ಪದ್ಯ ೧೭: ಯಾವ ಆಲಯಗಳಿಂದ ಗಾಡಿಗಳನ್ನು ತುಂಬಿದರು?

ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ (ಗದಾ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೊರೆಯ ಅರಮನೆ, ಮಂಟಪ, ಧ್ವಜ, ಲಾಯ, ಚೌಕಿ, ಮನೆಗಳನ್ನೆಲ್ಲಾ ತೆಗೆದು ಬಂಡಿಗಳ ಸಾಲಿನಲ್ಲಿ ಒಟ್ಟಿದರು. ದೊರೆಯ ತಮ್ಮಂದಿರು, ದ್ರೋಣ, ಕೃಪ, ಕರ್ಣ, ಸೈಂಧವ, ಶಕುನಿ, ರಾಜರ ಆಪ್ತರ ಗುಡಿ ಗುಡಾರಗಳನ್ನು ಗಾಡಿಗಳಲ್ಲಿ ಒಟ್ಟಿದರು.

ಅರ್ಥ:
ರಾಯ: ರಾಜ; ಅರಮನೆ: ರಾಜರ ಆಲಯ; ಮಂಡವಿಗೆ: ಮಂಟಪ; ಗುಡಿ: ಕುಟೀರ, ಮನೆ; ಲಾಯ: ಅಶ್ವಶಾಲೆ; ಚವುಕಿ: ಪಡಸಾಲೆ, ಚೌಕಿ; ನಿಖಿಳ: ಎಲ್ಲಾ; ಭವನ: ಆಲಯ; ನಿಕಾಯ: ಗುಂಪು; ತೆಗೆ: ಹೊರತರು; ಒಟ್ಟು: ಸೇರಿಸು; ಬಂಡಿ: ರಥ; ಹಂತಿ: ಪಂಕ್ತಿ, ಸಾಲು; ರಾಯ: ರಾಜ; ಅನುಜ: ತಮ್ಮ; ಪಸಾಯಿತ: ಆಪ್ತರು; ಚಂಪೆಯ: ಡೇರ; ಏರು: ಹತ್ತು;

ಪದವಿಂಗಡಣೆ:
ರಾಯನ್+ಅರಮನೆ +ಮಂಡವಿಗೆ +ಗುಡಿ
ಲಾಯ +ಚವುಕಿಗೆ+ ನಿಖಿಳ +ಭವನ +ನಿ
ಕಾಯವನು +ತೆಗೆದ್+ಒಟ್ಟಿದರು +ಬಂಡಿಗಳ +ಹಂತಿಯಲಿ
ರಾಯನ್+ಅನುಜರ +ದ್ರೋಣ +ಕೃಪ +ರಾ
ಧೇಯ +ಸೈಂಧವ +ಶಕುನಿ +ರಾಜ+ಪ
ಸಾಯಿತರ +ಗುಡಿ+ಗೂಢ+ಚಂಪಯವ್+ಏರಿದವು +ರಥವ

ಅಚ್ಚರಿ:
(೧) ಜಾಗಗಳನ್ನು ಹೇಳುವ ಪರಿ – ಅರಮನೆ, ಮಂಡವಿಗೆ, ಗುಡಿ, ಲಾಯ, ಚವುಕಿ, ಭವನ

ಪದ್ಯ ೩೪: ತಂಗುವ ಜಾಗವನ್ನು ಹೇಗೆ ಸಿದ್ಧಪಡಿಸಿದರು?

ಅರಸ ಕೇಳೈ ದ್ವೈತವನ ಬಂ
ಧುರ ನದೀತೀರದಲಿ ವನದಲಿ
ಸರಸಿಯಲಿ ದೀರ್ಘಿಕೆಗಳಲಿ ನದದಲಿ ತಟಾಕದಲಿ
ಬೆರೆಸಿ ಬಿಟ್ಟುದು ಕೂಡೆ ವಾಳೆಯ
ವರಮನೆಯ ಗುಡಿ ನೆಗಹಿದವು ವಿ
ಸ್ತರಿಸಿದವು ಮಂಡವಿಗೆ ಲಾಯದ ಭದ್ರಭವನಗಳು (ಅರಣ್ಯ ಪರ್ವ, ೧೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದ್ವೈತವನದ ನದೀನದಗಳ ತೀರಗಳು, ಸರೋವರಗಳು ಕೊಳಗಳ ತೀರದಲ್ಲಿ ದುರ್ಯೋಧನನ ಪರಿವಾರ ಸೈನ್ಯಗಳು ಬೀಡು ಬಿಟ್ಟವು. ಗುಡಾರಗಳು, ಡೇರೆಗಳ ಮನೆಗಳನ್ನು ಭದ್ರವಾಗಿ ಕಟ್ಟಿದರು. ಅರಸನಿಗೆ ಒಂದು ಭವನವನ್ನು ಕಟ್ಟಿ ಅದರ ಮೇಲೆ ಧ್ವಜವನ್ನು ಹಾರಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಂಧುರ: ಸುಂದರವಾದ; ನದಿ: ಸರಸಿ; ತೀರ: ತಟ; ವನ: ಕಾಡು; ಸರಸಿ: ನೀರು; ದೀರ್ಘ: ಉದ್ದ; ನದ: ಗಂಡು ತೊರೆ; ತಟಾಕ: ಕೆರೆ, ಜಲಾಶಯ; ಬೆರೆಸು: ಕೂಡು, ಸೇರು; ಕೂಡೆ: ಜೊತೆ; ಪಾಳೆಯ: ಬೀಡು, ಶಿಬಿರ; ಅರಮನೆ: ರಾಜರ ಆಲಯ; ಗುಡಿ: ಕುಟೀರ, ಮನೆ; ನೆಗಹು: ಮೇಲೆತ್ತು; ವಿಸ್ತರಿಸು: ಹಬ್ಬು, ಹರಡು; ಮಂಡವಿಗೆ: ಡೇರೆ,ಮಂಟಪ; ಲಾಯ: ಅಶ್ವಶಾಲೆ; ಭದ್ರ: ಗಟ್ಟಿಯಾದ; ಭವನ: ಆಲಯ;

ಪದವಿಂಗಡಣೆ:
ಅರಸ +ಕೇಳೈ +ದ್ವೈತವನ +ಬಂ
ಧುರ +ನದೀತೀರದಲಿ +ವನದಲಿ
ಸರಸಿಯಲಿ +ದೀರ್ಘಿಕೆಗಳಲಿ +ನದದಲಿ +ತಟಾಕದಲಿ
ಬೆರೆಸಿ +ಬಿಟ್ಟುದು +ಕೂಡೆ +ವಾಳೆಯವ್
ಅರಮನೆಯ +ಗುಡಿ +ನೆಗಹಿದವು+ ವಿ
ಸ್ತರಿಸಿದವು +ಮಂಡವಿಗೆ +ಲಾಯದ +ಭದ್ರ+ಭವನಗಳು

ಪದ್ಯ ೪೬: ರಾಜರ ಡೇರೆಗಳಿಗೆ ಯಾವ ರೀತಿ ಭದ್ರತೆ ಒದಗಿಸಲಾಗಿತ್ತು?

ವೀರ ಪಾಂಡವರಿವರರಸುಕು
ಮಾರ ವರ್ಗದ ಮಂಡವಿಗೆ ಗೂ
ಡಾರಗಳನೊಳಕೊಂಡು ಬಿಗಿದವು ತಳಿಯ ಕಟ್ಟುಗಳು
ವಾರಣದ ಸಾಲುಗಳ ಸುತ್ತಲು
ಭಾರಿಸಿತು ಪಾಂಚಾಲ ಮತ್ಸ್ಯರ
ಭೂರಿ ಬಲ ಬಿಟ್ಟುದು ಮಹೀಶನ ಗುಡಿಯ ಬಳಸಿನಲಿ (ಉದ್ಯೋಗ ಪರ್ವ, ೧೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಉಪಪಾಂಡವರ, ರಾಜಪುತ್ರರ, ಗುಡಾರ ಮಂಟಪಗಳ ಸುತ್ತಲೂ ಮರದ ಕೊರಡುಗಳ ಕೋಟೆ ಆನೆಗಳ ಸಾಲುಗಳು, ಅದರ ಸುತ್ತಲೂ ಪಾಂಚಾಲ ಮತ್ಸ್ಯರ ಮಹಾಸೈನ್ಯಗಳು ಧರ್ಮಜನ ಮನೆಯ ಸುತ್ತಲೂ ಬಳಸಿ ನಿಂತವು.

ಅರ್ಥ:
ವೀರ: ಶೂರ; ಅರಸು: ರಾಜ; ಕುಮಾರ: ಮಕ್ಕಳು; ವರ್ಗ: ಗುಂಪು; ಮಂಡವಿಗೆ: ಗುಡಾರ, ಡೇರೆ; ಗುಡಾರ: ಶಿಬಿರ, ಬಟ್ಟೆಮನೆ; ಒಳಕೊಂಡು: ಸೇರಿಸಿ; ಬಿಗಿ: ಗಟ್ಟಿ, ಬಂಧನ; ತಳಿ: ಜಾತಿ, ಬೇಲಿ; ಕಟ್ಟು: ಆವರಿಸು; ವಾರಣ: ಆನೆ; ಸಾಲು: ಆವಳಿ; ಸುತ್ತಲು: ಆವರಿಸು; ಭಾರಿಸಿ: ಹರಡು; ಭೂರಿ: ಹೆಚ್ಚು, ಅಧಿಕ; ಬಲ: ಸೈನ್ಯ; ಬಿಟ್ಟುದು: ಆವರಿಸು, ಹರಡು; ಮಹೀಶ: ರಾಜ; ಗುಡಿ: ಆಲಯ; ಬಳಸು: ಸುತ್ತುವರಿಯುವಿಕೆ;

ಪದವಿಂಗಡಣೆ:
ವೀರ +ಪಾಂಡವರ್+ಇವರ್+ಅರಸು+ಕು
ಮಾರ +ವರ್ಗದ +ಮಂಡವಿಗೆ+ ಗೂ
ಡಾರಗಳನ್+ಒಳಕೊಂಡು +ಬಿಗಿದವು +ತಳಿಯ +ಕಟ್ಟುಗಳು
ವಾರಣದ +ಸಾಲುಗಳ +ಸುತ್ತಲು
ಭಾರಿಸಿತು+ ಪಾಂಚಾಲ +ಮತ್ಸ್ಯರ
ಭೂರಿ +ಬಲ +ಬಿಟ್ಟುದು +ಮಹೀಶನ +ಗುಡಿಯ +ಬಳಸಿನಲಿ

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಭೂರಿ ಬಲ ಬಿಟ್ಟುದು
(೨) ಗೂಡಾರ, ಮಂಡವಿಗೆ, ಗುಡಿ; ಬಳಸು, ಸುತ್ತಲು – ಸಾಮ್ಯಾರ್ಥ ಪದಗಳು