ಪದ್ಯ ೨೯: ಕೌರವ ಸೈನ್ಯವು ಅರ್ಜುನನನ್ನು ಹೇಗೆ ಮುತ್ತಿತು?

ನೋಡಿ ನರನುದ್ದಂಡತನವನು
ತೋಡುತೈದನೆ ತುರಗ ಲೀಲೆಗೆ
ಖೇಡಕುಳಿಯನು ಶೌರ್ಯಗರ್ವಿತನೈ ಶಿವಾ ಎನುತ
ಕೂಡೆ ಮಸಗಿತು ರಿಪುಚತುರ್ಬಲ
ಜೋಡು ಮಾಡಿತು ಕಡಹದಮರರು
ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ (ದ್ರೋಣ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನ ದರ್ಪ ಅಹಂಕಾರಗಳನ್ನಿಷ್ಟು ನೋಡಿ, ಕುದುರೆಗಳಿಗಾಗಿ ಗುಳಿಯನ್ನು ತೋಡುತ್ತಿದ್ದಾನೆ. ಶೌರ್ಯದ ಗರ್ವ ಎಷ್ಟಿದ್ದೀತು, ಶಿವ ಶಿವಾ ಎನ್ನುತ್ತಾ ಕೌರವ ಸೈನ್ಯವು ಒಟ್ಟಾಗಿ, ದೇವತೆಗಳು ಕಡೆಯುತ್ತಿದ್ದ ಮಂದರ ಗಿರಿಯನ್ನು ಅಲೆಗಳು ಮುತ್ತಿದಂತೆ ಅರ್ಜುನನನ್ನು ಮುತ್ತಿತು.

ಅರ್ಥ:
ನೋಡು: ವೀಕ್ಷಿಸು; ನರ: ಅರ್ಜುನ; ಉದ್ದಂಡ: ದರ್ಪ, ಗರ್ವ; ತೋಡು: ಅಗೆದಿರುವ ಸ್ಥಳ, ಹಳ್ಳ; ಐದು: ಬಂದು ಸೇರು; ತುರಗ: ಅಶ್ವ; ಲೀಲೆ: ಆನಂದ, ಸಂತೋಷ; ಖೇಡ: ಹಳ್ಳಿ, ಗ್ರಾಮ; ಕುಳಿ: ಗುಂಡಿ, ಗುಣಿ, ಹಳ್ಳ; ಶೌರ್ಯ: ಪರಾಕ್ರಮ; ಗರ್ವ: ಅಹಂಕಾರ; ಮಸಗು: ಹರಡು; ಕೆರಳು; ತಿಕ್ಕು; ರಿಪು: ವೈರಿ; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಜೋಡು: ಜೊತೆ; ಅಮರ: ದೇವತೆ; ಹೂಡು: ರಚಿಸು, ನಿರ್ಮಿಸು; ಅದ್ರಿ: ಬೆಟ್ಟ; ಅಂಬುಧಿ: ಸಾಗರ; ತೆರೆ: ತೆಗೆ, ಬಿಚ್ಚು; ಕವಿ: ಆವರಿಸು;

ಪದವಿಂಗಡಣೆ:
ನೋಡಿ +ನರನ್+ಉದ್ದಂಡತನವನು
ತೋಡುತ್+ಐದನೆ+ ತುರಗ +ಲೀಲೆಗೆ
ಖೇಡ+ಕುಳಿಯನು +ಶೌರ್ಯಗರ್ವಿತನೈ+ ಶಿವಾ +ಎನುತ
ಕೂಡೆ+ ಮಸಗಿತು +ರಿಪು+ಚತುರ್ಬಲ
ಜೋಡು +ಮಾಡಿತು +ಕಡಹದ್+ಅಮರರು
ಹೂಡಿದ್+ಅದ್ರಿಯನ್+ಅಂಬುಧಿಯ +ತೆರೆಮಾಲೆ +ಕವಿದಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಹದಮರರು ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ

ಪದ್ಯ ೩೯: ಸುಪ್ರತೀಕ ಗಜವು ಬಾಣಗಳಿಂದ ಹೇಗೆ ಕಂಡಿತು?

ಮತ್ತೆ ರಥವರುವತ್ತು ಸಾವಿರ
ಮುತ್ತಿಕೊಂಡುದು ಗಜವನಾ ಭಗ
ದತ್ತ ಬಳಲಿದನವಧಿಯಿಲ್ಲದೆ ಶರವ ನೆರೆ ತುಳುಕಿ
ಮೆತ್ತಿದವು ಶರವಿಭದ ಮೆಯ್ಯಲಿ
ಬೆತ್ತ ಬೆಳೆದದ್ರಿಯವೊಲಿದ್ದುದು
ಮತ್ತಗಜ ನೊಂದರಿಯದನಿಬರ ಬಾಣ ಹತಿಗಳಲಿ (ದ್ರೋಣ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಒಡನೆ ಅರವತ್ತು ಸಾವಿರ ರಥಗಳು ಸುಪ್ರತೀಕವನ್ನು ಸುತ್ತಲೂ ಮುತ್ತಿದವು. ಲೆಕ್ಕವಿಲ್ಲದಷ್ಟು ಬಾಣಗಳನ್ನು ಪ್ರಯೋಗಿಸಿ ಭಗದತ್ತನು ಬಳಲಿದನು. ಆನೆಯ ಮೈಯ್ಯಲ್ಲಾ ಬಾಣಗಳು ನೆಟ್ಟು ಅದು ಬಿದಿರು ಬೆಳೆದ ಬೆಟ್ಟದಂತೆ ಕಾಣಿಸುತ್ತಿದ್ದರೂ ಅದು ಬಾಣಗಳ ಹೊಡೆತಕ್ಕೆ ನೋಯಲಿಲ್ಲ.

ಅರ್ಥ:
ರಥ: ಬಂಡಿ; ಸಾವಿರ: ಸಹಸ್ರ; ಮುತ್ತು: ಆವರಿಸು; ಗಜ: ಆನೆ; ಬಳಲು: ಆಯಾಸಗೊಳ್ಳು; ಅವಧಿ: ಕಾಲ; ಶರ: ಬಾಣ; ನೆರೆ: ಗುಂಪು; ತುಳುಕು: ತುಂಬು, ಚೆಲ್ಲು; ಮೆತ್ತು: ಬಳಿ, ಲೇಪಿಸು; ಶರ: ಬಾಣ: ಇಭ: ಆನೆ; ಮೈ: ತನು; ಬೆತ್ತ: ಬಿದಿರು; ಬೆಳೆದ: ದೊಡ್ಡದಾಗು; ಅದ್ರಿ: ಬೆಟ್ಟ; ಮತ್ತ: ಅಮಲು; ಗಜ: ಆನೆ; ನೊಂದು: ನೋವು; ಅರಿ: ತಿಳಿ; ಅನಿಬರು: ಅಷ್ಟು ಜನ; ಬಾಣ: ಅಂಬು; ಹತಿ: ಪೆಟ್ಟು, ಹೊಡೆತ;

ಪದವಿಂಗಡಣೆ:
ಮತ್ತೆ +ರಥವ್+ಅರುವತ್ತು +ಸಾವಿರ
ಮುತ್ತಿಕೊಂಡುದು+ ಗಜವನ್+ಆ+ ಭಗ
ದತ್ತ +ಬಳಲಿದನ್+ಅವಧಿಯಿಲ್ಲದೆ+ ಶರವ+ ನೆರೆ +ತುಳುಕಿ
ಮೆತ್ತಿದವು +ಶರ+ವಿಭದ +ಮೆಯ್ಯಲಿ
ಬೆತ್ತ +ಬೆಳೆದ್+ಅದ್ರಿಯವೊಲ್+ಇದ್ದುದು
ಮತ್ತಗಜ +ನೊಂದ್+ಅರಿಯದ್+ಅನಿಬರ +ಬಾಣ +ಹತಿಗಳಲಿ

ಅಚ್ಚರಿ:
(೧) ರೂಪಕದ ಬಳಕೆ – ಮೆತ್ತಿದವು ಶರವಿಭದ ಮೆಯ್ಯಲಿಬೆತ್ತ ಬೆಳೆದದ್ರಿಯವೊಲಿದ್ದುದುಮತ್ತಗಜ

ಪದ್ಯ ೫೧: ದ್ರುಪದನು ಏನು ಹೇಳುತ್ತಾ ದ್ರೋಣನೆದುರು ಬಂದನು?

ತೊಲಗು ವಿಪ್ರಾಧಮ ಸುಯೋಧನ
ಬಲದೊಳಗೆ ಬಹು ಭಾಷೆತನದಲಿ
ಗಳಹಿ ಬಂದರೆ ಹಿಡಿಯ ಬಲ್ಲೈ ಧರ್ಮನಂದನನ
ಗಳದ ಸತ್ವವನರಿಯದದ್ರಿಗೆ
ತಲೆಯನೊಡ್ಡುವರೇ ವೃಥಾ ಕಳ
ಕಳಿಸಿ ನುಡಿವರೆ ಮಾನ್ಯರೆನುತಿದಿರಾದನಾ ದ್ರುಪದ (ದ್ರೋಣ ಪರ್ವ, ೨ ಸಂಧಿ, ೫೧ ಪದ್ಯ)

ತಾತ್ಪರ್ಯ:
ದ್ರುಪದನು ಮುನ್ನುಗ್ಗುತ್ತಾ, ಎಲವೋ ನೀಚ ಬ್ರಾಹ್ಮಣ, ಸುಯೋಧನನ ಓಲಗದಲ್ಲಿ ಅತಿಶಯವಾದ ಮಾತಿನಿಂದ ಬೊಗಳಿ ಬಮ್ದರೆ ಯುಧಿಷ್ಥಿರನನ್ನು ಹಿಡಿಯಬಲ್ಲೆಯಾ? ಕುತ್ತಿಗೆಯ ಬಲವೆಷ್ಟೆಂದು ಅರಿತುಕೊಳ್ಳದೇ ಬೆಟ್ಟಕ್ಕೆ ತಲೆಯನ್ನು ಒಡ್ಡುತ್ತಾರೆಯೇ? ಮಾನವಂತರು ವೃಥಾಬಾಯಿಗೆ ಬಂದುದನ್ನು ಆಡಬಹುದೇ? ಎಂದು ದ್ರುಪದನು ದ್ರೋಣನ ಎದುರಿಗೆ ಬಂದನು.

ಅರ್ಥ:
ತೊಲಗು: ಹೊರನಡೆ; ವಿಪ್ರ: ಬ್ರಾಹ್ಮಣ; ಅಧಮ: ಕೀಳು; ಬಲ: ಸೈನ್ಯ; ಬಹು: ಹಲವಾರು; ಭಾಷೆ: ನುಡಿ; ಗಳಹು: ಪ್ರಲಾಪಿಸು, ಹೇಳು; ಬಂದು: ಆಗಮಿಸು; ಹಿಡಿ: ಗ್ರಹಿಸು; ಬಲ್ಲೈ: ತಿಳಿ; ನಂದನ: ಮಗ; ಗಳ: ಗಂಟಲು, ಕುತ್ತಿಗೆ; ಸತ್ವ: ಸಾರ; ಅರಿ: ತಿಳಿ; ಅದ್ರಿ: ಬೆಟ್ಟ; ತಲೆ: ಶಿರ; ಒಡ್ಡು: ನೀಡು; ವೃಥ: ಸುಮ್ಮನೆ; ಕಳಕಳ: ಗೊಂದಲ; ನುಡಿ: ಮಾತಾಡು; ಮಾನ್ಯ: ಶ್ರೇಷ್ಠ; ಇದಿರು: ಎದುರು;

ಪದವಿಂಗಡಣೆ:
ತೊಲಗು +ವಿಪ್ರ+ಅಧಮ +ಸುಯೋಧನ
ಬಲದೊಳಗೆ ಬಹು +ಭಾಷೆತನದಲಿ
ಗಳಹಿ +ಬಂದರೆ +ಹಿಡಿಯ +ಬಲ್ಲೈ +ಧರ್ಮ+ನಂದನನ
ಗಳದ +ಸತ್ವವನ್+ಅರಿಯದ್+ಅದ್ರಿಗೆ
ತಲೆಯನ್+ಒಡ್ಡುವರೇ +ವೃಥಾ +ಕಳ
ಕಳಿಸಿ +ನುಡಿವರೆ+ ಮಾನ್ಯರೆನುತ್+ಇದಿರಾದನಾ +ದ್ರುಪದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಳದ ಸತ್ವವನರಿಯದದ್ರಿಗೆ ತಲೆಯನೊಡ್ಡುವರೇ

ಪದ್ಯ ೪೪: ಯುದ್ಧ ಭೂಮಿಯು ಹೇಗೆ ಕಂಗೊಳಿಸಿತು?

ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು (ದ್ರೋಣ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ನಿಸ್ಸಾಳಗಳು ಪರ್ವತಗಳ ತಲೆಸಿಡಿಯುವಂತೆ ಸದ್ದುಮಾಡಿದರು. ವಿವಿಧ ವಾದ್ಯಗಳು ಸಿಡಿಲಿನಂತೆ ಸದ್ದುಮಾಡಿದವು. ಕಾಲಾಳುಗಳು ಬಂದರು. ಭೂಮಿಕುಸಿಯುವಂತೆ ರಥಗಳು ನುಗ್ಗಿದವು. ಆನೆಗಳು ಸಾಲುಸಾಲಾಗಿ ನಿಂತವು. ಕುದುರೆಗಳು ಕುಣಿಯುತ್ತಿದ್ದವು.

ಅರ್ಥ:
ಸೂಳು: ಆರ್ಭಟ, ಬೊಬ್ಬೆ; ಬೊಬ್ಬಿರಿ: ಗರ್ಜನೆ; ನಿಸ್ಸಾಳ: ಚರ್ಮ ವಾದ್ಯ; ಚಯ: ಗುಂಪು; ಅದ್ರಿ: ಬೆಟ್ಟ; ಉರು: ಹೆಚ್ಚು; ಹೆಡತಲೆ: ತಲೆಯ ಹಿಂಭಾಗ; ಸೀಳು: ಚೂರು; ಸಿಡಿಲು: ಅಶನಿ; ಏಳಿಗೆ: ಹೆಚ್ಚಳ; ಎದ್ದು: ಮೇಲೆ ಹೋಗು; ವಿವಿಧ: ಹಲವಾರು; ವಾದ್ಯ; ಸಂಗೀತದ ಸಾಧನ; ಆಳು: ಸೈನಿಕ; ನೆರೆ:ಗುಂಪು; ನೆಲ: ಭೂಮಿ; ಕುಸಿ: ಜಾರು; ರಥ: ಬಂಡಿ; ಜಾಲ: ಗುಂಪು; ಜಡಿ: ಗದರಿಸು, ಬೆದರಿಸು; ಆನೆ: ಕರಿ; ಸಾಲು: ಗುಂಪು; ಮೆರೆ: ಹೊಳೆ; ಕುಣಿ: ನರ್ತಿಸು; ಕೂಡೆ: ಜೊತೆ; ವಾಜಿ: ಕುದುರೆ;

ಪದವಿಂಗಡಣೆ:
ಸೂಳವಿಸಿ +ಬೊಬ್ಬಿರಿದವ್+ಉರು +ನಿ
ಸ್ಸಾಳ+ಚಯವ್+ಅದ್ರಿಗಳ+ ಹೆಡತಲೆ
ಸೀಳೆ +ಸಿಡಿಲ್+ಏಳಿಗೆಯಲ್+ಎದ್ದವು +ವಿವಿಧ +ವಾದ್ಯ+ರವ
ಆಳು +ನೆರೆದುದು +ನೆಲ +ಕುಸಿಯೆ +ರಥ
ಜಾಲ +ಜಡಿದುದು +ಹಣ್ಣಿದ್+ಆನೆಯ
ಸಾಲು +ಮೆರೆದುವು +ಕುಣಿವುತಿದ್ದುವು+ ಕೂಡೆ +ವಾಜಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ನಿಸ್ಸಾಳಚಯವದ್ರಿಗಳ ಹೆಡತಲೆ ಸೀಳೆ

ಪದ್ಯ ೪೮: ಸೈನ್ಯದ ಓಡಾಟವು ಹೇಗಿತ್ತು?

ಜಲಧಿಗಳ ಕುದಿದುದು ನಭೋಮಂ
ಡಲವ ಸೆಳೆದುದು ಸುರನದಿಯ ಮು
ಕ್ಕುಳಿಸಿತಖಿಲಾದ್ರಿಗಳ ನುಂಗಿತು ದಿವವನಳುಕಿಸಿತು
ನೆಲನ ಸವೆಸಿತು ನೇಸರಿನ ಕಂ
ಗಳನು ಕದುಕಿತು ನೆನೆಯ ಬಾರದು
ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ (ಭೀಷ್ಮ ಪರ್ವ, ೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸೈನ್ಯದ ಕಾಲು ತುಳಿತದಿಂದ ಎದ್ದ ಧೂಳು ಸಮುದ್ರಗಳನ್ನು ಕುಡಿದಿತು, ಆಕಾಶ ಮಂಡಲವನ್ನೆಳೆಯಿತು. ಗಂಗಾನದಿಯನ್ನು ಮುಕ್ಕುಳಿಸಿತು. ಎಲ್ಲಾ ಪರ್ವತಗಳನ್ನು ನುಂಗಿ ಆಕಾಶವನ್ನು ಬೆದರಿಸಿತು. ನೆಲವು ಸವೆಯಿತು. ಸೂರ್ಯನ ಕಣ್ಣುಗಳೊಳಹೊಕ್ಕಿತು, ಇದೇನು ಬ್ರಹ್ಮನು ಪ್ರಳಯ ರುದ್ರನಾದನೇ ಎನ್ನಿಸಿತು.

ಅರ್ಥ:
ಜಲಧಿ: ಸಾಗರ; ಕುಡಿ: ಪಾನಮಾಡು; ನಭ: ಆಗಸ; ಮಂಡಲ: ಗುಂಡಾಗಿರುವ; ಸೆಳೆ: ಆಕರ್ಷಿಸು; ಸುರನದಿ; ಗಂಗಾನದಿ; ಮುಕ್ಕುಳಿಸು: ಹೊರಹಾಕು; ಅಖಿಲ: ಎಲ್ಲಾ; ಅದ್ರಿ: ಬೆಟ್ಟ; ನುಂಗು: ಕಬಳಿಸು; ದಿವ: ಆಕಾಶ, ದಿನ; ಅಳುಕಿಸು: ಹೆದರು; ನೆಲ: ಭೂಮಿ; ಸವೆ: ನಶಿಸು; ನೇಸರ: ಸೂರ್ಯ; ಕಂಗಳು: ಕಣ್ಣು; ಕದುಕು: ಕೊಕ್ಕಿನಿಂದ ಕುಕ್ಕು, ಕಡಿ; ನೆನೆ: ಜ್ಞಾಪಿಸು; ನಳಿನಭವ: ಬ್ರಹ್ಮ; ಹರ: ಶಿವ; ಉಚ್ಚಳಿಸು: ಮೇಲಕ್ಕೆ ಹಾರು; ಪದ: ಪಾದ; ಧೂಳಿ: ಮಣ್ಣಿನ ಕಣಗಳು;

ಪದವಿಂಗಡಣೆ:
ಜಲಧಿಗಳ +ಕುಡಿದುದು +ನಭೋಮಂ
ಡಲವ +ಸೆಳೆದುದು +ಸುರನದಿಯ +ಮು
ಕ್ಕುಳಿಸಿತ್+ಅಖಿಲ+ಅದ್ರಿಗಳ+ ನುಂಗಿತು+ ದಿವವನ್+ಅಳುಕಿಸಿತು
ನೆಲನ +ಸವೆಸಿತು +ನೇಸರಿನ+ಕಂ
ಗಳನು +ಕದುಕಿತು +ನೆನೆಯ +ಬಾರದು
ನಳಿನಭವ+ ಹರನಾದನ್+ಎನಲ್+ಉಚ್ಚಳಿಸೆ +ಪದಧೂಳಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೆಲನ ಸವೆಸಿತು ನೇಸರಿನ ಕಂಗಳನು ಕದುಕಿತು ನೆನೆಯ ಬಾರದು
ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ

ಪದ್ಯ ೫೦: ಕೀಚಕನೇಕೆ ಸಂತಸಪಟ್ಟನು?

ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ (ವಿರಾಟ ಪರ್ವ, ೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ತನ್ನ ಮೇಲೆ ಕುಡಿನೋಟವನ್ನು ಬೀರಿದರೆ ಅದು ತನ್ನ ಪುಣ್ಯವೆಂದು ಭಾವಿಸಿ ಮನಸ್ಸಿನಲ್ಲೇ ವಿಜಯಧ್ವಜವನ್ನು ಹಾರಿಸಿದನು. ಮನಸ್ಸಿನಲ್ಲಿ ಸೈರಂಧ್ರಿಯ ಮೇಲಿನ ಹುಚ್ಚು ಹೇಚ್ಚಾಗುತ್ತಿರಲು ಮನೆಯನ್ನು ಸೇರಿಕೊಂಡನು, ಇತ್ತ ಸೂರ್ಯನು ಪಶ್ಚಿಮದ ಬೆಟ್ಟಗಳಲ್ಲಿ ಮುಳುಗಿದನು.

ಅರ್ಥ:
ಮನ: ಮನಸ್ಸು; ಗುಡಿಗಟ್ಟು: ಸಂತೋಷಗೊಳ್ಳು; ಮಾನಿನಿ: ಹೆಣ್ಣು; ಕರುಣೆ: ದಯೆ; ಅಪಾಂಗ:ಕಡೆಗಣ್ಣು; ರಸಭಾಜನ: ಸುಖಕ್ಕೆ ಭಾಗಿಯಾಗುವುದು; ಪುಣ್ಯ: ಸದಾಚಾರ; ಬೀಳ್ಕೊಳು: ತೆರಳು; ಅಗ್ರಜೆ: ಅಕ್ಕ; ಒದಗು: ಲಭ್ಯ, ದೊರೆತುದು; ಮರುಳು: ಹುಚ್ಚು; ಉಬ್ಬು: ಹೆಚ್ಚು; ಹೊಕ್ಕು: ಸೇರು; ಮನೆ: ಆಲಯ; ದಿನಕರ: ಸೂರ್ಯ; ಅಸ್ತ: ಮುಳುಗು; ಅದ್ರಿ: ಬೆಟ್ಟ; ಬೀಡು: ಆವಾಸ, ನೆಲೆ;

ಪದವಿಂಗಡಣೆ:
ಮನದೊಳಗೆ+ ಗುಡಿಗಟ್ಟಿದನು +ಮಾ
ನಿನಿಯ +ಕರುಣಾಪಾಂಗ +ರಸಭಾ
ಜನವು +ಪುಣ್ಯವಲಾ+ಎನುತ +ಬೀಳ್ಕೊಂಡಬ್+ಅಗ್ರಜೆಯ
ಮನದೊಳ್+ಒದವಿದ+ ಮರುಳುತನದ್
ಉಬ್ಬಿನಲಿ +ಹೊಕ್ಕನು +ಮನೆಯನ್+ಇತ್ತಲು
ದಿನಕರಂಗಾಯಿತ್ತು+ ಬೀಡ್+ಅಸ್ತಾಚಲ+ಅದ್ರಿಯಲಿ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ
(೨) ಹುಚ್ಚು ಹೆಚ್ಚಾಯಿತು ಎಂದು ಹೇಳಲು – ಮನದೊಳೊದವಿದ ಮರುಳುತನದುಬ್ಬಿನಲಿ ಹೊಕ್ಕನು ಮನೆಯನ್

ಪದ್ಯ ೩೬: ಹೋರಿಗಳು ಹೇಗೆ ಚರಿಸುತ್ತಿದ್ದವು?

ಬೆಳೆವಿಣಿಲ ಮಿಡಿಗಲವ ಬಾಲದ
ನೆಲಕೆ ನಿಗುರುವ ಗಂಗೆದೊಗಲಿನ
ಹಲಗೆ ಬೆನ್ನಿನ ಸಿಡಿಲಮರಿಯೆನೆ ಮೆರೆವ ಹುಂಕೃತಿಯ
ಕೆಲವಿದಿರುಬರಲದ್ರಿಯದ್ರಿಯ
ಹಳಚುವಂತಿರೆ ಹರಿವ ಹಾರುವ
ಸಲಗನಳ್ಳಿರಿದಾಡುತಿದ್ದವು ಹಿಂಡು ಹಿಂಡಿನಲಿ (ಅರಣ್ಯ ಪರ್ವ, ೧೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಬೆಳೆದ ಡುಬ್ಬ ಅಲುಗಾಡುವ ಕತ್ತು, ಬಾಲ, ಜೋಲು ಬಿದ್ದ ಗಂಗೆದೊಗಲು, ಹಲಗೆ ಬೆನ್ನು, ಸಿಡಿಲಿನ ಮರಿಯೋ ಎನ್ನುವಂತಹ ಗುಟುರು, ಇದಿರು ಪಕ್ಕಕ್ಕೆ ಇನ್ನೊಂದು ಬಂದರೆ ಬೆಟ್ಟವು ಬೆಟ್ಟದೊಡನೆ ಹೋರುತ್ತಿದೆಯೋ ಎನ್ನುವಂತೆ ನುಗ್ಗುವ ಹಾರುವ ಗೂಳಿಗಳು ಹಿಂಡುಗಳಲ್ಲಿ ಚರಿಸುತ್ತಿದ್ದವು.

ಅರ್ಥ:
ಬೆಳೆವಿಣಿಲು:ಬೆಳೆದ ಡುಬ್ಬ; ಮಿಡಿ: ಕಿರಿದು; ಮಿಡಿಗಲ: ಎಳೆಯದಾದ ಗರಿಗೆದೊಗಲು; ಬಾಲ: ಪುಚ್ಛ; ನೆಲ: ಭೂಮಿ; ನಿಗುರು: ಹರಡು, ವ್ಯಾಪಿಸು; ಗಂಗೆ: ಕಂಠ, ಕೊರಳು; ತೊಗಲು: ಚರ್ಮ, ತ್ವಕ್ಕು; ಹಲಗೆ: ಪಲಗೆ, ಮರ; ಬೆನ್ನು: ಹಿಂಭಾಗ; ಸಿಡಿಲ: ಅಶನಿ, ಸೀಳು; ಮೆರೆ: ಹೊಳೆ, ಪ್ರಕಾಶಿಸು; ಹುಂಕೃತಿ: ಗರ್ಜನೆ; ಕೆಲವು: ಸ್ವಲ್ಪ; ಇದಿರು: ಎದುರು; ಅದ್ರಿ: ಬೆಟ್ಟ; ಹಳಚು: ತಾಗು, ಬಡಿ; ಹರಿವ: ಚಲಿಸುವ; ಹಾರುವ: ಎಗರುವ; ಸಲಗ: ಬಲಿಷ್ಠವಾದ ಹೋರಿ, ಗೂಳಿ; ಇರಿದಾಡು: ಹೊಡೆದಾಡು; ಹಿಂಡು: ಗುಂಪು;

ಪದವಿಂಗಡಣೆ:
ಬೆಳೆವಿಣಿಲ+ ಮಿಡಿಗಲವ+ ಬಾಲದ
ನೆಲಕೆ +ನಿಗುರುವ +ಗಂಗೆದೊಗಲಿನ
ಹಲಗೆ +ಬೆನ್ನಿನ +ಸಿಡಿಲ+ಮರಿಯೆನೆ+ ಮೆರೆವ+ ಹುಂಕೃತಿಯ
ಕೆಲವ್+ಇದಿರುಬರಲ್+ಅದ್ರಿ+ಅದ್ರಿಯ
ಹಳಚುವಂತಿರೆ+ ಹರಿವ+ ಹಾರುವ
ಸಲಗನಳ್+ಇರಿದಾಡುತಿದ್ದವು +ಹಿಂಡು +ಹಿಂಡಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಡಿಲಮರಿಯೆನೆ ಮೆರೆವ ಹುಂಕೃತಿಯ; ಕೆಲವಿದಿರುಬರಲದ್ರಿಯದ್ರಿಯಹಳಚುವಂತಿರೆ ಹರಿವ ಹಾರುವಸಲಗನಳ್ಳಿರಿದಾಡುತಿದ್ದವು

ಪದ್ಯ ೮೬: ಭೀಮ ದ್ರೌಪದಿಯರು ರಣರಂಗದಲ್ಲಿ ಯಾವ ಆಟವಾಡಿದರು?

ಕೆಲದ ತಲೆಯದ್ರಿಗಳ ಮೂಳೆಯ
ಹೊಳೆವ ಸಾಲಿನ ಸುಂಟಗೆಯ ತೊಂ
ಗಲಿನ ತೋರಣದೊಟ್ಟಿಲಟ್ಟೆಯ ಕರುಳ ಮಾಲೆಗಳ
ತಿಳಿದ ರಕುತದ ಕೊಳನ ಘನ ಕೊಳು
ಗುಳದ ತೋಪಿನ ನಡುವೆ ಮಾರುತಿ
ಲಲನೆಸಹಿತಾಡಿದನು ಶೋಣಿತವಾರಿಯೋಕುಳಿಯ (ಕರ್ಣ ಪರ್ವ, ೧೯ ಸಂಧಿ, ೮೬ ಪದ್ಯ)

ತಾತ್ಪರ್ಯ:
ಆ ಯುದ್ಧಭೂಮಿಯ ಘೋರತೆಯನ್ನು ವಿವರಿಸುತ್ತಾ, ಎಲ್ಲೆಲ್ಲೂ ತಲೆಗಳು ಬೆಟ್ಟದಂತೆ ಬಿದ್ದಿದ್ದವು, ರಕ್ತಸಿಂಚನದಿಂದ ಹೊಳೆವ ಮೂಲೆಗಳ ಸಾಲು, ಸುಟ್ಟಮಾಂಸದ ಗೊಂಚಲು, ತಲೆಯಿಲ್ಲದ ದೇಹದ ತೋರಣ, ಕರುಳಿನ ಮಾಲೆಗಳು, ತಿಳಿಯಾಗಿ ಹರಿಯುವ ರಕ್ತದ ಝರಿ ಇಂತಹ ರಣರಂಗವೆಂಬ ಉಪವನದಲ್ಲಿ ಭೀಮನು ತನ್ನ ಪತ್ನಿ ದ್ರೌಪದಿಯೊಡನೆ ರಕ್ತದ ಓಕುಳಿಯಾಟವಾಡಿದನು.

ಅರ್ಥ:
ಕೆಲ: ಮಗ್ಗುಲು ಬದಿ; ತಲೆ: ಶಿರ; ಅದ್ರಿ: ಬೆಟ್ಟ; ಮೂಳೆ: ಅಂಗುಲಿ; ಹೊಳೆ: ಪ್ರಕಾಶ; ಸಾಲು: ಆವಳಿ; ಸುಂಟಗೆ: ಸುಟ್ಟ ಮಾಂಸ; ತೊಂಗಲಿನ: ಗೊಂಚಲು, ಕುಚ್ಚ; ತೋರಣ: ವಿಶೇಷ ಸಂದರ್ಭಗಳಲ್ಲಿ ಅಲಂಕಾರಕ್ಕಾಗಿ ಬಾಗಿಲು, ಬೀದಿಗಳಲ್ಲಿ ಕಟ್ಟುವ ತಳಿರು; ಒಟ್ಟಿಲು: ಮೆದೆ, ಗುಂಪು; ಅಟ್ಟೆ: ತಲೆಯಿಲ್ಲದ ದೇಹ; ಕರುಳ: ಪಚನಾಂಗ; ಮಾಲೆ: ಹಾರ; ತಿಳಿ: ನಿರ್ಮಲವಾಗು, ಶುದ್ಧವಾಗು; ರಕುತ: ನೆತ್ತರು; ಕೊಳ: ಸರೋವರ, ಹೊಂಡ; ಘನ: ಶ್ರೇಷ್ಠ, ದೊಡ್ಡ; ಕೊಳುಗುಳ: ಯುದ್ಧ, ಕಾಳಗ; ತೋಪು: ಮರಗಳ ಗುಂಪು; ನಡುವೆ: ಮಧ್ಯ; ಮಾರುತಿ: ಭೀಮ; ಲಲನೆ: ಹೆಂಡತಿ, ಹುಡುಗಿ; ಸಹಿತ: ಜೊತೆ; ಆಡು: ಕ್ರೀಡಿಸು; ಶೋಣಿತ: ರಕ್ತ; ವಾರಿ: ನೀರು; ಓಕುಳಿ: ಬಣ್ಣದ ನೀರು;

ಪದವಿಂಗಡಣೆ:
ಕೆಲದ +ತಲೆ+ಅದ್ರಿಗಳ +ಮೂಳೆಯ
ಹೊಳೆವ+ ಸಾಲಿನ+ ಸುಂಟಗೆಯ+ ತೊಂ
ಗಲಿನ +ತೋರಣದ್+ಒಟ್ಟಿಲ್+ಅಟ್ಟೆಯ +ಕರುಳ +ಮಾಲೆಗಳ
ತಿಳಿದ +ರಕುತದ +ಕೊಳನ +ಘನ +ಕೊಳು
ಗುಳದ+ ತೋಪಿನ +ನಡುವೆ +ಮಾರುತಿ
ಲಲನೆ+ಸಹಿತ+ಆಡಿದನು +ಶೋಣಿತ+ವಾರಿ+ಓಕುಳಿಯ

ಅಚ್ಚರಿ:
(೧) ಯುದ್ಧಭೂಮಿಯ ಭೀಕರತೆಯನು ಉಪವನಕ್ಕೆ ಹೋಲಿಸಿರುವ ಕವಿಯ ಕಲ್ಪನೆ

ಪದ್ಯ ೨೦: ಕ್ಷೇಮಧರ್ಮನ ಮತ್ತು ಭೀಮನ ಕಾಳಗ ಹೇಗಿತ್ತು?

ಸರಳ ಮಳೆಯಲಿ ನೆನೆದು ಕರಿಘಟೆ
ಯುರುಳಿದವು ಕಲ್ಪಾಂತವರುಷದೊ
ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು
ಎರಡು ಸೀಳಾಯ್ತವನ ಕರಿ ಧರೆ
ಗಿರದೆ ದೊಪ್ಪನೆ ಹಾಯ್ದು ಖಾತಿಯೊ
ಳುರವಣಿಸಿದನು ಕ್ಷೇಮಧೂರ್ತಕ ಸೆಳೆದೊಡಾಯುಧದಿ (ಕರ್ಣ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಯುಗಕಾಲದ ಅಂತ್ಯದಲ್ಲಿ ಮಳೆಯಿಂದ ಕೆಳಗುರುಳುವ ಬೆಟ್ಟಗಳಂತೆ ಬಾಣಗಳ ಮಳೆಯಲ್ಲಿ ನೆನೆದು ಆನೆಗಳು ಕೆಳಕ್ಕೆ ಭೂಮಿಯ ಮೇಲೆ ಬಿದ್ದವು. ಕ್ಷೇಮಧೂರ್ತಿಯ ಆನೆ ಎರಡು ಸೀಳಾಯಿತು. ಅವನು ಕೆಳಕ್ಕೆ ಧುಮುಕಿ ಖಡ್ಗವನ್ನೆಳೆದು ಕೋಪದಿಂದ ಭೀಮನ ಮೇಲೆ ನುಗ್ಗಿದನು.

ಅರ್ಥ:
ಸರಳ: ಬಾಣ; ಮಳೆ: ವರ್ಷ; ನೆನೆದು:ಒದ್ದೆಯಾಗು; ಕರಿಘಟೆ: ಆನೆಯ ಗುಂಪು; ಉರುಳು: ಜಾರಿ ಬೀಳು; ಕಲ್ಪಾಂತ: ಯುಗದ ಅಂತ್ಯ; ವರುಷ: ಸಂವತ್ಸರ; ಅದ್ರಿ: ಬೆಟ್ಟ; ವೈರಿ: ರಿಪು; ದಂತಿ: ಆನೆ; ಸೀಳು: ಚೂರು, ತುಂಡು; ಕರಿ: ಆನೆ; ಧರೆ: ಭೂಮಿ; ದೊಪ್ಪನೆ: ಒಮ್ಮೆಲೆ; ಹಾಯ್ದು: ಮೇಲೆ ಬಿದ್ದು; ಖಾತಿ: ಕೋಪ, ಕ್ರೋಧ; ಉರವಣಿಸು: ಆತುರಿಸು; ಸೆಳೆದು: ಎಳೆತ, ಸೆಳೆತ; ಆಯುಧ: ಶಸ್ತ್ರ;

ಪದವಿಂಗಡಣೆ:
ಸರಳ +ಮಳೆಯಲಿ +ನೆನೆದು +ಕರಿಘಟೆ
ಯುರುಳಿದವು+ ಕಲ್ಪಾಂತ+ವರುಷದೊಳ್
ಉರುಳುವ್+ಅದ್ರಿಗಳಂತೆ+ಯೆಸೆದವು+ ವೈರಿ+ದಂತಿಗಳು
ಎರಡು +ಸೀಳಾಯ್ತ್+ಅವನ +ಕರಿ +ಧರೆ
ಗಿರದೆ+ ದೊಪ್ಪನೆ +ಹಾಯ್ದು +ಖಾತಿಯೊಳ್
ಉರವಣಿಸಿದನು +ಕ್ಷೇಮಧೂರ್ತಕ +ಸೆಳೆದೊಡ್+ಆಯುಧದಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಲ್ಪಾಂತವರುಷದೊಳುರುಳುವದ್ರಿಗಳಂತೆ
(೨) ದಂತಿ, ಕರಿ – ಸಮನಾರ್ಥಕ ಪದ

ಪದ್ಯ ೧೨೮: ಸಜ್ಜನರ ಮಾತಿನ ಮಹಿಮೆ ಎಂತಹದು?

ಇನನುದಯಿಸಲಿ ಪಶ್ಚಿಮಾದ್ರಿಯೊ
ಳನಲನೊಮ್ಮೆ ಹಿಮಾಂಶುವಾಗಲಿ
ಕನಕಗಿರಿಗಲ್ಲಾಟವಾಗಲಿ ಪರ್ವತಾಗ್ರದಲಿ
ವನಜ ವಿಕಸಿತವಾದೊಡೆಯು ಸ
ಜ್ಜನರುಗಳು ನುಡೆದೆರಡನಾಡರು
ಮನವಚನಕಾಯದಲಿ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೨೮ ಪದ್ಯ)

ತಾತ್ಪರ್ಯ:
ಸೂರ್ಯನು ಪಶ್ಚಿಮ ಪರ್ವತದ ಕಡೆಯಿಂದ ಹುಟ್ಟಿದರೂ ಹುಟ್ಟಬಹುದು, ಬೆಂಕಿಯು ತಣ್ಣಗಾದರೂ ಆಗಬಹುದು, ಮೇರು ಅಲುಗಾಡಿದರೂ ಆಡಬಹುದು, ಬೆಟ್ಟದ ತುದಿಯಲ್ಲಿ ಕಮಲವು ಅರಳಿದರೂ ಅರಳಬಹುದು, ಆದರೆ ಸಜ್ಜನರು ತ್ರಿಕರಣಪೂರ್ವಕವಾಗಿ ಆಡಿದ ಮಾತಿಗೆ ತಪ್ಪುವುದಿಲ್ಲ.

ಅರ್ಥ:
ಇನ: ಸೂರ್ಯ; ಉದಯಿಸು: ಹುಟ್ಟು; ಪಶ್ಚಿಮ: ಪಡುವಣ; ಅದ್ರಿ: ಬೆಟ್ಟ; ಅನಲ: ಬೆಂಕಿ; ಹಿಮಾಂಶು: ಮಂಜಿನಗಡ್ಡೆ; ಕನಕ: ಚಿನ್ನ; ಗಿರಿ: ಬೆಟ್ಟ; ಅಲ್ಲಾಟ: ಅಲುಗು; ಪರ್ವತ: ಬೆಟ್ಟ; ಅಗ್ರ: ತುದಿ; ವನಜ: ಕಮಲ; ವಿಕಸಿತ: ಹುಟ್ಟು; ಸಜ್ಜನ: ಒಳ್ಳೆಯ ಜನ; ನುಡಿ: ಮಾತು; ಎರಡನಾಡು: ಎರಡು ಮಾತು, ತಪ್ಪುಮಾತು; ಮನ: ಮನಸ್ಸು; ವಚನ: ಮಾತು; ಕಾಯ: ಶರೀರ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಇನನ್+ಉದಯಿಸಲಿ +ಪಶ್ಚಿಮ+ಅದ್ರಿಯೊಳ್
ಅನಲನ್+ಒಮ್ಮೆ +ಹಿಮಾಂಶುವಾಗಲಿ
ಕನಕ+ಗಿರಿಗ್+ಅಲ್ಲಾಟವಾಗಲಿ+ ಪರ್ವತಾಗ್ರದಲಿ
ವನಜ +ವಿಕಸಿತವಾದೊಡೆಯು +ಸ
ಜ್ಜನರುಗಳು +ನುಡೆದ್+ಎರಡನ್+ಆಡರು
ಮನ+ವಚನ+ಕಾಯದಲಿ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಇನನುದಯಿಸಲಿ ಪಶ್ಚಿಮಾದ್ರಿಯೊಳ್, ಅನಲನೊಮ್ಮೆ ಹಿಮಾಂಶುವಾಗಲಿ, ಕನಕಗಿರಿಗಲ್ಲಾಟವಾಗಲಿ, ಪರ್ವತಾಗ್ರದಲಿ ವನಜ ವಿಕಸಿತವಾದೊಡೆಯು
(೨) ವನಜ, ಸಜ್ಜನ – ಪ್ರಾಸ ಪದಗಳು
(೩) ಗಿರಿ, ಅದ್ರಿ, ಪರ್ವತ – ಸಮಾನಾರ್ಥಕ ಪದಗಳು