ಪದ್ಯ ೩೧: ಘೋಷಯಾತ್ರೆಗೆ ಯಾರು ಹೊರಟರು?

ಅರಸ ಕೇಳೈ ಹತ್ತು ಸಾವಿರ
ಕರಿಘಟಾವಳಿಯೆಂಟು ಸಾವಿರ
ವರ ವರೂಥವು ರಾವುತರ ವಾಘೆಯಲಿ ಹಯ ಕೋಟಿ
ಬಿರುದಿನಗ್ಗದ ಭಟರ ಸಂಖ್ಯೆಯ
ನರಿಯೆ ನಿಂತಿದು ಘೋಷಯಾತ್ರೆಯ
ಪರುಠವಣೆಗೊದಗಿದ ಚತುರ್ಬಲವವನಿಪಾಲಕನ (ಅರಣ್ಯ ಪರ್ವ, ೧೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವನ ಘೋಷಯಾತ್ರೆಗೆ ಹತ್ತುಸಾವಿರ ಆನೆಗಳು, ಎಂಟು ಸಾವಿರ ರಥಗಳು, ಲೆಕ್ಕವಿಲ್ಲದಷ್ಟು ರಾವುತರು, ಎಣಿಕೆಯಿಲ್ಲದಷ್ಟು ಬಲಿಷ್ಠರಾದ ಕಾಲಾಳುಗಳು, ಸಿದ್ಧರಾಗಿ ಹೊರಟರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಹತ್ತು: ದಶ; ಸಾವಿರ: ಸಹಸ್ರ; ಕರಿ: ಆನೆ; ಕರಿಘಟಾವಳಿ: ಆನೆಯ ಸಮೂಹ; ವರ: ಶ್ರೇಷ್ಠ; ವರೂಥ: ತೇರು, ರಥ; ರಾವುತ: ಅಶ್ವಾರೋಹಿ; ವಾಘೆ: ಲಗಾಮು; ಹಯ: ಕುದುರೆ; ಕೋಟಿ: ಅಸಂಖ್ಯತ; ಬಿರು: ಬಿರುಸಾದುದು; ಅಗ್ಗ: ಶ್ರೇಷ್ಠ; ಭಟ: ಯುದ್ಧದಲ್ಲಿ ಕಾದುವವನು, ಸೈನಿಕ; ಸಂಖ್ಯೆ:ಎಣಿಕೆ; ಅರಿ: ತಿಳಿ; ನಿಂತು: ನಿಲ್ಲು; ಘೋಷ: ಗಟ್ಟಿಯಾದ ಶಬ್ದ; ಯಾತ್ರೆ: ಪ್ರಯಾಣ; ಪರುಠವ: ವಿಸ್ತಾರ, ಹರಹು; ಒದಗು: ಲಭ್ಯ, ದೊರೆತುದು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಅವನಿಪಾಲಕ: ರಾಜ; ಅವನಿ: ಭೂಮಿ; ಪಾಲಕ: ರಕ್ಷಸುವ;

ಪದವಿಂಗಡಣೆ:
ಅರಸ+ ಕೇಳೈ +ಹತ್ತು +ಸಾವಿರ
ಕರಿಘಟಾವಳಿ+ಎಂಟು +ಸಾವಿರ
ವರ +ವರೂಥವು +ರಾವುತರ +ವಾಘೆಯಲಿ +ಹಯ +ಕೋಟಿ
ಬಿರುದಿನ್+ಅಗ್ಗದ +ಭಟರ +ಸಂಖ್ಯೆಯನ್
ಅರಿಯೆ+ನಿಂತಿದು +ಘೋಷಯಾತ್ರೆಯ
ಪರುಠವಣೆಗ್+ಒದಗಿದ +ಚತುರ್ಬಲವ್+ಅವನಿಪಾಲಕನ

ಅಚ್ಚರಿ:
(೧) ಚತುರ್ಬಲ ಸೈನ್ಯದ ವಿಸ್ತಾರ – ಹತ್ತು ಸಾವಿರ ಕರಿಘಟಾವಳಿ, ಎಂಟು ಸಾವಿರ ವರ ವರೂಥವು ರಾವುತರ ವಾಘೆಯಲಿ ಹಯ ಕೋಟಿ

ಪದ್ಯ ೫೪: ಪ್ರಾತಿಕಾಮಿಕನು ಧರ್ಮರಾಯ ಏನನ್ನು ಸೋತನೆಂದು ಹೇಳಿದನು?

ಮೊದಲಲರ್ಥವ ಹೆಸರುಗೊಂಡೊ
ಡ್ಡಿದನು ಸೋತನು ಮರಳಿ ಮಗುಳೊ
ಡ್ಡಿದನು ಹೇರಾಳದಲಿ ಧನವನು ಕರಿಘಟಾವಳಿಯ
ಕುದುರೆ ರಥ ನಿಮ್ಮಡಿಯ ಮೇಳದ
ಸುದತಿಯರನೊಡ್ಡಿದನು ಸೋತನು
ತುದಿಯಲನುಜರನೊಡ್ಡಿ ಸೋತನು ತಾಯೆ ಕೇಳೆಂದ (ಸಭಾ ಪರ್ವ, ೧೫ ಸಂಧಿ, ೫೪ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ದ್ರೌಪದಿಯನ್ನುದ್ದೇಶಿಸಿ, ತಾಯೆ ಕೇಳಿ, ಮೊದಲು ಇಷ್ಟು ಇಂತಿಷ್ಟು ಅಂತ ಹಣವನ್ನು ಪಣಕ್ಕೆ ಒಡ್ದಿದನು, ಅದೆಲ್ಲವನ್ನು ಸೋತನು, ನಂತರ ಅತಿ ಹೆಚ್ಚಿನ ಹಣವನ್ನೊಡ್ಡಿದನು. ಬಳಿಕ ಆನೆ, ಕುದುರೆ ರಥಗಳನ್ನೂ ಬಳಿಕ ನಿಮ್ಮ ಮೇಳದ ಸಖಿಯರನ್ನೂ ಒಡ್ಡಿ ಸೋತನು. ಬಳಿಕ ತನ್ನ ತಮ್ಮಂದಿರನ್ನು ಒಡ್ಡಿ ಸೋತನು ಎಂದು ಹೇಳಿದನು.

ಅರ್ಥ:
ಮೊದಲು: ಮುಂಚೆ; ಅರ್ಥ: ಐಶ್ವರ್ಯ, ಧನ; ಹೆಸರು: ನಾಮ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಮರಳಿ: ನಂತರ; ಮಗುಳು: ಮತ್ತೆ; ಹೇರಾಳ: ಅಧಿಕ; ಕರಿ: ಆನೆ; ಕರಿಘಟಾವಳಿ: ಆನೆಗಳ ಗುಂಪು; ಕುದುರೆ: ಅಶ್ವ; ರಥ: ಬಂಡಿ; ಮೇಳ: ಗುಂಪು; ಸುದತಿ: ಹೆಣ್ಣು; ಸೋಲು: ಪರಾಭವ; ತುದಿ: ಕೊನೆ; ಅನುಜ: ತಮ್ಮ; ತಾಯೆ: ಮಾತೆ;

ಪದವಿಂಗಡಣೆ:
ಮೊದಲಲ್+ಅರ್ಥವ +ಹೆಸರುಗೊಂಡ್
ಒಡ್ಡಿದನು +ಸೋತನು+ ಮರಳಿ+ ಮಗುಳ್
ಒಡ್ಡಿದನು +ಹೇರಾಳದಲಿ +ಧನವನು +ಕರಿಘಟಾವಳಿಯ
ಕುದುರೆ +ರಥ +ನಿಮ್ಮಡಿಯ +ಮೇಳದ
ಸುದತಿಯರನ್+ಒಡ್ಡಿದನು +ಸೋತನು
ತುದಿಯಲ್+ಅನುಜರನ್+ಒಡ್ಡಿ +ಸೋತನು +ತಾಯೆ +ಕೇಳೆಂದ

ಅಚ್ಚರಿ:
(೧) ಮೊದಲಲ್, ತುದಿಯಲ್ – ೧, ೬ ಸಾಲಿನ ಮೊದಲ ಪದ
(೨) ಒಡ್ಡಿ – ೪ ಬಾರಿ ಪ್ರಯೋಗ

ಪದ್ಯ ೪೦: ಅರ್ಜುನನು ಕೌರವ ಸೈನ್ಯವನ್ನು ಹೇಗೆ ಕೆಡಹಿದನು?

ಅರಸ ಕೇಳು ಜಯದ್ರಥನ ಮೋ
ಹರದ ಮಧ್ಯದೊಳಂದು ಸಿಲುಕದ
ನರನ ರಥವೀ ಹೊಳ್ಳುಗರ ಹೋರಟೆಗೆ ಹೆದರುವುದೇ
ಕರಿಘಟಾವಳಿಗೊಂದು ಶರವಾ
ತುರಗದಳಕೊಂದಂಬು ಬಳಿಕೆರ
ಡೆರಡು ಶರದಲಿ ಕೆಡಹಿದನು ಕಾಲಾಳುತೇರುಗಳ (ಕರ್ಣ ಪರ್ವ, ೨೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಮಹಾರಾಜ ಕೇಳು, ಹಿಂದೆ ಜಯದ್ರಥನ ಯುದ್ಧದಲ್ಲಿ ಅವನ ಸಮಸ್ತ ಸೈನ್ಯಕ್ಕೆ ಸಿಕ್ಕಿಹಾಕಿಕೊಳ್ಳದ ಅರ್ಜುನನ ರಥವು ಇಂದು ಈ ಜೊಳ್ಳು ಸೈನಿಕರ ಹೋರಾಟಕ್ಕೆ ಬೆದರುತ್ತದೆಯೇ? ಅರ್ಜುನನ ಒಂದು ಬಾಣವು ಆನೆಗಳ ಗುಂಪನ್ನು, ಇನ್ನೊಂದು ಬಾಣವು ಕುದುರೆಗಳ ಗುಂಪನ್ನು ಮತ್ತೆರಡು ಬಾಣಗಳು ಕಾಲಾಳುಗಳು ಮತ್ತು ರಥಿಕರನ್ನು ನಾಟಿ ಅವರೆಲ್ಲರನ್ನು ಕೆಡಹಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮೋಹರ: ಯುದ್ಧ; ಮಧ್ಯ: ನಡುವೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ನರ: ಅರ್ಜುನ; ರಥ: ಬಂಡಿ; ಹೊಳ್ಳು:ನಿಷ್ಪ್ರಯೋಜಕ, ಹೊಟ್ಟು, ತೌಡು; ಹೋರಟೆ: ಕಾಳಗ, ಯುದ್ಧ; ಹೆದರು: ಭಯಬೀಳು; ಕರಿ: ಆನೆ; ಘಟಾವಳಿ: ಗುಂಪು; ಶರ: ಬಾಣ; ತುರಗ: ಕುದುರೆ; ಅಂಬು: ಬಾಣ; ಬಳಿಕ: ನಂತರ; ಕೆಡಹು: ನಾಶಮಾಡು; ಕಾಲಾಳು: ಸೈನಿಕರು; ತೇರು: ರಥ;

ಪದವಿಂಗಡಣೆ:
ಅರಸ +ಕೇಳು +ಜಯದ್ರಥನ+ ಮೋ
ಹರದ +ಮಧ್ಯದೊಳ್+ಅಂದು+ ಸಿಲುಕದ
ನರನ+ ರಥವ್+ಈ+ ಹೊಳ್ಳುಗರ+ ಹೋರಟೆಗೆ +ಹೆದರುವುದೇ
ಕರಿಘಟಾವಳಿಗ್+ಒಂದು+ ಶರವಾ
ತುರಗದಳಕ್+ಒಂದ್+ಅಂಬು+ ಬಳಿಕ್+
ಎರಡೆರಡು +ಶರದಲಿ+ ಕೆಡಹಿದನು+ ಕಾಲಾಳು+ತೇರುಗಳ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಳ್ಳುಗರ ಹೋರಟೆಗೆ ಹೆದರುವುದೇ
(೨) ಶರ, ಅಂಬು – ಸಮನಾರ್ಥಕ ಪದ