ಪದ್ಯ ೪೪: ಯುದ್ಧ ಭೂಮಿಯು ಹೇಗೆ ಕಂಗೊಳಿಸಿತು?

ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು (ದ್ರೋಣ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ನಿಸ್ಸಾಳಗಳು ಪರ್ವತಗಳ ತಲೆಸಿಡಿಯುವಂತೆ ಸದ್ದುಮಾಡಿದರು. ವಿವಿಧ ವಾದ್ಯಗಳು ಸಿಡಿಲಿನಂತೆ ಸದ್ದುಮಾಡಿದವು. ಕಾಲಾಳುಗಳು ಬಂದರು. ಭೂಮಿಕುಸಿಯುವಂತೆ ರಥಗಳು ನುಗ್ಗಿದವು. ಆನೆಗಳು ಸಾಲುಸಾಲಾಗಿ ನಿಂತವು. ಕುದುರೆಗಳು ಕುಣಿಯುತ್ತಿದ್ದವು.

ಅರ್ಥ:
ಸೂಳು: ಆರ್ಭಟ, ಬೊಬ್ಬೆ; ಬೊಬ್ಬಿರಿ: ಗರ್ಜನೆ; ನಿಸ್ಸಾಳ: ಚರ್ಮ ವಾದ್ಯ; ಚಯ: ಗುಂಪು; ಅದ್ರಿ: ಬೆಟ್ಟ; ಉರು: ಹೆಚ್ಚು; ಹೆಡತಲೆ: ತಲೆಯ ಹಿಂಭಾಗ; ಸೀಳು: ಚೂರು; ಸಿಡಿಲು: ಅಶನಿ; ಏಳಿಗೆ: ಹೆಚ್ಚಳ; ಎದ್ದು: ಮೇಲೆ ಹೋಗು; ವಿವಿಧ: ಹಲವಾರು; ವಾದ್ಯ; ಸಂಗೀತದ ಸಾಧನ; ಆಳು: ಸೈನಿಕ; ನೆರೆ:ಗುಂಪು; ನೆಲ: ಭೂಮಿ; ಕುಸಿ: ಜಾರು; ರಥ: ಬಂಡಿ; ಜಾಲ: ಗುಂಪು; ಜಡಿ: ಗದರಿಸು, ಬೆದರಿಸು; ಆನೆ: ಕರಿ; ಸಾಲು: ಗುಂಪು; ಮೆರೆ: ಹೊಳೆ; ಕುಣಿ: ನರ್ತಿಸು; ಕೂಡೆ: ಜೊತೆ; ವಾಜಿ: ಕುದುರೆ;

ಪದವಿಂಗಡಣೆ:
ಸೂಳವಿಸಿ +ಬೊಬ್ಬಿರಿದವ್+ಉರು +ನಿ
ಸ್ಸಾಳ+ಚಯವ್+ಅದ್ರಿಗಳ+ ಹೆಡತಲೆ
ಸೀಳೆ +ಸಿಡಿಲ್+ಏಳಿಗೆಯಲ್+ಎದ್ದವು +ವಿವಿಧ +ವಾದ್ಯ+ರವ
ಆಳು +ನೆರೆದುದು +ನೆಲ +ಕುಸಿಯೆ +ರಥ
ಜಾಲ +ಜಡಿದುದು +ಹಣ್ಣಿದ್+ಆನೆಯ
ಸಾಲು +ಮೆರೆದುವು +ಕುಣಿವುತಿದ್ದುವು+ ಕೂಡೆ +ವಾಜಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ನಿಸ್ಸಾಳಚಯವದ್ರಿಗಳ ಹೆಡತಲೆ ಸೀಳೆ

ಪದ್ಯ ೧೦: ಜರಾಸಂಧನು ಬಿಲ್ಲನ್ನು ಎತ್ತಲು ಪಟ್ಟ ವರಸೆ ಎಂತಹುದು?

ಈತ ಕುಸಿದೆತ್ತಿದರೆ ಧನು ಮಾ
ರಾತುದಿವ ನೌಕಿದಡೆ ಕಾರ್ಮುಕ
ವೀತನಾರೆಂದರಿಯದಿವನೌಡೊತ್ತಿ ಮೈಬಲಿದ
ಘಾತಿಯಲಿ ಘಲ್ಲಿಸಿದಡಾ ಧನು
ಸೋತುದೆವೆಯಂತರಕೆ ತೊಲಗದು
ಧಾತುಗುಂದಿದನಳ್ಳಿರಿದವಳ್ಳೆಗಳು ಮಾಗಧನ (ಆದಿ ಪರ್ವ, ೧೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಜರಾಸಂಧನು ಬಿಲ್ಲನ್ನು ಎತ್ತಲು ಕೆಳಕ್ಕೆ ಬಾಗಿದರೆ, ಧನುಸ್ಸು ಅದಕ್ಕೆ ಅವಕಾಶಕೊಡದೆ ಎದುರಾಯಿತು. ಅದನ್ನುಆದುಮಿದರೆ, ಬಿಲ್ಲು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಅವನ ಪ್ರಯತ್ನ ಯಾವ ಪರಿಣಾಮವನ್ನು ಬೀರಲಿಲ್ಲ. ಸಿಟ್ಟಿನಿಂದ ಮೇಲೆ ಬಿದ್ದು ಅಲುಗಾಡಿಸಿದರೆ ಸ್ವಲ್ಪಮಾತ್ರ ಸರಿಯಿತು, ಮೇಲೆ ಬರಲಿಲ್ಲ. ಜರಾಸಂಧನ ಶಕ್ತಿ ಕುಂದಿತು, ಅವನ ಪಕ್ಕೆಗಳು ಸರಿದವು.

ಅರ್ಥ:
ಕುಸಿದು: ಕೆಳಕ್ಕೆ ಬೀಳು; ಧನು: ಧನುಸ್ಸು; ಔಕು: ಅದುಮು, ಒತ್ತು; ಮಾರಾತು: ಎದುರಾಗು; ಕಾರ್ಮುಕ: ಬಿಲ್ಲು; ಔಡು: ಹಲ್ಲಿನಿಂದ ಕಚ್ಚು, ಅಗಿ; ಮೈ: ತನು; ಬಲಿದ: ಬಲಿಷ್ಠ; ಘಾತಿ: ಹೊಡೆತ, ಏಟು; ಘಲ್ಲಿಸು: ಅಲ್ಲಾಡಿಸು; ಸೋತು: ಪರಾಜಯ; ಅಂತರ: ದೂರ; ತೊಲಗು: ಹೋಗು; ಧಾತು:ತೇಜಸ್ಸು, ಅಪ್ಪು; ಕುಂದಿದು: ಕಳೆಹೀನವಾಗು, ಮಂಕಾಗು; ಅಳ್ಳಿರಿ: ಅಲುಗಾಡಿಸು; ಅಳ್ಳೆ: ಪಕ್ಕೆ,

ಪದವಿಂಗಡಣೆ:
ಈತ +ಕುಸಿದ್+ಎತ್ತಿದರೆ +ಧನು +ಮಾ
ರಾತುದ್+ಇವ +ನೌಕಿದಡೆ +ಕಾರ್ಮುಕವ್
ಈತನ್+ಆರೆಂದ್+ಅರಿಯದ್+ಇವನ್+ಔಡೊತ್ತಿ+ ಮೈ+ಬಲಿದ
ಘಾತಿಯಲಿ+ ಘಲ್ಲಿಸಿದಡ್+ಆ+ ಧನು
ಸೋತುದ್+ಎವೆ+ಯಂತರಕೆ+ ತೊಲಗದು
ಧಾತು+ಗುಂದಿದನ್+ಅಳ್ಳಿರಿದವ್+ಅಳ್ಳೆಗಳು+ ಮಾಗಧನ

ಅಚ್ಚರಿ:
(೧) ಕುಸಿ, ಔದು, ಔಡೊತ್ತಿ – ಜರಾಸಂಧನು ತೋರಿದ ಭಂಗಿಗಳು
(೨) ಜೋಡಿ ಪದ – “ಘ” – ಘಾತಿಯಲಿ ಘಲ್ಲಿಸಿದಡಾ
(೩) ಧನು, ಕಾರ್ಮುಕ – ಬಿಲ್ಲು ಪದದ ಸಮಾನಾರ್ಥಕ ಪದ
(೪) ಧನುಸ್ಸು ಜರಾಸಂಧನಿಗೆ ಹೇಳುವ ಮಾತು – ಈತನಾರೆಂದರಿಯ
(೫) ಜರಾಸಂಧನ ಸ್ಥಿತಿ – ಧಾತುಗುಂದಿದನಳ್ಳಿರಿದವಳ್ಳೆಗಳು ಮಾಗಧನ