ಪದ್ಯ ೧೭: ಸ್ತ್ರೀಯರು ಹೇಗೆ ಕಳಾಹೀನರಾಗಿದ್ದರು?

ಎಸಳುಗಂಗಳ ಬೆಳಗನಶ್ರು
ಪ್ರಸರ ತಡೆದುದು ಶೋಕಮಯಶಿಖಿ
ಮುಸುಡ ಕಾಂತಿಯ ಕುಡಿದುದೊಸರುವ ಬಿಸಿಲ ಬೇಗೆಗಳು
ಮಿಸುಪ ಲಾವಣ್ಯಾಂಬುವನು ಬ
ತ್ತಿಸಿದವಂಗುಲಿಯುಪಹತಿಯ ಕೇ
ಣಸರ ಸೆಳೆದುದು ಕುಚದ ಚೆಲುವನು ಕೋಮಲಾಂಗಿಯರ (ಗದಾ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಆ ಹಲವಾರು ಸ್ತ್ರೀಯರಲ್ಲಿ ಅವರ ಎಸಳುಗಣ್ಣುಗಳ ಕಾಂತಿಯನ್ನು ಕಣ್ಣೀರು ಮರೆಮಾಡಿತು. ಅವರ ಶೋಕಾಗ್ನಿಯು ಮುಖಕಾಂತಿಯನ್ನು ಬಾಡಿಸಿತು. ಬಿಸಿಲ ಬೇಗೆಯು ಅವರ ಲಾವಣ್ಯಜಲವನ್ನು ಬತ್ತಿಸಿದವು. ಅವರ ಬೆರಳುಗಳ ಘಾತ, ಅವರ ಕುಚಗಲ ಚೆಲುವನ್ನು ಮಾಣಿಸಿತು.

ಅರ್ಥ:
ಎಸಳು: ಪದರ, ಪಟಲ; ಕಂಗಳು: ಕಣ್ಣು, ನಯನ; ಬೆಳಗು: ಹೊಳೆ; ಅಶ್ರು: ಕಣ್ಣೀರು; ಪ್ರಸರ: ಹರಡುವುದು, ವಿಸ್ತಾರ; ತಡೆ: ನಿಲ್ಲು; ಶೋಕ: ದುಃಖ; ಶಿಖಿ: ಬೆಂಕಿ; ಮುಸುಡ: ಮುಖ, ಆನನ; ಕಾಂತಿ: ಪ್ರಕಾಶ; ಕುಡಿ: ಪಾನಮಾಡು; ಒಸರು: ಜಿನುಗು, ಸೋರು; ಬಿಸಿಲು: ಸೂರ್ಯನ ಪ್ರಕಾಶ; ಬೇಗೆ: ತಾಪ, ಕಾವು; ಮಿಸುಪ: ಹೊಳೆ; ಲಾವಣ್ಯ: ಚೆಲುವು; ಅಂಬು: ನೀರು; ಬತ್ತು: ಒಣಗಿದುದು; ಅಂಗುಲಿ: ಬೆರಳು; ಉಪಹತಿ: ಹೊಡೆತ, ಆಘಾತ; ಕೇಣಸ: ಹೊಟ್ಟೆಕಿಚ್ಚು, ಸಂಶಯ; ಸೆಳೆ: ಜಗ್ಗು, ಎಳೆ, ಆಕರ್ಷಿಸು; ಕುಚ: ಮೊಲೆ, ಸ್ತನ; ಚೆಲುವು: ಸೌಂದರ್ಯ; ಕೋಮಲಾಂಗಿ: ಚೆಲುವೆ, ಹೆಣ್ಣು;

ಪದವಿಂಗಡಣೆ:
ಎಸಳು+ಕಂಗಳ +ಬೆಳಗನ್+ಅಶ್ರು
ಪ್ರಸರ+ ತಡೆದುದು +ಶೋಕಮಯ+ಶಿಖಿ
ಮುಸುಡ +ಕಾಂತಿಯ +ಕುಡಿದುದ್+ಒಸರುವ +ಬಿಸಿಲ +ಬೇಗೆಗಳು
ಮಿಸುಪ +ಲಾವಣ್ಯ+ಅಂಬುವನು +ಬ
ತ್ತಿಸಿದವ್+ಅಂಗುಲಿ +ಉಪಹತಿಯ +ಕೇ
ಣಸರ +ಸೆಳೆದುದು +ಕುಚದ +ಚೆಲುವನು +ಕೋಮಲಾಂಗಿಯರ

ಅಚ್ಚರಿ:
(೧) ಹೋಲಿಕೆಯನ್ನು ನೀಡುವ ಪರಿ – ಎಸಳುಗಂಗಳ ಬೆಳಗನಶ್ರು ಪ್ರಸರ ತಡೆದುದು, ಶೋಕಮಯಶಿಖಿ
ಮುಸುಡ ಕಾಂತಿಯ ಕುಡಿದು

ಪದ್ಯ ೪೩: ಅಶ್ವತ್ಥಾಮನು ಕೃಪನೆದುರು ಹೇಗೆ ಬಂದನು?

ಬಸಿವ ರಕುತದಡಾಯುಧದ ನೆಣ
ವಸೆಯತೊಂಗಲುಗರುಳ ಬಂಧದ
ವಸನ ಕೈಮೈಗಳ ಕಠೋರಭ್ರುಕುಟಿ ಭೀಷಣದ
ಮುಸುಡ ಹೊಗರಿನ ದಂತದಂಶಿತ
ದಶನವಾಸದ ವೈರಿಹಿಂಸಾ
ವ್ಯಸನ ವೀರಾವೇಶಿ ಬಂದನು ಕೃಪನ ಸಮ್ಮುಖಕೆ (ಗದಾ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಖಡ್ಗದಿಮ್ದ ರಕ್ತ ಬಸಿಯುತ್ತಿರಲು, ನೆಣ ವಸೆ ಕರುಳ ತುಂಡುಗಳು ಅಂಟಿದ ಬಟ್ಟೆ, ಕೈ, ಮೈಗಳಿಂದ ಕೂಡಿ ಕಠೋರವಾದ ಭಯಂಕರವಾದ ಹುಬ್ಬುಗಳನ್ನು ಗಂಟಿಟ್ಟು ಮುಖವು ಕಠೋರವಾಗಿ ಕಾಣುತ್ತಿರಲು, ಹಲ್ಲಿನಿಂದ ತುಟಿಯನ್ನು ಕಚ್ಚಿ, ವೈರಿ ಸಂಹಾರ ವ್ಯಸನಿಯಾದ ಅಶ್ವತ್ಥಾಮನು ಕೃಪನ ಬಳಿಗೆ ಬಂದನು.

ಅರ್ಥ:
ಬಸಿ: ಒಸರು, ಸ್ರವಿಸು; ರಕುತ: ನೆತ್ತರು; ಆಯುಧ: ಶಸ್ತ್ರ; ನೆಣ: ಕೊಬ್ಬು, ಮೇದಸ್ಸು; ತೊಂಗಲು: ಗೊಂಚಲು, ಗೊಂಡೆ; ಕರುಳು: ಪಚನಾಂಗ; ಬಂಧ: ಕಟ್ಟು, ಬಂಧನ; ವಸನ: ದೇಹ, ವಾಸಿಸುವಿಕೆ, ನೆಲಸುವಿಕೆ; ಕೈ: ಹಸ್ತ; ಮೈ: ದೇಹ; ಕಠೋರ: ಭಯಂಕರ; ಭುಕುಟಿ: ಹುಬ್ಬು; ಭೀಷಣ: ಭಯಂಕರವಾದ; ಮುಸುಡು: ಮುಖ; ಹೊಗರು: ಕಾಂತಿ, ಪ್ರಕಾಶ; ದಂತ: ಹಲ್ಲು; ದಂಶ: ಕಚ್ಚುವುದು; ದಶನ: ಹಲ್ಲು, ದಂತ; ವ್ಯಸನ: ಗೀಳು, ಚಟ; ವೀರಾವೇಶ: ರೋಷ; ಬಂದನು: ಆಗಮಿಸು; ಸಮ್ಮುಖ: ಎದುರು;

ಪದವಿಂಗಡಣೆ:
ಬಸಿವ +ರಕುತದ್+ಅಡಾಯುಧದ +ನೆಣ
ವಸೆಯ+ತೊಂಗಲು+ಕರುಳ +ಬಂಧದ
ವಸನ +ಕೈ+ಮೈಗಳ +ಕಠೋರ+ಭ್ರುಕುಟಿ +ಭೀಷಣದ
ಮುಸುಡ+ ಹೊಗರಿನ +ದಂತ+ದಂಶಿತ
ದಶನವಾಸದ +ವೈರಿ+ಹಿಂಸಾ
ವ್ಯಸನ+ ವೀರಾವೇಶಿ+ ಬಂದನು +ಕೃಪನ +ಸಮ್ಮುಖಕೆ

ಅಚ್ಚರಿ:
(೧) ಅಶ್ವತ್ಥಾಮನನ್ನು ವರ್ಣಿಸುವ ಪರಿ – ದಂತದಂಶಿತದಶನವಾಸದ ವೈರಿಹಿಂಸಾವ್ಯಸನ ವೀರಾವೇಶಿ

ಪದ್ಯ ೫೫: ಪಾಂಡವ ಸೈನ್ಯದಲ್ಲಿ ಯಾವ ರಸವು ತುಂಬಿತ್ತು?

ಬಿಸುಟ ಕೈದುಗಳೆಲ್ಲವನು ಕೈ
ವಶವ ಮಾಡಿತು ಸೇನೆ ಲಜ್ಜಾ
ರಸಕೆ ಗುರಿಯಾಯ್ತೊಮ್ಮೆ ಮರಳಿದು ಹರುಷಮಯರಸಕೆ
ಮುಸುಕುದಲೆಯಲಿ ಮುರಿದುದದು ಭಯ
ರಸದ ರಹಿಯಲಿ ತಿರುಗಿತಿದು ರವಿ
ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ (ದ್ರೋಣ ಪರ್ವ, ೧೯ ಸಂಧಿ, ೫೫ ಪದ್ಯ)

ತಾತ್ಪರ್ಯ:
ತಾನು ಹೊರಹಾಕಿದ್ದ ಆಯುಧಗಳೆಲ್ಲವನ್ನೂ ಪಾಂಡವಸೇನೆ ತೆಗೆದುಕೊಂಡಿತು. ನಾಚಿಕೆಗೀಡಾಗಿದ್ದ ಸೇನೆಯು ಹರ್ಷಿಸಿತು. ಕೌರವ ಸೈನ್ಯವು ತಲೆಗೆ ಮುಸುಕು ಹಾಕಿಕೊಂಡು ಬೀಡಿಗೆ ಭಯಪಡುತ್ತಾ ತಿರುಗಿ ಬಂದಿತು. ಸೂರ್ಯನು ವಿರಾಗದಿಂದ ಮುಖದಿರುಗಿಸಿ ಆಕಾಶವನ್ನು ಬಿಟ್ಟುಹೋದನು.

ಅರ್ಥ:
ಬಿಸುಟು: ಹೊರಹಾಕು; ಕೈದು: ಆಯುಧ; ಕೈ: ಹಸ್ತ; ವಶ: ಅಧೀನ; ಕೈವಶ: ಪಡೆ; ಸೇನೆ: ಸೈನ್ಯ; ಲಜ್ಜೆ: ನಾಚಿಕೆ; ರಸ: ಸಾರ; ಗುರಿ: ಈಡು, ಉದ್ದೇಶ; ಮರಳು: ಹಿಂದಿರುಗು; ಹರುಷ: ಸಂತಸ; ಮುಸುಕು: ಆವರಿಸು; ತಲೆ: ಶಿರ; ಮುರಿ: ಸೀಳು; ಭಯ: ಅಂಜಿಕೆ; ರಹಿ: ರೀತಿ, ಪ್ರಕಾರ; ತಿರುಗು: ಅಲೆದಾಡು, ಸುತ್ತು; ರವಿ: ಸೂರ್ಯ; ಮುಸುಡು: ಮುಖ; ವಿರಾಗ: ವಿರಕ್ತಿ, ವೈರಾಗ್ಯ; ಬೀಳ್ಕೊಡು: ತೆರಳು; ಅಂಬರ: ಆಗಸ;

ಪದವಿಂಗಡಣೆ:
ಬಿಸುಟ +ಕೈದುಗಳ್+ಎಲ್ಲವನು+ ಕೈ
ವಶವ +ಮಾಡಿತು +ಸೇನೆ +ಲಜ್ಜಾ
ರಸಕೆ +ಗುರಿಯಾಯ್ತ್+ಒಮ್ಮೆ +ಮರಳಿದು +ಹರುಷಮಯ+ರಸಕೆ
ಮುಸುಕು+ತಲೆಯಲಿ +ಮುರಿದುದದು +ಭಯ
ರಸದ +ರಹಿಯಲಿ +ತಿರುಗಿತಿದು+ ರವಿ
ಮುಸುಡ +ತಿರುಹಿ +ವಿರಾಗದಲಿ+ ಬೀಳ್ಕೊಟ್ಟನ್+ಅಂಬರವ

ಅಚ್ಚರಿ:
(೧) ದಿನ ಕಳೆಯಿತು ಎಂದು ಹೇಳಲು – ರವಿ ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ
(೨) ಲಜ್ಜಾರಸ, ಭಯರಸ, ಹರುಷರಸ – ರಸ ಪದದ ಬಳಕೆ

ಪದ್ಯ ೨೬: ಅಭಿಮನ್ಯುವು ಯಾವುದನ್ನು ಸುಂಕವಾಗಿ ಕೇಳುತ್ತಿದ್ದನು?

ರಸದ ಬಂಧದ ಬಿಗುಹು ವಹ್ನಿಯ
ಮುಸುಕನುಗಿದುಳಿವುದೆ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವರೇ ಮಹಾದೇವ
ಎಸುತ ಹೊಗುವರು ಭಟನ ಘಾಯಕೆ
ಮುಸುಡ ತಿರುಹುವರಡಿಗಡಿಗೆ ಸಾ
ಹಸದ ಸುಂಕಿಗನೊಡನೆ ತಲೆಯೊತ್ತಿದರು ಷಡುರಥರು (ದ್ರೋಣ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ರಸದಿಂದ ಅಂಟಿಸಿದ ವಸ್ತುವಿನ ಗಟ್ಟಿತನ ಬೆಂಕಿಯ ಝಳಕ್ಕೆ ನಿಂತೀತೇ? ಅಭಿಮನ್ಯುವಿನೆದುರು ನಿಂತು ಯಾರಿಗಾದರೂ ಬದುಕಲು ಸಾಧ್ಯವೇ? ಮುನ್ನುಗ್ಗಿ ಬಾಣ ಬಿಡುತ್ತಿದ್ದವರು ಅವನ ಹೊಡೆತಕ್ಕೆ ಮುಖವನ್ನು ತಿರುಗಿಸುತ್ತಿದ್ದರು. ಸಾಹಸವನ್ನೇ ಸುಂಕವಾಗಿ ಕೇಳುತ್ತಿದ್ದ ಅಭಿಮನ್ಯುವಿನೊಡನೆ ಹಾಗೂ ಹೀಗೂ ಕಾದುತ್ತಿದ್ದರು.

ಅರ್ಥ:
ರಸ: ದ್ರವ; ಲಾಲಾ, ಮಧು; ಬಂಧ: ಅಂಟು, ಕಟ್ಟು; ಬಿಗು: ಗಟ್ಟಿಯಾಗಿ; ವಹ್ನಿ: ಅಗ್ನಿ; ಮುಸುಕು: ಹೊದಿಕೆ; ಉಗಿ: ಹೊರಹಾಕು; ಉಳಿವು: ಜೀವಿಸು; ಕುಮಾರ: ಮಗು; ಮುಸುಡು: ಮುಖ, ಮೋರೆ; ಮುಂದೆ: ಎದುರು; ಬಿದ್ದು: ಬೀಳು; ಬದುಕು: ಜೀವಿಸು; ಹೊಗು: ಒಳಸೇರು, ಪ್ರವೇಶಿಸು; ಭಟ: ಸೈನಿಕ; ಘಾಯ: ಪೆಟ್ಟು; ತಿರುಹು: ತಿರುಗಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಸಾಹಸ: ಪರಾಕ್ರಮ; ಸುಂಕು: ಪದರವಾಗಿರುವುದು; ಒಡನೆ: ಕೂಡಲೆ; ತಲೆ: ಶಿರ; ಒತ್ತು: ಮುತ್ತು; ರಥ: ಬಂಡಿ;

ಪದವಿಂಗಡಣೆ:
ರಸದ+ ಬಂಧದ+ ಬಿಗುಹು +ವಹ್ನಿಯ
ಮುಸುಕನ್+ಉಗಿದ್+ಉಳಿವುದೆ +ಕುಮಾರನ
ಮುಸುಡ +ಮುಂದಕೆ +ಬಿದ್ದು +ಬದುಕುವರೇ +ಮಹಾದೇವ
ಎಸುತ +ಹೊಗುವರು+ ಭಟನ +ಘಾಯಕೆ
ಮುಸುಡ +ತಿರುಹುವರ್+ಅಡಿಗಡಿಗೆ +ಸಾ
ಹಸದ +ಸುಂಕಿಗನ್+ಒಡನೆ +ತಲೆಯೊತ್ತಿದರು +ಷಡುರಥರು

ಅಚ್ಚರಿ:
(೧) ಉಪಮಾನದ ಪ್ರಯೋಗ – ರಸದ ಬಂಧದ ಬಿಗುಹು ವಹ್ನಿಯ ಮುಸುಕನುಗಿದುಳಿವುದೆ

ಪದ್ಯ ೫೭: ದ್ರೋಣನನ್ನು ಯಾರು ಮುತ್ತಿದರು?

ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖ ಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದರು ಪಾಂಚಾಲ ನಾಯಕರು
ಮುಸುಡ ಬಿಗುಹಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು (ದ್ರೋಣ ಪರ್ವ, ೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ದ್ರೋಣನ ಬಾಣಗಳಿಂದ ನೊಮ್ದು ರಥದಲ್ಲಿ ಮೂರ್ಛಿತನಾಗಿ ಬಿದ್ದನು. ಆಗ ಎಂಟು ಸಾವಿರ ಪರಾಕ್ರಮದ ಬಿರುದುಗಳನ್ನು ಹೊತ್ತ ಪಾಂಚಾಲ ರಥಿಕರು ಮುಖವನ್ನು ಬಿಗಿದುಕೊಂಡು, ಕತ್ತಿಯನ್ನು ಹಿರಿದು ಚತುರಂಗ ಸೈನ್ಯದೊಡನೆ ದ್ರೋಣನನ್ನು ಮುತ್ತಿದರು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ವಿಶಿಖ: ಬಾಣ, ಅಂಬು; ಹತಿ: ಹೊಡೆತ; ನೊಂದು: ನೋವುಂಡು; ರಥ: ಬಂಡಿ; ಬಸವಳಿ: ಆಯಾಸಗೊಂಡು; ಬಳಿ: ಹತ್ತಿರ; ಸಲಿಸು: ಪೂರೈಸು, ಒಪ್ಪಿಸು; ನಾಯಕ: ಒಡೆಯ; ಮುಸುಡು: ಮುಖ; ಬಿಗು: ಗಟ್ಟಿ; ಸೆಳೆ: ಆಕರ್ಷಿಸು; ಆಯುಧ: ಶಸ್ತ್ರ; ಹೊಸ: ನವೀನ; ಪರಿ: ರೀತಿ; ಬಿರುದು: ಗೌರವಸೂಚಕ ಪದ; ಗಜ: ಆನೆ; ರಥ: ಬಂಡಿ; ವಿಸರ: ವಿಸ್ತಾರ, ವ್ಯಾಪ್ತಿ; ಮಧ್ಯ: ನಡುವೆ; ಸಾವಿರ: ಸಹಸ್ರ; ರಥಿಕ: ರಥದಲ್ಲಿ ಕುಳಿತು ಯುದ್ಧಮಾಡುವವ; ಔಂಕು: ಒತ್ತು, ಹಿಚುಕು;

ಪದವಿಂಗಡಣೆ:
ಎಸಲು +ಧೃಷ್ಟದ್ಯುಮ್ನ +ದ್ರೋಣನ
ವಿಶಿಖ+ ಹತಿಯಲಿ +ನೊಂದು +ರಥದಲಿ
ಬಸವಳಿಯೆ +ಬಳಿ +ಸಲಿಸಿದರು +ಪಾಂಚಾಲ +ನಾಯಕರು
ಮುಸುಡ +ಬಿಗುಹಿನ +ಸೆಳೆದಡ್+ಆಯುಧ
ಹೊಸ +ಪರಿಯ +ಬಿರುದುಗಳ +ಗಜ+ರಥ
ವಿಸರ+ ಮಧ್ಯದಲ್+ಎಂಟು +ಸಾವಿರ +ರಥಿಕರ್+ಔಂಕಿದರು

ಅಚ್ಚರಿ:
(೧)

ಪದ್ಯ ೬೮: ಭೀಮನು ಏನೆಂದು ಗುಡುಗಿದನು?

ಬಸುರ ಬಗಿವೆನು ಕೀಚಕನ ನಸು
ಮಿಸುಕಿದರೆ ವೈರಾಟ ವಂಶದ
ಹೆಸರ ತೊಡೆವೆನು ನಮ್ಮನರಿದೊಡೆ ಕೌರವ ವ್ರಜವ
ಕುಸುರಿದರಿವೆನು ಭೀಮ ಕಷ್ಟವ
ನೆಸಗಿದನು ಹಾಯೆಂದರಾದೊಡೆ
ಮುಸುಡನಮರಾದ್ರಿಯಲಿ ತೆಗೆವೆನು ದೇವಸಂತತಿಯ (ವಿರಾಟ ಪರ್ವ, ೩ ಸಂಧಿ, ೬೮ ಪದ್ಯ)

ತಾತ್ಪರ್ಯ:
ಕೀಚಕನ ಹೊಟ್ಟೆಯನ್ನು ಬಗಿದು ಬಿಡುತ್ತೇನೆ, ಸ್ವಲ್ಪವಾದರೂ ಎದುರಾಡಿದರೆ ವಿರಾಟನ ವಂಶವನ್ನೇ ನಿರ್ನಾಮ ಮಾಡುತ್ತೇನೆ. ಕೌರವರಿಗೆ ಇದು ಗೊತ್ತಾದರೆ ಅವರೆಲ್ಲರನ್ನೂ ಕೊಚ್ಚಿ ಹಾಕುತ್ತೇನೆ, ಭೀಮನು ಮಹಾಕ್ರೂರ ಕರ್ಮವನ್ನು ಮಾಡಿದನೆಂದು ದೇವತೆಗಳು ಹೇಳಿದರೆ, ಮೇರು ಪರ್ವತದಲ್ಲಿ ಅವರ ಮುಖಗಳಿಲ್ಲದಂತೆ ಮಾದುತ್ತೇನೆ ಎಂದು ಭೀಮನು ಗುಡುಗಿದನು.

ಅರ್ಥ:
ಬಸುರ: ಹೊಟ್ಟೆ; ಬಗಿ: ಸೀಳು; ನಸು: ಸ್ವಲ್ಪ; ಮಿಸುಕು:ಅಲುಗಾಟ, ಅಲ್ಲಾಟ; ವಂಶ: ಕುಲ; ಹೆಸರು: ನಾಮ; ತೊಡೆ: ಅಳಿಸು; ಅರಿ: ತಿಳಿ; ವ್ರಜ: ಗುಂಪು; ಕುಸುರಿ: ತುಂಡು; ಅರಿ: ಕತ್ತರಿಸು; ಕಷ್ಟ: ತೊಂದರೆ; ಎಸಗು: ಉಂಟುಮಾಡು, ಆಚರಿಸು; ಮುಸುಡು: ಮುಖ; ಅಮರ: ದೇವತೆಗಳು; ಅದ್ರಿ: ಬೆಟ್ಟ; ತೆಗೆ: ಕಳಚು, ಹೊರತರು; ದೇವ: ಅಮರ; ಸಂತತಿ: ಗುಂಪು;

ಪದವಿಂಗಡಣೆ:
ಬಸುರ +ಬಗಿವೆನು+ ಕೀಚಕನ+ ನಸು
ಮಿಸುಕಿದರೆ +ವೈರಾಟ +ವಂಶದ
ಹೆಸರ +ತೊಡೆವೆನು +ನಮ್ಮನ್+ಅರಿದೊಡೆ +ಕೌರವ +ವ್ರಜವ
ಕುಸುರಿದ್+ಅರಿವೆನು +ಭೀಮ +ಕಷ್ಟವನ್
ಎಸಗಿದನು+ ಹಾ+ಎಂದರ್+ಆದೊಡೆ
ಮುಸುಡನ್+ಅಮರಾದ್ರಿಯಲಿ +ತೆಗೆವೆನು +ದೇವ+ಸಂತತಿಯ

ಅಚ್ಚರಿ:
(೧) ನಾಶ ಮಾಡುವೆನೆಂದು ಹೇಳಲು ಬಳಸಿದ ಪದಗಳು – ಬಗಿ, ತೊಡೆ, ಅರಿ, ತೆಗೆ

ಪದ್ಯ ೩೧: ಕರ್ಣನು ಹೇಗೆ ಚೇತರಿಸಿಕೊಂಡನು?

ಬಸಿವರಕುತವ ತೊಳೆತೊಳೆದು ಮಂ
ತ್ರಿಸಿದ ಸಲಿಲವ ಮುಕ್ಕುಳಿಸಿ ಯುಗು
ಳ್ದಸಮಸಾಹಸಿ ಕೊಂಡ ವರ ಕರ್ಪೂರ ವೀಳೆಯವ
ಮುಸುಡದುಗುಡದ ತನ್ನ ಸೇನಾ
ಪ್ರಸರಕಭಯವನಿತ್ತು ಮಾರಿಯ
ಮುಸುಕನುಗಿದನ ತೋರೆನುತ ತಾಗಿದನು ಭೂಪತಿಯ (ಕರ್ಣ ಪರ್ವ, ೧೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ತನ್ನ ದೇಹದಿಂದ ಹೊರಬೀಳುತ್ತಿದ್ದ ಬಿಸಿಯ ರಕ್ತವನ್ನು ತೊಳೆದು, ಮಂತ್ರಿಸಿದ ನೀರನ್ನು ಮುಕುಳಿಸಿ ಉಗುಳಿ, ಅಸಮಾನ ಸಾಹಸಿಯಾದ ಕರ್ಣನು ಕರ್ಪೂರ ತಾಂಬೂಲಗಳನ್ನು ಹಾಕಿಕೊಂಡು ದುಃಖಿಸುತ್ತಿದ್ದ ತನ್ನ ಸೇನೆಗೆ ಅಭಯವನ್ನು ನೀಡಿ ಮಾರಿಯ ಮುಸುಕನ್ನು ತೆಗೆದವರಾರು ತೋರಿಸು ಎಂದು ಯುಧಿಷ್ಠಿರನ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಬಸಿ: ಧಾರೆಯಾಗಿ ಬೀಳು, ಸುರಿ; ರಕುತ: ರಕ್ತ, ನೆತ್ತರ; ತೊಳೆ: ನಿವಾರಿಸು, ಪರಿಹರಿಸು; ಮಂತ್ರ: ಪವಿತ್ರವಾದ ದೇವತಾಸ್ತುತಿ; ಸಲಿಲ: ನೀರು; ಮುಕ್ಕುಳಿಸು: ಮುಲುಕು, ಬಾಯಿಗೆ ದ್ರವ್ಯವನ್ನು ಹಾಕಿಕೊಂಡು ಚೆಲ್ಲು; ಉಗುಳು: ಹೊರಹಾಕು; ಅಸಮ: ಸಮವಲ್ಲದ; ಕೊಂಡು: ತೆಗೆದು; ವರ: ಶ್ರೇಷ್ಠ; ಕರ್ಪೂರ: ಒಂದು ಬಗೆಯ ಸುಗಂಧ ದ್ರವ್ಯ; ವೀಳೆ: ತಾಂಬೂಲ; ಮುಸುಡು: ಮುಖ, ಮೊರೆ; ದುಗುಡ: ದುಃಖ; ಸೇನ: ಸೈನ್ಯ; ಪ್ರಸರ:ಗುಂಪು, ಸಮೂಹ; ಅಭಯ: ನಿರ್ಭಯತೆ, ರಕ್ಷಣೆ; ಮಾರಿ: ಕ್ಷುದ್ರದೇವತೆ; ಮುಸುಕು: ಹೊದಿಕೆ; ಉಗಿ: ಹೊರಹಾಕು; ತೋರು: ಪ್ರದರ್ಶಿಸು; ತಾಗು: ಮುಟ್ಟು; ಭೂಪತಿ: ರಾಜ;

ಪದವಿಂಗಡಣೆ:
ಬಸಿವ+ರಕುತವ +ತೊಳೆತೊಳೆದು +ಮಂ
ತ್ರಿಸಿದ +ಸಲಿಲವ +ಮುಕ್ಕುಳಿಸಿ +ಉಗುಳ್ದ್
ಅಸಮ+ಸಾಹಸಿ+ ಕೊಂಡ +ವರ +ಕರ್ಪೂರ +ವೀಳೆಯವ
ಮುಸುಡ+ದುಗುಡದ+ ತನ್ನ +ಸೇನಾ
ಪ್ರಸರಕ್+ಅಭಯವನಿತ್ತು +ಮಾರಿಯ
ಮುಸುಕನ್+ಉಗಿದನ +ತೋರೆನುತ+ ತಾಗಿದನು+ ಭೂಪತಿಯ

ಅಚ್ಚರಿ:
(೧) ಕರ್ಣನು ಮತ್ತೆ ಯುದ್ಧಕ್ಕೆ ನಿಂತ ಪರಿ – ಮಾರಿಯ ಮುಸುಕನುಗಿದನ ತೋರೆನುತ ತಾಗಿದನು ಭೂಪತಿಯ

ಪದ್ಯ ೩೨: ನಕುಲ ಸಹದೇವರನ್ನು ಯಾರು ಅಡ್ಡ ತಡೆದರು?

ನುಸಿಗಳಿರ ನಿಮಗೇಕೆ ಕರ್ಣನ
ಘಸಣಿ ನಾವೇ ನಿಮ್ಮ ನೆತ್ತಿಯ
ಮುಸಲವಲ್ಲಾ ಫಡ ನಕುಲ ಸಹದೇವ ನಿಲ್ಲೆನುತ
ಮುಸುಡ ಹೊಗರಿನ ಕಣ್ಣ ಕೆಂಪಿನ
ವಿಷಮರಗ್ಗದ ಕರ್ಣತನುಜರು
ಮಸಗಿ ಮುಂಚುವ ಮೋಹರವನಡಹಾಯ್ದು ತರುಬಿದರು (ಕರ್ಣ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರ ಮಹಾರಥರು ಮತ್ತೆ ಕರ್ಣನೊಡನೆ ಯುದ್ಧಮಾಡಲು ಮುಂದುವರೆಯುವುದನ್ನು ನೋಡಿದ ಕರ್ಣನ ಮಕ್ಕಳು, ಎಲೆ ಹುಳುಗಳಿರಾ, ನಿಮಗೇಕೆ ಕರ್ಣನೊಡನೆ ತೊಂದರೆ, ನಕುಲ ಸಹದೇವ ನಾವೇ ನಿಮ್ಮ ನೆತ್ತಿಯನ್ನು ಬಡಿಯುವ ಗದೆಗಳು, ಎನ್ನುತ್ತಾ ಕೆಂಗಣ್ಣನ್ನು ಬಿಟ್ಟು, ನುಗ್ಗಿ ಬರುತ್ತಿದ್ದ ಸೈನ್ಯವನ್ನು ಅಡ್ಡಹಾಕಿ ಯುದ್ಧಕ್ಕೆ ನಿಂತರು.

ಅರ್ಥ:
ನುಸಿ: ನೊರಜು, ಸಣ್ಣ ಹುಳು; ಘಸಣಿ: ತೊಂದರೆ; ನೆತ್ತಿ: ಶಿರ; ಮುಸಲ: ಗದೆ, ಒನಕೆ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನಿಲ್ಲು: ತಾಳು; ಮುಸುಡು: ಮುಖ, ಮೊರೆ; ಹೊಗರು: ಹೆಚ್ಚಳ, ಆಧಿಕ್ಯ, ಕಾಂತಿ; ಕಣ್ಣು: ನಯನ; ಕೆಂಪು: ರಕ್ತಬಣ್ಣ; ವಿಷಮ: ಕಷ್ಟಕರವಾದುದು; ಅಗ್ಗ: ಶ್ರೇಷ್ಠ; ತನುಜ: ಮಕ್ಕಳು; ಮಸಗು: ಕೆರಳು; ಮುಂಚು: ಮೊದಲು, ಮುಂದು; ಮೋಹರ: ಯುದ್ಧ; ಅಡ: ಅಡ್ಡಹಾಕು; ಹಾಯ್ದು: ಹೊಡೆದು; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು;

ಪದವಿಂಗಡಣೆ:
ನುಸಿಗಳಿರ +ನಿಮಗೇಕೆ +ಕರ್ಣನ
ಘಸಣಿ +ನಾವೇ +ನಿಮ್ಮ +ನೆತ್ತಿಯ
ಮುಸಲವಲ್ಲಾ +ಫಡ +ನಕುಲ +ಸಹದೇವ +ನಿಲ್ಲೆನುತ
ಮುಸುಡ+ ಹೊಗರಿನ+ ಕಣ್ಣ+ ಕೆಂಪಿನ
ವಿಷಮರ್+ಅಗ್ಗದ +ಕರ್ಣ+ತನುಜರು
ಮಸಗಿ+ ಮುಂಚುವ+ ಮೋಹರವನ್+ಅಡಹಾಯ್ದು +ತರುಬಿದರು

ಅಚ್ಚರಿ:
(೧) ಸಹದೇವ ನಕುಲರನ್ನು ಕರೆಯುವ ಪರಿ – ನುಸಿಗಳಿರ
(೨) ಸಾಲು ಪದಗಳು – ನಾವೇ ನಿಮ್ಮ ನೆತ್ತಿಯ; ಮಸಗಿ ಮುಂಚುವ ಮೋಹರವ

ಪದ್ಯ ೬೩: ಕೃಷ್ಣನು ದುರ್ಯೋಧನನನ್ನು ಏಕೆ ಕರೆಯುತ್ತಾನೆ?

ಕುಶಲವೇ ಕುರುರಾಯ ಬಾರೈ
ಮುಸುಡ ದುಗುಡವಿದೇಕೆ ಬಾಯಂ
ದಸುರರಿಪು ಕೌರವನ ಕರೆದನು ತನ್ನ ಸಮ್ಮುಖಕೆ
ಉಸುರಲಮ್ಮೆನು ಭಾವತನದೊಂ
ದೆಸಕ ಸಲುಗೆಯ ನೇಮವಾದೊಡೆ
ಬಿಸಜಲೋಚನ ಬಿನ್ನಹವನವಧರಿಸಬೇಕೆಂದ (ಉದ್ಯೋಗ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಕೃಷ್ಣನು ಚಿನ್ನದ ಸಿಂಹಾಸನದ ಮೇಲೆ ಆಸೀನನಾಗಿ ದುರ್ಯೋಧನನ್ನು ನೋಡಿ, ಇಲ್ಲಿ ಬಾ ದುರ್ಯೋಧನ, ಏಕೆ ಮುಖ ದುಃಖದಲ್ಲಿ ಮುಳುಗಿದೆ ನನ್ನೆದುರು ಬಾ ಎಂದು ಕರೆಯುತ್ತಾನೆ. ದುರ್ಯೋಧನನು ಆತನ ಮುಂದೆ ಬಂದು, ಹೇಳಲು ನೀನು ನಮಗೆ ಭಾವನ ಸಮಾನ, ಆ ಸಲುಗೆಯ ಮೇಲೆ ಒಂದು ಮನವಿಯನ್ನು ಮಾದುತ್ತೇನೆ ಅದನ್ನು ಗಮನವಿಟ್ಟು ಆಲಿಸು ಕಮಲಲೋಚನನಾದ ಕೃಷ್ಣನೇ ಎಂದು ಹೇಳಿದನು.

ಅರ್ಥ:
ಕುಶಲ: ಕ್ಷೇಮ; ರಾಯ: ರಾಜ; ಬಾರೈ: ಬಾ, ಆಗಮಿಸು; ಮುಸುಡ: ಮುಖ; ದುಗುಡ: ದುಃಖ; ಅಸುರರಿಪು: ಕೃಷ್ಣ; ಅಸುರ: ದನುಜ; ರಿಪು: ವೈರಿ; ಕರೆ: ಬರೆಮಾಡು; ಸಮ್ಮುಖ: ಮುಂದೆ; ಉಸುರು: ಹೇಳು; ಭಾವ: ತಂಗಿಯ ಗಂಡ; ಎಸಕ: ಕೆಲಸ; ಸಲುಗೆ: ಸದರ; ನೇಮ: ನಿಯಮ; ಬಿಸಜ:ಕಮಲ; ಲೋಚನ: ನಯನ; ಬಿಸಜಲೋಚನ: ಕಮಲದಂತೆ ನಯನವುಳ್ಳವ; ಬಿನ್ನಹ: ಮನವಿ; ಅವಧರಿಸು: ಮನಸ್ಸಿಟ್ಟು ಕೇಳು;

ಪದವಿಂಗಡಣೆ:
ಕುಶಲವೇ +ಕುರುರಾಯ +ಬಾರೈ
ಮುಸುಡ +ದುಗುಡವ್+ಇದೇಕೆ +ಬಾಯಂದ್
ಅಸುರರಿಪು+ ಕೌರವನ +ಕರೆದನು +ತನ್ನ +ಸಮ್ಮುಖಕೆ
ಉಸುರಲ್+ಎಮ್ಮೆನು+ ಭಾವತನದ್+ಒಂದ್
ಎಸಕ +ಸಲುಗೆಯ +ನೇಮವಾದೊಡೆ
ಬಿಸಜಲೋಚನ +ಬಿನ್ನಹವನ್+ಅವಧರಿಸ+ಬೇಕೆಂದ

ಅಚ್ಚರಿ:
(೧) ಕೃಷ್ಣನನ್ನು ಬಿಸಜಲೋಚನ, ಅಸುರರಿಪು ಎಂದು ಕರೆದಿರುವುದು
(೨) ಜೋಡಿ ಅಕ್ಷರಗಳ ಪದಗಳು – ಬಿಸಜಲೋಚನ ಬಿನ್ನಹವನವಧರಿಸು, ಕುಶಲವೇ ಕುರುರಾಯ, ಕೌರವನ ಕರೆದನು
(೩) ಮುಸುಡ, ದುಗುಡ – ಪ್ರಾಸ ಪದ

ಪದ್ಯ ೩೨: ನಾರದರು ಯುಧಿಷ್ಠಿರನನ್ನು ಮತ್ತಾವ ಪ್ರಶ್ನೆಗಳನ್ನು ಕೇಳಿದರು?

ಗಸಣಿಯಿಲ್ಲೆಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡ ಧರ್ಮದಲಿರದಲೇ ವೈದಿಕ ವಿಧಾನದಲಿ
ಸಸಿನವೇನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಞರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ (ಸಭಾ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರ, ನಿನಗೆ ಸಪ್ತವ್ಯಸನಗಳ ಕಾಟ ಇಲ್ಲತಾನೆ? ನಿನ್ನ ತಮ್ಮಂದಿರು ಮತ್ತು ಮಕ್ಕಳು ಅಧರ್ಮನಿರತರಲ್ಲ ತಾನೆ, ವೇದೋಕ್ತ ಮಾರ್ಗದಲ್ಲಿ ನಿನ್ನ ತಿಳುವಳಿಕೆ ಸರಿಯಾಗಿದೆ ತಾನೆ? ದುಷ್ಟರು, ಸುಳ್ಳರು, ದಡ್ಡರು, ಮೋಸಗಾರರಿಗೆ ನಿನ್ನಂತರಂಗವನ್ನು ಹೇಳುವೆಯಾ? ಎಂದು ನಾರದರು ಪ್ರಶ್ನಿಸಿದರು.

ಅರ್ಥ:
ಗಸಣಿ:ಘರ್ಷಣೆ, ತೊಂದರೆ; ಸಪ್ತ: ಏಳು; ವ್ಯಸನ: ಚಟ; ಅನುಜ: ತಮ್ಮ; ತನುಜ: ಮಕ್ಕಳು; ಮುಸುಡು: ಮುಖ, ಮೊರೆ; ಧರ್ಮ: ಆಚಾರ; ವೈದಿಕ:ಸಂಪ್ರದಾಯ ನಿಷ್ಠೆ; ವಿಧಾನ: ರೀತಿ, ಬಗೆ; ಉಸುರು: ಹೇಳು; ಖಳ: ದುಷ್ಟ; ಹುಸಿಕರು: ಸುಳ್ಳರು; ಡಂಬಕರು: ಮೋಸಗಾರರು; ಅಜ್ಞರು: ದಡ್ಡರು; ಅಂತರಂಗ:ಮನಸ್ಸು; ಸಸಿನ: ಸರಿಹೊಂದುವ;

ಪದವಿಂಗಡಣೆ:
ಗಸಣಿಯಿಲ್ಲೆಲೆ+ ನಿನಗೆ+ ಸಪ್ತ
ವ್ಯಸನದಲಿ +ನಿನ್+ಅನುಜ+ ತನುಜರ
ಮುಸುಡ +ಧರ್ಮದಲ್+ಇರದಲೇ +ವೈದಿಕ +ವಿಧಾನದಲಿ
ಸಸಿನವೇ+ ನಿನ್ನರಿತ+ ಖಳರಿಗೆ
ಹುಸಿಕರಿಗೆ +ಡಂಬಕರಿಗ್+ಅಜ್ಞರಿಗ್
ಉಸುರುವಾ +ನಿನ್+ಅಂತರಂಗವನ್+ಎಂದನಾ +ಮುನಿಪ

ಅಚ್ಚರಿ:
(೧) ಸಪ್ತವ್ಯಸನಗಳು: ದ್ಯೂತ, ಮಾಂಸಭಕ್ಷಣೆ, ಸುರಾಪಾನ, ವೇಶ್ಯಸಂಬಂಧ, ಖೇಟ (ವಿನೋದಕ್ಕಾಗಿ ಬೇಟೆ), ಕಳ್ಲತನ, ಬೇರೆಯವರ ಹೆಂಡತಿಯನ್ನು ಪ್ರೀತಿಸುವುದು
(೨) ಗಸಣಿ, ಮುಸುಡ, ಸಸಿನ, ಉಸುರು – ಪದಗಳ ಬಳಕೆ