ಪದ್ಯ ೫೯: ಭೀಮನು ಕರ್ಣನ ಮೇಲೆ ಏನನ್ನು ಹಾರಿಸಿದನು?

ಮಡಿದ ಕರಿಗಳ ಕಾಯವನು ನಿ
ಟ್ಟೊಡಲ ತುರಗಂಗಳನು ಮುಗ್ಗಿದ
ಕೆಡೆದ ತೇರಿನ ಗಾಲಿಗಳ ಕೊಂಡಿಟ್ಟನಾ ಭೀಮ
ಎಡೆಯಲಾ ಕರಿಯೊಡಲನಾ ಹಯ
ದೊಡಲನಾ ರಥ ಚಕ್ರವನು ಕಡಿ
ಕಡಿದು ಬಿಸುಟನು ಹೊದ್ದಿದನು ಕಟ್ಟಳವಿಯಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಆಗ ಭೀಮನು ಅಲ್ಲಿ ಸತ್ತು ಬಿದ್ದಿದ್ದ ಆನೆ, ಕುದುರೆಗಳನ್ನು, ರಥಗಳ ಗಾಲಿಗಳನ್ನು, ಹಿಡಿದೆತ್ತಿ ಕರ್ಣನ ಮೇಲೆಸೆದನು. ಕರ್ಣನು ಆ ಆನೆಯ ದೇಹವನ್ನು, ಕುದುರೆಯ ಅಂಗವನ್ನು, ರಥದ ಚಕ್ರವನ್ನು ಮಧ್ಯದಲ್ಲೇ ಕತ್ತರಿಸಿ ಬಿಸಾಡಿದನು.

ಅರ್ಥ:
ಮಡಿ: ಸಾವು; ಕರಿ: ಆನೆ; ಕಾಯ: ದೇಹ; ಒಡಲು: ದೇಹ; ತುರಗ: ದೇಹ; ಅಂಗ: ದೇಹದ ಭಾಗ; ಮುಗ್ಗು: ಬಾಗು, ಮಣಿ; ಕೆಡೆ: ಬೀಳು, ಕುಸಿ; ತೇರು: ಬಂಡಿ, ರಥ; ಗಾಲಿ: ಚಕ್ರ; ಕೊಂಡು: ಬರೆಮಾಡು; ಎಡೆ: ಸುಲಿ, ತೆಗೆ; ಕರಿ: ಆನೆ; ಹಯ: ಕುದುರೆ; ಕಡಿ: ಕತ್ತರಿಸು; ಬಿಸುಟು: ಹೊರಹಾಕು; ಹೊದ್ದು: ಆವರಿಸು, ಮುಸುಕು; ಅಳವಿ: ಯುದ್ಧ;

ಪದವಿಂಗಡಣೆ:
ಮಡಿದ +ಕರಿಗಳ +ಕಾಯವನು +ನಿ
ಟ್ಟೊಡಲ +ತುರಗ್+ಅಂಗಳನು +ಮುಗ್ಗಿದ
ಕೆಡೆದ +ತೇರಿನ +ಗಾಲಿಗಳ+ ಕೊಂಡಿಟ್ಟನಾ +ಭೀಮ
ಎಡೆಯಲ್+ಆ+ ಕರಿ+ಒಡಲನ್+ಆ+ ಹಯದ್
ಒಡಲನ್+ಆ+ ರಥ +ಚಕ್ರವನು +ಕಡಿ
ಕಡಿದು +ಬಿಸುಟನು +ಹೊದ್ದಿದನು +ಕಟ್ಟಳವಿಯಲಿ +ಕರ್ಣ

ಅಚ್ಚರಿ:
(೧) ಕಾಯ, ಒಡಲು; ತುರಗ, ಹಯ; ಗಾಲಿ, ಚಕ್ರ – ಸಮಾನಾರ್ಥಕ ಪದ

ಪದ್ಯ ೩೮: ದುರ್ಯೋಧನನು ಪರಿವಾರದವರನ್ನು ಹೇಗೆ ರಂಜಿಸಿದನು?

ಅಂಗ ಚಿತ್ತವನಿತ್ತು ಮೊದಲಿನ
ಪುಂಗವನ ಪತಿಕರಿಸಿ ಹಿಂಡಿನ
ವಂಗಡದ ಗೋಪಾಲನಿಕರಕೆ ಕೊಟ್ಟನುಡುಗೊರೆಯ
ಹಿಂಗಿದವು ತುರು ಬೇಟೆಯಾಡಿ ಮೃ
ಗಂಗಳಿಗೆ ಮದ್ದರೆದು ಕಡಿಭಾ
ಗಂಗಲನು ಕೊಡಿಸಿದನು ಪರಿವಾರಕೆ ವಿನೋದದಲಿ (ಅರಣ್ಯ ಪರ್ವ, ೧೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಗೋವಳರ ಪ್ರಮುಖನಿಗೆ ತನ್ನ ಮೈ ಮೇಲಿನ ಆಭರಣಗಳನ್ನು ಕೊಟ್ಟು ಮನ್ನಿಸಿ, ಬೇರೆ ಬೇರೆ ಹಿಂಡುಗಳ ಗೋಪಾಲಕರಿಗೆ ಉಡುಗೊರೆಯನ್ನು ಕೊಟ್ಟನು. ಬೇಟೆಯಾಡಿ ಮೃಗಗಳನ್ನು ಕೊಂದು, ಪರಿವಾರದವರಿಗೆ ಅವುಗಳ ಭಾಗವನ್ನು ಹಂಚಿದನು.

ಅರ್ಥ:
ಅಂಗ: ದೇಹದ ಭಾಗ; ಚಿತ್ತ: ಮನಸ್ಸು; ಮೊದಲು: ಆದಿ; ಪುಂಗವ: ಎತ್ತು, ಗೂಳಿ, ಒಡೆಯ; ಪತಿಕರಿಸು: ದಯೆತೋರು, ಅನುಗ್ರಹಿಸು; ಹಿಂಡು: ಗುಂಪು, ಸಮೂಹ; ಅಂಗ: ಭಾಗ; ಗೋಪಾಲಕ: ದನಗಾಹಿ, ಗೊಲ್ಲ; ನಿಕರ: ಗುಂಪು; ಉಡುಗೊರೆ: ಕಾಣಿಕೆ, ಬಳುವಳಿ; ಹಿಂಗು: ಕಡಮೆಯಾಗು; ತುರು: ಗೋವು; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಮೃಗ: ಪ್ರಾನಿ; ಮದ್ದು: ಔಷಧಿ, ವಿಷ; ಎರೆ: ಸುರಿ, ಹೊಯ್ಯು; ಕಡಿ: ತುಂಡು; ಭಾಗ: ಪಾಲು; ಕೊಡಿಸು: ನೀಡು; ಪರಿವಾರ: ಬಂಧುಜನ; ವಿನೋದ: ಸಂತಸ;

ಪದವಿಂಗಡಣೆ:
ಅಂಗ +ಚಿತ್ತವನಿತ್ತು +ಮೊದಲಿನ
ಪುಂಗವನ +ಪತಿಕರಿಸಿ+ ಹಿಂಡಿನವ್
ಅಂಗಡದ +ಗೋಪಾಲ+ನಿಕರಕೆ+ ಕೊಟ್ಟನ್+ಉಡುಗೊರೆಯ
ಹಿಂಗಿದವು +ತುರು +ಬೇಟೆಯಾಡಿ+ ಮೃ
ಗಂಗಳಿಗೆ +ಮದ್ದರೆದು +ಕಡಿ+ಭಾ
ಗಂಗಳನು+ ಕೊಡಿಸಿದನು +ಪರಿವಾರಕೆ +ವಿನೋದದಲಿ

ಅಚ್ಚರಿ:
(೧) ಅಂಗ, ಪುಂಗ – ಪ್ರಾಸ ಪದ

ಪದ್ಯ ೩೩: ಧರ್ಮರಾಯನು ಕೃಷ್ಣನನ್ನು ಹೇಗೆ ಹೊಗಳಿದನು?

ಕಂಗಳನುಜರು ಚಿತ್ತನೀವೆ
ನ್ನಂಗವಣೆಗಿನ್ನೇನು ಭಯವಾ
ವಂಗದಲಿ ನಂಬೆಹೆವಲೇ ನಿಮ್ಮಂಘ್ರಿಪಂಕಜವ
ಸಂಗರದ ಜಯ ನಿಮ್ಮದಲ್ಲಿಯ
ಭಂಗ ನಿಮ್ಮದು ಭಕ್ತಜನದನು
ಸಂಗಿ ನೀವಿರಲೇನು ನಮಗರಿದೆಂದನಾ ಭೂಪ (ಸಭಾ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನನ್ನ ತಮ್ಮಂದಿರು ನನಗೆ ಕಣ್ಣುಗಳಾಗಿದ್ದರೆ, ನೀನು ನನ್ನ ಮನಸ್ಸು, ಚಿತ್ತವಾಗಿರುವೆ, ಹೀಗಿರುವಾಗ ನನ್ನ ಮಾರ್ಗಕ್ಕೆ ಏನು ಭಯ. ನಿನ್ನ ಪಾದಕಮಲಗಳನ್ನು ನಂಬಿದ್ದೇನೆ, ಯುದ್ಧದಲ್ಲಿ ಜಯವಾದರೂ ನೀವೆ ಕಾರಣ, ಸೋಲಾದರೂ ನೀವೆ ಕಾರಣ, ಭಕ್ತರ ಸಂಗದಲ್ಲೇ ಇರುವ ನೀವು ಇರಲು ನಮಗೆ ಯಾವುದು ತಾನೆ ಅಸಾಧ್ಯವಾದುದು ಎಂದು ಧರ್ಮರಾಯನು ಕೃಷ್ಣನಿಗೆ ಹೇಳಿದನು.

ಅರ್ಥ:
ಕಂಗಳು: ಕಣ್ಣು, ನಯನ; ಚಿತ್ತ: ಮನಸ್ಸು; ಅನುಜ:ತಮ್ಮ; ಅಂಗವಣೆ: ರೀತಿ; ಭಯ: ಭೀತಿ; ಅಂಗ: ರೀತಿ, ಮಾರ್ಗ; ನಂಬು: ವಿಶ್ವಾಸವಿಡು; ಅಂಘ್ರಿ: ಪಾದ; ಪಂಕಜ: ಕಮಲ; ಸಂಗರ: ಯುದ್ಧ; ಜಯ: ಗೆಲುವು; ಭಂಗ: ಸೋಲು; ಭಕ್ತ: ಆರಾಧಕ; ಜನ: ಮನುಷ್ಯ, ಗುಂಪು; ಸಂಗ: ಒಡನಾಟ; ಅರಿ: ತಿಳಿ; ಭೂಪ: ರಾಜ;

ಪದವಿಂಗಡಣೆ:
ಕಂಗಳ್+ಅನುಜರು +ಚಿತ್ತ+ ನೀವ್
ಎನ್ನ್+ಅಂಗವಣೆಗಿನ್+ಏನು +ಭಯವಾವ್
ಅಂಗದಲಿ +ನಂಬಿಹೆವಲೇ +ನಿಮ್ಮ್+ಅಂಘ್ರಿ+ಪಂಕಜವ
ಸಂಗರದ+ ಜಯ +ನಿಮ್ಮದಲ್ಲಿಯ
ಭಂಗ+ ನಿಮ್ಮದು +ಭಕ್ತಜನದ್+ಅನು
ಸಂಗಿ +ನೀವಿರಲ್+ಏನು +ನಮಗ್+ಅರಿದ್+ಎಂದನಾ +ಭೂಪ

ಅಚರಿ:
(೧) ಅಂಗ, ಸಂಗ, ವಂಗ, ಭಂಗ, ಕಂಗ – ಪ್ರಾಸ ಪದಗಳು ಪ್ರತಿ ಸಾಲಿನ ಮೊದಲನೆ ಪದ

ಪದ್ಯ ೩೪: ನಾರದರು ಹೋದ ಬಳಿಕ ಪಾಂಡವರು ಏನು ಮಾತಾಡಿದರು?

ಮಂಗಳವು ನಿಮಗೆಂದು ಹಂಸೆಯ
ಬೆಂಗೆ ಹಾಯ್ದನು ಬಳಿಕ ನಭದೊಳ
ಭಂಗ ಮುನಿಯಡಗಿದನು ತಮ್ಮೊಳಗೆಂದರೀ ನೃಪರು
ಅಂಗನಾ ವಿಷಯದಲಿ ಸೀಮಾ
ಸಂಗತಿಯ ಸೇರಿಸಿದನೈ ಮುನಿ
ಪುಂಗವನ ಕರುಣದಲಿ ಗದುಗಿನ ವೀರನಾರಯಣ (ಆದಿ ಪರ್ವ, ೧೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ನಾರದರು, “ನಿಮಗೆ ಮಂಗಳವಾಗಲಿ” ಎಂದು ಹೇಳಿ ಹಂಸೆಯ ಮಾರ್ಗವಾಗಿ (ಆಗಸದಲ್ಲಿ) ಅದೃಷ್ಯರಾದರು, ಇತ್ತ ಪಾಂಡವರು, ತಮ್ಮಲ್ಲಿ ಸ್ತ್ರೀವಿಷಯದಲ್ಲಿ ನಮ್ಮ ವರ್ತನೆಯ ಎಲ್ಲೆಯನ್ನು ನಾರದರ ಮುಖಾಂತರ ಪರಮಾತ್ಮನು ತೋರಿಸಿದನು ಎಂದು ಮಾತಾಡಿಕೊಂಡರು.

ಅರ್ಥ:
ಮಂಗಳ:ಶುಭ, ಒಳ್ಳೆಯ; ಹಂಸ: ಒಂದು ಜಾತಿಯ ಪಕ್ಷಿ; ಬೆಂಗಡೆ: ಬೆನ್ನಿನ ಭಾಗ, ಹಿಂಬದಿ; ಬಳಿಕ: ನಂತರ; ನಭ: ಆಗಸ; ಅಭಂಗ: ಸೋಲಿಲ್ಲದವನು, ಭಂಗವಿಲ್ಲದ ಸ್ಥಿತಿ; ಅಡಗು: ಮರೆಮಾಚು, ಅವಿತುಕೊಳ್ಳು; ನೃಪ: ರಾಜ; ಅಂಗನ: ಸ್ತ್ರೀ; ವಿಷಯ: ಬಯಕೆಯ ವಸ್ತು; ಸೀಮೆ: ಎಲ್ಲೆ, ಗಡಿ; ಸಂಗತಿ: ವಿಚಾರ; ಸೇರಿಸು: ಜೊತೆಗೂಡು; ಮುನಿ: ಋಷಿ; ಪುಂಗವ: ಶ್ರೇಷ್ಠ; ಕರುಣ: ದಯೆ;

ಪದವಿಂಗಡಣೆ:
ಮಂಗಳವು +ನಿಮಗ್+ಎಂದು+ ಹಂಸೆಯ
ಬೆಂಗೆ +ಹಾಯ್ದನು +ಬಳಿಕ+ ನಭದೊಳ್
ಅಭಂಗ +ಮುನಿ+ಅಡಗಿದನು +ತಮ್ಮೊಳಗ್+ಎಂದರ್+ಈ+ ನೃಪರು
ಅಂಗನಾ +ವಿಷಯದಲಿ+ ಸೀಮಾ
ಸಂಗತಿಯ +ಸೇರಿಸಿದನೈ +ಮುನಿ
ಪುಂಗವನ+ ಕರುಣದಲಿ+ ಗದುಗಿನ +ವೀರನಾರಯಣ

ಅಚ್ಚರಿ:
(೧) ನಾರದರು ಹೇಳಿದುದನ್ನು ಪರಮಾತ್ಮನೆ ಹೇಳಿರುವುದು ಎಂದು ಯೋಚಿಸುವ ಪರಿ
(೨) ಅಂಗ, ಭಂಗ, ಸಂಗ, ಪುಂಗ – ಗ ಕಾರದಿಂದ ಕೊನೆಗೊಳ್ಳುವ ಕೆಲ ಪದಗಳು
(೩) ಸೀಮಾ ಸಂಗತಿಯ ಸೇರಿಸಿದನು – “ಸ” ಕಾರದ ಮೂರು ಪದಗಳು

ಪದ್ಯ ೫೦: ಧೃಷ್ಟದ್ಯುಮ್ನನು ದ್ರೌಪದಿಗೆ ರಾಜರನ್ನು ಪರಿಚಯಿಸುವ ಮೊದಲು ಏನೆಂದು ಹೇಳಿದನು?

ತಂಗಿ ನೋಡೌ ತಾಯೆ ನಿನ್ನಯ
ಕಂಗಳೊಲಿವರೆ ಚಿತ್ತವಾರ್ಧಿತ
ರಂಗದಲಿ ತೂಗುವರೆ ತೋರುವೆನವನಿಪಾಲಕರ
ಇಂಗಿತದಲವರಂತರಂಗವ
ನಂಗವಟ್ಟದ ಬಳಕೆಯನು ಬಹಿ
ರಂಗದಲಿನೀನರಿಯೆನುತ ನುಡಿದನು ನಿಜಾನುಜೆಗೆ (ಆದಿ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ತನ್ನ ತಂಗಿ ಬಳಿ ಹೋಗೆ, “ತಂಗಿ, ತಾಯೆ ನೋಡು, ನಿನ್ನ ಕಂಗಳಿಗೆ ಈ ರಾಜರು ಒಲಿವರೆ?,ನಿನ್ನ ಮನಸ್ಸಿನ ರಂಗದಲ್ಲಿ ಇವರು ಸರಿಯಾಗಿ ನಿಲ್ಲುವರೆ? ನಾನು ನಿನಗೆ ಈ ಅವನಿಪಾಲರ ಪರಿಚಯ ಮಾಡಿಕೊಡುತ್ತೇನೆ, ನಿನ್ನ ಇಂಗಿತ ಅವರ ಅಂತರಂವನ್ನು ಹೊರನೋಟದಿಂದ ಅವರ್ ಅಂಗ ಸೌಷ್ಠವನ್ನು ನಿರ್ಧರಿಸು, ಎಂದು ತನ್ನ ತಂಗಿಗೆ ಹೇಳಿದನು.

ಅರ್ಥ:
ತಂಗಿ: ಅನುಜೆ, ಸೋದರಿ; ನೋಡು: ವೀಕ್ಷಿಸು; ತಾಯೆ: ಮಾತೆ;ಕಂಗಳು: ಕಣ್ಣು, ನಯನ; ಒಲಿವರೆ: ಮೆಚ್ಚುವರೆ, ಇಷ್ಟ; ಚಿತ್ತ: ಮನಸ್ಸು; ರಂಗ: ಸ್ಥಳ; ತೂಗುವರೆ: ಸರಿಯಾಗುವರೆ; ತೋರುವೆ: ತೋರಿಸು, ಪರಿಚಯಿಸು; ಅವನಿಪಾಲ: ರಾಜ; ಇಂಗಿತ: ಇಚ್ಛೆ; ಅಂತರಂಗ: ಒಳಮನಸ್ಸು; ಅಂಗ: ಭಾಗ; ಅಂಗವಟ್ಟ: ಮೈಕಟ್ಟು, ಅಂಗಸೌಷ್ಠವ; ಬಳಕೆ: ಉಪಯೋಗ; ಬಹಿರಂಗ: ಹೊರಗೆ; ಅರಿ: ತಿಳಿ; ನುಡಿ: ಮಾತಾಡು;

ಪದವಿಂಗಡಣೆ:
ತಂಗಿ +ನೋಡೌ +ತಾಯೆ +ನಿನ್ನಯ
ಕಂಗಳ್+ಒಲಿವರೆ+ ಚಿತ್ತ+ವಾರ್ಧಿತ
ರಂಗದಲಿ+ ತೂಗುವರೆ+ ತೋರುವೆನ್+ಅವನಿಪಾಲಕರ
ಇಂಗಿತದಲ್+ಅವರ್+ಅಂತರಂಗವನ್
ಅಂಗವಟ್ಟದ+ ಬಳಕೆಯನು +ಬಹಿ
ರಂಗದಲಿ+ನೀನ್+ಅರಿ+ಎನುತ+ ನುಡಿದನು+ ನಿಜಾನುಜೆಗೆ

ಅಚ್ದ್ಚರಿ:
(೧) ತಂಗಿ, ಅನುಜೆ – ಸಮಾನಾರ್ಥಕ ಪದ, ಪದ್ಯದ ಮೊದಲ ಹಾಗು ಕೊನೆ ಪದ
(೨) ನೋಡೌ, ನುಡಿ – ನೋಡಿ, ಮಾತಾಡು – ಮೊದಲ ಹಾಗು ಕೊನೆಯ ೨ ಪದ
(೩) ತ, ನ ಪದಗಳ ಮಿಲನ – ತಂಗಿ ನೋಡೌ ತಾಯೆ ನಿನ್ನಯ
(೪) ಜೋಡಿ ಪದಗಳು – “ತ” – ತೂಗುವರೆ ತೋರುವೆನ; “ಬ”- ಬಳಕೆಯನು ಬಹಿರಂಗ; “ನ” – ನುಡಿದನು ನಿಜಾನುಜೆಗೆ
(೫) ರಂಗ, ಅಂತರಂಗ, ಬಹಿರಂಗ, ಅಂಗ – ಂಗ ದಿಂದ ಕೊನೆಗೊಳ್ಳುವ ಪದಗಳು
(೬) ವಿರುದ್ಧ ಪದ – ಅಂತರಂಗ, ಬಹಿರಂಗ