ಪದ್ಯ ೬೭: ವಿದುರ ತನ್ನ ಬಿಲ್ಲನ್ನು ಏಕೆ ಮುರಿದನು?

ಕಡು ಮುಳಿಸಿನಲಿ ಭೀಮ ನಿನ್ನಯ
ತೊಡೆಗಳನು ಕಡಿವಾ ಸಮಯದೊಳು
ತಡೆದು ನಿನ್ನನು ಕಾಯಬೇಕೆಂದುಳುಹಿದೆನು ಧನುವ
ಕೆಡೆನುಡಿಸಿಕೊಂಡಿನ್ನು ಕಾವೆನೆ
ನುಡಿದು ಫಲವೇನೆನುತ ವಿದುರನು
ಹಿಡಿದ ಬಿಲ್ಲನು ಮುರಿದನಾ ಕುರುರಾಯ ಬೆರಗಾಗೆ (ಉದ್ಯೋಗ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಅಧಿಕ ಕೋಪದಲ್ಲಿದ್ದ ವಿದುರ “ಎಲೈ ದುರ್ಯೋಧನ ಭೀಮನು ನಿನ್ನ ತೊಡೆಗಳನ್ನು ಮುರಿಯುವ ಸಮಯದಲ್ಲಿ ನಿನ್ನನ್ನು ರಕ್ಷಿಸಲೆಂದು ನಾನು ನನ್ನ ಬಿಲ್ಲನ್ನು ಕಾಪಾಡಿಕೊಂಡಿದ್ದೆ, ನೀನು ನಿನ್ನ ಬಿರುನುಡಿಗಳಿಂದ ಅದಕ್ಕೆ ಯೋಗ್ಯನಲ್ಲನೆಂದು ತೋರಿದೆ, ಈಗ ನಾನು ನಿನ್ನನ್ನು ರಕ್ಷಿಸುವೆನೆ? ನಿನ್ನೊಂದಿಗೆ ಮಾತನಾಡಿ ಪ್ರಯೋಜನವಿಲ್ಲ, ಈಗಲೇ ಈ ಬಿಲ್ಲನ್ನು ಮುರಿವೆ” ನೆಂದು ವಿದುರ ಮುರಿಯಲು ಅಚ್ಚರಿಯಿಂದ ದುರ್ಯೋಧನನು ನೋಡಿದ.

ಅರ್ಥ:
ಕಡು: ವಿಶೇಷ, ಅಧಿಕ; ಮುಳಿ: ಸಿಟ್ಟು, ಕೋಪ; ತೊಡೆ: ಊರು, ಸೊಂಟದಿಂದ ಮಂಡಿಯವರೆಗಿನ ಭಾಗ; ಕಡಿ: ಸೀಳು; ಸಮಯ: ಕಾಲ; ತಡೆ: ನಿಲ್ಲು; ಕಾಯು: ಕಾಪಾಡು; ಉಳುಹು: ಕಾಪಾಡು, ಸಂರಕ್ಷಿಸು; ಧನು: ಬಿಲ್ಲು; ಕೆಡೆ: ಬೀಳಿಸು; ಕಾವು: ರಕ್ಷಿಸು; ನುಡಿ: ಮಾತು; ಫಲ: ಪ್ರಯೋಜನ; ಹಿಡಿ:ಮುಷ್ಟಿ; ಮುರಿ: ಬಾಗಿಸು, ತಿರುಚು, ಸೀಳು; ಬೆರಗು: ಅಚ್ಚರಿ;

ಪದವಿಂಗಡಣೆ:
ಕಡು +ಮುಳಿಸಿನಲಿ+ ಭೀಮ +ನಿನ್ನಯ
ತೊಡೆಗಳನು +ಕಡಿವಾ+ ಸಮಯದೊಳು
ತಡೆದು +ನಿನ್ನನು +ಕಾಯ+ಬೇಕೆಂದ್+ಉಳುಹಿದೆನು +ಧನುವ
ಕೆಡೆನುಡಿಸಿಕೊಂಡ್+ಇನ್ನು +ಕಾವೆನೆ
ನುಡಿದು+ ಫಲವೇನ್+ಎನುತ +ವಿದುರನು
ಹಿಡಿದ +ಬಿಲ್ಲನು +ಮುರಿದನಾ +ಕುರುರಾಯ +ಬೆರಗಾಗೆ