ಪದ್ಯ ೭೮: ಅಭಿಮನ್ಯುವನ್ನು ಯಾರು ಹರಸಿದರು?

ವಿಭವವೈವಡಿಯಾಗೆ ಸದ್ವಿಜ
ಸಭೆಯನಾರಾಧಿಸಿದನವನೀ
ವಿಭುಗಳಿತ್ತರು ಮುಯ್ಗಳುಡುಗೊರೆ ರತ್ನಭೂಷಣವ
ಅಭವಸನ್ನಿಭ ವೀರನಾಗೆಂ
ದಿಭಗಮನೆಯರು ಕೃಷ್ಣನರಸಿಯ
ರಭಿಜನಾಮಲ ತಿಲಕನನು ಹರಸಿದರು ಹರುಷದಲಿ (ವಿರಾಟ ಪರ್ವ, ೧೧ ಸಂಧಿ, ೭೮ ಪದ್ಯ)

ತಾತ್ಪರ್ಯ:
ವೈಭವವು ಒಂದಕ್ಕೆ ಐದಾಯಿತು. ಬ್ರಾಹ್ಮಣ ಸಭೆಯನ್ನು ಯುಧಿಷ್ಠಿರನು ಆರಾಧಿಸಿದನು. ರಾಜರು ವಧೂ ವರರಿಗೆ ರತ್ನಾಭರಣಗಳನ್ನು ಮುಯ್ಯಿ ಮಾಡಿದರು. ಅಭಿಮನ್ಯುವು ಶ್ರೀಕೃಷ್ಣನ ಪತ್ನಿಯರಿಗೆ ನಮಸ್ಕರಿಸಿದನು. ಅವರು ಶಿವನ ಹೋಲುವ ಅಸಮಾನ ವೀರನಾಗು ಎಂದು ಉತ್ತಮ ಕುಲಭೂಷಣನಾದ ಅಭಿಮನ್ಯುವನ್ನು ಆಶೀರ್ವದಿಸಿದರು.

ಅರ್ಥ:
ವಿಭವ: ಸಿರಿ, ಸಂಪತ್ತು; ಐವಡಿ: ಐದು ಪಟ್ಟು; ದ್ವಿಜ: ಬ್ರಾಹ್ಮಣ; ಸಭೆ: ಓಲಗ, ದರ್ಬಾರು; ಆರಾಧಿಸು: ಪೂಜಿಸು; ಅವನೀ: ಭೂಮಿ; ವಿಭು: ಒಡೆಯ; ಇತ್ತು: ನೀಡು; ಉಡುಗೊರೆ: ಕಾಣಿಕೆ; ರತ್ನ: ಬೆಲೆಬಾಳುವ ಮಣಿ; ಭೂಷಣ: ಅಲಂಕರಿಸುವುದು, ಶೃಂಗರಿಸುವುದು; ಅಭವ: ಹುಟ್ಟಿಲ್ಲದುದು, ಬ್ರಹ್ಮ, ಶಿವ; ಸನ್ನಿಭ: ಸದೃಶ; ವೀರ: ಪರಾಕ್ರಮ; ಇಭಗಮನೆ:ಆನೆಯಂತೆ ಮಂದವಾದ ನಡಿಗೆ ಉಳ್ಳವಳು; ಅರಸಿ: ರಾಣಿ; ಅಭಿಜನ: ವಂಶ, ಪರಿಜನ; ಅಮಲ: ನಿರ್ಮಲ; ತಿಲಕ: ಶ್ರೇಷ್ಠ; ಹರಸು: ಆಶೀರ್ವದಿಸು; ಹರುಷ: ಸಂತಸ;

ಪದವಿಂಗಡಣೆ:
ವಿಭವವ್+ಐವಡಿಯಾಗೆ +ಸದ್ವಿಜ
ಸಭೆಯನ್+ಆರಾಧಿಸಿದನ್+ಅವನೀ
ವಿಭುಗಳ್+ಇತ್ತರು +ಮುಯ್ಗಳ್+ಉಡುಗೊರೆ +ರತ್ನ+ಭೂಷಣವ
ಅಭವಸನ್ನಿಭ +ವೀರನಾಗೆಂದ್
ಇಭಗಮನೆಯರು +ಕೃಷ್ಣನ್+ಅರಸಿಯರ್
ಅಭಿಜನಾಮಲ+ ತಿಲಕನನು +ಹರಸಿದರು +ಹರುಷದಲಿ

ಅಚ್ಚರಿ:
(೧) ಆಶೀರ್ವದಿಸುವ ಪರಿ – ಅಭವಸನ್ನಿಭ ವೀರನಾಗೆಂದಿಭಗಮನೆಯರು ಕೃಷ್ಣನರಸಿಯರಭಿಜನಾಮಲ ತಿಲಕನನು ಹರಸಿದರು

ಪದ್ಯ ೩೮: ದುರ್ಯೋಧನನು ಪರಿವಾರದವರನ್ನು ಹೇಗೆ ರಂಜಿಸಿದನು?

ಅಂಗ ಚಿತ್ತವನಿತ್ತು ಮೊದಲಿನ
ಪುಂಗವನ ಪತಿಕರಿಸಿ ಹಿಂಡಿನ
ವಂಗಡದ ಗೋಪಾಲನಿಕರಕೆ ಕೊಟ್ಟನುಡುಗೊರೆಯ
ಹಿಂಗಿದವು ತುರು ಬೇಟೆಯಾಡಿ ಮೃ
ಗಂಗಳಿಗೆ ಮದ್ದರೆದು ಕಡಿಭಾ
ಗಂಗಲನು ಕೊಡಿಸಿದನು ಪರಿವಾರಕೆ ವಿನೋದದಲಿ (ಅರಣ್ಯ ಪರ್ವ, ೧೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಗೋವಳರ ಪ್ರಮುಖನಿಗೆ ತನ್ನ ಮೈ ಮೇಲಿನ ಆಭರಣಗಳನ್ನು ಕೊಟ್ಟು ಮನ್ನಿಸಿ, ಬೇರೆ ಬೇರೆ ಹಿಂಡುಗಳ ಗೋಪಾಲಕರಿಗೆ ಉಡುಗೊರೆಯನ್ನು ಕೊಟ್ಟನು. ಬೇಟೆಯಾಡಿ ಮೃಗಗಳನ್ನು ಕೊಂದು, ಪರಿವಾರದವರಿಗೆ ಅವುಗಳ ಭಾಗವನ್ನು ಹಂಚಿದನು.

ಅರ್ಥ:
ಅಂಗ: ದೇಹದ ಭಾಗ; ಚಿತ್ತ: ಮನಸ್ಸು; ಮೊದಲು: ಆದಿ; ಪುಂಗವ: ಎತ್ತು, ಗೂಳಿ, ಒಡೆಯ; ಪತಿಕರಿಸು: ದಯೆತೋರು, ಅನುಗ್ರಹಿಸು; ಹಿಂಡು: ಗುಂಪು, ಸಮೂಹ; ಅಂಗ: ಭಾಗ; ಗೋಪಾಲಕ: ದನಗಾಹಿ, ಗೊಲ್ಲ; ನಿಕರ: ಗುಂಪು; ಉಡುಗೊರೆ: ಕಾಣಿಕೆ, ಬಳುವಳಿ; ಹಿಂಗು: ಕಡಮೆಯಾಗು; ತುರು: ಗೋವು; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಮೃಗ: ಪ್ರಾನಿ; ಮದ್ದು: ಔಷಧಿ, ವಿಷ; ಎರೆ: ಸುರಿ, ಹೊಯ್ಯು; ಕಡಿ: ತುಂಡು; ಭಾಗ: ಪಾಲು; ಕೊಡಿಸು: ನೀಡು; ಪರಿವಾರ: ಬಂಧುಜನ; ವಿನೋದ: ಸಂತಸ;

ಪದವಿಂಗಡಣೆ:
ಅಂಗ +ಚಿತ್ತವನಿತ್ತು +ಮೊದಲಿನ
ಪುಂಗವನ +ಪತಿಕರಿಸಿ+ ಹಿಂಡಿನವ್
ಅಂಗಡದ +ಗೋಪಾಲ+ನಿಕರಕೆ+ ಕೊಟ್ಟನ್+ಉಡುಗೊರೆಯ
ಹಿಂಗಿದವು +ತುರು +ಬೇಟೆಯಾಡಿ+ ಮೃ
ಗಂಗಳಿಗೆ +ಮದ್ದರೆದು +ಕಡಿ+ಭಾ
ಗಂಗಳನು+ ಕೊಡಿಸಿದನು +ಪರಿವಾರಕೆ +ವಿನೋದದಲಿ

ಅಚ್ಚರಿ:
(೧) ಅಂಗ, ಪುಂಗ – ಪ್ರಾಸ ಪದ

ಪದ್ಯ ೫೮: ದ್ರೌಪದಿಯು ತನ್ನ ಅಳಲನ್ನು ಹೇಗೆ ತೋಡಿಕೊಂಡಳು?

ಕಂಡನೇ ಧೃತರಾಷ್ಟ್ರನನು ಕೈ
ಕೊಂಡನೇ ವನದೀಕ್ಷೆಯನು ಪಿತ
ನಂಡಲೆದು ಕೃಷ್ಣಾಜಿನವನುಡುಗೊರೆಯನಿತ್ತನಲೆ
ಚಂಡಿಗೊಂಡರೆ ನನಗೆ ನಿನ್ನಿನ
ಭಂಡತನ ಬಾರದಲೆ ವನವಾ
ಖಂಡಲಪ್ರಸ್ಥವಲೆ ನಿನಗಿನ್ನೆಂದಳಿಂದುಮುಖಿ (ಸಭಾ ಪರ್ವ, ೧೭ ಸಂಧಿ, ೫೮ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೋಪವನ್ನು ಹೊರಹಾಕುತ್ತಾ, ಅರಸನು ಧೃತರಾಷ್ಟ್ರನನ್ನು ಹೋಗಿ ನೋಡಿದನೇ? ವನವಾಸದ ದೀಕ್ಷೆಯನ್ನು ಒಪ್ಪಿಕೊಂಡನೇ? ದೊಡ್ಡಪ್ಪನಿಂದ ಕೃಷ್ಣಾಜಿನವನ್ನು ಬೆನ್ನುಹತ್ತಿ ಬೇಡಿ ಉಡುಗೊರೆಯಾಗಿ ಪಡೆದನೇ? ನಾನೀಗ ಹಠವಿಡಿದರೂ ನಿನ್ನಿನ ನಾಚಿಕೆಗೇಡು ಪ್ರಸಂಗ ಬರುವಂತಿಲ್ಲವಲ್ಲ. ರಾಜಾ ಇನ್ನು ಮುಂದೆ ನಿನಗೆ ಕಾಡೆ ಇಂದ್ರಪ್ರಸ್ಥನಗರ ಎಂದು ದ್ರೌಪದಿ ತನ್ನ ಕೋಪವನ್ನು ಹೊರಹಾಕಿದಳು.

ಅರ್ಥ:
ಕಂಡು: ನೋಡು; ಕೈಕೊಳ್ಳು: ನಿರ್ಧರಿಸು, ಮಾಡಲು ಅಣಿಯಾಗು; ವನ: ಕಾಡು; ದೀಕ್ಷೆ: ನಿರ್ಧಾರ, ಶಪಥ; ಪಿತ: ತಂದೆ; ಅಂಡಲೆ: ಕಾಡು; ಕೃಷ್ಣಾಜಿನ: ಜಿಂಕೆಯ ಚರ್ಮ; ಉಡುಗೊರೆ: ಕಾಣಿಕೆ, ಬಳುವಳಿ; ಚಂಡಿ: ಹಟಮಾರಿತನ, ಛಲ; ಭಂಡ: ನಾಚಿಕೆ, ಲಜ್ಜೆ; ಬಾರದು: ದೊರೆಯದು; ಅಖಂಡ: ಎಲ್ಲಾ, ಪೂರ್ಣ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಕಂಡನೇ +ಧೃತರಾಷ್ಟ್ರನನು +ಕೈ
ಕೊಂಡನೇ +ವನದೀಕ್ಷೆಯನು +ಪಿತ
ನಂಡಲೆದು +ಕೃಷ್ಣಾಜಿನವನ್+ಉಡುಗೊರೆಯನ್+ಇತ್ತನಲೆ
ಚಂಡಿಗೊಂಡರೆ +ನನಗೆ +ನಿನ್ನಿನ
ಭಂಡತನ +ಬಾರದಲೆ +ವನವ
ಅಖಂಡಲಪ್ರಸ್ಥವಲೆ +ನಿನಗಿನ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಹಿಂದೆಬಿದ್ದನು ಎಂದು ಹೇಳಲು – ಪಿತನಂಡಲೆದು ಕೃಷ್ಣಾಜಿನವನುಡುಗೊರೆಯನಿತ್ತನಲೆ

ಪದ್ಯ ೨: ಕೃಷ್ಣನಿಗೆ ದುರ್ಯೋಧನನು ಏನು ಮಾಡಿಸಿದ?

ಶೌರಿ ಕಾಣಿಸಿಕೊಂಡನಾ ಗಾಂ
ಧಾರಿಯನು ಸುಕ್ಷೇಮ ಕುಶಲವ
ನಾರಯಿದು ಕಾಣಿಕೆಯ ಕೊಂಡನು ಕೊಟ್ಟನುಡುಗೊರೆಯ
ಕೌರವನು ತನ್ನರಮನೆಗೆ ಹರಿ
ಬಾರದಿರನೆಂದಖಿಳ ವಿಧದಲಿ
ಸಾರ ವಸ್ತುವ ತರಿಸಿಯಾರೋಗಣೆಗೆ ಮಾಡಿಸಿದ (ಉದ್ಯೋಗ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಗಾಂಧಾರಿಯನ್ನು ಎದುರು ನೋಡುತ್ತಲೇ ಅವರ ಯೋಗಕ್ಷೇಮವನ್ನು ವಿಚಾರಿಸಿ ಅವನು ತಂದಿದ್ದ ಉಡೊಗೊರೆಯನ್ನು ನೀಡಿದನು. ಗಾಂಧಾರಿಯು ಕೃಷ್ಣನಿಗೆ ಕಾಣಿಕೆಯನ್ನು ಸಲ್ಲಿಸಲು ಕೃಷ್ಣನು ಅದನ್ನು ಸ್ವೀಕರಿಸಿದನು. ದುರ್ಯೋಧನನು ಕೃಷ್ಣನನ್ನು ತನ್ನ ಅರಮನೆಗೆ ಕರೆಯುವುದಕ್ಕೆ ಇಚ್ಛೆಯಿರಲಿಲ್ಲ ಹಾಗಾಗಿ ಧೃತರಾಷ್ಟ್ರನ ಅರಮನೆಯಲ್ಲೇ ಅವನು ಒಳ್ಳೆಯ ಪದಾರ್ಥಗಳನ್ನೊಳಗೊಂಡ ಅಡಿಗೆಯನ್ನು ಮಾಡಿಸಿದ.

ಅರ್ಥ:
ಶೌರಿ: ವಿಷ್ಣು, ಕೃಷ್ಣ; ಕಾಣಿಸು: ತೋರು, ಗೋಚರ; ಕ್ಷೇಮ: ಕುಶಲ, ಚೆನ್ನಾಗಿರುವ; ಕುಶಲ: ಸರಿಯಾದ, ಕ್ಷೇಮ; ಅರಿ: ತಿಳಿ; ಕಾಣಿಕೆ: ಉಡುಗೊರೆ; ಉಡುಗೊರೆ: ಬಳುವಳಿ; ಕೌರವ: ದುರ್ಯೋಧನ; ಅರಮನೆ: ರಾಜರ ವಾಸಸ್ಥಳ; ಹರಿ: ಕೃಷ್ಣ; ಬಾರದಿರು: ಆಗಮಿಸದಿರು, ಬರದಿರು; ಅಖಿಳ: ಎಲ್ಲಾ; ವಿಧ: ರೀತಿ; ಸಾರ: ಶ್ರೇಷ್ಠವಾದ, ಉತ್ಕೃಷ್ಟವಾದ, ತಿರುಳು; ವಸ್ತು: ಸಾಮಾನು, ಪದಾರ್ಥ; ತರಿಸಿ: ತಂದು; ಆರೋಗಣೆ: ಭೋಜನ;

ಪದವಿಂಗಡಣೆ:
ಶೌರಿ +ಕಾಣಿಸಿಕೊಂಡನಾ+ ಗಾಂ
ಧಾರಿಯನು +ಸುಕ್ಷೇಮ +ಕುಶಲವನ್
ಅರಯಿದು +ಕಾಣಿಕೆಯ +ಕೊಂಡನು+ ಕೊಟ್ಟನ್+ಉಡುಗೊರೆಯ
ಕೌರವನು +ತನ್ನರಮನೆಗೆ +ಹರಿ
ಬಾರದಿರನೆಂದ್+ಅಖಿಳ +ವಿಧದಲಿ
ಸಾರ +ವಸ್ತುವ +ತರಿಸಿ+ಆರೋಗಣೆಗೆ+ ಮಾಡಿಸಿದ

ಅಚ್ಚರಿ:
(೧) ಶೌರಿ, ಹರಿ – ಕೃಷ್ಣನಿಗೆ ಬಳಸಿದ ಹೆಸರುಗಳು
(೨) ‘ಕ’ ಕಾರದ ಸಾಲು ಪದಗಳು – ಕಾಣಿಕೆಯ ಕೊಂಡನು ಕೊಟ್ಟನುಡುಗೊರೆಯ ಕೌರವನು