ಪದ್ಯ ೩೫: ದುರ್ಯೋಧನನು ಯಾವ ರೀತಿ ದನಗಳನ್ನು ನೋಡಿದನು?

ಕರೆಸಿದನು ಕೀಲಾರಿಗಳನಾ
ದರಿಸಿ ಹಟ್ಟಿಯ ತುರುಗಳೆಲ್ಲವ
ತರಿಸಿ ನೋಡಿದನಲ್ಲಿ ಹಿಂಡಿನ ಕೋಟಿ ಸಂಖ್ಯೆಗಳ
ಹರಿವ ಹಾರುವ ಪಂಟಿಸುವ ಸೈ
ವರಿವ ಮರಳುವ ಮುರಿವ ನಿಲುವೆಳೆ
ಗರುಗಳನು ನೋಡಿದನು ನಗುತ ನರೇಂದ್ರನೊಲವಿನಲಿ (ಅರಣ್ಯ ಪರ್ವ, ೧೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ದನಗಾಹಿಗಳನ್ನು ಕರೆಸಿ ಹಟ್ಟಿಯಲ್ಲಿದ್ದ ಅಸಂಖ್ಯಾತ ಗೋವುಗಳ ಹಿಂಡುಗಳನ್ನು ನೋಡಿದನು. ಓಡುವ, ಎಗರುವ, ಮುಗ್ಗರಿಸುವ, ಮುಂದೆ ಓಡುವ, ಹಿಂದಿರುಗಿ ಬರುವ, ಪಕ್ಕಕ್ಕೆ ತಿರುಗುವ, ನಿಲ್ಲುವ ಎಳೆಯಕರುಗಳನ್ನು ಕೌರವನು ಪ್ರೀತಿಯಿಂದ ನಗುತ್ತಾ ನೋಡಿದನು.

ಅರ್ಥ:
ಕರೆಸು: ಬರೆಮಾಡು; ಕೀಲಾರಿ: ದನಕರುಗಳನ್ನು ಸಾಕುವವನು, ಗೋವಳ; ಆದರಿಸು: ಗೌರವಿಸು; ಹಟ್ಟಿ: ದನಗಳು ವಾಸಿಸುವ ಸ್ಥಳ; ತುರು: ದನ ಕರುಗಳು; ತರಿಸು: ಬರೆಮಾಡು; ನೋಡು: ವೀಕ್ಷಿಸು; ಹಿಂಡು: ಗುಂಪು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ; ಹರಿ: ಚಲಿಸುವ, ಹಾರು: ಎಗರುವ; ಪಂಟಿಸು: ಸುತ್ತುವರಿ, ಎದುರಿಸು; ಸೈವರಿ: ನೇರವಾಗಿ ಸಾಗು; ಮರಳು: ಹಿಂದಿರುಗು; ಮುರಿ: ಸೀಳು; ನಿಲುವ: ನಿಲ್ಲುವ; ಕರು: ಹಸು, ಎಮ್ಮೆಗಳ ಮರಿ; ನಗು: ಸಂತಸ; ನರೇಂದ್ರ: ರಾಜ; ಒಲವು: ಪ್ರೀತಿ;

ಪದವಿಂಗಡಣೆ:
ಕರೆಸಿದನು +ಕೀಲಾರಿಗಳನ್
ಆದರಿಸಿ +ಹಟ್ಟಿಯ +ತುರುಗಳೆಲ್ಲವ
ತರಿಸಿ +ನೋಡಿದನಲ್ಲಿ+ ಹಿಂಡಿನ +ಕೋಟಿ +ಸಂಖ್ಯೆಗಳ
ಹರಿವ +ಹಾರುವ +ಪಂಟಿಸುವ +ಸೈ
ವರಿವ +ಮರಳುವ+ ಮುರಿವ +ನಿಲುವ್+ಎಳೆ
ಕರುಗಳನು +ನೋಡಿದನು +ನಗುತ +ನರೇಂದ್ರನೊಲವಿನಲಿ

ಅಚ್ಚರಿ:
(೧) ನ ಕಾರದ ಸಾಲು ಪದ – ನಿಲುವೆಳೆಗರುಗಳನು ನೋಡಿದನು ನಗುತ ನರೇಂದ್ರನೊಲವಿನಲಿ
(೨) ಕರುಗಳ ವಿವರ – ಹರಿವ, ಹಾರುವ, ಪಂಟಿಸುವ, ಸೈವರಿವ, ಮರಳುವ, ಮುರಿವ, ನಿಲುವ