ್ಯದಲ್ಲಿ ದೀಪಗಳುರಿದರೆ ಅದರ ಭುಜಬಲ ಹೆಚ್ಚಾಯಿತೇ? ಯಾರೋ ಅಯೋಗ್ಯರು ನಿಲ್ಲಲು ಹೆದರಿ ಸೈನ್ಯದೊಡನೆ ಓಡಿ ಹೋದರೇನಂತೆ ಎಂದು ಕೈಯನ್ನೆತ್ತಿ ಕೃಷ್ಣನು ಅಭಯವನ್ನಿತ್ತನು.

ಅರ್ಥ:
ನಿಲ್ಲು: ತಡೆ; ಭಯ: ಅಂಜಿಕೆ; ಬೇಡ: ಸಲ್ಲದು, ಕೂಡದು; ರಣ: ಯುದ್ಧ; ತಲ್ಲಣ: ಅಂಜಿಕೆ, ಭಯ, ಭೀತಿ; ತರುವಾಯ: ಸೊಗಸು; ದೀವಿಗೆ: ಸೊಡರು, ದೀಪಿಕೆ; ಪಲ್ಲವಿಸು: ಚಿಗುರು; ತಳಿತ: ಚಿಗುರಿದ; ಭುಜ: ಬಾಹು; ಶೌರ್ಯ: ಬಲ, ಪರಾಕ್ರಮ; ಖುಲ್ಲ: ಅಲ್ಪತನ, ಕ್ಷುದ್ರತೆ; ಬಲ: ಬಿಗಿ, ಗಟ್ಟಿ; ತಿರುಹು: ತಿಗುಹಿಸು; ಅಂಜು: ಹೆದರು; ನೆಗಹು: ಮೇಲೆತ್ತು; ಕರುಣ: ದಯೆ; ಕರ: ಹಸ್ತ; ಪಲ್ಲವ: ಚಿಗುರು;

ಪದವಿಂಗಡಣೆ:
ನಿಲ್ಲಿ +ಭಯ +ಬೇಡಾವ +ರಣವಿದು
ತಲ್ಲಣಕೆ +ತರುವಾಯೆ +ದೀವಿಗೆ
ಪಲ್ಲವಿಸಿದರೆ +ತಳಿತುದೇ +ಭುಜ+ಶೌರ್ಯ +ಕುರುಬಲಕೆ
ಖುಲ್ಲರಾರೋ +ಬಲವ +ತಿರುಹಿದರ್
ಇಲ್ಲಿ +ನಿಲಲ್+ಅಂಜಿದರೆನುತ +ಕರ
ಪಲ್ಲವವ +ನೆಗಹಿದನು +ಲಕ್ಷ್ಮೀಕಾಂತ +ಕರುಣದಲಿ

ಅಚ್ಚರಿ:
(೧) ಅಭಯ ಎಂದು ಹೇಳಲು – ಕರ ಪಲ್ಲವವ ನೆಗಹಿದನು

ಪದ್ಯ ೨೯: ಗಗನವೇಕೆ ಕಾಣದಾಯಿತು?

ಬಿಗಿದ ಬೀಯಗ ಬದ್ದರದ ಬಂ
ಡಿಗಳು ರಾಣಿವಾಸದಂದಣ
ತೆಗೆದುವೊರಲುವ ಕಂಚುಕಿಗಳುಗ್ಗಡದ ರಭಸದಲಿ
ಗಗನವಡಗಿತು ಪಲ್ಲವದ ಸ
ತ್ತಿಗೆಯ ಸಾಲಿನ ಝಲ್ಲರಿಯ ಜಾ
ಡಿಗಳಲಾಡುವ ಚಮರ ಸೀಗುರಿಗಳ ಪತಾಕೆಯಲಿ (ಅರಣ್ಯ ಪರ್ವ, ೧೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬೀಗ ಹಾಕಿ ಬಿಗಿ ಮಾಡಿದ ರಥಗಳು ಮತ್ತು ಪಲ್ಲಕ್ಕಿಗಳಲ್ಲಿ ರಾಣಿವಾಸದವರು ಹೊರಡಲು, ಮುಂದೆ ಕಂಚುಕಿಗಳು ದಾರಿ ಬಿಡಿಸಲು ಕೂಗುತ್ತಿದ್ದರು. ಚಾಮರ, ಕೊಡೆ, ಜಾಲರಿಗಳ ಆಟದಿಂದ ಆಕಾಶವು ಕಾಣದಾಯಿತು.

ಅರ್ಥ:
ಬಿಗಿ: ಭದ್ರವಾಗಿ; ಬೀಯಗ: ಬಂಧು; ಬದ್ದರ: ಮಂಗಳಕರವಾದುದು; ಬಂಡಿ: ರಥ; ರಾಣಿ: ಅರಸಿ; ಅಂದಣ: ಚೆಲುವು; ತೆಗೆ: ಹೊರತರು; ಒರಲು: ಅರಚು, ಕೂಗಿಕೊಳ್ಳು; ಕಂಚುಕಿ: ಅಂತಃಪುರದ ಅಧಿಕಾರಿ; ಉಗ್ಗಡ: ಶ್ರೇಷ್ಠತೆ; ರಭಸ: ವೇಗ; ಗಗನ: ಆಗಸ; ಅಡಗು: ಮುಚ್ಚು; ಪಲ್ಲವ: ಮೊಳಕೆ, ಚಿಗುರು; ಸತ್ತಿಗೆ: ಕೊಡೆ, ಛತ್ರಿ; ಸಾಲು: ಪಂಕ್ತಿ, ಶ್ರೇಣಿ; ಝಲ್ಲರಿ: ಕುಚ್ಚು; ಜಾಡಿ: ಸಂದಣಿ, ದಟ್ಟಣೆ; ಆಡು: ಕ್ರೀಡಿಸು; ಸೀಗುರಿ: ಚಾಮರ; ಪತಾಕೆ: ಬಾವುಟ;

ಪದವಿಂಗಡಣೆ:
ಬಿಗಿದ +ಬೀಯಗ +ಬದ್ದರದ+ ಬಂ
ಡಿಗಳು +ರಾಣಿವಾಸದ್+ಅಂದಣ
ತೆಗೆದುವ್+ಒರಲುವ+ ಕಂಚುಕಿಗಳ್+ಉಗ್ಗಡದ +ರಭಸದಲಿ
ಗಗನವ್+ಅಡಗಿತು +ಪಲ್ಲವದ+ ಸ
ತ್ತಿಗೆಯ +ಸಾಲಿನ +ಝಲ್ಲರಿಯ +ಜಾ
ಡಿಗಳಲ್+ಆಡುವ +ಚಮರ +ಸೀಗುರಿಗಳ +ಪತಾಕೆಯಲಿ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿಗಿದ ಬೀಯಗ ಬದ್ದರದ ಬಂಡಿಗಳು

ಪದ್ಯ ೪: ಭೀಮನು ಪುರಜನರಿಗೆ ಏನು ಹೇಳಿದನು?

ನಿಲ್ಲಿರೈ ದ್ವಿಜನಿಕರ ಕಳುಹಿಸಿ
ಕೊಳ್ಳಿರೈ ಪುರವರ್ಗ ನೇಮವ
ಕೊಳ್ಳಿರೈ ಪರಿವಾರ ಮಕ್ಕಳ ತಂಡ ಮೊದಲಾಗಿ
ಎಲ್ಲಿ ಮೆಳೆ ಮರುಗಾಡು ಪಲ್ಲವ
ಫುಲ್ಲ ಫಲ ಪಾನೀಯ ಪೂರಿತ
ವಲ್ಲಿ ರಾಯನ ಸೆಜ್ಜೆಯರಮನೆಯೆಂದನಾ ಭೀಮ (ಅರಣ್ಯ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಮನು ಧರ್ಮಜನ ಆಜ್ಞೆಯನ್ನು ಕೇಳಿ, ತಮ್ಮ ಹಿಂದೆ ಬರುತ್ತಿದ್ದ ಪುರಜನರನ್ನುದ್ದೇಶಿಸಿ, ಎಲೇ ಬ್ರಾಹ್ಮಣರೇ ನಿಲ್ಲಿರಿ, ಪುರಜನರೇ ನಮ್ಮಿಂದ ಬೀಳ್ಕೊಡಿ, ಪರಿವಾರದವರೇ, ಹಿಂದಿರುಗಲು ಇದೇ ನಮ್ಮ ಆಜ್ಞೆ ಏಕೆಂದರೆ, ಎಲ್ಲಿ ದಟ್ಟವಾಗಿ ಬೆಳೆದ ಗಿಡಗಳ ಗುಂಪಿರುವುದೋ, ಎಲ್ಲಿ ಹೂವು, ಹಣ್ಣು, ನೀರಿನ ಸಮೃದ್ಧಿಯಿರುವುದೋ ಅಲ್ಲಿಯೇ ನಮ್ಮ ಮನೆ ಎಂದು ಹೇಳಿದನು.

ಅರ್ಥ:
ನಿಲ್ಲು: ತಡೆ; ದ್ವಿಜ: ಬ್ರಾಹ್ಮಣ; ನಿಕರ: ಗುಂಪು; ಕಳುಹಿಸು: ತೆರಳು; ಪುರ: ಊರು; ವರ್ಗ: ವಿಭಾಗ, ಗುಂಪು; ನೇಮ: ವ್ರತ, ನಿಯಮ; ಪರಿವಾರ: ಸಂಬಂಧಿಕರು; ಮಕ್ಕಳು: ಸುತರು; ತಂಡ: ಪಕ್ಷ, ಪಂಗಡ; ಮೊದಲು: ಆದಿ; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು, ಪೊದರು; ಮರ: ತರು; ಕಾಡು: ಕಾನನ; ಪಲ್ಲವ: ಚಿಗುರು; ಫುಲ್ಲ: ಹೂವು, ಪುಷ್ಪ; ಫಲ: ಹಣ್ಣು; ಪಾನೀಯ: ಕುಡಿಯುವ ದ್ರವ, ನೀರು; ಪೂರಿತ: ಪೂರ್ತಿ, ಪೂರ; ರಾಯ: ರಾಜ; ಸೆಜ್ಜೆ: ಶಯ್ಯೆ, ಹಾಸಿಗೆ; ಅರಮನೆ: ರಾಜರ ಆಲಯ;

ಪದವಿಂಗಡಣೆ:
ನಿಲ್ಲಿರೈ +ದ್ವಿಜನಿಕರ+ ಕಳುಹಿಸಿ
ಕೊಳ್ಳಿರೈ +ಪುರವರ್ಗ +ನೇಮವ
ಕೊಳ್ಳಿರೈ +ಪರಿವಾರ+ ಮಕ್ಕಳ+ ತಂಡ +ಮೊದಲಾಗಿ
ಎಲ್ಲಿ +ಮೆಳೆ +ಮರು+ಕಾಡು +ಪಲ್ಲವ
ಫುಲ್ಲ+ ಫಲ+ ಪಾನೀಯ +ಪೂರಿತವ್
ಅಲ್ಲಿ +ರಾಯನ +ಸೆಜ್ಜೆ+ಅರಮನೆ+ಎಂದನಾ ಭೀಮ

ಅಚ್ಚರಿ:
(೧) ನಿಲ್ಲಿರೈ, ಕಳುಹಿಸಿಕೊಳ್ಳಿರೈ, ನೇಮವ ಕೊಳ್ಳಿರೈ – ಪದಗಳ ಬಳಕೆ
(೨) ಪ ಕಾರದ ಸಾಲು ಪದ – ಪಲ್ಲವ ಫುಲ್ಲ ಫಲ ಪಾನೀಯ ಪೂರಿತವಲ್ಲಿ

ಪದ್ಯ ೧೧: ಕರ್ಣಾರ್ಜುನರ ಕೋಪವು ಹೇಗೆ ಬೆಳೆಯಿತು?

ಮನದೊಳಗೆ ಮೊಗೆದೀಂಟಿದರು ಕ
ಣ್ಣಿನಲಿ ಕಾರಿದರಡಿಗಡಿಗೆ ಕಿವಿ
ಗೊನೆಗಳಲಿ ಕುಡಿಕುಡಿದುಗುಳಿದರು ಮೂದಲೆಯ ಮಾತುಗಳ
ಮನದಲಂಕುರವಾಗಿ ಕಡೆಗ
ಣ್ಣಿನಲಿ ಪಲ್ಲವನಾಗಿ ರಣವಾ
ತಿನಲಿ ಹೂತುದು ಕರ್ಣ ಪಾರ್ಥರ ರೋಷಮಯಚೂತ (ಕರ್ಣ ಪರ್ವ, ೨೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕರ್ಣಾರ್ಜುನರಿಬ್ಬರೂ ಒಬ್ಬರನ್ನೊಬ್ಬರನ್ನು ಮನಸ್ಸಿನಿಂದಲೇ ದಾಳಿಮಾಡಿ ಕುಡಿದು ಕಣ್ಣಿನಿಂದ ಹೊರಕ್ಕೆಸೆದರು. ಹಂಗಿಸುವ ಮಾತುಗಳನ್ನು ಕಿವಿಗಳಿಂದ ಕೇಳಿ ಬಾಯಲ್ಲಿ ಉಗುಳಿದರು ಕರ್ಣಾರ್ಜುನರ ಕೋಪವೆಂಬ ಮಾವು ಮನಸ್ಸಿನಲ್ಲಿ ಮೊಳೆತು, ಕಡೆ ನೋಟದಲ್ಲಿ ಚಿಗುರಿ ಯುದ್ಧಾಲಾಪದಲ್ಲಿ ಹೂ ಬಿಟ್ಟಿತು.

ಅರ್ಥ:
ಮನ: ಮನಸ್ಸು; ಮೊಗೆ:ಹೊರಹೊಮ್ಮಿಸು, ದಾಳಿಯಿಡು; ಈಂಟು: ಕುಡಿ, ಹೀರು; ಕಣ್ಣು: ನಯನ; ಕಾರಿದರು: ಹೊರಹಾಕು; ಅಡಿಗಡಿಗೆ: ಮತ್ತೆ ಮತ್ತೆ, ಪುನಃ ಪುನಃ; ಕಿವಿ: ಕರ್ಣ; ಗೊನೆ: ತುದಿ, ಅಗ್ರಭಾಗ; ಕುಡಿ: ಪಾನ ಮಾದು; ಉಗುಳು: ಹೊರಹಾಕು; ಮೂದಲೆ: ಹಂಗಿಸುವ; ಮಾತು: ವಾಣಿ; ಅಂಕುರ: ಚಿಗುರು, ಹುಟ್ಟು; ಕಡೆಗಣ್ಣು: ಕಣ್ಣಿನ ತುದಿ; ಪಲ್ಲವ: ಚಿಗುರು; ರಣ: ಯುದ್ಧಭೂಮಿ; ಆತು: ಹೊಂದಿಕೊಂಡು, ಧರಿಸಿ; ಹೂತ: ಹೂಬಿಟ್ಟಿರುವ; ರೋಷ: ಕೋಪ; ಚೂತ: ಮಾವು;

ಪದವಿಂಗಡಣೆ:
ಮನದೊಳಗೆ+ ಮೊಗೆದ್+ಈಂಟಿದರು +ಕ
ಣ್ಣಿನಲಿ +ಕಾರಿದರ್+ಅಡಿಗಡಿಗೆ +ಕಿವಿ
ಗೊನೆಗಳಲಿ+ ಕುಡಿಕುಡಿದ್+ಉಗುಳಿದರು +ಮೂದಲೆಯ +ಮಾತುಗಳ
ಮನದಲ್+ಅಂಕುರವಾಗಿ+ ಕಡೆಗ
ಣ್ಣಿನಲಿ +ಪಲ್ಲವನಾಗಿ+ ರಣವಾ
ತಿನಲಿ +ಹೂತುದು +ಕರ್ಣ +ಪಾರ್ಥರ +ರೋಷಮಯ+ಚೂತ

ಅಚ್ಚರಿ:
(೧) ಕೋಪವನ್ನು ಮಾವಿನ ಹಣ್ಣಿಗೆ ಹೋಲಿಸಿ ಅದು ಹೇಗೆ ಹೂಬಿಟ್ಟಿತೆಂದು ಕವಿಯ ಕಲ್ಪನೆಯನ್ನು ತೋರುವ ಪದ್ಯ
(೨) ಮನದಲಂಕುರವಾಗಿ ಕಡೆಗಣ್ಣಿನಲಿ ಪಲ್ಲವನಾಗಿ ರಣವಾತಿನಲಿ ಹೂತುದು ಕರ್ಣ ಪಾರ್ಥರ ರೋಷಮಯಚೂತ
(೩) ಅಡಿಗಡಿಗೆ, ಕುಡಿಕುಡಿ – ಜೋಡಿ ಪದಗಳು
(೪) ಮ ಕಾರದ ತ್ರಿವಳಿ ಪದ – ಮೂದಲೆಯ ಮಾತುಗಳ ಮನದಲಂಕುರವಾಗಿ