ಪದ್ಯ ೧: ದ್ರೋಣನ ರಥದ ಬಳಿಗೆ ಯಾರು ಬಂದರು?

ಕೇಳು ಧೃತರಾಷ್ಟ್ರವನಿಪ ಗುರು
ಬೀಳುಕೊಟ್ಟನು ದೇಹವನು ನ
ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ
ಮೇಲೆ ಬಂದುದು ಕಷ್ಟವರಿಭೂ
ಪಾಲರಿಗೆ ಕೇಳಿದನು ಖಳ ಪಾಂ
ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ (ದ್ರೋಣ ಪರ್ವ, ೧೯ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ದ್ರೋಣನು ದೇಹತ್ಯಾಗ ಮಾಡಿದನು. ಅವನಿಗೆ ಬಂದ ವಿಧಿಯು ನಮ್ಮ ಸೋಲಿಗೆ ತವನಿಧಿ, ನಂತರ ವೈರಿರಾಜರಿಗೆ ಕಷ್ಟ ಬಂದಿತು. ದ್ರೋಣನ ದೇಹತ್ಯಾಗವನ್ನು ಕೇಳಿದ ಧೃಷ್ಟದ್ಯುಮ್ನನು ಕತ್ತಿಯನ್ನು ಝಳಪಿಸುತ್ತಾ ದ್ರೋಣನ ರಥದ ಬಳಿಗೆ ಬಂದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಗುರು: ಆಚಾರ್ಯ; ಬೀಳುಕೊಡು: ತೆರಳು; ದೇಹ: ಶರೀರ; ಆಳು: ಸೇವಕ; ವಿಧಿ: ನಿಯಮ; ಅಪಜಯ: ಸೋಲು; ನಿಧಿ: ಐಶ್ವರ್ಯ; ಬಂದು: ಆಗಮಿಸು; ಕಷ್ಟ: ತೊಂದರೆ; ಅರಿ: ವೈರಿ; ಭೂಪಾಲ: ರಾಜ; ಕೇಳು: ಆಲಿಸು; ಖಳ: ದುಷ್ಟ; ಸುತ: ಮಗ; ಐತಂದು: ಬಂದು ಸೇರು; ಜಡಿ: ಬೆದರಿಕೆ; ಆಯುಧ: ಶಸ್ತ್ರ; ತವ: ನಿನ್ನ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ಗುರು
ಬೀಳುಕೊಟ್ಟನು +ದೇಹವನು +ನ
ಮ್ಮಾಳ +ವಿಧಿಯೇನ್+ಅಪಜಯದ +ತವನಿಧಿಯಲೇ +ನಮಗೆ
ಮೇಲೆ +ಬಂದುದು +ಕಷ್ಟವ್+ಅರಿ+ಭೂ
ಪಾಲರಿಗೆ +ಕೇಳ್+ಇದನು +ಖಳ+ ಪಾಂ
ಚಾಲಸುತನ್ +ಐತಂದನ್+ಅಲ್ಲಿಗೆ +ಜಡಿವಡ್+ಆಯುಧದಿ

ಅಚ್ಚರಿ:
(೧) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೨) ದ್ರೋಣನು ಸತ್ತನು ಎಂದು ಹೇಳಲು – ಗುರು ಬೀಳುಕೊಟ್ಟನು ದೇಹವನು

ಪದ್ಯ ೧೪: ಘಟೋತ್ಕಚನನೆದುರು ಕುರುಸೈನ್ಯವೇಕೆ ನಿಲ್ಲಲಿಲ್ಲ?

ಇವನ ಧಾಳಿಯನಿವನ ಧೈರ್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಘಟೋತ್ಕಚನ ದಾಳಿ, ಧೈರ್ಯ, ಯುದ್ಧದ ಚಾತುರ್ಯ, ಇವನ ಮೀರಿದ ಸತ್ವಗಳನ್ನು ದೇವತೆಗಳೂ ಎದುರಿಸಿ ನಿಲ್ಲಲಾರರು ಎಂದ ಮೇಲೆ ನಮ್ಮ ಕುರುಸೈನ್ಯದ ಪಾಡೇನು. ನಿಮ್ಮ ಸೈನ್ಯವು ಪಲಾಯನ ಮಾಡಿದರು.

ಅರ್ಥ:
ಧಾಳಿ: ಆಕ್ರಮಣ; ಧೈರ್ಯ: ದಿಟ್ಟತನ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಆಹವ: ಯುದ್ಧ; ಹೊರೆಗೆ: ಭಾರ, ಹೊರೆ; ಭಾರಿ: ಅತಿಶಯವಾದ; ವೆಗ್ಗಳಿಕೆ: ಶ್ರೇಷ್ಠತೆ; ದಿವಿಜ: ಅಮರರು; ನೂಕು: ತಳ್ಳು; ಪಾಡು: ಸ್ಥಿತಿ; ಪಲಾಯನ: ಓಡುವಿಕೆ, ಪರಾರಿ; ತವನಿಧಿ: ಕೊನೆಯಾಗದ ಭಂಡಾರ; ಬಲ: ಸೈನ್ಯ; ಕೇಳು: ಆಲಿಸು;

ಪದವಿಂಗಡಣೆ:
ಇವನ+ ಧಾಳಿಯನ್+ಇವನ +ಧೈರ್ಯವನ್
ಇವನ +ಹೂಣಿಗತನವನ್+ಇವನ್
ಆಹವದ +ಹೊರಿಗೆಯನ್+ಇವನ +ಭಾರಿಯ +ವೆಗ್ಗಳೆಯತನವ
ದಿವಿಜರಾನಲು +ನೂಕದಿದು+ ನ
ಮ್ಮವರ +ಪಾಡೇನೈ +ಪಲಾಯನ
ತವನಿಧಿಯಲೇ +ನಿಮ್ಮ +ಬಲ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಪಲಾಯನವನ್ನು ವಿವರಿಸುವ ಪರಿ – ನಮ್ಮವರ ಪಾಡೇನೈ ಪಲಾಯನ ತವನಿಧಿಯಲೇ ನಿಮ್ಮ ಬಲ

ಪದ್ಯ ೧೩: ಭೀಷ್ಮರ ಸಾವಿನ ನಂತರ ಕೌರವರ ಪರಿಸ್ಥಿತಿ ಹೇಗಾಯಿತು?

ಬೆದರು ತವನಿಧಿಯಾಯ್ತು ಪಟು ಭಟ
ರೆದೆಗಳಿಬ್ಬಗಿಯಾಯ್ತು ವೀರಾ
ಭ್ಯುದಯ ಕೈಸೆರೆಯೋಯ್ತು ಸುಕ್ಕಿತು ಮನದ ಸುಮ್ಮಾನ
ಹೊದರೊಡೆದು ಕುರುಸೇನೆ ತೆಗೆದೋ
ಡಿದುದು ಭಯಜಲಧಿಯಲಿ ತೇಕಾ
ಡಿದರು ಕೌರವ ಜನಪರೀ ಭೀಷ್ಮಾವಸಾನದಲಿ (ಭೀಷ್ಮ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಷ್ಮರ ಅವಸಾನವಾಗಲು, ಭಯವು ತೀರದ ನಿಧಿಯಾಯಿತು, ವೀರರ ಎದೆಗಳು ಎರದು ಹೋಳಾದವು, ಕೌರವ ವೀರರ ಏಳಿಗೆಯು ಕೈಸೂರೆಯಾಯಿತು. ಮನಸ್ಸಿನ ಸಂತೋಷ ಸುಕ್ಕಿತು. ಕೌರವ ಸೇನೆಯು ಗುಂಪಾಗಿರುವುದನ್ನು ಬಿಟ್ಟು ಚೆಲ್ಲಾಪಿಲ್ಲಿಯಾಗಿ ಓಡಿಹೋಯಿತು. ಕೌರವರಾಜರು ಭಯ ಸಮುದ್ರದಲ್ಲಿ ತೇಲಿದರು.

ಅರ್ಥ:
ಬೆದರು: ಹೆದರು; ತವ: ನಿನ್ನ; ತವನಿಧಿ: ಕೊನೆಯಾಗದ ಭಂಡಾರ; ನಿಧಿ: ಐಶ್ವರ್ಯ; ಪಟುಭಟ: ಪರಾಕ್ರಮಿ; ಎದೆ: ವಕ್ಷಸ್ಥಳ; ಇಬ್ಬಗಿ: ಎರಡು ಹೋಳು; ವೀರ: ಶೂರ; ಅಭ್ಯುದಯ: ಏಳಿಗೆ; ಕೈಸೆರೆ: ಬಂಧನ; ಸುಕ್ಕು: ತೆರೆಗಟ್ಟಿರುವುದು; ಮನ: ಮನಸ್ಸು; ಸುಮ್ಮಾನ: ಸಂತೋಷ, ಹಿಗ್ಗು; ಹೊದರು: ತೊಡಕು, ತೊಂದರೆ; ಒಡೆ: ಸೀಳು; ಓಡು: ಧಾವಿಸು; ಭಯ: ಅಂಜಿಕೆ; ಜಲಧಿ: ಸಾಗರ; ತೇಕು: ತೇಲು, ಏಗು; ಜನಪ: ರಾಜ; ಅವಸಾನ: ಸಾವು, ಅಂತ್ಯ;

ಪದವಿಂಗಡಣೆ:
ಬೆದರು+ ತವನಿಧಿಯಾಯ್ತು +ಪಟು +ಭಟರ್
ಎದೆಗಳ್+ಇಬ್ಬಗಿಯಾಯ್ತು +ವೀರ
ಅಭ್ಯುದಯ +ಕೈಸೆರೆಯೋಯ್ತು +ಸುಕ್ಕಿತು +ಮನದ +ಸುಮ್ಮಾನ
ಹೊದರೊಡೆದು +ಕುರುಸೇನೆ +ತೆಗೆದ್
ಓಡಿದುದು +ಭಯಜಲಧಿಯಲಿ +ತೇಕಾ
ಡಿದರು +ಕೌರವ +ಜನಪರ್+ಈ+ ಭೀಷ್ಮ+ಅವಸಾನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಯಜಲಧಿಯಲಿ ತೇಕಾಡಿದರು ಕೌರವ ಜನಪ