ಪದ್ಯ ೧: ಪಾಂಡವರು ಕೊಳದ ಬಳಿ ಹೇಗೆ ಶಬ್ದವನ್ನು ಮಾಡಿದರು?

ಕೇಳು ಧೃತರಾಷ್ಟ್ರವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಶತ್ರುಗಳು ಕೊಳದ ಸುತ್ತಲೂ ಗುಂಪುಗಟ್ಟಿ ಗರ್ಜಿಸಲಾರಂಭಿಸಿದರು. ಭೇರಿಗಳು ಮತ್ತೆ ಮತ್ತೆ ಬಡಿದವು. ಹೆಗ್ಗಾಳೆಗಳು ಚೀರಿದವು. ಅನೇಕ ವಾದ್ಯಗಳನ್ನು ಬಾರಿಸಿದರು. ಆ ಶಬ್ದಕ್ಕೆ ಕುಲಗಿರಿಗಳ ಬೆಸುಗೆ ಬಿಟ್ಟಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ರಿಪು: ವೈರಿ; ಜಾಲ: ಗುಂಪು; ಜಡಿ: ಬೆದರಿಕೆ, ಗದರಿಸು; ಕೊಳ: ಸರೋವರ; ತಡಿ: ದಡ; ತೂಳ:ಆವೇಶ, ಉನ್ಮಾದ; ಬಲು: ಬಹಳ; ಬೊಬ್ಬೆ: ಆರ್ಭಟ, ಗರ್ಜನೆ; ಅಬ್ಬರ: ಆರ್ಭಟ; ಅಭ್ರ: ಆಗಸ; ಮಂಡಲ: ವರ್ತುಲಾಕಾರ, ಜಗತ್ತು; ಸೂಳವಿಸು: ಧ್ವನಿಮಾಡು, ಹೊಡೆ; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ಬಹುವಿಧ: ಬಹಳ; ವಾದ್ಯ: ಸಂಗೀತದ ಸಾಧನ; ಹೆಗ್ಗಾಳೆ: ದೊಡ್ಡ ಕಹಳೆ; ಚೀರು: ಗರ್ಜಿಸು, ಕೂಗು; ಬೈಸಿಕೆ: ಬೆಸುಗೆ, ಆಸನ, ಪದ; ಬಿಡೆ: ತೊರೆ; ಕುಲಾದ್ರಿ: ದೊಡ್ಡ ಬೆಟ್ಟ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ರಿಪು
ಜಾಲ +ಜಡಿದುದು +ಕೊಳನ +ತಡಿಯಲಿ
ತೂಳಿದುದು +ಬಲು+ಬೊಬ್ಬೆ+ಅಬ್ಬರವ್+ಅಭ್ರ+ಮಂಡಲವ
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳ +ಬಹುವಿಧ +ವಾದ್ಯ+ರವ+ ಹೆ
ಗ್ಗಾಳೆಗಳು +ಚೀರಿದವು +ಬೈಸಿಕೆ +ಬಿಡೆ +ಕುಲಾದ್ರಿಗಳ

ಅಚ್ಚರಿ:
(೧) ಒಂದೇ ಪದದ ರಚನೆ – ಬಲುಬೊಬ್ಬೆಯಬ್ಬರವಭ್ರಮಂಡಲವ

ಪದ್ಯ ೨೩: ಧರ್ಮಜನ ಜೊತೆಗೆ ಯಾರು ಯುದ್ಧಕ್ಕೆ ಬಂದರು?

ಪಡಿತಳಿಸಿ ಸಹದೇವ ನಕುಲರ
ನಡೆಗಲಸಿತರ್ಜುನನ ರಥ ನರ
ನೊಡನೆ ಹೊಕ್ಕನು ಭೀಮನುರು ಪಾಂಚಾಲಬಲ ಸಹಿತ
ಜಡಿವ ನಿಸ್ಸಾಳದಲಿ ಜಗ ಕಿವಿ
ಗೆಡೆ ಯುಧಿಷ್ಠಿರರಾಯನೌಕಿದ
ನೆಡಬಲನ ಕೊಂಡರು ಯುಯುತ್ಸು ಶಿಖಂಡಿ ಸೃಂಜಯರು (ಶಲ್ಯ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಕುಲ ಸಹದೇವರ ಜೊತೆಗೆ ಅರ್ಜುನನ ರಥವೂ ಬಂದಿತು. ಭೀಮನು ಪಾಂಚಾಲ ಸೈನ್ಯದೊಡನೆ ನುಗ್ಗಿದನು. ಭೇರಿಗಳ ಬಡಿತಕ್ಕೆ ಕಿವಿ ಕಿವುಡಾಗಲು ಧರ್ಮಜನೂ ಬಂದನು. ಅವನ ಎಡಬಲಗಲಲ್ಲಿ ಯುಯುತ್ಸು, ಶಿಖಂಡಿ, ಸೃಂಜಯರೂ ಬಂದರು.

ಅರ್ಥ:
ಪಡಿತಳ: ಇದಿರು, ಚೂಣಿ; ರಥ: ಬಂದಿ; ನರ: ಅರ್ಜುನ; ಹೊಕ್ಕು: ಸೇರು; ಉರು: ಅತಿದೊಡ್ಡ, ಹೆಚ್ಚಾದ; ಬಲ: ಸೈನ್ಯ; ಸಹಿತ: ಜೊತೆ; ಜಡಿ: ಬೆದರಿಕೆ, ಹೆದರಿಕೆ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಜಗ: ಪ್ರಪಂಚ; ಕಿವಿ: ಕರ್ಣ; ಔಕು: ಒತ್ತು,ಹಿಚುಕು; ಎಡಬಲ: ಅಕ್ಕಪಕ್ಕ;

ಪದವಿಂಗಡಣೆ:
ಪಡಿತಳಿಸಿ +ಸಹದೇವ +ನಕುಲರನ್
ಅಡೆಗಲಸಿತ್+ಅರ್ಜುನನ +ರಥ+ ನರ
ನೊಡನೆ +ಹೊಕ್ಕನು +ಭೀಮನ್+ಉರು +ಪಾಂಚಾಲ+ಬಲ +ಸಹಿತ
ಜಡಿವ +ನಿಸ್ಸಾಳದಲಿ +ಜಗ+ ಕಿವಿ
ಗೆಡೆ +ಯುಧಿಷ್ಠಿರರಾಯನ್+ಔಕಿದನ್
ಎಡಬಲನ +ಕೊಂಡರು +ಯುಯುತ್ಸು +ಶಿಖಂಡಿ +ಸೃಂಜಯರು

ಅಚ್ಚರಿ:
(೧) ರಣವಾದ್ಯದಬ್ಬರ – ಜಡಿವ ನಿಸ್ಸಾಳದಲಿ ಜಗ ಕಿವಿಗೆಡೆ

ಪದ್ಯ ೮: ಕರ್ಣನ ಮರಣದ ಜ್ವರೆ ಯಾರ ಮೇಲೆ ಪ್ರಭಾವ ಬೀರಿತು?

ಸಿಡಿದು ಕರ್ಣನ ತಲೆ ಧರಿತ್ರಿಗೆ
ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ
ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ
ಹಡಪಿಗರು ಚಾಮರದ ಚಾಹಿಯ
ರೊಡನೆ ನೆಲಕುರುಳಿದರು ಸಾರಥಿ
ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ (ಶಲ್ಯ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಕರ್ಣನ ತಲೆಯು ಸಿಡಿದು ಭೂಮಿಗೆ ಬಿದ್ದೊಡನೆ, ದೊರೆಯು ಕಣ್ಮುಚ್ಚಿ, ಶೋಕಜ್ವರವೇರಲು, ಮೂರ್ಛಿತನಾದನು. ಹಡಪದವರು, ಚಾಮರದವರು ನೆಲಕ್ಕುರುಳಿದರು.

ಅರ್ಥ:
ಸಿಡಿ: ಸೀಳು; ತಲೆ: ಶಿರ; ಧರಿತ್ರಿ: ಭೂಮಿ; ಕೆಡೆ: ಬೀಳು, ಕುಸಿ; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಶೋಕ: ದುಃಖ; ಜ್ವರ: ಬೇನೆ, ತಾಪ; ಢಗೆ: ಕಾವು, ದಗೆ; ಜಡಿ: ಬೆದರಿಕೆ, ಹೆದರಿಕೆ; ಹಡಪ: ಎಲೆಯಡಿಕೆ ಚೀಲ; ಚಾಮರ: ಕುಂಚ; ಚಾಹಿ: ಚಾಮರ ಬೀಸುವವ; ನೆಲ: ಭೂಮಿ; ಉರುಳು: ಬೀಳು; ಸಾರಥಿ: ಸೂತ; ಕದಿ: ಸೀಲು; ನೇಣು: ಹಗ್ಗ, ಹುರಿ; ಕೊಂಡು: ಪಡೆದು; ತಿರುಹು: ಹಿಂದಿರುಗು; ರಥ: ಬಂಡಿ;

ಪದವಿಂಗಡಣೆ:
ಸಿಡಿದು +ಕರ್ಣನ +ತಲೆ +ಧರಿತ್ರಿಗೆ
ಕೆಡೆಯೆ +ಧೊಪ್ಪನೆ +ಮೂರ್ಛೆಯಲಿ +ನೃಪ
ಕೆಡೆದು +ಕಣ್ಮುಚ್ಚಿದನು +ಶೋಕ+ಜ್ವರದ +ಢಗೆ +ಜಡಿಯೆ
ಹಡಪಿಗರು +ಚಾಮರದ +ಚಾಹಿಯ
ರೊಡನೆ +ನೆಲಕುರುಳಿದರು +ಸಾರಥಿ
ಕಡಿಯಣದ +ಕುಡಿನೇಣ+ ಕೊಂಡನು +ತಿರುಹಿದನು +ರಥವ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಡಿಯಣದ ಕುಡಿನೇಣ ಕೊಂಡನು

ಪದ್ಯ ೧: ದ್ರೋಣನ ರಥದ ಬಳಿಗೆ ಯಾರು ಬಂದರು?

ಕೇಳು ಧೃತರಾಷ್ಟ್ರವನಿಪ ಗುರು
ಬೀಳುಕೊಟ್ಟನು ದೇಹವನು ನ
ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ
ಮೇಲೆ ಬಂದುದು ಕಷ್ಟವರಿಭೂ
ಪಾಲರಿಗೆ ಕೇಳಿದನು ಖಳ ಪಾಂ
ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ (ದ್ರೋಣ ಪರ್ವ, ೧೯ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ದ್ರೋಣನು ದೇಹತ್ಯಾಗ ಮಾಡಿದನು. ಅವನಿಗೆ ಬಂದ ವಿಧಿಯು ನಮ್ಮ ಸೋಲಿಗೆ ತವನಿಧಿ, ನಂತರ ವೈರಿರಾಜರಿಗೆ ಕಷ್ಟ ಬಂದಿತು. ದ್ರೋಣನ ದೇಹತ್ಯಾಗವನ್ನು ಕೇಳಿದ ಧೃಷ್ಟದ್ಯುಮ್ನನು ಕತ್ತಿಯನ್ನು ಝಳಪಿಸುತ್ತಾ ದ್ರೋಣನ ರಥದ ಬಳಿಗೆ ಬಂದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಗುರು: ಆಚಾರ್ಯ; ಬೀಳುಕೊಡು: ತೆರಳು; ದೇಹ: ಶರೀರ; ಆಳು: ಸೇವಕ; ವಿಧಿ: ನಿಯಮ; ಅಪಜಯ: ಸೋಲು; ನಿಧಿ: ಐಶ್ವರ್ಯ; ಬಂದು: ಆಗಮಿಸು; ಕಷ್ಟ: ತೊಂದರೆ; ಅರಿ: ವೈರಿ; ಭೂಪಾಲ: ರಾಜ; ಕೇಳು: ಆಲಿಸು; ಖಳ: ದುಷ್ಟ; ಸುತ: ಮಗ; ಐತಂದು: ಬಂದು ಸೇರು; ಜಡಿ: ಬೆದರಿಕೆ; ಆಯುಧ: ಶಸ್ತ್ರ; ತವ: ನಿನ್ನ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ಗುರು
ಬೀಳುಕೊಟ್ಟನು +ದೇಹವನು +ನ
ಮ್ಮಾಳ +ವಿಧಿಯೇನ್+ಅಪಜಯದ +ತವನಿಧಿಯಲೇ +ನಮಗೆ
ಮೇಲೆ +ಬಂದುದು +ಕಷ್ಟವ್+ಅರಿ+ಭೂ
ಪಾಲರಿಗೆ +ಕೇಳ್+ಇದನು +ಖಳ+ ಪಾಂ
ಚಾಲಸುತನ್ +ಐತಂದನ್+ಅಲ್ಲಿಗೆ +ಜಡಿವಡ್+ಆಯುಧದಿ

ಅಚ್ಚರಿ:
(೧) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೨) ದ್ರೋಣನು ಸತ್ತನು ಎಂದು ಹೇಳಲು – ಗುರು ಬೀಳುಕೊಟ್ಟನು ದೇಹವನು

ಪದ್ಯ ೩೩: ಸೈನ್ಯದ ತುಂಬಾ ಏನು ತುಂಬಿದವು?

ತೆರಹ ಕೊಟ್ಟೊಳಹೊಗಿಸಿ ಸದೆದನು
ಬರಸಿಡಿಲು ಜಡಿವಂತೆ ರಿಪುಬಲ
ವೊರಲಿ ಕೆಡೆದುದು ಘಾಯವಡೆದುದು ಬೇಹ ನಾಯಕರು
ದುರುದುರಿಪ ತಲೆಮಿದುಳ ದಂಡೆಯ
ಹರಿಗರುಳ ನೆನವಸೆಯ ಮೂಳೆಯ
ಮುರಿಕುಗಳ ಕಡಿಖಂಡಮಯವಾಯ್ತಖಿಳ ಚತುರಂಗ (ದ್ರೋಣ ಪರ್ವ, ೧೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಶತ್ರು ಸೇನೆಗೆ ಜಾಗಬಿಟ್ಟು ಒಳಕ್ಕೆ ನುಗ್ಗಿದ ಮೇಲೆ ಬರಸಿಡಿಲು ಬಡಿಯುವಂತೆ ಅವರನ್ನು ಬಡೆದು ಹಾಕಿದನು. ಶತ್ರುಸೇನೆಯು ಒರಲಿ ಕೆಳಗೆ ಬಿದ್ದು ಸತ್ತಿತು. ಸೇನಾನಾಯಕರು ಗಾಯಗೊಂಡರು. ಮಿದುಳದಂಡೆ, ಹರಿದ ಕರುಳುಗಳು, ಕೊಬ್ಬಿನ ಜಿಡ್ಡು, ಮೂಳೆಯ ತುಂಡುಗಳು, ಮಾಂಸಖಂಡಗಳು ಚತುರಂಗ ಸೈನ್ಯದ ತುಂಬಾ ತುಂಬಿದವು.

ಅರ್ಥ:
ತೆರಹು: ಎಡೆ, ಜಾಗ, ಸಮಯ; ಕೊಟ್ಟು: ನೀಡು; ಸದೆ: ಕುಟ್ಟು, ಪುಡಿಮಾಡು; ಬರಸಿಡಿಲು: ಆಕಸ್ಮಿಕ; ಜಡಿ: ಗದರಿಸು, ಬೆದರಿಸು; ರಿಪು: ವೈರಿ; ಬಲ: ಸೈನ್ಯ; ಒರಲು: ಅರಚು; ಕೆಡೆ: ಬೀಳು, ಕುಸಿ; ಘಾಯ: ಪೆಟ್ಟು; ಬೇಹು: ಗುಪ್ತಚಾರಿಕೆ; ನಾಯಕ: ಒಡೆಯ; ದುರುದುರಿಪ: ಒಂದೇ ಸಮನಾಗಿ ಹೊರಚಿಮ್ಮುವ; ತಲೆ: ಶಿರ; ಮಿದುಳು: ಮಸ್ತಿಷ್ಕ; ದಂಡೆ: ತಟ, ಕೂಲ, ದಡ; ಹರಿ: ಸೀಳು, ಹಾಳಾಗು; ಕರುಳು: ಪಚನಾಂಗ; ನೆಣವಸೆ: ಹಸಿಯಾದ ಕೊಬ್ಬು; ಮೂಳೆ: ಎಲುಬು; ಮುರಿ: ಸೀಳು; ಕಡಿ: ಸೀಳು; ಖಂಡ: ತುಂಡು, ಚೂರು; ಅಖಿಳ: ಎಲ್ಲಾ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ;

ಪದವಿಂಗಡಣೆ:
ತೆರಹ +ಕೊಟ್ಟ್+ಒಳಹೊಗಿಸಿ+ ಸದೆದನು
ಬರಸಿಡಿಲು +ಜಡಿವಂತೆ +ರಿಪುಬಲವ್
ಒರಲಿ +ಕೆಡೆದುದು +ಘಾಯವಡೆದುದು +ಬೇಹ +ನಾಯಕರು
ದುರುದುರಿಪ +ತಲೆಮಿದುಳ +ದಂಡೆಯ
ಹರಿ+ಕರುಳ +ನೆನವಸೆಯ +ಮೂಳೆಯ
ಮುರಿಕುಗಳ +ಕಡಿ+ಖಂಡಮಯವಾಯ್ತ್+ಅಖಿಳ +ಚತುರಂಗ

ಅಚ್ಚರಿ:
(೧) ಉಪಮಾನದ ಪ್ರಯೋಗ – ತೆರಹ ಕೊಟ್ಟೊಳಹೊಗಿಸಿ ಸದೆದನು ಬರಸಿಡಿಲು ಜಡಿವಂತೆ

ಪದ್ಯ ೪೪: ಘಟೋತ್ಕಚನು ಏನನ್ನು ಹಿಡಿದು ಮುನ್ನುಗ್ಗಿದನು?

ತೂರಿದರೆ ತನಿಹೊಟ್ಟು ಗಾಳಿಗೆ
ಹಾರುವುದು ಕುಲಗಿರಿಯ ಬೈಸಿಕೆ
ಜಾರುವುದೆ ಮಝ ಪೂತು ನಮ್ಮೀಯುಭಯ ಕಟಕದಲಿ
ತೋರಲಿಲ್ಲೆಣೆ ಜಗದೊಳೋಲೆಯ
ಕಾರ ನೀನಹೆಯೆನುತ ಸುರರಿರಿ
ಗಾರ ಕವಿದನು ಕರ್ಣನಳವಿಗೆ ಜಡಿವಡಾಯುಧದಿ (ದ್ರೋಣ ಪರ್ವ, ೧೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕಾಳನ್ನು ತೂರಿದರೆ ಹೊಟ್ಟು ಗಾಳಿಗೆ ಹಾರಿಹೋಗುತ್ತದೆ. ಗಾಳಿ ಬೀಸಿದರೆ ಬೆಟ್ಟ ಸ್ಥಿರವಾಗಿಯೇ ಇರುತ್ತದೆ. ಹಾರಿಹೋಗುವುದಿಲ್ಲ. ನಿನಗೆ ಜಗತ್ತಿನಲ್ಲೇ ಎಣೆಯಾದವರಿಲ್ಲ. ನೀನು ಯೋಧನೇ ಸರಿ ಎನ್ನುತ್ತಾ ಘಟೋತ್ಕಚನು ಖಡ್ಗವನ್ನು ಹಿಡಿದು ನುಗ್ಗಿದನು.

ಅರ್ಥ:
ತೂರು: ಎಸೆ, ಬೀಸು; ತನಿ: ಹೆಚ್ಚಾಗು; ಹೊಟ್ಟು: ತೌಡು; ಗಾಳಿ: ವಾಯು; ಹಾರು: ಜಿಗಿ; ಕುಲಗಿರಿ: ದೊಡ್ಡ ಬೆಟ್ಟ; ಬೈಸಿಕೆ: ಕುಳಿತುಕೊಳ್ಳುವ ಒಂದು ಭಂಗಿ, ರೀತಿ; ಜಾರು: ಬೀಳು; ಮಝ: ಭಲೇ; ಪೂತು: ಕೊಂಡಾಟದ ಮಾತು; ಉಭಯ: ಎರಡು; ಕಟಕ: ಸೈನ್ಯ; ತೋರು: ಗೋಚರಿಸು; ಜಗ: ಪ್ರಪಂಚ; ಓಲೆಕಾರ: ಸೇವಕ; ಸುರ: ದೇವತೆ; ಅರಿ: ವೈರಿ; ಇರಿ: ಚುಚ್ಚು; ಕವಿ: ಆವರಿಸು; ಅಳವಿ: ಯುದ್ಧ; ಜಡಿ: ಬೆದರಿಕೆ; ಆಯುಧ: ಶಸ್ತ್ರ;

ಪದವಿಂಗಡಣೆ:
ತೂರಿದರೆ +ತನಿಹೊಟ್ಟು +ಗಾಳಿಗೆ
ಹಾರುವುದು +ಕುಲಗಿರಿಯ +ಬೈಸಿಕೆ
ಜಾರುವುದೆ +ಮಝ +ಪೂತು +ನಮ್ಮೀ+ಉಭಯ +ಕಟಕದಲಿ
ತೋರಲಿಲ್ಲ್+ಎಣೆ +ಜಗದೊಳ್+ಓಲೆಯ
ಕಾರ +ನೀನಹೆ+ಎನುತ +ಸುರರ್+ಇರಿ
ಗಾರ +ಕವಿದನು +ಕರ್ಣನ್+ಅಳವಿಗೆ +ಜಡಿವಡ್+ಆಯುಧದಿ

ಅಚ್ಚರಿ:
(೧) ಘಟೋತ್ಕಚನನ್ನು ಸುರರಿರಿಗಾರ (ದೇವತೆಗಳನ್ನು ಇರಿಯುವವ, ರಾಕ್ಷಸ) ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ತೂರಿದರೆ ತನಿಹೊಟ್ಟು ಗಾಳಿಗೆಹಾರುವುದು ಕುಲಗಿರಿಯ ಬೈಸಿಕೆ ಜಾರುವುದೆ

ಪದ್ಯ ೮೨: ಮೂದಲಿಸುವ ಮಾತುಗಳು ಏನನ್ನು ಪ್ರಜ್ವಲಿಸಿದವು?

ಕೇಳುತಿದ್ದರು ಪತಿಯ ಮೂದಲೆ
ಗಾಳಿಯಲೆ ದಳ್ಳಿಸುವ ಶೌರ್ಯ
ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ
ಆಳುತನವುಬ್ಬೆದ್ದು ಕಡು ಹೀ
ಹಾಳಿಕಾರರು ಕೈದುಕೊಂಡರು
ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ (ದ್ರೋಣ ಪರ್ವ, ೫ ಸಂಧಿ, ೮೨ ಪದ್ಯ)

ತಾತ್ಪರ್ಯ:
ಒಡೆಯನ ಹಂಗಿಸುವ ಮಾತುಗಳನ್ನು ಕೇಳಿದರು. ಮೂದಲಿಸುವ ಗಾಳಿ ಅವರ ಶೌರ್ಯದ ಜ್ವಾಲೆಯನ್ನು ಧಗ್ಗನೆ ಹೊತ್ತಿಸಿತು. ಅವರ ಪರಾಕ್ರಮವು ಉಬ್ಬಿ ಮುಖಗಳು ಕೋಪದಿಂದ ಕಠೋರವಾದವು. ತೆಗಳಿಕೆಯಿಂದ ನೊಂದು ಕೌರವವೀರರು ಆಯುಧಗಳನ್ನು ಹಿಡಿದು ಅಭಿಮನ್ಯುವನ್ನು ತಡೆದರು.

ಅರ್ಥ:
ಕೇಳು: ಆಲಿಸು; ಪತಿ: ಒಡೆಯ; ಮೂದಲೆ: ಹಂಗಿಸು, ಬಯ್ಗುಳ; ಗಾಳಿ: ವಾಯು, ಪವನ; ದಳ್ಳಿಸು: ಧಗ್ ಎಂದು ಉರಿ; ಶೌರ್ಯ: ಪರಾಕ್ರಮ; ಜ್ವಾಲೆ: ಬೆಂಕಿ; ಜಡಿ: ಬೆದರಿಕೆ; ಖಾತಿ: ಕೋಪ; ಹೊಗರು: ಕಾಂತಿ, ಪ್ರಕಾಶ; ಆನನ: ಮುಖ; ಆಳುತನ: ಪರಾಕ್ರಮ; ಉಬ್ಬೆದ್ದು: ಹೆಚ್ಚಾಗು; ಹೀಹಾಳಿ: ತೆಗಳಿಕೆ, ಅವಹೇಳನ; ಕೈದು: ಆಯುಧ; ಬಾಲಕ: ಚಿಕ್ಕವ; ತರುಬು: ತಡೆ, ನಿಲ್ಲಿಸು; ದೊರೆ: ರಾಜ, ಒಡೆಯ;

ಪದವಿಂಗಡಣೆ:
ಕೇಳುತಿದ್ದರು +ಪತಿಯ +ಮೂದಲೆ
ಗಾಳಿಯಲೆ +ದಳ್ಳಿಸುವ +ಶೌರ್ಯ
ಜ್ವಾಲೆ +ಜಡಿದುದು +ಖಾತಿಯಲಿ +ಹೊಗರ್+ಏರಿದ್+ಆನನದ
ಆಳುತನವ್+ಉಬ್ಬೆದ್ದು +ಕಡು +ಹೀ
ಹಾಳಿಕಾರರು +ಕೈದುಕೊಂಡರು
ಬಾಲಕನ +ತರುಬಿದರು +ದೊರೆಗಳು +ಕೇಳು +ಧೃತರಾಷ್ಟ್ರ

ಅಚ್ಚರಿ:
(೧) ರೂಪಕದ ಪ್ರಯೋಗ – ಪತಿಯ ಮೂದಲೆಗಾಳಿಯಲೆ ದಳ್ಳಿಸುವ ಶೌರ್ಯಜ್ವಾಲೆ ಜಡಿದುದು

ಪದ್ಯ ೪೪: ಯುದ್ಧ ಭೂಮಿಯು ಹೇಗೆ ಕಂಗೊಳಿಸಿತು?

ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು (ದ್ರೋಣ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ನಿಸ್ಸಾಳಗಳು ಪರ್ವತಗಳ ತಲೆಸಿಡಿಯುವಂತೆ ಸದ್ದುಮಾಡಿದರು. ವಿವಿಧ ವಾದ್ಯಗಳು ಸಿಡಿಲಿನಂತೆ ಸದ್ದುಮಾಡಿದವು. ಕಾಲಾಳುಗಳು ಬಂದರು. ಭೂಮಿಕುಸಿಯುವಂತೆ ರಥಗಳು ನುಗ್ಗಿದವು. ಆನೆಗಳು ಸಾಲುಸಾಲಾಗಿ ನಿಂತವು. ಕುದುರೆಗಳು ಕುಣಿಯುತ್ತಿದ್ದವು.

ಅರ್ಥ:
ಸೂಳು: ಆರ್ಭಟ, ಬೊಬ್ಬೆ; ಬೊಬ್ಬಿರಿ: ಗರ್ಜನೆ; ನಿಸ್ಸಾಳ: ಚರ್ಮ ವಾದ್ಯ; ಚಯ: ಗುಂಪು; ಅದ್ರಿ: ಬೆಟ್ಟ; ಉರು: ಹೆಚ್ಚು; ಹೆಡತಲೆ: ತಲೆಯ ಹಿಂಭಾಗ; ಸೀಳು: ಚೂರು; ಸಿಡಿಲು: ಅಶನಿ; ಏಳಿಗೆ: ಹೆಚ್ಚಳ; ಎದ್ದು: ಮೇಲೆ ಹೋಗು; ವಿವಿಧ: ಹಲವಾರು; ವಾದ್ಯ; ಸಂಗೀತದ ಸಾಧನ; ಆಳು: ಸೈನಿಕ; ನೆರೆ:ಗುಂಪು; ನೆಲ: ಭೂಮಿ; ಕುಸಿ: ಜಾರು; ರಥ: ಬಂಡಿ; ಜಾಲ: ಗುಂಪು; ಜಡಿ: ಗದರಿಸು, ಬೆದರಿಸು; ಆನೆ: ಕರಿ; ಸಾಲು: ಗುಂಪು; ಮೆರೆ: ಹೊಳೆ; ಕುಣಿ: ನರ್ತಿಸು; ಕೂಡೆ: ಜೊತೆ; ವಾಜಿ: ಕುದುರೆ;

ಪದವಿಂಗಡಣೆ:
ಸೂಳವಿಸಿ +ಬೊಬ್ಬಿರಿದವ್+ಉರು +ನಿ
ಸ್ಸಾಳ+ಚಯವ್+ಅದ್ರಿಗಳ+ ಹೆಡತಲೆ
ಸೀಳೆ +ಸಿಡಿಲ್+ಏಳಿಗೆಯಲ್+ಎದ್ದವು +ವಿವಿಧ +ವಾದ್ಯ+ರವ
ಆಳು +ನೆರೆದುದು +ನೆಲ +ಕುಸಿಯೆ +ರಥ
ಜಾಲ +ಜಡಿದುದು +ಹಣ್ಣಿದ್+ಆನೆಯ
ಸಾಲು +ಮೆರೆದುವು +ಕುಣಿವುತಿದ್ದುವು+ ಕೂಡೆ +ವಾಜಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ನಿಸ್ಸಾಳಚಯವದ್ರಿಗಳ ಹೆಡತಲೆ ಸೀಳೆ

ಪದ್ಯ ೧: ಧರ್ಮಜನ ಮಾತನ್ನು ಕೇಳಿ ಅರ್ಜುನನಿಗೆ ಏನಾಯಿತು?

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನಾಡಿದ ನುಡಿಯನಾಲಿಸಿ
ಕೇಳಿದನು ಕೆದರಿದನು ಜಡಿದವು ರೋಮರಾಜಿಗಳು
ಮೇಲು ಮೇಲುಬ್ಬೇಳ್ವ ರೋಷ
ಜ್ವಾಲೆ ಹೊದಿಸಿತು ವದನವನು ಕ
ಣ್ಣಾಲಿ ಕಾಹೇರಿದವು ಪಾರ್ಥಂಗೊಂದು ನಿಮಿಷದಲಿ (ಕರ್ಣ ಪರ್ವ, ೧೭ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಯುದ್ಧವೃತ್ತಾಂತವನ್ನು ಹೇಳುತ್ತಾ, ರಾಜ ಧರ್ಮಜನು ಆಡಿದ ಮಾತನ್ನು ಕೇಳಿ ಅರ್ಜುನನ ಮನಸ್ಸು ಕೆದರಿತು, ತನ್ನ ದೇಹದ ಕೂದಲುಗಳು ಎದ್ದು ನಿಂತವು, ಕೋಪವ ನರನಾಡಿಗಳಲ್ಲಿ ಹರಿದು ಉಬ್ಬೇಳಿ, ರೋಷದ ಅಗ್ನಿಯು ಮುಖದಿಂದ ಹೊರಳಿ, ಕಣ್ಣುಗಳು ಬೆಂಕಿಯನ್ನು ಉಗಿಯುತ್ತಿರುವಂತೆ ಪಾರ್ಥನು ತೋರಿದನು.

ಅರ್ಥ:
ಅವನಿಪ: ರಾಜ; ಕೇಳು: ಆಲಿಸು; ಭೂಪಾಲ: ರಾಜ; ಆಡಿದ: ಮಾತಾಡು; ನುಡಿ: ಮಾತು, ವಾಣಿ; ಆಲಿಸು: ಕೇಳು; ಕೆದರು: ಚದರಿಸು; ಜಡಿ: ಝಳಪಿಸು, ಅಲ್ಲಾಡು; ರೋಮ: ಕೂದಲು; ರೋಮರಾಜಿ: ಕೂದಲಿನ ಸಾಲು; ಮೇಲು: ನಂತರ; ಉಬ್ಬು: ಕಣ್ಣಿನ ಮೇಲಿನ ಕೂದಲಿನ ಸಾಲು; ಏಳ್ವ: ಅಧಿಕವಾಗು; ರೋಷ: ಕೋಪ; ಜ್ವಾಲೆ: ಬೆಂಕಿ; ಹೊದಿಸು: ಆವರಿಸು, ಮುಸುಕು; ವದನ: ಮುಖ; ಕಣ್ಣಾಲಿ: ಕಣ್ಣುಗುಡ್ಡೆ; ಕಾಹೇರು: ಉದ್ವೇಗಗೊಳ್ಳು;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಭೂ
ಪಾಲನ್+ಆಡಿದ +ನುಡಿಯನ್+ಆಲಿಸಿ
ಕೇಳಿದನು +ಕೆದರಿದನು+ ಜಡಿದವು+ ರೋಮರಾಜಿಗಳು
ಮೇಲು +ಮೇಲ್+ಉಬ್ಬೇಳ್ವ +ರೋಷ
ಜ್ವಾಲೆ +ಹೊದಿಸಿತು +ವದನವನು+ ಕ
ಣ್ಣಾಲಿ +ಕಾಹೇರಿದವು +ಪಾರ್ಥಂಗೊಂದು +ನಿಮಿಷದಲಿ

ಅಚ್ಚರಿ:
(೧) ಅವನಿಪ, ಭೂಪಾಲ; ಆಲಿಸಿ, ಕೇಳಿ – ಸಮನಾರ್ಥಕ ಪದ
(೨) ಕೋಪವನ್ನು ಚಿತ್ರಿಸುವ ಬಗೆ: ಮೇಲು ಮೇಲುಬ್ಬೇಳ್ವ ರೋಷ ಜ್ವಾಲೆ ಹೊದಿಸಿತು ವದನವನು ಕಣ್ಣಾಲಿ ಕಾಹೇರಿದವು

ಪದ್ಯ ೧೭: ಯಾವ ರೀತಿಯ ಕುದುರೆಗಳನ್ನು ಸೇನಾ ನಾಯಕರು ನೋಡಿದರು?

ಅಳವಿಗೊಟ್ಟೊಡೆ ರವಿಯ ತುರಗವ
ನುಳುಹಿ ಮುಂಚುವ ಜವದ ನೊಸಲೊಳು
ಹೊಳೆದ ಕನ್ನಡಿಗಳ ಖುರಾಂತದ ಜಡಿವ ಜೋಡುಗಳ
ಬಿಳಿಯ ಚೌರಿಯ ಜಲ್ಲಿಗಳ ಹ
ತ್ತಳದ ರಾಹುತ ಸನ್ನೆಯೊಳು ನೆಲ
ನಲುಗೆ ನಿಗುರುವ ನಿಲುವ ನಿರುಪಮ ಹಯವ ನೋಡಿದರು (ಉದ್ಯೋಗ ಪರ್ವ, ೧೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಪಂಥಕ್ಕೆ ಬಂದರೆ ಸೂರ್ಯನ ಕುದುರೆಗಳನ್ನು ಸೋಲಿಸಿ ಮುಂದಕ್ಕೆ ಹೋಗಬಲ್ಲ ವೇಗವನುಳ್ಳ, ಹಣೆಯಲ್ಲಿ ಹೊಳೆಯುವ ಕನ್ನಡಿಗಳ ಅಲಂಕಾರವುಳ್ಳ, ಗೊರಸಿನಲ್ಲಿ ನಾಲುಗಳು, ಬಿಳಿಯ ಚೌರಿಗಳ ಗೊಂಡೆ ಇರುವ, ರಾವುತರ ಸನ್ನೆಯಿಂದ ಭೂಮಿಯೇ ನಡುಗುವಂತೆ ಮೇಲೇಳುವು, ನಿಲ್ಲುವ ಹೋಲಿಕೆಯೇ ಇಲ್ಲದ ಕುದುರೆಗಳು ಸೈನ್ಯದಲ್ಲಿರುವುದನ್ನು ಸೇನಾ ನಾಯಕರು ನೋಡಿದರು.

ಅರ್ಥ:
ಅಳವಿ:ಶಕ್ತಿ, ವಶ; ಒಡೆ: ತಕ್ಷಣ; ರವಿ: ಭಾನು, ಸೂರ್ಯ; ತುರಗ: ಕುದುರೆ; ಉಳುಹು: ಕಾಪಾಡು; ಮುಂಚು: ಮುಂದೆ; ಜವ: ವೇಗ, ರಭಸ; ನೊಸಲು: ಹಣೆ; ಹೊಳೆ: ಕಾಂತಿ; ಕನ್ನಡಿ: ದರ್ಪಣ;ಖುರ: ಕುದುರೆ ದನಕರು ಮುಂ.ವುಗಳ ಕಾಲಿನ ಗೊರಸು, ಕೊಳಗು; ಜಡಿ: ಬೆದರಿಕೆ, ಹೆದರಿಕೆ, ಹೊಡೆತ; ಜೋಡು:ಜೊತೆ, ಜೋಡಿ; ಬಿಳಿ: ಶ್ವೇತ; ಚೌರಿ: ಚೌರಿಯ ಕೂದಲು, ಗಂಗಾವನ; ಜಲ್ಲಿ: ಕುಚ್ಚು, ಗೊಂಡೆ; ಹತ್ತಳ: ಚಾವಟಿ, ಬಾರುಗೋಲು; ರಾವುತ:ಕುದುರೆ ಸವಾರ, ಅಶ್ವಾರೋಹಿ; ಸನ್ನೆ:ಗುರುತು, ಸಂಕೇತ ; ನೆಲ: ಭೂಮಿ; ನಲುಗು:ಕಂಪನ, ಪಲುಕು; ನಿಗುರು:ಹೆಚ್ಚಳ, ಆಧಿಕ್ಯ ; ನಿಲುವ: ನಿಲ್ಲು; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಹಯ: ಕುದುರೆ; ನೋಡು: ವೀಕ್ಷಿಸು;

ಪದವಿಂಗಡಣೆ:
ಅಳವಿಗ್+ಒಟ್ಟೊಡೆ +ರವಿಯ +ತುರಗವನ್
ಉಳುಹಿ +ಮುಂಚುವ +ಜವದ+ ನೊಸಲೊಳು
ಹೊಳೆದ +ಕನ್ನಡಿಗಳ +ಖುರಾಂತದ +ಜಡಿವ +ಜೋಡುಗಳ
ಬಿಳಿಯ +ಚೌರಿಯ +ಜಲ್ಲಿಗಳ +ಹ
ತ್ತಳದ +ರಾಹುತ +ಸನ್ನೆಯೊಳು +ನೆಲ
ನಲುಗೆ +ನಿಗುರುವ +ನಿಲುವ +ನಿರುಪಮ+ ಹಯವ +ನೋಡಿದರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳವಿಗೊಟ್ಟೊಡೆ ರವಿಯ ತುರಗವನುಳುಹಿ ಮುಂಚುವ
(೨) ನಿ ಕಾರದ ತ್ರಿವಳಿ ಪದ – ನಿಗುರುವ ನಿಲುವ ನಿರುಪಮ